ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದಲ್ಲಿ ವಿಜ್ಞಾನ ಬರವಣಿಗೆಯ ಶೈಲಿ

By Staff
|
Google Oneindia Kannada News

TS Gopal
ವಿಜ್ಞಾನಲೋಕ ಅತಿವಿಶಾಲವಾದುದು. ಇದರ ಎಲ್ಲ ಆಳವಿಸ್ತಾರಗಳನ್ನೂ ಸರಳ ಶೈಲಿಯಲ್ಲೇ ನಮಗೆ ತಲುಪಿಸುವುದು ಕಷ್ಟಸಾಧ್ಯ. ಜೀವಶಾಸ್ತ್ರ, ಮನಃಶಾಸ್ತ್ರ, ಪರಿಸರವಿಜ್ಞಾನದಂಥ ಕೆಲವು ಪ್ರಕಾರಕ್ಕೆ ಸಂಬಂಧಿಸಿದ ಗ್ರಂಥಗಳೂ ಲೇಖನಗಳೂ ಓದುಗನನ್ನು ಆಕರ್ಷಿಸುವಷ್ಟು ಸುಲಭವಾಗಿ ಇಂಜಿನಿಯರಿಂಗ್ ಮತ್ತಿತರ ತಾಂತ್ರಿಕ ವಿಷಯದ ಬರಹ ತಲುಪಲಾರದು.

* ಟಿ ಎಸ್ ಗೋಪಾಲ್

ಯಾವುದೇ ಭಾಷೆಯಲ್ಲಿ ವಿಜ್ಞಾನ ಸಾಹಿತ್ಯ ಪ್ರಕಾರಕ್ಕೆ ವಿಶೇಷವಾದ ಮಹತ್ವವಿದೆ. ಇದಕ್ಕೆ ಕಾರಣಗಳು ಹಲವು. ಹಿಂದೆಂದಿಗಿಂತಲೂ ವಿಜ್ಞಾನ ಇಂದು ನಮ್ಮ ಬದುಕಿನ ಅವಿನಾಭಾಗವಾಗಿದೆ. ವಿಜ್ಞಾನದ ಹೊಸಹೊಸ ಆವಿಷ್ಕಾರಗಳ ಪರಿಚಯವನ್ನು ಅನಿವಾರ್ಯವಾಗಿ ಪಡೆದೇ ತೀರಬೇಕಾಗಿದೆ. ವಿಜ್ಞಾನದ ಒಳಹೊರಗುಗಳನ್ನು ಬಲ್ಲ ಲೇಖಕರ ಬರಹಗಳ ಮೂಲಕ ಆಧುನಿಕ ಜಗತ್ತಿನ ವೇಗಕ್ಕೆ ನಮ್ಮನ್ನು ಹೊಂದಿಸಿಕೊಳ್ಳಬೇಕಾಗಿದೆ. ವಿಜ್ಞಾನದ ಬರವಣಿಗೆ ಕೇವಲ ವಿಜ್ಞಾನಿಗಳಿಗೆ ಸೀಮಿತವೆಂದೋ, ವಿಜ್ಞಾನದ ವಿದ್ಯಾರ್ಥಿಗಳನ್ನು ಬಿಟ್ಟು ಉಳಿದವರು ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲವೆಂತಲೋ ಯಾರೂ ಹೇಳುವ ಹಾಗೇ ಇಲ್ಲ.


ತೀರಾ ಗಹನ ಸಂಗತಿಗಳನ್ನು ಬಿಡೋಣ. ಒಂದು ವಿದ್ಯುತ್ ಬಲ್ಬ್‌ನಿಂದ ಟಿವಿಯವರೆಗೆ, ವಿಮಾನದಿಂದ ಲೇಸರ್‌ವರೆಗೆ, ಮಳೆಗಾಡಿನ ಜೀವವೈವಿಧ್ಯದಿಂದ ಅಂಟಾರ್ಕ್‌ಟಿಕಾದ ಹಿಮಗಡ್ಡೆಗಳವರೆಗೆ ನಾವು ತಿಳಿಯಲೇಬೇಕಾದ ನೂರುಸಾವಿರ ಸಂಗತಿಗಳಿವೆ. ಇವನ್ನೆಲ್ಲ ತಮ್ಮ ಬರವಣಿಗೆಯ ಮೂಲಕ ನಮಗೆ ತಲುಪಿಸುವ ಹೊಣೆ ವಿಜ್ಞಾನ ಲೇಖಕರದ್ದು.

ವಿಜ್ಞಾನಸಾಹಿತ್ಯವನ್ನೆಲ್ಲ ಓದಿ ಅರಗಿಸಿಕೊಳ್ಳುವ ಶಕ್ತಿ ನಮಗಿಲ್ಲ. ಇದರಲ್ಲಿ ಸಂಶೋಧನಾಪ್ರಬಂಧಗಳು, ವಿವರಣಾತ್ಮಕ ಗ್ರಂಥಗಳು, ಪಠ್ಯಪುಸ್ತಕಗಳು, ಜನಪ್ರಿಯ ವಿಜ್ಞಾನ ಬರಹ - ಪುಸ್ತಕಗಳೆಲ್ಲವೂ ಸೇರಿವೆ. ನಾವು ಜನಪ್ರಿಯ ವಿಜ್ಞಾನಸಾಹಿತ್ಯಕ್ಕೆ ನಮ್ಮ ಲಕ್ಷ್ಯವನ್ನು ಹೊರಳಿಸಿದರೆ ಸಾಕು. ಉಳಿದೆಲ್ಲ ಸಾಹಿತ್ಯಪ್ರಕಾರಗಳಲ್ಲಿ ಲೇಖಕನಿಗೆ, ತಾನು ಓದುಗರಿಗೆ ಪರಿಚಯಿಸಬೇಕಾದ ಲೋಕದ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗುವುದಿಲ್ಲ. ಆದರೆ ವಿಜ್ಞಾನಬರಹಗಾರ ತನ್ನ ವಿಷಯವ್ಯಾಪ್ತಿಗೆ ಪರಿಚಿತರೇ ಅಲ್ಲದ ಜನಸಾಮಾನ್ಯರಿಗೆ ಜಟಿಲವೂ, ಅಪರಿಚಿತವೂ, ಗಂಭೀರವೂ ಆದ ವಿಜ್ಞಾನ ವಿಷಯವನ್ನು ಆದಷ್ಟೂ ಸರಳ ಆಕರ್ಷಕ ಶೈಲಿಯ ನಿರೂಪಣೆಯ ಮೂಲಕ ತಲುಪಿಸಬೇಕಾಗುತ್ತದೆ.

ಇಂಗ್ಲಿಷ್ ಭಾಷೆಯಲ್ಲಿರುವ ವಿಜ್ಞಾನ ವಿಷಯವನ್ನು ಕನ್ನಡದಲ್ಲಿ ನಿರೂಪಿಸಹೊರಟಾಗ ಲೇಖಕನಿಗೆ ಓದುಗನ ಸಾಮರ್ಥ್ಯಕ್ಕಿಂತ ವಿಷಯದ ಗಹನಗಾಂಭೀರ್ಯಗಳನ್ನು ಉಳಿಸಿಕೊಳ್ಳುವುದೇ ಮಹತ್ವದ್ದಾಗಿ ಕಾಣುತ್ತದೆ. ಆದ್ದರಿಂದಲೇ ಕನ್ನಡದ ವಿಜ್ಞಾನಲೇಖಕರಲ್ಲಿ ಸಂಸ್ಕೃತದ ಬಳಕೆ ಯಥೇಚ್ಛವಾಗಿ ಕಾಣುತ್ತದೆ. ಭೌತಶಾಸ್ತ್ರದ pv=c ಎಂಬ ನಿಯಮವನ್ನು ಜಿ.ಟಿ.ನಾರಾಯಣರಾಯರು ಹೀಗೆ ನಿರೂಪಿಸುತ್ತಾರೆ - "ಉಷ್ಣತೆ ಸ್ಥಿರವಾಗಿರುವಾಗ ಯಾವುದೇ ಅನಿಲದ ಸಂಮರ್ದ (p) ಮತ್ತು ಘನಗಾತ್ರ (v) ಇವೆರಡರ ಗುಣಲಬ್ಧ (p*v) ಒಂದು ನಿಯತಾಂಕ (c). ಪ್ರತೀಕಗಳಲ್ಲಿ pv=c." ಅರ್ಥವಾಯಿತೇ?

ವಿಜ್ಞಾನದ ಪಾರಿಭಾಷಿಕ ಪದಗಳು ಇಂಗ್ಲಿಷಿನಿಂದ ಕನ್ನಡಕ್ಕೆ ತರ್ಜುಮೆಯಾಗುವಾಗ ಕನ್ನಡದ್ದೇ ಆದ ಪದಗಳನ್ನು ಹುಡುಕದೆ ಸುಲಭವಾಗಿ ಸಂಸ್ಕೃತವನ್ನು ಆಶ್ರಯಿಸಿದರೆ ಓದುಗನಿಗೆ ವಿಜ್ಞಾನದ ಜಟಿಲತೆಯ ಜೊತೆಗೆ ಸಂಸ್ಕೃತದ ಪರಿಭಾಷೆಯನ್ನು ಅರ್ಥೈಸಿಕೊಳ್ಳುವ ಕಷ್ಟ ಬೇರೆ ಸೇರಿ, ವಿಜ್ಞಾನ ಬರಹ ಇನ್ನಷ್ಟು ಜಟಿಲವಾಗುತ್ತದೆ.

ವಿಜ್ಞಾನ ಪದಕೋಶಗಳೂ ಹೆಚ್ಚಾಗಿ ಸಂಸ್ಕೃತವನ್ನೇ ಅವಲಂಬಿಸಿ ಸೃಷ್ಟಿಯಾಗಿವೆ. ನಾರಾಯಣರಾಯರೇ ಪ್ರಧಾನಸಂಪಾದಕರಾಗಿರುವ 'ವಿಜ್ಞಾನಪದವಿವರಣ ಕೋಶ'ದಲ್ಲಿ ಕ್ಯಾಲ್ಕುಲೇಟರ್‌ಗೆ ಕೊಟ್ಟ ಹೆಸರು 'ಗುಣನಕಾರಿ'. ಇದಕ್ಕೆ ವಿವರಣೆ ಹೀಗಿದೆ - "ಸಂಖ್ಯಾತ್ಮಕ ಹಾಗೂ ನಿಯಂತ್ರಕ ಕೀಲಿಗಳನ್ನು ಒತ್ತಿ ನಮೂದಿಸಿದ ಸಂಖ್ಯಾತ್ಮಕ ಮಾಹಿತಿಗಳ ಆಧಾರದ ಮೇಲೆ ತಾರ್ಕಿಕ ಹಾಗೂ ಗಣಕೀಯ ಅಂಕಾತ್ಮಕ ಕ್ರಿಯೆಗಳನ್ನು ನಿರ್ವಹಿಸುವ ಉಪಕರಣ." ಇವೆಲ್ಲ ಸಾಮಾನ್ಯ ಓದುಗನಿಗೆ ಅರ್ಥವಾಗುವುದು ಹೇಗೆ?

1960ರ ದಶಕದಲ್ಲೇ 'ವಿಜ್ಞಾನ ಪ್ರಪಂಚ'ದಂಥ ಬೃಹತ್ ಗ್ರಂಥದ ಮೂಲಕ ಕನ್ನಡಕ್ಕೆ ವಿಜ್ಞಾನ ಲೋಕವನ್ನು ಪರಿಚಯಿಸಿದ ಶಿವರಾಮ ಕಾರಂತರು ಸರಳಶೈಲಿಯಲ್ಲಿ ಓದುಗರಿಗೆ ವಿಷಯವನ್ನು ತಲುಪಿಸುವ ರೀತಿ ಆಕರ್ಷಕ. ಉದಾಹರಣೆಗೆ ಇಸ್ತ್ರಿಪೆಟ್ಟಿಗೆಯ ಕಾರ್ಯವೈಖರಿಯನ್ನು ಅವರು ವರ್ಣಿಸುವ ರೀತಿ ಹೀಗೆ - "ಇಸ್ತ್ರಿಪೆಟ್ಟಿಗೆಯಲ್ಲಿ ಇರುವಂತಹ ಕೆಲವು ತಂತಿಯ ಸುರುಳಿಗಳ ಮೂಲಕವಾಗಿ ವಿದ್ಯುತ್ ಹರಿಯುತ್ತದೆ. ಈ ಸುರುಳಿಗಳನ್ನು ನೈಕ್ರೋಮ್ ಎಂಬ ಮಿಶ್ರಲೋಹದಿಂದ ತಯಾರಿಸುತ್ತಾರೆ. ಈ ಲೋಹವು ಇಲೆಕ್ಟ್ರಾನುಗಳ ಪ್ರವಾಹಕ್ಕೆ ಸ್ವಾತಂತ್ರ್ಯಕೊಡದಂಥ ಒಂದು ಮಿಶ್ರಲೋಹ. ಅದರ ಮೂಲಕ ಇಲೆಕ್ಟ್ರಾನುಗಳು ಹರಿಯುವಾಗ ಅದರಲ್ಲಿರುವ ಪರಮಾಣುಗಳು ಒಡ್ಡುವ ತಡೆಯಿಂದಾಗಿ ಇಲೆಕ್ಟ್ರಾನುಗಳ ಚೈತನ್ಯ ನಷ್ಟವಾಗುತ್ತದೆ, ಎಂದರೆ ಅದು ಶಾಖವಾಗಿ ಪರಿವರ್ತನೆಗೊಳ್ಳುತ್ತದೆ. ಅದರಿಂದಾಗಿಯೇ ನೈಕ್ರೋಮ್ ಸರಿಗೆ ಕಾಯುತ್ತದೆ. ಇಸ್ತ್ರಿಹಾಕುವ ಕೆಲಸಕ್ಕೆ ಈ ತೆರನ ಶಾಖವೇ ಬೇಕು." ವಿಜ್ಞಾನ ಬರಹಗಾರ ಓದುಗನಿಗೆ ತಾನು ಸರಳಭಾಷೆಯಲ್ಲಿ ತಿಳಿಸಿದಷ್ಟೂ ವಿಷಯವನ್ನು ಸಮರ್ಥವಾಗಿ ತಲುಪಿಸುವುದು ಸಾಧ್ಯ ಎನ್ನುವುದನ್ನು ತಿಳಿದಿರಲೇಬೇಕು.

ವಿಜ್ಞಾನಲೋಕ ಅತಿವಿಶಾಲವಾದುದು. ಇದರ ಎಲ್ಲ ಆಳವಿಸ್ತಾರಗಳನ್ನೂ ಸರಳ ಶೈಲಿಯಲ್ಲೇ ನಮಗೆ ತಲುಪಿಸುವುದು ಕಷ್ಟಸಾಧ್ಯ. ಜೀವಶಾಸ್ತ್ರ, ಮನಃಶಾಸ್ತ್ರ, ಪರಿಸರವಿಜ್ಞಾನದಂಥ ಕೆಲವು ಪ್ರಕಾರಕ್ಕೆ ಸಂಬಂಧಿಸಿದ ಗ್ರಂಥಗಳೂ ಲೇಖನಗಳೂ ಓದುಗನನ್ನು ಆಕರ್ಷಿಸುವಷ್ಟು ಸುಲಭವಾಗಿ ಇಂಜಿನಿಯರಿಂಗ್ ಮತ್ತಿತರ ತಾಂತ್ರಿಕ ವಿಷಯದ ಬರಹ ತಲುಪಲಾರದು. ಬಿ.ಜಿ.ಎಲ್. ಸ್ವಾಮಿಯವರಂಥ ಶ್ರೇಷ್ಠ ಲೇಖಕರು ಸಸ್ಯಶಾಸ್ತ್ರದ ಅನೇಕ ಮಾಹಿತಿಗಳನ್ನು ನಿರೂಪಿಸಿದ ಶೈಲಿಯೇ ಅತಿವಿಶಿಷ್ಟವಾದುದು. 'ಹಸುರುಹೊನ್ನು' ಕನ್ನಡದ ಸಾರ್ವಕಾಲಿಕ ಶ್ರೇಷ್ಠಗ್ರಂಥಗಳಲ್ಲೊಂದಾಗಿರಲು ಸ್ವಾಮಿಯವರ ವಿಶಿಷ್ಟಶೈಲಿಯೇ ಕಾರಣ. ಪರಿಸರ ವಿಜ್ಞಾನದ ಪ್ರಸಿದ್ಧಲೇಖಕರಲ್ಲೊಬ್ಬರಾದ ಹೆಚ್.ಆರ್. ಕೃಷ್ಣಮೂರ್ತಿಯವರ ಬರವಣಿಗೆಯಲ್ಲಿ ಖಚಿತತೆಯಿರುವಂತೆಯೇ ನೇರವೂ ಸರಳವೂ ಆದ ಶೈಲಿ ಮನಮುಟ್ಟುತ್ತದೆ. "ಈ ಪ್ರಪಂಚದ ನೀರನ್ನೆಲ್ಲ ಮೂರು ಲೀಟರಿನ ಪಾತ್ರೆಗೆ ಹಾಕುವುದಾದರೆ, ನಮಗೆ ಸಿಗುವ ಶುದ್ಧನೀರು ಕೇವಲ ಅರ್ಧಚಮಚ" ಎಂಬಂತಹ ವಾಕ್ಯಗಳು ಸುದೀರ್ಘಪ್ರಬಂಧದ ನಿರೂಪಣೆಗಿಂತ ಮಿಗಿಲಾದ ಪರಿಣಾಮ ಬೀರಬಲ್ಲವು.

ಇಂದು ಜನಪ್ರಿಯ ವಿಜ್ಞಾನವನ್ನು ಓದುಗರಿಗೆ ತಲುಪಿಸಲು ಪತ್ರಿಕಾ ಮಾಧ್ಯಮವೂ ಸಾಕಷ್ಟು ಶ್ರಮಿಸುತ್ತಿದೆ. ವಿಜ್ಞಾನದ ಹೊಸ ಆವಿಷ್ಕಾರಗಳು, ಮಾಹಿತಿತಂತ್ರಜ್ಞಾನದ ಹೊಸ ಹೊಳಹುಗಳೇ ಮೊದಲಾದವು ಪತ್ರಿಕಾ ಕಾಲಮ್ಮುಗಳ ಮೂಲಕ ಜನಸಾಮಾನ್ಯರಿಗೆ ತಲುಪುತ್ತಿವೆ. 'ಗ್‍ಗ್‍ಗ್‍ಗ್‍ಗಣೇಶನು ಗಣೇಶನಾದನು', 'ಚಂದ್ರಶಿಲೆಯ ಚೋರರ ನೀವು ಕಂಡಿರಾ?', 'ಭೂರಮೆಗೆ ಸ್ಟೆಥೊಸ್ಕೋಪ್', 'ಡಿಸೈನರ್ ಬೇಬೀಸ್' ಎಂಬಂತಹ ಶೀರ್ಷಿಕೆಗಳೇ ತಮ್ಮ ಲವಲವಿಕೆ ಹೊಸತನಗಳಿಂದ ನಮ್ಮ ಗಮನ ಸೆಳೆಯುತ್ತಿವೆ. ನಾಗೇಶ ಹೆಗಡೆ, ಯು ಬಿ ಪವನಜ, ಕೊಳ್ಳೇಗಾಲ ಶರ್ಮ, ಬಿಎಸ್ ಶೈಲಜಾ, ಟಿಆರ್ ಅನಂತರಾಮು, ಹಾಲ್ದೊಡ್ಡೇರಿ ಸುಧೀಂದ್ರರಂತಹ ತಜ್ಞರಿಂದ ಮೊದಲುಗೊಂಡು ಟಿಜಿ ಶ್ರೀನಿಧಿಯಂತಹ ಯುವ ಬರಹಗಾರರವರೆಗೆ ವಿಜ್ಞಾನವನ್ನು ಮನೆಬಾಗಿಲಿಗೆ ತಲುಪಿಸುವ ಸ್ತುತ್ಯರ್ಹ ಕೆಲಸದಲ್ಲಿ ತೊಡಗಿರುವ ಪರಿಣತರಿದ್ದಾರೆ.

ಜನಸಾಮಾನ್ಯರನ್ನು ತಲುಪುವುದೇ ಈ ಲೇಖನಗಳ ಮೂಲಗುರಿಯಾಗಿರುವುದರಿಂದ ಬರಹದ ಶೈಲಿಯೂ ಅತ್ಯಾಕರ್ಷಕವಾಗಿರಬೇಕಾಗುತ್ತದೆ. ಚಂದ್ರಶಿಲೆಯನ್ನು ಮ್ಯೂಸಿಯಂನಲ್ಲಿ ನೋಡಿ ಮುಟ್ಟುವ ಜನರ ತವಕದ ಬಗ್ಗೆ ಟಿಆರ್ ಅನಂತರಾಮು ಹೀಗೆ ಹೇಳುತ್ತಾರೆ - "ವಾಸ್ತವವಾಗಿ ಈ ಕಲ್ಲನ್ನು ಮುಟ್ಟಲು ಮೂರುಲಕ್ಷದ ನಲವತ್ತೆಂಟು ಸಾವಿರ ಕಿಲೋಮೀಟರ್ ಉದ್ದ ಕೈಚಾಚಬೇಕಾಗಿತ್ತು. ಇಲ್ಲಿ ಅದು ಮೊಳಕೈ ದೂರ."

ಓದುಗನಿಗೆ ತಿಳಿದಿರುವ ಕೆಲಸಂಗತಿಗಳನ್ನು ನೆನಪಿಸುತ್ತ ತಾವು ನಿರೂಪಿಸಹೊರಟ ವೈಜ್ಞಾನಿಕ ಮಹತ್ವದ ಸಂಗತಿಯೆಡೆಗೆ ಆತನ ಗಮನಸೆಳೆಯುವ ತಂತ್ರವೂ ಹೊಸಬರಹಗಳಲ್ಲಿ ಎದ್ದುಕಾಣುತ್ತದೆ. ಜೆಆರ್ ಲಕ್ಷ್ಮಣರಾವ್ ಅವರ 'ದೋಸೆ ಮತ್ತು ವಿಜ್ಞಾನ', ನಾಗೇಶ ಹೆಗಡೆಯವರ 'ಅಣುಚಳಿಗಾಲ - ಅಡಗಲು ಸ್ಥಳವೆಲ್ಲಿ?' ಲೇಖನಗಳನ್ನು ಇಲ್ಲಿ ಉದಾಹರಿಸಬಹುದು.

"ಕೂಸುಹುಟ್ಟುವ ಮುನ್ನ ಕುಲಾವಿ ಹೊಲಿಸಿದರಂತೆ...! ಆದರೆ ಮೊದಲೇ ಹೊಲಿಸಿಟ್ಟ ಕುಲಾವಿಗೆ ಸರಿಯಾಗಿ ಮಗು ಹುಟ್ಟುವಂತಿದ್ದರೆ? ಈ ರೀತಿ ಹುಟ್ಟಲಿರುವ ಮಗುವೇ ಡಿಸೈನರ್ ಬೇಬಿ" ಹೀಗೆ ಪ್ರಾರಂಭವಾಗುವ ಟಿಜಿ ಶ್ರೀನಿಧಿಯವರ 'ಡಿಸೈನರ್ ಬೇಬೀಸ್' ಲೇಖನ ಪತ್ರಿಕಾ ಲೇಖನದ ಆಕರ್ಷಕಮಾದರಿಗಳಲ್ಲೊಂದು.

ಪತ್ರಿಕಾ ಕಾಲಮ್ಮಿನ ಅಳತೆ, ಪದಸಂಖ್ಯೆಗಳ ಮಿತಿಯಲ್ಲಿ ಓದುಗನ ಗಮನಸೆಳೆವ ಮೋಹಕ ಶೈಲಿಯನ್ನು ರೂಢಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇರುವುದರಿಂದ ಈ ಕಾಲಮ್ಮುಗಳು ವಿಜ್ಞಾನ ಬರಹದ ಶೈಲಿ, ಭಾಷೆಗಳನ್ನು ಆಕರ್ಷಕಗೊಳಿಸಿವೆ. ವಿಜ್ಞಾನವನ್ನು ನಮ್ಮ ಬದುಕಿಗೆ ಇನ್ನಷ್ಟು ಹತ್ತಿರವಾಗಿಸಿವೆ. ಬೆಳ್ಳಾವೆ ವೆಂಕಟನಾರಣಪ್ಪನವರಿಂದ ಮೊದಲುಗೊಂಡು ಜೆಆರ್ ಲಕ್ಷ್ಮಣರಾವ್, ಜಿಟಿ ನಾರಾಯಣರಾಯರಂಥ ಪ್ರಯತ್ನಶೀಲರಿಂದ ಬೆಳೆದ ವಿಜ್ಞಾನಸಾಹಿತ್ಯ ಹೊಸರೂಪದಲ್ಲಿ ಸಮೃದ್ಧವಾಗಲು ಅವಕಾಶಗಳು ವಿಪುಲವಾಗಿವೆ. ಸಹೃದಯ ಓದುಗವೃಂದವೂ ಇದಕ್ಕೆ ತಕ್ಕಂತೆ ಪ್ರತಿಸ್ಪಂದಿಸುವರೆಂದು ಆಶಿಸೋಣ.

(ಆಕಾಶವಾಣಿ ಮಡಿಕೇರಿ ಕೇಂದ್ರದಲ್ಲಿ ಮಾಡಿದ ಭಾಷಣ, 2008)

ಟಿಪ್ಪಣಿ : ಚಿನ್ನದ ಪದಕದೊಡನೆ ಕನ್ನಡದಲ್ಲಿ ಎಂಎ ಮಾಡಿರುವ ಟಿಎಸ್ ಗೋಪಾಲ್ ಅವರು ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ವ್ಯಾಕರಣ, ವನ್ಯಜೀವನ, ಲಲಿತ ಪ್ರಬಂಧ, ವಿಮರ್ಶೆ ಮೊದಲಾದ ಅನೇಕ ಕ್ಷೇತ್ರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X