ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದರಂತರಾಳದಲಿ ಗುಪ್ತಗಾಮಿನಿಯಾಗಿ...

By Staff
|
Google Oneindia Kannada News


ಬದುಕಿನ ವಿವಿಧ ಮಜಲುಗಳನ್ನು ನೋಡುತ್ತಲೇ, ಸಂಬಂಧಗಳ ಅರ್ಥೈಸುತ್ತಲೇ ಈ ಬರಹ ಸರಾಗವಾಗಿ ಸಾಗಿದೆ. ಇತ್ತೀಚಿನ ಪ್ರಮುಖ ಪುಸ್ತಕಗಳನ್ನು ಇಲ್ಲಿ ನೆನೆಯುತ್ತಲೇ, ಓದುಗರನ್ನು ಆವರಿಸಿಕೊಂಡಿದೆ. ಒಂದು ವೆರೈಟಿ ಓದಿಗೆ ಇದು ಸಕತ್‌ ಸರಕು.

ಕಣ್ಣೇ ಹಾಗೆ; ಅದು ಕೆಲವು ಸಂಗತಿಗಳನ್ನು ನೋಡುವುದೇ ಇಲ್ಲ. ಕೆಲವನ್ನು ಬೇಡವೆಂದರೂ ನೋಡುತ್ತದೆ. ಎಷ್ಟೋ ಸಾರಿ ದಿನಾ ಓಡಾಡುವ ಹಾದಿಬದಿಯ ಬೇಲಿಯಲ್ಲಿ ಅರಳಿದ ನೀಲಿ ಹೂವು ಕಣ್ಣಿಗೆ ಬಿದ್ದಿರುವುದೇ ಇಲ್ಲ. ಯಾವುದೋ ಒಂದು ದಿವ್ಯ ಗಳಿಗೆಯಲ್ಲಿ ಅದು ಕಾಣಿಸಿ ಖುಷಿಯಾಗುತ್ತದೆ.

ಈ ಮಾತು ಸಂಬಂಧದ ವಿಚಾರದಲ್ಲೂ ನಿಜ. ನಮ್ಮ ಜೊತೆಗೇ ಇರುವ ಗೆಳೆಯನ, ಗೆಳತಿಯ ಪ್ರೀತಿ ಎಷ್ಟೋ ಸಲ ನಮಗೆ ಅರ್ಥವೇ ಆಗಿರುವುದಿಲ್ಲ. ನಾವು ಮತ್ತೇನಕ್ಕೋ ಹಂಬಲಿಸುತ್ತಾ ಎಲ್ಲೆಲ್ಲಿಗೋ ಸಾಗುತ್ತಿರುತ್ತೇವೆ. ಮತ್ತೆ ಒಂದು ದಿನ ಇದ್ದಕ್ಕಿದ್ದ ಹಾಗೆ ನಾವು ಹುಡುಕುತ್ತಿದ್ದದ್ದು ಜೊತೆಗೇ ಇತ್ತಲ್ಲ ಅನ್ನಿಸಿಬಿಡುತ್ತದೆ.

ಬುದ್ಧನಿಗೆ ಆದದ್ದೂ ಅದೇ ಇರಬೇಕು. ಆಸೆಯೇ ದುಃಖಕ್ಕೆ ಮೂಲ ಅಂತ ಅನಿಸುವುದಕ್ಕೆ ಆತ ಅಷ್ಟೊಂದು ಹುಡುಕಾಡಬೇಕಿತ್ತಾ, ಅಷ್ಟೊಂದು ತುಡಿಯಬೇಕಿತ್ತಾ, ಅಷ್ಟೊಂದು ಧ್ಯಾನಸ್ಥನಾಗಬೇಕಿತ್ತಾ ಅಂತ ಈಗ ನಮಗೆ ಅನ್ನಿಸಬಹುದು. ಆದರೆ ಆಸೆಯೇ ದುಃಖಕ್ಕೆ ಮೂಲ ಅನ್ನುವುದು ನಮಗೂ ನಮ್ಮದೊಂದು ಭಾವವಾಗಿ ಅರ್ಥವಾಗಿರುವುದಿಲ್ಲ. ಅದೊಂದು ಹೇಳಿಕೆಯ ಮಟ್ಟದಲ್ಲೇ ಉಳಿಯುತ್ತದೆ. ಅದನ್ನು ತಮಾಷೆಯಾಗಿಯೋ ಉಪದೇಶವಾಗಿಯೋ ನೀತಿಯಾಗಿಯೋ ನಾವು ಬಳಸುತ್ತೇವೆ ಅಷ್ಟೇ. ಜೀವನಕ್ರಮವಾಗಿ ಅಲ್ಲ.

An insight into love, life and death‘ಹಿತ್ತಲಗಿಡ ಮದ್ದಲ್ಲ’ ಅನ್ನುವ ಗಾದೆಯೋ ‘ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಊರೆಲ್ಲ ಹುಡುಕಿದ ಹಾಗೆ’ ಅನ್ನುವ ಗಾದೆಯೋ ಬಹುಶಃ ಇದೇ ಕಾರಣಕ್ಕೆ ಹುಟ್ಟಿರಬೇಕು. ಯಾರೊಳಗೆ ಏನಿದೆಯೋ ಅನ್ನುವುದನ್ನು ಕಂಡುಕೊಳ್ಳುವುದು ಕಷ್ಟದ ಸಂಗತಿ. ನಿಮ್ಮ ಮುಂದೆ ಸಿ. ಅಶ್ವತ್ಥರನ್ನು ತಂದು ನಿಲ್ಲಿಸಿದರೆ ಅವರೊಳಗೆ ಅಷ್ಟೊಂದು ಭಾವಪೂರ್ಣ ದನಿಯಿದೆ ಅಂತ ಹೇಳುವುದು ಸಾಧ್ಯವೇ? ಎಂ.ಎಫ್‌.ಹುಸೇನರನ್ನು ಕಂಡೊಡನೆ ಅವರ ಬೆರಳಿಂದ ಅಂಥ ರೇಖೆಗಳು ಹೊಮ್ಮುತ್ತವೆ ಅಂತ ಯಾರಿಗಾದರೂ ಅನ್ನಿಸುತ್ತದೆಯೇ? ಪ್ರಕಾಶ್‌ರೈಯನ್ನು ಸುಮ್ಮನೆ ನೋಡಿದರೆ ಅವನೊಳಗೊಬ್ಬ ಅದ್ಭುತ ನಟನಿದ್ದಾನೆ ಅಂತ ಊಹಿಸುವುದು ಸಾಧ್ಯವೇ?

ಅಂಥ ಊಹೆಗೆ ಮೀರಿದ ಸಂಗತಿಗಳೇ ಖುಷಿಕೊಡುತ್ತವೆ. ಕಲ್ಲಿನಲಿ ಕಾರಣಿಕ ಇದೆ ಅಂತ ನಂಬುವುದೂ ಶಬರಿಮಲೆಯ ನಿರುದ್ವಿಗ್ನ ಹಾದಿಯಲ್ಲಿ ಮುಕ್ತಿಯಿದೆ ಅಂತ ನಂಬುವುದೂ ಮಾನಸಗಂಗೋತ್ರಿಯ ತಂಪುನೀರಿಗೆ ಪಾಪಗಳನ್ನು ತೊಳೆಯುವ ಶಕ್ತಿಯಿದೆ ಎಂದು ನಂಬುವುದು ಕೂಡ ಕಷ್ಟವೇ. ಆದರೆ ದೇವರ ಭಕ್ತಿ ರೂಢಿಯಿಂದ ಬಂದಿರುತ್ತದೆ. ಹೀಗಾಗಿ ಅಲ್ಲಿ ಬೆರಗಿಗೆ ಅವಕಾಶವೇ ಇರುವುದಿಲ್ಲ. ನಿಜಕ್ಕೂ ಬೆರಗಿರುವುದು ಹಿರಣ್ಯಕಶಿಪುವಿನಂಥವರಿಗೆ. ಕಂಬದಲ್ಲಿ ದೇವರಿದ್ದಾನಾ ಅಂತ ಕೇಳಿ ಗಹಗಹಿಸುವ ಹೊತ್ತಿಗೆ ‘ಸಡಗರದಿ ಸ್ತಂಭದಿಂದೊದಗಿದೆಯೋ ನರಹರಿಯೆ’ ಎಂಬಂತೆ ಬಂದರೆ ಯಾರು ತಾನೇ ಸ್ತಂಭೀಭೂತವಾಗುವುದಿಲ್ಲ?

******

ಮೊನ್ನೆ ಮೊನ್ನೆ ಕಲಾವಿದ ಪ.ಸ. ಕುಮಾರ್‌ ಹೇಳುತ್ತಿದ್ದರು;

‘ನನ್ನ ಮಗ ಸಾವು ಕೊಡು ಅಂತ ಕೇಳಿದ. ಮಗನೇ ಸಾವು ಕೊಡು ಅಂತ ಕೇಳಿದರೆ ಹೇಗೆ ಸಹಿಸಿಕೊಳ್ಳಲಿ. ಆಮೇಲೆ ಈ ನೋವಿನಿಂದ ನನ್ನನ್ನು ಪಾರುಮಾಡು ಅಂತ ಕೇಳಿಕೊಂಡ. ನಾನು ದೇವರಿಗೆ ಕೈಮುಗಿಯುತ್ತಿದ್ದಂತೆ ಅವನು ಹೇಳಿದ; ಅಪ್ಪಾ, ದೇವರಿಲ್ಲ. ಅವನಿಗೆ ನಿನಗಿಂತ ಹೆಚ್ಚು ನಾನು ಕೈಮುಗಿದಿದ್ದೇನೆ. ನಿನಗಿಂತ ಹೆಚ್ಚು ನಾನು ಪ್ರಾರ್ಥಿಸಿಕೊಂಡಿದ್ದೇನೆ. ಹಗಲು ರಾತ್ರಿಯೆನ್ನದೇ ಅವನ ಧ್ಯಾನದಲ್ಲಿ ಕಳೆದಿದ್ದೇನೆ. ಆ ಪ್ರಾರ್ಥನೆ ಕೇಳಿದ ಎಂಥಾ ಕಲ್ಲು ಮನಸ್ಸಿನ ವ್ಯಕ್ತಿಯಾದರೂ ಕರಗುತ್ತಿದ್ದ. ಅವನು ಕರಗಲಿಲ್ಲ, ಯಾಕೆಂದರೆ ಅವನು ಇಲ್ಲ’.

ಅವರಿಗೆ ಅಚ್ಚರಿಯಾದದ್ದು ಹದಿನೆಂಟು ವಯಸ್ಸಿನ ಮಗನ ಪ್ರಬುದ್ಧತೆ. ಅವನು ನೋವಿಗೆ ಅಂಜುತ್ತಿದ್ದ. ಸಾವಿಗೆ ಹೆದರುತ್ತಿರಲಿಲ್ಲ. ‘ನನ್ನನ್ನು ಕೊಂದುಬಿಡಪ್ಪ. ಯಾವ ಚಿಕಿತ್ಸೆ ಕೂಡ ನನ್ನನ್ನು ಉಳಿಸಲಾರದು ಅನ್ನುತ್ತಿದ್ದ. ಸುಮ್ನೆ ಪ್ರಯತ್ನಪಡಬೇಡ ಡ್ಯಾಡಿ’ ಅಂತ ಅವನೇ ಹೇಳುತ್ತಿದ್ದ.

ತುಂಬ ವಯಸ್ಸಾದವರು ಕೂಡ ಸಾವಿಗೆ ಅಂಜುತ್ತಾರೆ. ಸಣ್ಣಪುಟ್ಟ ಕಾಯಿಲೆ ಬಂದರೂ ಎಲ್ಲಿ ಸತ್ತು ಹೋಗುತ್ತೇವೋ ಅಂತ ಡಾಕ್ಟರನ್ನು ಕರೆಸಿ ಅಂತ ಅಂಗಲಾಚುತ್ತಾರೆ. ಅಂಥದ್ದರಲ್ಲಿ ಆ ಪುಟ್ಟ ಹುಡುಗ ಸಾವಿಗೆ ಎದುರಾದ ರೀತಿ, ನೋವನ್ನು ಅವಡುಗಚ್ಚಿ ಸಹಿಸಿದ ರೀತಿ ಅಚ್ಚರಿ ಹುಟ್ಟಿಸುತ್ತದೆ. ಐ ಯಾಮ್‌ ಪ್ರೌಡ್‌ ಆಫ್‌ ಹಿಮ್‌ ಅನ್ನುತ್ತಾರೆ ಕಲಾವಿದ ಕುಮಾರ್‌.

ಆ ಪುಟ್ಟ ಹುಡುಗ, ಕುಶಾಲ್‌, ಸುಮಾರು ಎಂಟು ವರುಷಗಳ ಕಾಲ ನೋವಿನ ಜೊತೆ ಬದುಕಿದವನು. ಸಾವಿನತ್ತ ಮುಖ ಮಾಡಿದ್ದರೂ ಬದುಕನ್ನು ಬಣ್ಣಗಳ ಮೂಲಕ ನೋಡಲು ಯತ್ನಿಸಿದವನು. ನಮಗೂ ನೋವನ್ನು ಸಹಿಸಿಕೊಂಡು ಸಾವನ್ನು ಎದುರಿಸುವುದಕ್ಕೆ ಆ ಪುಟ್ಟ ಹುಡುಗನೇ ಕಲಿಸಿಕೊಟ್ಟಿದ್ದಾನೆ ಅನ್ನಿಸುವುದಿಲ್ಲವೇ?

***

ಮೊನ್ನೆ ಈ ನಾಲ್ಕು ಸಾಲುಗಳು ಓದಲು ಸಿಕ್ಕವು;

ಸಿರಿಯರಸನಡಿಗೆರಗಿ ಗಿರಿಜಾ
ವರಗೆ ವಂದಿಸಿ ನುತಿಸಿ ವಾಣೀ
ವರಗೆ ಕೈಮುಗಿದೆರಗಿ ಮನದಲಿ ಶಾರದೆಯ ನೆನೆದು
ವರಗಿರಿಯಾಳೆಸೆದಿರುವ ಗಂಗಾ
ಧರನ ತರಳಗೆ ನಮಿಸಿ ಬರೆವೆನು
ಹರಸುತನ ಸುರ ಸೇನೆಯಧಿಪನ ವಿನುತ ಚರಿತೆಯನು।।

ಭಾಮಿನಿ ಷಟ್ಪದಿಯಲ್ಲಿರುವ ಈ ಪದ್ಯದ ಅರ್ಥ ಮತ್ತು ವಿಸ್ತಾರ ಕಣ್ಣಿಗೆ ಕಟ್ಟುವಂತಿತ್ತು. ಆಮೇಲೆ ತರಿಸಿಕೊಂಡು ನೋಡಿದರೆ ಅದು ಅಮರ ಸೇನಾಧಿಪತ್ಯ ಎಂಬ ಯಕ್ಷಗಾನ ಪ್ರಸಂಗ. ಬರೆದವರು ನಾರಾಯಣರಾವ್‌. ತರುಣಿಯರಾಡಿದರಂದು ಘನ ಹರುಷದಲಿಜಲಕೇಳಿಯನು ಅನ್ನುವ ಪದ್ಯದಲ್ಲಿ ಅವರು ‘ಕಮಲದರಳ ನಡುವೆ ಮುಖ ಕಮಲವನು ಮರೆಮಾಡುತ ಕಮಲಾಕರದೊಳು ಕಮಲಗಳಲ್ಲದೆ ಕಮಲಾಕ್ಷಿಯರಿರವರಿಯದ ತೆರದಲಿ’ ಎನ್ನುವ ಬೆರಗುಗೊಳಿಸುವ ಸಾಲನ್ನೂ ಬರೆದಿದ್ದಾರೆ.

ಇಂಥ ಹತ್ತಾರು ಪ್ರಸಂಗಗಳನ್ನೂ ಮಹಾಭಾರತ, ರಾಮಾಯಣದ ಉಪಕತೆಗಳನ್ನೂ, ಪಾತ್ರಗಳ ಕುರಿತ ಚಿತ್ರಗಳನ್ನೂ ನಾರಾಯಣರಾವ್‌ ಬರೆದಿದ್ದಾರೆ. ಅವುಗಳು ಪತ್ರಿಕೆಗಳಲ್ಲೂ ಪ್ರಕಟವಾಗಿವೆ. ಒಂದು ಪಾತ್ರದ ಗುಣಾವಗುಣಗಳನ್ನು ಆಧುನಿಕ ಜಗತ್ತಿನ ವ್ಯವಹಾರಗಳ ಜೊತೆಗಿಟ್ಟು ನೋಡಿ ವಿಶ್ಲೇಷಿಸಬಲ್ಲವರು ನಾರಾಯಣರಾವ್‌ (08256 264473). ಇಂಥ ಕೆಲಸವನ್ನು ಪುಟ್ಟ ಹಳ್ಳಿಯಲ್ಲಿ ಕುಳಿತು ಮಾಡುತ್ತಾರೆ ಅನ್ನುವುದೂ ಒಂದು ವಿಶೇಷ.

***

ಈ ಮಧ್ಯೆ ಅ.ರಾ.ಮಿತ್ರ ಮಹಾಭಾರತದ ಪಾತ್ರ-ಸಂಗತಿಗಳು ಅನ್ನುವ ಮೂರು ಸಂಪುಟಗಳನ್ನು ಪ್ರಕಟಿಸಿದ್ದಾರೆ. ಮಹಾಭಾರತದ 280 ಪಾತ್ರಗಳ ಬಯೋಡಾಟಾ ಇಲ್ಲಿದೆ. ಥಟ್ಟನೆ ಪುಟ ತೆರೆದರೆ ಶಶಬಿಂದು ಎನ್ನುವ ಹೆಸರು ಕಾಣುತ್ತದೆ. ಓದುತ್ತಾ ಹೋದರೆ ಈ ಶಶಬಿಂದುವಿಗೆ ಶರವಿಂದು ಎಂಬ ಹೆಸರಿದೆ ಅನ್ನುವುದೂ ಅವನಿಗೆ ಒಂದು ಲಕ್ಷ ಹೆಂಡಿರು ಎನ್ನುವುದು. ಒಬ್ಬೊಬ್ಬ ಹೆಂಡಿರಲ್ಲೂ ಸಾವಿರ ಮಕ್ಕಳಿದ್ದರು ಅನ್ನುವುದೂ ಗೊತ್ತಾಗುತ್ತದೆ. ಧೃತರಾಷ್ಟ್ರನದೇ ದೊಡ್ಡ ಕುಟುಂಬ ಅಂದುಕೊಂಡವರಿಗೆ ಈ ಕೋಟಿಗೊಬ್ಬನನ್ನು ನೋಡಿ ಗಾಬರಿಯಾಗುತ್ತದೆ.

ಈತ ಯಜ್ಞದ ಸಂದರ್ಭದಲ್ಲಿ ಒಬ್ಬೊಬ್ಬ ಬ್ರಾಹ್ಮಣನಿಗೂ ಒಬ್ಬೊಬ್ಬ ಪುತ್ರನನ್ನು ಬಳುವಳಿ ಕೊಡುತ್ತಾ ಹೋದನಂತೆ. ಒಬ್ಬೊಬ್ಬ ಮಗನ ಜೊತೆ 100 ಬಂಗಾರದ ರಥ, ಒಂದೊಂದು ರಥದ ಹಿಂದೆ 100 ಆನೆ, ಒಂದೊಂದು ಆನೆಯ ಹಿಂದೆ 100 ಕುದುರೆ, ಒಂದೊಂದು ಕುದುರೆಯ ಹಿಂದೆ 100 ಗೋವು, ಒಂದೊಂದು ಗೋವಿನ ಹಿಂದೆ 60 ಕುರಿಗಳು. ಈತ ಒಮ್ಮೆ ಅನ್ನದಾನ ಮಾಡಿದ. ಎಲ್ಲರೂ ಊಟ ಮುಗಿದು ಮರಳಿದ ನಂತರ ಅಂಗಳದಲ್ಲಿ 13 ಅನ್ನದ ಪರ್ವತಗಳು ಹಾಗೇ ಉಳಿದಿದ್ದುವಂತೆ.

ವ್ಯಾಸರು ಹೇಳುತ್ತಾರೆ; ಇಂಥ ಪ್ರಸಿದ್ಧ ವ್ಯಕ್ತಿ ಕೂಡ ಸತ್ತ. ಆದ್ದರಿಂದ ಯಾರೂ ಶಾಶ್ವತರಲ್ಲ. ಎಷ್ಟು ಸೊಗಸಾಗಿ ಕತೆ ಹೇಳುತ್ತಾರೆ ನೋಡಿ ಅ.ರಾ.ಮಿತ್ರ (080 57756056)

***

ಜಯರಾಮ ಅಡಿಗ ಮತ್ತು ಹಾಲ್ಡೊಡ್ಡೇರಿ ಸುಧೀಂದ್ರ (9448281818) ಒಟ್ಟಾಗಿ ಪತ್ರಕರ್ತ ನಾಗೇಶರಾಯರ ಕುರಿತೊಂದು ಸೊಗಸಾದ ಪುಸ್ತಕ ತಂದಿದ್ದಾರೆ. ಸಂಯುಕ್ತ ಕರ್ನಾಟಕದಲ್ಲಿ ಸುದ್ದಿಸಂಪಾದಕರಾಗಿದ್ದ ನಾಗೇಶರಾಯರು ಅನೇಕ ಕಿರಿಯ ಪತ್ರಕರ್ತರಿಗೆ ಮಾರ್ಗದರ್ಶಿಗಳಾಗಿದ್ದವರು. ಅವರ ಬಗ್ಗೆ ಹಿರಿಯ ಪತ್ರಕರ್ತ ವೆಂಕಟನಾರಾಯಣ್‌ ಸೊಗಸಾಗಿ ಬರೆದಿದ್ದಾರೆ;

ನಾಗೇಶರಾಯರು ಸ್ಥಾನಿಕ ಸಂಪಾದಕರ ಹುದ್ದೆಗೆ ಬಡ್ತಿ ದೊರೆತರೂ ಆ ಹುದ್ದೆಯನ್ನು ಒಪ್ಪಿಕೊಳ್ಳಲಿಲ್ಲ. ಆಗ ನಾನು ಅವರ ಬಳಿ ಹೋದೆ. ಆಗ ನಮ್ಮ ನಡುವೆ ನಡೆದ ಸಂಭಾಷಣೆ;

‘ಸಾರ್‌, ನೀವು ಸ್ಥಾನಿಕ ಸಂಪಾದಕರ ಹುದ್ದೆ ಒಪ್ಪಿಲ್ಲವಂತೆ. ಇಲ್ಲೇ ಕೂಡುತ್ತೀರಂತೆ. ಸಂಪಾದಕರ ಕೋಣೆಗೂ ಶಿಫ್ಟಾಗೋಲ್ಲವಂತೆ.’

ನನ್ನೆಲ್ಲ ಪ್ರಶ್ನೆಗಳಿಗೆ ಹೂಂ ಎಂಬುದೊಂದೇ ಉತ್ತರ. ನಾನು ಬಿಡಲಿಲ್ಲ.

‘ನೀವು ಸ್ಥಾನಿಕ ಸಂಪಾದಕರಾಗದಿದ್ದರೆ, ಎನ್‌. ವಿ. ಜೋಶಿಯವರು ಸಹಾಯಕ ಸಂಪಾದಕರಾಗೋದಿಲ್ಲ. ಅವರು ಆ ಹುದ್ದೆಗೇರದಿದ್ದರೆ ನಾನು ಸುದ್ದಿ ಸಂಪಾದಕನಾಗುವುದಿಲ್ಲ. ನೀವು ಇದ್ದಲ್ಲೆ ಇದ್ದರೆ ನಾವೆಲ್ಲ ಬಡ್ತಿ ಪಡೆಯುವುದು ಯಾವಾಗ? ಜೀವನದಲ್ಲಿ ಮುಂದೆ ಬರೋದು ಯಾವಾಗ’ ಎಂದೆ.

ಮರುದಿನ ನಾಗೇಶರಾಯರು ಸಂಪಾದಕರ ಖುರ್ಚಿಯಲ್ಲಿ ಆಸೀನರಾಗಿದ್ದರು.

ಮುಂದೆ ನಾಗೇಶರಾಯರು ನಿವೃತ್ತರಾಗುವಾಗ ನಮ್ಮಿಬ್ಬರ ನಡುವೆ ನಡೆದ ಸಂಭಾಷಣೆ;

‘ಏನ್ಸಾರ್‌, ನಿವೃತ್ತರಾಗುತ್ತಿದ್ದೀರಂತಲ್ಲ?’

‘ಹೂಂ’

‘ಹೂಂ ಅಂದ್ರೆ ಹೇಗೆ ಸಾರ್‌. ನಮಗೆ ಮಾರ್ಗದರ್ಶನ ಮಾಡುವವರು ಯಾರು. ಅದೆಲ್ಲ ಸಾಧ್ಯವಿಲ್ಲ. ನೀವು ಮುಂದುವರಿಯಬೇಕು’

ನಾಗೇಶರಾಯರು ಹೇಳಿದರು;

‘ನಾನು ನಿವೃತ್ತನಾದರೆ ಎನ್‌ವಿ ಜೋಶಿ ಸ್ಥಾನಿಕ ಸಂಪಾದಕನಾಗುತ್ತಾರೆ. ನೀವು ಅವರ ಸ್ಥಾನದಲ್ಲಿ ಸಹಾಯಕ ಸಂಪಾದಕರಾಗುತ್ತೀರಿ. ಕೆ. ಸತ್ಯನಾರಾಯಣ್‌ ಸುದ್ದಿ ಸಂಪಾದಕರಾಗುತ್ತಾರೆ. ಮತ್ತೊಬ್ಬರು ಉಪ ಸುದ್ದಿ ಸಂಪಾದಕರಾಗುತ್ತಾರೆ. ನಾನು ನಿವೃತ್ತನಾಗದೇ ಹೋದರೆ ನೀವೆಲ್ಲಾ ಬಡ್ತಿ ಪಡೆಯೋದು ಯಾವಾಗ? ಜೀವನದಲ್ಲಿ ಮುಂದೆ ಬರೋದು ಯಾವಾಗ?

****

ಇವೆಲ್ಲ ಕಷ್ಟಗಳ ನಡುವೆಯೂ ಕುವೆಂಪು ಬರೆದ ಎರಡು ಸಾಲುಗಳು ನೆನಪಾಗುತ್ತವೆ;

ವಿಶ್ವಜೀವನವೊಂದು ಪಾರವಿಲ್ಲದ ಸಿಂಧು;
ಮೇಲೆ ತೆರೆನೊರೆಯೆದ್ದು ಭೋರ್ಗರೆಯುತಿರೆ ರೇಗಿ
;br/>ಹೃದಯಗಳು ನಲಿಯುತಿವೆ ಪ್ರೇಮ ತೀರ್ಥದಿ ಮಿಂದು
..... ಯಾವ ಜನ್ಮದ ಮೈತ್ರಿ.....

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X