ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧಿನಗರದ ಗಲ್ಲಿಯಲ್ಲಿ ಹೊಸತನ ಎಲ್ಲಿ?

By Staff
|
Google Oneindia Kannada News

An intem song in Hatrick Hodimaga
ಸಿನಿಮಾ ಅಂದರೆ ಬರೀ ಮಚ್ಚು-ಲಾಂಗ್, ಒಂದಷ್ಟು ಅಮ್ಮನ ಸೇಟಿಮೆಂಟ್, ಲವ್ ಇದೇ ಅಲ್ಲ. ಸಿನಿಮಾ ಅಂದರೆ ಅಭಿರುಚಿ, ನೋಡುಗನ ಆಸಕ್ತಿಯನ್ನು ಕೆಣಕುವ, ಇಂದಿನ ಯುವಪೀಳಿಗೆಯ ಮನೋಭಾವನೆಗಳಿಗೆ ಕನ್ನಡಿ ಹಿಡಿಯುವ ವಸ್ತುವಾಗಬೇಕು. ಆಗ ಮಾತ್ರ ಕನ್ನಡ ಚಿತ್ರರಂಗದಲ್ಲಿ ಬದಲಾವಣೆ ತರಲು ಸಾಧ್ಯ.

* ಕೆ. ಆರ್. ರವೀಂದ್ರ, ಬೆಂಗಳೂರು

ಪ್ರತಿವಾರ ಕನಿಷ್ಟ ಎರಡು ಕನ್ನಡ ಸಿನಿಮಾಗಳು ಬಿಡುಗಡೆಯ ಭಾಗ್ಯ ಪಡೆಯುತ್ತಲೇ ಇವೆ. ಎರಡು ವಾರಕ್ಕೆ ಥಿಯೇಟರ್‌ಗಳಿಂದ ವಾರಕ್ಕೆ ಎತ್ತಂಗಡಿ ಕೂಡ ಆಗುತ್ತಿವೆ. ಗುಣಮಟ್ಟವಿಲ್ಲದ ಸಿನಿಮಾಗಳನ್ನು ನಿರ್ಮಿಸಿ ಜನ ಕನ್ನಡ ಸಿನಿಮಾ ನೋಡಕ್ಕೆ ಬರುತ್ತಿಲ್ಲ...ಎಂದು ಜನರ ಮೇಲೆ ಗೂಬೆ ಕೂರಿಸುವುದು ಎಷ್ಟರಮಟ್ಟಿಗೆ ಸರಿ? ಈ ವರ್ಷ ಬಿಡುಗಡೆಯಾದ ಒಂದು ಸಿನಿಮಾವಾದರೂ ಹೊಸತನವನ್ನು ನೀಡುವಲ್ಲಿ ಯಶಸ್ವಿಯಾಗಿದೆ? ಅದೇ ಹಳಸಿದ ಕತೆಗಳು, ಇಲ್ಲ ರೀಮೇಕ್ ಹಾವಳಿ ಇಲ್ಲಿ ಎದ್ದು ಕಾಣುತ್ತಿರುವುದು. ಇಷ್ಟಕ್ಕೂ ಜನರಾದರು ಈ ಹಳಸಿದ ಕತೆಗಳನ್ನು ನೋಡಲು ಚಿತ್ರಮಂದಿರಗಳಿಗೆ ಬರುವ ಅಗತ್ಯವಾದರು ಏನಿದೆ?

ಮುಂಬರುವ ಸಿನಿಮಾಗಳು ಕೂಡ ಇವುಗಳಿಂದ ಹೊರತಲ್ಲ. ಅಲ್ಲಿ ಕೂಡ ಅವೇ ಲಾಂಗ್‌ಗಳು-ಇಲ್ಲ ಪ್ರೇಮ ಪ್ರಕರಣಗಳೇ ಸಿನಿಮಾಗಳಾಗುತ್ತಿವೆ. ನಮ್ಮಲ್ಲಿ ಭರವಸೆ ಮೂಡಿಸುವಂಥ ನಿರ್ದೇಶಕರ ಕೊರತೆ ಎದ್ದು ಕಾಣಿಸುತ್ತಿದೆ. ಇಲ್ಲಿ ಗಾಂಧಿನಗರದ ಗಲ್ಲಿಗಳಲ್ಲಿ ಸಿನಿಮಾ ಮಾಡಲು ಒಡೋಡುತ್ತಿರುವ ಯುವ ಪ್ರತಿಭೆಗಳನ್ನು ನೋಡಿದರೆ ನಗು ಬರದೇ ಇರಲಾರದು. ಇವರು ಹೇಳುವ ಕಥೆಗಳನ್ನು ಕೇಳಿದರೆ, ತಕ್ಷಣ ಅದನ್ನು ಸಿನಿಮಾ ಮಾಡಿಬಿಡಬೇಕೆಂದು ನಿರ್ಮಾಪಕ ನಿರ್ಧರಿಸಬೇಕು, ಹಾಗೇ ಕಥೆಗಳನ್ನು ಹೇಳುತ್ತಾರೆ. ಶಾಟ್ ಹೇಗೆ ಓಪನ್ ಮಾಡೋದು, ಹೇಗೆ ಕಟ್ ಮಾಡೋದು...ಹೀಗೆ ಎಲ್ಲವನ್ನು ಕೈಸನ್ನೆಯಿಂದಲೇ ಹೇಳುವ ಇವರಲ್ಲಿ ಒಂದು ಲಾಂಗ್, ಒಂದಷ್ಟು ತಾಯಿ ಸೇಟಿಮೆಂಟ್, ಸ್ವಲ್ಪ ಲವ್...ಇದರ ಮೇಲೆ ಅವರಪ್ಪರಾಣೆ ಮತ್ತೇನು ಇರೋದಿಲ್ಲ. ಏಕೆಂದರೆ ಅವರಿಗೆ ಇದರ ಮೇಲೆ ಬೇರೇನು ಗೊತ್ತಿಲ್ಲ.

ಇಲ್ಲಿ ಬಹುತೇಕರಿಗೆ ಸಿನಿಮಾದ ಭಾಷೆ ಗೊತ್ತಿಲ್ಲ. ಜನಸಾಮಾನ್ಯರ ನಾಡಿಮಿಡಿತದ ಅರಿವಿಲ್ಲ. ಬಾಯಿ ತೆರೆದರೆ ಮಾಸು...ಮಾಸು ಎಂದು ಮಾತಾಡುತ್ತಾರೆ. ಜನ ಬದಲಾಗಿದ್ದಾರೆ, ಜನರ ಆಲೋಚನಾ ವಿಧಾನಗಳು ಬದಲಾಗಿವೆ. ಜನರು ಸಿನಿಮಾ ನೋಡುವ ದೃಷ್ಟಿಕೋನ ಬದಲಾಗಿದೆ. ಇದಕ್ಕೆ ಅನುಗುಣವಾಗಿ ಸಿನಿಮಾ ಮಾಡುವ ಅಗತ್ಯ ಮತ್ತು ಅನಿವಾರ್ಯತೆಯನ್ನು ಸಿನಿಮಾರಂಗ ಮಾತ್ರ ಅರ್ಥಮಾಡಿಕೊಂಡಿಲ್ಲ ಎಂಬುವುದು ನಿಜಕ್ಕೂ ವಿಪರ್ಯಾಸ. ಮುಸ್ಸಂಜೆ ಮಾತು, ಆ ದಿನಗಳು ಅಂಥ ಕೆಲ ಪ್ರಯತ್ನಗಳು ನಡೆದಿದ್ದು ಬಿಟ್ಟರೆ ಇತ್ತೀಚಿಗೆ ಒಂದು ಒಳ್ಳೆಯ ಪ್ರಯತ್ನ ಕೂಡ ನಮ್ಮಲ್ಲಿ ಸಾಧ್ಯವಾಗಿಲ್ಲ.

ತೆಲುಗು-ತಮಿಳಿಗೆ ನಮ್ಮಗಿಂತ ದೊಡ್ಡ ಮಾರುಕಟ್ಟೆ ಇದೆ. ಅಲ್ಲಿ ಸುರಿದಂತೆ ಇಲ್ಲಿ ಬಂಡವಾಳ ಸುರಿದು ಸಿನಿಮಾ ಮಾಡಲಾಗುವುದಿಲ್ಲ ಎಂದೆಲ್ಲಾ ಹೇಳುತ್ತಾರೆ. ಆದರೆ ಇವರಾರು ಅಲ್ಲಿ ನಡೆಯಿತ್ತಿರುವ ಬದಲಾವಣೆಗಳನ್ನು ಸರಿಯಾಗಿ ಗಮನಿಸಿದಂತೆ ಕಾಣುತ್ತಿಲ್ಲ. ಕಡಿಮೆ ಬಂಡವಾಳ(ಹೆಚ್ಚು ಕಡಿಮೆ ನಮ್ಮ ಸಿನಿಮಾಗಳಷ್ಟೆ ಬಂಡವಾಳ)ದಲ್ಲಿ ಸ್ಟಾರ್‌ಗಳನ್ನು ಪಕ್ಕಕ್ಕಿಟ್ಟು ಕಥೆಗಷ್ಟೆ ಒತ್ತುಕೊಟ್ಟು ಸಿನಿಮಾಗಳನ್ನು ನಿರ್ಮಿಸುತ್ತಿರುವ ಹೊಸ ಪೀಳಿಗೆ ನಿರ್ದೇಶಕರು ಅಲ್ಲಿ ಸೃಷ್ಟಿಯಾಗಿದ್ದಾರೆ. ಇಲ್ಲದೇ ಹೋದರೆ ತೆಲುಗು ಸಿನಿಮಾ ಎಂದರೆ ಅದೊಂದು ಪಕ್ಕಾ ಮಾಸ್ ಸಿನಿಮಾಗಳು, ನಾಯಕಿಯರನ್ನು ಅಸಹ್ಯವಾಗಿ ತೋರಿಸುತ್ತ, ಕೆಟ್ಟ ಸಂಭಾಷಣೆಗಳು, ಆದ್ದೂರಿತನವೆ ಬಂಡವಾಳವೆಂದು ಕರೆಯಲಾಗುತ್ತಿದ್ದ ತೆಲುಗಿನಲ್ಲಿ ಕಳೆದ ವರ್ಷ ಯಶಸ್ವಿಯಾದ ಒಂದೇ ಒಂದು ಮಾಸ್ ಚಿತ್ರವೆಂದರೆ ಗೋಪಿಚಂದ್ ನಟಿಸಿದ್ದ ಶೌರ್ಯಂ.

ಆದರೆ, ನಮ್ಮಲ್ಲಿ ಏನಾಗುತ್ತಿದ್ದೆ? ಅದೇ ಹಳೆಯ ಕತೆಗಳು- ಅದೇ ನಿರೂಪಣೆಗಳು. ಸಿನಿಮಾ ಹೆಸರು ನೋಡಿದರೆ ಸಾಕು ಜನ ಈ ಸಿನಿಮಾ ನಾಲ್ಕು ದಿನ ಕೂಡ ಓಡಲ್ಲ ಎಂದು ಜನರೇ ತೀರ್ಮಾನಿಸುತ್ತಾರೆ. ಹೊಸದಾಗಿ ಸಿನಿಮಾ ಮಾಡಲು ಬರುವವರಿಗಂತೂ ಇಲ್ಲಿ ಹಣವನ್ನು ಹೇಗೆ ವ್ಯಯಿಸಬೇಕು, ಮಾರಕಟ್ಟೆಗೆ ಹೇಗೆ ಸಿನಿಮಾವನ್ನು ತೆಗೆದುಕೊಂಡು ಹೋಗಬೇಕು, ಸಿನಿಮಾ ನಿರ್ಮಾಣ ಹೇಗೆ ಮಾಡಬೇಕು ಇವುಗಳ ಯಾವುದರ ಅರಿವು ಇಲ್ಲ. ಜತಗೆ ನಿರ್ದೇಶಕ ಎಂದು ಘೋಷಿಸಿಕೊಳ್ಳುವವನು ತಿಂಗಳುಗಟ್ಟಲ್ಲೆ ಒಂದು ರೂಮ್ ಹಾಕ್ಕೊಂಡು, ನಾಲ್ಕು ಜನರನ್ನು ಜೊತೆ ಸೇರಿಸಿಕೊಂಡು ಚಿತ್ರಕಥೆ ಮಾಡುವುದೆ ಮಾಡುವುದು... ಅನಂತರ ಎರಡು-ಮೂರು ತಿಂಗಳು ಸಿನಿಮಾ ತೆಗೆಯುವುದೇ ತೆಗೆಯುವುದು, ಒಂದೇ ಸೀನ್‌ನ ಐದಾರು ಥರದಲ್ಲಿ ತೆಗೆಯುವುದು, ಕಥೆಯ ಬೇಕು-ಬೇಡಗಳನ್ನು ಪಕ್ಕಕ್ಕಿಟ್ಟು ಐಟಂ ಸಾಂಗ್ ಹಾಕುವುದು, ಇನ್ನು ಮುಂದೊಂದು ವಿಶೇಷವೆಂದರೆ ಇಲ್ಲಿ ಲಾಂಗ್ ಹಿಡಿಯುವ ಹೀರೋಗಳೆಲ್ಲಾ ಬಹಳ ಅಮಾಯಕರು, ಹಳ್ಳಿಯಿಂದ ಬರುತ್ತಾರೆ, ತಮಗೆ ಗೊತ್ತಿಲ್ಲದೆ ರೌಡಿಯಿಸಂಗೆ ಇಳಿಯುತ್ತಾರೆ. ಜೊತೆಗೆ ಇವರಿಗೆಲ್ಲಾ ತಮ್ಮ ತಾಯಿ ಮೇಲೆ ಬಹಳ ಪ್ರೀತಿ. ಅಬ್ಬಾ! ಅದೇನು ಅಂತ ಕಥೆಗಳನ್ನು ಬರಿತ್ತಾರೋ!

ನಾನು ಕೂಡ ಇತ್ತೀಚಿಗೆ ಒಂದು ನಿರ್ಮಾಪಕನ ಜತೆ ಸಿನಿಮಾ ಮಾಡುವ ವಿಚಾರವಾಗಿ ಮಾತುಕತೆ ಮಾಡಿದ್ದೆ. ಅವನು ಸಿನಿಮಾರಂಗಕ್ಕೆ ಹೊಸಬ, ಅವನಿಗೆ ನಾನು ನನ್ನ ಕಥೆಯನ್ನು ಹೇಳಿ, ಇಡೀ ಸಿನಿಮಾವನ್ನು ಒಂದು ಕೋಟಿಯೊಳಗೆ ಮುಗಿಸುವ ಭರವಸೆಯನ್ನು ಕೊಟ್ಟೆ. ಅದಕ್ಕೆ ಪೂರಕವಾದ ಬಜೆಟ್ ಅನ್ನು ಅವನ ಮುಂದಿಟ್ಟೆ. ಬೆಂಗಳೂರಿನಲ್ಲಿ 20 ದಿನಗಳ ಚಿತ್ರಕರಣ ಮಾಡಿ ಮುಗಿಸುವ, ಹಾಗೇ ಹೊರೆಗೆ 10ರಿಂದ 12 ದಿನಗಳಲ್ಲಿ ಹಾಡುಗಳ ಚಿತ್ರಕರಣ ಮಾಡುವ ಬಗ್ಗೆ ಮಾತುಕತೆ ಆಯಿತು. ಎಲ್ಲವನ್ನು ಮುಗಿಸಿಕೊಂಡು ಹೋದ ಮಹಾಶಯ ವಾರದ ನಂತರ ಸಿಕ್ಕ, ಅವನು ಜತೆಯಲ್ಲಿ ಒಂದು ನಾಲ್ಕು ಜನ ಬಂದಿದ್ದರು, ಏನ್ ಸಾರ್ ಕಥೆಯಲ್ಲಿ ಧಮ್ಮೆ ಇಲ್ಲ, ಅಲ್ಲ ಒಂದೇ ಒಂದು ಫೈಟ್ ಇಲ್ಲ, ಐಟಂ ನಂಬರ್ ಇಲ್ಲ, ಕಾಮಿಡಿಯನ್ಸ್ ಇಲ್ಲ, ಅದು ಅಲ್ಲದೆ ಬರೀ 20 ದಿನದಲ್ಲಿ ಸಿನಿಮಾ ಮಾಡ್ತೀನಿ ಅಂತೀರಿ, ಸಿನಿಮಾ ತುಂಬಾ ಬರೀ ಎಳೆಂಟು ಪಾತ್ರನೇ ಇದೆ. ಒಂದು ಕೆಲಸ ಮಾಡಿ, ಒಂದು ನಾಲ್ಕು ಸೀನ್ ಸಾಧುಕೋಕಿಲ-ಬುಲೆಟ್ ಪ್ರಕಾಶ್-ಕೋಮಲ್ ಅವರಿಗೆ ಸರಿಹೊಂದುವಂತೆ ಮಾಡಿ ಸಾರ್, ಒಂದೆರಡು ಫೈಟ್, ಹಾಗೆ ಒಂದು ಐಟಂ ನಂಬರ್ ಬರೋಥರ ನೋಡಿ ಸಾರ್ ಎಂದರು. ತಕ್ಷಣ ಕೈ ಮುಗಿದೆ ಅಲ್ಲಿಂದ ಹೊರಟೆ.

ಇದು ಕನ್ನಡ ಸಿನಿಮಾರಂಗ ಎತ್ತ ಸಾಗುತ್ತಿದೆ ಅನ್ನೋದಕ್ಕೆ ಉದಾಹರಣೆಯಾಗಿ ಕೊಟ್ಟೆ. ಇಲ್ಲಿ ಚೈತನ್ಯ, ಅಗ್ನಿ ಶ್ರೀಧರ್, ನಾಗತಿಹಳ್ಳಿ ಚಂದ್ರಶೇಖರ್, ಗುರುಪ್ರಸಾದ್ (ಮಠ), ಯೋಗರಾಜ್‌ಭಟ್ ಹೀಗೆ ಒಂದಷ್ಟು ಕ್ರಿಯಾಶೀಲವಾಗಿ ಯೋಚಿಸುವ ನಿರ್ದೇಶಕರು-ಕಥೆಗಾರರು ನಮ್ಮಲ್ಲಿ ಇದ್ದಾರೆ. ಆದರೆ ನಮಗೆ ಮತ್ತಷ್ಟು ಹೊಸಬಗೆಯ, ಹೊಸಧೋರಣೆ ಸಿನಿಮಾಗಳನ್ನು ತೋರಿಸುವ ನಿರ್ದೇಶಕರು ಬೇಕಾಗಿದ್ದಾರೆ. ಸಿನಿಮಾ ಅಂದರೆ ಬರೀ ಮಚ್ಚು-ಲಾಂಗ್, ಒಂದಷ್ಟು ಅಮ್ಮನ ಸೇಟಿಮೆಂಟ್, ಲವ್ ಇದೇ ಅಲ್ಲ. ಸಿನಿಮಾ ಅಂದರೆ ಅಭಿರುಚಿ, ನೋಡುಗನ ಆಸಕ್ತಿಯನ್ನು ಕೆಣಕುವ, ಇಂದಿನ ಯುವಪೀಳಿಗೆಯ ಮನೋಭಾವನೆಗಳಿಗೆ ಕನ್ನಡಿ ಹಿಡಿಯುವ ವಸ್ತುವಾಗಬೇಕು. ಆಗ ಮಾತ್ರ ಇಲ್ಲೊಂದು ಬದಲಾವಣೆ, ಜೊತೆಗೆ ಯಶಸ್ಸು ಸಿಗುವುದು ಇಲ್ಲದೆ ಹೋದರೆ ಈಗಾಗಲ್ಲೇ ಕೋಮಾದ ಸ್ಥಿತಿಗೆ ತಲುಪಿರುವ ಸಿನಿಮಾರಂಗವನ್ನು ಖಂಡಿತ ದಯವಿಟ್ಟು ಕನ್ನಡ ಸಿನಿಮಾ ನೋಡಿ ಅನ್ನೋವ ಹಳೆಡೈಲಾಗ್ ಭವಿಷ್ಯಕಾಲದಲ್ಲಿ ಹೇಳುವುದ್ದಕ್ಕೂ ಕೂಡ ಯಾರು ಸಿಗಲಾರರು.

ಟಿಪ್ಪಣಿ : ಲೇಖಕರು ಕನ್ನಡ ಚಿತ್ರರಂಗದಲ್ಲಿ ಅಡಿಯಿಟ್ಟಿರುವ ನವಪೀಳಿಗೆಯ ನಿರ್ದೇಶಕರು. ಗೀತೆರಚನೆಕಾರರಾಗಬೇಕೆಂದು ಬಂದು, ಕಥೆಗಾರರಾಗಿ ಈಗ ನಿರ್ದೇಶನದ ನೊಗ ಹೊತ್ತು 'ಸೂರ್ಯಾಸ್ತ' ಎಂಬ ಚಿತ್ರ ನಿರ್ಮಿಸುತ್ತಿದ್ದಾರೆ.

ಪೂರಕ ಓದಿಗೆ
ನನ್ನ ಮೊದಲ ಹೆಜ್ಜೆಯ ಗುರುತು ಸೂರ್ಯಾಸ್ತ
ರುಂಡಗಳ ಚೆಂಡಾಟದಲ್ಲಿ ಹ್ಯಾಟ್ರಿಕ್ ಹೊಡೆದ ಮಗ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X