• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಂಗಕರ್ಮಿ ಅಲಮೇಲು ಅವರಿಗೆ ಮೈಸೂರಲ್ಲಿ ಸನ್ಮಾನ

By Staff
|
ಅಮೆರಿಕಾದ ಸುಪ್ರಸಿದ್ಧ ರಂಗಕರ್ಮಿ ; ನಟಿ, ನಿರ್ದೇಶಕಿ ಮತ್ತು ನಾಟಕಕರ್ತೃ ಅಲಮೇಲು ಅಯ್ಯಂಗಾರ್ ಅವರನ್ನು ಮೈಸೂರಿನ ಸುರುಚಿ ರಂಗಮನೆ' ಜೂನ್ 13ರಂದು ಸನ್ಮಾನಿಸಿತು. ಮೈಸೂರಿನ ಆಹ್ವಾನಿತ ರಂಗಕರ್ಮಿಗಳು ಅವರನ್ನು ಭೇಟಿಮಾಡಿ, ಅಮೆರಿಕಾದ ರಂಗಚಟುವಟಿಕೆಗಳ ಬಗ್ಗೆ ಸಂವಾದ ನಡೆಸಿದರು. ಸಂವಾದವನ್ನು ಆಯೋಜಿಸಿದ್ದವರು ಅಮೆರಿಕನ್ನಡದ ನಾಗಲಕ್ಷ್ಮಿ ಮತ್ತು ಹರಿಹರೇಶ್ವರ ದಂಪತಿಗಳು.

* ಜಯಂತಿ ಅಮೃತೇಶ್, ಸರಸ್ವತೀಪುರಂ, ಮೈಸೂರು

ಅಲಮೇಲು ಅವರ ಪರಿಚಯ, ಸಾಧನೆ ಮತ್ತು ನಾಟಕ ಪ್ರದರ್ಶನಗಳ ವಿವರವಿರುವ ಹರಿಹರೇಶ್ವರರ ಲೇಖನದ ಕರಪತ್ರ ಕಾರ್ಯಕ್ರಮದ ಪ್ರಾರಂಭದಲ್ಲೇ ಎಲ್ಲರ ಕೈ ಸೇರಿತು; ಅದರಿಂದಾಗಿ ಪರಿಚಯ ಭಾಷಣದ ಅಮೂಲ್ಯ ಸಮಯ ಉಳಿಯಿತು. ಅಲಮೇಲು ಅವರು ಕೇಲವು ನಿಮಿಷಗಳ ಕಾಲ ಅಮೆರಿಕದ ಕನ್ನಡ ರಂಗಭೂಮಿ ಮತ್ತು ತಮ್ಮ ನಾಟಕಗಳ ಬಗ್ಗೆ ಮಾತನಾಡಿದ ನಂತರ ನೇರ ಸಂವಾದ ಪ್ರಾರಂಭವಾಯಿತು. ಆಹ್ವಾನಿತರು ಅನೇಕ ಪ್ರಶ್ನೆಗಳನ್ನು ಕೇಳಿ ತಮ್ಮ ಸಂಶಯವನ್ನು ಪರಿಹರಿಸಿಕೊಂಡರು. ಪುಷ್ಕಳ ಭೋಜನದೊಡನೆ ಹರಿಹರೇಶ್ವರ-ನಾಗಲಕ್ಷ್ಮಿ ದಂಪತಿಗಳು ಆಹ್ವಾನಿತರಿಗೆ ಪುಸ್ತಕದ ಉಡುಗೊರನೆ ನೀಡಿ ಕಳುಹಿಸಿಕೊಟ್ಟದ್ದು ವಿಶೇಷವಾಗಿತ್ತು. ಅವರು ಉಡುಗೊರೆಯಾಗಿ ನೀಡಿದ್ದು ಅಲಮೇಲು ಅವರ ಹೈಟೆಕ್ ಹಯವದನಾಚಾರ್ ಮತ್ತು ಇತರ ನಾಟಕಗಳು.

ಆ ಸಂಜೆಯ ಕಾರ್ಯಕ್ರಮದಲ್ಲಿ ನಡೆದ ಇನ್ನೊಂದು ವಿಶೇಷವೇನೆಂದರೆ, ಅಲಮೇಲು ಅವರೊಂದಿಗೆ ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿಯ ಜಿಶಂಪ ಪ್ರಶಸ್ತಿ ಪುರಸ್ಕೃತ, ಮೈಸೂರಿನ ಡಾ| ವೈಸಿ ಭಾನುಮತಿ ಮತ್ತು ಸುರುಚಿ ರಂಗಮನೆಯ ಸಂಚಾಲಕಿ ವಿಜಯಾ ಸಿಂಧುವಳ್ಳಿ ಅವರಿಗೆ ನಡೆಸಿದ ಸನ್ಮಾನ. ಅವರನ್ನು ಪ್ರಸಿದ್ಧ ಲೇಖಕ ಪ್ರೊ| ಪ್ರಭುಶಂಕರ್ ಅವರು ಅಲಮೇಲು ಅವರನ್ನು ಸನ್ಮಾನಿಸಿದರು.

ಇದಾದ ಮರುದಿನ ನನಗೆ ಒದಗಿದ ಮತ್ತೊಂದು ಸದವಕಾಶವೆಂದರೆ ಅಲಮೇಲು ಅವರೊಡನೆ ನನ್ನ ಸಂದರ್ಶನ. ಸರಳ, ಸ್ನೇಹಮಯ ವ್ಯಕ್ತಿತ್ವದ ಅಲಮೇಲು ಅವರನ್ನು ಭೇಟಿಮಾಡಿ, ಅವರ ಕ್ರಿಯಾಶೀಲತೆಯ ಬಗ್ಗೆ, ಅವರ ಗೆಲುವಿನ ಬಗ್ಗೆ ಅನೇಕ ವಿಷಯಗಳನ್ನು ನೇರವಾಗಿ ತಿಳಿದುಕೊಳ್ಳುವ ಸೌಭಾಗ್ಯ ನನ್ನದಾಯಿತು. ಆ ಸಂದರ್ಶನದಲ್ಲಿ ಮತ್ತು ಕಾರ್ಯಕ್ರಮದಲ್ಲಿ ನಡೆದ ಸಂವಾದದಲ್ಲಿ ಅವರ ಬಗ್ಗೆ ತಿಳಿದು ಬಂದ ವಿಷಯಗಳ ಒಂದು ನೋಟ ಈಗ ನಿಮ್ಮ ಮುಂದಿದೆ:

ಸಮುದಾಯದಲ್ಲಿ ಹುಟ್ಟಿ ಸಮುದಾಯಕ್ಕಾಗಿಯೇ ಬೆಳೆದ ಕಲಾಪ್ರಕಾರವಾದ ನಾಟಕಕಲೆಯು ಅನೇಕ ರೀತಿಗಳಲ್ಲಿ ಬೆಳೆಯುತ್ತಾ ಬಂದಿದೆ. ಆಧುನಿಕ ವಿಜ್ಞಾನ ಸಾಧನೆಗಳಿಂದ ಕಲಾನುಭೂತಿ ಬಹಳಮಟ್ಟಿಗೆ ನಿಷ್ಕ್ರಿಯವೂ, ಅನಾಸಕ್ತವೂ ಆಗುತ್ತಿದೆ. ಇಂತಹ ಮನೋರಂಜನೆಯಲ್ಲಿ ಪ್ರೇಕ್ಷಕನೂ, ಶ್ರೋತೃವೂ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಈ ದೃಷ್ಟಿಯಿಂದ ನಾಟಕವು ಜನತೆಯ ಕಲೆಯಾಗಿ ಜೀವಂತವಾಗಿದೆ. ಹೀಗೆ ಪ್ರೇಕ್ಷಕವರ್ಗಕ್ಕೂ, ನಾಟಕದ ಪಾತ್ರಧಾರಿಗಳಿಗೂ ನೇರ ಸಂಪರ್ಕ ಒದಗಿಸುವುದರಲ್ಲಿ ಅಮೆರಿಕದ ಅಲಮೇಲು ಅಯ್ಯಂಗಾರ್‌ಅವರು ನಿಸ್ಸೀಮರು.

ಅಲಮೇಲು ಅವರು ಕನ್ನಡನಾಡಿನ ಹೆಸರಾಂತ ಕವಿ, ಗೀತರೂಪಕಕಾರ, ಸಾಹಿತ್ಯ ದಿಗ್ಗಜರಾದ ಪು.ತಿ.ನ. ರವರ ಸುಪುತ್ರಿ. ಈಕೆಯ ಪತಿ ತಿರುನಾರಾಯಣ ಅವರು; ಟೆಲಿಕಮ್ಯುನಿಕೇಷನ್ ಇಂಜಿನಿಯರ್. ಅಲಮೇಲು ಅವರಿಗೆ ಚಿಕ್ಕಂದಿನಿಂದಲೂ ಸಾಹಿತ್ಯದಲ್ಲಿ ಒಲವು, ಅಸಕ್ತಿ; ಸಾಹಿತಿಗಳೊಡನೆ ಒಡನಾಟ. ಅವರೇ ಹೇಳುವಂತೆ ಆಟವಾಡುವ ವಯಸ್ಸಿನಲ್ಲಿ ಕಿವಿಗೆ ಸಾಹಿತ್ಯದ ತುಣುಕುಗಳು ಬಂದು ಬೀಳುತ್ತಿದ್ದವು. ಹಾಗಾಗಿ ಸಾಹಿತ್ಯದತ್ತ ಒಲವು ಬೆಳೆಯುತ್ತಲೇ ಹೋಯಿತು. ಅದರಲ್ಲೂ ನಾಟಕಗಳೆಂದರೆ ಚಿಕ್ಕಂದಿನಿಂದಲೂ ಬಲು ಹುಚ್ಚು. ಒಂದು ವಿಧದಲ್ಲಿ ಈಕೆ ಹೋರಾಟಗಾರ್ತಿಯೂ ಹೌದು. ಕರ್ನಾಟಕದಲ್ಲೇ ದೊಡ್ಡಸಂಸ್ಥೆಯಾದ ಮಹಾರಾಣಿ ಕಾಲೇಜಿನಲ್ಲಿ ಕನ್ನಡವನ್ನು ಮುಖ್ಯ ವಿಷಯವನ್ನಾಗಿ ಹೇಳಿಕೊಡಲು ಅವಕಾಶವಿರದಿದ್ದನ್ನು ಕಂಡು ನೊಂದಿದ್ದ ಈಕೆ, ಹಿರಿಯರಾದ ಕಮಲಾ ಹಂಪನಾ, ತೀನಂಶ್ರೀ ಇವರ ಬೆಂಬಲದಿಂದ ಹೋರಾಡಿ, ಮೊತ್ತಮೊದಲಬಾರಿಗೆ ಕನ್ನಡವನ್ನು ಮುಖ್ಯವಿಷಯವಾಗಿ ಅಭ್ಯಸಿಸುವ ಅವಕಾಶ ದೊರಕುವಂತೆ ಮಾಡಿದ ಸಾಧನೆ ಅಮೋಘವಾದದ್ದು.

ವಿಜ್ಞಾನದಿಂದ ಸಾಹಿತ್ಯದತ್ತ ತನ್ನ ಒಲವನ್ನು ತಿರುಗಿಸಿದ ಮುಖ್ಯ ಘಟನೆ ಇದು ಎನ್ನುತ್ತಾರೆ ಅಲಮೇಲು. ಅಂದು ಕನ್ನಡದ ದಿಶೆಯಲ್ಲಿ ಇಟ್ಟ ದಿಟ್ಟ ಹೆಜ್ಜೆ, ತನ್ನನ್ನು ಮಹರಾಣಿ ಕಾಲೇಜಿನಿಂದ ಮಾನಸಗಂಗೋತ್ರಿಯವರೆಗೂ ನಡೆಸಿಕೊಂಡು ಬಂದಿದೆ ಎನ್ನುತ್ತಾರೆ. ಕನ್ನಡ ಎಂ.ಎ. ಪದವೀಧರಳಾದ ಬಳಿಕ(1969) 'ಜ್ಞಾನಗಂಗೋತ್ರಿ' ಮಕ್ಕಳ ವಿಶ್ವಕೋಶದಲ್ಲಿ ನಿರಂಜನ ಮತ್ತು ಪ್ರೊ. ಎಲ್.ಎಸ್. ಶೇಷಗಿರಿರಾವ್ ಅವರ ನೇತೃತ್ವದಲ್ಲಿ ಎರಡು ವರ್ಷಗಳ ಕಾಲ ಉಪಸಂಪಾದಕರಾಗಿದ್ದರು. ಅನಂತರ ಬೆಂಗಳೂರಿನ ಆಚಾರ್ಯ ಪಾಠಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ಬೆಂಗಳೂರಿನ ಆಕಾಶವಾಣಿಯಲ್ಲಿ ಮಕ್ಕಳ ಕಾರ್ಯಕ್ರಮ, ವನಿತಾವಿಹಾರ, ರೇಡಿಯೋ ನಾಟಕ, ಮಾತಿನ ಚಾವಡಿ-ಗಳಲ್ಲಿ ಭಾಗವಹಿಸುತ್ತಿದ್ದರು. ಇವರು 1971ರಿಂದ 1979ರವರೆಗೆ ಆಂಧ್ರ ಪ್ರದೇಶದ ಹೈದರಾಬಾದಿನಲ್ಲಿ ವಾಸವಾಗಿದ್ದರು. ಆಗ ಅಲ್ಲೊಂದು ಕನ್ನಡಕೂಟವನ್ನು ಪ್ರಾರಂಭಿಸಿ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಿದರು. ಅಲ್ಲಿಯ ಆಕಾಶವಾಣಿ ಕೇಂದ್ರದಲ್ಲಿ ಕನ್ನಡ ನಾಟಕ, ಭಾವಗೀತೆಗಳ ಕಾರ್ಯಕ್ರಮಗಳನ್ನು ಪ್ರಸಾರಮಾಡಿದ್ದೇ ಅಲ್ಲದೆ ಕನ್ನಡ ಜನಪದ ಸಾಹಿತ್ಯದಮೇಲೆ ಆರು ಭಾಷಣಗಳನ್ನು ಬಿತ್ತರಿಸಿದರು.

ಅಲಮೇಲು ಅವರು ನೆನಪಿಸಿಕೊಂಡದ್ದು, 'ಜನಪದ ಸಾಹಿತ್ಯದಲ್ಲಿ ತಾಯಿ', ಜನಪದ ಸಾಹಿತ್ಯದಲ್ಲಿ ತಾಯಿ-ಮಗಳ ಬಾಂಧವ್ಯ, ಜನಪದ ಸಾಹಿತ್ಯದಲ್ಲಿ ಸೊಸೆ, ಮತ್ತು ಇದರಲ್ಲಿ 'ಶಿಶು'. ಈ ಮಧ್ಯೆ ಸುಧಾ', ಪ್ರಜಾಮತ' ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು. ಅವರ ಲಘು ಹಾಸ್ಯ ಬರಹಗಳು, ವೆಂಕಜ್ಜಿ ಜೇಮ್ಸ್ ಬಾಂಡ್, ಮೊಬೈಲ್‌ಮೋಹಿನಿ, ಸಂಪದ್‌ಗಿರಿರಾಯನ ಸಂಪಾದಕಗಿರಿ ಇತ್ಯಾದಿ. ಇವರ ಹಾಸ್ಯ ಕವನಗಳಲ್ಲೂ ಹಾಸ್ಯದ ಮೆರವಣಿಗೆ ನಿಂತಿಲ್ಲ ; ಹಾಗೆಯೇ ಇವರ ವಿಮರ್ಶಾತ್ಮಕ ಲೇಖನಗಳಿಗೇನೂ ಕೊರತೆಯಿಲ್ಲ. ವಿವಾಹ ಇತರ ಸಾಮಾಜಿಕ ಸಂದರ್ಭಕ್ಕೆ ರಚಿಸಿದ ಗೀತೆಗಳೂ ಅನೇಕ. 1979ರಲ್ಲಿ ಇವರು ಅಮೆರಿಕೆಗೆ ಬಂದ ನಂತರ ಸಾಹಿತ್ಯಸೇವೆ ನಿರಂತರವಾಗಿ ನಡೆದಿದೆ. 1968ರಲ್ಲಿ ಉತ್ತರ ಕ್ಯಾಲಿಫೋರ್ನಿಯಾದ ಕನ್ನಡಕೂಟದ ಅಧ್ಯಕ್ಷರಾಗಿದ್ದ ಸಮಯದಲ್ಲಿ ಮೊದಲ ಕಾರ್ಯಕ್ರಮವನ್ನು ತಮ್ಮ ತಂದೆಯವರ "ಹರಿಣಾಭಿಸರಣ" ಎಂಬ ಗೇಯ ನಾಟಕದಿಂದ ಪ್ರಾರಂಭಿಸಿ, ಕೊನೆಗೆ ಕಾರ್ಯಕ್ರಮವನ್ನು ಅಲಮೇಲು ಅವರೇ ಬರೆದು, ನಿರ್ದೇಶಿಸಿ ತಾವೇ ಅದರಲ್ಲಿ ನಟಿಸಿದರು. ಅದೇ "ಅಪ್ಟುಡೇಟ್ ಅಂಬುಜಮ್ಮ." ಇಂತಹ ನಗೆ ನಾಟಕಗಳನ್ನು ಬರೆಯಲು ಆಕೆಗೆ ಸ್ಫೂರ್ತಿ ಏನೆಂದು ಕೇಳಿದ್ದಕ್ಕೆ, "ನನ್ನ ಸುತ್ತಮುತ್ತಲೂ ನಡೆಯುವ ಪ್ರಸಂಗಗಳೇ ನನ್ನ ಸ್ಫೂರ್ತಿ"ಎನ್ನುತ್ತಾರೆ.

ಅಮೆರಿಕಕ್ಕೆ ಬಂದಾಗಲಿಂದ ಅಲ್ಲಿಯ ನಡೆ, ನುಡಿ, ಸಂಸ್ಕೃತಿಗಳನ್ನು ನಮ್ಮ ಅಜ್ಜ-ಅಜ್ಜಿಯರು ನೋಡಿದರೆ ಹೇಗೆ ಪ್ರತಿಕ್ರಿಯಿಸಬಹುದು ಎಂದು ಊಹಿಸಿಕೊಂಡಾಗ ಹಾಸ್ಯದ ಹೊನಲು ಉಕ್ಕಿ ಹರಿಯಿತು. ಅದರ ಫಲವೇ 'ಅಪ್ಟುಡೇಟ್ ಅಂಬುಜಮ್ಮ.' ಈ ಪ್ರಥಮ ಪ್ರಯತ್ನಕ್ಕೆ ಅಲ್ಲಿಯ ಕನ್ನಡ ಸಹೃದಯರಿಂದ ದೊರೆತ ಪ್ರೋತ್ಸಾಹ ಅಲಮೇಲು ಅವರನ್ನು ದಿಗ್ಮೂಢಳನ್ನಾಗಿಸಿತು. ಮಗನನ್ನು ಕಳೆದುಕೊಂಡು 6 ವರುಷ ಶೋಕಸಾಗರದಲ್ಲಿ ಮುಳುಗಿದ್ದ ಹಿರಿಯರೊಬ್ಬರು ಅಲಮೇಲು ಅವರ ಈ ನಾಟಕವನ್ನು ನೋಡಿ ಮನಸಾ ನಕ್ಕರಂತೆ. ತಮ್ಮನ್ನು ಶೋಕಸಾಗರದಿಂದ ಹೊರ ತಂದಿದ್ದಕ್ಕೆ ಅವರನ್ನು ಅಭಿನಂದಿಸಿದ್ದರು.

ಅಲಮೇಲು ಅವರ ನಾಟಕಗಳ ಒಂದು ಪಕ್ಷಿ ನೋಟ »

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more