• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮ ಗುರುಕುಲದಲ್ಲಿ ನಡೆದದ್ದೇನು?

By Staff
|

ನಮ್ಮ ಗುರುಕುಲದಲ್ಲಿ ನಡೆದದ್ದೇನು?

ಬಾಲ್ಯದ ನೆನಪುಗಳು ಅತಿಮಧುರ. ಇಂದಿನ ಪೀಳಿಗೆಯವರ ಬಾಲ್ಯಕ್ಕೂ-ಹಿಂದಿನ ಪೀಳಿಗೆಯವರ ಬಾಲ್ಯಕ್ಕೂ ವ್ಯತ್ಯಾಸ ಕಾಣುವುದು ಸರ್ವೇ ಸಾಮಾನ್ಯ. ಇದು ಜಗದ ನಿಯಮ... ಅಂದು ಗುರುಗಳು ನೀಡಿದ ಹಾಸ್ಯಮಯ-ಅರ್ಥಪೂರ್ಣ ಗಣಿತದ ಲೆಕ್ಕಕ್ಕೆ ವಿದ್ಯಾರ್ಥಿಗಳ ಪ್ರತ್ಯುತ್ತರ ಹೇಗಿತ್ತು? ಓದಿ ಆನಂದಿಸಿ.

ನಾವು ಚಿಕ್ಕವರಿದ್ದಾಗಿನ ಕಾಲ ಇಂದಿನ ದಿನಗಳಿಗಿಂತ ಬಹಳ ಭಿನ್ನವಾಗಿತ್ತು. ಹಳ್ಳಿಯಲ್ಲಿದ್ದ ನಮ್ಮ ಅಕ್ಕನ ಮನೆಗೆ ಹೋಗಿ ಎಷ್ಟು ದಿನ ಬೇಕಾದರೂ ಇದ್ದು ಬರಬಹುದಿತ್ತು. (ಈಗಿನ ದಿನಗಳಲ್ಲಿ ಮನೆಯಲ್ಲಿ ಎರಡು ದಿನ ತಂಗಿದ್ದ ಅತಿಥಿ ಮೂರನೆಯ ದಿನ ಓದುವುದಕ್ಕೆ ಯಾವುದಾದರೂ ಪುಸ್ತಕ ಕೊಡಿ ಎಂದು ಕೇಳಿದರೆ ರೈಲ್ವೆ ಟೈಂ ಟೇಬಲ್‌ ಕೊಡುತ್ತಾರೆ! ಅಂತಹ ಪರಿಸ್ಥಿತಿ!)

ನಾನು ಹತ್ತು ವರುಷದವನಿದ್ದಾಗಿನ ಮಾತು. ಶಾಲೆಗೆ ಎರಡು ದಿನ ರಜೆ ಸಿಕ್ಕರೆ ನಮ್ಮ ಹಳ್ಳಿಯ ಊರಿಗೆ ಹೋಗುವುದು ನಮಗೆಲ್ಲ ಒಂದು ದೊಡ್ಡ ಆಕರ್ಷಣೆ. ಹಗಲೆಲ್ಲ ದುಡಿದು ಬಂದ ರೈತ ಜನರೆಲ್ಲ ಸಾಯಂಕಾಲ ಸೀಮೆಯ ಎಣ್ಣೆಯ ಮಂದ ಬೆಳಕಿನಲ್ಲಿ ಕುಳಿತು ಹರಟುವುದು ನಿತ್ಯದ ಪರಿಪಾಠ. ಶಾಲೆಯ ಮಕ್ಕಳಾದ ನಮ್ಮ ಜಾಣತನ ಪರೀಕ್ಷಿಸಲಿಕ್ಕೆ ಬಾಯಿಲೆಕ್ಕ ಕೊಡುವುದು ಅವರ ಒಂದು ಹವ್ಯಾಸ. ‘ಒಟ್ಟಿನಲ್ಲಿ ಹತ್ತು ಜನರಿದ್ದಾರೆ. ಹೆಣ್ಣು ಆಳಿಗೆ ಒಂದು ರೂಪಾಯಿ ಕೂಲಿ, ಮಕ್ಕಳಿಗೆ ಅರ್ಧರೂಪಾಯಿ ಗಂಡು ಆಳಿಗೆ ಎರಡು ರೂಪಾಯಿ ಕೂಲಿ ಕೊಟ್ಟಾಗ ಒಟ್ಟು ಹತ್ತು ರೂಪಾಯಿ ಬೇಕಾಯಿತು. ಹಾಗಾದರೆ ಹುಡುಗರು ಎಷ್ಟು, ಹೆಣ್ಣು ಮಕ್ಕಳೆಷ್ಟು ಮತ್ತು ದೊಡ್ಡ ಗಂಡಸರೆಷ್ಟು?’ ಎನ್ನುವ ತರಹದ ಲೆಕ್ಕಗಳು.

ಆ ವಯಸ್ಸಿನಲ್ಲಿ ನಮಗೆ ಅಂತಹ ಮೋಜಿನ ಗಣಿತಗಳು ಬಹಳ ಇಷ್ಟ. ನಮ್ಮ ಚುರುಕುತನಕ್ಕೆ ಸವಾಲೆಸೆಯುವ ಬೇರೆ ಬಗೆಯ ಪ್ರಶ್ನೆಗಳೂ ಬರುತ್ತಿದ್ದವು. ಅದರಲ್ಲಿ ಒಂದು ನನಗೆ ಬಹಳ ಹಿಡಿಸಿತು: ‘ನಿಮ್ಮ ಊರಿನಿಂದ ದೊಡ್ಡ ಪೇಟೆಯ ಊರಿಗೆ ಐವತ್ತು ಮೈಲಿನ ಹಾದಿ; ಐವತ್ತು ಐವತ್ತು ತೆಂಗಿನಕಾಯಿಗಳನ್ನು ತುಂಬಿದ ಎರಡು ಬಂಡಿಗಳನ್ನು ಹೊಡೆದು ಕೊಂಡು ನೀವು ವ್ಯಾಪಾರಕ್ಕೆ ಹೊರಡುತ್ತೀರಿ. ಹಾದಿಯಲ್ಲಿ ಬರುವ ಸುಂಕದ ಕಟ್ಟೆಗಳಲ್ಲಿ ಕಾಯಿ ಹೇರಿದ ಪ್ರತಿ ಬಂಡಿಗೆ ಒಂದರಂತೆ ಕಾಯಿಯನ್ನು ಸುಂಕವಾಗಿ ಕೊಡಬೇಕು. ಹಾದಿಯಲ್ಲಿ ಒಟ್ಟು ಐವತ್ತು ಸುಂಕದ ಕಟ್ಟೆಗಳಿವೆ. ಪೇಟೆಯಲ್ಲಿ ನೀವು ಒಟ್ಟು ಎಷ್ಟು ಕಾಯಿ ಮಾರಿ ಬರುತ್ತೀರಿ?

‘ಸಹಪಾಠಿಗಳಲ್ಲಿ ಕೆಲವರು ‘ಸೊನ್ನೆ’ ಎಂದು ಉತ್ತರಿಸುತ್ತಲೂ ಪ್ರಶ್ನೆ ಕೇಳಿದವರು ಕಿಸಕ್ಕನೆ ನಕ್ಕರು. ಹಾಗಾದರೆ ಉತ್ತರಕ್ಕಾಗಿ ಸ್ವಲ್ಪ ಜಾಣತನದಿಂದ ಹುಡುಕುವ ಅಗತ್ಯ ಇರಬೇಕೆಂದು ಅನಿಸಿತು. ಸ್ವಲ್ಪ ವಿಚಾರ ಮಾಡಿದ ಬಳಿಕ ‘ಇಪ್ಪತ್ತೈದು’ ಎಂದು ಹೇಳಿದೆ. ‘ಉತ್ತರ ಸರಿ. ಹೇಗೆ ಮಾಡಿದೆ ಹೇಳು’ ಎಂದರು.

‘ಇಪ್ಪತ್ತೈದು ಕಟ್ಟೆಗಳನ್ನು ದಾಟಿದಬಳಿಕ ಒಂದು ಬಂಡಿಯ ಇಪ್ಪತ್ತೈದು ಕಾಯಿಗಳನ್ನು ಇನ್ನೊಂದು ಬಂಡಿಗೆ ಹಾಕಿ ಭರ್ತಿ ಮಾಡಿಬಿಟ್ಟರೆ ಒಂದು ಬಂಡಿ ಖಾಲಿ ಆಗಿಬಿಡುತ್ತದೆ. ಮುಂದೆ ಒಂದೇ ಬಂಡಿಗೆಂದು ಒಂದೊಂದೇ ಕಾಯಿಯಂತೆ ಕೊಡುತ್ತ ಸಾಗಿ ಇಪ್ಪತ್ತೈದು ಕಾಯಿಗಳನ್ನು ಸಂತೆಗೆ ಮುಟ್ಟಿಸಬಹುದು’.

ಅದರಲ್ಲಿ ಒಂದು ಸ್ವಲ್ಪ ಸುಧಾರಣೆ ಮಾಡಬಹುದಲ್ಲ! ಮೊದಲಿನಿಂದಲೂ ಸುಂಕ ಕೊಡುತ್ತ ಹೋಗುವಾಗ ಒಂದೇ ಬಂಡಿಯಿಂದ ಎರಡೆರಡು ಕಾಯಿ ತೆಗೆದು ಕೊಡುತ್ತ ಹೋಗಬೇಕು. ಇಪ್ಪತ್ತೈದನೆಯ ಕಟ್ಟೆ ದಾಟುತ್ತಲೂ ಒಂದು ಬಂಡಿ ತನ್ನಷ್ಟಕ್ಕೆ ತಾನೇ ಖಾಲಿಯಾಗಿ ಬಿಟ್ಟಿರುತ್ತದೆ. ಕೆಲಸ ಹಗುರವಾಗಲಿಲ್ಲವೇ?’ ಎಂದು ಅವರು ವಿವರಣೆ ಕೊಟ್ಟರು. ನನಗೆ ಬಹಳ ಖುಷಿ ಆಯಿತು.

ಅದಾಗಿ ನಲವತ್ತೈದು ವರುಷಗಳ ನಂತರ, ಸುರತ್ಕಲ್‌ ಇಂಜಿನೀಯರಿಂಗ್‌ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದೆ. ಅವರ ವ್ಯಾಸಂಗಕ್ಕೆ ಭದ್ರ ಬುನಾದಿ ಇರಲಿ ಎಂಬ ಉದ್ದೇಶದಿಂದ ಪ್ರಾರಂಭದಲ್ಲಿಯೇ ಒಂದು ಮಾತು ಹೇಳುತ್ತಿದ್ದೆ: ‘ಇಂಜಿನೀಯರ್‌ ಎಂದರೆ ಯಾರು? ವಿಜ್ಞಾನಿಗಳು ಪ್ರಯೋಗಶಾಲೆಯಲ್ಲಿ ಕಂಡು ಹಿಡಿದ ಹೊಸ ಶೋಧಗಳ ಉಪಯೋಗ ಸಾಮಾನ್ಯ ಜನರಿಗೆ ತಲುಪುವಂತೆ ಮಾಡುವುದು ಅವನ ಹೊಣೆ. ಅದಕ್ಕಾಗಿ ಅವನು ಅನುಸರಿಸುವ ವಿಧಾನವು ವ್ಯಾವಹಾರಿಕವಾಗಿರಬೇಕು; ವೆಚ್ಚ ಸಾಧ್ಯವಿದ್ದಷ್ಟೂ ಕಡಿಮೆ ಇರಬೇಕು: ಎಲ್ಲಕ್ಕೂ ಮುಖ್ಯವಾಗಿ ಸುರಕ್ಷಿತತೆಗೆ ನೂರಕ್ಕೆ ನೂರರಷ್ಟು ಗಮನ ಕೊಟ್ಟಿರಬೇಕು. ಈ ಮೂರೂ ದಿಶೆಯಲ್ಲಿ ಅವನು ಮಾಡಿದ ಪ್ರಯತ್ನದಲ್ಲಿ ಒಮ್ಮೆ ಯಶಸ್ಸು ಕಂಡರೆ ಅದನ್ನು ಅಲ್ಲಿಗೇ ನಿಲ್ಲಿಸುವುದಿಲ್ಲ. ಇನ್ನೂ ಸುಧಾರಣೆಗಳನ್ನು ಮಾಡುತ್ತ, ವೆಚ್ಚವನ್ನು ಇನ್ನೂ ತಗ್ಗಿಸುವ ಪ್ರಯತ್ನವನ್ನು ಮುಂದುವರಿಸುತ್ತಾನೆ...’

‘ಸುಧಾರಣೆ, ಇನ್ನೂ ಸುಧಾರಣೆ’ ಎನ್ನುವುದಕ್ಕೆ ಲಘು ಧಾಟಿಯ ಉದಾಹರಣೆ ಇರಲಿ ಎಂದು ಮೇಲೆ ಹೇಳಿದ ತೆಂಗಿನ ಕಾಯಿ ಮಾರಾಟದ ಸಮಸ್ಯೆಯನ್ನೇ ತೆಗೆದುಕೊಂಡೆ. ಅಂದು ನಡೆದ ಕತೆಯನ್ನು ವಿವರಿಸಿದೆ. ‘ಪೇಟೆಗೆ ಎಷ್ಟು ಕಾಯಿಗಳು ತಲುಪಿದವು?’ ಎಂಬ ಪ್ರಶ್ನೆಗೆ ದೊರೆತ ಮೂರೂ ಉತ್ತರಗಳ ವಿಶ್ಲೇಷಣೆ ಮಾಡಿದೆ: ‘ಸೊನ್ನೆ’ ಎಂಬುದು ಮೊದಲನೆಯ ಉತ್ತರ.

ಆ ಪ್ರಕಾರದ ಉತ್ತರ ಕೊಡುವವರು ಸರ್ಕಾರೀ ನೌಕರರಾಗಲು ಯೋಗ್ಯರಾಗಿರುತ್ತಾರೆ. ಮಾರ್ಗದ ಮಧ್ಯದಲ್ಲಿ ಕಾಯಿಗಳನ್ನು ಬಂಡಿಯಿಂದ ಬಂಡಿಗೆ ವರ್ಗಾಯಿಸುವ ಸಾಹಸ ಮಾಡುವ ಎರಡನೆಯ ಪ್ರಕಾರದವರು, ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತ, ತಮ್ಮ ಆ ಸಮಯೋಚಿತ ಕ್ರಮದಿಂದ ಕಂಪನಿಗೆ ಲಾಭವಾದದ್ದನ್ನು ಬಾಸ್‌ ಹತ್ತಿರ ವರ್ಣಿಸಿ, ಮೆತ್ತಗೆ ‘ತಮ್ಮ ಸಂಬಳದ ಹೆಚ್ಚಳಕ್ಕೆ ಪೀಠಿಕೆ ಹಾಕುವ’ ವರ್ಗದವರು. ಮೂರನೆಯ ಮಾರ್ಗ ಅನುಸರಿಸುವವರು ತಮ್ಮದೇ ಆದ ಕಂಪನಿಯನ್ನು ನಡೆಸಲು ಅಗತ್ಯವಿರುವ ಚಾಣಾಕ್ಷತನ, ಮುಂದಾಲೋಚನೆ ಹೊಂದಿದವರು ಎಂದು ಹೇಳಿದೆ.

ನನ್ನ ವಿದ್ಯಾರ್ಥಿಗಳಿಗೆ ಉಪನ್ಯಾಸದ ಈ ಭಾಗ ತುಂಬ ಮೆಚ್ಚುಗೆಯಾಯಿತು. ತಮ್ಮ ಅಭಿಪ್ರಾಯವನ್ನು - Sir, this example has put every thing in a nutshell and is capable of putting everything in the shell of a nut ಎಂದು ಬಲು ಚೂಟಿಯಾದ ವಾಕ್ಯದಲ್ಲಿ ವ್ಯಕ್ತಪಡಿಸಿದರು.

‘ಸರಿ, ಹಾಗಾದರೆ ಇದನ್ನು ಒಂದು ಹಾಸ್ಯ ಲೇಖನ ರೂಪದಲ್ಲಿ ನಮ್ಮ ಕಾಲೇಜಿನ ಮ್ಯಾಗಜೀನ್‌ಗೆ ಕೊಡಬೇಕೆಂದಿದ್ದೇನೆ. ಹಾಸ್ಯ ಲೇಖನದ ಉತ್ತರಾರ್ಧ ನಿಮ್ಮಿಂದ ಪೂರ್ತಿಗೊಳ್ಳಬೇಕೆಂದು ನನ್ನ ಅಭಿಲಾಷೆ. ಮೂರು ದಿನಗಳ ಒಳಗೆ ಪೂರ್ತಿಗೊಳಿಸಿ ಕೊಡುವಿರಾ?’ ಎಂದೆ.

‘ಮೂರು ದಿನ ಯಾಕೆ ಸಾರ್‌, ನಾಳೆ ಬೆಳಗಿನ ನಿಮ್ಮ ಮೊದಲನೆಯ ಪೀರಿಯಡ್‌ನಲ್ಲೇ ತಂದು ಕೊಡುತ್ತೇವೆ’. ಎಂದರು.‘ಶಿಷ್ಯಾದಿಚ್ಛೇತ್‌ ಪರಾಭವಂ’ ಎಂಬ ಸಂಸ್ಕೃತ ಉಕ್ತಿ ಕಿವಿಯಲ್ಲಿ ಮೊಳಗುತ್ತಿತ್ತು. ‘ತಥಾಸ್ತು’ ಎಂದು ಹೇಳಿದೆ. ನನ್ನ ಪರಾಭವ ಆಗಬೇಕಾದದ್ದೇನೂ ಇರಲಿಲ್ಲ ; ಶಿಷ್ಯರ ವಿಜಯವಂತೂ ಆಯಿತು! ಮರುದಿನ ಕ್ಲಾಸಿನಲ್ಲಿ ಅವರ ಕಲಾಕೃತಿ ಹಾಜರ್‌! ನಿಮ್ಮ ಅವಗಾಹನೆಗೆಂದು ಇಲ್ಲಿ ಕೊಡುತ್ತಿದ್ದೇನೆ:

‘ಸೊನ್ನೆ ಎಂದು ಉತ್ತರ ನೀಡುವವರು ಸರ್ಕಾರೀ ಸೇವೆಗೆ ಅರ್ಹರು ಎಂದು ಸ್ಥೂಲವಾಗಿ ಕೊಡಲಾಗಿದೆಯಷ್ಟೇ. ಅದರಲ್ಲಿ ಭಿನ್ನ ಭಿನ್ನ ಶ್ರೇಣಿಗಳಿರುವುದನ್ನು ನೀವು ಗಮನಿಸಬೇಕು’.

ಪೇಟೆಯವರೆಗೆ ಹೋಗಿ ಬರಿಗೈಯಿಂದ ಬಂದು, ಮೇಲಧಿಕಾರಿಯಿಂದ ಮಂಗಳಾರತಿ ಮಾಡಿಸಿಕೊಳ್ಳುವಾಗ ಮುಖ ತಗ್ಗಿಸಿ ನಿಂತು ಹೊರಗೆ ಬರುವಾಗ ಮತ್ತೆ ನಗುಮುಖದಿಂದಲೇ ಇರುವ ಒಂದನೆಯ ಪ್ರಕಾರ.

ಪೂರ್ತಿ ಬರಿಗೈಯಿಂದ ಬಾರದೆ ಎಲ್ಲ ಸುಂಕದ ಕಟ್ಟೆಯ ಪಾವತಿಗಳನ್ನು ನೀಟಾಗಿ ಜೋಡಿಸಿ ಅವುಗಳ ಜೊತೆಗೆ ತನ್ನ ‘ಪ್ರಯಾಣ ಭತ್ಯೆಯ ಬಿಲ್ಲ’ನ್ನು ಹಾಜರುಪಡಿಸುವ ಎರಡನೆಯ ಪ್ರಕಾರದವರು.

ತನ್ನ ಪ್ರಯಾಣ ಭತ್ಯೆಯ ಬಿಲ್ಲಿನೊಂದಿಗೆ ಸುಂಕದ ಕಟ್ಟೆಯವರೊಂದಿಗೆ ಹೊಂದಾಣಿಕೆ ಮಾಡಿಕೊಂಡು, ಬೇರೆ ಗಾಡಿಗಳ ಸುಂಕವನ್ನು ತಮ್ಮ ಲೆಕ್ಕಕ್ಕೆ ಬರೆಸಿದ ರಸೀದಿ ಹಾಜರುಪಡಿಸುವವರು ಮೂರನೆಯ ಪ್ರಕಾರದವರು. (ಕಾಯಿ ಮಾರಿದ ಹಣ ಅವನ ಮತ್ತು ಸುಂಕದ ಕಟ್ಟೆಯವರ ನಡುವೆ ವಿಲೇವಾರಿಯಾಗಿರುತ್ತದೆ.)

ಸ್ಥಳೀಯ ಸಿಮೆಂಟ್‌ ಏಜೆಂಟ್‌ ಅವರ ಮನೆಯಲ್ಲಿ ನಡೆಯುವ ಸೀಮಂತಕ್ಕೆ ಕಾಯಿಗಳನ್ನೆಲ್ಲ ಗುಟ್ಟಾಗಿ ಮಾರಿಕೊಂಡು, ಅವನ ಸಿಮೆಂಟ್‌ ಮೂಟೆಗಳನ್ನು ಪೇಟೆಗೆ ಸಾಗಿಸಲಿಕ್ಕೆ ತನ್ನ ‘ಸರ್ಕಾರೀ ಬಂಡಿಗಳ ಸೇವೆ’ಯನ್ನು ನೀಡಿ, ಅದರಲ್ಲೂ ಲಾಭ ಮಾಡಿಕೊಂಡವರು ನಾಲ್ಕನೆಯ ಪ್ರಕಾರದವರು.

ಸಿಮೆಂಟ್‌ ಚೀಲಗಳನ್ನು ಯಶಸ್ವಿಯಾಗಿ ಸಾಗಿಸಿದ ನಂತರ ಪೇಟೆಯಲ್ಲಿ ಬಂಡಿಯ ದುರಸ್ತಿಗೆಂದು ವೆಚ್ಚಮಾಡಿದ್ದಕ್ಕೆ ‘ಹೊಂದಾಣಿಕೆಯ’ ಪಾವತಿಗಳನ್ನೂ ತರುವವರು, ಐದನೆಯ ವರ್ಗದವರು. ಹೀಗೆ ಇನ್ನೂ ಇದ್ದವು.

ಆದರೆ ಸಂಪಾದಕೀಯ ಮಂಡಳಿಯ ಮಡಿವಂತಿಕೆಯ ಧೋರಣೆಯಿಂದಾಗಿ ಲೇಖನ ಸ್ವೀಕೃತವಾಗದೆ ಉಳಿಯಿತು. ಯಾರಿಗೂ ಬೇಸರವಿಲ್ಲ ಬಿಡಿ.

ನಮ್ಮ ವಿದ್ಯಾರ್ಥಿಗಳು ಇಲ್ಲಿ ಸಮಸ್ಯೆಯ ವಿವರಣೆಗೆ ಮಹತ್ವ ಕೊಟ್ಟರೇ ವಿನಾ ‘ಐವತ್ತು ಮೈಲುದ್ದದ ದಾರಿಯಲ್ಲಿ ಐವತ್ತು ಸುಂಕದ ಕಟ್ಟೆಗಳು ಇರುವುದು ಸಾಧ್ಯವೇ?’ ಎಂಬ ಬಾಲಿಶ ಪ್ರಶ್ನೆ ಕೇಳಿ ತಡೆ ಒಡ್ಡಲಿಲ್ಲ. ಸಮಸ್ಯೆ ತಿಳಿಸುವ ಒಳ ಮರ್ಮವನ್ನು ತಿಳಿದುಕೊಳ್ಳುವುದಕ್ಕೆ ಆದ್ಯತೆ ನೀಡಿದರು. ಆ ಬಳಿಕ ಇಂದಿನ ಭ್ರಷ್ಟ ಪರಿಸ್ಥಿತಿಯ ಚಿತ್ರ ಕೊಡುವ ವ್ಯಂಗ್ಯ ಹಾಸ್ಯವನ್ನೂ ನಿರ್ಮಿಸಿ ಕೊಟ್ಟರು. ಆದರೆ ಭ್ರಷ್ಟ ವ್ಯವಸ್ಥೆಯಲ್ಲಿ ತಮ್ಮ ಶುದ್ಧತೆಯನ್ನು ಕಾಪಾಡಿಕೊಂಡು ಬಂದವರೆಲ್ಲ ಈಗ ಅಮೆರಿಕಾದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ಇ-ಮೇಲ್‌ ಕಳಿಸುವ ಪರಿಪಾಠವನ್ನೂ ಇರಿಸಿಕೊಂಡಿದ್ದಾರೆ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more