ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಚುರಾಮರ ಆಯುಧಗಳು

By Staff
|
Google Oneindia Kannada News


ಕೆಲವರು ಮೈಕೈ ಪರಚಿಕೊಳ್ಳುತ್ತಾರೆ, ಜೊತೆಗೆ ಇನ್ನೊಬ್ಬರನ್ನೂ ಪರಚುತ್ತಾರೆ. ಯಾಕೊ?

  • ನಾಗಲಕ್ಷ್ಮೀ ಹರಿಹರೇಶ್ವರ, ಸರಸ್ವತೀಪುರಂ, ಮೈಸೂರು
    [email protected]
Nagalakshmi Harihareshwaraರಾಮಾಯಣದ ಬಾಲಕಾಂಡದಲ್ಲಿ ಒಂದು ಪಾತ್ರ ಬರುತ್ತದೆ. ‘ಅಸಮಂಜ’ ಅಂತ ಒಬ್ಬ ಇದ್ದನಂತೆ. ಅವನು ಏನು ಮಾಡ್ತಾ ಇದ್ದನಂತೆ ಅಂದರೆ, ತನ್ನ ಕೈಗೆ ಸಿಕ್ಕ ಚಿಕ್ಕ ಚಿಕ್ಕ ಮಕ್ಕಳನ್ನೆಲ್ಲಾ ಎತ್ತುಕೊಂಡು ಹೋಗಿ, ಆಳವಾದ ಬಾವಿಗೆ ಬಿಸಾಡಿ, ಕೈ ತಟ್ಟಿ ನಕ್ಕು ಸಂತೋಷ ಪಡ್ತಾ ಇದ್ದನಂತೆ. ತಮ್ಮ ಕೈಲಿ ಏನು ಮಾಡಲೂ ಆಗದೇ ಇದ್ರೂ ಸಹ, ಕಂಡವರ ಮಕ್ಕಳನ್ನ ಬಾವಿಗೆ ತಳ್ಳಿ, ಅವರಿಗೆ ಹಿಂಸೆ ಕೊಟ್ಟು ಖುಷಿ ಪಡೋ ಈ ‘ಅಸಮಂಜ’ನಂಥ ಜನ ಈಗಿನ ಕಾಲದಲ್ಲೂ ಕಡಿಮೆ ಏನೂ ಇಲ್ಲ!

ಹಿಂಸೆ ಅಂದರೆ ದೈಹಿಕ ಹಿಂಸೇನೇ ಆಗಬೇಕಾದ್ದಿಲ್ಲ; ಮಾನಸಿಕ ಹಿಂಸೇನೂ ಆಗಬಹುದು. ರಾಮಾಯಣದ ಮಂಥರೇನೇ ತೊಗೊಳ್ಳಿ. ಹೇಳಿ ಕೇಳಿ ಅವಳು ಕೈಲಾಗದ ಕುಬ್ಜೆ, ದಾಸಿ, ಶಕ್ತಿಹೀನೆ. ಕೈಕೇಯಿಗೆ ಅವಳು ಮಾಡಿದ ದುರ್ಬೋಧೆ ಎಷ್ಟೆಲ್ಲಾ ಅನಾಹುತಕ್ಕೆ ಕಾರಣವಾಯ್ತು! ಮಹಾಭಾರತದ ಶಕುನಿ ಇನ್ನೇನು? ಅವನೇನು ಮಹಾ ಶಕ್ತಿವಂತನೇ? ತನ್ನ ಕುಟಿಲೋಪಾಯಗಳಿಂದ ಎಂತೆಂಥ ಘಟಾನುಘಟಿಗಳನ್ನ ಮಣ್ಣುಮುಕ್ಕಿಸಿದ. ಇದನ್ನೂ ಎಲ್ಲರೂ ಬಲ್ಲರು.

ಮೃಚ್ಛಕಟಿಕ ನಾಟಕದ ‘ಶಕಾರ’ನೂ ಹಾಗೆಯೇ. ಹುಚ್ಚು ಹುಚ್ಚಾಗಿ ವರ್ತಿಸುತ್ತಾ ಬೇರೆಯವರಿಗೆ ಅವನು ಕೊಡುವ ತೊಂದರೆ ಅಷ್ಟಿಷ್ಟಲ್ಲ. ಇವನೇನು ಮಹಾ ಪರಾಕ್ರಮಿಯಲ್ಲ. ಯಾವತ್ತೋ ತಮಗಾದ ಚಿಕ್ಕ ಪುಟ್ಟ ಅವಮಾನವನ್ನು ತಾಳಿಕೊಳ್ಳಲಾರದೇ, ಸೇಡಿನ ಮನೋಭಾವದಿಂದ ಬೇರೆಯವರಿಗೆ ಯಮಯಾತನೆ ಉಂಟುಮಾಡುವ ಕೆಲಸ ನಡೆಸುವವರು ಯಾರು ಅಂತೀರಿ? ನಿಶ್ಶಕ್ತರೇ. ಹಾಗೆ ನೋಡಿದರೆ, ಹಲವಾರು ಮಹಾಕಾವ್ಯಗಳಲ್ಲಿ, ಭಾರೀ ಹಿಂಸೆಗೆ ಮೂಲಕಾರಣರಾಗುವ ಜನರೆಲ್ಲಾ ಸಾಮಾನ್ಯವಾಗಿ ದುರ್ಬಲರೇ, ಕೈಲಾಗದವರೇ!

ನಾನು ಕಣ್ಣಾರೆ ಕಂಡದ್ದನ್ನ ಹೇಳ್ತೀನಿ ಕೇಳಿ: ಒಂದು ಬಡ ಕುಟುಂಬ. ಗಂಡ ತುಂಬಾ ಓದಿದವನಲ್ಲ. ಆದ್ದರಿಂದ ಏನೋ ಕೂಲಿ ಪಾಲಿ ಕೆಲಸ. ಹೆಂಡತಿಯೂ ಅಷ್ಟೇನೂ ಓದಿದವಳಲ್ಲ, ಅವಳು ಕಲಿತಿದ್ದು ನಾಲ್ಕನೆಯ ತರಗತಿವರೆಗೋ ಏನೋ. ತಾವಂತೂ ಓದಲಿಲ್ಲ; ಆದರೆ ತಮಗಿರೋ ಮಕ್ಕಳಿಬ್ಬರನ್ನ ಚೆನ್ನಾಗಿ ಓದಿಸಬೇಕೋ ಅನ್ನೋದು ತಾಯಿಯ ಅಭಿಲಾಷೆ. ಕೈತುಂಬ ಮೈತುಂಬಾ ಸಾಲ ಮಾಡಿಕೊಂಡಿದ್ದ ಗಂಡ, ಒಂದು ದಿನ ಹೆಂಡತಿಗೆ ಹೇಳದೇ ಕೇಳದೇ ಮನೆ ಬಿಟ್ಟು ಓಡಿ ಹೋದ.

ತಾನೊಬ್ಬನೇ ಹೋದನಾ, ಇಲ್ಲ. ಪ್ರೈಮರಿ ಸ್ಕೂಲ್‌ನಲ್ಲಿ ಓದ್ತಾ ಇದ್ದ ಆ ಮಗನನ್ನೂ ಜೊತೆಗೆ ಕರೆದು ಕೊಂಡುಹೋದ. ಸ್ಕೂಲ್‌ ಹೋದರೆ ಹೋಗ್ಲಿ ಅಂತ. ಕಾರಣ ಏನು ಗೊತ್ತಾ? ತಾನೊಬ್ಬನೇ ಹೋದರೆ ಹೆಂಡತಿಗೆ ಅಷ್ಟೇನೂ ಹೆಚ್ಚಿಗೆ ಹಿಂಸೆ ಆಗೊಲ್ಲ. ಯಾರ ಭವಿಷ್ಯದ ಬಗ್ಗೆ ಏನೇನೇನೋ ಕನಸು ಕಟ್ಟಿಕೊಂಡಿದ್ದಳೋ ಆ ಓದೋ ಮಗನ್ನ ಸ್ಕೂಲ್‌ ತಪ್ಪಿಸಿ ಕರೆದು ಕೊಂಡು ಹೋದರೆ, ತನ್ನ ಜೊತೆಗೆ ಜಗಳ ಆಡ್ತಾ ಇದ್ದಳಲ್ಲಾ ಆ ಹೆಂಡತಿಗೆ ಸಾಕಷ್ಟು ಹಿಂಸೆ ಕೊಟ್ಟ ಹಾಗೆ ಆಗುತ್ತೆ- ಅಂತ!

ಇಂಗ್ಲೀಷಿನಲ್ಲಿ ‘‘ಬ್ಲ್ಯಾಕ್‌ ಷೀಪ್‌’’ ಎಂಬ ಪದವೊಂದಿದೆ. ಪ್ರತಿಯಾಂದು ಕುಟುಂಬದಲ್ಲಿ ‘ಬಿಳಿ ಮತ್ತಿತರ ಬಣ್ಣದ ಛಾಯೆಯ ಕುರಿ’ಗಳ ನಡುವೆ ಈ ರೀತಿಯ ಒಂದೊಂದು ‘ಕರಿಯ ಕುರಿ’ ಇರುವುದು ಸಾಮಾನ್ಯ. ಇವರು ಉಳಿದವರಿಗಿಂತ ಭಿನ್ನರು. ಸಾಮಾನ್ಯವಾಗಿ ಇವರು ದೈವವಂಚಿತರು, ಅದೃಷ್ಟಹೀನರು. ಕುಟುಂಬದ ಉಳಿದ ಸದಸ್ಯರು ಮುಂದೆ ಮುಂದೆ ಹೋದರೂ, ಇವರು ಮಂದೆಯಲ್ಲಿ ಹಿಂದೆಯೇ ಉಳಿದುಬಿಟ್ಟಿರುತ್ತಾರೆ. ಇವರ ಬಗ್ಗೆ ಬೇರೆಯವರ ಅನುಕಂಪ, ಸಹಾನುಭೂತಿ, ಸಹಾಯಪರ ಮನೋಭಾವ ಎಲ್ಲಾ ‘ಗೋರ್ಕಲ್ಲ ಮೇಲೆ ಮಳೆ ಸುರಿದಂತೆ’. ಇಂತಹ ನತದೃಷ್ಟ ಜನ ಮಾಡುವ ಕಿರಿಕಿರಿ, ಕೊಡುವ ಕಿರುಕುಳ, ನಡೆಸುವ ಉಪದ್ರವ- ಎಲ್ಲರನ್ನೂ ಹುಬ್ಬೇರಿಸುವ ಹಾಗೆ ಮಾಡುತ್ತೆ. ಇವರ ಹಿಂಸೆಯ ವರ್ತನೆ ಬಂಧುಬಾಂಧವರಿಗೆ ನುಂಗಲಾರದ ಬಿಸಿತುಪ್ಪವಾಗಿ ಬಿಡುತ್ತೆ.

ಇದು ಬರೀ ಅವಿದ್ಯಾವಂತರಿಗೇ ಬಡವರಿಗೇ ಮೀಸಲಾದುದೇನಲ್ಲ. ಓದಿ ಬರೆದವರೂ, ಉಳ್ಳವರೂ ಸಹ ಹೀಗೆ ಮಾಡೊದು ಉಂಟು. ತೊಟ್ಟಿಲು ತೂಗೋ ಕೈ ಚೆನ್ನಾಗಿ ಚಿವುಟುವುದನ್ನೂ ಸಹ ನಾವು ನೋಡಿದ್ದೇವೆ. ಚರ್ಚೆ ಮಾಡುವಾಗಲೂ, ಆಟವಾಡುವಾಗಲೂ ಸಹ ಅಷ್ಟೆ. ಸೋಲೋ ಸಮಯ ಬಂದಾಗ, ಅದನ್ನ ಒಪ್ಪಿಕೊಳ್ಳೋ ಮನೋಭಾವ ಇಲ್ಲದ ಕೆಲವರು ಮಾಡೊದು ಏನು? ಕೂಗೋದು, ಕಿರಿಚಾಡೋದು, ಹೊಡೆಯೋದು, ಬಡಿಯೋದು, ಆಟದ ಸಾಮಗ್ರಿಗಳನ್ನ ಬಿಸಾಡಿ ಎದ್ದು ಹೋಗೋದು. ಎದುರಾಳಿಗೆ ಹಿಂಸೆ ಕೊಡೋದೇ ಈ ಸಾಮರ್ಥ್ಯಹೀನರ ತಪ್ಪು ನಡವಳಿಕೆ.

ಕೈಲಾಗದವರು ಹೀಗೆ ಮೈ ಎಲ್ಲಾ ಪರಚಿಕೊಳ್ಳುವುದು, ಮತ್ತೆ ಬೇರೆಯವರನ್ನೂ ಸಖತ್‌ ಪರಚುವುದಕ್ಕೆ ಮನೋವೈಜ್ಞಾನಿಕ ಕಾರಣಗಳನ್ನ ಈಗ ಹುಡುಕೋಣ :

ಮನುಷ್ಯರಲ್ಲಿ ಸಮಚಿತ್ತದ ಜೊತೆಗೆ ಕೀಳರಿಮೆ, ಮೇಲರಿಮೆಯ ಭಾವಗಳು ಬೇರೆ ಬೇರೆ ಪ್ರಮಾಣದಲ್ಲಿಇರುತ್ತವೆ. ಇವನ್ನೇ ಇನ್‌ಫೀರಿಯಾರಿಟಿ ಕಾಂಪ್ಲೆಕ್ಸ್‌, ಸುಪೀರಿಯಾರಿಟಿ ಕಾಂಪ್ಲೆಕ್ಸ್‌- ಎನ್ನುವುದು. ಅಹಂಕಾರದಿಂದ, ದರ್ಪ, ಜಂಭ, ಹಮ್ಮಿನಿಂದ ಒರೊಟೊರಟಾಗಿ ಬೇರೆಯವರ ಜೊತೆ ನಡೆದುಕೊಳ್ಳೋ ಮೇಲರಿಮೆಯ ಅತಿರೇಕಕ್ಕೂ, ಶಕ್ತಿಹೀನರ ಈ ಕೀಳರಿಮೆಯ ಪರಮಾವಧಿಗೂ ಕೂದಲೆಳೆಯಷ್ಟೇ ಅಂತರ. ಚಿಕ್ಕ ಪುಟ್ಟದಕ್ಕೆಲ್ಲಾ ಅಪಾರ್ಥಮಾಡಿಕೊಳ್ಳುವುದು, ಸಿನಿಕತನ, ಕೋಪ, ಛಲ, ಸೇಡು, ಹಗರಣ- ಇವೆಲ್ಲಾ ಶಕ್ತಿಹೀನರು ಬಳಸುವ ಹಿಂಸೆಯ ಆಯುಧದ ಹಲವು ಮಾದರಿಗಳು. ಈ ಶಸ್ತ್ರಾಸ್ತ್ರಗಳು ಬತ್ತಳಿಕೆಯಲ್ಲೇ ಉಳಿದರೆ ಅವರಿಗೂ ಕ್ಷೇಮ; ಸಮಾಜಕ್ಕೂ ಶಾಂತಿ!

(ಸದ್ಯದಲ್ಲೇ ಪ್ರಕಟವಾಗಲಿರುವ ಲೇಖಕಿಯ ಕಥಾಗುಚ್ಛದಿಂದ ಆಯ್ದ ಒಂದು ಪ್ರಸಂಗ)

-*ಕಾಪಿರೈಟ್‌ ನವಂಬರ್‌ 2004, ನಾಗಲಕ್ಷ್ಮಿ ಹರಿಹರೇಶ್ವರ


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X