ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಿಂದ ಆಲಾ ರೇ ಮಟಕೀ ಸಂಭಾಲ್‌ ಬ್ರಿಜ್‌ ಬಾಲಾ

By ತಳಕು ಶ್ರೀನಿವಾಸ್
|
Google Oneindia Kannada News

ಬೆಣ್ಣೆ ಕದ್ದನಮ್ಮ ಕೃಷ್ಣ ಬೆಣ್ಣೆ ಕದ್ದನಮ್ಮ

ಕವಿ ನಿಸಾರ್‌ ಅಹಮದ್‌ ರವರು ಈ ಕವನದಲ್ಲಿ ಆ ತುಂಟ ಬಾಲಕನನ್ನು ಎಷ್ಟು ಚೆನ್ನಾಗಿ ನಿರೂಪಿಸಿದ್ದಾರೆ.

ಶ್ರಾವಣ ಮಾಸ ಕೃಷ್ಣ ಪಕ್ಷ ಅಷ್ಟಮಿ - ಶ್ರೀ ಕೃಷ್ಣನ ಜನುಮ ದಿನ. ಆ ದೇವನು ತುಂಟ ಬಾಲಕನಾಗಿದ್ದಾಗ ಪುಟ್ಟ ಪುಟ್ಟ ಸ್ನೇಹಿತರುಗಳೊಂದಿಗೆ ಅಕ್ಕ ಪಕ್ಕದ ಮನೆಗಳಲ್ಲಿ ಬೆಣ್ಣ ಹಾಲು ಮೊಸರು ಎಲ್ಲವನ್ನೂ ಕದಿಯುತ್ತಿದ್ದ. ಇವನ ಕಾಟ ತಡೆಯಲಾರದ ಅಕ್ಕ ಪಕ್ಕದ ಮನೆಯವರುಗಳೆಲ್ಲರೂ ಯಶೋದೆಯ ಮುಂದೆ ಅಲವತ್ತು ಕೊಳ್ಳುತ್ತಿದ್ದರು. ಎಷ್ಟೇ ಆಗಲಿ ಆತ ದೇವನು. ಅವನ ತುಂಟಾಟವನ್ನು ನೆನೆಸಿಕೊಳ್ಳುತ್ತಾ ಅದೇ ಆಟವನ್ನು ಸಾರ್ವಜನಿಕವಾಗಿ ಆಡಿ ತೋರಿಸುವುದು ಮುಂಬಯಿನಲ್ಲಿ ಒಂದು ಸಂಪ್ರದಾಯ. ಇದನ್ನು ಸ್ಪರ್ಧೆಯಾಗಿ ಮಾಡಿ ಲಕ್ಷಾಂತರ ರೂಪಾಯಿಗಳ ಬಹುಮಾನವನ್ನು ಗೆಲ್ಲುವ ಭೂಪತಿಗಳೂ ಇದ್ದಾರೆ.

’ಗೋವಿಂದ ಆಲಾ ರೇ ಆಲಾ ಝರಾ ಮಟಕೀ ಸಂಭಾಲ್‌ ಬ್ರಿಜ್‌ ಬಾಲಾ’ - ಈ ಹಾಡನ್ನು ಶಮ್ಮೀ ಕಪೂರ್‌ ಅವರ ಬ್ಲಫ್‌ ಮಾಸ್ಟರ್‌ ಚಿತ್ರದಲ್ಲಿ ಚಿತ್ರೀಕರಿಸಿದ್ದಾರೆ. ಅದನ್ನು ನೋಡುತ್ತಿದ್ದರೆ ನಮಗೂ ಕುಣಿಯಬೇಕು ಅನ್ನಿಸುತ್ತದೆ. ಮುಂಬೈನಲ್ಲಿ ಆಚರಿಸುವ ಜನ್ಮಾಷ್ಟಮಿಯ ನಿಮಿತ್ತದ ಈ ದಹಿ ಹಂಡಿ (ಮೊಸರಿನ ಗಡಿಗೆ) ಒಡೆಯುವ ದೃಶ್ಯವನ್ನೂ ಅದರಲ್ಲಿ ನೋಡಬಹುದು. ಈ ಹಾಡಿನ ಅರ್ಥ ಹೀಗಿದೆ - ಗೋವಿಂದ ಅಂದ್ರೆ ಕೃಷ್ಣ ಬರುತ್ತಿದ್ದಾನೆ, ಬ್ರಿಜ ದೇಶದ (ಈಗಿನ ಮಥುರಾ, ಬೃಂದಾವನ) ಬಾಲೆಯರೇ (ಗೋಪಿಕೆಯರು) ನಿಮ್ಮ ನಿಮ್ಮ ಮಡಕೆಗಳನ್ನು ನೋಡಿಕೊಳ್ಳಿ. ಸ್ವಲ್ಪ ಎಚ್ಚರ ತಪ್ಪಿದರೂ ಈ ತುಂಟ ಮತ್ತು ಅವನ ಗೆಳೆಯರು ಮಡಕೆ ಒಡೆದು ಅದರೊಳಗಿರುವ ಹಾಲು ಬೆಣ್ಣೆ ಕದಿಯುವರು. [ಕೃಷ್ಣಜನ್ಮಾಷ್ಟಮಿಯಂದು ಮಾಡಬೇಕಾದ ಸಂಕಲ್ಪ, ಸಿದ್ಧತೆ]

Govinda Aala Re! - Krishna Janamashtami festival

ಮಳೆಗಾಲದಲ್ಲಿ ಇಂತಹ ಮೋಜಿನಿಂದ ಜನರು ತಾವೂ ನಲಿಯುವರು ಮತ್ತು ಇತರರನ್ನೂ ನಲಿಸುವರು. ಇಂದಿನ ದಿನಗಳಲ್ಲಿ ಹಳೆಯ ಮುಂಬೈನ ಬಡಾವಣೆಗಳಾದ ಗಿರ್‌ಗಾಂವ್‌, ತಾಡ್‌ದೇವ್‌, ಮಝಗಾಂವ್‌, ವೊರ್ಲಿ, ಲಾಲ್‌ ಬಾಗ್‌, ದಾದರ್‌, ಘಾಟ್‌ ಕೋಪರ್‌, ಥಾಣೆ ಮತ್ತಿತರೇ ಪ್ರದೇಶದ ಗಲ್ಲಿ ಗಲ್ಲಿಗಳಲ್ಲೂ ಬಹು ಮಹಡಿ ಕಟ್ಟಡಗಲ ಒಂದು ಕಡೆಯಿಂದ ಇನ್ನೊಂದು ಕಡೆಯ ಕಟ್ಟಡಗಳಿಗೆ ಹಗ್ಗವನ್ನು ಕಟ್ಟಿ ಮಧ್ಯೆ ಒಂದು ಮಡಕೆಯನ್ನು ಕಟ್ಟಿರುವ ದೃಶ್ಯ ಸರ್ವೇ ಸಾಮಾನ್ಯ. ಅಲ್ಲೇ ಕೆಳಗೆ ಒಂದು ಜಾಹೀರಾತಿನ ಫಲಕವನ್ನೂ ನೋಡಬಹುದು. ಈ ಹಂಡಿಯನ್ನು ಒಡೆದವರಿಗೆ ಇಂತಿಷ್ಟು ರೂಪಾಯಿಗಳ ಬಹುಮಾನ ಕೊಡಲಾಗುವುದು, ಎಂದು. ಪಕ್ಕದಲ್ಲಿರುವ ಥಾಣೆ ಪ್ರದೇಶದಲ್ಲಿ ಅತಿ ಹೆಚ್ಚಿನ ಮೊತ್ತವನ್ನು (ಲಕ್ಷಕ್ಕೂ ಮಿಗಿಲಾಗಿ) ಬಹುಮಾನವಾಗಿ ನೀಡುವರು.

ಇದಕ್ಕಾಗಿ ಸುಮಾರು ದಿನಗಳಿಂದ ತಾಲೀಮು ನಡೆಸುತ್ತಾರೆ. ಮೇಲೆ 40 ಅಡಿಗಳಿಗಿಂತ ಎತ್ತರದಲ್ಲಿ ಮಡಕೆಯನ್ನು ಜೋತು ಬಿಡುತ್ತಾರೆ. ಅದರೊಳಗೆ ಹಾಲು, ಮೊಸರು, ತುಪ್ಪ ಇತ್ಯಾದಿ ಗಳನ್ನು ಹಾಕಿರುತ್ತಾರೆ. ಈ ಮಡಕೆಯನ್ನು ಒಡೆಯಲು ಮಾನವ ನಿರ್ಮಿತ ಪಿರಮಿಡ್‌ ರಚಿಸಿ ಮಡಕೆಯನ್ನು ಒಡೆಯಬೇಕು. ಇದಕ್ಕಾಗಿ ಜನಗಳು ಗುಂಪು ಗುಂಪಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಮಡಕೆ ಒಡೆಯಲು ಪ್ರಯತ್ನಿಸುತ್ತಾ ಹೋಗುತ್ತಾರೆ. 50 - 60 ಜನಗಳ ಗುಂಪೇ ಇದ್ದು ಅದರಲ್ಲಿ ಧಡೂತಿ ಕಾಯದವರು, ಕೃಶಕಾಯರು, ಎತ್ತರದವರು, ದೊಡ್ಡವರು, ಚಿಕ್ಕ ಚಿಕ್ಕ ಮಕ್ಕಳು ಎಲ್ಲ ಇರುವರು. ಇವರೆಲ್ಲರೂ ಕೇಸರಿ ಬಣ್ಣದ ಹಣೆ ಪಟ್ಟಿ, ಅದೇ ಬಣ್ಣದ ಬನಿಯನ್‌ ಧರಿಸಿರುವುದು ಒಂದು ಸಂಕೇತ.

ಮೊದಲು ಕೆಳಗಡೆ ಧಡೂತಿ ಕಾಯರು ಮಾನವ ಸರಪಳಿಯಂತೆ ಸುತ್ತುವರಿದು ನಿಲ್ಲುತ್ತಾರೆ. ಅವರ ಮೇಲೆ ಎರಡನೆ ಪದರದಲ್ಲಿ ಸ್ವಲ್ಪ ಕೃಶಕಾಯದವರು, ಹಾಗೇ ಮೇಲೆ ಮೇಲಕ್ಕೆ 6-7 ಪದರಗಳಂತೆ ಮೇಲಕ್ಕೆ ಹೋಗುತ್ತಾರೆ. ಕಡೆಗೆ ತುತ್ತ ತುದಿಯಲ್ಲಿ ಒಬ್ಬ ಚಿಕ್ಕ ಬಾಲಕನು ಮೇಲೇರಿ ಆ ಮಡಕೆಯನ್ನು ಒಡೆಯುತ್ತಾನೆ. ಇದು ಅಷ್ಟು ಸುಲಭವಲ್ಲ. ಇವರು ಮೇಲೇರಲು ಪ್ರಯತ್ನಿಸುತ್ತಿದ್ದಂತೆ, ಸುತ್ತ ಮುತ್ತ ನೆರೆದಿರುವ ಜನರು (ಹೆಚ್ಚಿನದಾಗಿ ಹೆಂಗೆಳೆಯರು), ಅವರ ಮೇಲೆ ನೀರನ್ನು ಎರಚುತ್ತಾರೆ. ಸಾಮಾನ್ಯವಾಗಿ ಇದೇ ಸಮಯದಲ್ಲಿ ಮಳೆಯೂ ಬರುವುದು. ಇದೆಲ್ಲ ಕೋಟಲೆಗಳ ಮಧ್ಯೆ ಸರಪಳಿ ಕಡಿದು ಜನರು ಬೀಳುವ ಸಾಧ್ಯತೆಗಳೇ ಹೆಚ್ಚು. ಹಾಗೆ ಬಿದ್ದು ಪೆಟ್ಟು ಮಾಡಿಕೊಂಡ ಸಂದರ್ಭಗಳೂ ಇವೆ. ಇದಕ್ಕಾಗೇ ವಿಶೇಷ ಎಚ್ಚರಿಕೆಯನ್ನೂ, ಮತ್ತು ಇದನ್ನೆಲ್ಲಾ ನೋಡಿಕೊಳ್ಳಲು ಸಮರ್ಥ ಹಿರಿಯರೊಬ್ಬರು ನಿರ್ದೇಶನ ಕೊಡುತ್ತಾ ಇರುತ್ತಾರೆ. ಈ ಆಟವನ್ನು ಉತ್ತೇಜಿಸಲು ಸ್ಥಳೀಯ ರಾಜಕೀಯ ಧುರೀಣರೂ ಅವರೊಂದಿಗೆ ಸೇರುವದು ವಿಶೇಷ. ಇವರುಗಳು ಒಂದೆಡೆಯಿಂದ ಇನ್ನೊಂದೆಡೆಗೆ ಹೋಗುವಾಗ 'ಗೋವಿಂದ ಆಲಾ ರೇ ಆಲಾ’ ಎಂದು ಹಾಡಿಕೊಂಡು ಹೋಗುವರು. ಈ ಸಮಯದಲ್ಲಿ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಆಗುವುದೆಂದು ಕೆಲವು ಕಛೇರಿಗಳಿಗೆ ರಜೆ ಕೂಡ ಘೋಷಿಸಿರುತ್ತಾರೆ. ಕೆಲವು ಕಡೆ ಅರ್ಧ ದಿನದ ಕೆಲಸ ಮಾಡುತ್ತಾರೆ. ಇದನ್ನೇ ಕಾರಣ ಮಾಡಿಕೊಂಡು ಬೇಗನೆ ಮನೆಗೆ ಹೋಗುವವರೂ ಇದ್ದಾರೆ.

ಸುಮಾರು ಹತ್ತು ವರುಷಗಳಿಂದ ಹೆಂಗಸರೂ ಇದೇ ತರಹದ ಗುಂಪನ್ನು ಮಾಡಿಕೊಂಡು ದಹಿ ಹಂಡಿ ಒಡೆಯುವ ಸಂಭ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ಇಂತಹ ಮೋಜು ಆಟಗಳಿಂದ ಜನಗಳಲ್ಲಿ ಒಮ್ಮತ ಮೂಡಿಬರುವುದಲ್ಲವೇ? ಇಂತಹ ಕಾರ್ಯಗಳಿಂದಲೇ ನಮ್ಮ ದೇಶ ಮಿಕ್ಕೆಲ್ಲ ದೇಶಗಳಿಗಿಂತ ಭಿನ್ನ ಹಾಗೂ ವಿದೇಶೀಯರಿಗೆ ಇಲ್ಲಿಗೆ ಬರಲು ಹೆಚ್ಚಿನ ಆಸಕ್ತಿಯಲ್ಲವೇ? ಹಿಂದೆ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನಗಳಲ್ಲಿ ಒಮ್ಮತ, ಐಕ್ಯತೆ ಮೂಡಿಸಲು ಗೋಕುಲಾಷ್ಟಮಿಯ ಈ ಆಟ, ಸಾರ್ವಜನಿಕ ಗಣಪತಿ ಇವುಗಳನ್ನು ಆಚರಿಸುತ್ತಿದ್ದು ಅದು ಈಗಲೂ ಆಚರಣೆಯಲ್ಲಿದೆ. ಇಂತಹ ಆಚರಣೆಯಿಲ್ಲದಿದ್ದರೆ ಜೀವನದಲ್ಲಿ ಏನು ಸ್ವಾರಸ್ಯವಿರುತ್ತದೆ ಅಲ್ಲವೇ?

English summary
Krishna Janmashtami is a big occasion for Mumbai people. Breaking the curd pot by making human piramid is real attraction. An article by Talaku Srinivas, Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X