ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಂಪುತೋಟ ಮತ್ತು ಡಾ. ಎಚ್ಚೆನ್‌

By Staff
|
Google Oneindia Kannada News
  • ಕೆ.ಎಸ್‌.ನಿಸಾರ್‌ ಅಹಮದ್‌
ಬಹಳ ದಿನಗಳ ಬಳಿಕ ಅಚಾನಕ ಸಿಕ್ಕಿದರು ಎಚ್ಚೆನ್‌
ಸಂಜೆ ಕೆಂಪು ತೋಟದಲ್ಲಿಂದು
ಮಳೆ ಬಂದು ಇಳೆ ಮಿಂದು
ಮಡಿಯಾಗಿ ಮೈ ಮೆರೆಸಿತು
ಸುತ್ತಮುತ್ತಲಿನಚ್ಚ ಹಸಿರು ದಂದು
ಲಾಗಾಯ್ತಿನಿಂದಿನವರಿಗೆ ನನ್ನ ಬಗೆಗೆ ಅಮಿತ ಕಕ್ಕುಲತೆ
‘ಬೆಳಗ್ಗೆಯಷ್ಟೇ ಭಾಷಣದಲ್ಲಿ ಉದ್ಧರಿಸಿದೆ ನಿಮ್ಮ ಕವಿತೆ’
ಎಂದರು. ಏನೊ ಹೊಳೆದಂತೆ ಗಹಗಹಿಸಿ
ಮಾತು ಮುಂದುವರಿಸಿದರು.
‘ಇಲ್ಲಿನೊಂದೊಂದು ಮರ ಗಿಡ ಬಳ್ಳಿ ನನಗೆ ಪರಿಚಯವುಂಟು
ಇವಕು ನನಗು ಮೂವತ್ತೆಂಟು ವರ್ಷಗಳ ದೀರ್ಘ ನಂಟು.
ಮುಂಜಾನೆ ಪ್ರತಿನಿತ್ಯ ಇಲ್ಲಿ ವಾಕಿಂಗ್‌ ಬರುತ್ತಿದ್ದ ರೂಢಿ.
ಅಸ್ವಸ್ಥತೆಯ ನಿಮಿತ್ತ ಕೆಲ ಸಮಯದಿಂದ ತಪ್ಪಿತ್ತು ನೋಡಿ.
ಆದರಿಂದ ; ಈಚೆಗೇಕೋ ಮುದುಕ ಪಾದ ಬೆಳೆಸಿಲ್ಲವೀ ಎಡೆಗೆ,
ಗೊಟ್ಟಕ್ಕೆಂದು ಪಯಣಿಸಿದನೋ ಹೇಗೆ ಮೇಲುಗಡೆಗೆ?
ಎನುವ ಈ ತರುಲತೆಗಳನುಮಾನ ನೀಗಲಿಕೆಂದೇ,
ಮಳೆಯಿದ್ದರೂ ಈ ಸಂಜೆ ಇಲ್ಲಿಗೆ ಬಂದೆ’
ಎನ್ನುತ್ತ, ನೆನಪುಗಳ ತೋಳ್ತಕ್ಕೆಗೆ ಸಂದರು.
ಹೌದೆಂಬಂತೆ ತೆಳ್ಳನೆಯ ಸುಯ್ಗಾಳಿ ಬೀಸಿ,
ಬದಿಯ ವೃಕ್ಷದಿಂದುರಿದಾಕಾಶ ಮಲ್ಲಿಗೆ ಬೆಳ್ನಗೆ ಸೂಸಿ.
ಅಡಿಯ ನೆಲ ಪೂರ್ತಿ ಕಣ್ಸೊಗದ ಬಂದರು.

2

ಪಾಠ ಹೇಳದಿದ್ದರೂ ನನಗಿವರು ಕಾಲೇಜಿನಲ್ಲಿ
ಎಲ್ಲರ ಹಾಗೆ ನನ್ನ ಪಾಲಿಗು ಮೇಷ್ಟ್ರೆ.
(ಇವರು ಬರುವುದ ಕಂಡು ಹಿಂದೆ ಸಿಗರೇಟನಾರಿಸಿ,
ದೂರ ಸರಿಸಿದ್ದುಂಟು ಆ್ಯಷ್‌ ಟ್ರೆ.
ಮಾನಾಭಿಮಾನಗಳ ಪ್ರಶ್ನೆಯೆದುರಾದಾಗ
ಮಾಡಿಕೊಂಡಿದ್ದಿಲ್ಲ ಬಿಲ್‌ಕುಲ್‌ ರಾಜಿ,
ಹಲವು ಪೊಗದಸ್ತು ಹುದ್ದೆಗಳ ಈ ಮಾಜಿ.
ಹಾಗೆಯೇ, ಹಿರಿಯರೊ ಕಿರಿಯರೊ ಭೇದವೆಣಿಸದೆ,
ಅಂತಸ್ತು ಕುಲ ಆಚಾರ ಕಿಂಚಿತ್ತು ಗಣಿಸದೆ-
ಕಂಡಿತೇ ಅವರಲ್ಲಿ ಕಣದಷ್ಟು ಗುಣ,
ಹೊಗಳಿಕೆಯ ಹತ್ತು ಮಣ
ಹೊರೆಸಿದಲ್ಲದೆ ತಣಿವ ಕುಳವಲ್ಲ ಪರ ಹಿತೈಷಿ ;
ಅದಕ್ಕಿಲ್ಲವೇ ನಾನೆ ಜ್ವಲಂತ ಸಾಕ್ಷಿ ?

3

ಇದೆಲ್ಲ ಒತ್ತಟ್ಟಿಗಿರಲಿ,
ಲಾಲ್‌ಬಾಗಿಗೆ ಬರೋಣ ಮರಳಿ.
ಗಾದಿಗೆಂದೂ ತಾನೆ ಮುಂದಾಗಿ ಚಿತಾವೆಣಿಸದ
ಗಾಂಧಿಯನುಮೋದಿ.
ಷಾದಿಯಾಗದ ಈ ವಿಚಾರಪೂಜಕ ‘ನಿರೀಶ್ವರವಾದಿ’,
ದೈವಸೃಷ್ಟಿಯ ವಿವಿಧ ತರು ಸಂತತಿಯ ಚೆಲ್ವಿಕೆಗೆ
ಮನ ಸೋತು ಮೋಹಗೊಂಡಿರುವಮೋಘ ಪರಿ
ಬರಿಸುವುದು ಸಂಸಾರಿ ಆಸ್ತಿಕರಿಗೂ ಮಹದಚ್ಚರಿ.
ಜಂಗುಳಿಯಲ್ಲಿ ಗುರುತಿಸದಷ್ಟು ಸರಳ ಖಾದಿವ್ರತಸ್ಥ ಎಚ್ಚೆನ್‌
ಮತ್ತವರ ಬದುಕು ಸದಾ ಕಾಲಕ್ಕು ದೊಡ್ಡ ಕ್ವಶ್ಚನ್‌.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X