ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗೆ ಬಗೆ ಬಗೆ..

By Super
|
Google Oneindia Kannada News

ಹಾಸ್ಯಪ್ರಜ್ಞೆ ಜತೆಗೂಡಿದ ನಗು ಹೃದಯಾಘಾತವನ್ನು ದೂರಮಾಡುತ್ತದೆ ಎಂದು ಇತ್ತೀಚಿನ ಅಧ್ಯಯನಗಳು ಹೇಳುತ್ತವೆ. ನಗು ಮಾನಸಿಕ ಒತ್ತಡವನ್ನು ನಿವಾರಿಸುವ ಶಕ್ತಿ ಹೊಂದಿದೆ.

ನಗುವು ಸಹಜ ಧರ್ಮ..
ನಗಿಸುವುದು ಪರಧರ್ಮ..
ನಗುವ, ನಗಿಸುವ
ನಗಿಸಿ ನಗುತ ಬಾಳುವ
ವರವ ಮಿಗೆ ನೀನು ಬೇಡಿಕೊಳ್ಳೊ ಮಂಕುತಿಮ್ಮ।।

ಈ ಪರಿಯಾಗಿ ಡಿ.ವಿ.ಜಿ.ಯವರು ನಗುವಿನ ಕುರಿತು ಸೊಗಸಾಗಿ ವಿವರಿಸಿದ್ದಾರೆ.

ನಗೆ ಕೇವಲ ತುಟಿ ಮಾತ್ರ ಬಿರಿಯುವಂತಹ ''ಮುಗುಳುನಗೆ’’ ಆಗಿರಬಹುದು ಅಥವಾ ಗಹಗಹಿಸಿ ನಗುವ ಅಟ್ಟಹಾಸವೇ ಆಗಿರಬಹುದು. ಆದರೆ ಅದು ದೇಹದ ಸ್ನಾಯುಗಳನ್ನು ಸಡಿಲಗೊಳಿಸಿ, ಮನಸ್ಸಿಗೆ ಮತ್ತು ದೇಹಕ್ಕೆ ಹೊಸ ಚೈತನ್ಯವನ್ನು ನೀಡುವುದಂತೂ ನಿಜ. ದುಗುಡದ ಬೇಗೆಯ ನಡುವೆ ಬೀಸುವ ನಗುವಿನ ತಂಗಾಳಿ, ವಾತಾವರಣವನ್ನು ತಿಳಿಯಾಗಿಸುವ ಶಕ್ತಿ ಹೊಂದಿದೆ!

ನಗು ಎನ್ನುವುದು ಹಾಸ್ಯಕ್ಕೆ, ಸಂತಸಕ್ಕೆ, ಕೆಲವೊಮ್ಮೆ ವ್ಯಂಗ್ಯಕ್ಕೆ ಮೆದುಳು ನೀದುವ ಪ್ರತಿಕ್ರಿಯೆ. ನಗುವಾಗ ದೇಹದ ಭಂಗಿಯಲ್ಲಿ ಬದಲಾವಣೆಯಾಗುತ್ತದೆ.. ನಗುವಿನ ಶಬ್ದ ಉತ್ಪತ್ತಿಯಾಗುತ್ತದೆ.. ಹೆಚ್ಚೇಕೆ ಕೆಲವೊಮ್ಮೆ ಕಣ್ಣೀರು ಕೂಡಾ ಉಕ್ಕುತ್ತದೆ!

ನಗೆಯಲ್ಲಿ ಬಗೆ ಬಗೆ.ಮಗುವಿನ ಮುಗ್ಧ ನಗೆ, ಕಾದು ಕಾದು ಕೊನೆಗೂ ಮಗಳಿಗೆ ಒಳ್ಳೆಯ ವರ ದೊರೆತಾಗ ,ಅಪ್ಪನ ಸಂತೃಪ್ತಿಯ ನಗೆ, ನೌಕರಿ ಸಿಗುವಾಗಿನ ಹೆಮ್ಮೆಯ ನಗೆ, ಹಾಸ್ಯದ ತುಣುಕನ್ನು ಆಸ್ವಾದಿಸುವಾಗಿನ ನಗೆ, ಪ್ರಿಯತಮನ ಮೊಗ ಕಂಡಾಗ ಅರಳುವ ಪ್ರಿಯತಮೆಯ ನಗೆ, ಸಿನೆಮಾ ನಟಿಯ ಮಾದಕ ನಗೆ ಇತ್ಯಾದಿ.. ನಗುವಿನಲ್ಲಿ ಬಗೆ ಬಗೆ.

ಒಂದೊಂದು ನಗೆಯೂ ಒಂದೊಂದು ಚೆಲುವು..

''ಆಕೆ ನಕ್ಕರೆ ಬೆಳದಿಂಗಳು ಚೆಲ್ಲಿದಂತೆ..’’ ಇದು ನಗುವಿನ ಸೌಂದರ್ಯವನ್ನೂ,ಅದರ ಪರಿಣಾಮವನ್ನೂ ಹೇಳಲು ಬಳಸುವ ನುಡಿಕಟ್ಟು. ''ಅಳು ನುಂಗಿ ನಗು ನಕ್ಕ’’ ಎನ್ನುವುದು ಕಷ್ಟದಲ್ಲೂ ಸಂತೋಷದಲ್ಲಿ ಇರುವ ಅರ್ಥದಲ್ಲಿ ಬಳಸಲಾಗುತ್ತದೆ. ನೀ ನಗುವ ಹಾದಿಯಲಿ ನಗೆಹೂವು ಬಾಡದಿರಲಿ ಎಂಬುವುದು ''ಚೆನ್ನಾಗಿರು..ಸಂತೋಷದಲ್ಲಿರು’’ ಎಂಬ ಹಾರೈಕೆ.

ಸದುದ್ದೇಶದ ನಗು ಮನವನ್ನು ಅರಳಿಸಿದರೆ, ಅಪಹಾಸ್ಯದ ನಗು ಮನ ಮುದುಡಿಸಬಲ್ಲದು!

ಹಾಸ್ಯಪ್ರಜ್ಞೆಯ ಜತೆಗೂಡಿದ ನಗು ಹೃದಯಾಘಾತವನ್ನು ದೂರಮಾಡುತ್ತದೆ ಎಂದು ಇತ್ತೀಚಿನ ಅಧ್ಯಯನಗಳು ಹೇಳುತ್ತವೆ. ನಗು ಮಾನಸಿಕ ಒತ್ತಡವನ್ನು ನಿವಾರಿಸುವ ಶಕ್ತಿ ಹೊಂದಿದೆ. ಆದ ಕಾರಣವೇ ''ನಗೆ ಒಂದು ಸಿದ್ಧೌಷಧ ’’ ಎಂಬ ಮಾತು ಚಾಲ್ತಿಯಲ್ಲಿದೆ.

ನೀವು ಉದ್ಯಾನವನಗಳಲ್ಲಿ ಜನ ಗುಂಪುಕಟ್ಟಿಕೊಂಡು ನಗುವುದನ್ನು ಕಂಡಿರಬಹುದು..ಅದು 'ನಗು ಸಂಘ’. ನಕ್ಕು ರೋಗಮುಕ್ತರಾಗಿ ಎನ್ನುವುದು ಅದರ ಧ್ಯೇಯ!

ಆದಷ್ಟು ನಗುವುದನ್ನು ಅಭ್ಯಾಸ ಮಾಡಿಕೊಳ್ಳಿ. (ಕಾರಣವಿಲ್ಲದೆ ನಗಬೇಡಿ. ಹಾಗೆ ನಗುವವರಿಗೆ ಬೇರೆಯೇ ಹೆಸರಿದೆ!)

*ಹಾಸ್ಯಪ್ರಜ್ನೆಯನ್ನು ಬೆಳೆಸಿಕೊಳ್ಳಿ. ದಿನ ನಿತ್ಯದ ಜೀವನದಲ್ಲಿ ಹಾಸ್ಯವನ್ನು ಕಾಣಿ.

*ಮಾತಿನಲ್ಲಿ ತಿಳಿಹಾಸ್ಯದ ಲೇಪವಿರಲಿ.

*ಗಂಟು ಮುಖ ಹಾಕಿಕೊಂಡಿದ್ದರೆ ಯಾರೂ ಅದನ್ನು ಇಷ್ಟಪಡುವುದಿಲ್ಲ ಎಂದು ನೆನಪಿರಲಿ.

*ಕುಟುಂಬದವರೆಲ್ಲಾ ಒಟ್ಟಾಗಿ ಸೇರಿ ಹಾಸ್ಯದ ಆನಂದವನ್ನು ಸವಿಯಿರಿ.

*ಹಾಸ್ಯ ಕತೆ, ಲೇಖನ,ಜೋಕುಗಳನ್ನು ಆನಂದಿಸಿ.

*ಸದುದ್ದೇಶದ ಹಾಸ್ಯ ಮಾತ್ರ ಸಾಕು..

*ಒಟ್ಟಿನಲ್ಲಿ ನಗುತ್ತಾ, ನಗಿಸುತ್ತಾ ಆನಂದವಾಗಿರಿ!

English summary
Archana Kuladeep Dongre of Bangalore, writes on Smile, the best medicine for good health.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X