ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೇಪರ್‌ ಪಾರಾಯಣ ಅಲ್ಲ ಪುರಾಣ!

By Staff
|
Google Oneindia Kannada News


ನಮ್ಮೂರಿನಲ್ಲಿ ಪತ್ರಿಕೆಗಳನ್ನು ನಾನಾ ಉದ್ದೇಶಕ್ಕೆ ಬಳಸುವವರಿದ್ದಾರೆ. ದಿನದಲ್ಲಿ ಆರು ತಾಸು ದಿನಪತ್ರಿಕೆ ಹಿಡಿದುಕೊಂಡು ಕೂರುವವರಿಗೇನು ಬರವಿಲ್ಲ. ಹೀಗೆ ಇಲ್ಲೊಬ್ಬರು ಊರಿನಲ್ಲಿ ಹಣವಿದ್ದವರ ಸಾಲಿಗೆ ಸೇರುವ ಗೌರವಾನ್ವಿತ ಜನ, ನಾವು ನೋಡಿದಾಗಲೆಲ್ಲ ದಿನಪತ್ರಿಕೆ ಬಿಡಿಸಿಕೊಂಡು ಕುಳಿತಿರುತ್ತಿದ್ದರು. ನಾವು ಹತ್ತಿರ ಹೋದರೆ ಕೆಳಗಿದ್ದ ಪತ್ರಿಕೆ ಎರಡೂ ಕೈಯಲ್ಲಿ ಎತ್ತಿ ಹಿಡಿದು ಗಹನವಾಗಿ ಓದಲು ಶುರುವಿಟ್ಟುಕೊಳ್ಳುತ್ತಿದ್ದರು. ಹಾಗಂತ ಅಷ್ಟು ಹೊತ್ತು ಓದಿದರೂ ಅವರಿಗೆ ಯಾವ ವಿಷಯವೂ ಗೊತ್ತಿರುತ್ತಿರಲಿಲ್ಲ. ರಾಜೀವ ಗಾಂಧಿ ಸತ್ತದಿನವೂ, ದೇವೆಗೌಡರು ಪ್ರಧಾನಿಯಾದ ದಿನವೂ ನಾವು ವಿಷಯ ಹೇಳಿದ ಮೇಲೆ ಹೌದಾ ಎನ್ನುತ್ತಿದ್ದರು. ನಮಗೆ ಇದೊಂದು ವಿಚಿತ್ರ, ಬೆಳಿಗ್ಗೆಯಿಂದ ಸಂಜೆವರೆಗೂ ಪೇಪರ್‌ ಹಿಡಿದುಕೊಂಡಿರುವ ಇವರು ಏನು ಮಾಡುತ್ತಾರೆ ಎಂಬ ಗುಮಾನಿ.

ನಮ್ಮ ತಂಡದಲ್ಲೊಬ್ಬನಿಗೆ ಅವರು ಪತ್ರಿಕೆಯ ಮಧ್ಯೆ ಅಶ್ಲೀಲ ಪುಸ್ತಕ ಇಟ್ಟುಕೊಂಡು ಓದುತ್ತಾರೆ ಎಂಬ ಸ್ವಾನುಭವದ ಅನುಮಾನ. ಕೊನೆಗೊಂದು ದಿನ ಗೆಳೆಯರ ತಂಡ ಇದರ ಮರ್ಮವನ್ನು ಪತ್ತೆ ಮಾಡಬೇಕೆಂದು ತೀರ್ಮಾನಿಸಿತು . ಆದರೆ ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಊರಿಗೆ ದೊಡ್ಡ ಜನ, ಸೀದಾ ಹೋಗಿ ಇಣಕುವಂತಿಲ್ಲ. ಸರಿ ಅದಕ್ಕೊಂದು ಉಪಾಯ ಸಿದ್ಧವಾಯಿತು. ಅವರು ಓದುವ ಸಮಯದಲ್ಲಿ ಹಿತ್ತಲಲ್ಲಿ ಹಾವು ಹಾವು ಎಂದು ಗಾಬರಿಯಿಂದ ಬೊಬ್ಬೆ ಹಾಕಿ ಅವರನ್ನು ಕೂಗುವುದು ಅವರು ಅತ್ತ ಹೋದಾಗ ಇತ್ತ ಒಬ್ಬ ಪತ್ತೆ ಮಾಡುವುದು ಎಂದು ಸರ್ವಾನುಮತದಿಂದ ತೀರ್ಮಾನಿಸಿ ಆಚರಣೆಗೆ ತರಲಾಯಿತು.ನಂತರ ಪತ್ತೆಯಾಗಿದ್ದಿಷ್ಟೆ ದಿನಪತ್ರಿಕೆಯ ಮಧ್ಯಪುಟದಲ್ಲಿ ಮಟ್ಕಾದ ಸಂಖ್ಯೆ ಮೂರ್ನಾಲ್ಕು ತಿಂಗಳಿನಿಂದ ಯಾವುದು ಬಂದಿದೆ ಎಂದು ವಿವರಿಸುವ ಬಣ್ಣ ಬಣ್ಣದ ಚಾರ್ಟ್‌ ಇತ್ತು. ಮಟ್ಕಾ ಆಡುತ್ತಾರೆ ಎಂದು ತಿಳಿದರೆ ಯೋಗ್ಯತೆಗೆ ಕುಂದು ಬರುತ್ತದೆ ಎಂದು ಅವರು ದಿನಪತ್ರಿಕೆಯ ಮೊರೆಹೋಗಿದ್ದರು.

ನಮ್ಮ ಊರಿನ ಕಿರಾಣಿ ಅಂಗಡಿಮಾಲಿಕರದ್ದು ಮತ್ತೊಂದು ಕತೆ ಅವರು ಭಾಷೆಗಳ ಬೇಧವೆಣಿಸದೆ ಪ್ರಕಟವಾಗುವ ಎಲ್ಲಾ ದಿನಪತ್ರಿಕೆಗಳನ್ನು ತರಿಸುತ್ತಿದ್ದರು. ಹಾಗಂತ ಅಬ್ಬಾ ಎಂಥಾ ಪುಸ್ತಕ ಪ್ರೇಮಿ ಎಂದೆಣಿಸದಿರಿ. ಅವರು ತರಿಸುತ್ತಿದ್ದುದು ಶುಕ್ರವಾರದ ಪತ್ರಿಕೆಯನ್ನು ಮಾತ್ರ. ಓ ಇವರು ಸಿನೆಮಾ ಪ್ರೇಮಿ ಅಂದುಕೊಂಡೀರಿ, ಅದೂ ಅಲ್ಲ ಅವರಿಗೆ ಬೇಕಾಗಿದ್ದುದು ಅಂದು ಪ್ರಕಟವಾಗುತ್ತಿದ್ದ ನಟಿಯರ ವಿಶೇಷ ಭಂಗಿಯ ಬ್ಲೋಅಪ್‌ ಚಿತ್ರಗಳು. ಅದನ್ನು ಚಂದವಾಗಿ ಕತ್ತರಿಸಿ ಬೆಳೆಕಾಳು ಹಾಕಿಡುವ ಡಬ್ಬಕ್ಕೆ ಅಂಟಿಸಿಟ್ಟುಕೊಳ್ಳುತ್ತಿದರು. ನಾಲ್ಕು ಮುಖವಿರುವ ತಗಡಿನ ಡಬ್ಬಕ್ಕೆ ಮೂರು ಕಡೆ ಈ ತರಹದ ಚಿತ್ರ ಒಂದು ಕಡೆ ದೇವರ ಚಿತ್ರ ಅಂಟಿಸಿಡುತ್ತಿದ್ದರು. ಗಿರಾಕಿಗಳಿಗೆ ಕಾಣಿಸುವುದು ದೇವರ ಚಿತ್ರ ಆಮೇಲೆ ತಮಗೆ ಇಷ್ಟವಾದ ಚಿತ್ರ ನೋಡಿಕೊಳ್ಳುತ್ತಿದ್ದರು.ಅವರು ಅಷ್ಟರಮಟ್ಟಿಗಿನ ಪತ್ರಿಕಾ ಪ್ರೇಮಿ.

ಪೇಪರ್‌ ಎಂದರೆ ಅದರ ಅರ್ಥ ದಿನಪತ್ರಿಕೆ ಎಂದು ತಿಳಿದ ಅಜ್ಜಿಯಾಬ್ಬಳು ನಮ್ಮ ಮನೆಯಲ್ಲಿದ್ದಳು. ಯಾರೋ ಅವರ ಕಿವಿಗೆ ಅಮೆರಿಕಾದಲ್ಲಿ ಕಕ್ಕಸಿಗೆ ಹೋದ ನಂತರ ಶುಚಿಮಾಡಿಕೊಳ್ಳಲು ನೀರನ್ನು ಬಳಸದೆ ಪೇಪರ್‌ ಬಳಸುತ್ತಾರೆ ಎಂಬ ಸುದ್ದಿಯನ್ನು ತಲುಪಿಸಿದ್ದರು. ಅದೊಂದೇ ಕಾರಣದಿಂದ ಅವರಿಗೆ ಆ ದೇಶದ ಮೇಲೆ ಬಹಳ ಸಿಟ್ಟು. ನನ್ನ ಮಾವನ ಮಗ ಅಮೇರಿಕಾದಿಂದ ಬಂದಿದ್ದ. ‘‘ಅವರೆಂತಾ ಜನವೋ, ಪೇಪರ್‌ ಎಂದರೆ ಸರಸ್ವತಿ ಅಂಥಾದ್ದನ್ನು....... ಅಯ್ಯೋ ಪರಮಾತ್ಮ ಆ ದೇಶದ ಸುದ್ದಿ ನನ್ನ ಬಳಿ ಎತ್ತಬೇಡ, ನೀನು ಮತ್ತೆ ಅಲ್ಲಿಗೆ ಕಾಲಿಡಬೇಡ’’ ಎಂದು ಹಠ ಹಿಡಿದುಬಿಟ್ಟಿದ್ದಳು. ಅದು ಅಕ್ಷರಗಳಿರುವ ದಿನಪತ್ರಿಕೆ ಅಲ್ಲ ಟಿಶ್ಯುಪೇಪರ್‌ ಅಂತ ಖಾಲಿ ಕಾಗದ ಎಂದು ವಿವರವಾಗಿ ಸಮಜಾಯಿಶಿ ನೀಡಿದ ಮೇಲೆ ‘‘ಮತ್ತೆ ಮೇಲಿನಮನೆ ಮುಂಡೆಗಂಡ ನನ್ನ ಬಳಿ ಕಕ್ಕಸು ತೊಳೆಯಲು ಪೇಪರ್‌ ಬಳಸುತ್ತಾರೆ ಎಂದು ಸುಳ್ಳು ಹೇಳಿದನಲ್ಲೊ’’ ಎಂದು ತಾನು ತಿಳಿದುಕೊಂಡಿದ್ದೆ ಸರಿ ಎಂಬಂತೆ ಸಮಾಧಾನ ಪಟ್ಟುಕೊಂಡಿದ್ದಳು.

ಹೀಗೆ ಪತ್ರಿಕೆಗಳಿಂದಾಗುವ ಪುರಾಣಗಳನ್ನು ಹೇಳುತ್ತಾ ಸಾಗಿದರೆ ಅದಕ್ಕೊಂದು ಅಂತ್ಯವೇ ಇಲ್ಲ. ಜನಸಾಮಾನ್ಯರಿಗೆ ಪ್ರತಿನಿತ್ಯದ ಸುದ್ದಿಯನ್ನು ತಿಳಿಸಲಿರುವ ಪತ್ರಿಕೆಗಳಿಂದಲೇ ಸುದ್ದಿಯಾಗುವ ಅಚ್ಚರಿಗಳು ಹಲವಾರು ಸಿಗುತ್ತಲೇ ಇರುತ್ತವೆ. ಒತ್ತಡದ ಇಂದಿನ ದಿನಗಳಲ್ಲಿ ಮುಖದಲ್ಲಿ ಒಂದು ಸಣ್ಣ ನಗು ಮಿಂಚಿ ಮಾಯವಾಗಲು ಪತ್ರಿಕೆಗಳು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸುತ್ತವೆ. ಸುದ್ದಿಮಾಡಲು ಹೋಗಿ ಸುದ್ದಿಯಾಗುತ್ತವೆ ಎಂಬ ಪ್ರಕ್ರಿಯೆ ನಿರಂತರ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X