ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೈಜ ಕನ್ನಡಿಗರಾಗುವುದು ಹೇಗೆ? ಹೇಗೆ? ಹೇಗೆ?

By Staff
|
Google Oneindia Kannada News

ನೈಜ ಕನ್ನಡಿಗರಾಗುವುದು ಹೇಗೆ? ಹೇಗೆ? ಹೇಗೆ?
ಇತಿಹಾಸ ನಮಗೆ ‘ನಿರಭಿಮಾನಿಗಳು’ ಎಂಬ ಕಿರೀಟ ತೊಡಿಸಿದೆ. ಈ ಕಿರೀಟವನ್ನು ಕಿತ್ತೆಸೆದು, ನಾವು ಸದಭಿಮಾನಿಗಳಾಗಲು ಏನು ಮಾಡಬೇಕು? ನಾವು ಕನ್ನಡ ಹೋರಾಟ ಮಾಡಬೇಕು. ಈ ಹೋರಾಟಕ್ಕೆ ಕೈಸೇರಿಸಲು ನಿಮ್ಮ ರಕ್ತ/ಬಲಿದಾನ/ ಹಣ ಬೇಕಿಲ್ಲ. ಕೇವಲ ಕನ್ನಡ ಮನಸ್ಸೊಂದಿದ್ದರೆ ಸಾಕು!!!

  • ಚಂದ್ರಶೇಖರನ್‌ ಕಲ್ಯಾಣರಾಮನ್‌, ಬೆಂಗಳೂರು
    [email protected]
Chandrashekhar Kalyanaramanಭಾರತದ ಪ್ರತಿಷ್ಠಿತ ಖಾಸಗಿ ಬ್ಯಾಂಕ್‌ ಒಂದರ ಬೆಂಗಳೂರಿನ ಶಾಖೆಯಾಂದರಲ್ಲಿ ನಾನು ಉಳಿತಾಯ ಖಾತೆ ಹೊಂದಿದ್ದು ಇತ್ತೀಚೆಗೆ ಬ್ಯಾಂಕಿನ ಶಾಖೆಯ ಕಚೇರಿಗೆ ಭೇಟಿ ನೀಡಬೇಕಾದ ಪ್ರಸಂಗ ಒದಗಿ ಬಂದಿತ್ತು.

ಕಚೇರಿಯ ಒಳಗಡೆ ವ್ಯವಹಾರ-ವಹಿವಾಟು ಚಲನ್‌ಗಳು, ಸೂಚನಾ ಫಲಕಗಳಲ್ಲಿನ ವಿಧೇಯಕಗಳು ಇತರೆ ಪ್ರದರ್ಶನ ಸೂಚಕಗಳು ಆಂಗ್ಲ ಭಾಷೆಯಲ್ಲಿ ವಿವಿಧ ಬಣ್ಣಗಳಿಂದ ಮೂಡಿ ಫಳ ಫಳನೆ ಹೊಳೆಯುತ್ತ ಕಣ್ಣೆಗೆ ರಾಚುತ್ತಿದ್ದವು... ಕನ್ನಡ ಭುವನೇಶ್ವರಿಗೆ ಅಲ್ಲಿ ಕೇವಲ ಕನಿಷ್ಠ ಸ್ಥಾನವೂ ಲಭ್ಯವಿರಲಿಲ್ಲ!

ವಿಷಾದದ ಸಂಗತಿಯೆಂದರೆ ಕನ್ನಡ ಒಂದನ್ನು ಬಿಟ್ಟು ಮಿಕ್ಕ ಎಲ್ಲಾ ಭಾಷೆಗಳಲ್ಲೂ ಮಾತನಾಡುವ ಅಧಿಕಾರಿಗಳು ಅಲ್ಲಿದ್ದರು. ಹಾಗೂ ಹೀಗೂ ಕನ್ನಡದಲ್ಲೇ ವ್ಯವಹಾರ ಮುಗಿಸಿದೆ. ಅಲ್ಲಿನ ಅಧಿಕಾರಿಗಳೂ ಸಹ ಅವರ ಭಾಷೆಯಲ್ಲೇ ವ್ಯವಹರಿಸಿದರು.

ಅಂತರ್ಜಾಲದಲ್ಲಿ ಬ್ಯಾಂಕ್‌ನ ಮೇಲಾಧಿಕಾರಿಗೆ, ಮುಖ್ಯಾಧಿಕಾರಿಗೆ, ಕೇಂದ್ರ ಶಾಖೆಗೆ ಹಾಗೂ ಅವರ ಇತರೆ ಮುಖ್ಯಸ್ಥರಿಗೆ ವಿ-ಅಂಚೆಯ ಮೂಲಕ ಕನ್ನಡ ಮತ್ತು ಆಂಗ್ಲ ಭಾಷೆಗಳೆರಡರಲ್ಲೂ ಮನವಿ ಪತ್ರವೊಂದನ್ನು ರವಾನಿಸಿದೆ. ಯಾವುದೇ ಪ್ರದೇಶದಲ್ಲಿ ವ್ಯವಹಾರ ನಡೆಸುವವರು, ಆ ಪ್ರದೇಶದ ಸಂಸ್ಕೃತಿ, ಭಾಷೆ ಮತ್ತು ಭಾವನೆಗಳಿಗೆ ಮನ್ನಣೆ ನೀಡಬೆಕೆನ್ನುವುದು ಸಾಮಾನ್ಯ ನೈತಿಕ ಹೊಣೆಯೆಂಬುದನ್ನು ಅರಿಕೆ ಮಾಡಿಸಿದೆ.

ನಿಮ್ಮ ಕಾಳಜಿ ನಮಗರ್ಥವಾಗಿದೆ. ಆದರೆ ಬ್ಯಾಂಕುಗಳಲ್ಲಿ ಆಯಾ ಪ್ರಾಂತೀಯ ಭಾಷೆಗಳಲ್ಲೇ ವ್ಯವಹರಿಸಬೇಕೆಂಬ ಯಾವುದೇ ಕಡ್ಡಾಯ ನಿಯಮಗಳಿಲ್ಲ ಎಂದು ಆ ಬ್ಯಾಂಕಿನ ಬೆಂಗಳೂರು ಶಾಖೆಯ ಮುಖ್ಯಾಧಿಕಾರಿ ಉತ್ತರಿಸಿದ್ದಾರೆ.

ಅವರಿಗೆ ಸೂಕ್ತ ಉತ್ತರ ನೀಡಲು ಈಗ ನನ್ನ ಮುಂದಿರುವ ಪ್ರಶ್ನೆಗಳು! ಅತ್ಯುನ್ನತ ಶಿಕ್ಷಣ, ಪದವಿ ಪಡೆದು ಇವರ ಮಾನವ ಸಂಪನ್ಮೂಲ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಅಲ್ಲಿನ ಅಧಿಕಾರಿಗಳಿಗೆ ಕರ್ನಾಟಕದಲ್ಲಿ ಕನ್ನಡಕ್ಕೂ ಒಂದು ಸ್ಥಾನ ಕಲ್ಪಿಸಬೇಕು ಎಂಬ ಸಾಮಾನ್ಯ ತಿಳಿವಳಿಕೆಯಿಲ್ಲವೇ? ಅಥವಾ ಇವರ ಈ ನಿಯಮ ಬೆಂಗಳೂರು / ಕರ್ನಾಟಕ ಬಿಟ್ಟು ಹೊರ ರಾಜ್ಯಗಳಲ್ಲಿಯೂ ಇದೇ ರೀತಿಯದಾಗಿದೆಯೇ? ಹಾಗಾದರೆ ಇನ್ನು ಮುಂದೆ ಕೇವಲ ಸರ್ಕಾರಿ ಕಚೇರಿಗಳಲ್ಲಿ ಮಾತ್ರವೇ ಆಯಾ ರಾಜ್ಯದ ಆಡಳಿತ ಭಾಷೆಯುಲ್ಲಿ ವ್ಯವಹರಿಸಬೇಕೇ? ಖಾಸಗಿ ಬ್ಯಾಂಕ್‌ಗಳು ಮತ್ತು ವ್ಯವಹಾರ ಸಂಸ್ಥೆಗಳಲ್ಲಿ ಇಂತಹುದೇ ರೀತಿಯ ಭಾಷಾ ನಿಯಮ ಪಾಲಿಸಬೇಕು ಎಂಬ ಯಾವುದಾದರೂ ಕಾನೂನು ಸಿದ್ಧಪಡಿಸಲಾಗಿದೆಯೇ? ಸರ್ಕಾರದ ಭಾಷಾ ನಿಯಮಗಳು ಈ ಬಗ್ಗೆ ಏನು ಹೇಳುತ್ತವೆ? ಹಿರಿಯರು, ಅರಿತವರು, ಇದರ ಬಗ್ಗೆ ಹೆಚ್ಚಿನ ಮಾಹಿತಿ ಇರುವವರು ಸೂಕ್ತ ತಿಳಿವಳಿಕೆ, ಸಮರ್ಥನೆ ನೀಡುವರೇ?

ಕನ್ನಡದ ಬಗೆಗಿನ ಕಾಳಜಿಗೆ ನಾವು ಏನು ಮಾಡಲು ಸಾಧ್ಯ?

ಕನ್ನಡ ಮಿತ್ರರೇ, ಈ ತೆರನಾದ ಕನ್ನಡದ ಬಗೆಗಿನ ನಿರ್ಲಕ್ಷ್ಯ ನಮ್ಮನ್ನು ನಮ್ಮ ನೆಲದಲ್ಲೇ ಮೂಲೆ ಗುಂಪಾಗಿಸಿವ ಈ ಪರಿಯನ್ನು ಕರ್ನಾಟಕದಲ್ಲಿ ತೆರೆಯಲ್ಪಟ್ಟಿರುವ ಯಾವುದೇ ಖಾಸಗಿ ಬ್ಯಾಂಕುಗಳಲ್ಲಿ, ಇಲ್ಲವೆ ಇತರೆ ಖಾಸಗಿ ವ್ಯವಹಾರ ಸಂಸ್ಥೆಗಳಲ್ಲಿ ಇಂದು ನಾವು ಕಾಣಬಹುದಾಗಿದೆ. ಇತ್ತೀಚೆಗೆ ಬೆಳಕಿಗೆ ಬಂದಿರುವ ಎಫ್‌. ಎಮ್‌., ರೇಡಿಯೋ ಕನ್ನಡದ ಬಗೆಗಿನ ಅಸಡ್ಡೆಯ ಉದಾಹರಣೆಯನ್ನು ಈಗಾಗಲೇ ನೀವು ಮನಗಂಡಿದ್ದೀರಿ.

ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಶೇಕಡಾ 30 ಕ್ಕಿಂತಲೂ ಕಡಿಮೆ ಎಂದು ಆಗಾಗ್ಗೆ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಈಗಲೂ ನಾವು ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಮಕ್ಕಳು, ಮೊಮ್ಮಕ್ಕಳ ಸಮಯಕ್ಕೆ ಬೆಂಗಳೂರು ಪರಕೀಯರಿಗೆ ಪರಭಾರೆಯಾಗಿರುತ್ತದೆ. ಹಿಂದಿ ಮತ್ತು ಇಂಗ್ಲಿಷ್‌ ಭೂತ ನಮ್ಮನ್ನು ಸಂಪೂರ್ಣ ಆವರಿಸಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ.

ನಾವು ಹಾಗೂ ನಮ್ಮ ಹಿರಿಯರು, ಬುದ್ಧಿಜೀವಿಗಳು ಇತ್ತೀಚಿನವರೆಗೂ ಕನ್ನಡೇತರವಾದ ಭಾವನೆಗಳಿಗೆ ತೋರಿಸುತ್ತಿದ್ದ ಆಪ್ಯಾಯಮಾನತೆಯನ್ನು ಮುಲಾಜಿಲ್ಲದೆ ತೊರೆಯಬೇಕಾಗಿದೆ. ಇಂಗ್ಲಿಷ್‌ ಮತ್ತು ಹಿಂದಿಯಂತೆಯೇ ನಮ್ಮ ಕನ್ನಡವೂ ಸಹ ಜಗತ್ತಿನ ಅತಿ ಶ್ರೇಷ್ಠ ಭಾಷೆಗಳಲ್ಲೊಂದೆಂದು ಎದೆ ತಟ್ಟಿ ಹೇಳಿಕೊಳ್ಳೂವ ಸಮಯ ಒದಗಿ ಬಂದಿದೆ. ಈ ಹಿಂದೆ ಹಿಂದಿಯನ್ನು ರಾಷ್ಟ್ರ ಭಾಷೆ ಮಾಡಬೇಕು ಎಂದಾಗ ಅದನ್ನು ಮೊದಲಿಗೆ ಒಳಗೆ ಬಿಟ್ಟುಕೊಂಡು ಪ್ರೋತ್ಸಾಹಿಸಿದವರು ನಾವು! ಇತರರ ಮುಂದೆ ಒಳ್ಳೆಯವರಾಗಲು ನಮ್ಮತನವನ್ನು ಬಿಟ್ಟುಕೊಂಡ ನಮ್ಮ ಪರಿಸ್ಥಿತಿ ಇಂದು ಹೇಗಿದೆ ಮತ್ತು ಅದನ್ನು ಪ್ರತಿಭಟಿಸಿ ತಮ್ಮ ತಮಿಳಿನ ಅಸ್ತಿತ್ವವನ್ನು ಉಳಿಸಿಕೊಂಡಿರುವ ನಮ್ಮ ತಮಿಳು ಸಹೋದರರ ಸ್ಥಿತಿ ಹೇಗಿದೆ ಒಮ್ಮೆ ಯೋಚಿಸಿ?

‘ಹಿಂದಿ ಭಾರತದಲ್ಲಿ ಅತಿಹೆಚ್ಚು ಜನ ಮಾತನಾಡುವ ಭಾಷೆ, ಅದನ್ನು ರಾಷ್ಟ್ರ ಭಾಷೆ ಮಾಡಬೇಕು’ ಎಂದು ಉತ್ತರ ಭಾರತದ ನಾಯಕರು ಮುಂದಡಿಯಿಟ್ಟಾಗ, ಅದಕ್ಕೆ ತಮಿಳುನಾಡಿನಲ್ಲಿ ದ್ರಾವಿಡ ನಾಯಕರು ಆಕ್ಷೇಪಿಸುತ್ತ, ‘ಹಾಗಾದರೆ, ಅತಿ ಹೆಚ್ಚು ಇರುವ ಪಕ್ಷಿ ಕಾಗೆ, ಅದನ್ನು ರಾಷ್ಟ್ರ ಪಕ್ಷಿ ಮಾಡದೆ ನವಿಲನ್ನೇಕೆ ಮಾಡಿದಿರಿ?’ ಎಂಬ ವಾದವನ್ನು ಮುಂದಿಟ್ಟಿದ್ದರಂತೆ! ಆದರೆ ಇಲ್ಲಿ ನಮ್ಮ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರೇ ಹಿಂದಿ ಪ್ರಚಾರಕ್ಕೆ ಮುಂದಾಗಿದ್ದ ನಿದರ್ಶನಗಳಿವೆ! ಹಾಗೂ ಇತ್ತೀಚೆಗೆ ಕನ್ನಡ ದಿಗ್ಗಜರೆಲ್ಲರೂ ಒಗ್ಗೂಡಿ ಕನ್ನಡದ ರಥವನ್ನು ಎಳೆಯುವುದು ಬಿಟ್ಟು, ತಮ್ಮ ತಮ್ಮಲ್ಲೇ ಕಿತ್ತಾಡಿ, ರಾಡಿ ಎರಚಿಕೊಳ್ಳುವುದನ್ನು ಕಾಣುತ್ತಿದ್ದೇವೆ!

ತಮಿಳುನಾಡು, ಆಂಧ್ರ, ಇನ್ನೆಲ್ಲೇ ಹೋಗಿ ನೋಡಿ ಅಲ್ಲಿ ತಮಿಳು ಭಾಷೆಯ ಉಳಿವಿಗಾಗಿ ತಮಿಳು ರಕ್ಷಣಾ ವೇದಿಕೆಯಿಲ್ಲ, ಆಂಧ್ರ ಸಂಘರ್ಷ ಸಮಿತಿಗಳಿಲ್ಲ. ಅವರ ನಾಯಕರು ಮುಂದಾಲೋಚನೆಯಿಂದ, ಇವನ್ನು ಅವರಿಗೆ ಈ ಹಿಂದೆಯೇ ಮನವರಿಕೆ ಮಾಡಿಸಿ, ಅವರ ರಕ್ತನಾಳಗಳಲ್ಲಿ ಭಾಷಾ ಪ್ರೇಮವನ್ನು ಬಿತ್ತಿದ್ದಾರೆ. ಯಾವುದೇ ಇತರ ಭಾಷೆಗಳ ಸಮಸ್ಯೆಗೆ ಸಂಬಂಧ ಪಟ್ಟ ಲೇಖನಗಳನ್ನು, ನಾವು ಯಾವ ಪತ್ರಿಕೆಗಳಲ್ಲೂ ಕಾಣುವುದಿಲ್ಲ. ಇನ್ನು ಮುಂದಾದರೂ ತಮಿಳು ಸಹೋದರರ ಭಾಷಾಭಿಮಾನ, ಸ್ವಾಭಿಮಾನ ನಮ್ಮಲ್ಲೂ ಮೂಡಬೇಕಿದೆ! ಅದಕ್ಕಾಗಿಯೇ ಅಲ್ಲವೆ ತಮಿಳಿಗೆ ಶಾಸ್ತ್ರೀಯ ಭಾಷಾ ಸ್ಥಾನ ಈಗಾಗಲೇ ದೊರೆತಿರುವುದು ಹಾಗೂ ನಮ್ಮವರಿನ್ನೂ ಹೋರಾಟ ನಡೆಸಲು ಮೀನಾ-ಮೇಷ ಎಣಿಸುತ್ತಿರುವುದು.

ಈ ದಿನಗಳಲ್ಲಿ ದಿನಕ್ಕೊಂದು ಕನ್ನಡ ಭಾಷಾ ಸಮಸ್ಯೆಯ ಬಗ್ಗೆ ಪತ್ರಗಳು, ಲೇಖನಗಳನ್ನು ನಾವು ಕನ್ನಡ ಪತ್ರಿಕೆಗಳಲ್ಲಿ ನೋಡುತ್ತಿರುತ್ತೇವೆ. ಯಾರಿಗೆ ಯಾವ ಸಮಸ್ಯೆಗೆ ಸರಿಯಾದ ಪರಿಹಾರ ದೊರೆತಿದೆ? ನಮ್ಮ ಈಗಿನ ಮುಖ್ಯಮಂತ್ರಿಗಳಾದ ಮಾನ್ಯ ಕುಮಾರಸ್ವಾಮಿಯವರು ತಮ್ಮ ಅಧಿಕಾರ ಸ್ವೀಕರಿಸಿದ ಹೊಸತರಲ್ಲಿ ‘ನಾನು ದಿನಕ್ಕೆ 20 ಪತ್ರಿಕೆ ತಿರುವಿ ಹಾಕುತ್ತೇನೆ. ನಾನು ಓದುವ ಮೊದಲನೇ ಪುಟ ವಾಚಕರ ಪತ್ರಗಳು’ ಎಂದಿದ್ದರು. ಆ ನಂತರದಲ್ಲಿ ಕನ್ನಡದ ಕುರಿತಾದ ಅನೇಕ ಸಮಸ್ಯೆಗಳ ಬಗ್ಗೆ ಪತ್ರಗಳು ಪ್ರಕಟವಾಗಿವೆ. ಯಾವುದಾದರೂ ಒಂದು ಸಮಸ್ಯೆಯ ಬಗ್ಗೆ ಇವರು ತಲೆ ಕೆಡಿಸಿಕೊಂಡಿದ್ದಾರಾ? ನಮ್ಮ ನಾಯಕರುಗಳಿಗೇ ಇಲ್ಲದ ಕಳಕಳಿ ಇನ್ನು ಸಾಮಾನ್ಯ ಜನರಲ್ಲಿ ಕಾಣಲು ಹೇಗೆ ಸಾಧ್ಯ ಹೇಳಿ?

ನಮ್ಮ ಈಗಿನ ಸರಕಾರಕ್ಕೆ ಹಾಗೂ ‘ನನಗೆ ಮಾತನಾಡಲು ಬರುವುದು ಕನ್ನಡವೊಂದೆ’ ಎಂದು ದಿಟ್ಟತನದಿಂದ ಹೇಳಿಕೊಂಡಿದ್ದ ಮಾನ್ಯ ಕುಮಾರಸ್ವಾಮಿಯವರಿಗೆ ಈ ‘ಸುವರ್ಣ ಕರ್ನಾಟಕ ಸಂಭ್ರಮ’ ಸಂದರ್ಭದಲ್ಲಿ ಕನ್ನಡತನವನ್ನು ಮೆರೆಸುವ, ಕನ್ನಡಿಗರ ಎಲ್ಲಾ ಸಮಸ್ಯೆಗಳನ್ನು ಮರೆಸುವ ಸುವರ್ಣ ಅವಕಾಶ ಎದುರಿಗಿದೆ. ಹಣ-ಅಧಿಕಾರ ಎರಡನ್ನೂ ಅವರು ಈಗಾಗಲೇ ಜಯಿಸಿದ್ದಾರೆ.

ಕರ್ನಾಟಕದ ಸಮಗ್ರ ಅಭಿವೃದ್ಧಿಯ ಜೊತೆಗೆ ಕನ್ನಡತನ-ಕನ್ನಡ ಭಾಷೆಗೆ ಸಹ ಎಲ್ಲಾ ಪ್ರಾಶಸ್ತ್ಯ ತಂದು ನಿಜವಾದ ‘ಕನ್ನಡ ಕುಮಾರ’ ಎಂದು ಎಲ್ಲರಿಂದಲೂ ಕರೆಸಿಕೊಳ್ಳುವ, ಅವರ ಹೆಸರನ್ನು ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿಸಿಕೊಳ್ಳುವ ಅವಕಾಶ ಅವರ ಮುಂದಿದೆ. ಕೇವಲ 20 ತಿಂಗಳ ಅಧಿಕಾರವೇಕೆ? 20 ವರ್ಷ ನಮ್ಮನ್ನಾಳಿ ಎಂದು ಕನ್ನಡ ಜನಗಳೇ ಅವರನ್ನು ಬೆಂಬಲಿಸಲು ಮಾಡಬಹುದಾದಂತಹ ವರ್ಚಸ್ಸು ಸಹ ಅವರಿಗಿರುವುದನ್ನು ನಾವು ಕಂಡಿದ್ದೇವೆ. ದಿಟ್ಟತನದಿಂದ ಅದನ್ನು ಅವರು ಸದುಪಯೋಗಗೊಳಿಸಿಕೊಳ್ಳಬೇಕಿದೆ.

ಇದೆಲ್ಲಾ ಬಿಡಿ, ಕೇವಲ ‘ಹಗಲುಗನಸು’ ಸಹ ಆಗಿ ಬಿಡಬಹುದು‰... ಕನ್ನಡವನ್ನು ಉಳಿಸಿ ಬೆಳೆಸಬೇಕಿರುವುದು ಸರ್ಕಾರ ಅಥವಾ ಕುಮಾರಸ್ವಾಮಿಯವರಷ್ಟೇ ಅಲ್ಲ. ಇದು ನನ್ನ ಕರ್ತವ್ಯವೆಂದು ಪ್ರತಿಯಾಬ್ಬ ಕನ್ನಡಿಗನೂ ಮನಗಾಣಬೇಕಾಗಿದೆ. ಇದಕ್ಕೆ ದೊಡ್ಡ ಚಳುವಳಿ, ಆಂದೋಲನ ನಡೆಯಬೇಕಿದ್ದು, ಆ ನಿಟ್ಟಿನಲ್ಲಿ ನಾವೆಲ್ಲ ಸಾಗಬೇಕಾಗಿದೆ. ಯಾವುದೇ ಅಧಿಕಾರವಿಲ್ಲದಿದ್ದರೂ ನಮ್ಮ ಪರಿಧಿಯಲ್ಲಿ ನಾವು ಇದನ್ನು ಸಾಧಿಸಲು ಸಾಧ್ಯ! ಇದಕ್ಕೆ ನನ್ನದೇ ಆದ, ನಾನು ನಿರ್ಣಯಕ್ಕೆ ಬಂದಿರುವ ಕೆಲವು ಅಂಶಗಳನ್ನು ತಿಳಿಸಲಿಚ್ಛಿಸುತ್ತೇನೆ.

ಕರ್ನಾಟಕದಲ್ಲಿರುವ ಬ್ಯಾಂಕುಗಳಲ್ಲಿ / ಇತರೆ ಖಾಸಗಿ ವ್ಯವಹಾರ ಸಂಸ್ಥೆಗಳ ಕಚೇರಿ(ಐಸಿಐಸಿಐ, ಯುಟಿಐ, ಸಿಟಿ ಬ್ಯಾಂಕ್‌, ಎಚ್‌ಎಸ್‌ಬಿಸಿ, ಸ್ಟ್ಯಾಂಡರ್ಡ್‌ ಚಾರ್ಟರ್ಡ್‌, ಮಾರುತಿ, ಹ್ಯುಂಡೈ, ಓನಿಡಾ, ವೀಡಿಯೋಕಾನ್‌, ಇನ್ಫೋಸಿಸ್‌, ಬಯೋಕಾನ್‌) ಇತರೆ ಯಾವುದೇ ಗ್ರಾಹಕ ಸೇವಾ ಸಂಸ್ಥೆಗಳೊಡನೆ ವ್ಯವಹರಿಸುವಾಗ,

1. ಚೆಕ್ಕು, ಚಲನ್‌ಗಳನ್ನು ಕನ್ನಡದಲ್ಲೇ ಬರೆಯುವುದು
2. ಯಾವುದೇ ಸಲಹೆ, ದೂರು, ಫಿರ್ಯಾದುಗಳನ್ನು, ಮನವಿ, ಸ್ವೀಕೃತಿ ಪತ್ರಗಳನ್ನು ಕನ್ನಡದಲ್ಲೇ ಬರೆಯುವುದು
3. ಕನ್ನಡದಲ್ಲೇ ಸಹಿ ಮಾಡುವುದು.
4. ಯಾವುದೇ ಕರೆ ಕೇಂದ್ರಗಳು (ಬ್ಯಾಂಕ್‌, ಗೃಹ ಸಾಲ, ಇತ್ಯಾದಿ) ಕರೆ ಮಾಡಿದರೂ ಕನ್ನಡದಲ್ಲೇ ಉತ್ತರಿಸುವುದು.

ಹೀಗೆ ಇವು ಕೆಲವು ಉದಾಹರಣೆಗಳು...

‘ಗೋವರ್ಧನ ಗಿರಿಯನ್ನೆತ್ತಿದ ಕಿರುಬೆರಳನ್ನು ನೆನಪಿಸಿಕೊಳ್ಳುತ್ತಿದ್ದೇನೆ...!’

ಸಿರಿಗನ್ನಡಂ ಗೆಲ್ಗೆ... ಸಿರಿಗನ್ನಡಂ ಬಾಳ್ಗೆ...

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X