ಅಸಲಿಗೆ ನಾವು ಸ್ವತಂತ್ರರಾಗಿದ್ದೇವಾ?

ರಾಷ್ಟ್ರಧ್ವಜ ಹಾರಿಸುವ ಕಂಬದ ಪಕ್ಕದಲ್ಲೆಲ್ಲಾದರೂ ಬಾಂಬ್ ಇಟ್ಟಿದ್ದಾರಾ ಎಂಬ ಆತಂಕದಿಂದ ನಾವು ಸ್ವಾತಂತ್ರ್ಯ ದಿನ ಆಚರಿಸಿದ್ದೇವೆ. ಆದರೆ, ನಿಜಕ್ಕೂ ನಮಗೆ ಸ್ವಾತಂತ್ರ್ಯ ಸಿಕ್ಕಿದೆಯಾ? ಬ್ರಿಟಿಷರಿಂದ ಮುಕ್ತರಾಗಿದ್ದರೂ ಪಾಶ್ಚಿಮಾತ್ಯ ಸಂಸ್ಕೃತಿಯ ದಾಸರಾಗುತ್ತಿದ್ದೇವೆ. ಭ್ರಷ್ಟ ರಾಜಕಾರಣಿಗಳು, ಮಾತು ಕೇಳದ ಅಧಿಕಾರಿಗಳು, ಬಂಡವಾಳಶಾಹಿಗಳು ನಮ್ಮನ್ನು ಅಡಿಯಾಳಾಗಿ ಮಾಡಿಕೊಂಡಿದ್ದಾಗಿದೆ. ಬೆಲೆಏರಿಕೆ, ದುರಾಡಳಿತ ರುದ್ರತಾಂಡವವಾಡುತ್ತಿದೆ. ನಾವು ಬಾಯಿ ಮುಚ್ಚಿ ಕುಳಿತಿದ್ದೇವೆ. ಆಗಸ್ಟ್ 15ರಂದು ಮಾತ್ರವಲ್ಲ ಪ್ರತಿದಿನ ಸ್ವತಂತ್ರತೆಯ ಅನುಭೂತಿಯನ್ನು ಅನುಭವಿಸುವಂತಾಗಬೇಕು, ಅಂದೇ ನಮಗೆ ಸ್ವಾತಂತ್ರ್ಯ!

ಲೇಖನ : ಎಚ್. ಆನಂದರಾಮ ಶಾಸ್ತ್ರೀ

Anandram Shastryಆಗಸ್ಟ್ 15 ಹತ್ತಿರವಾಗುತ್ತಿದ್ದಂತೆ ನನಗೆ ಒಂದೆಡೆ ಖುಷಿ, ರೋಮಾಂಚನ, ಇನ್ನೊಂದೆಡೆ ಬೇಸರ, ವಿಷಾದ. ಕ್ರಿಸ್ತ ಶಕ 711ರಲ್ಲಿ ಮಹಮದ್ ಬಿನ್ ಕಾಸಿಮ್ ನಡೆಸಿದ ಸಿಂಧ್ ದಾಳಿ, ನಂತರ ಕ್ರಿ.ಶ.1000ದಲ್ಲಿ ಘಜ್ನಿ ಮಹಮೂದ್ ಕೈಕೊಂಡ ದಂಡಯಾತ್ರೆ(ಭಂಡಯಾತ್ರೆ)ಯಿಂದ ಮೊದಲ್ಗೊಂಡು 1947ರಲ್ಲಿ ಮೌಂಟ್ ಬ್ಯಾಟನ್ ನಮ್ಮ ಬ್ಯಾಟನ್ನು ಮರಳಿ ನಮಗೊಪ್ಪಿಸಿ-ಬೇಟನ್ನನ್ನು ನಮ್ಮ ಕೈಗೆ ಕೊಟ್ಟು ತನ್ನ ದೇಶಕ್ಕೆ ನಿವಾಳಿಸಿದವರೆಗಿನ ಆ ಸಹಸ್ರ ವರ್ಷಗಳ ಸಂಕೋಲೆಯಿಂದ ಬಿಡುಗಡೆ ಹೊಂದಿದಕ್ಕೆ ಖುಷಿ. ಶಾಲಾ ಬಾಲಕನಾಗಿದ್ದಾಗ ನಾನು ನನ್ನೂರು ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ, ಎನ್‌ಸಿಸಿ ವಿದ್ಯಾರ್ಥಿಯಾಗಿ ಗಣ್ಯರೆದುರು ಕವಾಯಿತಿನಲ್ಲಿ ಪಾಲ್ಗೊಂಡು, ಊರೆಲ್ಲ ಸುತ್ತುವ ಭವ್ಯ ಪ್ರಭಾತಫೇರಿಯಲ್ಲಿ ಶಿಸ್ತುಬದ್ಧ ಹೆಜ್ಜೆಯಿಕ್ಕುತ್ತ, ಬೂಟುಗಾಲಿನ ಪ್ರತಿ ಹೆಜ್ಜೆಯನ್ನೂ ಪರಂಗಿಯವನ ಮೇಲೇ ಇಡುತ್ತಿದ್ದೇನೆಂದು ಭಾವಿಸುತ್ತ, ಪ್ರತಿಯೊಂದು ಸೆಲ್ಯೂಟ್ ಕುಟ್ಟುವಾಗಲೂ ಭವ್ಯ ಭಾರತದ ದಿವ್ಯ ಪ್ರಜೆ ನಾನೆಂದು ಸಂಭ್ರಮಿಸುತ್ತ, ಮುಂದೆ ನಾನೇ ಈ ದೇಶದ ಪ್ರಧಾನಿ ಅಥವಾ ರಾಷ್ಟ್ರಪತಿ ಎಂದು ಭ್ರಮಿಸುತ್ತ ಕಳೆದ ಆ ದಿವ್ಯ ಘಳಿಗೆಗಳು ಸ್ಮೃತಿಪಟಲದಲ್ಲಿ ಮೂಡಿ ರೋಮಾಂಚನ!

ಬೇಸರ-ವಿಷಾದ

ಅದೇ ವೇಳೆ, ಬೇಸರ, ವಿಷಾದ ಕೂಡ. ಬೇಸರಕ್ಕೆ, ವಿಷಾದಕ್ಕೆ ಕಾರಣಗಳು ಹಲವು. ನೂರಾರು ಧೀಮಂತ ನಾಯಕರು, ಸಹಸ್ರಾರು ಸಂಘಟಕರು, ಲಕ್ಷಾಂತರ ಸಮರ್ಪಿತ ಹೋರಾಟಗಾರರು ಮತ್ತು ಕೋಟ್ಯಂತರ ಜನತೆ ದಶಕಗಳ ಕಾಲ ಹೋರಾಡಿ ಬ್ರಿಟಿಷ್ ವಿಷಜಂತುಗಳಿಂದ ಮರಳಿ ಪಡೆದ ಈ ದೇಶವನ್ನು ನಮ್ಮವರೇ ಆದ ದುರುಳ ರಾಜಕಾರಣಿಗಳೂ ಭ್ರಷ್ಟ ಅಧಿಕಾರಿಗಳೂ ಮತ್ತು ದುಃಸ್ವಾರ್ಥಿ ಬಂಡವಾಳಶಾಹಿಗಳೂ ಸೇರಿ ಇಂದು ಯಾವ ಸ್ಥಿತಿಗೆ ತಂದಿಟ್ಟಿದ್ದಾರಲ್ಲಾ, ಎಂದು ಬೇಸರವಾಗುತ್ತದೆ. ಮುಸ್ಲಿಮ್ ದಾಳಿಕೋರರ ದೀರ್ಘ ಕಾಲದ ಮೋಜು-ದಬ್ಬಾಳಿಕೆ-ಮತಾಂತರಗಳ ಆಳ್ವಿಕೆ, ನಂತರ ಪರಂಗಿಯವರ ಒಡೆದು ಆಳುವ ದುರ್ನೀತಿ ಮತ್ತು ಸಾರಾಸಗಟು ಲೂಟಿ ಇವುಗಳಿಂದ ನಾವು ಬಚಾವಾದೆವೆನ್ನುವಾಗ ನಮ್ಮವರೇ ನಮ್ಮನ್ನು ಒಡೆಯತೊಡಗಿದರೆ, ದೋಚತೊಡಗಿದರೆ ಬೇಸರವಾಗದಿದ್ದೀತೆ?

ಆದರೆ, ಇದಕ್ಕಿಂತ ವಿಷಾದದ ಸಂಗತಿ ಇನ್ನೊಂದಿದೆ. ಅದ್ಯಾವ ವಿಷಘಳಿಗೆಯಲ್ಲಿ ಮುಸ್ಲಿಮರು ಹಾಗೂ ಬಿಳಿದೊಗಲಿನವರು ನಮ್ಮ ದೇಶದೊಳಕ್ಕೆ ಕಾಲಿಟ್ಟರೋ, ನಮ್ಮ ದೇಶದ ಇತಿಹಾಸ ಜನಮನದಲ್ಲಿ ಇವರ ಕಾಲದವರೆಗಷ್ಟೇ ಹೋಗಿ ನಿಂತುಬಿಟ್ಟಿದೆ! ಈಗ ಅರವತ್ತು ಸಮೀಪಿಸುತ್ತಿರುವ ನಾನು ಶಾಲಾ ವಿದ್ಯಾರ್ಥಿಯಾಗಿದ್ದಾಗ ಭಾರತದ ಇತಿಹಾಸವೆಂದು ಪಠ್ಯಪುಸ್ತಕದಲ್ಲಿ ಓದಿದ್ದೆಲ್ಲ ಇಂಥವರ ಗುಣಗಾನವನ್ನೇ! ಅದಕ್ಕಿಂತ ಹಿಂದಿನದು ನೆಪಮಾತ್ರಕ್ಕೆ ಒಂದಿಷ್ಟು ಇತ್ತು ಅಷ್ಟೆ. ನನ್ನ ಮಕ್ಕಳು ಓದಿದ್ದು, ಮೊಮ್ಮಕ್ಕಳು ಓದುತ್ತಿರುವುದೂ ಹೆಚ್ಚೂಕಮ್ಮಿ ಇದನ್ನೇ. ಇತಿಹಾಸವೆಂದು ಶಾಲಾ ಪಠ್ಯದ ಪಾಠಗಳನ್ನಷ್ಟೇ ಓದಿ ಸುಮ್ಮನಾದವರಿಗೆ ಇಂದೂ ಭಾರತದ ಭವ್ಯ ಇತಿಹಾಸ ಆರಂಭವಾಗುವುದು - ಹೆಚ್ಚೂಕಮ್ಮಿ - ಕ್ರಿ.ಶ.1526-28ರ 'ಮೊದಲನೇ ಪಾಣಿಪತ್ ಕದನ'ದಿಂದ, ಬಾಬರ್‌ನಿಂದ! 'ನಮ್ಮ ಭಾರತ'ವೆಂದರೆ ಇವರಿಗೆ ಕೇವಲ ಸ್ವಾತಂತ್ರ್ಯೋತ್ತರ ಭಾರತ! ನಮ್ಮ ಪುರಾಣೇತಿಹಾಸಗಳಲ್ಲಿ ವರ್ಣಿಸಿರುವ ಜಂಬೂದ್ವೀಪವೆಂಬುದು ಈಗ್ಗೆ 8000 ವರ್ಷಗಳಿಗೂ ಹಿಂದೆಯೇ ಇತ್ತೆಂಬುದಾಗಲೀ ಉತ್ತರದ ಇಂದಿನ ರಷ್ಯಾ-ಸೈಬೀರಿಯಾದಿಂದ ದಕ್ಷಿಣದ ನಮ್ಮ ಕನ್ಯಾಕುಮಾರಿಯವರೆಗೆ ನಮ್ಮೀ ಜಂಬೂದ್ವೀಪವು ವ್ಯಾಪಿಸಿತ್ತೆಂಬುದಾಗಲೀ ಕ್ರಿಸ್ತಪೂರ್ವ 2700ರ, ಅಂದರೆ ಈಗ್ಗೆ 4700 ವರ್ಷಗಳ ಹಿಂದಿನ ಅತ್ಯಂತ ವಿಕಸಿತ ಸಿಂಧೂ ಸಂಸ್ಕೃತಿಯಾಗಲೀ ಅನಂತರದ ವೇದಕಾಲೀನ ಭವ್ಯ ಭಾರತವಾಗಲೀ ತದನಂತರ ಬಂದ ಮಹಾವೀರ, ಬುದ್ಧ, ಚಂದ್ರಗುಪ್ತ, ಅಶೋಕ ಮುಂತಾದವರ ಪ್ರಭಾವಲಯಗಳಾಗಲೀ ಈ 'ಶಾಲಾ ಪಠ್ಯ ಸೀಮಿತ'ರಿಗೆ ಕೇವಲ ಅಲ್ಪ ಪರಿಚಿತ ಅಷ್ಟೆ. ಮುಘಲರು ಮತ್ತು ಬ್ರಿಟಿಷರೇ ಇವರಿಗೆ ಹೀರೋಗಳು! ದೇಶವನ್ನೆಲ್ಲ ಲೂಟಿಮಾಡಿ, ಜನಾಂಗವನ್ನೆಲ್ಲ ವಿಷಬೀಜ ಬಿತ್ತಿ ಒಡೆದುಹಾಕಿ ಹೋದ ಬ್ರಿಟಿಷರು ನಮ್ಮವರನ್ನೇ ದುಡಿಸಿಕೊಂಡು ತಮಗಾಗಿ ನಿರ್ಮಿಸಿಕೊಂಡ ಕಟ್ಟಡಗಳು, ರೈಲ್ವೆ ಮಾರ್ಗಗಳು, ಪ್ರಾರಂಭಿಸಿದ ತಮ್ಮನುಕೂಲದ ಅಂಚೆ ಸೇವೆ.... ಇವು ಈ ನಮ್ಮ ಪಠ್ಯಸೀಮಿತರ ದೃಷ್ಟಿಯಲ್ಲಿ ಮಹತ್ತರ ಕೊಡುಗೆಗಳು! ಮುಸ್ಲಿಮರು ಮತ್ತು ಬ್ರಿಟಿಷರು ಆಳದೇ ಇದ್ದಿದ್ದರೆ ನಾವು ಈ ಎಲ್ಲ ಕ್ಷೇತ್ರಗಳಲ್ಲೂ ಇನ್ನೂ ಮಹತ್ತರ ಸಾಧನೆ ಮಾಡಿರುತ್ತಿದ್ದೆವು ಎಂಬ ಸತ್ಯದ ಅರಿವನ್ನೇ ನಮ್ಮ ಪಠ್ಯಪುಸ್ತಕಗಳು ನಮಗೆ ಉಂಟುಮಾಡಲಿಲ್ಲ. ರಾಮಾಯಣ-ಮಹಾಭಾರತಗಳಂತೂ ನಮಗೆ ಇತಿಹಾಸಗಳಾಗುವ ಬದಲು 'ದೇವರ ಕಾಲ'ದ ದಂತಕಥೆಗಳಾದವು! ಬಾಲಗಂಗಾಧರ ತಿಲಕ್, ಗಾಂಧೀಜಿ, ನೇತಾಜಿ, ಚಂದ್ರಶೇಖರ ಆಜಾದ್, ಭಗತ್ ಸಿಂಗ್ ಮೊದಲಾದವರ ಆದರ್ಶಗಳನ್ನು ಮೂಲೆಗುಂಪು ಮಾಡಿದವರ ಕೈಗೆ ಸಿಕ್ಕ ಕಾಂಗ್ರೆಸ್ ಪಕ್ಷ ಮತ್ತು 'ದಿಕ್ಕು ತಪ್ಪಿದ (ಅನ್ಯರ ಮನೆ)ಮಕ್ಕಳಂತಿರುವವರು ಬೆಳೆಸಿದ ಕಮ್ಯೂನಿಸ್ಟ್ ಪಕ್ಷ ಇವುಗಳ ಪ್ರಣೀತ ಇತಿಹಾಸದ ಶಾಲಾ ಪಠ್ಯ ನಮಗೆ ನೀಡಿರುವ ಬಳುವಳಿ ಇದು!

ಹೀಗೆ, ನಮ್ಮ ಸರ್ಕಾರವೇ ದೇಶದ ಇತಿಹಾಸವನ್ನು ಮೊಟಕುಗೊಳಿಸಿ, ರೂಪಾಂತರಗೊಳಿಸಿ, ವಿರೂಪಗೊಳಿಸಿ ನಮಗೆ ಬೋಧಿಸಿದ್ದರಿಂದಾಗಿ ನಾವಿಂದು ಭಾರತವೆಂದಾಕ್ಷಣ ಸ್ಥೂಲವಾಗಿ 2500 ವರ್ಷ ಮತ್ತು ಸೂಕ್ಷ್ಮವಾಗಿ ಕೇವಲ 1000 ವರ್ಷವಷ್ಟೇ ಹಿಂದಕ್ಕೆ ಗಮನ ಹರಿಸುವ ಮತ್ತು ಸ್ವತಂತ್ರ ಭಾರತವೆಂದರೆ1947ಆಗಸ್ಟ್ 14ರ ಮಧ್ಯರಾತ್ರಿಯ ನಂತರದ ಭಾರತ ಎಂದಷ್ಟೇ ತಿಳಿದಿರುವ ಅಜ್ಞಾನಿಗಳಾಗಿದ್ದೇವೆ! ನಮ್ಮ 'ಸರ್ಕಾರಿ ಕೃಪಾಪೋಷಿತ' ಇತಿಹಾಸ ಪಠ್ಯ ಮತ್ತು 'ಸ್ವಾತಂತ್ರ್ಯೋತ್ಸವ'ದ ಭರಾಟೆ ಇವುಗಳಿಂದಾಗಿ ನಮ್ಮ ಬಹುಪಾಲು ಜನಮಾನಸದಲ್ಲಿ, 'ಘೋರಿ, ಘಜ್ನಿ, ಕಾಸಿಮ್‌ಗಳಿಗಿಂತ ಮೊದಲು ಸಹಸ್ರಾರು ವರ್ಷ ಕಾಲ ಉಜ್ವಲ ಸ್ವತಂತ್ರ ಭಾರತ ಅಸ್ತಿತ್ವದಲ್ಲಿತ್ತು', ಎಂಬ ಅರಿವೇ ಗೌಣವಾಗಿಬಿಟ್ಟಿದೆ! ಇತಿಹಾಸದ ಬಗೆಗಿನ ಈ ಅಪ್ರಜ್ಞೆ ಅತ್ಯಂತ ವಿಷಾದಕರ ಸಂಗತಿ.

ಸಾಂಸ್ಕೃತಿಕ ಪಾರತಂತ್ರ್ಯ

ಇದೇ ವೇಳೆ, ಸಾಂಸ್ಕೃತಿಕವಾಗಿ ನಾವು ಪಾರತಂತ್ರ್ಯಕ್ಕೊಳಗಾಗುತ್ತ ಸಾಗಿರುವುದು ಮತ್ತೊಂದು ಕಳವಳದ ಸಂಗತಿ. ಫ್ರಾನ್ಸಿಸ್ ಕೋಸ್ಲೋಸ್ಕಿ ಎಂಬ ಓರ್ವ ಅಮೆರಿಕನ್ ಪ್ರಾಧ್ಯಾಪಕಿ ಭಾರತೀಯ ಸಂಸ್ಕೃತಿ ಕುರಿತ ಪುಸ್ತಕಗಳಿಂದ ಪ್ರಭಾವಿತಳಾಗಿ ಕಳೆದ ಏಳು ವರ್ಷಗಳಿಂದ ನಮ್ಮ ಸಂಸ್ಕೃತಿಯ ಅಧ್ಯಯನ ಹಾಗೂ ಅನುಷ್ಠಾನದಲ್ಲಿ ತೊಡಗಿದ್ದು ಇದೀಗ ಭಾರತಕ್ಕೆ ಬಂದಿರುವ ಈಕೆ ಇಲ್ಲೇ ಜೀವಿಸಿ ಇಲ್ಲೇ ದೇಹತ್ಯಾಗ ಮಾಡುವ ಬಯಕೆ ಹೊಂದಿದ್ದಾಳೆ. ವೇದಾಧ್ಯಯನ ಮಾಡಿರುವ ಈಕೆ ಪೂಜೆ, ಜಪ, ಭಜನೆ, ಮಂತ್ರಪಠನಗಳಲ್ಲಿ ಪಾರಂಗತೆ. ಪ್ರತಿದಿನ ಶಾಸ್ತ್ರೋಕ್ತವಾಗಿ ಹಿಂದೂ ದೇವರ ಪೂಜೆ ಮಾಡುತ್ತಿದ್ದಾಳೆ. ಫ್ರಾನ್ಸಿಸ್‌ಳಂತೆ ಇಂದು ಅನೇಕ ವಿದೇಶಿಯರು ಹಿಂದೂ ಹಬ್ಬ-ಹರಿದಿನಗಳ ಆಚರಣೆ, ಗೃಹಸಂಸ್ಕೃತಿ, ಸಂಗೀತ-ನೃತ್ಯಾದಿ ಕಲೆಗಳು, ಜನಪದ ಕಲೆ ಮುಂತಾದ ನಮ್ಮ ಮೌಲಿಕ ಸಂಸ್ಕೃತಿಯೆಡೆಗೆ ಆಕರ್ಷಿತರಾಗುತ್ತಿರುವಾಗ ಭಾರತೀಯರಾದ ನಾವಿಂದು ಅಮೆರಿಕನ್ ಸಂಸ್ಕೃತಿಗೆ ಮಾರುಹೋಗುತ್ತಿದ್ದೇವೆ! ನಮ್ಮ ವಿದ್ಯಾವಂತ ಯುವ ಸಮೂಹವಂತೂ ಮುಕ್ಕಾಲು ಮೂರುಪಾಲು ಪಾಶ್ಚಾತ್ಯ ಸಂಸ್ಕೃತಿಗೆ ಅಡಿಯಾಳಾಗತೊಡಗಿದೆ. ನಮ್ಮ ಸಾಂಸ್ಕೃತಿಕ ಸ್ವಂತಿಕೆ, ಸ್ವಾತಂತ್ರ್ಯಗಳನ್ನು ನಾವಾಗಿಯೇ ಕಳಚಿ ಬಿಸಾಡುತ್ತಿದ್ದೇವೆ! ನಮ್ಮತನವನ್ನೇ, ನಮ್ಮ ಗುರುತನ್ನೇ ಕೈಬಿಟ್ಟು ಪರದೇಶೀಯರ ಮೊಹರನ್ನು ನಮ್ಮ ಮೇಲೆ ಒತ್ತಿ(ಸಿ)ಕೊಳ್ಳುತ್ತಿದ್ದೇವೆ! ಇಂಥ ನಾವಿಂದು ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದೇವೆ! ಯೋಚಿಸಿದರೆ ಬಹಳ ಬೇಸರವಾಗುತ್ತದೆ.

ಮುಂದೆ ಓದಿ : 1947ರ ಸ್ವಾತಂತ್ರ್ಯ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+