‘ಏಳು ಸಮುದ್ರದಾಚೆ’ : ಒಂದು ರಂಗವಿಮರ್ಶೆ


ರಂಪಉ ಎಂಬುದು ಹೊಸ ಹವ್ಯಾಸಿ ರಂಗತಂಡ. ಜಾಗತೀಕರಣದ ಭರಾಟೆಯಲ್ಲಿ ಮೂಲೆಗುಂಪಾಗಿ ಮುಂದಿನ ಪೀಳಿಗೆಯವರಿಗೆ ಗುರ್ತುಸಿಗದ ಹಾಗೆ ನಶಿಸಿ ಹೋಗುತ್ತಿರುವ ಜನಪದ ಬೇರುಗಳನ್ನು ಭದ್ರವಾದ ತಳಹದಿಯಲ್ಲಿ ಹಿಡಿದು ಕಾಪಾಡುವ ಪ್ರಾಮಾಣಿಕ ಪ್ರಯತ್ನ ಈ ಹೊಸ ತಂಡದ್ದು. ಈ ತಂಡ ಪ್ರಸ್ತುತ ಪಡಿಸಿದ ‘ಏಳು ಸಮುದ್ರದಾಚೆ’ ನಾಟಕದ ಬಗ್ಗೆ ಒಂದೆರಡು ಮಾತು.

  • ನಾಗಚಂದ್ರ, ಮೈಸೂರು
ವಿದ್ಯುನ್ಮಾನ ಮಾಧ್ಯಮದಿಂದಾಗಿ ಓದುವ ಸಂಸ್ಕೃತಿ ಮರೆಯಾಗುತ್ತಿರುವ ಜತೆ-ಜತೆಯಲ್ಲಿ ರಂಗಸಂಸ್ಕೃತಿಯೂ ಮರೆಯಾಗುತ್ತಿರುವ ಈ ಹೊತ್ತಿನಲ್ಲಿ, ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುವ ಜನಪದ ಕಲೆಗಳ ಬೆಳವಣಿಗೆಗೊಂದು ಹೊಸ ರಂಗವೇದಿಕೆ ‘ರಂಪಉ’(ರಂಗ ಪಣತ ಉಬ್ಬೂರು) ದಿನಾಂಕ ಏಪ್ರಿಲ್‌ 15, 2006ರ ಸಂಜೆ ಮೈಸೂರಿನ ಕಲಾಮಂದಿರದಲ್ಲಿ ನಾಗಲಕ್ಷ್ಮಿ ಹರಿಹರೇಶ್ವರರಿಂದ ಉದ್ಘಾಟಿತವಾಯಿತು.

‘ರಂಪಉ’ ತಂಡ ಕರ್ನಾಟಕದಲ್ಲಿ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿ, ಅಂತರರಾಷ್ಟ್ರ ಮಟ್ಟದಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತರಿಸಲಿ, ರಂಗಭೂಮಿಗೆ ಹೊಸ ಆಯಾಮ ದೊರಕಿಸಲಿ ಎಂದು ನಾಗಲಕ್ಷ್ಮಿ ಹರಿಹರೇಶ್ವರ ಅವರು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ವೃತ್ತಿ ರಂಗಭೂಮಿಯ ಹಿರಿಯ ಚೇತನ, ಸಂಗೀತ ನಿರ್ದೇಶಕ ವೈ.ಎಂ. ಪುಟ್ಟಣ್ಣಯ್ಯ ಅವರನ್ನೂ, ಸುಮಾರು ಐದು ದಶಕಗಳಿಂದಲೂ ಮೈಸೂರು ಹವ್ಯಾಸಿ ರಂಗಭೂಮಿಯಲ್ಲಿ ನಟಿಸುತ್ತಿರುವ ವಿಜ್ಞಾನಿ, ಹಿರಿಯ ಕಲಾವಿದೆ ಹರಿಪ್ರಸಾದ್‌ ಅವರನ್ನೂ, ರಂಪಉ ಆತ್ಮೀಯವಾಗಿ ಸನ್ಮಾನಿಸಿತು.










ಈ ಸಂದರ್ಭದಲ್ಲಿ ಡಿ. ತಿಪ್ಪಣ್ಣನವರ ‘ಏಳು ಸಮುದ್ರದಾಚೆ’ ನಾಟಕವನ್ನು ಯು.ಎಸ್‌. ರಾಮಣ್ಣನವರ ನಿರ್ದೇಶನದಲ್ಲಿ ಪ್ರಯೋಗಿಸಲಾಯಿತು. ‘ರಂಪಉ’ ತನ್ನ ಆಶಯದಂತೆ ಜನಪದ ಕಥೆಯನ್ನು ಆಧರಿಸಿದ ನಾಟಕ. ನಾಟಕದ ಉದ್ದಕ್ಕೂ ಸಾಧ್ಯವಾದೆಡೆಯಲ್ಲೆಲ್ಲಾ ಜನಪದ ಕಲೆಗಳನ್ನು ಪ್ರದರ್ಶಿಸಿತು. ನಟ-ನಟಿಯರ ನೃತ್ಯಗತಿಯ ನಡೆ, ಕಂಸಾಳೆ ಪ್ರದರ್ಶನಕ್ಕೆ ಮೆರುಗು ನೀಡಿತು.

ಮಕ್ಕಳಿಲ್ಲದ ವೀರಧರ್ಮ ರಾಜ ಮೂವರು ಹೆಂಡಿರಿದ್ದೂ ಸಂತಾನ ಪಡೆಯಲಾಗಲಿಲ್ಲ. ಕೊನೆಗೆ ಪುತ್ರಕಾಮೇಷ್ಠಿಯಾಗವನ್ನು ಜೋಗಯ್ಯನ ಸೂಚನೆಯಂತೆ ಮಾಡಿ ಮೂವರು ಮಕ್ಕಳನ್ನು ಪಡೆದ ಕಥೆ ರಾಮಾಯಣದ ದಶರಥನನ್ನೂ, ಕುಲಗುರು ವಶಿಷ್ಠನನ್ನೂ ನೆನಪಿಗೆ ತರುತ್ತದೆ. ವೀರಧರ್ಮನ ಮೂವರು ಮಕ್ಕಳಾದ, ಅಜಯ, ವಿಜಯ, ಸುಜಯರು ಬೆಳೆದು ದೊಡ್ಡವರಾದಾಗ, ರಾಜ್ಯದ ಪುರೋಭಿವೃದ್ಧಿಯನ್ನು ಹೇಗೆ ಮಾಡುವುದು ಎಂಬ ಚರ್ಚೆಯ ಸಂದರ್ಭದಲ್ಲಿ ‘ಸಮಾಜವಾದ’ದಿಂದ ಮಾತ್ರ ರಾಜ್ಯದ ಏಳಿಗೆ ಸಾಧ್ಯ ಎಂಬ ಮನೋಧರ್ಮದ ಸುಜಯನನ್ನು ರಾಜ್ಯದಿಂದ ಬಹಿಷ್ಕರಿಸುತ್ತಾರೆ! ಕಣ್ಣು ಕಟ್ಟಿಸಿಕೊಂಡು ಕುದುರೆಯೇರಿದ ಸುಜಯ, ಕಾನನದ ಒಳಗೆ ದೇವಿಯ ಆಲಯದ ಬಳಿ ಬಂದು ಆಕೆಯ ಆಶೀರ್ವಾದದಿಂದ ಯಕ್ಷ, ರಾಕ್ಷಸ, ನಾಗರಾಜ, ಮಂತ್ರವಾದಿಯನ್ನು ಯುಕ್ತಿಯಿಂದ ಮಣ್ಣುಮುಕ್ಕಿಸಿ ಅವರನ್ನು ಗೆದ್ದು ಮಿಥಿಲೆಯ ದೊರೆಯಾಗುತ್ತಾನೆ.

ಯಕ್ಷನ ಪ್ರಶ್ನೆಗಳಿಗೆ, ಉತ್ತರಿಸುವ ಸುಜಯನ ಪ್ರಸಂಗವು ಮಹಾಭಾರತದ ರೋಚಕ ಪ್ರಸಂಗ ‘ಯಕ್ಷಪ್ರಶ್ನೆ’ಯನ್ನು ನೆನಪಿಗೆ ತರುತ್ತದೆ! ಕಾಲಾನುಕ್ರಮದಲ್ಲಿ ಭೀಕರ ಬರಗಾಲದಿಂದಾಗಿ ರಾಜ್ಯಭ್ರಷ್ಟರಾದ ಇವನ ತಂದೆ ವೀರಧರ್ಮ ಹಾಗೂ ಇವನ ಅಣ್ಣಂದಿರು ಸುಜಯನು ಆಳುತ್ತಿರುವ ಮಿಥಿಲೆಗೆ ಬಂದು, ಒಂದು ದಿನ ಅನ್ನಸತ್ರದಲ್ಲಿ ಸುಜಯನ ಕಣ್ಣಿಗೆ ಬೀಳುತ್ತಾರೆ. ಅವರನ್ನು ಗುರುತಿಸಿದ ಸುಜಯ ಅವರ ಹಿಂದಿನ ತಪ್ಪುಗಳನ್ನು ಮರೆತು ಗೌರವಿಸುತ್ತಾನೆ, ಪ್ರೀತಿಸುತ್ತಾನೆ!

ವೀರಧರ್ಮ ಈ ಬಾಂಧವ್ಯದ ಕುರುಹಾಗಿ ಅನ್ನಸತ್ರವನ್ನು ಕೆಡವಿ ಶ್ರೀರಾಮನ ದೇಗುಲವನ್ನು ನಿರ್ಮಿಸುವಂತೆ ಮಗನನ್ನು ಕೋರುತ್ತಾನೆ. ಆಗ ಶ್ರೀರಾಮನೇ ಪ್ರತ್ಯಕ್ಷನಾಗಿ ರಾಮ, ಕೇವಲ ಗುಡಿಗೋಪುರಗಳಲ್ಲಿ ಇಲ್ಲ. ಎಲ್ಲರ ಹೃನ್ಮನಗಳಲ್ಲೂ ನಾನು ಇದ್ದೇನೆ. ಸಮಾಜದ ಒಳಿತಿಗಾಗಿ ಶ್ರಮಿಸುವುದೇ ಧರ್ಮ ಎಂದು ಧರ್ಮದ ವ್ಯಾಖ್ಯಾನ ಮಾಡುವುದರೊಂದಿಗೆ ನಾಟಕ ಮುಗಿಯುತ್ತದೆ. ಅಯೋಧ್ಯೆಯಲ್ಲಿ ನಿರ್ಮಿಸಬೇಕೆಂದಿರುವ ರಾಮಮಂದಿರ ನಿರ್ಮಾಣಕ್ಕೆ ಇದನ್ನು ಥಳುಕು ಹಾಕಲಾಗಿದೆ !

ನಾಟಕದ ವಸ್ತು ಜಾನಪದವೇ ಆದರೂ ಸೂತ್ರಧಾರ, ಹಿಮ್ಮೇಳದವರ ವರ್ತಮಾನದಿಂದ ಭೂತಕ್ಕೆ ಜಿಗಿಯುತ್ತ, ಮಧ್ಯೆ ಮಧ್ಯೆ ಹಾಡುಗಳಿಂದ ಕಥೆ ಸಾಗಿಸುವ ಶೈಲಿ ಬ್ರೆಕ್ಟ್‌ ನಾಟಕ ತಂತ್ರವನ್ನು ನೆನಪಿಗೆ ತರುತ್ತದೆ. ರಂಗದ ಮೇಲೆ ಸುಮಾರು ಮುವ್ವತ್ತು ಮಂದಿ ರಂಗದ ಹಿಂದೆ ಹತ್ತುಮಂದಿ, ಒಟ್ಟು ನಲವತ್ತು ಮಂದಿಯನ್ನು ಸಂಘಟಿಸಿ ಪ್ರಯೋಗಿಸಿದ ನಿರ್ದೇಶಕ ಯು.ಎಸ್‌. ರಾಮಣ್ಣನವರ ಧೈರ್ಯವನ್ನು ಮೆಚ್ಚಲೇಬೇಕು.

ರಂಗಸಜ್ಜಿಕೆಯನ್ನು ಆಟೋ ವಿಶ್ವನಾಥ್‌ ಒಪ್ಪವಾಗಿ ಮಾಡಿದರೂ ಅದರ ಸಂಪೂರ್ಣ ಬಳಕೆ ಆಗಲಿಲ್ಲ. ರಂಗಮಂಚದ ಮೇಲು ಪಾತಳಿಯನ್ನು ನಿರ್ದೇಶಕರು ಇನ್ನಷ್ಟು ಸಮರ್ಥವಾಗಿ ಬಳಸಬಹುದಾಗಿತ್ತು! ಮಲ್ಲಿಕಾರ್ಜುನ ಶಾಸ್ತ್ರಿಯವರ ಬೆಳಕು ಪ್ರಯೋಗಕ್ಕೆ ಪೂರಕವಾಗಿದ್ದರೂ ದೃಶ್ಯ ಬದಲಾವಣೆಯಲ್ಲಿ ಬೆಳಕು ಬೀರುವಲ್ಲಿ ತಡವಾಗುತ್ತಿತ್ತು! ಪ್ರಸಾಧನ ಮಾಡಿದ ಬಿ.ಎಸ್‌.ಪಿ. ಭಟ್‌ರಂತೂ ರಾಕ್ಷಸ-ರಾಕ್ಷಸಿಯರ ಪಾತ್ರಗಳಿಗೆ ವಿಶೇಷವಾಗಿ ಬಣ್ಣಹಚ್ಚಿ ತಮ್ಮ ಕಲಾನೈಪುಣ್ಯವನ್ನು ಮೆರೆದರು!

ಸಂಗೀತ ನಿರ್ದೇಶಿಸಿದ ವೈ.ಎಂ. ಪುಟ್ಟಣ್ಣಯ್ಯ, ಮೇಳದಲ್ಲಿ ಡಿ. ತಿಪಣ್ಣ ಹಾಗೂ ಅವರೊಂದಿಗೆ ಸಾಥ್‌ ನೀಡಿದ ಎಲ್ಲರೂ ಅಚ್ಚುಕಟ್ಟಾಗಿ ಹಾಡಿದರು. ಅದರಲ್ಲೂ ಪದೇ ಪದೇ ಪುನರಾವರ್ತನೆಯಾಗುತ್ತಿದ್ದ ‘ಕುದುರೆಯನೇರಿ ಹೊರಟ’ ಹಾಡನ್ನಂತೂ ಪ್ರೇಕ್ಷಕರಲ್ಲಿ ಕೆಲವರು ಅಲ್ಲೇ ಗುನುಗುನಿಸುತ್ತಿದ್ದುದು! ಎಲ್ಲ ನಟ-ನಟಿಯರೂ ತಮ್ಮ ತಮ್ಮ ಭೂಮಿಕೆಗಳನ್ನು ಸಮರ್ಥವಾಗಿ ನಿಭಾಯಿಸಿದರು. ಅದರಲ್ಲೂ ಯು.ಎಸ್‌. ರಾಮಣ್ಣ ಸುಜಯನಾಗಿ, ವೀರಧರ್ಮನಾಗಿ ಶ್ರೀಧರನಾಗ್‌, ರಾಕ್ಷಸಿಯಾಗಿ ಎಸ್‌.ಆರ್‌. ವಿಜಯಾ, ಎರಡನೆಯ ರಾಕ್ಷಸನಾಗಿ ಎಂ.ಎಸ್‌. ಮಹದೇವ- ವಿಶೇಷ ಗಮನ ಸೆಳೆದರು.

‘ಪಣತ’ ಎಂದರೆ ಬತ್ತದ ಕಣಜ. ರಂಗಪಣತ ಉಬ್ಬೂರು ದೊಡ್ಡ ಪ್ರಮಾಣದಲ್ಲಿಯೇ ಅಧಿಕೃತವಾಗಿ ರಂಗಭೂಮಿಗೆ ದಾಖಲಾಗಿದೆ. ಹೆಸರಿಗೆ ತಕ್ಕಂತೆ ಜನಪದ ಕಲೆಗಳ ಬತ್ತದ ಕಣಜವಾಗಲಿ ಎಂಬುದೇ ರಂಗಪ್ರೇಮಿಗಳ ಆಶಯ!

*

‘ಏಳು ಸಮುದ್ರದಾಚೆ’ ನಾಟಕದ ಹಿನ್ನೆಲೆ :

ಜನಪದವೆಂದರೆ ಕಲ್ಪನೆಯ ಕಥೆಗಳ ಕಣಜ. ಆ ಕಥೆಗಳ ಹಿಂದೆ ಬದುಕಿನ ಅತ್ಯುನ್ನತ ಮೌಲ್ಯಗಳ ಪ್ರತಿಪಾದನೆ ತುಂಬಿದೆ.

ಹಿಂದೆ, ತುಂಬಿದ ಕುಟುಂಬಗಳಲ್ಲಿ ಅಜ್ಜ ಅಜ್ಜಿ ಇದ್ದರು. ಅವರುಗಳು ರಾಜಕುಮಾರ-ಕುಮಾರಿಯರ ಕಥೆ ಹೇಳುತ್ತಿದ್ದರೆ ಸುತ್ತಲೂ ಕೇಳುತ್ತಿದ್ದ ಮೊಮ್ಮಕ್ಕಳು ನೆಟ್ಟ ಕಣ್ಣು ನೆಟ್ಟ ಹಾಗೇ ಬಿಟ್ಟ ಬಾಯಿ ಬಿಟ್ಟ ಹಾಗೆ ‘ಹೂಂ’ಕರಿಸುತ್ತಿದ್ದರು. ವಿದ್ಯುನ್ಮಾನ ಈ ಯುಗದಲ್ಲಿ ಕಲ್ಪನೆಗೆ ಕೊಡಲಿ ಪೆಟ್ಟು ಬಿದ್ದು ಸೂಚ್ಯವಾಗಿದ್ದೆಲ್ಲಾ ವಾಚ್ಯವಾಗಿ ರೋಚಕತೆ ಕಳೆದುಹೋಗಿದೆ. ಕಥೆ ಕೇಳುವ ಕಂದಗಳಿಂದು ಕಂಪ್ಯೂಟರ್‌ ಮುಂದೆ ಕಣ್ಣು ‘ತೇಲಿಸಿ’ ಕುಳಿತು ‘ಸಮಯವೇ (ಟೈಂ)’ ಇಲ್ಲವಾಗಿರುವುದು ನಮ್ಮ ಪೀಳಿಗೆಯ ದುರಂತ.

ಏಳು ಸಮುದ್ರದಾಚೆ ಯಲ್ಲೂ ಅದೇ ಅಜ್ಜಿ ಕಥೆ. ಒಂದೂರಲ್ಲಿ ಒಬ್ಬ ರಾಜ. ಹೆಸರು ವೀರಧರ್ಮ ರಾಜನೆಂದಮೇಲೆ ಮೂವರು ಹೆಂಡಂದಿರು. ಮಕ್ಕಳೂ ಬೇಕಲ್ಲ? ಜೋಗಯ್ಯನ ಸೂಚನೆಯಂತೆ ಪುತ್ರಕಾಮೇಷ್ಟಿಯಜ್ಞ ಮಾಡಿದ. ಮೂವರು ಪುತ್ರರು ಜನಿಸಿದರು. ಕಿರಿಯ ಮಗ ಕಿರಿಕಿರಿ ಮಾಡಿಕೊಂಡು ತನ್ನವರಿಂದಲೇ ಉಚ್ಛಾಟನೆಗೊಂಡ. ಕಾಡು ಸೇರಿ ಅಲೆದಾಡುತ್ತಾ ದೇವಿಯ ಆಲಯದ ಮುಂದೆ ಕುಸಿದುಬಿದ್ದ. ಎಚ್ಚರಗೊಂಡು ಪ್ರಾರ್ಥಿಸಿ ವರ ಪಡೆದು ಯಕ್ಷ ರಾಕ್ಷಸ ನಾಗರಾಜ ಮಂತ್ರವಾದಿ ಮುಂತಾದವರನ್ನು ಮಣ್ಣು ಮುಕ್ಕಿಸಿ ಅಪ್ರತಿಮ ವೀರನಾಗಿ ಮಿಥಿಲೆಯ ದೊರೆಯಾದ.

ಈ ಕಡೆ ವೀರಧರ್ಮದ ರಾಜ್ಯ ಭೀಕರ ಕ್ಷಾಮಕ್ಕೆ ತುತ್ತಾಗಿ ಉಚ್ಛಾಟಿತಗೊಂಡ ಪುತ್ರನ ರಾಜ್ಯದಲ್ಲೆ ನಿರಾಶ್ರಿತನಾಗಿ ಅದೃಷ್ಟವಶಾತ್‌ ತಂದೆ ಮಕ್ಕಳ ಸಮಾಗಮ ಅನ್ನ ಛತ್ರವೊಂದರಲ್ಲಾಗುತ್ತದೆ. ತಂದೆ ತನ್ನ ಮಗನನ್ನು ಕರುಣಾಮೂರ್ತಿ ರಾಮನಿಗೆ ಹೋಲಿಸಿ ಸಂಧಿಸಿದ ಪವಿತ್ರ ಜಾಗದಲ್ಲಿರುವ ಅನ್ನ ಛತ್ರ ಕೆಡವಿ ‘ಮಂದಿರ’ ಕಟ್ಟಲು ಮುಂದಾದಾಗ ರಾಮನೇ ಪ್ರತ್ಯಕ್ಷನಾಗಿ ಕಲ್ಲು ಮಣ್ಣುಗಳ ಮಂದಿರದಲ್ಲಿ ನಾನು ನೆಲೆಸಿರುವುದಿಲ್ಲ, ಭಕ್ತಜನರ ಮನ ಮಂದಿರದಲ್ಲೆ ತನ್ನ ವಾಸವೆಂದು ಹೇಳಿ ಕೆಡವುದರ ಕೆಡಕನ್ನು ತಪ್ಪಿಸಿ ಸಂಬಂಧಗಳನ್ನು ‘ಕಟ್ಟುವ’ ಕೆಲಸ ಆ ಆದರ್ಶ ರಾಮನದಾಗುತ್ತದೆ.

ನಾಟಕಕಾರ ಡಿ. ತಿಪ್ಪಣ್ಣನ ಪರಿಚಯ :

ಗ್ರಾಮ್ಯ ವಾತಾವರಣದಲ್ಲಿ ಬೆಳೆದ ತಿಪ್ಪಣ್ಣನವರಿಗೆ ಅಲ್ಲಿಯ ಜನಪದ ಹಾಡು, ಕುಣಿತ, ನಾಟಕಗಳ ಪ್ರಭಾವ ದಟ್ಟವಾಗಿ ಬೀರಿತು. ಊರಲ್ಲಿ ಆಡುವ ನಾಟಕಗಳಲ್ಲಿ ಎಲ್ಲಾ ಬಗೆಯ ಪಾತ್ರಗಳ ನಿರ್ವಹಣೆ. ಭಾರತೀಯ ವಾಯುಸೇನೆಗೆ ಸೇರ್ಪಡೆ. ಹೋದಲ್ಲೆಲ್ಲಾ ಕನ್ನಡ ಸಂಘಗಳ ಸ್ಥಾಪನೆ, ಒಡನಾಟ, ಗ್ರಂಥಾಲಯಗಳ ಸ್ಥಾಪನೆ, ನಿರ್ವಹಣೆ, ಜೊತೆಗೆ ಕನ್ನಡಿಗರನ್ನು ಕಟ್ಟಿಕೊಂಡು ನಾಟಕ ಆಡುವುದು, ಆಡಿಸುವುದು. ಅಲ್ಲಿಂದ ಸ್ವಯಂ ನಿವೃತ್ತಿಯಾದ ಮೇಲೆ ಕೆನರಾ ಬ್ಯಾಂಕಿನಲ್ಲಿ ಸೇವೆ. ಅಲ್ಲಿಯೂ ನಾಟಕದ ಗೀಳು, ಸಹೋದ್ಯೋಗಿಗಳನ್ನು ಉತ್ತೇಜಿಸಿ ನಾಟಕಗಳ ನಿರ್ದೇಶನ, ಅಭಿನಯ. ತಾವು ನಟಿಸಿದ ಹಲವು ಕಿರುನಾಟಕಗಳ ರಂಗಪ್ರಯೋಗ, ಮೈಸೂರಿನ ಎಲ್ಲಾ ರಂಗ ತಂಡಗಳಲ್ಲೂ ವಿಭಿನ್ನ ರೀತಿಯ ಪಾತ್ರ ಪೋಷಣೆ. ಇದು ಈಗಲೂ ನಿರಂತರವಾಗಿ ಸಾಗಿದೆ.

ತಾವು ಬರೆದಿದ್ದು ಯಾರಿಗೂ ತೋರಿಸಲಿಲ್ಲ. ಗೆಳೆಯರೊಡನೆ ಹರಟುವ ಸಂದರ್ಭದಲ್ಲಿ ಏಳು ಸಮುದ್ರದಾಚೆ ನಾಟಕ ಬಯಲಾಯಿತು. ಗೆಳೆಯರ ಮುಂದೆ ಓದಿದರು. ‘ಆಡೋಣ’- ಎಂದರು ರಾಮಣ್ಣ ಆಯ್ತು ‘ಮಾಡೋಣ’ ಎಂದರು ತಿಪ್ಪಣ್ಣ. ಈ ನಾಟಕದ ವಸ್ತು ಅವರ ಅಜ್ಜಿ ಹೇಳಿದ ಕಥೆಯೇ ಆಧಾರ. ಇಲ್ಲಿ ಬಯಲುಸೀಮೆಯಲ್ಲಿ ಪ್ರಚಲಿತವಿರುವ ಜನಪದ ಹಾಡುಗಳ ಶೈಲಿ ಮತ್ತು ಮೂಡಲಪಾಯ ಯಕ್ಷಗಾನದ ಹಲವು ಕುಣಿತ ಮತ್ತು ಹಾಡುಗಳ ಮಟ್ಟುಗಳನ್ನು ಬಳಸಿಕೊಂಡು ತಿಪ್ಪಣ್ಣ ಈ ನಾಟಕಕ್ಕೆ ಒಂದು ಹೊಸ ರೂಪವನ್ನು ಕೊಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಂತಹ ಫ್ಯಾಂಟಸಿ ನಾಟಕ ಪ್ರದರ್ಶನ ಅಪರೂಪ. ಇಂಥ ಸಂದರ್ಭದಲ್ಲಿ ಏಳು ಸಮುದ್ರದಾಚೆ ಹೊಸ ಅನುಭವವನ್ನು ಪ್ರೇಕ್ಷಕರಿಗೆ ನೀಡಲು ತಿಪ್ಪಣ್ಣ ಪ್ರಯತ್ನಿಸಿದ್ದಾರೆ.

ನಿರ್ದೇಶಕ ಯು.ಎಸ್‌. ರಾಮಣ್ಣ ಅವರ ಪರಿಚಯ :

ರಾಮಣ್ಣ ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಉಬ್ಬೂರಿನವರು. ತೀರ್ಥಹಳ್ಳಿ ಮಣ್ಣೇ ಹಾಗೆ. ಅಲ್ಲಿ ಹುಟ್ಟಿ ಬಂದವರ ಗುರುತು ಅಲ್ಲಿನ ಮಣ್ಣಿನ ವಾಸನೆಯೇ ತಿಳಿಸಿಬಿಡುತ್ತದೆ. ರಾಮಣ್ಣ ಮಾನಸಗಂಗೋತ್ರಿ ಜನಪದ ಸಂಗ್ರಹಾಲಯದ ಕ್ಯೂರೇಟರ್‌ ಆಗಿದ್ದರು. ಹಾಗೇ ಅವರು ಅಭಿನಯಿಸಿದ ಕ್ಯಾರಕ್ಟರ್‌ ಯಾಕ್ಟರ್‌, ಶಾಪ, ದೊಡ್ಡಪ್ಪ, ಹಾವು ಹರಿದಾಡತಾವ, ಯಮನ ಸೋಲು, ಹದ್ದು ಮೀರಿದ ಹಾದಿ, ಧನ್ವಂತರಿ ಚಿಕಿತ್ಸೆ, ಇತ್ಯಾದಿ ನಾಟಕಗಳು ರಾಮಣ್ಣನವರ ಪ್ರಬುದ್ಧ ನಟನೆ ನಿರ್ದೇಶನಗಳಿಗೆ ಸಾಕ್ಷಿ.

ವೀರಗಾಸೆ ಕಚ್ಚೆಹಾಕಿ, ತಲೆಗೊಂದು ಪೇಟ ಸುತ್ತಿ, ಕಾಲಿಗೆ ಗೆಜ್ಜೆಕಟ್ಟಿ, ಕೈಯಲ್ಲಿ ತಾಳ ಹಾಕಿ ರಾಮಣ್ನ ಕುಣಿದರೆ ಜೊತೆಯಲ್ಲಿ ನೋಟಕರು ಕುಣಿಯದಿರರು. ರಾಮಣ್ಣ ಹಳ್ಳಿಗಳಿಗೆ ಹೋಗಿ ಕಂಸಾಳೆ ಪ್ರಾತ್ಯಕ್ಷಿಕೆ ನೀಡಿದ್ದಾರೆ. ಆಂಗಿಕಾಭಿನಯ, ಧ್ವನಿಗಳ ಬಗ್ಗೆ ಏಕಪಾತ್ರಾಭಿನಯಗಳನ್ನು ನಡೆಸಿಕೊಟ್ಟಿದ್ದಾರೆ. ಹಳ್ಳಿ ಕುಣಿತಗಳ ಬಗ್ಗೆ ಶಾಸ್ತ್ರೀಯವಾಗಿ ಅಧ್ಯಯನ ಮಾಡಿ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚಿದ್ದಾರೆ. ಜಾನಪದವೆಂದರೆ ಅವರಿಗೆ ಪ್ರಾಣ. ಅವರ ಕಾಲುಗಳು ಸದಾ ಹಳ್ಳಿಗಳ ಕಡೆಗೆ ನಡೆಯುತ್ತಿರುತ್ತವೆ. ಅವರು ಪ್ರಸ್ತುತ ಜಾನಪದ ನಾಟಕ ನಿರ್ದೇಶಕರು ಹೌದು.

ಏಳು ಸಮುದ್ರದಾಚೆ : ರಂಗದ ಮೇಲಿದ್ದ ನಟವರ್ಗ

  • ಮಾಸ್ಟರ್‌ ತರಸ್ವಿನ್‌. ವೈ.ಆರ್‌. : ಗಣಪತಿ
  • ಉಮೇಶ್‌ ಹೆಚ್‌.ಎಸ್‌. : ಸೂತ್ರಧಾರ
  • ನಾಗೇಂದ್ರ, ಸಿ.ಎಫ್‌.ಟಿ.ಆರ್‌.ಐ : ಹಿಮ್ಮೇಳ
  • ಶ್ರೀಧರ ನಾಗ್‌ : ವೀರಧರ್ಮ
  • ಡಾ. ನಾಗರಾಜ್‌. ಹೆಚ್‌ : ಮಂತ್ರಿ/ ನಾಗರಾಜ
  • ರಾಜಶೇಖರ ಕದಂಬ : ಜೋಗಯ್ಯ
  • ಸುಬ್ಬ ನರಸಿಂಹ : ಜೋಗಯ್ಯನ ಶಿಷ್ಯ
  • ನಾಗಭೂಷಣ. ಪಿ. : ಯಕ್ಷ/ ಅಗ್ನಿದೇವ
  • ರಾಮಣ್ಣ ಯು.ಎಸ್‌. : ಸುಜಯ
  • ನಾಗೇಂದ್ರಕುಮಾರ್‌. ಡಿ. : ಅಜಯ
  • ರಾಜಾರಾಂ. ಬಿ.ವಿ. : ವಿಜಯ
  • ಶ್ಯಾಮಲಾ. ಎಸ್‌.ಕೆ. : ದೇವಿ
  • ಡಾ. ವಾಸುದೇವಮೂರ್ತಿ : ರಾಕ್ಷಸ-1
  • ಆರ್‌.ಎಸ್‌. ಗಿರಿ : ಮಂತ್ರವಾದಿ
  • ತೃಪ್ತಿ ಅಭಿಜಾತ : ನಾಗಕನ್ಯೆ (ರಾಜಕುಮಾರಿ)
  • ವಿಜಯಾ. ಎಸ್‌.ಆರ್‌. : ರಾಕ್ಷಸಿ
  • ಮಹದೇವ. ಎಂ.ಎಸ್‌. : ರಾಕ್ಷಸ-2
  • ಪ್ರಭಾಕರ್‌ : ಶ್ರೀರಾಮ
  • ವಾಸುದೇವಮೂರ್ತಿ : ಪುರಜನ
  • ಶಶಿಧರ ಸಿಂಹ : ಪುರಜನ / ಮುದುಕ
  • ಜಗದೀಶ್‌. ಆರ್‌. : ಪುರಜನ / ಮುದುಕಿ
  • ಉದಯ ಹೆಜ್ಜೆಗೆಜ್ಜೆ : ಪುರಜನ / ಕಿವುಡ
  • ಶ್ರೇಯಾ. ವೈ.ಎಸ್‌. : ಪುರಜನ
  • ಮಧುಕೇಸರಿ : ಸೈನಿಕ / ಪುರಜನ
  • ಕೈಲಾಶ್‌ ಕೌಶಿಕ್‌ : ಸೈನಿಕ / ಪುರಜನ
ರಂಗದ ಹಿಂದೆ ನೇಪಥ್ಯದಲ್ಲಿ...
  • ನಾಟಕ ರಚನೆ : ಡಿ. ತಿಪ್ಪಣ್ಣ
  • ಸಂಗೀತ : ವೈ.ಎಂ. ಪುಟ್ಟಣ್ಣಯ್ಯ
  • ಮೇಳ : ಗೀತಾ ವಿಜಯಾ, ಡಿ. ತಿಪ್ಪಣ್ಣ, ಡಿ. ಕೃಷ್ಣಮೂರ್ತಿ, ರೋಹಿಣಿ, ನಾಗೇಂದ್ರ, ರವೀಂದ್ರ
  • ರಂಗಸಜ್ಜಿಕೆ : ಆಟೋ ವಿಶ್ವನಾಥ್‌
  • ಬೆಳಕು : ಮಲ್ಲಿಕಾರ್ಜುನ ಶಾಸ್ತ್ರಿ
  • ಪ್ರಸಾಧನ : ಬಿ.ಎ.ಪಿ. ಭಟ್‌
  • ಪ್ರಚಾರ : ಶ್ರೀಕಂಠ ಗುಂಡಪ್ಪ
  • ನೃತ್ಯ ಸಂಯೋಜನೆ : ಸಮತಾ ಎನ್‌.ಆರ್‌., ರಾಮಣ್ಣ ಯು.ಎಸ್‌.
  • ಭಿತ್ತಿ ಚಿತ್ರ, ಕೈಹೊತ್ತಿಗೆ ವಿನ್ಯಾಸ : ರಾಜಶೇಖರ ಕದಂಬ
  • ನಿರ್ದೇಶನ : ರಾಮಣ್ಣ. ಯು.ಎಸ್‌.

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+