ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗರ ಸಮಸ್ಯೆಗಳು ಹಾಗೂ ತುರ್ತು ಆತ್ಮವಿಮರ್ಶೆ

By Staff
|
Google Oneindia Kannada News
ಸಂಪಿಗೆಯವರ ‘ವಲಸೆ’ ಲೇಖನದ ಬಗ್ಗೆ ಕನ್ನಡದ ಹಲವು ಓದುಗರಿಂದ ವಿವಿಧ ರೀತಿಯ ವಾದ ಸರಣಿಗಳು ದಟ್ಸ್‌ ಕನ್ನಡ ಡಾಟ್‌ ಕಾಂನಲ್ಲಿ ಮೂಡಿ ಬರುತ್ತಿವೆ. ಸಂಪಿಗೆಯವರು ತಮ್ಮ ಲೇಖನದಲ್ಲಿ ಇಂದಿನ ಕನ್ನಡ ನಾಡಿನ ಸ್ಥಿತಿಯನ್ನು ಉತ್ತಮ ಅಂಕಿ ಅಂಶಗಳೂಂದಿಗೆ ವಿಶ್ಲೇಷಿಸಿ ನಾವೆಲ್ಲ ಇದರ ಬಗ್ಗೆ ಯೋಚಿಸುವಂತೆ ಮಾಡಿರುವುದಕ್ಕೆ ಅವರಿಗೆ ಸಮಗ್ರ ಕರುನಾಡ ಜನತೆಯ ಪರವಾಗಿ ಧನ್ಯವಾದಗಳು.

ಆದರೆ ಅವರ ಲೇಖನದಲ್ಲಿ ಕೊಟ್ಟಿರುವ ಸಲಹೆಯಂತೆ ಕನ್ನಡ ನಾಡಿನ ಜನತೆ ತಾವು ಹೆಚ್ಚಿನ ಮಕ್ಕಳಿಗೆ ಜನ್ಮ ನೀಡುವ ಮೂಲಕ ಇದಕ್ಕೆ ಕಡಿವಾಣ ಹಾಕಬಹುದು ಎಂದಿದ್ದಾರೆ. ಆದರೆ, ಈ ಸಲಹೆ ಅಷ್ಟು ಉತ್ತಮವಾದ ಪರಿಹಾರವಲ್ಲ ಎಂದು ಎಲ್ಲರಿಗೂ ತಿಳಿದಿರುವ ವಿಷಯ. ನಮಗೆ ಜನಸಂಖ್ಯೆಯ ಹೆಚ್ಚಳದಿಂದ ಆಗುವ ಅನಾನುಕೂಲ ಈಗಾಗಲೇ ಪ್ರತಿ ಕುಟುಂಬಗಳಿಗೆ ತಿಳಿದಿರುವ ವಿಚಾರ. ಈ ದುಬಾರಿ ಜೀವನದಲ್ಲಿ ಒಂದು ಮಗುವಿಗೆ ಒಳ್ಳೆಯ ಶಿಕ್ಷಣ ಮತ್ತು ಜೀವನವನ್ನು ರೂಪಿಸುವುದು ಎಷ್ಟು ಕಷ್ಟ ಎಂದು ತಿಳಿದಿರುವುದರಿಂದ ಎಲ್ಲಾ ಸಂಸಾರಗಳು ಆರತಿಗೊಂದು ಕೀರ್ತಿಗೊಂದು ಎಂಬ ನಾಣ್ಣುಡಿಯನ್ನು ಆದಷ್ಟೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿವೆ. ಇದು ಒಳ್ಳೆಯದು ಸಹ ಅಲ್ಲವಾ?

ಈ ವಲಸೆ ಸಮಸ್ಯೆ, ಬಾಟಾ ಅಂಗಡಿಗಳಲ್ಲಿ ಪೂಂಗಲ್‌ ಶುಭಾಶಯ, ಪಿಜಾ ಹಟ್‌ನಲ್ಲಿ ಕನ್ನಡ ಔಟ್‌, ಬೆಳಗಾವಿಯಲ್ಲಿನ ಚುನಾವಣೆಯಲ್ಲಿ ಎಂ.ಇ.ಎಸ್‌ ಬಹುಸಂಖ್ಯೆಯ ಸ್ಥಾನಗಳನ್ನು ಪಡೆದಿರುವುದು, ಇವೆಲ್ಲ ಕನ್ನಡದ ಸದ್ಯದ ಸ್ಥಿತಿಯನ್ನು ಬಿಂಬಿಸಿವೆ. ಕನ್ನಡಿಗರಿಗೆ ಬೆಂಗಳೂರಿನಲ್ಲಿ ಕೀಳರಿಮೆ ಮತ್ತು ಅನಾಥ ಪ್ರಜ್ಞೆ ಕಾಡುತ್ತಿದೆ. ಇದಕ್ಕೆ ಕಾರಣ ಎಲ್ಲರಿಗೂ ಗೊತ್ತಿರುವಂತೆ ಕನ್ನಡಿಗರ ತುಂಬು ಔದಾರ್ಯ, ಎಲ್ಲದಕ್ಕೂ ಹೊಂದಿಕೊಂಡು, ಸಹಿಸಿಕೊಂಡು ಹೋಗುವ ಪ್ರವೃತ್ತಿ. ಇದು ನಮ್ಮ ನಾಡಿನ ಮಣ್ಣಿನ ಗುಣ. ಆದರೆ ಈ ರೀತಿಯ ಗುಣವನ್ನೇ ತಮ್ಮ ಲಾಭವಾಗಿ ಮಾಡಿಕೊಂಡು ನಮ್ಮ ಮೇಲೆ ದಬ್ಬಾಳಿಕೆ ಮಾಡುವುದು ಎಷ್ಟರ ಮಟ್ಟಿಗೆ ಸರಿಯೆಂಬುವುದನ್ನ ಅವರು ಯೋಚಿಸುವಂತೆ ಮಾಡುವ ಸಮಯ ಇಂದು ಬಂದಿದೆ.

ಕನ್ನಡ ನುಡಿ, ಸಂಸ್ಕೃತಿಯ ಬಗ್ಗೆ ಎದ್ದಿರುವ ಕೂಗು ಕೇವಲ, ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗುತ್ತಿದೆ. ಆದರೆ ನಮ್ಮ ನಾಡಿನ ಬಹುಪಾಲು ಜಿಲ್ಲೆ, ತಾಲ್ಲೂಕು ಮತ್ತು ಹಳ್ಳಿಗಳಿಗೆ ಇದರ ಬಗ್ಗೆ ಏನೂ ಗೊತ್ತಿಲ್ಲ. ಗೊತ್ತಿರಲು ಸಾಧ್ಯವಿಲ್ಲ ಬಿಡಿ. ಯಾಕೆಂದರೆ ಅಲ್ಲಿ ಕನ್ನಡವೇ ಜೀವಾಳ ಮತ್ತು ಜೀವನ ಎಂಬ ರೀತಿಯಲ್ಲಿ ಜೀವಿಸುತ್ತಿದ್ದಾರೆ. ಅಲ್ಲಿ ಈ ರೀತಿಯ ಸಮಸ್ಯೆಗಳಿಗಿಂತ ಭಿನ್ನವಾದ ಹಾಗೂ ಇದಕ್ಕಿಂತ ಹೆಚ್ಚು ಬೃಹತ್‌ ಆದ ಸಮಸ್ಯೆಗಳಿವೆ.

ಆದ್ದರಿಂದ ಸಂವಿಧಾನದಲ್ಲಿ ವಲಸೆ ವಿರೋಧಿ ಶಾಸನ ತರುವುದು ಕೇವಲ ಬೆಂಗಳೂರಿಗೆ ಮಾತ್ರ ಸಾಧ್ಯವಿಲ್ಲದ ಮಾತು. ಬೆಂಗಳೂರಿಗೆ ಯಾಕೆ ಈ ಪರಿಯ ಆಪತ್ತು ಎಂದರೆ, ನಮ್ಮ ಸರ್ಕಾರ ಮತ್ತು ನಮ್ಮ ನಾಯಕರ ದೂರ ದೃಷ್ಟಿಯಿಂದ ಎಲ್ಲಾ ದೊಡ್ಡ ದೊಡ್ಡ ಯೋಜನೆಗಳು, ಕಂಪನಿಗಳು ಬೆಂಗಳೂರು ಬಿಟ್ಟು ಬೇರೆ ಪ್ರದೇಶಗಳಿಗೆ ಹೋಗದಿರುವುದು. ಇದರಿಂದ ನಮ್ಮ ಬೆಂಗಳೂರು ಅತಿ ಹೆಚ್ಚು ಒತ್ತಡವನ್ನು ಮತ್ತು ಹೆಚ್ಚು ಅವಮಾನಗಳನ್ನು ತಾನು ಅನುಭವಿಸಿ ತನ್ಮೂಲಕ ಕನ್ನಡಮ್ಮನಿಗೂ ನೀಡುತ್ತಿದೆ.

ಯಾಕೆಂದರೆ, ಕರ್ನಾಟಕದ ಪ್ರತಿ ಜಿಲ್ಲೆಯ ಜನರು ಉದ್ಯೋಗವನ್ನು ಹುಡುಕಿಕೊಂಡು ಬೆಂಗಳೂರಿನ ಕಡೆಗೆ ಮುಖ ಮಾಡಬೇಕು. ಈ ನಗರವನ್ನು ಬಿಟ್ಟು ಬೇರೆ ನಗರಗಳ ಕಡೆಗಲ್ಲ. ಹಾಗೆಯೆ ಬೇರೆ ರಾಜ್ಯದವರು ಸಹ ಐಟಿ, ಬಿಟಿ ಮತ್ತು ಬಿಪಿಒ ಎಂದುಕೊಂಡು ಬೆಂಗಳೂರಿಗೆ ಲಗ್ಗೆ ಹಾಕುತ್ತಿದ್ದಾರೆ. ಮತ್ತು ನಮ್ಮವರೊಡನೆ ಸ್ಪರ್ಧೆಯನ್ನು ಒಡ್ಡುತ್ತಿದ್ದಾರೆ. ಹೀಗಾಗಿ ಬಹುಸಂಸ್ಕೃತಿಯ ಮಾಲಿನ್ಯದಿಂದ, ನಿಜವಾದ ಕನ್ನಡಿಗರ ಮನ-ಭಾವನೆ ಮತ್ತು ಬೆಳವಣಿಗೆಯನ್ನು ಗಮನಿಸುವರಾರು? ಇದಕ್ಕೆ ಪರಿಹಾರ -ಯೋಜನೆಗಳು ವಿಕೇಂದ್ರೀಕರಣಗೊಳ್ಳಬೇಕು.

ಹಾಗೆಯೇ ಕನ್ನಡ, ಕನ್ನಡಿಗರ ಕಾಳಜಿಯ ಪಕ್ಷ ಬಂದರೂ ಆದರ ಬಗ್ಗೆ ಎಲ್ಲಾ ಜನರಿಗೂ ಎಷ್ಟರ ಮಟ್ಟಿಗೆ ಎಷ್ಟೊತ್ತಿಗೆ ಅರಿವು ಮೂಡಲು ಮತ್ತು ಮೂಡಿಸಲು ಸಾಧ್ಯ? ಇಂದು ಎಲ್ಲಾ ಸಾಮಾನ್ಯ ಪ್ರಜೆಗೆ ಭಾಷೆ, ಸಂಸ್ಕೃತಿಗಿಂತ ತನ್ನ ಮೂಲಭೂತ ಸಮಸ್ಯೆಗಳು ಮತ್ತು ತನ್ನ ಅಭಿವೃದ್ಧಿಯೇ ಮುಖ್ಯವಾಗುತ್ತಿವೆ. ಇದರಿಂದ ಎಲ್ಲರೂ ಒಂದೇ ಮನಸ್ಸಿನಿಂದ ಇಂಥ ವಿಷಯಗಳ ಬಗ್ಗೆ ಚಿಂತಿಸುವಂತೆ ಆಗುತ್ತಿಲ್ಲ. ಆದ್ದರಿಂದ ಇದರ ಬಗ್ಗೆ ಇಂದಿನ ಎಲ್ಲಾ ಪಕ್ಷಗಳು ಪಕ್ಷ ಬೇದ ಮರೆತು ಜನಸಾಮನ್ಯರ ಸಮಸ್ಯೆಗಳನ್ನು ಬಗೆಹರಿಸಲು ಅನುವಾಗಬೇಕು. ಜೊತೆಗೆ ನಮ್ಮ ನಾಡಿನ ಮತ್ತು ಬೆಂಗಳೂರಿನ ಸಮಸ್ಯೆಗಳನ್ನು ಸಮಂಜಸವಾಗಿ ತಿಳಿಸಬೇಕು. ಆಗ ಪ್ರತಿ ಕನ್ನಡಿಗನಿಗೂ ತನ್ನ ನಾಡಿನ, ದೇಶದ ಸಂಸ್ಕೃತಿ ಮತ್ತು ಭಾಷೆಯ ಬಗ್ಗೆ ಯೋಚಿಸಲು ಸಾಧ್ಯವಾಗುತ್ತದೆ.

ಇದೆಲ್ಲಕ್ಕೂ ಮಿಗಿಲಾಗಿ ಬೇಕಾಗಿರುವುದು ‘ಸರ್ವಶಿಕ್ಷಣ’ ಹಳ್ಳಿಯ ಪ್ರತಿಯೊಂದು ಮಗುವು ತನ್ನ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸದೆ ಪೂರ್ಣ ಮಾಡಲು ಸರ್ಕಾರ ಮತ್ತು ಎಲ್ಲಾ ಸಂಘ ಸಂಸ್ಥೆಗಳು ಸಹಾಯ ಮಾಡಬೇಕು. ಶಿಕ್ಷಣದಿಂದ ನಾವೆಲ್ಲಾ ಈ ರೀತಿ ಮಾತಾನಾಡುವ ಸೂಕ್ಷ್ಮ ವಿಷಯಗಳನ್ನು ಪ್ರತಿಯೊಬ್ಬರಿಗೂ ಮನ ಮುಟ್ಟುವಂತೆ ತಿಳಿಸಿ ಜಾಗೃತಿಯನ್ನುಂಟು ಮಾಡಲು ಸಾಧ್ಯ. ಹಾಗೆಯೇ, ನಮ್ಮ ನಾಡಿನ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯ ಎಳೆಗಳನ್ನು ಮಕ್ಕಳ ಚಿಕ್ಕ ವಯಸ್ಸಿನ ಮನಸ್ಸಲ್ಲಿ ನೆಡಲು ಸಾಧ್ಯ. ಆಗ ಆ ಮಗುವೆ ಇಡಿ ಸಮಾಜದ ಆಗು ಹೋಗುಗಳ ಬಗ್ಗೆ ಕಾಳಜಿಯನ್ನು ಗೊತ್ತಿಲ್ಲದೆ ವಹಿಸಿಕೊಂಡು ತನ್ನವರ ಜೊತೆ ಹೊರಡುತ್ತದೆ.

ಹಿಂದೆ ನಮ್ಮ ನಾಡಿಗೆ ಬಂದ ಪರರಾಜ್ಯದ ಪರ ದೇಶದ ಬಹು ಸಂಖ್ಯೆಯ ಗಣ್ಯರು ತಮ್ಮ ಮಾತೃ ಭಾಷೆ ಬೇರೆಯಾಗಿದ್ದರೂ ಕನ್ನಡಮ್ಮನ ಮಡಿಲನ್ನು ತಮ್ಮ ಹಲವು ಕನ್ನಡ ಪರ ಕಾರ್ಯಗಳಿಂದ ಶ್ರೀಮಂತಗೂಳಿಸಿ, ಅಮರರಾಗಿ ಕನ್ನಡ ನಾಡು ನುಡಿ ಇರುವವರೆಗೂ ಅವರನ್ನು ನಾವು ಸ್ಮರಿಸುವಂತೆ ಮಾಡಿದ್ದಾರೆ. ಆ ರೀತಿಯ ಅಭಿಮಾನ ನಮ್ಮ ಕನ್ನಡ ಜನರಿಂದ ಅವರಿಗೆ ಬರಬೇಕು. ಆಗಲೇ ಅವರು ನಮ್ಮ ಸಂಸ್ಕೃತಿಯ ಬಗ್ಗೆ ಗೌರವವನ್ನು ಮತ್ತು ಮೃದು ಭಾವನೆಯನ್ನು ಬೆಳೆಸಿಕೊಳ್ಳುತ್ತಾರೆ.

ಆದರೆ ನಮ್ಮವರೇ ತಮಗೆ ಅರಿವಿಲ್ಲದಂತೆ ನಮ್ಮ ಕನ್ನಡದ ಬಗ್ಗೆ ತಾತ್ಸಾರವನ್ನು ಹೊಂದಿ‘ಬ್ಯಾಂಗಲೂರಿಯನ್‌’ ಗಳಂತೆ ಮಾತಾಡಿದರೆ ಹೇಗೆ ಸಾಧ್ಯ. ಇದಕ್ಕೆ ಪುಷ್ಟಿಯಂತೆ ಈ ಜೋಕ್‌ ನೆನಪಿಗೆ ಬರುತ್ತದೆ.

‘ಇಬ್ಬರೂ ಇರುವಲ್ಲಿ ತಮಿಳು ಕೇಳಿಸುತ್ತಿದೆಯೆಂದರೆ ಅಲ್ಲಿ ಇಬ್ಬರೂ ತಮಿಳರು ಇರುತ್ತಾರೆ. ಹಿಂದಿ ಕೇಳಿಸುತ್ತಿದೆಯೆಂದರೆ ಅಲ್ಲಿ ಒಬ್ಬ ಕನ್ನಡಿಗ ಮತ್ತು ಇನ್ನೊಬ್ಬ ತಮಿಳಿಗ. ಅಲ್ಲಿ ಇಂಗ್ಲಿಷ್‌ ಕೇಳಿಸುತ್ತಿದೆಯೆಂದರೆ ಅವರಿಬ್ಬರೂ ಕನ್ನಡಿಗರಾಗಿರುತ್ತಾರೆ’

ಇತ್ತೀಚೆಗೆ ಆರಮನೆ ಮೈದಾನದಲ್ಲಿ ನಡೆದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಉತ್ಸವದಲ್ಲಿ ನಾನೂ ಸಹ ಭಾಗವಹಿಸಿದ್ದೆ. ಅಲ್ಲಿನ ಒಂದು ಕನ್ನಡ ಪುಸ್ತಕ ಮಾರಾಟ ಮಾಡುವ ಮಳಿಗೆಯನ್ನು ಪ್ರವೇಶಿಸಿ ಕನ್ನಡ ಪುಸ್ತಕಗಳ ಮಾರಾಟ ಹೇಗೆ ಎಂದು ಕೇಳಿದಾಗ ಆತ-‘ಏನು ಹೇಳಲಿ ಸಾರ್‌, ಈ ಉತ್ಸವದ ಬಗ್ಗೆ ಸಂಘಟಕರು ಸರಿಯಾದ ಪ್ರಚಾರ ಮಾಡಿಲ್ಲ. ಅಲ್ಲದೆ ನಮ್ಮ ಕನ್ನಡ ಪುಸ್ತಕ ಮಾರಾಟ ಮಳಿಗೆಗಳಿಗೆ ಭೇಟಿ ಕೊಡುವವರೂ ಕಮ್ಮಿ, ಕೊಟ್ಟರೂ ಕನ್ನಡ ಪುಸ್ತಕ ಕೊಳ್ಳುವರು ಯಾರೂ ಇಲ್ಲ. ಅಲ್ಲಿ ನೋಡಿ ಆ ಇಂಗ್ಲಿಷ್‌ ಪುಸ್ತಕಗಳ ವ್ಯಾಪಾರ. ನಾವು ಈ ಮಳಿಗೆಗೆ ಕೊಡುವ ಬಾಡಿಗೆ ಸಹ ಗಿಟ್ಟುವುದಿಲ್ಲ. ಇನ್ನು ನಿಮ್ಮಂಥವರು ರಿಯಾಯಿತಿಯನ್ನು ಕೇಳುವಿರಿ. ಹೇಗೆ ಸಾರ್‌ ಡಿಸ್ಕೌಂಟ್‌ ಕೊಡಲು ಮನಸ್ಸು ಬರುತ್ತದೆ. ಆದಕ್ಕೆ ಮುಂದಿನ ಬಾರಿ ಈ ಉತ್ಸವದಲ್ಲಿ ಭಾಗವಹಿಸಬಾರದೆಂದು ನಿರ್ಧರಿಸಿದ್ದೇನೆ’

ಇದು ನಿಜವೇ ಸರಿ. ನಮ್ಮ ಜನರು ಇಂಗ್ಲಿಷ್‌ ಪುಸ್ತಕಗಳನ್ನು ಮನೆಯ ಕಪಾಟುಗಳಲ್ಲಿ ಹೊಂದಿರುವುದೇ ಪುಣ್ಯದ ಕೆಲಸ ಮತ್ತು ಅದು ನಮ್ಮ ಯುವ ಪೀಳಿಗೆಗೆ ಉತ್ತಮ ಭವಿಷ್ಯವನ್ನು ಕೊಡುತ್ತದೆ ಎಂದು ತಿಳಿದಿರುವರು. ಇನ್ನು ಯಾವುದೇ

ಇಂಗ್ಲಿಷ್‌ ಪುಸ್ತಕಗಳು ಬಿಡುಗಡೆಯಾದರೆ, ಭಾರೀ ಪ್ರಚಾರ ಮತ್ತು ಭಾರೀ ರಿಯಾಯಿತಿಯ ನಡುವೆ ಅಂಗಡಿಗಳು ವಿಶೇಷವಾಗಿ ರಾತ್ರಿಯಿಡೀ ತೆರೆದಿದ್ದು ಎಲ್ಲಾ ಆಂಗ್ಲ ಪ್ರಿಯರಿಗೆ ಸಕಾಲಕ್ಕೆ ತಲುಪುತ್ತವೆ. ಅದೇ ನಮ್ಮ ಕನ್ನಡ ನಾಡಿನ ಮುಖ್ಯ ಸಾಹಿತಿಯ ಹೆಸರನ್ನು ಮತ್ತು ಆತನ ಪುಸ್ತಕಗಳ ಬಿಡುಗಡೆ ಈ ರೀತಿಯ ಭಾರೀ ಪ್ರಚಾರದಂತೆ ನವ ಓದುಗರಿಗೆ ತಿಳಿಯಲು ಸಾಧ್ಯವಿಲ್ಲ. ಇನ್ನೆಲ್ಲಿ ಕನ್ನಡ ಪ್ರಿಯರು ಬೆಳೆಯಲು ಸಾಧ್ಯ? ಇಲ್ಲಿ ಕೇವಲ ವ್ಯಾಪಾರವೇ ಬಂಡವಾಳ, ಸಂಸ್ಕೃತಿಯಲ್ಲ. ಇದು ತಲೆ ತಗ್ಗಿಸುವ ವಿಚಾರ.

ಇನ್ನು ನಮ್ಮ ಚಲನಚಿತ್ರ ಕ್ಷೇತ್ರಕ್ಕೆ ಬಂದರೆ ನಾವೇನೂ ಕಡಿಮೆಯಿಲ್ಲ . ಮೂದಲು ಕೇವಲ ನಿರ್ದೇಶಕರು ಮತ್ತು ನಾಯಕಿಯರ ಅಮದು ಆಗುತ್ತಿತ್ತು. ಈ ಪ್ರವೃತ್ತಿ ಸಾವಕಾಶವಾಗಿ ವಿಸ್ತರಿಸಿಕೊಂಡು ಕತೆ, ಗಾಯಕರು, ಸಂಗೀತ ನಿರ್ದೇಶಕರು ಮತ್ತು ಟೆಕ್ನಿಷಿಯನ್‌ಗಳನ್ನು ಕರೆಸಿಕೊಂಡು, ಕನ್ನಡ ಸಿನಿಮಾವನ್ನು ಕನ್ನಡ ನೆಲದಲ್ಲಿ ಬಿಡುಗಡೆ ಮಾಡಿ ಪುಣ್ಯವನ್ನು ಕಟ್ಟಿಕೊಳ್ಳುತ್ತಿದ್ದಾರೆ. ಯಾಕೆಂದರೆ ನಮ್ಮಲ್ಲಿನ ಯುವ ಕಲಾ ಪ್ರತಿಭೆಗಳು ಇವರಿಗೆ ಭಾರೀ ದುಡ್ಡು ತರುವಂಥ ಸರಕುಗಳಲ್ಲ. ನಮ್ಮ ಕನ್ನಡ ನಾಡಿನ ಹಿಂದೆ ಬಂದಂಥ ಅತ್ಯುತ್ತಮ ಚಲನಚಿತ್ರಗಳಿಗೆ ನಮ್ಮ ಕನ್ನಡ ಕಾದಂಬರಿಗಾರರು, ಸಂಗೀತಕಾರರು, ನಟರು ಮತ್ತು ಜನತೆ ಕಾರಣ ಎಂಬುವುದನ್ನೇ ಮರೆತು ಕೀಳಾಗಿ ಕಾಣುತ್ತಿದ್ದಾರೆ. ಯಾರು ಕೇಳಬೇಕು ಇವರನ್ನು?

ಹೀಗೆ ಎಲ್ಲಾ ರಂಗಗಳನ್ನು ಹೀಗೆ ಮಾಡಿ, ಇದನ್ನು ಅಳವಡಿಸಿಕೊಳ್ಳಿ ಎಂದು ಬೆಟ್ಟು ಮಾಡಿ ತೋರಿಸಿ ಸರಿಪಡಿಸುವುದು ಎಷ್ಟರ ಮಟ್ಟಿಗೆ ಸರಿ. ನಮ್ಮ ನಾಡಿನ ಎಲ್ಲರೂ ಸಹ ಅವಕಾಶವನ್ನು ಕೊಟ್ಟರೆ ಬೇರೆಯವರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಎಂದು ಮಾಡಿ ತೋರಿಸುತ್ತಾರೆ. ಅದಕ್ಕೆ ಸ್ವಲ್ಪ ಅಸಕ್ತಿ ಮತ್ತು ಪ್ರೀತಿ ಮುಖ್ಯ.

ಹೀಗಾಗಬಾರದು ನಾವು ನಮ್ಮ ಭಾಷೆಯನ್ನು ಎದೆಯುಬ್ಬಿಸಿ ಮಾತನಾಡಬೇಕು. ನಮ್ಮ ನಡುವೆ ಬದುಕುತ್ತಿರುವ ಬೇರೆ ಭಾಷೆಯ ಎಲ್ಲ ಜನರು ತಮ್ಮ ನಡುವೆ ತಮ್ಮ ಮಾತೃ ಭಾಷೆಯಲ್ಲಿಯೆ ರಾಜಾರೋಷವಾಗಿ ಮಾತಾನಾಡಿದರೆ ನಾವೇಕೆ ಮಾತಾನಾಡಲು ಸಾಧ್ಯವಿಲ್ಲ ಹೇಳಿ? ನಾವೇ ನಮ್ಮ ಭಾಷೆಯ ಬಗ್ಗೆ ನಮ್ಮಲ್ಲಿ ಹೆಮ್ಮೆಯನ್ನು ಪಡದಿದ್ದರೆ ಅವರಾದರೂ ಹೇಗೆ ತಾನೆ ಗೌರವವನ್ನು ಕೊಡಲು ಮತ್ತು ಭಾಷೆ ಕಲಿಯಲು ಅಸಕ್ತಿ ತೋರಲು ಸಾಧ್ಯ?

ಪರರ ಆಕ್ರಮಣ ಪುರಾತನ ಕಾಲದಿಂದಲೂ ನಡೆದಿರುವುದು ಸರ್ವೇಸಾಮಾನ್ಯ. ಇಂದೂ ಈ ರೀತಿಯ ಆಕ್ರಮಣಗಳು ಇವೆ. ಆದಕ್ಕೆ ಎಲ್ಲರೂ ಒಗ್ಗಟ್ಟಿನಿಂದ ತಮ್ಮ ತಮ್ಮಲ್ಲಿಯೇ ಸಂಕಲ್ಪ ಮಾಡಿಕೊಂಡು ಶಾಂತ ರೀತಿಯ ಕ್ರಾಂತಿಯನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ, ಇಂಥ ಹತ್ತು ಅವಮಾನಗಳಿಗೆ ಸರಿಯಾದ ಉತ್ತರವನ್ನು ನಮ್ಮ ಜನ ಸರಿಯಾದ ರೀತಿಯಲ್ಲಿ ಕೊಡುವುದರಲ್ಲಿ ಸಂಶಯವಿಲ್ಲ.


ಪೂರಕ ಓದಿಗೆ-
ವಲಸಿಗರು ಮತ್ತು ನಾವು...
ಕರ್ನಾಟಕದಲ್ಲಿ ಕನ್ನಡಿಗರ ಜನಸಂಖ್ಯೆ ಮತ್ತು ಕನ್ನಡದ ಸಮಸ್ಯೆಗಳು


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X