ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಬರಹ’ ವಾಸುಗೆ ಶುಭಾಶಯ ಹೇಳೋರಿಗೂ ಬರ!

By Staff
|
Google Oneindia Kannada News


ವಾಸು ಬೆಂಗಳೂರಿಗೆ ಬಂದದ್ದು , ಹೋದದ್ದು ಸುಮಾರು ಮಂದಿಗೆ ಗೊತ್ತಾಗಲೇ ಇಲ್ಲ! ಗೊತ್ತು ಮಾಡಿಕೊಳ್ಳುವ ಮನಸ್ಥಿತಿಯೂ ನಮ್ಮವರಿಗಿಲ್ಲ. ಈ ಮಧ್ಯೆ ಒಂದು ಅರ್ಥಪೂರ್ಣ ಸನ್ಮಾನ ಕಾರ್ಯಕ್ರಮ ಜರುಗಿದೆ. ಅಷ್ಟೇ ಸಮಾಧಾನ.

Sheshadrivasu felicitated in Bangalore, cine director P. Sheshdri is also seenಶೇಷಾದ್ರಿ ವಾಸು ಎಂದರೆ ಕೆಲವರಿಗಷ್ಟೇ ಗೊತ್ತಾಗುತ್ತದೆ. ಅದೇ ‘ಬರಹ’ ಸೃಷ್ಟಿಸಿ, ಕನ್ನಡಿಗರಲ್ಲಿ ಆತ್ಮವಿಶ್ವಾಸ ಮೂಡಿಸಿದ ‘ಬರಹ ವಾಸು’ ಅಂದರೆ ಬಹುಮಂದಿ ಗೊತ್ತು ಬಿಡಿ ಅನ್ನುತ್ತಾರೆ. ಅವರು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು.. ಸೋಮವಾರ ಅಮೆರಿಕಾದ ವಿಮಾನ ಹತ್ತಿದ್ದಾರೆ... ಅವರು ಬಂದದ್ದು, ಹೋದದ್ದು ಸುಮಾರು ಮಂದಿಗೆ ಗೊತ್ತಾಗಲೇ ಇಲ್ಲ! ಗೊತ್ತು ಮಾಡಿಕೊಳ್ಳುವ ಮನಸ್ಥಿತಿಯೂ ನಮ್ಮವರಿಗಿಲ್ಲ..

ಈ ಮಧ್ಯೆ ಕನ್ನಡ ಸಾಹಿತ್ಯ.ಕಾಂ, ವಾಸು ಅವರಿಗೊಂದು ಸನ್ಮಾನ ಸಮಾರಂಭವನ್ನು ನಗರದಲ್ಲಿ ಏರ್ಪಡಿಸಿತ್ತು. ಪ್ರಚಾರದ ಕೊರತೆಯೋ, ಕನ್ನಡಿಗರ ಮನಸ್ಥಿತಿ(?)ಯೋ, ಕಾರ್ಯಕ್ರಮದಲ್ಲಿ ಪಾಲ್ಗೊಂಡವರ ಸಂಖ್ಯೆ ಕಡಿಮೆಯಿತ್ತು. ಆದರೆ ಪಾಲ್ಗೊಂಡವರೆಲ್ಲರೂ, ಬೊಗಸೆ ತುಂಬ ಪ್ರೀತಿಯನ್ನು ಹೊತ್ತು ತಂದಿದ್ದರು. ಬರಹದ ಸೃಷ್ಟಿಕರ್ತನಿಗೆ ಅಭಿನಂದನೆ, ಕೃತಜ್ಞತೆ ಹೇಳಿ, ಬೆನ್ನು ತಟ್ಟಿದರು. ವಾಸು ಕಂಡು ಪುಳಕಿತರಾದರು.

ಎಲ್ಲವನ್ನೂ ಗೆದ್ದ ನಿರ್ಲಿಪ್ತರಂತೆ ವಾಸು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮೆಚ್ಚುಗೆ, ಹೊಗಳಿಕೆ ಹೆಚ್ಚಾದಾಗ, ಮುಜುಗರಪಡುತ್ತಿದ್ದರು. ರಾಷ್ಟ್ರಪ್ರಶಸ್ತಿ ವಿಜೇತ, ಕನ್ನಡದ ಹೆಮ್ಮೆಯ ನಿರ್ದೇಶಕ ಪಿ.ಶೇಷಾದ್ರಿ, ವಾಸು ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಾಸು, ತಮ್ಮ ಬಾಲ್ಯ, ಬರಹ ಸೃಷ್ಟಿಯಾದ ಸಂದರ್ಭ, ತಮ್ಮ ಅನುಭವವನ್ನು ಹಂಚಿಕೊಂಡರು.

7ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದೆ. ಮನೆಯ ವಾತಾವರಣ ನನ್ನಲ್ಲಿ ಕನ್ನಡ ಮತ್ತು ಸಾಹಿತ್ಯ ಪ್ರೀತಿಗೆ ಮೂಲ ಕಾರಣ. ವಿದ್ಯಾಭ್ಯಾಸದ ನಂತರ ಬೆಂಗಳೂರಿನಲ್ಲಿ ಆರಂಭಗೊಂಡ ವೃತ್ತಿ ಬದುಕು, ಜರ್ಮನಿಯಿಂದ, ಅಮೆರಿಕಾಕ್ಕೆ ತಂದು ಮುಟ್ಟಿಸಿದೆ. ಈ ಸಂದರ್ಭದಲ್ಲಿ ನನ್ನ ಮನದಲ್ಲಿ ಹುಟ್ಟಿದ ಬಯಕೆ ಮತ್ತು ಕನಸು, ಬರಹದ ಸೃಷ್ಟಿಗೆ ಕಾರಣವಾಯಿತು. 1998ರ ಜನವರಿಯಲ್ಲಿ ಬರಹದ ಮೊದಲ ಆವೃತ್ತಿ ಬಿಡುಗಡೆಯಾಯಿತು. ಅಲ್ಲಿಂದ ಇಲ್ಲೀಯವರೆಗೆ, ಇನ್ನಷ್ಟು ಅಭಿವೃದ್ಧಿ ಪಡಿಸುವ ಕೃಷಿ ನಡೆಯುತ್ತಲೇ ಇದೆ ಎಂದರು.

ವಾರಂತ್ಯದ ರಜೆ, ಸಂಜೆ ಮತ್ತು ರಾತ್ರಿ ಸಮಯವನ್ನು ಬರಹ ಅಭಿವೃದ್ಧಿಗೆ ಬಳಸಿಕೊಂಡೆ. ಸಮಯ ಸಿಕ್ಕಾಗಲೆಲ್ಲ, ಹಂತಹಂತವಾಗಿ ಕೆಲಸ ಮುಗಿಸುತ್ತಿದ್ದೆ. ವಿವಿಧ ಭಾರತೀಯ ಭಾಷೆಗಳಲ್ಲಿ ಬರಹ ಇಂದು ಲಭ್ಯ. ಈ ಮಧ್ಯೆ ಮಾಹಿತಿ ತಂತ್ರಜ್ಞಾನದ ಹೊಸ ಸಾಧ್ಯತೆಗಳನ್ನು, ಕನ್ನಡಿಗರಿಗೆ ತಲುಪಿಸುವತ್ತ ನಿರಂತರ ಕೃಷಿ ಮಾಡುತ್ತೇನೆ. ಹಾಗೆಂದು ಇದು ದೇಶಸೇವೆ ಎಂದಾಗಲಿ, ಕನ್ನಡ ಪ್ರೀತಿಯೆಂದಾಗಿ ದೊಡ್ಡ ಶಬ್ದಗಳಿಂದ ಗುರ್ತಿಸುವ ಅಗತ್ಯವಿಲ್ಲ.. ಇದು ನನ್ನ ಹವ್ಯಾಸ ಎಂದು ವಿನಮ್ರರಾಗಿ ನುಡಿದರು.

ಬರಹ ಬಳಕೆದಾರರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿ ತಿಂಗಳು ಬರಹ.ಕಾಮ್‌ನಿಂದ 20ರಿಂದ 25ಸಾವಿರ ಮಂದಿ ಡೌನ್‌ ಲೌಡ್‌ ಮಾಡಿಕೊಳ್ಳುತ್ತಿದ್ದಾರೆ. ನನ್ನ ಕೆಲಸ ನನಗೆ ತೃಪ್ತಿ ನೀಡಿದೆ.. ಬರಹದಿಂದ ಬ್ರೆೃಲ್‌ ಲಿಪಿಗೆ ಭಾಷಾಂತರ, ಶಬ್ಧಕೋಶ ರಚನೆ ಮತ್ತಿತರ ಯೋಜನೆಗಳು ನನ್ನ ಮುಂದಿವೆ. ಹಂತಹಂತವಾಗಿ ಅವುಗಳನ್ನು ಅಭಿವೃದ್ಧಿಪಡಿಸುತ್ತೇನೆ ಎಂದು ವಾಸು ಹೇಳಿದರು.

ಪ್ರಶಸ್ತಿ ನೀಡಿ : ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ಪಿ. ಶೇಷಾದ್ರಿ ತಮ್ಮ ಮತ್ತು ಬರಹದ ನಂಟನ್ನು ವಿವರಿಸಿದರು. ಬರಹದ ಸಾರ್ವತ್ರಿಕ ಉಪಯೋಗ ಮತ್ತು ಪರಿಣಾಮಗಳನ್ನು ಮಾತಿನುದ್ದಕ್ಕೂ ಉದಾಹರಿಸಿ, ವಾಸು ಸೇವೆಯನ್ನು ಶ್ಲಾಘಿಸಿದರು.

ಉಪಯುಕ್ತವಾದ ಬರಹವನ್ನು ಕಂಡು ಹಿಡಿದು, ಅದನ್ನು ಉಚಿತವಾಗಿ ನೀಡುತ್ತಿರುವ ವಾಸು ನಿಜಕ್ಕೂ ಎತ್ತರದ ಸ್ಥಾನದಲ್ಲಿದ್ದಾರೆ. ಕನ್ನಡಿಗರ ಮನದಲ್ಲಿ ಅವರ ಸ್ಥಾನ ಶಾಶ್ವತ. ವಾಸುರಂತವರಿಗೆ ರಾಜ್ಯ ಸರ್ಕಾರ ಪ್ರಶಸ್ತಿ ನೀಡಬೇಕು. ಆ ಪ್ರಶಸ್ತಿ ಬರಲಿಲ್ಲವೆಂದು ಕೊರಗುವ ಅವಶ್ಯಕತೆ ನಿಜಕ್ಕೂ ಇಲ್ಲ. ಯಾಕೆಂದರೆ, ಯೋಗ್ಯರಿಗೆ ಪ್ರಶಸ್ತಿ ನೀಡುವ ಪರಿಪಾಠವನ್ನು ಸರ್ಕಾರಗಳಿಂದ ನಿರೀಕ್ಷಿಸಲಾಗದು ಎಂದರು.

ಒಬ್ಬ ವ್ಯಕ್ತಿ ಸಾಗರದಾಚೆ ಕುಳಿತು, ಕನ್ನಡದ ಬಗ್ಗೆ ಕನಸು ಕಾಣುವುದು, ಕನಸಿನ ಸಾಕ್ಷಾತ್ಕಾರಕ್ಕಾಗಿ ದುಡಿಯುವುದು, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ನಿಲ್ಲುವುದು ಸಾಮಾನ್ಯದ ಸಂಗತಿಯಲ್ಲ. ವಾಸು ಅವರ ಕನಸುಗಳ ಪರಿಶ್ರಮ, ಲಕ್ಷಾಂತರ ಕನ್ನಡಿಗರನ್ನು ತಲುಪಿದೆ. ಅವರೆಲ್ಲರೂ ವಾಸು ಅವರಿಗೆ ಋಣಿಗಳು. ಅದಕ್ಕಿಂತಲೂ ಬೇರೆ ಪ್ರಶಸ್ತಿ ಇನ್ಯಾವುದಿದೆ ಎಂದು ಪ್ರಶ್ನಿಸಿದರು.

ಬೇಸರ : ಸಮಾರಂಭ ಸಂಘಟಿಸಿದ್ದ ಕನ್ನಡ ಸಾಹಿತ್ಯ.ಕಾಮ್‌ನ ಶೇಖರ್‌ ಪೂರ್ಣ ಮಾತನಾಡಿ, ಒಂದು ಅಂದಾಜಿನ ಪ್ರಕಾರ 20ಲಕ್ಷ ಮಂದಿ ಬರಹ ಬಳಸುತ್ತಿದ್ದಾರೆ. ಆದರೆ, ಬರಹದ ಸೃಷ್ಟಿಕರ್ತನಿಗೆ ಶುಭಾಶಯ ಹೇಳಲು ಬಂದವರು ಕೆಲವರು ಮಾತ್ರ ಎಂದು ವಿಷಾದಿಸಿದರು.

ಹಿಂದೆ ಸೆಂಟ್ರಲ್‌ ಕಾಲೇಜಿನಲ್ಲಿ ಸಾಹಿತ್ಯ ಸಂಬಂಧಿ ಕಾರ್ಯಕ್ರಮಗಳು ನಡೆದಾಗ, ಸಭಾಂಗಣಗಳು ಕಿಕ್ಕಿರಿಯುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಸಮುದಾಯವಾಗಿ ಪ್ರತಿಸ್ಪಂದಿಸಲು ನಾವುಗಳು ವಿಫಲರಾಗಿದ್ದೇವೆ. ಅದರಲ್ಲೂ ಐಟಿ ವಲಯದ ಜನರು ನಾನು ಮತ್ತು ಕಂಪ್ಯೂಟರ್‌ ಎಂದಷ್ಟೇ ಯೋಚಿಸುತ್ತಿದ್ದಾರೆ. ಯಾರ ಸಂಪರ್ಕವೂ ಬೇಡ ಎಂಬ ಮನಸ್ಥಿತಿ ಬೆಳೆಸಿಕೊಳ್ಳುತ್ತಿದ್ದಾರೆ. ಇದು ದುರಂತ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ನಾಳೆ ಕಂಪ್ಯೂಟರ್‌ಗಳು ಮಾತ್ರ ಉಳಿಯುತ್ತವೆ ಎಂದು ಎಚ್ಚರಿಸಿದರು.

ಡಿಸೆಂಬರ್‌ನಲ್ಲೊಂದು ಚಳವಳಿ : ಕನ್ನಡದ ಸಾಧ್ಯತೆಗಳ ಪ್ರಚಾರ ಮಾಡುವ ಕೆಲಸ ನಡೆಯಬೇಕು. ಅಂತಹ ಪರಿಸರ ನಿರ್ಮಾಣವಾಗದಿದ್ದರೆ, ಕನ್ನಡಕ್ಕೆ ಉಳಿವಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಕಂಪ್ಯೂಟರ್‌ಗಳಲ್ಲೂ ಕನ್ನಡ ತಂತ್ರಾಂಶ(ನುಡಿ-ಬರಹ) ಅನುಸ್ಥಾಪಿಸುವಂತೆ ಸರ್ಕಾರ ಆದೇಶ ನೀಡಬೇಕು. ಈ ಸಂಬಂಧ ಸರ್ಕಾರಕ್ಕೆ ಡಿ.15ರಂದು ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಶೇಖರ್‌ ಪೂರ್ಣ ಹೇಳಿದರು.

ಸರ್ಕಾರ ಪ್ರತಿಸ್ಪಂದಿಸಲಿದ್ದರೆ, ಡಿ.31ರಂದು ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದೇವೆ. ಕನ್ನಡ ಪ್ರೇಮಿಗಳು ಸಹಕಾರ ನೀಡಬೇಕು ಎಂದು ಕೋರಿದರು.

ಸಮಾರಂಭದಲ್ಲಿ ಕಿರಣ್‌, ರೋಹಿತ್‌, ವಿಕ್ರಮ್‌ ಹತ್ವಾರ್‌, ಕಲ್ಯಾಣ ರಾಮನ್‌, ಚಂದ್ರಶೇಖರ್‌, ರವಿಭಟ್‌, ರವಿ ಅರೆ ಹಳ್ಳಿ ಮತ್ತಿತರರು ಪಾಲ್ಗೊಂಡಿದ್ದರು. ಸೀತಾ ಶೇಖರ್‌ ಪ್ರಾರ್ಥಿಸಿದರು.


ಶೇಶಾದ್ರಿ ವಾಸು ಅವರನ್ನು ಅಭಿನಂದಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X