• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಾರದೋ ಕನಸಿನಲ್ಲಿ ಯಾಕೆ ಊಳಿಗ?

By Staff
|

ಇದೆಲ್ಲ ಎರಡ್ಹೊತ್ತಿನ ಊಟ ಗ್ಯಾರಂಟಿ ಇದ್ದವರ ಆಟ. ಪ್ರತಿಮೆಗಳ ಆಟ. ತಮ್ಮ ಕನಸುಗಳಲ್ಲಿ ಇತರರನ್ನು ಜೀತಕ್ಕೆ ಹಚ್ಚುವವರ ಆಟ. ಇದಕ್ಕೆಲ್ಲಾ ನಾವು ನಮ್ಮ ನಮ್ಮ ಕನಸಿನ ಆಟಗಳನ್ನು, ನಿತ್ಯ ಜೀವಿತದ ಹೋರಾಟವನ್ನು ಕೆಡಿಸಿಕೊಳ್ಳಬೇಕಾಗಿಲ್ಲ.

Jayanth Kaikiniಬೇರೆ ನಾಮಾಂಕಿತರ ವಿಲಕ್ಷಣತೆಗಳ ಕುರಿತು ನಮಗ್ಯಾಕೋ ಅನವಶ್ಯಕ ವ್ಯಾಮೋಹ. ಸಂತೆ ಕಟ್ಟೆಯಲ್ಲಿಯ ಬಿಡಾರದಲ್ಲಿ ಅಥವಾ ಹುಬ್ಬಳ್ಳಿ ಮಹಾ ಬಸ್‌ಸ್ಟ್ಯಾಂಡಿನ ಲಾಡ್ಜಿನಲ್ಲಿ ಕೂತು ಯಾರಾದರೂ ಬರೆದರೆ ಅದು ನಮಗೆ ಮಹಾ ಜುಜುಬಿ. ಆದರೆ ಮಾರ್ಕ್ವೆಝ್‌ ವೇಶ್ಯಾವಾಟಿಕೆಯ ಅಟ್ಟದಲ್ಲಿ ಕೂತು ಬರೆದ ಎಂಬುದೇ ನಮಗೆ ಅದ್ಭುತ ರೋಮಾಂಚನದ ಸಂಗತಿ! ಹುಬ್ಬಳ್ಳಿಯ ಲಾಡ್ಜಿನ ಲೇಖಕರ ಕುರಿತು ಮಾರ್ಕ್ವೆಝ್‌ಗೆ ತಿಳಿದರೆ ಆತನೂ ವಿಸ್ಮಯಪಟ್ಟಾನು.

ಯಾವುದೇ ಸ್ಥಳ ತನ್ನ ಸ್ಥಳೀಯತೆಯಿಂದಲೇ ಆಚೆ ತೀರದವರನ್ನು ಕೆಣಕುತ್ತದೆ. ನಮ್ಮ ಲೇಖಕರೊಬ್ಬರು ವಾರಗಟ್ಟಲೆ ಸ್ನಾನ ಮಾಡುತ್ತಿರಲಿಲ್ಲ ಎಂದರೆ ನಮಗದು ಆಸಕ್ತಿಯ ವಿಷಯವಲ್ಲ. ಆದರೆ ಕಡಲಾಚೆಯ ಪ್ರತಿಭಾವಂತನೊಬ್ಬ ‘ತಿಂಗಳಿಗೊಮ್ಮೆ ಮಾತ್ರ ಬೆಳದಿಂಗಳ ರಾತ್ರಿಯಲ್ಲಿ ಮದಿರೆ ಗುಟುಕುರಿಸುತ್ತ ಮೀಯುತ್ತಿದ್ದ’ -ಎಂಬ ವಿವರ ನಮ್ಮೊಳಗೆ ವಿಚಿತ್ರ ರುಚಿ, ದಾಹ ಎಲ್ಲವನ್ನೂ ಉಂಟು ಮಾಡುತ್ತದೆ. ಇದು ತಪ್ಪು ಅಂತಲ್ಲ. ಅಪೂರ್ಣತೆಗಳ ಸಂಗಮವೇ ಒಂದು ಊಹಾ ಸಾಮ್ರಾಜ್ಯವನ್ನು ಪೋಷಿಸುತ್ತದೆ. ಆದರೆ ಇದಕ್ಕೆ ಮಿತಿ ಬೇಕು.

ಅನ್ಯರ ವ್ಯಾಮೋಹಗಳು, ಲೈಂಗಿಕ ವಿಲಾಸಗಳು, ಹವ್ಯಾಸಗಳು, ಅವರವರ ಭಾವಕ್ಕೆ, ಭಕುತಿಗೆ ಅವರವರ ನೆಲೆಯಲ್ಲಿ ಅವಿಭಾಜ್ಯವಾಗಿರುತ್ತವೆ. ದಿನಕ್ಕೆ ಇಪ್ಪತ್ತು ಕಪ್ಪು ಚಹಾ ಕುಡಿಯುವವನು, ಭಿಕುಸಾ ಛಾಪ್‌ ಸಿನ್ನರ್‌ ಬೀಡಿಯನ್ನೇ ಸೇದುವವನು, ಊರ ಜಾತ್ರೆಯಲ್ಲಿ ಮಕ್ಕಳ ಜೊತೆ ತಾನೂ ತೂಗು ತೊಟ್ಟಿಲಲ್ಲಿ ಕೂತವನು -ಇವರೆಲ್ಲರ ವ್ಯಾಮೋಹಗಳಿಗೂ ಅವರದೇ ಅಮಾಯಕ ವಿಲಕ್ಷಣತೆ ಇರುತ್ತದೆ.

ವೈಕುಂ ಮಹಮ್ಮದ ಬಷೀರ್‌ ದೊಂಬರಾಟ ನೋಡಲು ಹೋದದ್ದು, ಶಿವರಾಮ ಕಾರಂತರು ಅಸುನೀಗುವ ವಾರದ ಹಿಂದೆ ಜಾದೂ ಸಮ್ಮೇಳನದಲ್ಲಿ ಜಾದೂ ನೋಡಲು ಹೋದದ್ದು, ಮಾರಾಠಿಯ ಅಗ್ರಮಾನ್ಯ ಕತೆಗಾರ(ಧಾರವಾಡ ನಿವಾಸಿ) ಜಿ.ಎ. ಕುಲಕರ್ಣಿ ಮೊಮ್ಮಗಳನ್ನು ಸರ್ಕಸ್‌ಗೆ ಕರಕೊಂಡು ಹೋಗುವದಿದೆ ಎಂಬ ಕಾರಣಕ್ಕಾಗಿ ಸನ್ಮಾನ ಸಮಾರಂಭ ತಪ್ಪಿಸಿಕೊಂಡಿದ್ದು -ಇವೆಲ್ಲವೂ ಅತ್ಯಂತ ಸಹಜವಾದ, ಅವರ ಬಾಳಿನ ವಿವರಗಳಾಗಿದ್ದಾಗಲೇ ಚೆನ್ನ. ಅದನ್ನು ನಾವು ಬೇರ್ಪಡಿಸಿ ಪ್ರಥಃಕರಿಸಲು ಆರಂಭಿಸಿದರೆ ಅದೆಲ್ಲ ಮಾರುವೇಷಗಳಲ್ಲಿ ಬೇರೆಯೇ ಬಣ್ಣಗಳಲ್ಲಿ ವಿಕೃತಗೊಳ್ಳುತ್ತ, ನಮ್ಮ ಖಾಸಗೀ ಅಪೂರ್ಣತೆಯಾಂದಿಗೆ ಚೆಲ್ಲಾಟವಾಡತೊಡಗುತ್ತವೆ.

ಕೌಟುಂಬಿಕತೆಯ ಪರಮೋಚ್ಛ ಮೌಲ್ಯಗಳನ್ನು, ಅದಕ್ಕೆ ಬೇಕಿರುವ ವೈವಾಹಿಕ ಶಿಸ್ತು, ಜವಾಬ್ದಾರಿಯುತ ಪಾಲಕತನಗಳೊಂದಿಗೆ ನೆಚ್ಚಿಕೊಂಡಿರುವ ಭಾರತೀಯ ಮಧ್ಯಮ ವರ್ಗಕ್ಕೆ ಇಂಥ ಕೊಂಡಿಗಳನ್ನು ಮುರಿದವರೆಲ್ಲ ಕ್ರಾಂತಿಕಾರರಂತೆ ಕಾಣಬಹುದು. ಸರಳೀಕರಿಸಿ ಹೇಳುವುದಾದರೆ ಹತ್ತಾರು ಪ್ರೇಮಭಂಗ, ವಿಕೃತ ಸಂಬಂಧ, ಮಾದಕ ದ್ರವ್ಯಗಳ ಸುರಂಗದಲ್ಲಿ ಹಾದು ಅದ್ಭುತ ಕವಿತೆ ಬರೆದು ಅಪವಯಸ್ಸಿಗೆ ಆತ್ಮಹತ್ಯೆ ಮಾಡಿಕೊಂಡ ವಿದೇಶಿ ಲೇಖಕ ನಮಗೆ ಚಿತ್ರವತ್ತಾದ ಹೀರೋನಂತೆ ಕಂಡರೆ, ತಂಗಿಯರ ಮದುವೆಗಾಗಿ ತಾನು ಮದುವೆಯಾಗದೆ, ರಿಕ್ಷಾ ನಡೆಸಿ ತಮ್ಮನನ್ನು ಬಿ.ಎ. ಓದಿಸುತ್ತ, ಅಪ್ಪನ ಎಕ್ಸ್‌-ರೇ ತೆಗೆಸಲು ಮುನ್‌ಸಿಪಲ್‌ ಆಸ್ಪತ್ರೆಯ ಕ್ಯೂನಲ್ಲಿ ಕಾಯುತ್ತಿರುವ ನಮ್ಮ ತರುಣ ಅವರಿಗೆ ಹೀರೋನಂತೆ ಕಾಣುತ್ತಿರುತ್ತಾನೆ. ಕೊನೆಗೂ ಇದು ‘ಇರುವುದಕ್ಕೆ ’ ಸಂಬಂಧ ಪಟ್ಟ ಸಂಗತಿಯಲ್ಲ -ತೋರುವುದಕ್ಕೆ ಸಂಬಂಧಪಟ್ಟ ಸಂಗತಿ.

ವ್ಯಾವಹಾರಿಕ ಯಶಸ್ಸೇ, ಪರಮೋಚ್ಛ ಯಶ ಎಂಬ ಭ್ರಮೆಯಲ್ಲಿ ಬಾಳಿನ ಕಾಗುಣಿತ ತಪ್ಪತೊಡಗುತ್ತದೆ. ಫಿಲ್ಮ್‌ ಫೇರ್‌ ಪ್ರಶಸ್ತಿ ಸಿಕ್ಕ ಕ್ಷಣದಲ್ಲಿ ಧರ್ಮೇಂದ್ರ ನಾನು ನಲ್ವತ್ತು ವರುಷದ ಹಿಂದೆ ಲೋಕಲ್‌ ರೈಲಿನ ಟಿಕೆಟ್ಟಿಗೂ ಹಣವಿಲ್ಲದೆ ಶಿವರೀ ಸ್ಟೇಷನ್ನಿನಲ್ಲಿ ಮಲಗಿದ್ದೆ ಅಂತ ಬಿಗಿದ ಭಾಷಣ -ಈಗ ಅದೇ ಸ್ಟೇಷನ್ನಿನಲ್ಲಿ ಅದೇ ರೀತಿ, ಸಂಖ್ಯೆಯಲ್ಲಿ ಸಾವಿರಪಟ್ಟು ಹೆಚ್ಚಾಗಿ ಮಲಗಿರುವವರಿಗೆ -ಯಾವ ಆಶಾಕಿರಣ ಕೊಡುವುದಿರಲಿ-ಕೇಳಿಸುವಂತೆಯೇ ಇರುವುದಿಲ್ಲ. ಗೆದ್ದು ಈಚೆ ದಡಕ್ಕೆ ಬಂದವನು ತಾನಿನ್ನು ಆ ದಡಕ್ಕೆ ಮರಳುವಂತಿಲ್ಲ ಎಂಬ ಖಾತರಿ ಆದ ನಂತರವೇ ತನ್ನ ದಾರುಣ ದಿನಗಳ ನೆನಪುಗಳೊಂದಿಗೆ ತೀರ ಖಾಸಗಿಯಾದ ಆಟ ಆಡುತ್ತಾನೆ. ಈ ಆಟ ಅವನಿಗೇ ಸೀಮಿತವಾದ, ಅವನಿಗಷ್ಟೇ ಸಂಬಂಧಪಟ್ಟ ಸಂಗತಿ ಎಂದಷ್ಟೇ ಇತರರು ಪರಿಗಣಿಸಬೇಕೇ ಹೊರತು ಅದರ ಜತೆ ತಳುಕು ಬೀಳುವ ಮಹಾಪರಾಧ ಖಂಡಿತ ಮಾಡಬಾರದು. ಏಕೆಂದರೆ ಆ ವ್ಯಾಕರಣ, ಕಾರ್ಯಕಾರಣ, ‘ವಿಧಿಲೀಲೆ’ -ಎಲ್ಲವೂ ಬಿಲ್‌ಕುಲ್‌ ಬೇರೆ.

ನಾಮಾಂಕಿತರು, ವಿಜೇತರು, ಅದೃಷ್ಟಶಾಲಿಗಳು ಕ್ರಮೇಣ ತಮ್ಮ ವ್ಯಾಮೋಹಗಳ ವಿವರಗಳನ್ನು ತಮ್ಮ ಇಮೇಜ್‌ ಒಂದರ ನಿರ್ಮಿತಿಗೆ ಬಳಸತೊಡಗುತ್ತಾರೆ. ಒಂದು ಮರಕ್ಕೆ ಎಲೆಗಳು ಒಳಗಿಂದ ಮೂಡಿಬರಬೇಕೆ ಹೊರತು ಅವನ್ನು ಹೊರಗಿಂದ ಅಂಟಿಸಲಾಗುವುದಿಲ್ಲ. ವ್ಯಕ್ತಿ ವಿಲಕ್ಷಣತೆ(idiosyncrasy) ಎಂಬುದೊಂದು ಮೂಲ ಲಕ್ಷಣವೇ ಹೊರತು, ಅಳವಡಿಸಿಕೊಂಡ ವರ್ತನೆಯಲ್ಲ. ಪ್ರತಿಭಾವಂತ(genius)ರಿಗೆಲ್ಲ ಒಂದು ವ್ಯಕ್ತಿ ವಿಕ್ಷಿಪ್ತತೆ ಇರಲೇಬೇಕು -ಎಂಬ ಮೂಢನಂಬಿಕೆಯಿಂದ ಸುಳ್ಳುಸುಳ್ಳೇ ಕೆಲ ಪ್ರವೃತ್ತಿಗಳನ್ನು manipulate ಮಾಡಿ ತಮ್ಮ ಪ್ರತಿಮೆಯನ್ನು ತಾವೇ ಸಿಂಗರಿಸುವವರೂ ಇದ್ದಾರೆ. ಮೊದಲೇ ಪ್ರತಿಭಾವಂತರಾದ ಇವರಿಗೆ ಇದೇನೂ ಕಷ್ಟದ ಕೆಲಸವಲ್ಲ. ಆದರೆ ಅದನ್ನು ಇತರರು ಹೇಗೆ ತೆಗೆದುಕೊಳ್ಳಬೇಕು ಎಂಬುದೆ ಮುಖ್ಯ ಸಂಗತಿ. ನಮ್ಮ ಕನಸುಗಳ ಹಕ್ಕು ನಮ್ಮ ಕೈಲಿರುವಾಗ ಅನ್ಯರ ಕನಸುಗಳಲ್ಲಿ ನಾವ್ಯಾಕೆ ಊಳಿಗಕ್ಕೆ ಹೋಗಬೇಕು?

ತನ್ನ ಪ್ರೇಮದ ಉತ್ತುಂಗ ಕಾಲದಲ್ಲಿ ಅಮೃತಾ ಪ್ರೀತಮ್‌, ಸಾಹಿರ್‌ ಸೇದಿಬಿಟ್ಟ ಸಿಗರೇಟಿನ ತುಂಡುಗಳನ್ನು ಶೇಖರಿಸಿ ನಂತರ ಗುಟ್ಟಾಗಿ ಅವನ್ನು ಸೇದುತ್ತಿದ್ದಳು -ಎಂಬ ವಿವರ ಆ ಮಟ್ಟಿಗೆ ರಮ್ಯ, ಹೃದಯಸ್ಪರ್ಶಿ. ಅದು ಅವಳ ಕನಸು-ನನಸುಗಳ ನಡುವಿನ ಜೀಕಿನ ಕ್ಷಣ. ಹಾಗಂತ ನಾವು ‘ಆ ವಿವರವಿಲ್ಲದ ನನ್ನ ಬಾಳಿನ ಪ್ರೇಮ ಅಪೂರ್ಣ’ ಎಂದು ಕರುಬುವುದಾಗಲಿ, ಸಿಗರೇಟು ಸೇದುವ ಪ್ರೇಮಿಗಾಗಿ ಕಾಯುವುದಾಗಲಿ, ಸಿಗರೇಟಿನ ತುಂಡು ಶೇಖರಿಸಿ ಆ ನಿಸ್ತೇಜ ಚೂರಿಗೆ ಬೆಂಕಿ ಕೊಟ್ಟು ಕೆಮ್ಮುವುದಾಗಲೀ -ಎಲ್ಲ ವ್ಯರ್ಥ. ಗೆದ್ದವನ ಬುಡುಬುಡಿಕೆಯಲ್ಲಿ ಅವನ ಯಶದ ಸೂತ್ರ ಅರಸುವುದೂ ಅರ್ಥಹೀನ.

ಏಕೆಂದರೆ ಸಂದರ್ಭದಿಂದ ಬೇರ್ಪಟ್ಟ ವಿವರಗಳು ನಿರ್ಜೀವ ಆಟದ ವಸ್ತುಗಳು. ಅಷ್ಟೆ. ಕ್ಲಿಂಟನ್‌ ಮತ್ತು ಮೋನಿಕಾರ ನಡುವೆ ‘ಲಫಡಾ’ ಇತ್ತು ಅಂತ ತಿಳಿದಾಗ ಅಂಥದೇನೂ ಮಹಾ ಅನಿಸಲಿಲ್ಲ. ಯಾಕೆಂದರೆ ತಳುಕು ಹಾಕಿಕೊಳ್ಳುವ ವಿವರಗಳು ನಡುವೆ ಇರಲಿಲ್ಲ. ಈಗ ವಿಸ್ತುತ ವರದಿ ಬಂದಿದ್ದೇ ‘ಒದ್ದೆ ಸಿಗಾರು’ ‘ಮೌಖಿಕ ಪ್ರೇಮ’ ‘ಮುಟ್ಟು’ -ಹೀಗೆಲ್ಲ ಢಾಳಾಗಿ ವಿವರಗಳು ಬೇರ್ಪಟ್ಟು ನಮ್ಮ ಅರೆಬರೆಯಾಂದಿಗೆ ಕಣ್ಣಾಮುಚ್ಚಾಲೆ ಆಡುತ್ತ ಮಾಯಾ ಕೋಲಾಹಲವನ್ನೇ ಎಬ್ಬಿಸಿಬಿಟ್ಟಿವೆ.

ಇದೆಲ್ಲ ಎರಡ್ಹೊತ್ತಿನ ಊಟ ಗ್ಯಾರಂಟಿ ಇದ್ದವರ ಆಟ. ಪ್ರತಿಮೆಗಳ ಆಟ. ತಮ್ಮ ಕನಸುಗಳಲ್ಲಿ ಇತರರನ್ನು ಜೀತಕ್ಕೆ ಹಚ್ಚುವವರ ಆಟ. ಇದಕ್ಕೆಲ್ಲಾ ನಾವು ನಮ್ಮ ನಮ್ಮ ಕನಸಿನ ಆಟಗಳನ್ನು, ನಿತ್ಯ ಜೀವಿತದ ಹೋರಾಟವನ್ನು ಕೆಡಿಸಿಕೊಳ್ಳಬೇಕಾಗಿಲ್ಲ.

(ಅಂಕಿತ ಪ್ರಕಾಶನದ ಮೂಲಕ ಎರಡನೆ ಮುದ್ರಣ ಕಂಡಿರುವ ಲೇಖಕರ ‘ಬೊಗಸೆಯಲ್ಲಿ ಮಳೆ’ ಕೃತಿಯಿಂದ ಆಯ್ದ ಒಂದು ಬರಹ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more