ಬೇಂದ್ರೆಕವಿತೆ ಚಹಾದ ಜೋಡಿ ಚೂಡಾದ್ಹಂಗ
ಪಂಡಿತ ಪಾಮರರಿಬ್ಬರನೂ ಏಕಕಾಲದಲ್ಲಿ ತಲುಪಬಲ್ಲವರು ವರಕವಿ ಬೇಂದ್ರೆ. ಅವರ ಕವಿತೆಗಳಲ್ಲಿನ ಗೇಯತೆ, ಗ್ರಾಮ್ಯ ಭಾಷೆಯ ಸೊಗಡು ಸಾಮಾನ್ಯರಿಗೆ ಅವರನ್ನು ಹತ್ತಿರವಾಗಿಸುತ್ತವೆ. ಕವನಗಳ ಒಳಧ್ವನಿ ಗ್ರಹಿಸದೆಯೂ ಆಸ್ವಾದಿಸಲು ಸಾಧ್ಯವಾಗುತ್ತದೆ. ಅಂತೆಯೇ ಕೃತಿಯ ಆಳ-ಹರಿವುಗಳನ್ನು ಅಳೆಯುವ ವಿಮರ್ಶಾದೃಷ್ಟಿಗೂ ಬೆರಗುಂಟು ಮಾಡುವ ಸಾಮರ್ಥ್ಯ ಅವರ ಕವನಗಳಿಗಿದೆ.
ಸಾಂದರ್ಭಿಕ ಕವಿ ಎಂದೇ ಹೆಸರು ಪಡೆದ ಬೇಂದ್ರೆ ಅವರ ಕಾವ್ಯಗಳು ಜನಿಸಿದ ಸಂದರ್ಭಗಳು ಕುತೂಹಲಕಾರಿಯಾಗಿವೆ. ಪ್ರಕೃತಿ ದಾಂಪತ್ಯ, ಹರೆಯ, ವಿರಹಗಳಲ್ಲದೇ ಸಾಮಾಜಿಕ ಬದುಕಿನ ಪ್ರತಿಯಾಂದು ಮಿಡಿತವೂ ಬೇಂದ್ರೆಯವರ ಕವಿತೆಗಳಲ್ಲಿ ಹಾಸುಹೊಕ್ಕಾಗಿದೆ.
ಅತ್ಯಂತ ಪ್ರಸಿದ್ಧವಾದ ಸಾಮಾನ್ಯಾವಾಗಿ ಎಲ್ಲರ ಬಾಯಲ್ಲೂ ನಲಿಯುವ ಬೇಂದ್ರೆಯವರ ಕವನ ‘ಹುಬ್ಬಳ್ಳಿಯಂವಾ’. ಇದು ಜನಪದ ಭಾಷೆಯಲ್ಲಿ ಅನಾವರಣಗೊಂಡಿದೆ. ದೇವದಾಸಿಯಾಬ್ಬಳು ಅನೇಕ ಪುರುಷರೊಂದಿಗೆ ಸಂಬಂಧವಿರಿಸಿಕೊಂಡರೂ ಯಾವುದೋ ಒಬ್ಬ ಹುಡುಗನಲ್ಲಿ ಮಾತ್ರ ಅನುರಕ್ತಳಾಗಿ, ವಿರಹ ವೇದನೆಯಲ್ಲಿ ಹಾಡುವ ಹಾಡಿದು. ವಾರಕ್ಕೆ ಮೂರು ಸಲ ಬಂದು ಹೋಗುವ ಹುಡುಗ ಇನ್ನು ಬರಲಿಲ್ಲವಲ್ಲ ಎಂಬ ವಿರಹದ ಉತ್ಕಟತೆ ಎದ್ದು ಕಾಣುತ್ತದೆ.
ಬೇಂದ್ರೆಯವರು ‘ಕುಣಿಯೋಣ ಬಾರಾ’ ಒಂದು ಪ್ರಸಿದ್ಧ ಪ್ರಣಯ ಗೀತೆ. ತಾಳ್ಯಾಕ ತಂತ್ಯಾಕ/ರಾಗದ ಚಿಂತ್ಯಾಕ/ಹೆಜ್ಯಾಕ ಗೆಜ್ಯಾಕ ಕುಣಿಯೋಣ ಬಾ/- ಈ ಕಾವ್ಯಕ್ಕೆ ಪ್ರೇರಣೆ ನೀಡಿದ್ದು ಕಾಗೆ! ಈ ಕವಿತೆಯಲ್ಲಿ ಕಾಗೆಯ ಜೋಡಿಯಾಂದು ಕುಣಿಯುವುದನ್ನು ನೋಡಿ, ಸ್ಫೂರ್ತಿ ಪಡೆದ ನಾಯಕ, ನಾಯಕಿಗೆ ಕುಣಿಯೋಣು ಬಾರಾ ಎನ್ನುತ್ತಾನೆ. ಬೇಂದ್ರೆಯವರ ಗೀತೆಗಳು ಭಾವನಾತ್ಮಕವಾಗಿ ಕಾವ್ಯ ರಸಿಕರ ಹೃದಯ ವೀಣೆಯನ್ನು ಮಿಡಿಯುತ್ತಲೇ ಬಂದಿವೆ. ಇವರ ಪ್ರೇಮ ಗೀತೆಗಳಲ್ಲಿ ಪ್ರಸಿದ್ಧವಾದ ‘ಮುಗಿಲ ಮಾರಿಗೇ ರಾಗ ರಾತಿಯ ನಂಜ ಏರಿತ್ತ ಆಗ ಸಂಜೆಯಾಗಿತ್ತ’ ಕವಿತೆ ಗಂಡು-ಹೆಣ್ಣಿನ ಬಯಕೆ, ಪ್ರೇಮ, ಕಾಮವನ್ನು ಚಿತ್ರಿಸುತ್ತದೆ. ಹೆಣ್ಣೊಬ್ಬಳು ನೀರು ತರುವಾಗ ದಾರಿ ಮಧ್ಯೆ ಅವಳ ಹಿಂದೆಯೇ ಕಾಮಿಯಾಬ್ಬ ಬರುತ್ತಾನೆ. ಬೊಗಸೆ ಕಣ್ಣುಗಳಲ್ಲಿ ಬಯಕೆ ತೋರುವ ಹೆಣ್ಣನ್ನು ಬಯಸಿ ಬರುವ ಕಾಮಿಯ ಬಗ್ಗೆ ಹೇಳುತ್ತ ಮುಗಿಲು, ಸಂಜೆ, ನೆಲ, ಗಿಳಿ, ಚಂದ್ರ, ಮಲ್ಲಿಗೆ ಕುರಿತಾಗಿಯೂ ಕವಿ ಬೇಂದ್ರೆಯವರು ಸುಂದರವಾಗಿ ವರ್ಣಿಸಿದ್ದಾರೆ.
ಬೇಂದ್ರೆಯವರ ಕಾವ್ಯ ಕೇವಲ ಪ್ರೀತಿ-ಪ್ರೇಮಗಳಿಗೆ ಮಾತ್ರ ಸೀಮಿತವಾಗದೇ ಪ್ರಕೃತಿಯ ಅಪೂರ್ವ ವರ್ಣನೆಯನ್ನು ಮೈಗೂಡಿಸಿಕೊಂಡಿದೆ. ಋತುಗಾನ, ನಿಗಿ ಮುಗಿಲು, ಬಾರೋ ಸಾಧನಕೇರಿಗೆ- ಮತ್ತಿತರ ಕವಿತೆಗಳಲ್ಲಿ ಬೇಂದ್ರೆಯವರು ವರ್ಷಋತು ಹಾಗ ಶ್ರಾವಣ ಮಾಸವನ್ನು ಸೊಗಸಾಗಿ ಸೆರೆಹಿಡಿದಿದ್ದಾರೆ.
ಶ್ರಾವಣ ಬಂತು ಕಾಡಿಗೆ/ಬಂತು ನಾಡಿಗೆ
ಬಂತು ಬೀಡಿಗೆ/ಶ್ರಾವಣ ಬಂತು...
ಬೇಂದ್ರೆ ಅವರಿಗೆ ಶ್ರಾವಣ ಹೊಸತನದ ಸಂಕೇತ. ಶ್ರುತಿಕೃತಿಗಳ ಪುಣ್ಯ ಲಭಿಸುವ ಕಾಲ. ಪ್ರತಿ ವರ್ಷದಂತೆ ಶ್ರಾವಣ ಬಂತು ಕವನದಲ್ಲಿ ಅವರು...
ಇದು ನೆಲದ ಗರ್ಭದಾ ಹೊನ್ನು,
ನೀಲಿ ನೀರನ್ನು/
ಕುಡಿದು ಹಸಿರನ್ನು
ಉಗುಳಿತೆಂತು
ಜಗ ನೋಡತದ ನಿಂತು
ಎಂದು ಹೇಳಿದ್ದಾರೆ. ಇಲ್ಲಿ ಅವರಿಗೆ ಶ್ರಾವಣ ಮೊದಲ ಅನುಭವವೇನಲ್ಲ. ಮೊದಲ ಕವನದಲ್ಲಿ ಹಸಿರು ಸ್ಫೂರ್ತಿಯಾದರೆ ಎರಡನೇ ಕವನದಲ್ಲಿ ಮೃತ್ಯು ಕವಿತೆಗೆ ಸ್ಫೂರ್ತಿಯಾಗುತ್ತದೆ. ಮೃತ್ಯುವನ್ನು ವ್ಯಥೆಯಾಗಿ ಚಿತ್ರಿಸದಿರುವುದು ಇಲ್ಲಿನ ವಿಶೇಷ.
ಧಾರವಾಡದ ಅತ್ತಿಕೊಳ್ಳದ ಸೌಂದರ್ಯಕ್ಕೆ ಮರುಳಾಗಿ ಹೊಸದೊಂದು ಪ್ರೇರೇಪಣೆ ಪಡೆದು ಬರೆದ ಕವನ ‘ಬೆಳಗು’. ಮೂಡಲ ಮನೆಯಾ/ಮುತ್ತಿನ ನೀರಿನಾ/ಎರಕವ ಹೊಯ್ದಾ/ನುಣ್ಣನ್ನೆರಕವ ಹೊಯ್ದಾ/
ಪೂರ್ವದಿಂದ ಬೆಳಕು ಹೊರಡುವಿಕೆಯನ್ನು ವರ್ಣಿಸುವ ರೀತಿ ಕವಿಯ ಅಮೋಘ ಕಲ್ಪನೆ. ಇದು ಹೊಸ ಅಭಿವ್ಯಕ್ತಿಯ ಆವಿಷ್ಕಾರವೂ ಹೌದು.
ಬೆಳಗು ಕವನ, ಜೀವಿ ಮತ್ತು ಪ್ರಕೃತಿಯ ಸಂಪರ್ಕವನ್ನು ಸೂಚಿಸುತ್ತಾ ಎಲೆಗಳ ಮೇಲೆ ಹೂಗಳ ಒಳಗೇ/ಅಮೃತದ ಬಿಂದು/ಕಂಡವು-ಅಮೃತದ ಬಿಂದು/ಯಾರಿರಿಸಿರುವರು ಮುಗಿಲ ಮೇಲಿಂದಿಲ್ಲಿಗೆ ತಂದು/ಈಗ-ಇಲ್ಲಿಗೆ ತಂದು/ಪ್ರಕೃತಿಯ ಸೊಬಗನ್ನು ಸಾರಿ ಹೇಳುತ್ತಿದೆ.
ನಾಯಕಿಯ ಮನಸ್ಸಿನ ಗೊಂದಲ, ಭಯಗಳನ್ನು ಪ್ರಕೃತಿಯ ಪ್ರತಿಮೆಗಳ ಮೂಲಕ ತೋರುವ ಕವನ-ಜೋಗಿ. ‘ಊರ ತುದಿಯ ಆ ಮೂರು ಬಟ್ಟೆ ಮುಗಿದಲ್ಲಿ ಕೊಳ್ಳವೆಲ್ಲಿ’, ‘ಇರುಳು ಅಂತನ ಹಗಲ ಗೂಕತಾವಾ ಅಲ್ಲಿ ಜೋಡಗೂಗಿ’ ಈ ಸಾಲುಗಳಲ್ಲಿ ಮೂರು ದಾರಿಗಳು ಸೇರುವ ಸ್ಥಳ, ಹಗಲನ್ನೇ ಇರುಳೆಂದು ಬಗೆದು ಕೂಗುವ ಗೂಬೆಗಳು ಭಯದ ಸಾವಿನ ಸಂಕೇತಗಳಾಗಿವೆ. ಜತೆಗೇ ಅಂತಹ ವಾತಾವರಣದಲ್ಲೂ ‘ಹಬ್ಬಿ ಹರುಹ್ಯದ ಬೇವಿಗೇ ಸುತ್ತ ಅಮೃತಬಳ್ಳಿ’ ಎಂಬಲ್ಲಿ ಅಮರತ್ವದ ಸಂಕೇತವೂ ಇದೆ. ‘ಈ ಮಾವಿನೊಳಗ, ಈ ಸುಗ್ಗಿಯಾಳಗ ಬಂದದ ಕೋಗಿಲೊಂದು’ ಎನ್ನುತ್ತ ಆ ಎಲ್ಲ ಗೊಂದಲಗಳನ್ನು ಮೀರಿ ನಾಯಕಿ ಕೋಗಿಲೆಯೆಡೆಗೆ ಆಕರ್ಷಿತಳಾಗುವುದು ಆಶಾವಾದದ ಎಳೆಯಾಂದನ್ನು ತೋರುತ್ತದೆ.
ತೀವ್ರ ಬರಗಾಲ ಬಂಗಾಳವನ್ನು ಕಾಡಿದ ದಿನಗಳಲ್ಲಿ ನೀರಿಗಾಗಿ ಜನರ ಹಾಹಾಕಾರವೇ ‘ಇಳಿದು ಬಾ ತಾಯೆ...’ಕವನಕ್ಕೆ ಪ್ರೇರಣೆ. ಅದೇ ಸಂದರ್ಭದ ಬೇಂದ್ರೆಯವರ ವೈಯುಕ್ತಿಕ ಜೀವನವನ್ನು ಅವಲೋಕಿಸಿದಾಗ ಅಲ್ಲೂ ‘ಗಂಗಾವತರಣ’ದ ಸೂಚನೆಗಳಿವೆ. ಅವರ ಆಂತರಿಕ ಬದುಕಿನಲ್ಲಿ ಮಹತ್ತರ ಬದಲಾವಣೆಗಳಾದ ಕಾಲಘಟ್ಟವದು. ವ್ಯಕ್ತಿ-ಸಮಷ್ಟಿಗಳ ಈ ಸಮನ್ವಯತೆಯೇ ಬೇಂದ್ರೆಯವರ ವಿಶಿಷ್ಟತೆ.
ಕೌಟುಂಬಿಕ ಜೀವನದ ಆಗುಹೋಗುಗಳೂ ಅವರ ಕವನಗಳಿಗೆ ವಸ್ತುಗಳಾಗಿವೆ. ಜನಜನಿತವವಾಗಿರುವ ಅವರ ‘ನೀ ಹಿಂಗ ನೋಡಬ್ಯಾಡ’ ಕವನದಲ್ಲಿ ಸಾವಿನಂಚಿನಲ್ಲಿರುವ ಮಗು, ಅಸಹಾಯಕಳಾಗಿ ನೋಡುತ್ತಿರುವ ಮಡದಿಯ ನೋಟಗಳ ಸನ್ನಿವೇಶ ತುಂಬಾ ಮಾರ್ಮಿಕವಾದುದು. ಎಂಟೇ ದಿನಗಳಲ್ಲಿ ತಮ್ಮೆರಡು ಮಕ್ಕಳನ್ನು ಕಳೆದುಕೊಂಡಾಗಿನ ಅವರ ‘ಪಾಡು’ ಕೂಡ ಪುತ್ರ ಶೋಕದಿಂದ ಪ್ರಾರಂಭವಾದರೂ ಬದುಕು-ಸಾವುಗಳ ಪ್ರಶ್ನೆಗಳನ್ನೆತ್ತಿಕೊಂಡು ಸಾಗುತ್ತದೆ. ‘ಪುತ್ರಶೋಕದ ಬೆಲೆಯ ಹಿಗ್ಗಿಸೆ ದನಿಯ ತೆಗೆದೆನೆ ರಾಗಕೆ’ ಎಂಬ ಪ್ರಶ್ನೆಯನ್ನು ಅವರೇ ಎತ್ತುತ್ತಾರೆ. ತನ್ನಂಥ ಹಾಡುಗಾರ ‘ಹಾಡಿನಂಜಲಿ’ಯನ್ನೇ ನೀಡಬೇಕು ಎಂಬ ಸಮಾಧಾನವೂ ಅವರಲ್ಲೇ ಇದೆ.
ತನ್ನ ಕುಟುಂಬದ ಜತೆ ಪರಿಸರದ ಸುಖ-ದುಃಖಗಳಿಗೂ ಅವರ ಕವಿಹೃದಯ ಗಾಢವಾಗಿ ಸ್ಪಂದಿಸುತ್ತದೆ. ಕಾಡಾದಳು/ಹಣ್ಣಾದಳು/ಮಣ್ಣಾದಳು ಹುಡುಗಿ/ನೆನಪಾದಳು ಹುಡುಗಿ/ವ್ಯಥೆಯಾದಳು ಕಥೆಯಾದಳು ಎಂದೆಲ್ಲ ತನ್ನ ಕಣ್ಣೆದುರೇ ಬೆಳೆದು ದೊಡ್ಡವಳಾಗಿ, ಮದುವೆಯಾಗಿ ಮೊದಲ ಬಾಣಂತನದಲ್ಲೇ ಅಸುನೀಗಿದ ಪಕ್ಕದ ಮನೆಯ ಹುಡುಗಿಯಾಗಿ ಅವರ ಮನಸ್ಸು ಮಿಡಿಯುತ್ತದೆ.
ಗೋಪಿಕೆಯರೊಂದಿಗಿನ ಕೃಷ್ಣ ಸದಾ ಸ್ತ್ರೀಲೋಲನಾಗಿ ಚಿತ್ರಿತನಾದವನು. ಆದರೆ ಬೇಂದ್ರೆಯವರ ‘ಯಾರವ್ವಾ ಇವ ಚೆಲುವ, ತನ್ನಷ್ಟಕ್ಕೆ ತಾನ ನೋಡಿ ನಲಿವಾ’ ಕವನದಲ್ಲಿ ತುಟಿ ಹಾಲು ತೊಡೆಯದ, ಕುಡಿಮೀಸೆ ಒಡೆಯದ ಬಾಲಕನಾಗಿ ಕಾಣಿಸಿಕೊಂಡಿದ್ದಾನೆ.
‘ಕಾಮಣ್ಣನೊಲು ಕಾಣುನವಾ’ ಎಂದು ಕೃಷ್ಣ ರೂಪವನ್ನು ಬಣ್ಣಿಸಿದರೂ ‘ಹಿಡಿದಿಲ್ಲ ಕಣ್ಣಿಗೆ ಹೆಣ್ಹುಚ್ಚು ಹಿಡಿದಿಲ್ಲ’ ಎಂಬಲ್ಲಿ ಕಾಮದ ಸೋಂಕೇ ಇಲ್ಲದ ನಿಷ್ಕಳಂಕ ಸ್ನೇಹವನ್ನು ಕೃಷ್ಣ-ಗೋಪಿಕೆಯರ ನಡುವ ಬೇಂದ್ರೆ ನಿರೂಪಿಸುತ್ತಾರೆ.
ಬದುಕಿನಲ್ಲಿ ಯಾವುದೇ ಹಂತದಲ್ಲಿ ಕವನದ ಪಾತ್ರದ ಒಳಹೊಕ್ಕು ನುಡಿಯಬಲ್ಲ ಸೂಕ್ಷ್ಮ ಸಂವೇದನೆಗಳು ಅವರಲ್ಲಿದ್ದವು. ತಾಯಿ-ಮಗು ಸಂಬಂಧ ಕುರಿತಾದ ‘ಯಾರಿಗೂ ಹೇಳೋಣ ಬ್ಯಾಡ’, ‘ ಆಶೆ-ನಿರಾಶೆ’, ‘ ನಗು-ಅಳು’, ‘ ಮೊಲೆ’ ಮುಂತಾದ ಕವನಗಳೇ ಇದಕ್ಕೆ ಸಾಕ್ಷಿ. ಮಾಗಿದ ಹರೆಯದಲ್ಲೂ ಮಗುವಾಗಬಲ್ಲದು ಅವರ ಮನಸ್ಸು.
‘ಮೈಯ ಹೂಡಿದ ಮಣ್ಣು ಗಾಳಿಯೂ ಬಯಲು ಸೇರಿದರೇನಿದೆ?
ಒಬ್ಬರೊಬ್ಬರ ಜೀವದಲ್ಲಿಯೇ ಜೀವ ಜೀವದ ಜೇನಿದೆ’
ಎಂದು ಬೇಂದ್ರೆಯವರೇ ಹೇಳುವಂತೆ ಅವರ ದೇಹ ಪಂಚೈಕ್ಯವಾಗಿದೆ ನಿಜ. ಆದರೆ ಅವರ ಒಂದೊಂದು ಕವನವೂ ಜೇನ ಹನಿಯಂತೆ ನಮ್ಮೊಂದಿಗಿದೆ. ಜೀವಸೆಲೆ ಉಕ್ಕಿಸುತ್ತಿದೆ.
(ಸ್ನೇಹಸೇತು: ವಿಜಯ ಕರ್ನಾಟಕ)
ಇದನ್ನೂ ಓದಿ:
ಸಾಧನ ಕೇರಿಯ ಶ್ರಾವಣ ಪ್ರತಿಭೆ ಬೇಂದ್ರೆ!











Click it and Unblock the Notifications