ಕಳ್ಳರೆಂದು ಸಿಎಂರನ್ನು ಓಡಿಸಿದ್ರಂತೆ! 150 ಎಕರೆ ಜಮೀನು ಹುಡುಕಾಟದ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಬೆಂಗಳೂರು: ಮುಖ್ಯಮಂತ್ರಿಗಳಿಗೆ ಭ್ರಷ್ಟಾಚಾರದ ಬಗ್ಗೆ ನೋಡೋಕೂ ಟೈಂ ಇಲ್ಲ. ಆದರೆ, ಖಾಲಿ ಜಾಗ ಎಲ್ಲಿದೆ, ಸರ್ಕಾರಿ ಜಾಗ ಎಲ್ಲಿದೆ ಅಂತಾ ನೋಡೋಕಷ್ಟೇ ಟೈಂ ಇದೆ. ಇತ್ತೀಚೆಗೆ ಬೆಂಗಳೂರಿನ ಸುತ್ತಮುತ್ತಲಿನಲ್ಲೇ ಜಾಗ ನೋಡೋಕೆ ಹೋದಾಗ ಕಳ್ಳರು ಬಂದಿದ್ದಾರೆ ಅಂತಾ ಹಳ್ಳಿ ಜನರು ಓಡಿಸಿಕೊಂಡು ಬಂದಿದ್ದರು ಎಂಬ ಸ್ಪೋಟಕ ಅಂಶವನ್ನು ಎಂದು ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಬಹಿರಂಗಪಡಿಸಿದರು.
ಬೆಂಗಳೂರಿನ ಜಯನಗರದ ಕ್ಲೌಡ್‌ನೈನ್ ಆಸ್ಪತ್ರೆ ಬಳಿ ಸುದ್ದಿಗಾರರ ಜೊತೆಗೆ ಹೆಚ್ ಡಿ ಕುಮಾರಸ್ವಾಮಿ ಅವರು ಮಾತನಾಡಿ, ಮುಖ್ಯಮಂತ್ರಿಗಳು ಭ್ರಷ್ಟಾಚಾರ ನಡೆಯುತ್ತಿಲ್ಲ ಎನ್ನುತ್ತಿದ್ದಾರೆ. ಆದರೆ ಇಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿದೆ ಎಂದು ಡಿ ಕೆ ಶಿವಕುಮಾರ್ ಅವರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.

₹50,000 ಲಂಚ ತಗೊಂಡು ಸಸ್ಪೆಂಡ್
ಇತ್ತೀಚೆಗೆ 20 ಗುಂಟೆ ಜಮೀನಿಗೆ ರೆವಿನ್ಯೂ ಇನ್ಸ್‌ಪೆಕ್ಟರ್ ₹50,000 ಲಂಚ ತಗೊಂಡು ಸಸ್ಪೆಂಡ್ ಆಗಿದ್ದಾರೆ. ಅದು ಭ್ರಷ್ಟಾಚಾರ ಅಲ್ವಾ? ಅವರ ಮಿನಿಸ್ಟರ್ ಹೇಳಿದಂಗೆ ಅದು ಗೌರವಧನನಾ? ಗೌರವದಿಂದ ಕೊಡಬೇಕು ಅಂದರಲ್ಲ ಅದಾ ಭ್ರಷ್ಟಾಚಾರವಾ.. ಅಲ್ಲವಾ? ಎಷ್ಟೋ ಕಡೆ ಕೆಲಸ ಮಾಡಲು ದುಡ್ಡು ತಗೊಂಡು ಸಿಕ್ಕಿಬೀಳುತ್ತಿದ್ದಾರೆ. ನನ್ನ ಬಳಿ ಟನ್‌ಗಟ್ಟಲೇ ದಾಖಲೆಗಳಿವೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಸುಳ್ಳೋ ನಿಜವೋ ಸಿಎಂ ಕೇಳಿ
ಮುಖ್ಯಮಂತ್ರಿಗಳು ಸೋಂಪುರ ಹತ್ತಿರ ಅಥವಾ ಅದರ ಸುತ್ತಮುತ್ತಲಿನ ಯಾವುದೋ ಜಾಗದಲ್ಲಿ 150 ಎಕರೆ ಜಮೀನು ನೋಡುವುದಕ್ಕೆ ರಾತ್ರಿ ಹೊತ್ತಿನಲ್ಲಿ ಖಾಸಗಿ ಕಾರಿನಲ್ಲಿ ಹೋಗಿದ್ದರು. ಆಗ ಇಷ್ಟೋತ್ತಲ್ಲಿ ಯಾರೋ ಕಳ್ಳರು ಬಂದಿದ್ದಾರೆ ಎಂದು ಹಳ್ಳಿ ಜನರು ಓಡಿಸಿಕೊಂಡು ಬಂದಿದ್ದಾರೆ. ಇದು ಸುಳ್ಳೋ ನಿಜವೋ ಎಂಬುದನ್ನು ಮುಖ್ಯಮಂತ್ರಿಗಳನ್ನೇ ಕೇಳಿ ಎಂದು ಹೆಚ್ ಡಿ ಕುಮಾರಸ್ವಾಮಿ ಅವರು ಪ್ರಶ್ನಿಸಿದರಯ.
ಕ್ಷೇತ್ರ ಮರು ವಿಂಗಡಣೆ ಜೆಡಿಎಸ್ ಬೆಂಬಲ
ಮಹಿಳಾ ಮೀಸಲು ವಸೂದೆ ಹಾಗೂ ಕ್ಷೇತ್ರ ಮರು ವಿಂಗಡಣೆ ಮಸೂದೆಗಳಿಗೆ ಜಾತ್ಯತೀತ ಜನತಾದಳ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು. ಕಳೆದ ಮೂರು ದಶಕಗಳಿಂದ ಮಹಿಳೆಯರಿಗೆ ಶಾಸನಸಭೆಗಳಲ್ಲಿ ಶೇಕಡ 33ರಷ್ಟು ಮೀಸಲಾತಿ ನೀಡಬೇಕು ಎನ್ನುವ ಕನಸು ನೆನೆಗುದಿಗೆ ಬಿದ್ದಿತ್ತು. ಮುಂಬರುವ ಸಂಸತ್ ಅಧಿವೇಶನದಲ್ಲಿ ಈ ಮಸೂದೆ ಧ್ವನಿಮತದಿಂದ ಅಂಗೀಕಾರವಾಗಿ ಅನುಷ್ಠಾನಕ್ಕೆ ಬರಲಿದೆ ಎಂದು ಹೇಳಿದರು.
ಹೆಚ್.ಡಿ.ದೇವೇಗೌಡರು ಪ್ರಧಾನಮಂತ್ರಿಗಳಾಗಿದ್ದಾಗ ಮಹಿಳಾ ಮೀಸಲು ಮಸೂದೆಯನ್ನು ಸಂಸತ್ತಿನಲ್ಲಿ ಮಡಿಸಲಾಗಿತ್ತು. ಆದರೆ ಅಂದು ಸಂಯುಕ್ತರಂಗದ ಮಿತ್ರಪಕ್ಷಗಳೇ ಒಪ್ಪಿಗೆ ನೀಡದಿದ್ದ ಪರಿಣಾಮವಾಗಿ ಆ ಮಸೂದೆಯು ರಾಜ್ಯಸಭೆಯಲ್ಲಿ ಅಂಗೀಕಾರವಾಗಿ ಲೋಕಸಭೆಯಲ್ಲಿ ಬಿದ್ದುಹೋಗಿತ್ತು. 30 ವರ್ಷಗಳ ನಂತರ ನರೇಂದ್ರ ಮೋದಿ ಅವರು ಪ್ರಧಾನಿಗಳಾಗಿ ಬಂದ ಮೇಲೆ ಐತಿಹಾಸಿಕ ಮಹಿಳಾ ಮೀಸಲು ಮಸೂದೆಯು ಸಂಸತ್ತಿನಲ್ಲಿ ಮಂಡನೆ ಆಗುತ್ತಿದ್ದು, ಅದಕ್ಕೆ ತಮ್ಮ ನೇತೃತ್ವದ ಜೆಡಿಎಸ್ ಪಕ್ಷ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಕುಮಾರಸ್ವಾಮಿ ಅವರು ಘೋಷಿಸಿದರು.
ಹಾಗೆಯೇ ಕ್ಷೇತ್ರ ಮರು ವಿಂಗಡಣೆ ಮಸೂದೆಗೆ ತಮ್ಮ ಪಕ್ಷ ಬೆಂಬಲ ನಡೆಯುತ್ತಿದ್ದು, ಹಾಲಿ ರಾಜ್ಯದಲ್ಲಿರುವ 28 ಲೋಕಸಭಾ ಕ್ಷೇತ್ರಗಳು ಮಸೂದೆ ಅಂಗೀಕಾರವಾಗಿ ಅನುಷ್ಠಾನಕ್ಕೆ ಬಂದ ನಂತರ 56 ಲೋಕಸಭೆ ಕ್ಷೇತ್ರಗಳು ಆಗಲಿವೆ. ಒಟ್ಟಾರೆಯಾಗಿ ಶೇಕಡ 50ರಷ್ಟು ಲೋಕಸಭಾ ಕ್ಷೇತ್ರಗಳು ಕರ್ನಾಟಕದಲ್ಲಿ ಹೆಚ್ಚಾಗಲಿವೆ. ಇದರಿಂದ ಲೋಕಸಭೆಯಲ್ಲಿ ಕನ್ನಡಿಗರ ಧ್ವನಿಯು ಕ್ಷೀಣವಾಗುವುದಿಲ್ಲ ಹಾಗೂ ಕನ್ನಡಿಗರ ಉಪಸ್ಥಿತಿ ಗಣನೀಯವಾಗಿ ಹೆಚ್ಚಾಗುತ್ತದೆ ಎಂದು ಹೇಳಿದರು.
ಏನ್ಡಿಎ ಮೈತ್ರಿಕೂಟದ ಭಾಗವಾಗಿ ನಾವು ಕರ್ನಾಟಕದ ಮತ್ತು ಕನ್ನಡಿಗರ ಹಿತಾಸಕ್ತಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ನಿರ್ಧಾರವನ್ನು ಕೈಗೊಂಡಿದ್ದೇವೆ. ಕ್ಷೇತ್ರ ಮರುವಿಂಗಡಣೆ ಮಸೂದೆಯಿಂದ ರಾಜ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ನೆರವಾಗಲಿದೆ. ಲೋಕಸಭೆಯಲ್ಲಿ ಕನ್ನಡಿಗರ ಪ್ರಾತಿನಿಧ್ಯ ಗಣನೀಯವಾಗಿ ಹೆಚ್ಚಾಗಲಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಈ ಮಸೂದೆ ಅನುಷ್ಠಾನಕ್ಕೆ ಬಂದ ನಂತರ ದಕ್ಷಿಣ ಭಾರತದ ರಾಜ್ಯಗಳಿಗೆ ಲೋಕಸಭೆಯಲ್ಲಿ ಪ್ರಾತಿನಿಧ್ಯ ಕಡಿಮೆ ಆಗುತ್ತದೆ ಎಂಬುದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳ ಈ ಎಲ್ಲಾ ರಾಜ್ಯಗಳ ಪ್ರಸ್ತುತ ಇರುವ ಲೋಕಸಭಾ ಕ್ಷೇತ್ರಗಳು ದುಪ್ಪಟ್ಟು ಆಗಲಿವೆ, ಅಂದರೆ ಶೇಕಡ 50ರಷ್ಟು ಹೆಚ್ಚಾಗಲಿದೆ ಎಂದು ಸಚಿವರು ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದರು.
ಕ್ಷೇತ್ರ ಮರು ವಿಂಗಡಣೆ ಮಸೂದೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಅನಗತ್ಯವಾಗಿ ಭಾರತವನ್ನು ಗೊಂದಲಕ್ಕೆ ದೂಡುತ್ತಿದೆ. ಅಲ್ಲದೆ ಮಹಿಳಾ ಮೀಸಲು ಮಸೂದೆಯ ಬಗ್ಗೆಯೂ ಸ್ಪಷ್ಟವಾದ ನಿಲುವನ್ನು ಹೊಂದಿಲ್ಲ. ರಾಷ್ಟ್ರದ ಸಮಸ್ತ ಮಹಿಳೆಯರ ಹಿತಾಸಕ್ತಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್.ಡಿ.ಎ ಮೈತ್ರಿಕೂಟ ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುತ್ತಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಮುಕ್ತ ಮನಸ್ಸಿನಿಂದ ಈ ಮಸೂದೆಗಳನ್ನು ಬೆಂಬಲಿಸಬೇಕು. ಇಲ್ಲವಾದರೆ ರಾಷ್ಟ್ರದ ಜನರು ಅವರನ್ನು ಕ್ಷಮಿಸುವುದಿಲ್ಲ ಎಂದು ಸಚಿವ ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.




Click it and Unblock the Notifications
