• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಮೇಶನ ನೋಡಿ, ಬದುಕುವುದ ಕಲಿಯಿರಿ!

By Staff
|
 • ವಿನಯಾ ಅಡಿ, ಶಿರಸಿ
 • ಜಗತ್ತಿನಲ್ಲಿ ಹಲವಾರು ವಿಸ್ಮಯಗಳು ದಿನವೂ ನಡೆಯುತ್ತವೆಂದು ಓದುತ್ತಲೇ ಇರುತ್ತೇವೆ. ಆದರೆ ನಾನೀಗ ವಿಸ್ಮಯದ ಕತೆ ಹೇಳುತ್ತಿಲ್ಲ. ಛಲ ಮತ್ತು ಆತ್ಮವಿಶ್ವಾಸದ ಶಕ್ತಿಯನ್ನು ವಿವರಿಸುತ್ತಿದ್ದೇನೆ. ತನ್ನ ಬದುಕನ್ನು ರೂಪಿಸಿಕೊಳ್ಳುವ ಛಲದಿಂದ ಹೋರಾಟವನ್ನೇ ಜೀವನದ ಉಸಿರಾಗಿಸಿಕೊಂಡ ವ್ಯಕ್ತಿಯೋರ್ವರು ನಮ್ಮ ಮಧ್ಯೆ ಕಾಣಸಿಗುತ್ತಾರೆ. ಶಿರಸಿಯ ವಿನಾಯಕ ಕಾಲೋನಿಯ ನಿವಾಸಿ ಯುವಕವಿ ರಮೇಶ ಹೆಗಡೆ. ಅವರ ಎರಡನೇ ಕವನ ಸಂಕಲನದಲ್ಲಿ ಅವರೇ ಅಭಿವ್ಯಕ್ತಿಸಿದಂತೆ,

  ಒಳಗೆ ದೀಪ ಬೆಳಗುವಾಗ,

  ಬೆಳಕು ತುಂಬಿ ತುಳುಕುವಾಗ,

  ಬಿರುಗಾಳಿ ಬಂದು ಬಡಿಯಲಿ,

  ಮುಗಿಲೇ ಹರಿದು ಸುರಿಯಲಿ ;

  ಕಾಲರುದ್ರ ಕುಣಿಯಲಿ,

  ಕಡಲೆ ನೆಲವ ಬಳಸಲಿ...

  ಹಗಲೇ ಎಲ್ಲ ; ಇರುಳೆ ಇಲ್ಲ....

  Rameshಎಂಬ ಸಾಲಿನಲ್ಲಿ ಜೀವನದ ಅರ್ಥಪೂರ್ಣತೆ ಅಡಗಿದೆ. ಈ ರಚನೆಯಲ್ಲಿ ಬದುಕಿನ ಅನುಭಾವ ಮಾತ್ರ ಕಾಣಬಹುದೇ ವಿನಃ ಕವಿಯ ದೈಹಿಕ ಲಕ್ಷಣಗಳನ್ನಲ್ಲ.

  ತಮ್ಮ ಸ್ವಂತ ರಚನೆಯ ಮೂರು ಕವನ ಸಂಕಲನಗಳನ್ನು ಬಿಡುಗಡೆಗೊಳಿಸಿರುವ ರಮೇಶ, ಹುಟ್ಟಿನಿಂದಲೇ ‘ಒಸ್ಟಿಯೋ ಜಿನೆಸಿಸ್‌ ಇಂಪರ್ಫೆಕ್ಟಾ’ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹಾಸಿಗೆಯಲ್ಲಿ ಮಲಗಿ ಕವಿತೆಗಳ ಮೂಲಕ ತನ್ನನ್ನು ಜಗತ್ತಿಗೆ ಪರಿಚಯಿಸಿಕೊಂಡಿರುವ ರಮೇಶ ಭಾವನಾಜೀವಿ. ನಾಲ್ಕು ಗೋಡೆಗಳ ಮಧ್ಯೆ ಲೋಕ ಜ್ಞಾನ ಹೊಂದಿ ಭಾವಪೂರ್ಣ ಕವಿತೆ ರಚಿಸುವ ಕಲೆ ಕರಗತವಾಗಿದೆ.

  ‘ಕಾವ್ಯ ಚಿಗುರು’, ‘ಮನದಲ್ಲಿ ಮನೆಯ ಮಾಡಿ’ ಎಂಬ ಕವನ ಸಂಕಲನಗಳು ಮತ್ತು ‘ಚಿಣ್ಣ-ಚಿಣ್ಣಾಟ’ ಎನ್ನುವ ಮಕ್ಕಳ ಕವನ ಸಂಕಲನ ಪ್ರಕಟಗೊಂಡಿವೆ. ಅವರ ದೇಹದ ಯಾತನೆ ಕವನ ಸೃಷ್ಟಿಗೆ ಅಡ್ಡಿಯಾಗದಿರುವುದು ಆರೋಗ್ಯಪೂರ್ಣ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ವಿಕಲತೆ ದೇಹಕ್ಕೆ ಹೊರತು, ಮನಸ್ಸು ಸೃಜನಶೀಲತೆ ಹಾಗೂ ಕವನಗಳ ಹುಟ್ಟಿಗಲ್ಲ ಎಂಬುದು ಮನದಟ್ಟಾಗುತ್ತದೆ.

  ಹಸುಗೂಸಾಗಿದ್ದಾಗಲೇ ಮೊದಲಬಾರಿಗೆ ಈ ಕಾಯಿಲೆ ಕಾಲಿನ ಎಲುಬು ಬಿರುಕು ರೂಪದಲ್ಲಿ ಕಾಣಿಸಿಕೊಂಡು ರಮೇಶರ ನಡಿಗೆಯನ್ನು ನಿಯಂತ್ರಿಸಿತ್ತು. ತಾಯಿ-ಒಡಹುಟ್ಟಿದವರ ಆಸರೆಯಲ್ಲಿ ಮನೆಯೊಳಗಣ ಪರಿಸರದಲ್ಲಿ ನಡೆದಾಡುತ್ತಿದ್ದರು. ಆನಂತರ ಕುತ್ತಿಗೆಯ ಸಮೀಪ ಕಾಣಿಸಿಕೊಂಡ ಮೂಳೆ ಬಿರುಕಿನಿಂದಾಗಿ ಹಾಸಿಗೆಗೆ ಅಂಟಿಸಿತು.

  ಈ ಕಾಯಿಲೆಯ ಪ್ರಮುಖ ಲಕ್ಷಣವಾದ ಮಗುವಿನ ತೂಕ ಕಡಿಮೆ ಇರುವುದು, ಮೂಳೆಗಳ ಬೆಳವಣಿಗೆಯ ಕೊರತೆ, ಕ್ಯಾಲ್ಸಿಯಂ ಪ್ರಮಾಣ ಕಡಿಮೆ ಇರುವುದು, ಮೂಳೆಗಳ ಸವೆತ, ಮೃದುವಾದ ಮೂಳೆಗಳ ರಚನೆ, ಭಾರ ಮತ್ತು ಒತ್ತಡ ತಡೆಯಲಾರದ ಸ್ಥಿತಿ ವ್ಯಕ್ತಿಯ ಬೆಳವಣಿಗೆಯನ್ನು ಕುಗ್ಗಿಸುವುದರ ಜೊತೆಗೆ ಇತರ ರೋಗಗಳ ಆಕ್ರಮಣವನ್ನು ಎದುರಿಸುವಲ್ಲಿ ಹೋರಾಟ ಅಗತ್ಯ ಎಂದಾಗಿಸುತ್ತದೆ. ಇದರಿಂದ ಒಮ್ಮೆ ಕಾಣಿಸಿಕೊಳ್ಳುವ ಮೂಳೆಗಳ ದುರ್ಬಲತೆ ಮುನ್ನೆಚ್ಚರಿಕೆಯ ಜೊತೆಗೆ ಅಸಹಾಯಕತೆಯೆಡೆಗೆ ಒಯ್ಯುತ್ತದೆ. ಔಷಧವಿಲ್ಲದ ಕಾಯಿಲೆಯ ಪಟ್ಟಿಯಲ್ಲಿರುವ ಈ ರೋಗ ಲಕ್ಷಕ್ಕೊಬ್ಬರಲ್ಲಿ ಕಾಣಸಿಗುತ್ತದೆ ಎಂಬುದು ವೈದ್ಯರ ಹೇಳಿಕೆ. ಕೆಲ ವೈದ್ಯರು ಇಂತಹ ರೋಗಿಗಳನ್ನು ತಮ್ಮ ವೈದ್ಯಕೀಯ ಸೇವೆಯಲ್ಲಿ ನೋಡದೇ ಇರುವ ಸಂಭವವೂ ಇದೆ. ಆಯುರ್ವೇದ ಕಾಲೇಜಿನ ವೈದ್ಯರೋರ್ವರು ಹಾಗೂ ಸರ್ಕಾರಿ ಆಸ್ಪತ್ರೆಯ ಮೂಳೆ ತಜ್ಞರು ಈ ಕಾಯಿಲೆಯ ಬಗ್ಗೆ ಹೇಳುತ್ತಾ, ‘ಒಸ್ಟಿಯೋ ಜಿನೆಸಿಸ್‌ ಇಂಪರ್ಫೆಕ್ಟಾ‘ ರೋಗಕ್ಕೆ ಒಳಗಾದವರ ವಯಸ್ಸು ಕಡಿಮೆ ಎನ್ನುತ್ತಾರೆ.

  30ರ ಹರಯದ ಯುವ ವಿಕಲಾತೀತ ಕವಿ ರಮೇಶ ಅವರು, ಹೆತ್ತವರ ಸತತ ಆರೈಕೆ ಹಾಗೂ ಉಪಚಾರದಿಂದ ಮನೆಯಲ್ಲಿಯೇ ಕವಿತೆಗಳನ್ನು ರಚಿಸುವುದಲ್ಲದೆ, ಮೂರು ಕವನ ಸಂಕಲನಗಳನ್ನು ಹಾಗೂ ಒಂದು ಅನುವಾದವನ್ನು ಹೊರತಂದಿದ್ದಾರೆ. ಅಧಿಕೃತವಾಗಿ ಶೈಕ್ಷಣಿಕ ವಿದ್ಯಾಭ್ಯಾಸ ಮಾಡದಿದ್ದರೂ ಹಿರಿಯ ಸಹೋದರಿಯ ಪ್ರಯತ್ನದಿಂದ ಪುಸ್ತಕ ಜ್ಞಾನ ಹೊಂದಿ, ಹಲವಾರು ಕೃತಿಗಳನ್ನು ಓದಿದ್ದಾರೆ. ಎದ್ದು ಕುಳಿತುಕೊಳ್ಳಲಾಗದ ಸ್ಥಿತಿಯಲ್ಲಿಯೇ ಪ್ರಕಟಿತ ಕೃತಿಗಳ ಅಧ್ಯಯನ ನಡೆಸುತ್ತಾರೆ.

  Ramesh72ರ ವಯೋವೃದ್ಧರಾಗಿರುವ ರಮೇಶರ ತಂದೆ ಗೋವಿಂದ ಹೆಗಡೆಯವರು ತಮ್ಮ ಖಾಸಗಿ ಉದ್ಯೋಗದಿಂದಲೇ ಅಸಹಾಯಕ ಅಪ್ರತಿಮ ಪ್ರತಿಭೆಯನ್ನು ಸಾಕುತ್ತಿದ್ದು, ತಮ್ಮ ನಿರ್ಬಲ ಆರ್ಥಿಕ ಸ್ಥಿತಿಯಿಂದಾಗಿ ಉತ್ತಮ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸಲಾಗಲಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಉತ್ತಮ ಆರ್ಥಿಕತೆ ಹೊಂದಿದ್ದರೆ ಉನ್ನತ ವೈದ್ಯಕೀಯ ಚಿಕಿತ್ಸೆಗಳು ತಮ್ಮ ರಮೇಶನನ್ನು ಇಷ್ಟು ದುರ್ಬಲನನ್ನಾಗಿಸದೇ, ಕುಳಿತುಕೊಳ್ಳುವ, ಸ್ವಲ್ಪವಾದರೂ ನಡೆದಾಡುವ ಸ್ಥಿತಿ ಹೊಂದುವಂತೆ ಮಾಡಬಹುದಿತ್ತು ಎನ್ನುತ್ತಾರೆ. ಉತ್ತಮ ವೈದ್ಯಕೀಯ ಚಿಕಿತ್ಸೆ ಅಸಾಧ್ಯವಾದಂತೆ ಪೌಷ್ಠಿಕ ಆಹಾರ ಪೂರೈಸುವುದು ಆಗಲಿಲ್ಲ ಎಂದು ಖೇದಗೊಳ್ಳುತ್ತಾರೆ.

  ಗೋವಿಂದ ಹೆಗಡೆ ಹಾಗೂ ಶಕುಂತಲಾ ಹೆಗಡೆ ದಂಪತಿಗಳ ಕಿರಿಯ ಪುತ್ರ ರಮೇಶರಿಗೆ ಈರ್ವರು ಅಕ್ಕಂದಿರು ಹಾಗೂ ಓರ್ವ ಅಣ್ಣ ಇದ್ದು, ಎಲ್ಲರೂ ಉತ್ತಮ ಆರೋಗ್ಯ ಹೊಂದಿದ್ದಾರೆ. ತಮ್ಮ ಕಿರಿಯ ಸಹೋದರನ ಪಾಲನೆ ಪೋಷಣೆಯಲ್ಲಿ ತಂದೆ ತಾಯಿಗಳೊಡನೆ ಸಹಯೋಗಿಗಳಾಗಿ ಮುತುವರ್ಜಿಯಿಂದ ತೊಡಗಿಸಿಕೊಂಡಿದ್ದಾರೆ. ಬಡತನದಿಂದಾಗಿ ವಿಕಲಾತೀತ ಸಹೋದರನ ಪ್ರತಿಭೆ ಬೆಳಗಲು ಅಗತ್ಯ ಸೌಲಭ್ಯ ತಮ್ಮಿಂದ ನೀಡಲು ಆಗದೆಂಬ ಭಾವನೆ ಇವರದು.

  ಉತ್ತಮ ಪ್ರತಿಭೆಯಾಗಿರುವ ರಮೆಶ ದೃಢ ನಿರ್ಧಾರ ಮತ್ತು ಖಚಿತ ಅಭಿಪ್ರಾಯ ಹೊಂದಿದ್ದಾರೆ. ತಮ್ಮ ಮನೆಯ ಒಳಗಿನ ಸೀಮಿತ ಪರಿಸರದಲ್ಲಿಯೇ ಅಸಾಮಾನ್ಯ ಕಲ್ಪನೆಗಳನ್ನು ಇತರ ಜಗದ ಆಗುಹೋಗುಗಳನ್ನು ಕವನದಲ್ಲಿ ತುಂಬುವ ಇವರ ಭಾವ ಪ್ರಪಂಚ ಅಸಮರ್ಥತೆಯಿಂದ ಹೊರತಾಗಿಯೇ ಉಳಿದಿದೆ. ಕಳೆದ 8-10 ವರ್ಷಗಳಿಂದೀಚೆಗೆ ಸಂಪೂರ್ಣ ಹಾಸಿಗೆ ವಾಸಿಯಾದ ಇವರು, ತಮ್ಮ ಮೊದಲಿನ ಹವ್ಯಾಸಗಳಾದ ಹಾರ್ಮೋನಿಯಂ ಕಲಿಕೆ ಮತ್ತು ಚಿತ್ರ ರಚನೆಗಳನ್ನು ಅನಿವಾರ್ಯವಾಗಿ ಕೈಬಿಡಬೇಕಾಯಿತು. ನಂತರ ಕಾಲ ಕಳೆಯಲು, ಅನಾರೋಗ್ಯ ಮರೆಯಲು ರೂಢಿಸಿಕೊಂಡ ಹವ್ಯಾಸ, ಬರವಣಿಗೆ. ಆಕಸ್ಮಿಕವಾಗಿ ರೂಢಿಸಿಕೊಂಡ ಈ ಕಲೆ ಇಂದು ಉತ್ತಮ ಸೃಜನಶೀಲ ಯುವ ಕವಿಯನ್ನಾಗಿಸಿದೆ. ಮಲಗಿದ್ದಲ್ಲೇ ದುರ್ಬಲ ಕೈಗಳಿಂದ ಸಬಲ ಮನದ ಭಾವನೆಗಳಿಗೆ ಅಕ್ಷರ ರೂಪ ನೀಡುತ್ತಾ ಸಾಗುವ ಶೈಲಿ ಅದ್ಭುತ. ಕವಿತೆಗಳಲ್ಲಿ ಷಡ್ರಸಗಳನ್ನು ಹದವಾಗಿ ಬೆರೆಸಿ, ಉತ್ತಮ ರಚನೆಗಳನ್ನು ನೀಡುತ್ತಲೇ ಸಾಗಿದ್ದಾರೆ.

  ಈ ವಿಕಲಾತೀತ ಕವಿಗೆ ಯಾರಿಂದಲಾದರೂ ಸಹಾಯ ಯಾಚಿಸಿದರೆ ಅದು ತನ್ನನ್ನು ಈ ಜಗದ ಭಿಕ್ಷುಕರನ್ನಾಗಿಸಿದಂತೆ ಎಂಬ ಭಾವನೆ. ಇವರಿಗೆ ತಾನು ಬಿ.ಎ., ಪದವಿ ಪಡೆಯಬೇಕೆಂಬಾಸೆ. ಮನೆಯಲ್ಲಿ ಹಾಸಿಗೆಯ ಮೇಲೆ ಆಶ್ರಿತರಾಗಿರುವುದರಿಂದ ಮತ್ತು ಈ ಕಾಯಿಲೆಯಿಂದಾಗಿ ದುರ್ಬಲವಾಗಿರುವ ದೈಹಿಕ ಸ್ಥಿತಿಯ ದೆಸೆಯಿಂದ ಈ ಆಸೆ, ಆಸೆಯಾಗಿಯೇ ಉಳಿದಿದೆ.

  ವರ್ಷದ ಮೊದಲು 2005ರಲ್ಲಿ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂಡಳಿಯ ಪ್ರಸ್ತುತ ಅಧ್ಯಕ್ಷರು ಇವರ ಬಗ್ಗೆ ತಿಳಿದು, ಮನೆಗೆ ತೆರಳಿ ಮುಖತಃ ಭೇಟಿ ಮಾಡಿ, ಸಾಧನೆ ಶ್ಲಾಘಿಸಿದ್ದರು. ಆಗ ರಮೇಶರ 9ರಿಂದ 10 ಸಾವಿರ ಬೆಲೆ ಹೊಂದಿರುವ ಎರಡು ಕವನ ಸಂಕಲನದ ಪ್ರತಿಗಳನ್ನು ತಮ್ಮ ಜೊತೆಗೆ ಕೊಂಡೊಯ್ದಿದ್ದು, ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಅದು ಈ ತನಕ ಭರವಸೆಯಾಗಿಯೇ ಉಳಿದು ಹೋಗಿರುವುದೊಂದು ಖೇದದ ಸಂಗತಿಯಾಗಿದೆ. ಇತ್ತೀಚೆಗೆ ಮಕ್ಕಳ ಕವನ ಸಂಕಲನವನ್ನು ಸ್ವಂತ ಪರಿಶ್ರಮದಿಂದ ಹಾಗೂ ಹಿತೈಷಿಗಳ ಮಾರ್ಗದರ್ಶನದಲ್ಲಿ ಬಿಡುಗಡೆಗೊಳಿಸಿದ್ದಾರೆ.

  ಇದೀಗ ಈ ಪ್ರತಿಭೆಗೆ ತಕ್ಕ ಪ್ರೋತ್ಸಾಹ ಮತ್ತು ಅವಶ್ಯಕ ಸಹಾಯ ಅಗತ್ಯವಿದ್ದು, ಇವರ ಮನಸ್ಸು ನೋವಿಗೊಳಗಾಗದಂತೆ ಜೀವನ ನಿರ್ವಹಣೆಗೆ ಮಾರ್ಗೋಪಾಯ ಕಲ್ಪಿಸಬೇಕಿದೆ.

  ಓದುಗ ಅಭಿಮಾನಿಗಳ ಪ್ರೋತ್ಸಾಹಕ್ಕೆ ಹೆಚ್ಚಾಗಿ ಭಾವುಕವಾಗುವ ಇವರಿಗೆ, ಓದುಗರ ಓಲೆಯೇ ಬರಹಕ್ಕೆ ಸ್ಫೂರ್ತಿ. ಆದರೆ ಪ್ರತ್ಯುತ್ತರದ ವೆಚ್ಚ ಈ ಕವಿಗೆ ಭಾರವಾಗದಂತೆ ಗಮನ ಹರಿಸಬೇಕಾದ ಸೂಕ್ಷ್ಮ ಅವಲೋಕನದ ಸಾಮರ್ಥ್ಯವನ್ನು ಓದುಗ ಬಂಧುಗಳು ಹೊಂದಬೇಕು. ಜ್ಞಾನಾಭಿವೃದ್ಧಿಗೆ ಹಾಗೂ ಇತರ ಅಧ್ಯಯನಶೀಲ ಗ್ರಂಥಗಳ ಪೂರೈಕೆ ಸಹ ಇಲ್ಲಿನ ಸೀಮಿತ ಅವಕಾಶದಲ್ಲಿ ಅಸಾಧ್ಯವಾಗಿ ಮರುಗುವಂತಾಗುತ್ತದೆ.

  ರಮೇಶರವರು ಕನ್ನಡ, ಹಿಂದಿ ಭಾಷೆಗಳೊಡನೆ ತಕ್ಕಮಟ್ಟಿನ ಇಂಗ್ಲಿಷ್‌ ಭಾಷಾ ಜ್ಞಾನ ಹೊಂದಿದ್ದಾರೆ. ಹೀಗೆ ಶಾಲಾ ಪಠ್ಯ ಹಾಗೂ ಶಿಕ್ಷಣ ಹೊಂದದೆಯೇ ಬಹುಭಾಷಾ ಜ್ಞಾನ ಸಂಪಾದಿಸಿದ ಅಪ್ರತಿಮ, ಅಸಾಮಾನ್ಯ ಪ್ರತಿಭೆಯಾಗಿದ್ದಾರೆ. ಅಸಹಾಯಕತೆಯ ಕುರಿತು ಅನುಕಂಪ ಬಯಸದ ಇವರು ಮಾನವೀಯತೆಯಿಂದ ಮನುಷ್ಯರೆಂದು ಪರಿಗಣಿಸುವ ಸಹೃದಯರ ಪ್ರೋತ್ಸಾಹ ಬಯಸುತ್ತಾರೆ.

  ರಮೇಶರ ಸಂಪರ್ಕ ವಿಳಾಸ :

  ರಮೇಶ ಜಿ. ಹೆಗಡೆ

  ಸನ್‌/ಆಫ್‌ ಗೋವಿಂದ ಹೆಗಡೆ

  ವಿನಾಯಕ ಕಾಲನಿ

  ಶಿರಸಿ. ಉ.ಕ. ಜಿಲ್ಲೆ

  ಪಿನ್‌ ಕೋಡ್‌ : 581402.

  ಮೊಬೈಲ್‌ : 93435 48135 (ವಿ.ಸೂ : ಬೆಳಿಗ್ಗೆ 9 ಗಂಟೆಯವರೆಗೆ, ಮಧ್ಯಾಹ್ನ 2ರಿಂದ 4ಗಂಟೆ ತನಕ, ರಾತ್ರಿ 9 ಗಂಟೆಯ ನಂತರ ಕರೆ ಮಾಡಬಹುದು)

  ಮುಖಪುಟ / ಸಾಹಿತ್ಯ-ಸಂಸ್ಕೃತಿ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more