• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುವಕರು ಸಾಯುತ್ತಿದ್ದಾರೆ ಎಚ್ಚರಿಕೆ!

By Staff
|
ಪ್ರವಾಸ್ಯೋದ್ಯಮದ ಹೆಸರಿನಲ್ಲಿ ಹೆಚ್ಚುತ್ತಿರುವ ಮುಕ್ತ ಲೈಂಗಿಕತೆ, ಸೆಕ್ಸ್ ಟೂರಿಸಂ, ಪಾಶ್ಚಿಮಾತ್ಯ ಸಂಸ್ಕ್ರತಿಯ ಅಂಧಾನುಕರಣೆ, ಉದ್ಯೋಗದಲ್ಲಿನ ಅಭದ್ರತೆ, ಲೈಂಗಿಕತೆಯಲ್ಲಿನ ತಪ್ಪು ಮಾರ್ಗದರ್ಶನಗಳು, ಬ್ಲೂ ಫಿಲ್ಮಗಳ ಭರಾಟೆ, ಇವೆಲ್ಲವೂ ಈ ಎಚ್ಐವಿ ಸೋಂಕು ಹೆಚ್ಚಾಗಲು ಪೂರಕವಾಗುತ್ತಿವೆ. ಈಗಲೇ ಎಚ್ಚರಿಕೆ ವಹಿಸದಿದ್ದರೆ ಮುಂದೊಂದು ದಿನ ಕರಾವಳಿಯಲ್ಲಿ ದುಡಿಯುವ ಯುವಶಕ್ತಿಯೇ ನಶಿಸಿದರೂ ಆಶ್ಚರ್ಯವಿಲ್ಲ.

* ವಿನಾಯಕ ಎಲ್ ಪಟಗಾರ, ಬೆಟ್ಕುಳಿ, ಕುಮಟಾ

ಯುವಕರು ಸಾಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿಗೆ ಯುವಕರು ಸಾಯಲ್ಲಿದ್ದಾರೆ. ಇದು ಕಠೋರ ವಾಸ್ತವ. ಇತ್ತೀಚಿನ ನಾಲ್ಕೈದು ವರ್ಷಗಳಲ್ಲಿ ಇಪ್ಪತ್ತರಿಂದ ನಾಲ್ವತ್ತು ವರ್ಷದೊಳಗಿನ ಯುವಕರು ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾಯುವುದು ನಂತರ ಆತ ಕ್ಯಾನ್ಸರೋ, ಹೃದಯಾಘಾತದಿಂದ ಸತ್ತ ಎಂದು ಕೇಳಿ ವಾಸ್ತವದ ಮೇಲೆ ಹೊದಿಕೆಯನ್ನು ಎಲೆಯುವುದು ಮಾಮೂಲಾಗಿಬಿಟ್ಟಿದೆ. ಆದರೆ ನಿಜವಾದ ಖಾಯಿಲೆ ಯಾವುದು ಎನ್ನುವದನ್ನು ಮರೆಮಾಚಿಸಿಬಿಡುತ್ತಾರೆ. ಸತ್ತಮೇಲೂ ಮರೆ ಮಾಚುವಂಥ ಖಾಯಿಲೆ ಯಾವುದು ಎಂದು ನೋಡಿದರೆ ಅದೇ ಎಚ್.ಐ.ವಿ/ಏಡ್ಸ್.

ಎಚ್.ಐ.ವಿ/ಏಡ್ಸ್ ಗೆ ಸಂಬಂಧ ಪಟ್ಟಂತೆ ಮಾತೊಂದು ಮಾತು ಚಾಲ್ತಿಯಲ್ಲಿದೆ. ಸಾಸಿವೆ ಇಲ್ಲದ ಮನೆ ಇಲ್ಲ, ಎಚ್.ಐ.ವಿ/ಏಡ್ಸ್ ನಿಂದ ಯಾರು ಸತ್ತಿಲ್ಲ ಎನ್ನುವ ಊರಿಲ್ಲ. ಇದು ಎಚ್.ಐ.ವಿ/ಏಡ್ಸ್ ನಿಂದ ಸಮಾಜದ ಮೇಲಾಗುತ್ತಿರುವ ಪರಿಣಾಮಕ್ಕೆ ಹಿಡಿದ ಕನ್ನಡಿ.

ಸುಸಂಸ್ಕ್ರತರ ನಾಡೆಂದು ಪ್ರಸಿದ್ದವಾದ ಕರಾವಳಿ ಮಲೆನಾಡು ಪ್ರದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಎಚ್.ಐ.ವಿ/ಏಡ್ಸ್ ಬೀರುತ್ತಿರುವ ಪರಿಣಾಮ ನಿಜಕ್ಕೂ ಗಂಭೀರವಾಗಿದೆ. ಯುವಕ ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಈ ಸೋಂಕಿಗೆ ಒಳಗಾಗುತ್ತಿರುವುದು ನಿಜಕ್ಕೂ ಶೋಚನೀಯ. ತೀರ ಚಿಕ್ಕ ವಯಸ್ಸಿಗೆ ದೂರದ ಪಟ್ಟಣಗಳಿಗೆ ದುಡಿಯಲು ಹೋಗುವುದು, ಸಂಪಾದನೆಯಾದ ಹಣಕ್ಕೆ ಹಿಡಿತ ಇಲ್ಲದಿರುವುದು, ಪಟ್ಟಣದ ಮುಕ್ತ ಸಂಸ್ಕ್ರತಿಗೆ ಮಾರು ಹೋಗಿ ಸುರಕ್ಷಿತವಲ್ಲದ ಲೈಂಗಿತಕೆಗೆ ಇಳಿಯುವುದು ಇವೆಲ್ಲ ಎಚ್.ಐ.ವಿ/ಏಡ್ಸ್ ಸೋಂಕಿಗೆ ಕಾರಣವಾಗುತ್ತಿವೆ. ಬಹತೇಕ ಮಂದಿಗೆ ಎಚ್.ಐ.ವಿ/ಏಡ್ಸ್ ಇದೆ ಎಂದು ಗೊತ್ತಾಗುವುದು ಮದುವೆ ಆದ ಮೇಲೆ. ಮದುವೆ ಆದ ಮೇಲೆ ಪತ್ನಿ ಗರ್ಭಿಣಿಯಾದಾಗ ನಡೆಸುವ ಕಡ್ಡಾಯ ಪರೀಕ್ಷೆಗಳಲ್ಲಿ ಎಚ್.ಐ.ವಿ ಪರೀಕ್ಷೆಯು ಒಂದು. ಆಗ ಪತ್ನಿಗೆ ಇದೆ ಎಂದು ಗೊತ್ತಾದರೆ ಗಂಡನಿಗೂ ಪರೀಕ್ಷೆ ಮಾಡಿಸುತ್ತಾರೆ. ಹೀಗೆ ಹುಡುಗಾಟದ ವಯಸ್ಸಿನಲ್ಲಿ ಕ್ಷಣಿಕ ಸುಖಕ್ಕಾಗಿ ಮಾಡಿದ ತಪ್ಪಿನಿಂದಾಗಿ ಜವಾಬ್ದಾರಿ ಹೊರುವ ಹೊತ್ತಿಗೆ ಸಂಸಾರ ಬಿರುಗಾಳಿಗೆ ಸಿಕ್ಕ ದೋಣಿಯಂತಾಗಿರುತ್ತದೆ.

ನಮ್ಮ ಸಮಾಜದಲ್ಲಿ ಮದುವೆಯಾಗುವ ಮೊದಲು ಎಚ್ಐವಿ ಪರೀಕ್ಷೆ ಹೋಗಲಿ ರಕ್ತದ ಗುಂಪು ಯಾವುದೆಂದು ಕೇಳುವುದು ಕೂಡ ಕೆಲವೆಡೆಯಲ್ಲಿ ಅಪರಾಧ. ತಮಗೆಂಥ ಸೋಂಕು ಬಂದೇ ಇಲ್ಲ ಎಂಬ ಉಡಾಫೆಯಿಂದ ಅನ್ಯರ ಸಂಗ ಮಾಡಿದವರು ಮದುವೆಗೆ ಸಿದ್ಧರಾಗಿರುತ್ತಾರೆ. ಎಲ್ಲ ಬಯಲಾಗುವ ಹೊತ್ತಿಗೆ ಅನಾಹುತವಾಗಿಬಿಟ್ಟಿರುತ್ತದೆ.

ಕರಾವಳಿ ಮಲೆನಾಡಿನ ಪ್ರದೇಶಗಳಲ್ಲಿ ನೈತಿಕ ಕಟ್ಟುಪಾಡುಗಳು ಬಿಗಿಯಾಗಿವೆ ಅಂತ ಅನ್ನಿಸಿದರೂ ಕೂಲಂಕುಷವಾಗಿ ಗಮನಿಸಿದರೆ ಯುವ ಜನತೆ ಅದನ್ನು ಮೀರಿ ಹೋಗಿರುವುದು ಸ್ಪಷ್ಟವಾಗಿರುವುದು ಕಂಡು ಬರುತ್ತಿದೆ. ಇದಕ್ಕೆ ಕಾರಣಗಳೂ ಹಲವಾರು. ಅವಿಭಕ್ತ ಕುಟುಂಬಗಳು ಕಡಿಮೆಯಾಗುತ್ತಿರುವುದು, ಹಿರಿಯರ ಆಶ್ರಯದಲ್ಲಿ ಮಕ್ಕಳು ಬೆಳೆಯುತ್ತಿಲ್ಲದಿರುವುದು, ಹೊರಗಡೆ ದುಡಿಯಲು ಹೋದಾಗ ಸಿಗುವ ಸ್ವಾತಂತ್ರದ ದುರುಪಯೋಗ. ಟಿ.ವಿ ಮಾಧ್ಯಮಗಳು ಎಲ್ಲರ ಮನೆ ಬಾಗಿಲಿಗೂ ಬಂದು ಮುಟ್ಟಿವೆ. ಅದರಲ್ಲಿ ಬರುವ ಹಸಿಬಿಸಿ ದೃಶ್ಯಗಳು, ಲೈಂಗಿಕತೆಯಲ್ಲಿ ನೈತಿಕತೆಯನ್ನು ಮೀರಿದ ಸಂಬಂಧಗಳನ್ನು, ಬಹುಸಂಗಾತಿಗಳನ್ನು ಹೊಂದುವುದನ್ನು ಸಮರ್ಥಿಸುವಂತಹ ಕಾರ್ಯಕ್ರಮಗಳಿಂದ ಪ್ರಭಾವಿತವಾಗಿ ವಾಸ್ತವದಲ್ಲಿ ಸಹ ಅದೇ ಹೊಂದಲು ಪ್ರಯತ್ನಿಸುತ್ತಾರೆ. ಹಳ್ಳಿಗಳಲ್ಲಿ ನೈತಿಕತೆಯನ್ನು ಮೀರಿದ ಲೈಂಗಿಕ ಪ್ರಕರಣಗಳು ದಿನೇ ದಿನೇ ಜಾಸ್ತಿಯಾಗುತ್ತಿವೆ. ಸುರಕ್ಷಿತ ಲೈಂಗಿಕತೆ ಬಗ್ಗೆಯಾಗಲಿ, ಲೈಂಗಿಕ ಆರೋಗ್ಯದ ಬಗ್ಗೆ ಯಾಗಲಿ ಹಳ್ಳಿಯ ಯುವಜನತೆಗೆ ತಿಳಿಸುವ ಪೂರಕ ವಾತಾವರಣ ಇಲ್ಲದಿರುವುದೂ ಸಹ ಎಚ್.ಐ.ವಿ ಪೀಡಿತ ವೃದ್ಧಿಗೆ ಕಾರಣವಾಗುತ್ತಿದೆ.

ಕರಾವಳಿಯ ಮುಖ್ಯ ವೃತ್ತಿ ಮೀನುಗಾರಿಕೆ. ಇದಕ್ಕಾಗಿ ಗೋವಾ ಮೊದಲಾದ ಕಡೆ ವಲಸೆ ಹೋಗುವುದು ಹೆಚ್ಚಿಗೆ ಇದೆ. ವಾರಗಟ್ಟಲೇ ಸಮುದ್ರದಲ್ಲಿ ಬೋಟ್ ಮೇಲೆ ಇರುವುದರಿಂದ ಕೆಲಸದ ಒತ್ತಡದಿಂದ ಬೇಸತ್ತು ಹಿಂತಿರುಗಿದಾಗ ಮುಂದಾಲೋಚನೆ ಇಲ್ಲದೇ ಲೈಂಗಿಕ ಸುಖಕ್ಕಾಗಿ ಅರಸಿಕೊಂಡು ಹೋಗುವುದು ಕಂಡುಬರುತ್ತಿದೆ. ಮನೆಯವರ ಹಿಡಿತದಲ್ಲಿರದೇ ಓಡಾಡುವ ದುಡ್ಡು, ಕೆಲಸದ ಒತ್ತಡ, ಮಾಯಾನಗರಿಗಳ ಥಳಕು ಬಳುಕಿನ ಜೀವನ, ತಾನು ಎನೇ ಮಾಡಿದರೂ ಮನೆಯಲ್ಲಿ ಗೊತ್ತಾಗಲ್ಲ ಎನ್ನುವ ಹುಂಬತನ, ಇವೆಲ್ಲವೂ ದುಡಿಯುವ ಹುಡುಗರನ್ನು ದಾರಿ ತಪ್ಪಿಸುತ್ತಿವೆ. ಊರಲ್ಲಿ ಬಂದು ಅದನ್ನು ತಮ್ಮ ಸಂಗಾತಿಗಳಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ದಾಟಿಸುತ್ತಾರೆ. ನಂತರ ಹುಟ್ಟುವ ಮಕ್ಕಳಿಗೆ ಬಳುವಳಿಯಾಗಿ ಕೊಟ್ಟು ಜವಾಬ್ದಾರಿಯಿಂದ ನುಣುಚಿಕೊಂಡಿರುತ್ತಾರೆ. ಇಲ್ಲವೆ ಇಹಲೋಕ ಯಾತ್ರೆ ಮುಗಿಸಿರುತ್ತಾರೆ. ಅಜ್ಜ ಅಜ್ಜಿಯರ ಆರೈಕೆಯಲ್ಲಿ ಜೀವನ ತಳ್ಳುವ ಇಂಥ ಮಕ್ಕಳ ಬಾಳಿನ ಗೋಳನ್ನು ಕೇಳಿದರೆ ಕಣ್ಣೀರು ಕಪಾಳಕ್ಕಿಳಿದಿರುತ್ತದೆ.

ಅದನೇ ಇರಲಿ ಈ ಸೋಂಕು ಪರೋಕ್ಷವಾಗಿಯಾದರೂ ಕೆಲವೊಂದು ಹಳ್ಳಿಗಳಲ್ಲಿ ಹಿಂದುಳಿದ ಬಡ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ತಪ್ಪಿಸಿದೆ. ಕೆಲವೊಂದು ಹಳ್ಳಿಗಳಲ್ಲಿ ಮುಂದುವರಿದ ವರ್ಗದ ಶ್ರೀಮಂತರ ಮಕ್ಕಳು ಬಡ ಹೆಣ್ಣುಮಕ್ಕಳ ಮೇಲೆ ನಡೆಸುತ್ತಿದ್ದ ಲೈಂಗಿಕ ದೌರ್ಜನ್ಯಕ್ಕೆ ಮೀತಿಯೇ ಇಲ್ಲವಾಗಿತ್ತು. ಆದರೆ ಎಚ್.ಐ.ವಿ/ಏಡ್ಸ್ ಗೆ ಬಡವ ಶ್ರೀಮಂತ ಎನ್ನುವ ಭೇದ ಭಾವವಿಲ್ಲ. ಈ ಸೋಂಕು ಸಾಕಷ್ಟು ಶ್ರೀಮಂತರ ಮಕ್ಕಳನ್ನು ಬಲಿತೆಗೆಕೊಂಡಿದೆ.

ಎಚ್.ಐ.ವಿ/ಏಡ್ಸ್ ನಿಯಂತ್ರಣದ ಹೆಸರಿನಲ್ಲಿ ವಿದೇಶಗಳಿಂದ, ಸರಕಾರದಿಂದ ಸಾಕಷ್ಟು ಹಣ ಹರಿದಿದೆ. ಆದರೆ ಅದೆಲ್ಲವೂ ಪ್ರಚಾರಕ್ಕೆ ಸೀಮೀತವಾಗಿದೆಯೇ ಹೊರತು ಕೆಳಹಂತದಲ್ಲಿ ಯುವಜನತೆಯನ್ನು ಮುಟ್ಟಿಲ್ಲ. ಪರಿಣಾಮ, ದಿನೇ ದಿನೇ ಎಚ್.ಐ.ವಿ ಸೋಂಕಿತರ ಸಂಖ್ಯೆ ಏರುತ್ತಿದೆ. ಈ ಪ್ರದೇಶಗಳಲ್ಲಿ ಪ್ರವಾಸ್ಯೋದ್ಯಮದ ಹೆಸರಿನಲ್ಲಿ ಹೆಚ್ಚುತ್ತಿರುವ ಮುಕ್ತ ಲೈಂಗಿಕತೆ, ಸೆಕ್ಸ್ ಟೂರಿಸಂ, ಪಾಶ್ಚಿಮಾತ್ಯ ಸಂಸ್ಕ್ರತಿಯ ಅಂಧಾನುಕರಣೆ, ಉದ್ಯೋಗದಲ್ಲಿನ ಅಭದ್ರತೆ, ಲೈಂಗಿಕತೆಯಲ್ಲಿನ ತಪ್ಪು ಮಾರ್ಗದರ್ಶನಗಳು, ಬ್ಲೂ ಫಿಲ್ಮಗಳ ಭರಾಟೆ, ಇವೆಲ್ಲವೂ ಈ ಸೋಂಕು ಹೆಚ್ಚಾಗಲು ಪೂರಕವಾಗಿವೆ. ಇಷ್ಟಾದರೂ ಇದರ ಬಗ್ಗೆ ಯಾರೂ ಗಂಭೀರವಾಗಿ ಆಲೋಚಿಸಿಲ್ಲ. ಇದೇ ರೀತಿ ಮುಂದುವರೆದರೆ ಮುಂದೊಂದು ದಿನ ಈ ಪ್ರದೇಶಗಳು ಸಹ ದಕ್ಷಿಣ ಆಪ್ರಿಕಾದಲ್ಲಿನ ಕೆಲವು ದೇಶಗಳಂತೆ ದುಡಿಯವ ಶಕ್ತಿಗಳೇ ಮರೆಯಾದರೂ ಆಶ್ಚರ್ಯ ಪಡಬೇಕಾಗಿಲ್ಲ. ದುಡಿಯುವ ಯುವ ಶಕ್ತಿಯೇ ಅನಾರೋಗ್ಯಕ್ಕೆ ಒಳಗಾದರೆ ಹಿರಿಯ ಮತ್ತು ಕಿರಿಯ ಜೀವಗಳನ್ನು ನೋಡಿಕೊಳ್ಳುವವರು ಯಾರು? ಅದಕ್ಕೆ ಹೇಳುತ್ತಿರುವುದು ಯುವ ಶಕ್ತಿ ಸಾಯುತ್ತಿದೆ ಎಚ್ಚರಿಕೆ!

ಲೇಖಕರ ಪರಿಚಯ : ಮೈಸೂರು ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದಲ್ಲಿ ಎಂಎ ಮಾಡಿರುವ ವಿನಾಯಕ ಪಟಗಾರ್, ಎಚ್ಐವಿ/ಏಡ್ಸ್ ಕ್ಷೇತ್ರದಲ್ಲಿ ದುಡಿಯುತ್ತ ಸಮಾಜಸೇವೆ ನಡೆಸುತ್ತಿದ್ದಾರೆ. ವಿನಾಯಕ್ ಅವರು ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬೆಟ್ಕುಳಿ ಗ್ರಾಮದವರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more