ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸಲಿಗೆ ನಾವು ಸ್ವತಂತ್ರರಾಗಿದ್ದೇವಾ?

By Staff
|
Google Oneindia Kannada News

1947ರ ಸ್ವಾತಂತ್ರ್ಯ

ಸರಿ, 1947ರಲ್ಲಿ ಬ್ರಿಟಿಷರಿಂದ ನಮಗೆ ಸ್ವಾತಂತ್ರ್ಯವೇನೋ ಸಿಕ್ಕಿತು. ಏನಾಗಬೇಕೆಂದುಕೊಂಡು ಸ್ವಾತಂತ್ರ್ಯ ಪಡೆದೆವು, ಇಂದು ಏನಾಗಿದ್ದೇವೆ? ತಿಲಕ್, ಗಾಂಧೀಜಿ, ನೇತಾಜಿ, ಮೊದಲಾದವರು ಯಾವ ಉದ್ದೇಶಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದರು, ಇಂದು ಆ ಉದ್ದೇಶದ ಪಾಡೇನಾಗಿದೆ? ಚಂದ್ರಶೇಖರ ಆಜಾದ್, ಭಗತ್ ಸಿಂಗ್, ಸುಖದೇವ್, ರಾಜಗುರು, ಇವರೆಲ್ಲ ಯಾವ ಕಾರಣಕ್ಕಾಗಿ ಜೀವ ತೆತ್ತರು, ಇಂದು ಆ ಕಾರಣದ ಗತಿಯೇನಾಗಿದೆ? ಸ್ವಾತಂತ್ರ್ಯಾನಂತರದಲ್ಲಿ ಅಂಬೇಡ್ಕರ್ ಎಂಥ ಭಾರತದ ಕನಸು ಕಂಡಿದ್ದರು, ಈಗ ಎಂಥ ಭಾರತ ಇದೆ?

ನಮ್ಮ ದೇಶದ ಉಜ್ವಲವಾದ ಧಾರ್ಮಿಕ ಮತ್ತು ಐತಿಹಾಸಿಕ ಶಕ್ತಿಗಳನ್ನು ಬಳಸಿಕೊಂಡು ಬಾಲಗಂಗಾಧರ ತಿಲಕರು ವಿದೇಶೀ ನೊಗವನ್ನು ಕಿತ್ತೆಸೆಯಲು ಸನ್ನದ್ಧರಾದರು. ಪ್ರಬಲ ಸಂವಿಧಾನಾತ್ಮಕ ಸಾಧನಗಳಿಂದ ಗುರಿ ತಲುಪುವ ಮಾರ್ಗ ಅವರದಾಗಿತ್ತು. ಈ ಮಾರ್ಗಕ್ಕೆ ಲಾಲಾ ಲಜಪತ್ ರಾಯ್ ಮತ್ತು ಬಿಪಿನಚಂದ್ರ ಪಾಲ್‌ರ ಬೆಂಬಲವಿತ್ತು. ಈ ತ್ರಿಮೂರ್ತಿಗಳು ಇತಿಹಾಸದಲ್ಲಿ 'ಲಾಲ್, ಬಾಲ್, ಪಾಲ್' ಎಂದು ಪ್ರಸಿದ್ಧರಾದರು. 'ಸ್ವಾತಂತ್ರ್ಯ ನನ್ನ ಜನ್ಮಸಿದ್ಧ ಹಕ್ಕು; ನಾನದನ್ನು ಪಡೆದೇ ತೀರುವೆನು', ಎಂದು ಘರ್ಜಿಸಿದ್ದರು ಬಾಲಗಂಗಾಧರ ತಿಲಕ್. ನಾವದನ್ನು ಪಡೆದಿದ್ದೇವೆ. ಆದರೆ, ಹಕ್ಕೆಂಬುದಿಂದು ಕೇವಲ 'ಉಳ್ಳವರ ಸ್ವತ್ತಾ'ಗಿದೆ; ಸ್ವಾತಂತ್ರ್ಯವೆಂಬುದು 'ಉಳ್ಳವರ ಸ್ವೇಚ್ಛಾಚಾರ'ವಾಗಿದೆ. ಬಡವ ಇಂದೂ ಬಲ್ಲಿದನ ಗುಲಾಮನಾಗಿಯೇ ಇದ್ದಾನೆ.

ಕಳವಳಕರ ಸಂಗತಿಯೆಂದರೆ, ದೇಶವೇ ಅಮೆರಿಕದ ಗುಲಾಮ ಆಗತೊಡಗಿದೆ! ಹೇರಳ ಪ್ರಾಕೃತಿಕ ಸಂಪತ್ತನ್ನು ಹಾಗೂ ಅಗಾಧ ಮಾನವಸಂಪನ್ಮೂಲವನ್ನು ಹೊಂದಿದ್ದೂ ಸರ್ಕಾರದ ತಪ್ಪು ನೀತಿಗಳಿಂದಾಗಿ ದೇಶಕ್ಕೆ ಈ ಹಣೆಬರಹ! ಅನವಶ್ಯವಾಗಿ ಅಮೆರಿಕದೆದುರು ಕೈಯೊಡ್ಡುವ ದುರ್ಗತಿ! 'ವರ್ಷಕ್ಕೊಮ್ಮೆ ಮೂರು ದಿನಗಳ ನಾಟಕವಾಡುವ ಕಾಂಗ್ರೆಸ್ಸಿನದು ತಿರುಪೆ ನೀತಿ', ಎಂದು ಬಂಕಿಮಚಂದ್ರ ಬ್ಯಾನರ್ಜಿ, ಅರವಿಂದ ಘೋಷ್, ಬಾಲಗಂಗಾಧರ ತಿಲಕ್ ಮೊದಲಾದವರು ಸ್ವಾತಂತ್ರ್ಯಪೂರ್ವದಲ್ಲಿಯೇ ಅಭಿಪ್ರಾಯಪಟ್ಟಿದ್ದರೆ ಇಂದು ನಮ್ಮ ಕಾಂಗ್ರೆಸ್ ಪಕ್ಷವು ವರ್ಷದ ಎಲ್ಲ ದಿನಗಳಲ್ಲೂ ನಾಟಕವಾಡುತ್ತಿದೆ; ಅಮೆರಿಕದ ಬಳಿ ತಿರುಪೆ ಬೇಡುವ ನೀತಿ ಹಿಡಿದಿದೆ! ಇಂದು ಈ ದೇಶದ ಸ್ವಾತಂತ್ರ್ಯಯೋಧ ಹಿರಿಯರ ಬಳಿ ಹೋಗಿ ಕೇಳಿ. ಒಬ್ಬರೂ ದೇಶದ ಇಂದಿನ ಪರಿಸ್ಥಿತಿಯ ಬಗ್ಗೆ ಸಂತಸ ವ್ಯಕ್ತಪಡಿಸುವುದಿಲ್ಲ. ತಾವು ಕಂಡಿದ್ದ ಸ್ವತಂತ್ರ ಭಾರತದ ಕನಸು ಎಂಥದು, ಈಗಿರುವ ಭಾರತ ಎಂಥದು ಎಂಬ ದುಃಖ ಆ ಹಿರಿಯರ ಎದೆಗಳಲ್ಲಿ ಮಡುಗಟ್ಟಿರುತ್ತದೆ.

ರಾಮರಾಜ್ಯ

ರಾಮರಾಜ್ಯದ ಕನಸು ಕಂಡರು ಗಾಂಧೀಜಿ. ನಮ್ಮ ದೇಶವಿಂದು ರಾವಣರಾಜ್ಯವಾಗಿದೆ. 'ಗಾಂಧೀಜಿಯ ಪಕ್ಷಾ'ನುಯಾಯಿಗಳೇ ರಾವಣಾಸುರರಾಗಿದ್ದಾರೆ. 'ಆಜಾದ್ ಹಿಂದ್ ಫೌಜ್' ಕಟ್ಟಿ ಸರ್ವತಂತ್ರ ಸ್ವತಂತ್ರ ಭಾರತದ ಕಲ್ಪನೆ ಜಾಗೃತಗೊಳಿಸಿದರು ನೇತಾಜಿ. 'ನನಗೆ ನಿಮ್ಮ ರಕ್ತ ಕೊಡಿ; ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ', ಎಂದು ತನ್ನ ಸೈನ್ಯಾಳುಗಳನ್ನವರು ಹುರಿದುಂಬಿಸಿದರು. ನಾವಿಂದು ಇಂಚಿಂಚಾಗಿ ಮತ್ತೆ ಐರೋಪ್ಯ ರಾಷ್ಟ್ರಗಳ ತೆಕ್ಕೆಗೆ ಸರಿಯುತ್ತಿದ್ದೇವೆ. 1860ರ ದಶಕದಲ್ಲಿಯೇ ರಾಜಕೀಯ ಚಿಂತಕ ರಾಜನಾರಾಯಣ ಬಸು, 'ನಮ್ಮ ರಾಷ್ಟ್ರೀಯ ಪ್ರಜ್ಞೆಗೆ ಯೋಗ್ಯ ಬೆಲೆ ಬರಬೇಕಾದರೆ ಸ್ವಾತಂತ್ರ್ಯದ ಬಗ್ಗೆ ನಮಗೆ ಜನಪ್ರಿಯ ತಿಳಿವಳಿಕೆಯ ನೆಲಗಟ್ಟು ಬೇಕು', ಎಂದಿದ್ದರು. ಆ ನೆಲಗಟ್ಟನ್ನು ನಾವಿನ್ನೂ ಹೊಂದಿಲ್ಲ!

'ನಾನು ಆಜಾದ್. ನನ್ನನ್ನು ಬ್ರಿಟಿಷರು ಜೀವಸಹಿತ ಹಿಡಿಯಲಾರರು', ಎಂದು ನುಡಿದು, ಅಂತೆಯೇ ಸಾಧಿಸಿ ತೋರಿಸಿದಂಥ ಧೀರ ಹಾಗೂ ಸಮಾಜವಾದದ ಪ್ರತಿಪಾದಕ ಚಂದ್ರಶೇಖರ ಆಜಾದ್, ಕ್ರಾಂತಿವಾದ (ಅರಾಜಕತೆ) ಎಂಬ ಪದಕ್ಕೆ 'ವಸುಧೈವ ಕುಟುಂಬಕಂ' ಎಂಬ ಸೂಕ್ತಿಯ ಸಮಾನಾರ್ಥವನ್ನು ಒಗ್ಗಿಸಿದ ಮತ್ತು ಸಮಾಜವಾದ ಬೆಳಗಲು ಕಾರಣನಾದ ಭಗತ್ ಸಿಂಗ್, ಇಂತಹ 'ಕ್ರಾಂತಿಕಾರಿ'ಗಳು ಅನ್ಯಾಯದ ವಿರುದ್ಧ ಪ್ರತಿಭಟಿಸಿ, ಆತ್ಮಾಭಿಮಾನಕ್ಕಾಗಿ, ದೇಶದ ಅಭಿಮಾನ ರಕ್ಷಣೆಗಾಗಿ ಪ್ರಾಣ ತೆತ್ತರು. ಅದೇ ನಾವಿಂದು ಆತ್ಮಾಭಿಮಾನ, ದೇಶಾಭಿಮಾನ, ನ್ಯಾಯ, ಎಲ್ಲವನ್ನೂ ಐಹಿಕ ಉಪಭೋಗಗಳಿಗೆ ಒತ್ತೆಯಿಟ್ಟುಬಿಟ್ಟಿದ್ದೇವೆ! ಸೋಷಿಯಲಿಸಂ (ಸಮಾಜವಾದ) ಮತ್ತು ಕಮ್ಮೂನಿಸಂಗಳು ದಿಕ್ಕು ತಪ್ಪಿದ 'ಬೆರಕೆ'ಗಳಾಗಿ ಇಂದು ಈ ದೇಶವನ್ನೇ ದಿಕ್ಕು ತಪ್ಪಿಸುತ್ತಿವೆ. ಈ ಎರಡೂ ಇಸಮ್‌ಗಳ ಶುದ್ಧ ತತ್ತ್ವಗಳು ಈ ದೇಶದಲ್ಲಿ ಆಚರಣೆಯಿಂದ ಎಂದೋ ದೂರವಾಗಿಬಿಟ್ಟಿವೆ.

ಶೋಷಣೆರಹಿತ, ಸಮಾನ ಸಮಾಜದ ಹಕ್ಕೊತ್ತಾಯ ಮಂಡಿಸಿದ್ದರು ಅಂಬೇಡ್ಕರ್. ಶೋಷಣೆ, ಅಸಮಾನತೆಗಳಿಂದು ಹಿಂದೆಂದಿಗಿಂತಲೂ ಹೆಚ್ಚು ತಾಂಡವವಾಡುತ್ತಿವೆ. ಇತರರು ಮಾತ್ರವಲ್ಲ, ಶೋಷಿತ ಸಮುದಾಯಗಳ ನೇತಾರರೇ ತಂತಮ್ಮ ಸಮುದಾಯಗಳನ್ನು ಶೋಷಿಸತೊಡಗಿದ್ದಾರೆ! ಗಾಂಧೀಜಿ ಮತ್ತು ಅಂಬೇಡ್ಕರರ ಹೆಸರುಗಳನ್ನು ಅವರ ತಥಾಕಥಿತ ಶಿಷ್ಯ ಧುರೀಣರೇ ಇಂದು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ!

ಒಡೆದವರು ಅವರು

ನಾವಿಂದು ಶೋಷಣೆ, ಜಾತಿಭೇದ ಮತ್ತು ಮತೀಯ ದ್ವೇಷದ ಬಗ್ಗೆ ಮಾತಾಡುತ್ತೇವಷ್ಟೆ. ನಮ್ಮ ಪೂರ್ವಜರು ಮುಸ್ಲಿಂ ಆಳರಸರಿಂದ ಮತ್ತು ಬ್ರಿಟಿಷರಿಂದ ಶತಮಾನಗಳ ಕಾಲ ಶೋಷಣೆಗೆ ಹಾಗೂ ಮತೀಯ ದ್ವೇಷಕ್ಕೆ ತುತ್ತಾದುದನ್ನು ಮತ್ತು ಬ್ರಿಟಿಷರ ಕುಮ್ಮಕ್ಕಿನಿಂದಾಗಿ ಜಾತಿಭೇದವನ್ನು ಪೋಷಿಸಿದುದನ್ನು ನಾವಿಂದು ಮರೆತುಬಿಟ್ಟಿದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಕ್ರಾಂತಿಕಾರಿಗಳ ಪ್ರಭಾವ ಹೆಚ್ಚಾದಾಗ ಅಂಜಿದ ಬ್ರಿಟಿಷರು ಒಡೆದು ಆಳುವ ನೀತಿಯನ್ನು ತೀವ್ರಗೊಳಿಸಿದರು. 'ಕೂಡಲೇ ಏನಾದರೂ ಕ್ರಮ ಕೈಕೊಳ್ಳದಿದ್ದಲ್ಲಿ ನಮ್ಮ ವಿರುದ್ಧ ಮುಸ್ಲಿಮರೂ ಕಾಂಗ್ರೆಸ್ಸಿನ ಪಂಗಡದಲ್ಲಿ ಕೂಡಿಕೊಳ್ಳುತ್ತಾರೆ', ಎಂದು ಕರ್ಜನ್‌ನ ಖಾಸಗಿ ಕಾರ್ಯದರ್ಶಿ ವಾಲ್ಟರ್ ವ್ಯಾಲೆಂಟೈನ್ ಚಿರೋಲ್ ಎಂಬಾತ ಮಂತ್ರಿ ಮೋರ್ಲೆಯನ್ನು ಎಚ್ಚರಿಸಿದಾಗ ಬ್ರಿಟಿಷ್ ಸರ್ಕಾರವು ಪ್ರತ್ಯೇಕ ಮತಗಟ್ಟೆಗಳ ಸ್ಥಾಪನೆ ಮಾಡುವ ಮೂಲಕ ಮುಸ್ಲಿಮರನ್ನು ಹಿಂದುಗಳಿಂದ ಬೇರ್ಪಡಿಸತೊಡಗಿತು!

ಈ ಐತಿಹಾಸಿಕ ಸತ್ಯವನ್ನರಿತು ತಿದ್ದಿಕೊಳ್ಳುವ ಬದಲು ನಾವಿಂದು ನಮ್ಮೊಳಗೇ ಪರಸ್ಪರ ದೋಷಾರೋಪಮಾಡುತ್ತ ಸಮಸ್ಯೆಯನ್ನು ಅದರ ಪಾಡಿಗೆ ಉಲ್ಬಣಿಸಲು ಬಿಟ್ಟುಬಿಟ್ಟಿದ್ದೇವೆ. ನಮ್ಮ ಪುಢಾರಿಗಳು ಈ ಸಮಸ್ಯೆಯ ಬೆಂಕಿಗೆ ತುಪ್ಪವೆರೆಯುತ್ತಿದ್ದಾರೆ. 'ಪ್ರಪಂಚದ ಬೇರೆ ಯಾವ ಧರ್ಮವು ಮಾನವನ ಉನ್ನತಿಯನ್ನು ಹಿಂದೂ ಧರ್ಮವು ಬೋಧಿಸುವಂಥ ಉದಾತ್ತ ಭಾಷೆಯಲ್ಲಿ ಬೋಧಿಸುತ್ತದೆ?' ಎಂದು ಸವಾಲೆಸೆದ, ಅದೇ ವೇಳೆ, 'ನೀನೊಬ್ಬ ಭಾರತೀಯ; ಅದಕ್ಕಾಗಿ ಹೆಮ್ಮೆ ಪಡು', ಎಂದು ನಮ್ಮ ವಿವೇಕವನ್ನು ಜಾಗೃತಗೊಳಿಸಿದ ವಿವೇಕಾನಂದರ ನುಡಿಗಳನ್ನು ಮರೆತಿರುವ ನಾವಿಂದು ಒಂದು ಬಗೆಯ ಕೀಳರಿಮೆ ಹೊತ್ತು ಪಶ್ಚಿಮದೆಡೆಗೆ ಮುಖಮಾಡಿದ್ದೇವೆ!

ಯೇಸುಕ್ರಿಸ್ತನ ಚರಿತ್ರೆಗೆ ಮನಸೋತಿದ್ದ ಕೇಶವಚಂದ್ರಸೇನ್ ಎಂಬಾತ ದಯಾನಂದ ಸರಸ್ವತಿಯವರನ್ನು ಮತ್ತು (1875ರಲ್ಲಿ) ರಾಮಕೃಷ್ಣ ಪರಮಹಂಸರನ್ನು ಕಂಡಮೇಲೆ ಮನಃಪರಿವರ್ತನೆ ಹೊಂದಿ ದೇವೇಂದ್ರನಾಥ ಠಾಕೂರರ ಸಹಾಯಕನಾಗಿ ಬ್ರಾಹ್ಮ ಸಮಾಜದ ಭದ್ರ ನೆಲೆಯೂರುವಿಕೆಗಾಗಿ ದುಡಿಯುತ್ತಾನೆ. ಅವನು ಒಂದು ಕಡೆ ಹೇಳುತ್ತಾನೆ, 'ಭರತವರ್ಷ, ಅಷ್ಟೇ ಅಲ್ಲ, ಏಷ್ಯಾಖಂಡ ನನ್ನ ಜನ್ಮಭೂಮಿ. ಕೋಟ್ಯಂತರ ಮಾನವ ಸಮುದಾಯಕ್ಕೆ ಬಾಳಿನ ದಾರಿಯನ್ನು ತೋರಿಸಿರುವ ಮತ್ತು ಮುಕ್ತಿಯ ಸಾಧನವನ್ನು ನೀಡಿರುವ ಧರ್ಮಗಳೆಲ್ಲ ಮೂಡಿದ್ದು ಈ ಭೂಮಿಯಲ್ಲಿ.' ಕೇಶವಚಂದ್ರಸೇನ್ ಹೀಗೆ ಹೇಳಿ ನೂರು ವರ್ಷವಾಗುವುದರೊಳಗೆ ಇದೇ ಭರತಭೂಮಿಯ ನಾವು ನಮ್ಮನ್ನೂ ನಮ್ಮೀ ಭೂಮಿಯನ್ನೂ ಅಮೆರಿಕ 'ಮುಂದಾಳತ್ವ'ದ ಐರೋಪ್ಯ ರಾಷ್ಟ್ರಸಂಕುಲಕ್ಕೆ ಮಾರಿಕೊಳ್ಳುತ್ತಿದ್ದೇವೆ! ಆರ್ಥಿಕವಾಗಿ, ಬೌದ್ಧಿಕವಾಗಿ, ಸಾಂಸ್ಕೃತಿಕವಾಗಿ, ಎಲ್ಲ ರೀತಿಯಲ್ಲಿಯೂ ಮಾರಿಕೊಳ್ಳುತ್ತಿದ್ದೇವೆ. ಅಡಿಯಾಳಾಗುತ್ತಿದ್ದೇವೆ!

ಮುಂದೆ ಓದಿ : ಸ್ವಾತಂತ್ರ್ಯ ದೊರೆತಿದೆಯೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X