ಗೃಹ ಸಚಿವ ಡಾ ವಿಎಸ್ ಆಚಾರ್ಯ ಬ್ಲಾಗ್‌ಲೋಕ
ರಾಜಕಾರಣಿಗಳೆಲ್ಲ ಬ್ಲಾಗ್‌ಗಳಲ್ಲಿ ತಮ್ಮ ಬಗ್ಗೆಯೇ ಬೊಂಬಡಾ ಬಜಾಯಿಸಿಕೊಳ್ಳುವುದು ನಿಜವಾದರೂ ಅವರನ್ನು ಯಾವುದೇ ವಿಷಯವಾಗಿ ಪತ್ರ ಬರೆದು ಕೇಳುವ ಅಧಿಕಾರ ಇಲ್ಲಿ ಎಲ್ಲರಿಗೂ ಮುಕ್ತವಾಗಿದೆ. ಆದರೆ, ಜನಸಾಮಾನ್ಯರು ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕಷ್ಟೇ.
ಲೇಖನ : ಪ್ರಸಾದ ನಾಯಿಕ
ಕರ್ನಾಟಕದ ಯಾವ ಸಚಿವ, ಸಂಸದ, ಪುಢಾರಿ, ರಾಜಕಾರಣಿ ನೇರವಾಗಿ ಜನರ ಸಂಪರ್ಕದಲ್ಲಿದ್ದಾನೆ? ತಮ್ಮಿಂದಲೇ ಆಯ್ಕೆಯಾಗಿ ಹೋದರೂ ತಮ್ಮ ಕಷ್ಟ ಸುಖಗಳನ್ನು ಅಲವತ್ತುಕೊಳ್ಳಲು ಜನಪ್ರತಿನಿಧಿಗಳು ಸಿಗುವುದು ಮುಂದಿನ ಚುನಾವಣೆ ಬಂದಾಗಲೇ. ಆದರೆ, ಈಗ ಮತದಾರ ಸಾಕಷ್ಟು ಸುಧಾರಿಸಿದ್ದಾನೆ. ತನಗೆ ಬೇಡವಾದ, ನಯಾಪೈಸೆ ಪ್ರಯೋಜನವಿಲ್ಲದ, ತನ್ನ ಸ್ವಂತ ಕ್ಷೇತ್ರವನ್ನೇ ಉದ್ಧಾರ ಮಾಡದ, ಜನರ ಆಶೋತ್ತರಗಳಿಗೆ ಸ್ಪಂದಿಸದ, ಚುನಾವಣೆ ಬಂದಾಗ ಮಾತ್ರ ಕೈಮುಗಿದು ಬರುವ ರಾಜಕಾರಣಿಗಳನ್ನು ಈ ಬಾರಿಯ ಚುನಾವಣೆಯಲ್ಲಿ ಮತದಾರ ಸಾರಾಸಗಟಾಗಿ ತಿರಸ್ಕರಿಸಿದ್ದಾನೆ.
ಕೆಟ್ಟು ಕೆರಹಿಡಿದುಹೋದ ರಸ್ತೆಯನ್ನು ದುರುಸ್ತಿಪಡಿಸಿಕೊಳ್ಳಲು, ಹನಿ ನೀರಿಗೂ ತತ್ವಾರ ಬಂದಂಥ ಪ್ರದೇಶಗಳಲ್ಲಿ ನೀರು ದಕ್ಕಿಸಿಕೊಳ್ಳಲು, ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಬೇಕೆಂದು ಆಯ್ಕೆಯಾದ ಜನಪ್ರತಿನಿಧಿಯನ್ನು ನೇರವಾಗಿ ಕೇಳಿಕೊಳ್ಳಲು ಜನಸಾಮಾನ್ಯರಿಗೆ ಅವಕಾಶವಾದರೂ ಎಲ್ಲಿದೆ? ಅನೇಕರು ವಿಧಾನಸೌಧದಲ್ಲಿ ಗೂಟ ಹೊಡೆದುಕೊಂಡು ಕೂತರೆ ಕ್ಷೇತ್ರಕ್ಕೆ ಬರುವುದು ಯಾವಾಗೋ? ಹೋಗಲಿ ವಿಧಾನಸೌಧಕ್ಕೇ ಹೋಗಿ ಕೇಳೋಣವೆಂದರೆ ಪ್ರವೇಶಕ್ಕೆ ಅವಕಾಶವಾದರೂ ಎಲ್ಲಿದೆ?
ಆದರೆ, ಆಕಾಶ ಕಳಚಿ ಬೀಳುವಂಥ ಸನ್ನಿವೇಶವೇನೂ ನಿರ್ಮಾಣವಾಗಿಲ್ಲ. ಜನಪ್ರತಿನಿಧಿ ಎಲ್ಲೇ ಇರಲಿ ಆತನನ್ನು ಈಮೇಲ್ ಮುಖಾಂತರ, ಆನ್‌ಲೈನ್‌ನಲ್ಲಿ ತಮ್ಮ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕೇಳಿ ಪತ್ರ ಬರೆಯುವ ಮುಖಾಂತರ ರಾಜಕಾರಣಿಯ ಜೊತೆ ಸಂಪರ್ಕದಲ್ಲಿಟ್ಟುಕೊಳ್ಳಲು ಇಂಟರ್ನೆಟ್ ಅವಕಾಶದ ಬಾಗಿಲು ತೆರೆದಿಟ್ಟಿದೆ. ಹಾಗೆಂದು ಪ್ರತಿಯೊಬ್ಬರೂ ಈಮೇಲ್ ಮುಖಾಂತರ ಸಂಪರ್ಕದಲ್ಲಿದ್ದಾರೆಂದು ತಿಳಿಯುವ ಅಗತ್ಯವಿಲ್ಲ. ಮುಖ್ಯಮಂತ್ರಿಗೆ ಪತ್ರ ಬರೆದರೂ ಉತ್ತರ ಬರುವ ಗ್ಯಾರಂಟಿಯಿಲ್ಲ. ಆದರೆ, ನೆಟ್ ಸ್ಯಾವಿಯಾಗಿರುವ ಕೆಲವರಾದರೂ ತಮ್ಮನ್ನು ತಾವು ಅಂತರ್ಜಾಲ ತಾಣದ ಮುಖಾಂತರ ಜನಸಾಮಾನ್ಯರಿಗೆ ತೆರೆದುಕೊಂಡಿದ್ದಾರೆ.
ಪದ್ಮಪ್ರಿಯಾ ಸಾವಿನ ಮುಖಾಂತರ ರಾಷ್ಟ್ರೀಯ ಸುದ್ದಿಗೆ ಗ್ರಾಸವಾಗಿರುವ ಉಡುಪಿ ಕೆ. ರಘುಪತಿ ಭಟ್ ತಮ್ಮ ಬ್ಲಾಗ್ ಹೊಂದಿದ್ದಾರೆ. ಹಾಗೆಯೇ ಇದೇ ಪ್ರಕರಣವನ್ನು ಸರಿಯಾಗಿ ನಿಭಾಯಿಸಲಿಲ್ಲ ಎಂಬ ಆರೋಪ ಹೊತ್ತಿರುವ ಉಡುಪಿಯವರೇ ಆದ ಗೃಹ ಸಚಿವ ಡಾ. ವಿ.ಎಸ್. ಆಚಾರ್ಯ ಕೂಡ ತಮ್ಮದೇ ಆದ ಬ್ಲಾಗ್ ಸೃಷ್ಟಿಸಿಕೊಂಡಿದ್ದಾರೆ. ಈ ಪ್ರಕರಣದಿಂದಾಗಿಯೇ ಇವರಿಬ್ಬರ ಬ್ಲಾಗ್‌ಗಳು ಬೆಳಕಿಗೆ ಬಂದಿರುವುದು ಕಾಲದ ಕುಚೋದ್ಯ. ರಾಜಕಾರಣಿಗಳೆಲ್ಲ ಇಂಥ ಬ್ಲಾಗ್‌ಗಳಲ್ಲಿ ತಮ್ಮ ಬಗ್ಗೆಯೇ ಬೊಂಬಡಾ ಬಜಾಯಿಸಿಕೊಳ್ಳುವುದು ನಿಜವಾದರೂ ಅವರನ್ನು ಯಾವುದೇ ವಿಷಯವಾಗಿ ಪತ್ರ ಬರೆದು ಕೇಳುವ ಅಧಿಕಾರ ಇಲ್ಲಿ ಎಲ್ಲರಿಗೂ ಮುಕ್ತವಾಗಿದೆ. ಆದರೆ, ಜನಸಾಮಾನ್ಯರು ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕಷ್ಟೇ.
ವಿ.ಎಸ್.ಆಚಾರ್ಯ ಕೂಡ ತಮ್ಮ ಬ್ಲಾಗ್‌ನಲ್ಲಿ ಪದ್ಮಪ್ರಿಯಾ ಹಗರಣಕ್ಕೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳ ನಕಲುಗಳನ್ನು ಲಗತ್ತಿಸಿದ್ದಾರೆ. ರಾಜಕಾರಣಕ್ಕೆ ಕಾಲಿಟ್ಟಾಗಿನಿಂದ ಇಲ್ಲಿಯವರೆಗೆ ತುಳಿದ ಹಾದಿಯ ಚಿತ್ರಗಳನ್ನು ಆಚಾರ್ಯ ತೆರೆದಿಟ್ಟಿದ್ದಾರೆ. ಈ ಬ್ಲಾಗ್‌ಗಳು ಆಯಾ ರಾಜಕಾರಣಿಗಳ ಮುಖವಾಣಿಯೆಂದುಕೊಂಡರೂ ತಮ್ಮನ್ನು ತಾವು ಜನಸಾಮಾನ್ಯರಿಗೆ ಈ ರೀತಿಯಲ್ಲಾದರೂ ತೆರೆದುಕೊಂಡಿರುವುದು ಶ್ಲಾಘನೀಯ, ಆಚಾರ್ಯ ಅವರಿಗೆ ದಟ್ಸ್‌ಕನ್ನಡದ ಅಭಿನಂದನೆಗಳು. ಆದರೆ ಇಲ್ಲಿಯವರೆಗೆ ಜನರಿಂದ ಒಂದೂ ಪ್ರತಿಕ್ರಿಯೆ ಈ ಪ್ರಕಟಣೆಗಳಿಗೆ ವ್ಯಕ್ತವಾಗಿಲ್ಲ. ಈ ಲೇಖನದ ಮುಖಾಂತರವಾದರೂ ಜನರು ತಮ್ಮ ಕ್ಷೇತ್ರದ ಶಾಸಕನೊಬ್ಬ ಬ್ಲಾಗ್ ತೆರೆದಿರುವುದನ್ನು ತಿಳಿಯಪಡಿಸುವುದು ನಮ್ಮ ಆಶಯ.
ಮತ್ಯಾವ ರಾಜಕಾರಣಿ ತನ್ನ ಬಯೋಡೇಟಾವನ್ನು ಬ್ಲಾಗ್‌ನಲ್ಲಿ ತೆರೆದಿಟ್ಟುಕೊಂಡಿದ್ದಾನೆ? ನಮಗೆ ತಿಳಿಸಿ.


Click it and Unblock the Notifications
