ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸಲಿಗೆ ನಾವು ಸ್ವತಂತ್ರರಾಗಿದ್ದೇವಾ?

By Staff
|
Google Oneindia Kannada News

ಸ್ವಾತಂತ್ರ್ಯ ದೊರೆತಿದೆಯೆ?

ಸರಣಿ ಬಾಂಬ್ ಸ್ಫೋಟದಿಂದ ತತ್ತರಿಸಿರುವ ಬೆಂಗಳೂರಿನಲ್ಲಿ ಆಗಸ್ಟ್ 15ರಂದು ದೇಶದ ತ್ರಿವರ್ಣ ಧ್ವಜ ಹಾರಿತು. ದೆಹಲಿಯ ಕೆಂಪು ಕೋಟೆಯೂ ಸೇರಿದಂತೆ ದೇಶದ ಎಲ್ಲೆಡೆ ರಾಜಕಾರಣಿಗಳು ಆ ದಿನ 'ಮನಮೋಹಕ' ಭಾಷಣ ಕುಟ್ಟುತ್ತಾರೆ. ಅವೇ ಹಳಸಲು ಮಾತುಗಳಿಂದ ಅದೇ ಮೋ.ಕ.ಗಾಂಧಿಯನ್ನು ಹೊಗಳುತ್ತಾರೆ. ಅದೇ ಗಾಂಧಿಯ ನಾಡು ಗುಜರಾತ್ ಮಾತ್ರ ಅಹಮದಾಬಾದ್ ಬಾಂಬ್ ಸ್ಫೋಟ ಹರಿಸಿದ ನೆತ್ತರ ಕೋಡಿಯ ಮೇಲೆ ನಿಂತು ರಕ್ತಕಣ್ಣೀರೊರೆಸಿಕೊಳ್ಳುತ್ತ ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ ಮಾಡುತ್ತದೆ!

ನಮಗೆ ನಿಜಕ್ಕೂ ಸ್ವಾತಂತ್ರ್ಯ ದೊರೆತಿದೆಯೆ? ಭಯೋತ್ಪಾದಕರಿಂದಾಗಿ ನಮಗಿಂದು ರಸ್ತೆಗಳಲ್ಲಿ ಓಡಾಡಲೂ ಭಯವಾಗುತ್ತಿದೆಯಲ್ಲಾ, ಎಂಥ ಸ್ವಾತಂತ್ರ್ಯ ನಮ್ಮದು? ಉಗ್ರರನ್ನು ಮಟ್ಟಹಾಕಲಾರದ ಸರ್ಕಾರಗಳನ್ನು ಅನುಭವಿಸುತ್ತಿದ್ದೇವಲ್ಲಾ, ನಮ್ಮದೆಂಥ ಸರ್ವತಂತ್ರ ಸ್ವತಂತ್ರ ಪ್ರಜಾಪ್ರಭುತ್ವ? ಕೋಮು ದ್ವೇಷ, ವರ್ಗ ಶೋಷಣೆ, ಹಲವೆಡೆ ಶೋಷಣೆಯ ಮಿಥ್ಯಾಪವಾದ, ಇವುಗಳಿಂದ ಬೆಂದುಹೋಗುತ್ತಿದ್ದೇವಲ್ಲಾ, ಎಲ್ಲಿದೆ ನಮಗೆ ಹಾಯಾಗಿ ಜೀವಿಸುವ ಸ್ವಾತಂತ್ರ್ಯ? ಇಂಥ ಬೇಯುವಿಕೆಗಳಿಂದ ನಮ್ಮನ್ನು ಪಾರುಮಾಡಬೇಕಾದ ನಮ್ಮ ಧುರೀಣರೇ ಈ ಬೆಂಕಿಗೆ ತುಪ್ಪ ಸುರಿಯುತ್ತ ನಮ್ಮ ಬಾಳನ್ನು ಅಸಹನೀಯವಾಗಿಸಿದ್ದಾರಲ್ಲಾ, ಇದಾ ನಮಗೆ ಸಿಕ್ಕಿರುವ ಸ್ವಾತಂತ್ರ್ಯ? ಇಷ್ಟಾಗಿಯೂ ನಾವು ಕುರಿಗಳಂತೆ ಈ ಖೂಳರಿಗೆ ತಲೆ ಕೊಟ್ಟುಕೊಂಡಿದ್ದೇವಲ್ಲಾ, ಇದಾ ಸ್ವಾತಂತ್ರ್ಯ?

ಸರ್ಕಾರಿ ಸಿಬ್ಬಂದಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವಾಗ, ಆರಕ್ಷಕರು ರಾಕ್ಷಸರಾಗಿರುವಾಗ, ಐಎಎಸ್‌ಗಳು ಭೂರಿಭೋಜನಪ್ರಿಯರಾಗಿರುವಾಗ ಮತ್ತು ಪುಢಾರಿಗಳು ಇವರೆಲ್ಲರನ್ನು ಮೀರಿಸುವ ಮುತ್ಸದ್ದಿ, ಊಹ್ಞೂ, ಕುತ್ಸದ್ದಿಗಳಾಗಿರುವಾಗ ಶ್ರೀಸಾಮಾನ್ಯ ಪ್ರಜೆಗಳಾದ ನಾವು ಅಸಹಾಯಕರಾಗಿ ಇವರೊಡನೆ ಹೊಂದಿಕೊಂಡು, ಕಷ್ಟನಷ್ಟಗಳನ್ನು ಅನುಭವಿಸಿಕೊಂಡು ದಿನ ದೂಡುತ್ತಿದ್ದೇವಲ್ಲಾ, ನಮಗೆಲ್ಲಿದೆ ನಮ್ಮ ಹಕ್ಕಿನನುಸಾರ ಬಾಳುವ ಸ್ವಾತಂತ್ರ್ಯ?

ಅಕ್ಕಿಯ ಬೆಲೆ ಕೆ.ಜಿ.ಗೆ ಮುವ್ವತ್ತು ರೂಪಾಯಾಗಲಿ, ತರಕಾರಿಗೆ ಬಂಗಾರದ ರೇಟಾಗಲಿ, ಕರೆಂಟು ಯಾವಾಗಲೂ ಕೈಕೊಡುತ್ತಲೇ ಇರಲಿ, ನಲ್ಲಿಗಳಲ್ಲಿ ವಾರಕ್ಕೊಮ್ಮೆಯೂ ನೀರಿನ ದರ್ಶನವಾಗದಿರಲಿ, ರೈತರಿಗೆ ರಸಗೊಬ್ಬರದ ಬದಲು ಗುಂಡೇಟು ಸಿಗಲಿ, ಆಡಳಿತದಲ್ಲಿದ್ದಾಗ ಗೊಬ್ಬರದ ದಾಸ್ತಾನಿನ ಮುಂಜಾಗ್ರತೆ ವಹಿಸದವರು ತಾವು ವಿರೋಧ ಪಕ್ಷವಾದ ತಕ್ಷಣ ಸರ್ಕಾರದ ವಿರುದ್ಧ ಅಬ್ಬರಿಸತೊಡಗಲಿ, ಸರ್ಕಾರಿ ಆಸ್ಪತ್ರೆಗಳು ಹಗಲುದರೋಡೆ ಮಾಡಲಿ, ಆರೋಗ್ಯಧಾಮಗಳಾಗಿರಬೇಕಾದ ಅವು ಮೃತ್ಯುಕೂಪಗಳಾಗಿರಲಿ, ಸರ್ಕಾರಿ ಶಾಲೆಗಳು ಸರ್ಕಾರಿ ಪಾಯಿಖಾನೆಗಳಿಗಿಂತ ಕಡೆಯಾಗಿರಲಿ, ಸುಮ್ಮನೆ ಸಹಿಸಿಕೊಂಡಿರಬೇಕಾದ ವ್ಯವಸ್ಥೆಯಲ್ಲಿ ನಾವಿದ್ದೇವಲ್ಲಾ, ನಾವು ಸ್ವತಂತ್ರ ರಾಷ್ಟ್ರದಲ್ಲಿದ್ದೇವೆಯೆ?

ನಮ್ಮ ಮನೆಯೆದುರು ನಾಯಿಯೋ ಹಂದಿಯೋ ಸತ್ತುಬಿದ್ದಿದ್ದರೆ ಸ್ಥಳೀಯ ಆಡಳಿತಕ್ಕೆ ಹೇಳಿ ತೆಗೆಸಲು ಒಂದು ವಾರ ಪ್ರಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ. ಪ್ರಾಮಾಣಿಕವಾಗಿ ತೆರಿಗೆ ತೆತ್ತು, ಬಡಕೊಂಡರೂ ನಮ್ಮ ಮನೆಯೆದುರಿನ ರಸ್ತೆ ರಿಪೇರಿಯಾಗುವುದಿಲ್ಲ; ಕಸದ ತೊಟ್ಟಿ ಖಾಲಿಯಾಗುವುದಿಲ್ಲ. ಮಾತ್ರವಲ್ಲ, ಇದೆಲ್ಲ ಆದಂತೆ ಸುಳ್ಳು ದಾಖಲೆ ತೋರಿಸಿ ನಮ್ಮ ತೆರಿಗೆ ಹಣ ನುಂಗಿದವರು ನಮಗೇನೋ ಪುಕ್ಕಟೆ ಉಪಕಾರ ಮಾಡುವವರಂತಾಡುತ್ತಾರೆ! ಹೆಚ್ಚು ಮಾತಾಡಿದರೆ ನಮಗೇ ಬಯ್ಯುತ್ತಾರೆ! ಇವೆಲ್ಲವನ್ನೂ ಸಹಿಸಿಕೊಂಡು ತಿಕ ಮುಚ್ಚಿಕೊಂಡಿರಬೇಕಾದ ವ್ಯವಸ್ಥೆಯಲ್ಲಿ ನಾವಿದ್ದೇವಲ್ಲಾ, ನಮಗೆಲ್ಲಿದೆ ಸ್ವಾತಂತ್ರ್ಯ? ತೃಪ್ತಿಯಿಂದ ಬಾಳುವ ಹಕ್ಕನ್ನೇ ಕಸಿದುಕೊಂಡಿರುವ ಈ ವ್ಯವಸ್ಥೆ ನಮಗೆ ಅದಿನ್ನಾವ ಸ್ವಾತಂತ್ರ್ಯ ನೀಡಿದೆ ಸ್ವಾಮೀ?

ಜನರನ್ನು ದೋಚಿ, ವಾಮಮಾರ್ಗದಿಂದ ಧನಾರ್ಜನೆ ಮಾಡಿ, ದೇಶವನ್ನೇ ಲೂಟಿಮಾಡಿ ಕಾರು-ಬಂಗಲೆ-ಹೆಲಿಕಾಪ್ಟರ್‌ಗಳಲ್ಲಿ ಮೆರೆಯುವ ಧನಪಿಶಾಚಿಗಳನ್ನು ದೊಡ್ಡಮನುಷ್ಯರೆಂದು ಕರೆದು ಅವರ ಮನೆಯ ನಾಯಿಯೆದುರೂ ಹಲ್ಲು ಕಿರಿಯುವ ವ್ಯವಸ್ಥೆಗೆ ನಾವು ಒಳಗಾಗಿದ್ದೇವಲ್ಲವೆ? ಅಮೆರಿಕದ ಕೂಲಿ ಕೆಲಸ ಮಾಡಿಕೊಂಡು ಅದನ್ನೇ ತಂತ್ರಜ್ಞಾನದಲ್ಲಿ ತಮ್ಮ ಅಗ್ಗಳಿಕೆಯೆಂದು ಹೇಳಿಕೊಳ್ಳುವ ಯುವ ಪಡೆಯನ್ನು ತಯಾರುಮಾಡುವಂಥ ವ್ಯವಸ್ಥೆಯಲ್ಲಿ ನಾವಿದ್ದೇವಲ್ಲವೆ? ನಾಗರಿಕ ಪರಮಾಣು ಒಪ್ಪಂದವೆಂದು ಇದೀಗ ಇಡೀ ದೇಶವನ್ನೇ ಒಂದಿಬ್ಬರು ದಾರಿತಪ್ಪಿದವರು ಅಮೆರಿಕದ ಮರ್ಜಿಗೆ ಅಡಿಯಾಳಾಗಿಸಹೊರಟಿರುವಾಗ, ಅಮೆರಿಕದ ತಂತ್ರಕ್ಕೆ ಬಲಿಯಾಗಿಸಹೊರಟಿರುವಾಗ, ಅರಿತೋ ಅರಿಯದೆಯೋ ಬಾಯಿ ಮುಚ್ಚಿಕೊಂಡಿರಬೇಕಾದ ಅವಸ್ಥೆಯಲ್ಲಿ ನಾವಿದ್ದೇವೆ ತಾನೆ? ಹಾಗಾದರೆ ಅದಿನ್ನಾವ ಸ್ವಾತಂತ್ರ್ಯವನ್ನು ನಾವು ಹೊಂದಿದ್ದೇವೆ?

ಇವೆಲ್ಲ ಹೋಗಲಿ, ನಮ್ಮ ಧರ್ಮಾಚರಣೆಗಾದರೂ ನಮಗಿಲ್ಲಿ ಸ್ವಾತಂತ್ರ್ಯವಿದೆಯೆ? 'ಮೂಲಭೂತವಾದ' ಮತ್ತು 'ಕೋಮುವಾದ'ಗಳಿಗೆ ಕಾರಣವೇನೇ ಇರಲಿ, ಹಿನ್ನೆಲೆ ಏನೇ ಇರಲಿ, ಈ ಎರಡು ತಥಾಕಥಿತ ವಾದಗಳಿಂದಾಗಿ ನಮಗಿಂದು ಈ ದೇಶದಲ್ಲಿ ಸ್ವಧರ್ಮಾಚರಣೆಗೂ ಅನೇಕ ಅಡ್ಡಿ-ಆತಂಕಗಳು ಎದುರಾಗುತ್ತಿಲ್ಲವೆ? ನಮ್ಮ ಪಾಡಿಗೆ ನಾವು ಧರ್ಮಾಚರಣೆ ಮಾಡಿಕೊಂಡಿದ್ದುದೂ ಎಷ್ಟೋ ಸಲ ಕೋಮುವಾದವೆಂಬ ಆರೋಪಕ್ಕೆ ಗುರಿಯಾಗಲಿಲ್ಲವೆ? ಧರ್ಮಾಚರಣೆಯ ಸ್ವಾತಂತ್ರ್ಯವೂ ಇಲ್ಲದ ನಮ್ಮದು ಅದೆಂಥ ಸ್ವಾತಂತ್ರ್ಯ?

'ಸತ್ಯಂ ವದ; ಧರ್ಮಂ ಚರ' ಎಂಬ ಸೂಕ್ತಿಯಿದೆ. ಆದರೆ ನಮಗಿಂದು ಸತ್ಯ ಹೇಳಲು ಭಯ! ಧರ್ಮಾಚರಣೆ ಮಾಡಲು ಹಿಂದೆಮುಂದೆ ನೋಡಬೇಕಾದ ಪರಿಸ್ಥಿತಿ! ನಮಗಿಂದಿಲ್ಲಿ ಯಾವ ಸ್ವಾತಂತ್ರ್ಯವೂ ಇಲ್ಲ. ಸ್ವಾತಂತ್ರ್ಯವನ್ನು ಮೀರಿದ ಸ್ವೇಚ್ಛೆ ಹೊಂದಿರುವ ಮುಷ್ಟಿಭರ್ತಿ ರಾಜಕಾರಣಿಗಳು, ಉನ್ನತಾಧಿಕಾರಿಗಳು ಮತ್ತು ಬಂಡವಾಳಶಾಹಿಗಳ ಮುಷ್ಟಿಯೊಳಗೆ ಸಿಕ್ಕಿ ಈ ದೇಶದ ಕೋಟ್ಯಂತರ ಶ್ರೀಸಾಮಾನ್ಯರಾದ ನಾವಿಂದು ನರಳುತ್ತಿದ್ದೇವೆ! ಜೊತೆಜೊತೆಗೇ, 'ಅಮೆರಿಕ ಅಂಡ್ ಕಂಪೆನಿ'ಯ ಅಡಿಯಾಳಾಗುವ ಹಾದಿಯಲ್ಲಿ ತೆರಳುತ್ತಿದ್ದೇವೆ! ಹೀಗಿದ್ದೂ, 'ನಾವು ಸರ್ವತಂತ್ರ ಸ್ವತಂತ್ರರು' ಎಂಬ ಭ್ರಮೆಯಲ್ಲಿ ಆಗಸ್ಟ್ ಹದಿನೈದರಂದು ಧ್ವಜಾರೋಹಣ ಮಾಡಿ ಪುಳಕಿತರಾಗುತ್ತಿದ್ದೇವೆ!

ರಾಜಾಜಿ ಹೇಳಿರುವ ಕೆಳಕಂಡ ಮಾತುಗಳು ಈ ನಿಟ್ಟಿನಲ್ಲಿ ನಮಗೆ ದಾರಿದೀಪವಾಗಲಿ.

'ನಾಗರಿಕತೆ ಎಂದರೇನೆಂದು ನಾವು ಸರಿಯಾಗಿ ಗ್ರಹಿಸಬೇಕು. ಐಹಿಕ ಸಂಪತ್ತಿನ ಹೆಚ್ಚಳವೇ ನಾಗರಿಕತೆ ಎಂದೆವಾದರೆ ನಾವು ಕ್ರೂರ ಪ್ರಭುಗಳಿಗೆ, ಸರಕಾರಗಳಿಗೆ, ಪಕ್ಷಗಳಿಗೆ, ಸಮಾಜಗಳಿಗೆ ದಾಸರಾಗುವುದು ನಿಶ್ಚಿತ. ಪೂರ್ವದ ಸಂತರು, ತತ್ತ್ವಜ್ಞಾನಿಗಳು ಸೂಚಿಸಿದ ಧ್ಯೇಯವನ್ನು ಹಿಡಿದೆವಾದರೆ ಜನತೆ ಸುಖವನ್ನು ಕಾಣುತ್ತದೆ. ಧ್ಯೇಯದತ್ತ ಮುಂದುವರಿದಷ್ಟೂ ವ್ಯಕ್ತಿಯ ಸ್ವಾತಂತ್ರ್ಯ ಬೆಳೆಯುತ್ತದೆ. ಸ್ವಾತಂತ್ರ್ಯಕ್ಕೆ ಒಂದೇ ಮಾರ್ಗ ಸರಳ ಜೀವನ. ನಿಜವಾದ ನಾಗರಿಕತೆಯ ಈ ಸಂದೇಶವನ್ನು ಪೂರೈಸುವ ಪವಿತ್ರ ಕಾರ್ಯವು ಋಷಿವಾಕ್ಯ ಪರಿಪಾಲಕ ರಾಷ್ಟ್ರವಾದ ಭರತವರ್ಷದಲ್ಲಿ ಅಲ್ಲದೆ ಬೇರೆಲ್ಲಿ ಆರಂಭವಾಗಲು ಸಾಧ್ಯ?'

ಲೇಖನದ ಮೊದಲ ಭಾಗ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X