• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾತ್ರಗಳ ಮೂಲಕ ವೈಚಾರಿಕತೆ ಮಿಡಿದ ಶಾಂತಿನಾಥ ದೇಸಾಯಿ

By Staff
|

ಮಾರ್ಚ್‌ 26, ಖ್ಯಾತ ಸಾಹಿತಿ ದಿವಂಗತ ಶಾಂತಿನಾಥ ದೇಸಾಯಿ ಅವರ ಪುಣ್ಯತಿಥಿ. ಈ ಸಂದರ್ಭದಲ್ಲಿ ಅವರು ಸೃಜಿಸಿದ ಸಾಹಿತ್ಯ, ಬೆಳೆದ ಪರಿಸರ ಹಾಗೂ ವಸ್ತುನಿಷ್ಠ ಮನೋಧರ್ಮದಿಂದಲೇ ಅವರು ಬಾಳಿದ ಪರಿಯ ಕುರಿತು ಒಂದು ಕಿರುನೋಟ.

ಅವರು ಜೀವನಕ್ಕೆ ಸ್ಪಂದಿಸುವ ರೀತಿಯನ್ನು ತಮ್ಮ ‘ಸಂಬಂಧ’ ಕಾದಂಬರಿಯಲ್ಲಿ ಹೇಳಿದ್ದಾರೆ, ‘ಬುದ್ಧಿಯನ್ನು ಬಿಟ್ಟು, ಪ್ರಜ್ಞೆಯನ್ನು ಬಿಟ್ಟು ಬೇರೆ ಯಾವ ರೀತಿಯಿಂದಲೂ ಜೀವನವನ್ನು ತಿಳಿದುಕೊಳ್ಳುವುದು ಅಶಕ್ಯ. ಅಂತೆಯೇ ನನ್ನ ಅನುಭವಗಳನ್ನು, ವಸ್ತುನಿಷ್ಠವಾಗಿ ನನ್ನ ಮುಂದಿಟ್ಟು , ತಿಳಿಗಣ್ಣಿನಿಂದ ವಿಶ್ಲೇಷಿಸಿ ನೋಡುವುದೇ ನನ್ನ ಕಥೆ ಕಾದಂಬರಿಗಳ ಹಿಂದಿನ ಮೂಲ ಪ್ರೇರಣೆ. ಇಂಥ ಸೃಷ್ಟಿಯಿಂದ ಕೊನೆಗೆ ಕೈಗೆ ಹತ್ತುವುದಾದರೂ ಏನು? ಬಹುಶಃ ವಿಶೇಷವಾದದ್ದೇನೂ ಕೈಗೆ ಹತ್ತಲಾರದು. ಆದರೆ ಅದು ನನ್ನ ಜೀವನದ ಕ್ರಿಯೆಯ ರೀತಿ. ನಾನು ಜೀವನಕ್ಕೆ ಸ್ಪಂದಿಸುವ ರೀತಿ. ಜೀವನದಲ್ಲಿ ಅರ್ಥ ಶೋಧಿಸುವ ರೀತಿ. ಅರ್ಥ ತುಂಬುವ ರೀತಿ.‘ಈ ವಸ್ತುನಿಷ್ಠ ಮನೋಧರ್ಮದಿಂದಲೇ ಅವರು ಕೊನೆಯವರೆಗೂ ಬಾಳಿದರು’. ಅವರು ಜೈನರಾಗಿದ್ದರೂ ಜೈನ ಧರ್ಮವನ್ನು ಈ ದೃಷ್ಟಿಯಿಂದಲೇ ನೋಡಿದರು ಎಂಬುದು ಅವರು ‘ಓಂ ಣಮೋ’ ಕಾದಂಬರಿಯ ಆನ್‌ ಎಲಿಂಗ್ಟನ್‌ ಎಂಬ ವಿದೇಶೀ ಮಹಿಳೆಯ ಕಣ್ಣಿನ ಮೂಲಕ ವಿಶ್ಲೇಷಿಸುವುದರಿಂದ ತಿಳಿಯುತ್ತದೆ. ಆವರು ಯಾವಾಗಲೂ ಪ್ರತಿಯೊಬ್ಬರೂ ತಮ್ಮ ಪ್ರಯೋಗಗಳನ್ನು ಮಾಡಬೇಕು, ನಿಷ್ಪಕ್ಷಪಾತವಾಗಿ ಮಾಡಬೇಕು ಎಂದು ಹೇಳುತ್ತಿದ್ದರು. ಸಾಹಿತಿಗಳು ಜೀವನವನ್ನು ಇದೇ ದೃಷ್ಟಿಯಿಂದ ನೋಡಿ ಬರೆಯಬೇಕು.

ನಾನು ಇವರ ಮತ್ತು ಎಸ್‌. ಎಲ್‌. ಭೈರಪ್ಪನವರ ಕಾದಂಬರಿಗಳನ್ನು ಬಹಳ ಆಸಕ್ತಿಯಿಂದ ಓದುತ್ತಿದ್ದೆ. ಅವರು ವಂಶವೃಕ್ಷ ಕಾದಂಬರಿಯ ಕಥಾ ಹಂದರವನ್ನು ಬಹಳ ಮೆಚ್ಚಿಕೊಂಡಿದ್ದರು. ‘ಪಾತ್ರಗಳಲ್ಲಿ ವೈಚಾರಿಕತೆಯ ಜೊತೆಗೆ ರಕ್ತಮಾಂಸಗಳನ್ನು ತುಂಬಬೇಕು. ಅವು ಜೀವಂತವಾಗಿರಬೇಕು. ಲವಲವಿಕೆಯಿಂದಿರಬೇಕು. ವಂಶವೃಕ್ಷದಲ್ಲಿ ವಿಧವೆ ಕಾತ್ಯಾಯನಿಯು ಪಾಪಪ್ರಜ್ಞೆಯಿಂದ ಸಾಯುತ್ತಾಳೆ. ಅವಳು ನನಗೆ ಹಾಗೆ ಸಾಯುವುದು ಬೇಡಾಗಿತ್ತು. ಅವಳು ಮೃತ್ಯುಮುಖಿಯಾಗದೇ ಜೀವನ್ಮುಖಿಯಾಗಬೇಕಿತ್ತು. ಅವಳನ್ನು ನಾನು ನನ್ನ ‘ಸಂಬಂಧ’ ಕಾದಂಬರಿಯಲ್ಲಿ ವಿಧವೆ ರಾಧಿಕೆಯ ಪಾತ್ರದಲ್ಲಿ ಬದುಕಲು ಹಚ್ಚಿದೆ’ ಎಂದು ಒಮ್ಮೆ ನನಗೆ ಹೇಳಿದ್ದರು.

ಈ ಇಬ್ಬರೂ ಸಾಹಿತಿಗಳು ಬೇರೆ ಬೇರೆ ವಾತಾವರಣದಲ್ಲಿ ಬೆಳೆದ ಬೇರೆ ಬೇರೆ ಮನೋಧರ್ಮದ, ದೃಷ್ಟಿಕೋನದ ಪ್ರಬುದ್ಧ ಸಾಹಿತಿಗಳು. ಇವರಿಬ್ಬರೂ ಕನ್ನಡ ಸಾಹಿತ್ಯಕ್ಕೆ ಅಮೂಲ್ಯವಾದ ಪಾತ್ರಗಳನ್ನು ಸೃಷ್ಟಿಸಿಕೊಟ್ಟಿದ್ದಾರೆ. ಭೈರಪ್ಪನವರ ಕಾತ್ಯಾಯನಿಯ ಸಾವೇ ಶಾಂತಿನಾಥರ ರಾಧಿಕೆಯ ಹುಟ್ಟಿಗೆ ಕಾರಣವಾಗಿರಬಹುದು. ಪ್ರೇರಣೆಯಾಗಿರಬಹುದು. ಇದು ಒಂದು ಆರೋಗ್ಯಕರ ವಿಚಾರಧಾರೆ. ರಾಧಿಕೆ ಶಿಕ್ಷಿತ, ಜಾಣ, ದಿಟ್ಟ, ಧೈರ್ಯವಂತ ವಿಧವೆ. ಮೊದಲು ಪ್ರೊಫೆಸರ್‌ ಶೀತಲ್‌ಕುಮಾರ್‌ ಅವಳಲ್ಲಿ ಅನುರಕ್ತನಾದರೂ, ಅವಳು ಶೇಖರನ ಕಾಮುಕ ಕಣ್ಣಿಗೆ ಬಲಿಯಾಗುವಾಗ ಶೀತಲನ ಹೃದಯದಲ್ಲಿ ಹುಟ್ಟಿದ ಪ್ರೀತಿ ಪೋಷಕನ ಪ್ರೀತಿಯಾಗುತ್ತದೆ. ಅವಳಿಗೆ ಹೊಸ ಜೀವನ ಕಲ್ಪಿಸಿಕೊಡುವಾಗ ಹೊಣೆಗಾರಿಕೆಯ ಮತ್ತು ತಿಳಿವಳಿಕೆಯ ಪ್ರೀತಿಯಾಗುತ್ತದೆ. ನಿಷ್ಕಪಟ ಪ್ರೇಮಕ್ಕೆ ಈ ಎಲ್ಲ ಆಯಾಮಗಳು ಇವೆ ಎಂದು ಎರಿಕ್‌ ಫ್ರಾಮ್‌ ಹೇಳಿದ್ದಾನೆ. ಶೀತಲಕುಮಾರನ ಪ್ರೀತಿ ಕಾದಂಬರಿಗುಂಟ ಈ ಎಲ್ಲ ರೂಪಗಳನ್ನು ತಳೆಯುತ್ತ ಹೋಗುತ್ತದೆ.

ಅವರ ‘ಮುಕ್ತಿ’ ಕಾದಂಬರಿ ಧಾರಾವಾಹಿಯಾಗಿ ಪ್ರಕಟಗೊಳ್ಳುತ್ತಿರುವಾಗ ಅದರ ನಾಯಕ ಗೌರೀಶನ ಪ್ರೇಮದಲ್ಲಿ ಅಂದಿನ ಯುವಕರು ತಮ್ಮ ಸಂದಿಗ್ಧ ಮನಸ್ಥಿತಿಯನ್ನು ಗುರುತಿಸಿಕೊಳ್ಳುತ್ತಿದ್ದರು. ಅದರ ಪ್ರತಿ ಕಂತನ್ನು ಕಾತರದಿಂದ ಕಾಯಿತ್ತಿದ್ದೆವೆಂದು ಇಂದಿನ ವೃದ್ಧರು ನನಗೆ ಹೇಳುತ್ತಾರೆ. ಅಂದಿನ ಯುವಕರಲ್ಲಿ ಈ ಕಾದಂಬರಿ ಅಷ್ಟೊಂದು ಗಾಢ ಪ್ರಭಾವವನ್ನು ಬೀರಿತ್ತು.

ಶಾಂತಿನಾಥರು ಪಾತ್ರಗಳಲ್ಲಿ ಜೀವತುಂಬುವ ರೀತಿ, ಎಡೆಬಿಡದೆ ಓದಿಸಿಕೊಂಡು ಹೋಗುವ ಸಂಭಾಷಣೆ ಹೆಣೆಯುವ ಕಲೆ ಅನನ್ಯವಾದುದು. ಅವರ ಪ್ರತಿ ಕಥೆ, ಕಾದಂಬರಿಯಲ್ಲಿ ಹೊಸತನ ಇದ್ದೇ ಇರುತ್ತಿತ್ತು. ‘ಸೃಷ್ಟಿ’ ಕಾದಂಬರಿಯನ್ನು ಹೊಸ ತಂತ್ರ-ವಿನ್ಯಾಸಗಳನ್ನು ಬಳಸಿಕೊಂಡು ಬರೆದಿದ್ದಾರೆ. ತಮ್ಮ ಪ್ರಯೋಗಾತ್ಮಕ ಬರವಣಿಗೆಯಿಂದ ಕಾದಂಬರಿಯ ಪ್ರಕಾರವನ್ನು ಜೀವಂತವಾಗಿರಿಸಿದ್ದಾರೆ, ಸಮೃದ್ಧಗೊಳಿಸಿದ್ದಾರೆ. ಅವರ ಕಾದಂಬರಿಗಳು ಮನೋರಂಗದಲ್ಲಿಯೇ ನಡೆದು ಹೋಗುತ್ತವೆ. ನಿಸರ್ಗ ನೇಪಥ್ಯಕ್ಕೆ ಸರಿಯುತ್ತದೆ. ಇವರ ಬರವಣಿಗೆ ಕನ್ನಡ ಕಾದಂಬರಿ ಲೋಕದಲ್ಲಿ ಈ ಪ್ರಮುಖ ಬದಲಾವಣೆಯನ್ನು ತಂದಿತು ಎಂದು ಹೇಳಬಹುದು.

ಇವರು ಮೂಲತಃ ಕಾರವಾರ ಜಿಲ್ಲೆಯ ಹಳಿಯಾಳ ಮತ್ತು ಹವಗಿಯವರು. ಇವರ ಕಾದಂಬರಿಯಲ್ಲಿ ಬರುವ ಕೃಷ್ಣಾಪುರದ ಓಣಿಗಳು, ಮನೆಗಳು ಮುತ್ತಿನಕೆರೆ ಇಲ್ಲಿಯೇ ಇವೆ. ಬಸ್ತಿ, ಹೊಂಡಗಳು ಹವಗಿಯಲ್ಲಿವೆ. ಇವರ ಪಾತ್ರಗಳು ಆಡುವ ಮಾತುಗಳು ಇಲ್ಲಿಯ ಆಡುಭಾಷೆಯಾಗಿರುತ್ತದೆ. ಇಂಥ ಶ್ರೇಷ್ಠ ಸಾಹಿತಿ ನಮ್ಮಿಂದ ದೂರ ಹೋದರೂ ಅವರು ಸೃಷ್ಟಿಸಿದ, ಆಧುನಿಕ ಜೀವನಕ್ಕೆ ಸ್ಪಂದಿಸುವ, ಜೀವನೋತ್ಸಾಹ ಚಿಮ್ಮುವ, ಪ್ರೇಮಕ್ಕೆ ಹಾತೊರೆಯುವ, ಕಿಲಾಡಿತನ ಮಾಡುತ್ತಲೇ ಬದುಕನ್ನು ಉತ್ಕಟವಾಗಿ ಪ್ರೀತಿಸುವ, ಜೀವನದ ಅರ್ಥವನ್ನು ಹುಡುಕುತ್ತಲೇ ಓದುಗನನ್ನು ವಿಚಾರಕ್ಕೆ ತೊಡಗಿಸುವ, ಅವರ ಪಾತ್ರಗಳ ಮುಖಾಂತರ ಶಾಂತಿನಾಥರು ಕನ್ನಡಿಗರ ಹೃದಯಗಳಲ್ಲಿ ಇನ್ನೂ ಇದ್ದಾರೆ. ಅವರ ‘ಓಂ ಣಮೋ’ ಕಾದಂಬರಿಯ ಮುನ್ನುಡಿಯಲ್ಲಿ ಕೆ.ವಿ. ತಿರುಮಲೇಶ ಹೇಳಿದಂತೆ ‘ಶಾಂತಿನಾಥರು ನಮಗೆ ಎಂದರೆ ಆಧುನಿಕ ಕನ್ನಡಕ್ಕೆ ಪಂಪ ರನ್ನರ ಸಮಾನ!’

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more