ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮೊಳಗೊಬ್ಬ ಚೋಮ್‌ಸ್ಕಿ ಇದ್ದಿದ್ದರೆ...

By Super Admin
|
Google Oneindia Kannada News

ಸಂಬಳದ ಮುಲಾಜಿಗೆ ಪ್ರಭುತ್ವದ ಅಧೀನದಲ್ಲಿದ್ದುಕೊಂಡು, ಜನತಂತ್ರ ವಿರೋಧಿ ಕಾರ್ಯಗಳನ್ನು ವಿರೋಧಿಸುವ ದಿಟ್ಟತನ ಯಾವತ್ತು ನಮಗೆ ದಕ್ಕಲಾರದು. ಇಂತಹ ದಿಟ್ಟತನವನ್ನು ಚೋಮ್‌ಸ್ಕಿಯಿಂದ ಪಡೆದುಕೊಳ್ಳಬಹುದು. ಆದ್ದರಿಂದಲೇ ನಮ್ಮ ಕೆಲವು ಬುದ್ಧಿಜೀವಿಗಳು ಜನಪರ ಕಾಳಜಿಯನ್ನು ಹೊಂದಿದ್ದಕ್ಕೆ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದರು. ಉದಾ: ನಕ್ಸಲ್ ಬೆಂಬಲಿಗರ ಪಟ್ಟಿಯನ್ನು ಸ್ಮರಿಸಿಕೊಳ್ಳಬಹುದು.

; ;

Chomskyಇವತ್ತಿನ ರಾಜಕೀಯ-ಸಾಂಸ್ಕೃತಿಕ ವಿದ್ಯಮಾನಗಳನ್ನು ಗಮನಿಸಿದಾಗ ಪ್ರತಿಯೊಬ್ಬ ಸೂಕ್ಷ್ಮಮನಸ್ಥಿತಿಯ ವ್ಯಕ್ತಿಗೆ ಆಘಾತವಾಗದೆ ಇರಲಾರದು. ಸಾಂಸ್ಕೃತಿಕ-ರಾಜಕೀಯ ನಿಲುವುಗಳು, ನಡುವಳಿಕೆಗಳು, ತೀರ್ಮಾನಗಳು ಮತ್ತು ನಿರ್ಧಾರಗಳು ಎಲ್ಲವೂ ವೈಯಕ್ತಿಕ ರಾಜಕೀಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವಲ್ಲಿ ಪ್ರಯೋಜನಪಡೆದುಕೊಳ್ಳುವವು. ಕೇವಲ ಅಧಿಕಾರಕ್ಕಾಗಿ ರಾಜಕೀಯ-ಸಾಂಸ್ಕೃತಿಕ ತೀರ್ಮಾನಗಳು ಜನಪರವಾಗಿರದೆ ಕೆಲವು ಪಟ್ಟಭದ್ರಹಿತಾಸಕ್ತಿ ಮತ್ತು ರಾಜಕಾರಣಿಗಳ ಪರವಾಗಿ ರೂಪಗೊಳ್ಳುವದನ್ನು ಮನಗಂಡಾಗ ನಮ್ಮೊಳಗೊಬ್ಬ ಚೋಮ್‌ಸ್ಕಿ ಇದ್ದಿದ್ದರೆ........ಎನ್ನುವ ಹತಾಸೆ ಭಾವನೆ ಬರದೆ ಇರಲಾರದು.

ಯಾಕಂದರೆ, ಚೋಮ್‌ಸ್ಕಿಯು ನಿರಂತರವಾಗಿ ಇಂತಹ ಎಲ್ಲ ರಾಜಕೀಯ-ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಅಥವಾ ಪಲ್ಲಟಗಳನ್ನು ಕುರಿತು ವಸ್ತುನಿಷ್ಠ ಅಭಿಪ್ರಾಯಗಳನ್ನು ಮಂಡಿಸಿ ಜನಸಾಮನ್ಯರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾನೆ. ಅಂದರೆ ಜಾಗತಿಕ ಸಂದರ್ಭದಲ್ಲಿ, ರಾಜಕೀಯ-ಆರ್ಥಿಕ ಪ್ರಾಬಲ್ಯ ಮತ್ತು ಪ್ರಭುತ್ವವನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಳ್ಳಲು ಸತತ ಪ್ರಯತ್ನಿಸುವ ಅಮೇರಿಕದಂತಹ ದೇಶವನ್ನು ವಿಮರ್ಶಿಸುವ ಮತ್ತು ಅದರ ನಿಲುವುಗಳನ್ನು ಪ್ರತಿಭಟಿಸುವ ಎದೆಗಾರಿಕೆ ನೋಮ್ ಚೋಮ್‌ಸ್ಕಿಗಿದೆ.

ಚೋಮ್‌ಸ್ಕಿಯು ಯಾವಾಗಲು ತನ್ನನ್ನು ತಾನು "ಅನಾರ್ಕಿಷ್ಟ" ಅಂದರೆ ಅರಾಜಕನೆಂದು ಗುರ್ತಿಸಿಕೊಳ್ಳುವನು. ಅರಾಜಕವಾದ ಎನ್ನುವುದು ಯಾವುದೆ ನಿಯಂತ್ರಣ ಅಧಿಕಾರ-ವರ್ಗ ಮತ್ತು ಶಕ್ತಿಯನ್ನು ತಿರಸ್ಕರಿಸುವುದು. ಅಂದರೆ ಇಂತಹ ವ್ಯವಸ್ಥೆಯನ್ನು ದ್ವಂಸಗೊಳಿಸಿ ಹೊಸಮನ್ವಂತರದ ಹೊಸ ಭರವಸೆಗಳಿಗೆ ತುಡಿವ ಮನಸ್ಥಿತಿಯೆಂದು ಹೇಳಬಹುದು. ಹಾಗಾಗಿ ಇವನು ತನ್ನನ್ನು ಉದಾರ-ಸಮಾಜವಾದಿಯೆಂದು ಗುರುತಿಸಿಕೊಂಡಿರುವನು. ಇವನು ಭಾಷೆ, ಚರಿತ್ರೆ, ತತ್ವಶಾಸ್ತ್ರ, ರಾಜಕೀಯ, ಯುದ್ಧನೀತಿ, ಅಂತರ್‌ರಾಷ್ಟ್ರಿಯ ಸಂಬಂಧ, ಪ್ರಾಬಲ್ಯ ಮತ್ತು ಯಜಮಾನಿಕೆ ಹಾಗೂ ಮಾನವಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕುರಿತು ಜನಸಾಮನ್ಯರಲ್ಲಿ ಜಾಗೃತಿಯನ್ನು ಮೂಡಿಸುವ ದಿಸೆಯಲ್ಲಿ ಇವನ ಆಲೋಚನೆಗಳು ರೂಪಗೊಂಡಿರುವವು.

ಅಂದರೆ, ಹೇಗೆ ಅಮೇರಿಕವು ತನ್ನ ಹಿತಾಸಕ್ತಿಯನ್ನು ಜಾಗತೀಕರಣದ ನೀತಿ, ತಂತ್ರ, ಹುನ್ನಾರ ಮತ್ತು ಆರ್ಥಿಕ ದಿಗ್ಬಂಧನವನ್ನು ಹೇರುವ ಗೊತ್ತುವಳಿಗಳ ಮುಖಾಂತರ ರೂಪಿಸುವುದು ಎನ್ನುವುದನ್ನು ಸೂಕ್ಷ್ಮವಾಗಿ ವಿಶ್ಲೇಷಿಸುವನು. ಇಂತಹ ಜನವಿರೋಧಿ ಕಾರ್ಯಚಟವಟಿಕೆಗಳನ್ನು ಪ್ರತಿಭಟಿಸುವ ಮತ್ತು ಪ್ರತಿರೋಧಿಸುವ ದಿಟ್ಟ ನಿಲುವುಗಳನ್ನು ಚೋಮ್‌ಸ್ಕಿಯು ರೂಢಿಸಿಕೊಂಡಿರುವನು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣಮಾಡುವ ಅಧಿಕಾರಸ್ಥವರ್ಗಗಳ ವಿರುದ್ಧ ಪ್ರತಿಭಟಿಸುವ ಕ್ರಮ ವಿಶಿಷ್ಟವಾದದ್ದು. ಅಂದರೆ ಫ್ರಾನ್ಸ್‌ನ ರಾಭರ್ಟ ಫ್ಯೂರಿಸನ್‌ರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಚೋಮ್‌ಸ್ಕಿಯು ಕೈಗೊಂಡ ನಿಲುವುಗಳು ಚಾರಿತ್ರಿಕವಾದವು. ಈ ನಿಲುವುಗಳಿಂದ ಚೋಮ್‌ಸ್ಕಿಯ ವ್ಯಕ್ತಿತ್ವಕ್ಕೆ ದಕ್ಕೆ ಬಂತು ಆದಗ್ಗ್ಯೂ He has right to say ಎನ್ನುವ ನಿಲುವು ಇವನದು.

ನೋಮ್ ಚೋಮ್‌ಸ್ಕಿಯು ಆಧುನಿಕಭಾಷಾ ತತ್ವಶಾಸ್ತ್ರ ಮತ್ತು ತತ್ವಶಾಸ್ತ್ರದಲ್ಲಿ ಪ್ರಭಾವಿ ಚಿಂತಕ. ಗೆಲಿಲೀಯೋ ನಂತರದ ಮಾನಸಿಕ ಕ್ರಾಂತಿಯ (Cognitive Revolution) ಹರಿಕಾರ. ಇವನು ಯಾವದಕ್ಕೂ ಯಾವತ್ತು ರಾಜಿಮಾಡಿಕೊಳ್ಳದ ರಾಜಕೀಯ ವಿಶ್ಲೇಷಕ. ಇವನು ತನ್ನ ಚಿಂತನೆಗಳನ್ನು ವ್ಯಾಪಕವಾಗಿ ಚರ್ಚಿಸಿರುವನು. ಅಂದರೆ ಸೌತ್ ಇಸ್ಟ್ ಏಷಿಯಾ, ಇಸ್ರೇಲ್, ದಕ್ಷಿಣ ಅಮೇರಿಕದ ಮಾನವ ಹಕ್ಕು ಮತ್ತು ಭಯೋತ್ಪದನೆಯ ಸಂಬಂಧಿ ಚರ್ಚೆಗಳು ಸೂಕ್ಷ್ಮ ಹೊಳವುಗಳನ್ನು ನೀಡುವವು. ಹಾಗೂ ವಿಯಟ್ನಾಮ್‌ಯುದ್ಧ ವಿರೋಧ ನೀತಿಯ ನಿಲುವುಗಳು ಕೂಡ ಚಾರಿತ್ರಕವಾದವು.

ಜಾಗತಿಕ ಚಿಂತಕರು ಹಾಗೂ ಸಮೂಹಮಾಧ್ಯಮಗಳು ಹೇಗೆ ಸಾಮ್ರಾಜ್ಯಶಾಹಿ ಮತ್ತು ಮೇಲ್‌ವರ್ಗದ ಪರವಾಗಿ ಮಿಥ್ಯ್‌ಗಳನ್ನು ಸೃಷ್ಟಿಸಿ ಅವುಗಳನ್ನೆ ಸತ್ಯವನ್ನಾಗಿ ಹೇಗೆ ಸಾಕ್ಷಾತ್ಕರಿಸುತ್ತವೆ ಎನ್ನುವದನ್ನು ವಿಶ್ಲೇಷಿಸುವ ಕ್ರಮ ಜನಪರವಾದದ್ದು. ಇವನ ಈ ಸಾಮ್ರಾಜ್ಯಶಾಹಿ ಧೋರಣೆ, ಯುದ್ಧ ಮತ್ತು ಯುದ್ಧ ನೀತಿ ಕುರಿತ ಚರ್ಚೆಗಳು ಒಂದುಯುಗ ಜನಾಂಗದ ಆಲೋಚನಕ್ರಮವನ್ನೆ ಬದಲಾಯಿಸಿವೆ ಎನ್ನಬಹುದು. ಆದ್ದರಿಂದ, ಇವನ ಬಿಡುವಿಲ್ಲದ "'Dissident Politics"ಮತ್ತು "Activism"ನಿಂದ ಸರಕಾರದ ಸುಳ್ಳುಗಳನ್ನು ದಾಖಲಿಸುವ, ಬಂಡವಾಳಶಾಹಿಗಳ ಹಿಡನ್ ಪ್ರಭಾವವನ್ನು ಬಯಲಿಗೆಳೆಯುವ ಮತ್ತು ಮಾಧ್ಯಮ ಹಾಗೂ ಬುದ್ಧಿಜೀವಿಗಳು ಪ್ರಭುತ್ವದ ಹಿಡನ್ ನಿಲುವು ಹಾಗೂ ತೀರ್ಮಾನಗಳಿಗೆ ಮೌನದಿಂದಲೆ ಅನುಮೋದಿಸುವ ಕ್ರಮಗಳು ಜನಪರ-ಸಾಮಾಜಿಕ ಮಾದರಿಯ ಕ್ರಮವನ್ನು ಸ್ಥಾಪಿಸಿರುವವು.

ಅಮೇರಿಕವು ಹುಟ್ಟು ಹಾಕುವ ಹೊಸ ಪರಿಭಾಷೆಗಳು ಹೇಗೆ ಜನವಿರೋಧಿ ಎನ್ನುವುದನ್ನೂ ಅಷ್ಟೆ ಸೂಕ್ಷ್ಮವಾಗಿ ಗೃಹಿಸುವ ನಿಲುವುದಳನ್ನು ದಕ್ಕಿಸಿಕೊಡುವುದು ಚೋಮ್‌ಸ್ಕಿಯ ಜವಾಬ್ದಾರಿಯಾಗಿದೆ. ಅಂದರೆ,ಅಮೇರಿಕದ ಯುದ್ಧ ವಿಭಾಗವನ್ನು "Defense" ಎಂದು ಕರೆದಿರುವದನ್ನು ಗಮನಿಸಬಹುದು. ಇಂತಹ ಪರಿಭಾಷೆಗಳು ಜನಸಾಮಾನ್ಯರ ಬುದ್ಧಿಗೆ ಮಂಕು ಕವಿಸುವ ಕ್ರಮವನ್ನು ಹೀನಾಯವಾಗಿ ಬಯಲಿಗೆಳೆಯುವನು. ಇದೆಲ್ಲವನ್ನು ಗಮನಿಸಿದಾಗ ಚೋಮ್‌ಸ್ಕಿಯು ಇವತ್ತೀನ ಜಾಗತಿಕ ಸಂದರ್ಭದ ಆತ್ಮಸಾಕ್ಷಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಮನಗಾಣಬಹುದು. ಈ ದೃಷ್ಟಿಯಿಂದ ಇವನನ್ನು ಜಾಗತಿಕ ಪ್ರಭಾವಿ-ಚಿಂತಕರಾದ ಐನಸ್ಟಿನ್, ಪಿಕಾಸೋ, ಫ್ರಾಯ್ಡ್ ಮುಂತಾದವರೊಟ್ಟಿಗೆ ಹೋಲಿಸಿ ಜಗತ್ತಿನ ಹತ್ತು ಚಿಂತಕರಲ್ಲಿ ಇವನನ್ನು ಎಂಟನೇಯದವನಾಗಿ ಗುರುತಿಸಲಾಗಿದೆ.

ಚೋಮ್‌ಸ್ಕಿಯ ಈ ಎಲ್ಲ ಆಲೋಚನ ಕ್ರಮಗಳನ್ನು ಭಾರತ ಸಂದರ್ಭಕ್ಕೆ ಅಳವಡಿಸಿಕೊಂಡು ಯೋಚಿಸಿದರೆ, ಇಲ್ಲಿಯೂ ಯಾವುದೆ ಜನತಂತ್ರ ವಿರೋಧಿ ಚಟವಟಿಕೆಗಳಿಗೇನು ಕೊರತೆಯಿಲ್ಲ. ಭಾರತ ದೇಶ "ಉದಾರಿ-ಪ್ರಜಾತಂತ್ರ" ವ್ಯವಸ್ಥೆಯೆಂದು ಬೀಗುವ ನಮ್ಮ ಪ್ರಜಾಪ್ರಭುತ್ವದ ನಾಯಕರು ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣಮಾಡುವ ರೀತಿ ಯಾವುದೆ ಸಾಮ್ರಾಜ್ಯಶಾಹಿ ಧೋರಣೆಗೆ ಕಮ್ಮಿಯಾದದ್ದಲ್ಲ.

"ಆನು ದೇವ ಹೊರಗಣನವನು.." ಕೃತಿಯ ಮುಟ್ಟುಗೋಲು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಲ್ಲದೆ ಬೇರೆನಲ್ಲ. ಇದರ ವಿವರಗಳು ಅಪ್ಪಟ ಸತ್ಯವನ್ನು ಹೇಳುವದಿಲ್ಲವೆಂದಾದರೂ, ಅವು ಅಪ್ರಾಮಾಣಿಕವಾದಂತವಲ್ಲ. ಯಾಕಂದರೆ, ಸಂಶೋಧನೆಯ ಮುಖ್ಯ ಉದ್ಧೇಶ ಚರಿತ್ರೆ ಅಥವಾ ಇನ್ನಾವುದೇ ಸ್ಥಿತಿ ಅಥವಾ ಮನೋಧರ್ಮವನ್ನು ಗುಮಾನಿಯಿಂದ ನೋಡುವುದೆ ಸಂಶೋಧನೆಯ ಪ್ರವೃತ್ತಿ. ಚೋಮ್‌ಸ್ಕಿಯು ಎಲ್ಲವನ್ನು ಗುಮಾನಿಯಿಂದಲೇ ನೋಡುತ್ತಾನೆ ಇದನ್ನು ಒಪ್ಪಿಕೊಳ್ಳುವ ಅಗತ್ಯವಿಲ್ಲ. ಆದಾಗ್ಯೂ ಒಂದು ವರ್ಗದ ಯಜಮಾನ್ಯಿಕೆಯ ಅಧಿಕಾರ ಮತ್ತು ಜ್ಙಾನದಂತಹ ನಿಯಂತ್ರಣ ಮಾನದಂಡಗಳ ಮುಖಾಂತರ ಚಾರಿತ್ರಿಕ ದಾಖಲೆಗಳು ರೂಪಗೊಂಡಿರುವವು. ಈ ಎಲ್ಲ ದಾಖಲೆಗಳು ಸಮಾಜದ ಮುನ್ನೆಲೆ ಮತ್ತು ಮೇಲ್‌ವರ್ಗದ ಪರವಾಗಿರುತ್ತವೆ. ಹಾಗಾಗಿ, ಆನು ದೇವ ಹೊರಗಣನವನು.." ಕೃತಿಯ ತಿರ್ಮಾನ ಶೂದ್ರ ಸಮುದಾಯದ ಹೆಗ್ಗಳಿಕೆ ಎಂದು ಗುರುತಿಸಬೇಕು.

ಬಸವತತ್ವವು ವೈಧಿಕ ಚಿಂತನೆಯೊಂದಿಗೆ ಧ್ರುವಿಕರಣಗೊಳ್ಳದೆ ಅವೈಧಿಕ ಚಿಂತನೆಗೆ ಮತ್ತೊಂದು ಆಯಾಮವನ್ನು ದಕ್ಕಿಸುವುದು. ಇದು ಸಾಂಸ್ಕೃತಿಕ ತಿಳಿವಳಿಕೆಯನ್ನು ವಿಸ್ತರಿಸುವುದಕ್ಕೆ ಪೂರಕವಾಗಿರುವಂತಹವು. ಕೆಲವು ಸಂದರ್ಭಗಳಲ್ಲಿ ಸಾಂಸ್ಕೃತಿಕ ಹುನ್ನಾರವನ್ನು ಮಾಡುವ ತೀರ್ಮಾನಗಳು ಮೇಲುಗೈ ಸಾಧಿಸುವವು. ಉದಾ: "ಆವರಣ" ಕೃತಿಯ ವಿವರ ಹಾಗೂ ಅದರ ಪರವಾಗಿ ಬಂದ ವಾದಗಳನ್ನು ಗಮನಿಸಬಹುದು. ಇದಕ್ಕೆ ಮುಖ್ಯ ಕಾರಣ ಧಾರ್ಮಿಕತೆ-ಸಾಮಾಜಿಕತೆ ಮತ್ತು ವರ್ಗ-ಧರ್ಮಗಳ ಪ್ರಾಬಲ್ಯದಿಂದ ಜನವಿರೋಧಿ ರಾಜಕೀಯ ತೀರ್ಮಾನಗಳು ಸಂವಿಧಾನಾತ್ಮಕ ಮಹತ್ವವನ್ನು ಪಡೆದುಕೊಳ್ಳುವವು. ಇದರೊಂದಿಗೆ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದಾಗ ಚೋಮ್‌ಸ್ಕಿಯು ನಮಗೆ ಇನ್ನೂ ಬಹಳ ಪ್ರಸ್ತುತವೆನಿಸುವನು. ಅಂದರೆ ಅಧಿಕಾರ ಹಸ್ಥಾಂತರರ ಕುರಿತ ನಿಲುವುಗಳು, ಪರಮಾಣು ನೀತಿಯ ತೀರ್ಮಾನಗಳು ಹಾಗೂ ರಾಮಸೇತುವೆ ಉಳಿಸಿ ಹೋರಾಟಗಳ ಒಟ್ಟು ಸ್ವರೂಪ ಹಾಗೂ ತಾತ್ತ್ವಿಕ ನಿಲುವುಗಳ ಸೂಕ್ಷ್ಮತೆಯನ್ನು ಸ್ಪಷ್ಟವಾಗಿ ಅರ್ಥೈಯಿಸಿಕೊಳ್ಳಬಹದು.

ಸಂಬಳದ ಮುಲಾಜಿಗೆ ಪ್ರಭುತ್ವದ ಅಧೀನದಲ್ಲಿದ್ದುಕೊಂಡು, ಜನತಂತ್ರ ವಿರೋಧಿ ಕಾರ್ಯಗಳನ್ನು ವಿರೋಧಿಸುವ ದಿಟ್ಟತನ ಯಾವತ್ತು ನಮಗೆ ದಕ್ಕಲಾರದು. ಇಂತಹ ದಿಟ್ಟತನವನ್ನು ಚೋಮ್‌ಸ್ಕಿಯಿಂದ ಪಡೆದುಕೊಳ್ಳಬಹುದು. ಆದ್ದರಿಂದಲೇ ನಮ್ಮ ಕೆಲವು ಬುದ್ಧಿಜೀವಿಗಳು ಜನಪರ ಕಾಳಜಿಯನ್ನು ಹೊಂದಿದ್ದಕ್ಕೆ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದರು. ಉದಾ: ನಕ್ಸಲ್ ಬೆಂಬಲಿಗರ ಪಟ್ಟಿಯನ್ನು ಸ್ಮರಿಸಿಕೊಳ್ಳಬಹುದು.

ಇಂತಹ ಎಲ್ಲ ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಅಥವಾ ಪಲ್ಲಟಗಳನ್ನು ಕುರಿತು ವಸ್ತುನಿಷ್ಠ ಅಭಿಪ್ರಾಯಗಳನ್ನು ಮಂಡಿಸಿಲು ಚೋಮ್‌ಸ್ಕಿಯ ಆಲೋಚನ ಕ್ರಮಗಳು ಸಹಾಯಮಾಡುತ್ತವೆ. ದುರಾದೃಷ್ಟವಶಾತ ಚೋಮ್‌ಸ್ಕಿಯಂತಹ ಮನಸ್ಥಿತಿಯೂ ಕೂಡ ಪ್ರಭುತ್ವ-ಅಧಿಕಾರಸ್ಥ ಗೂಡಿನಲ್ಲಿ ಅಡಗಿಕೊಂಡಿರುವುದು. ಹಾಗಾಗಿ ನೋಮ್ ಚೋಮ್‌ಸ್ಕಿ ನಮ್ಮೊಳಗಿದ್ದಿದ್ದರೆ....ಎನ್ನುವ ಹತಾಸೆ ಭಾವನೆ ಬರದೆ ಇರಲಾರದು.

ಲೇಖಕರ ವಿಳಾಸ :
ಮೇಟಿ.ಮಲ್ಲಿಕಾರ್ಜುನ,
ಭಾಷಾಶಾಸ್ತ್ರ ಉಪನ್ಯಾಸಕ,
ಸಹ್ಯಾದ್ರಿ ಕಲಾ ಕಾಲೇಜು,
ಶಿವಮೊಗ್ಗ-577 203

;
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X