ಸುಳ್ಳಾಗಿ ಕಾಡಿತ್ತು ನೋಡಾ! : ಒಂದು ನೋಟ
ಮೈಸೂರು : ಮೈಸೂರಿನ ಸಿಂಧುವಳ್ಳಿ ಅನಂತಮೂರ್ತಿ ಅವರ ಸುರುಚಿ ರಂಗಮನೆ ಸಭಾಂಗಣದಲ್ಲಿ ಆಗಸ್ಟ್ 15 ಮತ್ತು ಆಗಸ್ಟ್ 16, 2006ರಂದು ನಡೆದ ಸುರುಚಿಯ 115 ಮತ್ತು 116ನೆಯ ಕಾರ್ಯಕ್ರಮ ಸೊಗಸಾಗಿತ್ತು.
ಆ ಎರಡು ದಿನ ಚಿರಪರಿಚಿತವಾದ ಒಂದು ಪೌರಾಣಿಕ ಕಥಾವಸ್ತುವಿನ ಹೊಸ ವಿಶ್ಲೇಷಣೆಯನ್ನೇ ಮುಖ್ಯ ಜೀವಾಳವಾಗಿ ಉಳ್ಳ ನಾಟಕ, ‘ಸುಳ್ಳಾಗಿ ಕಾಡಿತ್ತು ನೋಡಾ’ ಪ್ರದರ್ಶಿತವಾಯಿತು. ನಾಟಕವನ್ನು ಬರೆದವರು ಸುರುಚಿಯ ರಂಗಕರ್ಮಿ ಮತ್ತು ಮೈಸೂರಿನ ನಾಟಕ ವಲಯಗಳಲ್ಲಿ ನಟನಾಗಿ, ಸಾಹಿತಿಯಾಗಿ ಹೆಸರು ಮಾಡಿದ ಎಚ್. ವೆಂಕಟೇಶ್ (ರಂಗಮಿತ್ರ) ಅವರು. ನಾಟಕವನ್ನು ಇನ್ನೊಬ್ಬ ಹೆಸರಾಂತ ರಂಗಕರ್ಮಿ ಪ್ರೊ. ಸಿ. ವಿ. ಶ್ರೀಧರಮೂರ್ತಿ ಅವರು ನಿರ್ದೇಶಿಸಿದರು.
ಈ ಪ್ರದರ್ಶನದ ಇನ್ನೊಂದು ವೈಶಿಷ್ಟ್ಯವೆಂದರೆ ಎರಡೂ ದಿನ ನಾಟಕ ಮುಗಿದ ಮೇಲೆ ನಾಟಕ ಹೇಗೆ ಬಂತು- ಎಂಬುದನ್ನ ಕುರಿತು ತಮ್ಮ ಅನಿಸಿಕೆಗಳನ್ನು ಇಬ್ಬರು ವಿಮರ್ಶಕರು ಅಲ್ಲಿಯೇ ಸಭಿಕರೊಂದಿಗೆ ಮತ್ತು ಪಾತ್ರಧಾರಿಗಳೊಂದಿಗೆ ಹಂಚಿಕೊಂಡಿದ್ದು. ಮೊದಲ ದಿನ ರಂಗತಜ್ಞರಾದ ಸುಬ್ರಾಯ ಭಟ್ ಅವರು (ನಾಟಕ ಶಿಕ್ಷಕರು, ‘ಸ್ಟ್ರಕ್ಚರಲ್ ಸ್ಕೂಲ್ ಆಫ್ ಫೈನ್ ಆರ್ಟ್ಸ್’, ವಿಜಯನಗರ, ಬೆಂಗಳೂರು) ಮತ್ತು ಎರಡನೆಯ ದಿನ ಎ. ಎಸ್. ನಾಗರಾಜ್, (ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು) ಇವರುಗಳು ತಮ್ಮ ಪ್ರತಿಕ್ರಿಯೆಗಳನ್ನ ನೀಡುತ್ತಾ ಅಭಿನೇತೃಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನ ಕೊಟ್ಟರು.
ಅಂದೇ, ನಾಟಕದ ಕೊನೆಯ ತೆರೆ ಬಿದ್ದ ನಂತರ, ಪ್ರದರ್ಶಿತವಾದ ಈ ನಾಟಕ ಪುಸ್ತಕರೂಪದಲ್ಲಿ ಅಲ್ಲಿ ಲೋಕಾರ್ಪಿತವಾದದ್ದು ಸಹ ವಿಶಿಷ್ಟವಾದ ರೀತಿಯಲ್ಲಿಯೇ. ಲೋಕಾರ್ಪಣೆ ಮಾಡಿದ ಎ ಎಸ್ ನಾಗರಾಜ್ ಅವರು ಪುಸ್ತಕದ ಒಂದು ಪ್ರತಿಯನ್ನು ಹಣ ಕೊಟ್ಟು ಪ್ರಕಾಶಕರಿಂದ ಕೊಂಡುಕೊಳ್ಳುವುದರ ಮೂಲಕ ಮತ್ತು ಲೇಖಕರನ್ನು ಅಭಿನಂದಿಸುವುದರ ಮೂಲಕ ಪುಸ್ತಕ ಬೆಳಕು ಕಂಡಿತು.
ಸುರುಚಿ ರಂಗಮನೆ
ದಿವಂಗತ ಡಾ।। ಸಿಂಧುವಳ್ಳಿ ಅನಂತಮೂರ್ತಿಯವರ ಆಶಯಗಳನ್ನು ಸಾಕಾರಗೊಳಿಸುತ್ತಿರುವ ಮೈಸೂರಿನ ಸಾಂಸ್ಕೃತಿಕ ಸಂಸ್ಥೆ. ಮೂಲತಃ ರಂಗಭೂಮಿಗೆ ಬದ್ಧವಾಗಿದ್ದರೂ ಹಲವಾರು ಕಲಾಪ್ರಕಾರಗಳಿಗೆ ಪ್ರದರ್ಶನ ತಾಣವಾಗಿ ತನ್ನ ಸಾಧ್ಯತೆಗಳನ್ನು ಹಿಗ್ಗಿಸಿಕೊಳ್ಳುತ್ತಿದೆ. ನಾಟಕ ಪ್ರಯೋಗ, ರಂಗ ಸಂಗೀತ ಕಾರ್ಯಕ್ರಮ, ಹರಿಕಥೆ, ಶಾಸ್ತ್ರೀಯ ಸಂಗೀತ, ಮೂಕಾಭಿನಯ ಶಿಬಿರ, ಪ್ರಸಾಧನ ತರಬೇತಿ, ಕಂಸಾಳೆ ತರಬೇತಿ ಶಿಬಿರ -ಹೀಗೆ ಬಹುಮುಖವಾಗಿ ಬೆಳೆಯುತ್ತಿದೆ. ಈಗ ನಾಟಕ ಪ್ರದರ್ಶನದ ನಂತರ ಸ್ಥಳದಲ್ಲಿಯೇ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಪಡೆಯುವ ವಿಶಿಷ್ಟ ಕಾರ್ಯಕ್ರಮ ಹಾಕಿಕೊಳ್ಳುತ್ತಿದೆ.
ನಾಟಕ : ಸುಳ್ಳಾಗಿ ಕಾಡಿತ್ತು ನೋಡಾ!
ಪುರಾಣ ಪ್ರಸಿದ್ಧ ಸತ್ಯಹರಿಶ್ಚಂದ್ರನ ವ್ಯಕ್ತಿತ್ವದ ಮತ್ತೊಂದು ಮಗ್ಗುಲನ್ನು ವಾಸ್ತವ ನೆಲೆಯಲ್ಲಿ ವಿಡಂಬಿಸುವ ಪ್ರಯತ್ನ. ಸತ್ಯ, ಧರ್ಮ, ನ್ಯಾಯ ಹಾಗೂ ದೈವೀ ಮೌಲ್ಯಗಳ ಉದ್ಘೋಷದ ಮರೆಯಲ್ಲಿ ತಣ್ಣಗೆ ಅಡಗಿರುವ ವ್ಯವಸ್ಥೆಯ ಕೌರ್ಯ ಹಾಗೂ ದಮನಕಾರಿ ಪ್ರವೃತ್ತಿಗಳನ್ನು ಬಯಲಿಗೆಳೆಯುತ್ತಾ ‘ಸತ್ಯದೊಡ್ಡದು ನಿಜ, ಆದರೆ ಪ್ರಾಮಾಣಿಕವಾದ ಬದುಕು ಅದಕ್ಕಿಂತಲೂ ದೊಡ್ಡದು’ ಎಂಬ ಸಾರ್ವಕಾಲಿಕ ಸಂದೇಶವನ್ನು ಗಟ್ಟಿಯಾಗಿ ಮೊಳಗಿಸುವ ನೋಡುಗರ ಎದೆಯಾಳಕ್ಕೆ ಇಳಿಯುವಂತೆ ಮಾಡುವ ಪ್ರಾಮಾಣಿಕ ಪ್ರಯತ್ನ ಇಲ್ಲಿತ್ತು.
ಯಜಮಾನ ಸಂಸ್ಕೃತಿಯ ದರ್ಪ, ಪಾಳೇಗಾರಿಕೆ, ಅವುಗಳನ್ನು ಮರೆ ಮಾಚಲು ಮೊರೆ ಹೋಗುವ ಸಾಕ್ಷಾತ್ಕಾರದಂಥ ಶಬ್ದಗಳು; ಈ ಸುಳ್ಳು ಮುಖವಾಡವನ್ನು ಕಳಚಿ ಹಾಕಿ ಪೊಳ್ಳುಗಳನ್ನು ಬಯಲಿಗೆಳೆಯುವ ನಿರಂತರ ಹೋರಾಟ; ಅದರ ವಿಫಲತೆ-ಸಫಲತೆಗಳು; ಎಲ್ಲ ಯುಗಗಳಲ್ಲೂ, ಎಲ್ಲ ಕಾರ್ಯಗಳಲ್ಲೂ ಆಡಳಿತದ ಕ್ಷುದ್ರತೆಗಳ ವಿರುದ್ಧ ನಡೆಯುವ ಬಂಡಾಯ; ಸಣ್ಣದೋ ಅಥವಾ ದೊಡ್ಡದೋ, ನಿಲ್ಲದೇ ಚಲನಶೀಲವಾಗಿ, ಜೀವಂತವಾಗಿ ಭೋರ್ಗರೆಯುವ ಪ್ರವಾಹ ರೂಪಿಯಾಗಿಯೋ, ನೆಲದೊಳಗೇ ಹರಿಯುವ ಗುಪ್ತಗಾಮಿನಿಯಾಗಿಯೋ ಸದಾ ಅಸ್ತಿತ್ವದಲ್ಲಿರುವ ಜನಪರ ಹೋರಾಟದ ಚೊಕ್ಕ ಚಿತ್ರಣ ನಾಟಕದ ಉದ್ದಕ್ಕೂ ಮೂಡಿ ಬಂದಿತ್ತು.
ವ್ಯವಸ್ಥೆಯ ಪರಮ ಪ್ರತಿನಿಧಿಯಾದ ರಾಜ ಪರಿವಾರವನ್ನು ತೋರಿಸುತ್ತಲೇ ಶ್ರೀ ಸಾಮಾನ್ಯರ ಬದುಕಿನ ಹಲವು ಮಗ್ಗಲುಗಳಿಗೆ ಕನ್ನಡಿ ಹಿಡಿಯುತ್ತಾ ಸಾಗುವ ನಾಟಕ ಜನಶಕ್ತಿ ಸದಾ ಜಾಗೃತವಾಗಿದ್ದರೆ ಮಾತ್ರ ಜಡ್ಡುಗಚ್ಚಿದ ವ್ಯವಸ್ಥೆ ಕುಸಿದು ಬೀಳುತ್ತದೆ; ಅಂತಹ ಪ್ರಯತ್ನಗಳು ನಿರಂತವಾಗಿ ಸಾಗುತ್ತಿರಬೇಕು ಎಂಬ ಆಶಾವಾದವನ್ನು ಎತ್ತಿ ಹಿಡಿಯುವ ಪ್ರಯತ್ನ ಮಾಡಿತ್ತು.
ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ವೇಷಭೂಷಣ, ರಂಗಸಜ್ಜಿಕೆ, ಔಪಚಾರಿಕ ಮಾತುಗಳ ಬೆಂಬಲದಿಂದ ಹಿಂದಿನ ಬೇರೊಂದು ವಾತಾವರಣಕ್ಕೆ ಕೊಂಡೊಯ್ದ ನಾಟಕ, ಕೊನೆಯವರೆಗೂ ಪ್ರೇಕ್ಷಕರ ಕುತೂಹಲವನ್ನು ಕಾಯ್ದಿರಿಸಿಕೊಂಡೇ ಸೆಳೆಯುತ್ತಿತ್ತು. ಪಾತ್ರಗಳ ಹರಿತವಾದ ವಾದವಿವಾದಗಳಲ್ಲಿ ನೋಡುಗರ ತನ್ಮಯತೆ ಎದ್ದು ತೋರುತ್ತಿತ್ತು.
ಹರಿಶ್ಚಂದ್ರನಾಗಿ ಯು. ಎಸ್. ರಾಮಣ್ಣ, ಮಂತ್ರಿಯಾಗಿ ಎಂ. ಎನ್. ಶಶಿಧರ್ (ಸಿಂಹ), ಸೇನಾಪತಿಯಾಗಿ ಭದ್ರಪ್ಪ ಶಿ. ಹೆನ್ಲಿ, ರಾಜಪುರೋಹಿತನಾಗಿ ಎಚ್. ಕೆ. ರಾಮನಾಥ್, ರಾಜ ನರ್ತಕಿಯಾಗಿ ಕುಮಾರಿ ನುಡಿ, ಹುಲಿವೇಷದವರಾಗಿ ಮುರುಗೇಶ್, ತಮಟೆಯವರಾಗಿ ಆನಂದ್, ಬಂಡುಗಾರರಾಗಿ ಪಿ. ನಾಗಭೂಷಣ್, ಕುಟ್ಟಗಾರರಾಗಿ ಎನ್. ನಾಗರಾಜ್, ಶೀಲಜರಾಗಿ ಸೌಮ್ಯ, ಶರ್ಮಿಳಾರಾಗಿ ಎಸ್. ಕೆ. ಶ್ಯಾಮಲಾ, ಚಾಮರಸನಾಗಿ ರಾಜಶೇಖರ ಕದಂಬ, ರಂಗರಾಜನಾಗಿ ಬಿ. ಆರ್. ಪ್ರಸಾದ್, ಪಾರುಪತ್ತೇದಾರರಾಗಿ ಉದಯಕುಮಾರ್, ಪುರಪ್ರಮುಖರಾಗಿ ಎಂ. ಕೆ. ಬೋರೇಗೌಡ, ಬಿರುದು ಘೋಷಕರಾಗಿ ತಿಪ್ಪಣ್ಣ, ಬೋರೇಗೌಡ, ಹಳ್ಳಿಯವರಾಗಿ ರಾಮ್‌ಜಿ, ಸುಬ್ಬನರಸಿಂಹ (ಸುಬ್ಬಣ್ಣ), ರಂಗಮಿತ್ರ, ಎನ್.ಜಿ. ದೇವರಾಜ್, ಪಿ. ಸುರೇಶ್ ಕುಮಾರ್, ಮಹದೇವ್- ಪಾತ್ರಧಾರಿಗಳು ಮನೋಜ್ಞವಾಗಿ ಅಭಿನಯಿಸಿದರು.
ರಂಗದ ಹಿಂದೆ ಇದ್ದ ಕಾರ್ಯಕರ್ತರ ಶ್ರಮ ಸ್ತುತ್ಯರ್ಹವಾಗಿತ್ತು. ಕತ್ತಲೆ-ಬೆಳಕು (ಕೆ. ಜೆ. ನಾರಾಯಣಶೆಟ್ಟಿ), ಪ್ರಸಾಧನ (ಬಿ.ಎ.ಪಿ. ಭಟ್), ರಂಗಸಜ್ಜಿಕೆ (ಆಟೋ ವಿಶ್ವನಾಥ್, ಪಿ. ನಾಗಭೂಷಣ, ವಿ. ದೇವರಾಜ್), ಉಡುಗೆ-ತೊಡುಗೆ (ಸುಮನಾ ಡೋಂಗ್ರೆ, ಮೈಸೂರು ಆರ್. ಜಯರಾಂ) -ಇವು ಸಮರ್ಪಕವಾಗಿತ್ತು. ನಾಟಕದ ಕಳೆಯನ್ನು ಇಮ್ಮಡಿಸಲು ರಂಗಸಂಗೀತತಜ್ಞ ವೈ. ಎಂ. ಪುಟ್ಟಣ್ಣಯ್ಯನವರ ಹಾಡುಗಾರಿಕೆಗೆ ಹಯರಾಂ ಅವರ ತಬಲ ಸಾಥಿ ಜೊತೆಗೂಡಿತು. ಪ್ರಚಾರದ ಹೊಣೆಯನ್ನ ಶ್ರೀಕಂಠಗುಂಡಪ್ಪ ಹೊತ್ತಿದ್ದರು. ಶಶಿಧರ್ ಡೋಂಗ್ರೆ, ಸುಮನಾ ಡೋಂಗ್ರೆ, ಎಂ. ಎನ್. ಶಶಿಧರ್(ಸಿಂಹ), ವಾಸು ಅವರುಗಳು ವಿಶೇಷ ನೆರವನ್ನಿತ್ತಿದ್ದರು.
ರಂಗಭೂಮಿಯಲ್ಲಿ ನಟರಾಗಿ ನಾಲ್ಕು ದಶಕಗಳ ಅನುಭವವುಳ್ಳ, ವಾಗ್ಮಿಯೂ, ವಿಮರ್ಶಕರೂ ಆಗಿರುವ, ನಗರದ ಸಂತ ಫಿಲೋಮಿನಾ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಸಿ. ವಿ. ಶ್ರೀಧರಮೂರ್ತಿಯವರು ಈ ನಾಟಕವನ್ನು ಸಮರ್ಥವಾಗಿ ನಿರ್ದೇಶಿಸಿದ್ದರು.
ನಾಟಕಕಾರ ರಂಗಮಿತ್ರ:
ಕರ್ನಾಟಕ ನಾಟಕ ಅಕಾಡೆಮಿ ಪುರಸ್ಕೃತ ನಾಟಕಕಾರರೂ, ಮೈಸೂರಿನ ಹವ್ಯಾಸಿ ರಂಗದ ಸುಸಂಸ್ಕೃತ ಕಲಾವಿದರಲ್ಲಿ ಹೆಸರಾದ ಶ್ರೀ ಎಚ್. ವೆಂಕಟೇಶ್ ಅವರು ರಂಗಮಿತ್ರ ಎಂಬ ಕಾವ್ಯನಾಮದಲ್ಲಿ ಹದ್ದುಗಳು, ಕಾಡುಗಿಡಗಳು, ಸುಳ್ಳಾಗಿ ಕಾಡಿತ್ತು ನೋಡಾ!, ಕಾಗೆಗಳು, ಬಾಬಾಗಳಿದ್ದಾರೆ ಎಚ್ಚರಿಕೆ, ವರವಕೊಡು ದೇವರೆ ಏಡ್ಸ್ ಇಲ್ಲದ ಕಂದನ -ನಾಟಕಗಳನ್ನು ಬರೆದಿದ್ದಾರೆ.
ನಾಟಕ ಶಾಸ್ತ್ರದ ಡಿಪ್ಲೋಮಾ ಪಡೆದ ಇವರ ಕಲಾರಾಧನೆ ಪ್ರಶಂಸನೀಯ. ‘ಬಯಸೋಣ’ ಎಂಬ ಕಿರು ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸುವುದರ ಜತೆಗೆ ಕಥೆ ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವ ಜವಾಬ್ದಾರಿಯನ್ನು ಹೊತ್ತು ಉತ್ತಮಮಟ್ಟದಲ್ಲಿ ಕಾರ್ಯನಿರ್ವಹಿಸಿರುವುದು ಅವರ ಜಾಣ್ಮೆ ಮತ್ತು ಪ್ರತಿಭೆಗೆ ಸಾಕ್ಷಿಯಾಗಿದೆ. ಸಾಮಾಜಿಕ ಸಮಸ್ಯೆಗಳನ್ನ ಎತ್ತಿಕೊಂಡು ನಾಟಕಗಳನ್ನು ರಚಿಸುವುದು ರಂಗಮಿತ್ರ ಅವರ ಸ್ವಭಾವ. ಕಾಡುಗಿಡಗಳು ನಾಟಕ ಸ್ತ್ರೀ ಬಂಡಾಯವನ್ನು ಕುರಿತದ್ದಾದರೆ, ಹದ್ದುಗಳು ನಾಟಕ ಶೋಷಿತ ವರ್ಗದ ಬದುಕಿನತ್ತ ಮುಖಮಾಡಿದೆ.
ರಂಗಚಿಂತಕ, ‘ರಂಗಮಿತ್ರ’ ವೆಂಕಟೇಶ್ ಅವರಿಗೆ ಕನ್ನಡದ ಬಗೆಗೆ ಇರುವ ಒಲವು, ಹುಮ್ಮಸ್ಸು ಅಪಾರ. ಸದ್ಯ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ. (ವಿಳಾಸ: 572, ಎಂ ಬ್ಲಾಕ್, ಎರಡನೆಯ ಹಂತ, ಕುವೆಂಪು ನಗರ, ಮೈಸೂರು-570 023; ಫೋನ್: 0821-2 560 569)
ಆಡಿದ ನಾಟಕದ ಬಗ್ಗೆ ಅನಿಸಿಕೆಗಳು :
ಪ್ರದರ್ಶನ ಕುರಿತು ಪ್ರತಿಕ್ರಿಯೆ ನಡೆಸಲು ಸುರುಚಿ ಇಬ್ಬರು ರಂಗತಜ್ಞರನ್ನ ಆಹ್ವಾನಿಸಿತ್ತು. ಸಾಂಸ್ಕೃತಿಕ ಕಲೆಗಳಲ್ಲಿ ಅಪಾರ ಅಭಿರುಚಿ ಹೊಂದಿರುವ ಎ. ಎಸ್. ನಾಗರಾಜ್ ಅವರು, ಪ್ರಾಧ್ಯಾಪಕರಾಗಿ ಅನುಭವ ಪಡೆದ ವಿಚಾರವಂತ ಕ್ರಿಯಾಶೀಲರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಒದಗಿ ಬಂದ ಸಂಭಾವಿತ ಕನ್ನಡಿಗ. ಈ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಸಾಂಸ್ಕೃತಿಕ ನಗರಿಯ ಸುಸಂಸ್ಕೃತ ಅಧಿಕಾರಿ. ಉತ್ತಮ ವಾಗ್ಮಿ. ಇವರು ಅಷ್ಟೇನೂ ವಿಶಾಲವಲ್ಲದ ಸುರುಚಿಯ ಈ ಚಿಕ್ಕ ರಂಗಮಂಚದ ಮೇಲೆಯೇ ಅಚ್ಚುಕಟ್ಟಾಗಿ ನಾಟಕವನ್ನ ಪ್ರದರ್ಶಿಸಿದುದಕ್ಕೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಹರಿಶ್ಚಂದ್ರನ ಬಗ್ಗೆ ಈಗಾಗಲೇ ಜನರಲ್ಲಿರುವ ಸತ್ಯಸಂಧತೆಯ ಬಗ್ಗೆ ಇರುವ ಸಾಂಪ್ರದಾಯಿಕ ಮನೋಭಾವಕ್ಕೆ ಪ್ರಶ್ನೆಗಳನ್ನೊಡ್ಡುವ ಈ ನಾಟಕದ ಬಗ್ಗೆ ಎಚ್ಚರಿಕೆಯ ಗಂಟೆಗಳ ಗುಂಡಿಗಳನೊತ್ತಿದರು. ಇವರಲ್ಲದೆ ಇನ್ನೊಬ್ಬ ವಿಮರ್ಶಕರಾಗಿದ್ದವರೆಂದರೆ, ಐವತ್ತು ವರ್ಷಗಳಿಂದಲೂ ರಂಗಾನುಭವ ಹೊಂದಿರುವ ಸುಬ್ರಾಯ ಭಟ್ ಪ್ರತಿಭಾವಂತ ನಟ, ನಿರ್ದೇಶಕ, ಸಂಘಟಕ ಹಾಗೂ ನಾಟಕ ಪದ್ಧತಿ ತಜ್ಞ. ಪ್ರೊ. ರಂಗನಾಥ ಭಾರದ್ವಾಜ್ ಅವರ ಬೆಂಗಳೂರಿನ ‘ವಿಜಯ ರಂಗ’ ‘ಸ್ಟ್ರಕ್ಚರಲ್ ಸ್ಕೂಲ್ ಆಫ್ ಫೈನ್ ಆರ್ಟ್ಸ್’ ಇವರ ಕಾರ್ಯಕ್ಷೇತ್ರ. ಶ್ರೀಯುತರ ‘ನಾಟಕ ಪದ್ಧತಿ’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ಲಭ್ಯ.
ನಾಟಕದ ಕಲಾವಿದರಿಗೆ ಸನ್ಮಾನ :
ಎರಡನೆಯ ದಿನ ನಾಟಕ ಪ್ರದರ್ಶನದ ನಂತರ, ಪುಸ್ತಕಗಳ ಉಡುಗೊರೆಗಳನಿತ್ತು ನಿರ್ದೇಶಕರನ್ನೂ ಮತ್ತು ಎಲ್ಲಾ ಕಲಾವಿದರನ್ನೂ ಶಿಕಾರಿಪುರ ಹರಿಹರೇಶ್ವರ ಅವರು ಸಭಿಕರ ಪರವಾಗಿ ಗೌರವಿಸಿ ಸನ್ಮಾನಿಸಿದರು. ವಿಜಯಾ ಸಿಂಧುವಳ್ಳಿ ಅವರ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನದಲ್ಲಿ ಕಾರ್ಯಕ್ರಮದ ಒಟ್ಟು ನಿರ್ವಹಣೆಯನ್ನ ಹೊತ್ತಿದ್ದವರು ಡಾ।। ಎಚ್. ಕೆ. ರಾಮನಾಥ್ ಅವರು.
ನಾಟಕಕಾರರ ವಿಶ್ಲೇಷಣೆಯ ಜಾಡನ್ನು ಒಪ್ಪಲಿ ಬಿಡಲಿ, ಹರಿಶ್ಚಂದ್ರನ ಇನ್ನೊಂದು ಮುಖವನ್ನು ತೋರಿಸುವ ಪ್ರಯತ್ನದಲ್ಲಿ ಈ ನಾಟಕ ಚರ್ಚೆಗೆ ಸಾಕಷ್ಟು ಆಹಾರವಾಗಿ ನೋಡುಗರಲ್ಲಿ ಉಳಿಸಿ ಯಶಸ್ವಿಯಾಯಿತು.












Click it and Unblock the Notifications