ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡುಗೆಮನೆಯಲ್ಲಿ ಕ್ರಾಂತಿ ಮಾಡಿದ ಮೈಕ್ರೋವೇವ್ ಓವನ್

By * ವೆ೦ಕಟೇಶ ದೊಡ್ಮನೆ, ತಲಕಾಲಕೊಪ್ಪ
|
Google Oneindia Kannada News

(ಹಿಂದಿನ ಪುಟದಿಂದ)

Microwave Oven
ಮೈಕ್ರೋವೇವ್ ಆವಿಷ್ಕಾರ

ಇದೆಲ್ಲಕ್ಕೆ ಕಳಶವಿಟ್ಟಂತೆ 1940ರ ಸುಮಾರಿಗೆ ಕಂಡುಹಿಡಿದ ಅಸಾಮಾನ್ಯ 'ಮೈಕ್ರೋವೇವ್' ಉಪಕರಣ ವಿಶ್ವವೇ ಬೆರಗಾಗುವಂತೆ ಮಾಡಿತು. ಮಾನವನ ಅಡುಗೆ ವಿಧಾನದ ದಿಕ್ಕನ್ನೇ ಬದಲಾಯಿಸಿತು, ವಾಣಿಜ್ಯ, ಕೈಗಾರಿಕೊದ್ಯಮದಲ್ಲೂ ಇದು ಉಪಯೋಗವಾಯಿತು. ಕೈಗಾರಿಕೆಯಲ್ಲಿ ಹಲವು ವಸ್ತುಗಳನ್ನು ಒಣಗಿಸಲು ಇದನ್ನು ಅತ್ಯ೦ತ ಸೂಕ್ತ ವ್ಯವಸ್ಥೆಯನ್ನಾಗಿ ರೂಪಿಸಿದ್ದಾರೆ. ಇವರದು ಮುಂದಿನದೆಲ್ಲ ಯಶೋಗಾಥೆ. ಹಣ, ಪ್ರಶಸ್ತಿ, ಸನ್ಮಾನ, ಎಲ್ಲವೂ ಅರಸಿಕೊ೦ಡು ಬಂದವು. ವಿಶ್ವ ಪ್ರಸಿದ್ಧ ಮೆಸ್ಯಾಚುಸೆಟ್ಸ್ ವಿಶ್ವವಿದ್ಯಾಲಯ 'ಡಾಕ್ಟರ್ ಆಫ್ ಸೈನ್ಸ್' ಪ್ರದಾನ ಮಾಡಿತು. ಮೂರುವರ್ಷಕ್ಕೆ ದಿಕ್ಕಿಲ್ಲದೆ ಅನಾಥನಾಗಿದ್ದ ಪರ್ಸಿ ಈಗ ಎಲ್ಲರಿಗೂ ಬೇಕಾದ 'ಡಾ. ಪರ್ಸಿ ಲಿಬ್ಯಾರನ್ ಸ್ಪೆನ್ಸರ್' ಆಗಿದ್ದರು! ಡಾ.ಪರ್ಸಿ ಸ್ಪೆನ್ಸರ್ 1970ರಲ್ಲಿ ಪರಲೋಕ ಯಾತ್ರೆ ಮಾಡುವ ಮೊದಲು ಸುಮಾರು 225ಕ್ಕೂ ಹೆಚ್ಚು ಪೇಟೆಂಟ್ ಗಳ ಅಧಿಪತಿಯಗಿದ್ದರು. 1999ರಲ್ಲಿ ಇವರ ಗೌರವಾರ್ಥವಾಗಿ 'hall of fame'ನಲ್ಲಿ ಮತ್ತೊಬ್ಬ ಶ್ರೇಷ್ಠ ಸಂಶೋಧಕ ಥಾಮಸ್ ಅಲ್ವ ಎಡಿಸನ್ ಸಾಲಿಗೆ ಇವರನ್ನೂ ಸೇರಿಸಲಾಗಿದೆ.

ಉಪಯೋಗಕಾರಿ ಮೈಕ್ರೋವೇವ್ ಓವನ್

ನೀವು ಇಂದು ನಗರ ಪ್ರದೇಶದ ಯಾವುದೇ ಮನೆಗೆ ಹೋಗಿ ಅಡುಗೆ ಮನೆಯ ಲೇಟೆಸ್ಟ್ ಉಪಕರಣ ಯಾವುದು ಅಂತ ನೋಡಿದರೆ ಅಲ್ಲಿ ಇರುತ್ತದೆ ಮೈಕ್ರೋವೇವ್ ಓವನ್. ಅದರರ್ಥ ಹೆಚ್ಚು ಮನೆಗಳಲ್ಲಿ ಇದು ಪರಿಚಿತ. ಹಳ್ಳಿಗಳಲ್ಲೂ ಅಲ್ಲಲ್ಲಿ ಕಾಣಬಹುದು. ಪಾಶ್ಚಾತ್ಯ ದೇಶಗಳಲ್ಲಿ ಇದು ಇಲ್ಲದೆ ಅಡುಗೆಮನೆಯೇ ಅಲ್ಲ. 'ಮೈಕ್ರೋವೇವ್' ಅಂದರೆ ಸೂಕ್ಷ್ಮ ತರಂಗ ಎಂದರ್ಥ. 'ಮ್ಯಾಗ್ನಟ್ರಾನ' ಎಂಬ ಉಪಕರಣದಿಂದ ಹೊರಡುವ ಈ ವಿದ್ಯುದಯಸ್ಕಾಂತೀಯ ಅಲೆಗಳು ಆಹಾರ ವಸ್ತುಗಳನ್ನ ಮುಖ್ಯವಾಗಿ, ಕೊಬ್ಬು/ಸಕ್ಕರೆ/ನೀರಿನ ಅಂಶ ಇರುವ ಯಾವುದೇ ವಸ್ತು ಅಥವಾ ಆಹಾರವನ್ನು ಅತಿ ವೇಗವಾಗಿ ಬಿಸಿಮಾಡುವ ಸಾಮರ್ಥ್ಯ ಹೊಂದಿವೆ.

ಇವು ರೇಡಿಯೋ ತರಂಗಗಳು ಮತ್ತು ಕ್ಷ-ಕಿರಣಗಳ ಮದ್ಯೆ ಇರುವ ತರಂಗಾ೦ತರವನ್ನು ಹೊಂದಿರುತ್ತವೆ. ಅದಕ್ಕೇ ಮೈಕ್ರೋವೇವ್ ಕೆಲಸಮಾಡುತ್ತಿರುವಾಗ ಇದರ ಹತ್ತಿರ ಯಾವುದೇ ಟ್ರಾನ್ಸಿಸ್ಟರ್, ಮೊಬೈಲ್ ಫೋನ್, ಅಥವಾ ಟಿ.ವಿ ಮುಂತಾದುವುಗಳು ತೊಂದರೆಗೊಳಗಾಗುತ್ತದೆ (ಗೊರ್ರ್... ಎನ್ನುತದೆ). ಇವು 0.3 ಗಿಗಾಹರ್ಟ್ಜ್ ನಿಂದ 300 ಗಿಗಾಹರ್ಟ್ಜ್ ವರೆಗಿನ ತರಂಗಾಂತರಗಳಲ್ಲಿರುತ್ತವೆ. ಬಿಸಿ ಮಾಡುವ ವೇಗ ಎಷ್ಟು ಜಾಸ್ತಿಯಗಿರುತ್ತದೆ ಅಂದರೆ ಒಂದು ಲೋಟ ನೀರು ಕುದಿಯುವಂತೆ ಮಾಡಲು ಒಂದುವರೆ ನಿಮಿಷ ಸಾಕು. ನಾಲ್ಕು ಲೋಟ ಅಕ್ಕಿ ಇಟ್ಟರೆ ಎಂಟು ನಿಮಿಷಕ್ಕೆ ಅನ್ನ ರೆಡಿ! ಸ್ವಲ್ಪ ಎಣ್ಣೆಸವರಿದ ಹಪ್ಪಳ 30 ಸೆಕೆಂಡಿಗೆ ಕರಿದ ರೂಪದಲ್ಲಿ ತಯಾರು. ಗೇರುಬೀಜ, ಶೇ೦ಗಾವನ್ನು 60 ಸೆಕೆಂಡಿಗೆ ಹುರಿಯಬಹುದು. ಹಾಗ೦ತ ರುಚಿಯೇನೂ ಬದಲಾವಣೆ ಆಗುವುದಿಲ್ಲ. ಇದರಲ್ಲಿ ಎಲ್ಲಾ ತರಹದ ತರಕಾರಿಯಿಂದ ಹಿಡಿದು, ಕಾಳುಗಳು, ಮೀನು-ಮಾಂಸ ಎಲ್ಲವನ್ನು ಹದವಾಗಿ ಬೇಯಿಸಬಹುದು. ಬೇಯುವ/ಬಿಸಿಯಾಗುವ ಆಳ ಒಂದುವರೆ ಇಂಚಿನಷ್ಟಾಗಿರುತ್ತದೆ. ಹಾಗಾಗಿ ದಪ್ಪ ಇರುವ ಆಹಾರ ಪದಾರ್ಥ(ಉದಾ:ಮಾಂಸ)ವನ್ನು ಮಗುಚಿ ಹಾಕಿ ಬೇಯಿಸಬಹುದು.

ಹೊರಗಿನಿಂದ ನೋಡುವುದಕ್ಕೆ ಒಂದು ಆಯತಾಕಾರದ ಪ್ಲಾಸ್ಟಿಕ್ ಪೆಟ್ಟಿಗೆಯ೦ತೆ ಕಾಣುವ ಇದು ಹೃದಯ ಭಾಗದಲ್ಲಿ 'ಮ್ಯಾಗ್ನಟ್ರಾನ್' ಎಂಬ ಉಪಕರಣವನ್ನು ಹುದುಗಿಸಿಕೊಂದಿರುತ್ತದೆ. ಒಳಗಡೆ ಒಂದು ತಿರುಗು ಮಣೆಯಿದ್ದು ಆಹಾರ ಪದಾರ್ಥ ಎಲ್ಲಾ ಕಡೆಯೂ ಸಮಾನವಾಗಿ ಬೇಯುವಂತೆ ನೋಡಿಕೊಳ್ಳುತ್ತದೆ. ಇನ್ನು ಉಪಯೋಗಿಸುವವರಿಗೆ ಅನುಕೂಲವಾಗಲೆಂದು ಹೊರ ಮೇಲ್ಮೈನಲ್ಲಿ ಅಡುಗೆಯ ಅಗತ್ಯಕ್ಕೆ ತಕ್ಕ ಒಟ್ಟು ಗುಂಡಿಗಳಿರುತ್ತವೆ. ಅದನ್ನು ಒಂದೆರಡು ಬಾರಿ ನೋಡಿಕೊಂಡರೆ ಉಪಯೋಗಿಸುವುದು ಸುಲಿದುಕೊಟ್ಟ ಬಾಳೆಹಣ್ಣು ತಿಂದಂತೆ. ಉರಿಯ ಹೊತ್ತಿಸಲು ಗಾಳಿ ಊದೊದು ಬೇಡ, ಮೈಕೈಗೆ ಮಸಿ ಇಲ್ಲ, ಸೀಮೆ ಎಣ್ಣೆಯ ವಾಸನೆ ಇಲ್ಲ, ಕರೆಂಟ್ ಹೊಡೆಯುವುದಿಲ್ಲ, ಸಂಪೂರ್ಣ ಸ್ವಚ್ಚತೆ ಇದೆ, ಅಡುಗೆ ಮಾಡಲು ಹೆಚ್ಚು ಸಮಯವಂತೂ ಬೇಡವೇ ಬೇಡ. ಇದಕ್ಕಿರುವ ಒಂದೇ ಬಾಗಿಲನ್ನು ಮುಚ್ಚದೆ 'ಆನ್' ಮಾಡಿದರೆ ಕೆಲಸಮಾಡುವುದಿಲ್ಲ, ಹಾಗಾಗಿ ಒಳಗೆ ಕೈ ಹಾಕಿದರೆ ಅಪಾಯವಾಗಿಬಿಡುತ್ತದೆ ಎಂಬ ಆತಂಕ ಇಲ್ಲ.

ಗೃಹಿಣಿಯರ ಅಚ್ಚುಮೆಚ್ಚು

ಹಾಂ, ಇಲೆಕ್ಟ್ರಿಕ್ ಕರೆಂಟ್ ಒಂದು ಬೇಕು, ಆದರೆ ಅದರ ಖರ್ಚೂ ಕಡಿಮೆ. ಇದರಲ್ಲಿ ಇಲೆಕ್ಟ್ರಿಕ್ ಸ್ಟೌವಿನ ಹಾಗೆ ಹೆಚ್ಚು ಬಿಸಿಯಾಗಿ ವೇಸ್ಟ್ ಆಗೋದಿಲ್ಲ ಮತ್ತು ಕಾಯ್ಲ್ ಬಿಸಿ ಆಗುವವರೆಗೆ ಕಾಯೋದು ಬೇಡ. ಆದ್ದರಿಂದ ಇದರಲ್ಲಿ ನಿಮಗೆ ಉಳಿತಾಯ ಆಗುತ್ತದೆ. ಮನೆಯಲ್ಲಿ ವಿದ್ಯುತ್ ಸಿಗುವಕಡೆ ಎಲ್ಲಿ ಬೇಕಾದರೂ ಈ ಪೋರ್ಟಬಲ್ ಒಲೆಯನ್ನ ತೆಗೆದುಕೊಂಡು ಹೋಗಬಹುದು. ಒಂದು ಕಾಲದಲ್ಲಿ 350 ಲೀಟರ್ ಫ್ರಿಡ್ಜ್ ನಷ್ಟು ಭಾರವಿದ್ದ ಈ ಒಲೆ ಈಗ ಬರೀ ಮೂರ್ನಾಲ್ಕು ಕೆಜಿ ಭಾರವಿರುವಂತೆ ವಿನ್ಯಾಸ ಮಾಡಿದ್ದಾರೆ. ಬಾಗಿಲು ಪಾರದರ್ಶಕವಾಗಿರುವ೦ತೆ ಮಾಡಿ ಒಳಗೆ ಏನಾಗುತ್ತಿದೆ ಎ೦ದು ನೋಡಬಹುದು. ಇಷ್ಟೆಲ್ಲಾ ಅನುಕೂಲತೆ ಇರುವುದರಿ೦ದಲೇ ಇದು ಅಮೆರಿಕದಲ್ಲಿ ಅಡುಗೆ ಮಾಡುವ ರೀತಿಯಲ್ಲಿ ಕ್ರಾಂತಿ ಮಾಡಿದ್ದು. ಈ ಎಲ್ಲಾ ಕಾರಣಗಳಿ೦ದ ಮೈಕ್ರೊ ವೇವ್ ಓವನ್ ಗೃಹಿಣಿಯರಿಗೆ ಅಚ್ಚುಮೆಚ್ಚು. ಪಾಶ್ಚಾತ್ಯ ದೇಶಗಳಲ್ಲಿ ಮೈಕ್ರೋವೇವ್ ಪಾಪ್ ಕಾರ್ನ್ ತರಹ ಇದಕ್ಕೆಂದೇ ಹಲವು ಆಹಾರ ಪದಾರ್ಥಗಳನ್ನು ವಿನ್ಯಾಸ ಮಾಡಿದ್ದಾರೆ. ಭಾರತದಲ್ಲೂ ನಗರ ಪ್ರದೇಶದಲ್ಲಿ ಈತರಹದ Ready food ಬಹುತೇಕ ಅ೦ಗಡಿಗಳಲ್ಲಿ ದೊರೆಯುತ್ತವೆ.

ಒಂದು ಸೂಚನೆ : ಯಾವುದೇ ಕಾರಣಕ್ಕಾಗೂ ಲೋಹದ (ಉದಾ:ಸ್ಟೀಲ್) ಪಾತ್ರೆಗಳನ್ನು ಉಪಯೋಗಿಸುವಂತಿಲ್ಲ. ಇದಕ್ಕೆಂದೇ ತಯಾರಿಸಿದ ಪ್ಲಾಸ್ಟಿಕ್, ಗಾಜು ಅಥವಾ ಪಿಂಗಾಣಿ ಪಾತ್ರೆಗಳನ್ನು ಉಪಯೋಗಿಸಬೇಕು. ಹಾಗಾಗಿ ನೀವು ಖರೀದಿಸುವಾಗ ಈ ಕೆಲವು ವಿಶೇಷವಾಗಿ ವಿನ್ಯಾಸಗೊ೦ಡ ಪಾತ್ರೆಗಳನ್ನೂ ಜೊತೆಗೆ ತ೦ದರೆ ಒಳಿತು.

ಅಮೆರಿಕದ 'ಆಹಾರ ಮತ್ತು ಔಷಧ ಪ್ರಾಧಿಕಾರ' ಹೇಳುವಂತೆ ಮೈಕ್ರೊವೇವನ್ನು ಆಹಾರ ಸಿದ್ದಪಡಿಸಲು, ಬಿಸಿಮಾಡಲು, ಒಣಗಿಸಲು ಉಪಯೋಗಿಸುವುದರಿಂದ ಅಪಯವೇನೂ ಇಲ್ಲ. ಕ್ಷ-ಕಿರಣ ಮತ್ತು ಅತಿ-ನೇರಳೆ ಕಿರಣಗಳಂತೆ ಯಾವ ಅಪಾಯಕಾರಿ ವಿಕಿರಣಗಳೂ ಇದರಿಂದ ಪ್ರಸರಣಗೊಳ್ಳುವುದಿಲ್ಲ. ಬೇಗನೆ ಬಿಸಿಯಾಗುವುದರಿಂದ ಪ್ರೋಟೀನಿನ ಅಂಶ ಸ್ವಲ್ಪ ಕಡಿಮೆಯಾಗಬಹುದು ಆದರೆ ಇದರಿಂದಾಗುವ ಉಪಯೋಗಕ್ಕೆ ಹೋಲಿಸಿದರೆ ಇದು ಏನೇನೂ ಅಲ್ಲ ಎನ್ನುತ್ತಾರೆ. ಇದನ್ನು ದಶಕಗಳಿ೦ದ ಉಪಯೋಗಿಸಿದವರೂ ಇದು "ಅತ್ಯ೦ತ ಸುರಕ್ಷಿತ" ಅನ್ನುತ್ತಾರೆ. ಈ ಅಡುಗೆಯೊಲೆ ಈಗಂತೂ ಭಾರತಾದ್ಯಂತ ಎಲ್ಲ ನಗರ/ಪಟ್ಟಣಗಳಲ್ಲೂ ಸಿಗುತ್ತದೆ. ಸುಮಾರು ಎರಡು ಸಾವಿರ ರುಪಾಯಿಯಿಂದ ಹಿಡಿದು ಹತ್ತು ಸಾವಿರ ರೂಪಾಯಿಗಳವರೆಗೂ ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ವಿವಿಧ ಸಂಸ್ಥೆಯ ಮುದ್ರೆಯೊಂದಿಗೆ ದೊರಕುತ್ತದೆ. ಯಜಮಾನರೆ, ನಿಮ್ಮ ಗೃಹಿಣಿ ಮೈಕ್ರೋವೇವ್ ಓವನ್ನನ್ನು ಅವರ 'ಡಿಮ್ಯಾ೦ಡಿನ' ಪಟ್ಟಿಗೆ ಸೇರಿಸಿದರೆ ನನ್ನನ್ನ ಶಪಿಸಬೇಡಿ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X