ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನಲ್ಲಿ ಸಾವಿನ ಮಳೆಯ ಪಕ್ಕ ನಿಂತು...

By Staff
|
Google Oneindia Kannada News

ನೋಡಿ, ಒಂದು ಮಳೆ ಹೇಗೆ ಇಡೀ ನಗರವನ್ನು ಮತ್ತು ಅಲ್ಲಿರುವ ಒಂದು ಕೋಟಿಗೂ ಮಿಕ್ಕ ಜನಗಳನ್ನು ನಿರ್ವಿಣ್ಣರನ್ನಾಗಿ ಮಾಡಿ ಹುಲುಮಾನವ ಎಂಬ ಮಾತನ್ನು ಹೇಗೆ ಸ್ಪಷ್ಟೀಕರಿಸಿತು ಅಂತ. ಒಂದೇ ಏಟಿಗೆ ನರಕದರ್ಶನ. ನಿಸರ್ಗ ತನ್ನ ವಿಶ್ವರೂಪವನ್ನು ತೋರಿಸಿದೆ. ನಾನು ನಿಮ್ಮ ಮುಂದೆ ಇಡುತ್ತಿರುವ ಸತ್ಯ - ನಾನು ಕಂಡದ್ದು, ಅನುಭವಿಸಿದ್ದು.

ಈ ಸಮಯಕ್ಕೆ ತಕ್ಕನಾದ ಒಂದು ಹಿಂದಿ ಹಾಡು - ರೋಜ್‌ ಶಾಮ್‌ ಆತೀ ಥಿ ಮಗರ್‌ ಓ ವೈಸಾ ನ ಥಿ.

ಆ ಕರಾಳ ದಿನ, ಜುಲೈ 26ರಂದು ನನ್ನ ಮಗಳು ತನ್ನ ಅಂಧೇರಿಯ ಕಾಲೇಜಿಗೆ ಹೋಗಿದ್ದಳು. ಅಂದು ಬೆಳಗ್ಗೆಯಿಂದಲೇ ವಿಪರೀತ ಮಳೆ. ಇಲ್ಲಿ ಮಳೆ ಇದ್ದರೂ ಎಲ್ಲ ಜನಗಳು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿರುತ್ತಾರೆ. ಯಾರಿಗೂ ಏನೂ ಅಷ್ಟಾಗಿ ತೊಂದರೆ ಎನಿಸದು. ಆದರೆ ಈ ಸಲ ಒಂದೇ ದಿನದ 24 ಘಂಟೆಗಳಲ್ಲಿ 94.4 ಸೆಂ. ಮೀ. ಗಳಿಗೂ ಹೆಚ್ಚಿನ ಮಳೆಯಾಗಿದ್ದು, ಹಿಂದಿನ 100 ವರ್ಷಗಳಲ್ಲಿ ಇದೊಂದು ದಾಖಲೆ. ಇಡೀ ದೇಶದಲ್ಲೇ ಇಂತಹ ಭಾರೀ ಮಳೆ ಆಗಿರುವುದು 4-5 ಬಾರಿ ಮಾತ್ರವಂತೆ.

Submerged busesಅಂದು ಮಾಮೂಲಿ ಮಳೆಗಾಲದ ದಿನಗಳಂತೆ ಮಧ್ಯಾಹ್ನ 1 ಘಂಟೆಗೆ ಗೋರೆಗಾಂವಿನ ಮನೆಯಿಂದ ಅಂಧೇರಿಯ ಕಾಲೇಜಿಗೆ ಹೋದಳು. 3 ಘಂಟೆಗೆ ಕಾಲೇಜಿನ ಪ್ರಾಂಗಣದಲ್ಲಿ ನೀರು ತುಂಬುತಿರಲು, ತಕ್ಷಣ ವಿದ್ಯಾರ್ಥಿಗಳಿಗೆ ಮನೆಗೆ ಹೋಗಲು ತಿಳಿಸಿದರು. ನನ್ನ ಮಗಳು ಮತ್ತು ಇನ್ನಿತರೆ 20-25 ಮಕ್ಕಳು ಕಾಲೇಜಿನ ಗೇಟಿನಿಂದ ಆಚೆಗೆ ಬರುವುದರಲ್ಲಿ ಮಳೆಯ ನೀರು ಮೇಲೇರುತ್ತಿತ್ತು. ಅಲ್ಲೇ ಎದುರುಗಡೆ ಇರುವ ಅಪಾರ್ಟ್‌ ಮೆಂಟಿನ ಎರಡನೇ ಮಾಳಿಗೆಯಲ್ಲಿ ಇರುವ ಒಬ್ಬ ಮಹನೀಯರು ಇವರುಗಳನ್ನು ತಮ್ಮ ಮನೆಗೆ ಬರಲು ಕರೆದರು. ಇವರು ಎರಡನೇ ಮಾಳಿಗೆಗೆ ಏರುವುದರೊಳಗೆ ಮಳೆ ನೀರು ಮೊದಲನೇ ಮಾಳಿಗೆಯನ್ನು ಮುಟ್ಟಿತ್ತು. ಬಹುಪಾಲು ಮುಂಬಯಿಯಲ್ಲಿ ಹೀಗೇ ಆಗಿತ್ತು.

ಆ ಸಮಯದಲ್ಲಿ ಹೆಚ್ಚಿನ ಮಳೆ ನೀರಿನೊಂದಿಗೆ ಸಮುದ್ರದ ಉಬ್ಬರವೂ ಕಾರಣವಾಗಿ ಮಳೆಯ ನೀರು ಸಮುದ್ರ ಸೇರುವ ಬದಲು ಬಿರುಸಿನಿಂದ ಸಮುದ್ರದ ಹಿನ್ನೀರಿನೊಂದಿಗೆ ಒಳಗೆ ನುಗ್ಗಿತ್ತು. ಆ ಮನೆಯವರು ಈ ಎಲ್ಲ ಮಕ್ಕಳನ್ನೂ ಮನೆಗೆ ಕರೆದು ತಿನ್ನಲು ಮತ್ತು ಕುಡಿಯಲು ಇತ್ತು ಮಳೆಯ ನೀರು ಕಡಿಮೆಯಾಗುವವರೆಗೆ ಅಥವಾ ಇವರುಗಳ ಮನೆಯಿಂದ ಯಾರಾದರೂ ಕರೆದೊಯ್ಯಲು ಬರುವವರೆಗೂ ಅಲ್ಲೇ ಇರಲು ತಿಳಿಸಿ - ಇವರುಗಳ ಮನೆಗೆ ದೂರವಾಣಿ ಮಾಡಲು ಕೂಡ ಅನುವು ಮಾಡಿಕೊಟ್ಟರು. ಅಷ್ಟೇ ಅಲ್ಲದೇ ಅಂದು ರಾತ್ರಿ ಅಲ್ಲೇ ಉಳಿಯಲು ಎಲ್ಲ ಅನುಕೂಲ ಮಾಡಿಕೊಟ್ಟರು. ಯಾವ ಜನ್ಮದ ಋಣಾನುಬಂಧಿಗಳೋ ಈ ಹಿತಚಿಂತಕರು. ಮುಂದಿನ ದಿನದ ಬೆಳಗ್ಗೆ 8 ರ ಹೊತ್ತಿಗೆ ನೀರು ಕಡಿಮೆಯಾಗಿ, ಆ ಮಕ್ಕಳ ಮನೆಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಈ ಮಕ್ಕಳನ್ನು ಅವರವರ ಮನೆ ತಲುಪುವಂತೆ ಅನುಕೂಲ ಮಾಡಿಕೊಟ್ಟಿದ್ದಾರೆ.

Colour does not matter !ಇನ್ನು ಕೆಲವು ಮಕ್ಕಳು ತಾವೇ ತಾವಾಗಿ ಹತ್ತಿರದ ರೈಲ್ವೇ ಸ್ಟೇಷನ್‌ಗೆಂದು ಆ ನೀರಿನಲ್ಲೇ ಹೊರಟರು. ಕುತ್ತಿಗೆಯ ಮಟ್ಟಕ್ಕೆ ಹರಿಯುತ್ತಿರುವ ಗಲೀಜು ನೀರಿನಲ್ಲೇ ಹೊರಟರು - ಹತ್ತಿರದ ರೈಲ್ವೇ ಸ್ಟೇಷನ್‌ಗೆ. ಅಲ್ಲಿ ನೋಡಿದರೆ ಎಲ್ಲ ಗಾಡಿಗಳೂ ಅಲ್ಲಲ್ಲೇ ನಿಂತು ಬಿಟ್ಟಿವೆ. ಮಳೆಯ ನೀರು ಹಳಿಗಳನ್ನು ಮುಚ್ಚಿ ಪ್ಲಾಟ್‌ ಫಾರಂ ಮೇಲೆ ಬಂದಿದೆ. ಸರಿ ಅಲ್ಲೇ ಹೊರಟಿದ್ದ ಒಂದು ಬಸ್ಸನ್ನು ಏರಲು ಪ್ರಯತ್ನಿಸಿದರು. ವಿಪರೀತ ಜನಸಂದಣಿಯಿಂದಾಗಿ ಅವರ ಪ್ರಯತ್ನ ಸಫಲವಾಗಲಿಲ್ಲ. ಕೆಲವರ ನುಡಿಗಳಂತೆ ಬಸ್ಸಿನ ಮೇಲ್ಛಾವಣಿ ಹತ್ತಲು ಪ್ರಯತ್ನಿಸಿದರು. ಬಸ್ಸಿಗೂ ಹೊರೆ ತಾಳಲು ಒಂದು ಮಿತಿಯಿರುವುದಲ್ಲವೇ? ಇವರ ಪ್ರಯತ್ನದಿಂದಾಗಿ ಬಸ್ಸು ಹಿಂದಕ್ಕೆ ಮಗುಚಿಕೊಂಡು ನಿಂತ ನೀರಿಗಾಹುತಿಯಾಯಿತು. ಎಲ್ಲರೂ ನೀರಿನೊಳಗೆ. ಈಜಲು ಇದೇನು ಈಜುಗೊಳವೇ? ಅಲ್ಲಾದರೂ ಒಳ್ಳೆಯ ನೀರು ಇರುವುದು. ಇಲ್ಲಿ ಮಲಮೂತ್ರ ಗಲೀಜು ಮಿಶ್ರಿತ ನೀರು. ಸರಿ ಅಲ್ಲೇ ಇದ್ದ ಇತರರು ಹಗ್ಗಗಳನ್ನು ಕಟ್ಟಿ ಒಬ್ಬೊಬ್ಬರನ್ನಾಗಿ ಮೇಲೆತ್ತಿದರು.

ಈ ಮಧ್ಯೆ ಪುಟ್ಟ ಮಕ್ಕಳು ನೀರಿಗಾಹುತಿಯಾದರು. ಆ ಗೊಂದಲದ ವಾತಾವರಣದಲ್ಲಿ ಎಲ್ಲರಿಗೂ ತಮ್ಮ ತಮ್ಮ ಪ್ರಾಣಗಳನ್ನು ರಕ್ಷಿಸಿಕೊಳ್ಳುವುದೇ ಮುಖ್ಯವಾಗಿ ಬಡಪಾಯಿ ಮಕ್ಕಳನ್ನು ನೋಡುವವರೇ ಇಲ್ಲವಾಗಿತ್ತು. ಇದೇ ಸಮಯದಲ್ಲಿ ವಿದ್ಯುಚ್ಛಕ್ತಿ ಸರಬರಾಜುಗಾರರು ಟ್ರಾನ್ಸ್‌ ಫಾರಂಗಳಿಗೆ ನೀರು ನುಗ್ಗಿ ಶಾರ್ಟ್‌ ಆಗುವುದೆಂಬ ಭಯದಿಂದ ವಿದ್ಯುಚ್ಛಕ್ತಿ ಸರಬರಾಜು ನಿಲ್ಲಿಸಿದರು. ಎಲ್ಲೆಲ್ಲೂ ಗೊಂದಲದ ವಾತಾವರಣ. ಹಳಿಗಳ ಮೇಲೆ ನೀರು ಬಂದು ಮತ್ತು ಎರಡು ಸ್ಟೇಷನ್‌ ಗಳ ನಡುವೆ ಮಧ್ಯೆ ಮಧ್ಯೆ ಲೋಕಲ್‌ ಟ್ರೈನ್‌ ಸೇವೆಯನ್ನು ನಿಲ್ಲಿಸಿದರು. ರಸ್ತೆಗಳಲ್ಲಿ 4-6 ಅಡಿಗಳ ನೀರು ನಿಂತು ಬಸ್‌, ಟ್ಯಾಕ್ಸಿ, ಆಟೋರಿಕ್ಷಾ, ಮತ್ತಿತರೆ ವಾಹನಗಳ ಸಂಚಾರವೂ ಸ್ತಬ್ಧ. ಇನ್ನು ಕೆಲವು ಮಕ್ಕಳು ಟ್ರಾಫಿಕ್‌ ಜಾಮ್‌ ಆಗಿರುವ ರಸ್ತೆಗಳ ಮೂಲಕ 4-5 ಕಿಲೋಮೀಟರ್‌ ಗಳನ್ನು ನಡಿಗೆಯ ಮೂಲಕ ಕ್ರಮಿಸಿ ಮನೆಗಳನ್ನು ಸೇರಿದರು. ಇಂತಹ ಪ್ರಯತ್ನ ಮಾಡುವಾಗ ಕೆಲವು ಜಾಗಗಳಲ್ಲಿ ನೀರು ತುಂಬಿದ ಗುಂಡಿ, ಮೋರಿ, ಮ್ಯಾನ್‌ ಹೋಲ್‌ ಗಳು ಇರುವುದು ತಿಳಿಯದೇ ಅದರೊಳಗೆ ಬಿದ್ದು ಪ್ರಾಣ ಕಳೆದುಕೊಂಡ ಘಟನೆಗಳೂ ಇವೆ.

Traffic Jam !ಇನ್ನು ನನ್ನ ವಿಷಯ : ನನಗೆ ಮಧ್ಯಾಹ್ನ 3 ಘಂಟೆಗೆ ಈ ವಿಷಯ ಮತ್ತು ಲೋಕಲ್‌ ಟ್ರೈನ್‌ ಸೇವೆ ನಿಂತಿದೆಯೆಂದೂ ತಿಳಿಯಿತು. ಸ್ವಲ್ಪ ಕೆಲಸ ಜಾಸ್ತಿ ಇದ್ದದ್ದರಿಂದ ಮತ್ತು ಹೇಗೂ ಗಾಡಿಯಿಲ್ಲದಿರುವುದರಿಂದ ತಕ್ಷಣ ನಾನು ಕಛೇರಿಯನ್ನು ಬಿಡಲಿಲ್ಲ. 4 ಘಂಟೆಯ ವೇಳೆಗೆ ಮನೆಗೆ ಹೊರಡಲು ಚಚ್ಗೇಟ್‌ ರೈಲ್ವೇ ಸ್ಟೇಷನ್‌ಗೆ ಬಂದೆ. ಅಲ್ಲಿ ನೋಡಿದರೆ, ಕಾಲಿಡಲೂ ಜಾಗವಿಲ್ಲ. ಎಲ್ಲೆಲ್ಲಿ ನೋಡಿದರೂ ಜನಗಳು. ನಾಲ್ಕೂ ಟ್ರ್ಯಾಕ್‌ಗಳಲ್ಲಿ ಗಾಡಿಗಳು ನಿಂತಿವೆ. ಸಮಯ ಸಾರಣಿ ಸೂಚಕ ಖಾಲಿ ಪರದೆ ತೋರಿಸುತ್ತಿದೆ. ಆ ಗಾಡಿಗಳಲ್ಲಿ ಕುಳಿತಿರುವವರನ್ನು ವಿಚಾರಿಸಿದಾಗ ತಿಳಿದದ್ದು, ಆ ಗಾಡಿ 3 ಘಂಟೆಗೆ ಹೊರಡಬೇಕಿದ್ದು ಆ ಸಮಯದಿಂದ ಅವರುಗಳು ಅಲ್ಲೇ ಕುಳಿತಿದ್ದಾರೆ. ಅದು ಯಾವಾಗ ಹೋಗುವುದೋ ಅಲ್ಲಿಯವರೆಗೂ ಅಲ್ಲೇ ಕುಳಿತಿರುತ್ತಾರೆ. ರೈಲ್ವೇಯವರಿಂದ ಏನೊಂದೂ ಸುದ್ದಿ ಇಲ್ಲ. ಗಾಡಿಗಳು ಎಲ್ಲಿಯವರೆಗೆ ಯಾವಾಗ ಹೊರಡುವುದು, ಯಾತಕ್ಕಾಗಿ ನಿಂತಿವೆ ಎಂಬುದರ ಬಗ್ಗೆ ಏನೊಂದೂ ಸೂಚನೆಗಳಿಲ್ಲ.

ಸಂಜೆ 6 ರವರೆಗೂ ನಾನೂ ಮತ್ತು ನನ್ನ ಸ್ನೇಹಿತರು ಕಾದಿದ್ದು, ಇನ್ನು ಕಾದು ಪ್ರಯೋಜನವಿಲ್ಲವೆಂದು ಟ್ಯಾಕ್ಸಿಯಲ್ಲಿ ಹೋಗೋಣವೆಂದು ರಸ್ತೆ ಬದಿಗೆ ಹೊರಟೆವು. ಯಾವೊಂದು ಟ್ಯಾಕ್ಸಿಯವರೂ 5 ಕಿಲೊಮೀಟರ್‌ಗಳಿಗಿಂತ ಜಾಸ್ತಿ ದೂರಗಳಿಗೆ ಬರಲು ತಯಾರೇ ಇಲ್ಲ. ನಮ್ಮ ಧ್ಯೇಯವೆಲ್ಲಾ 36 ಕಿಲೋಮೀಟರ್‌ ದೂರದಲ್ಲಿರುವ ಗೋರೆಗಾಂವ್‌ ಸೇರುವುದು. ಆಗಲೇ ಕಂಡದ್ದು ಅಂಧೇರಿಗೆ ಹೊರಟಿದ್ದ ಒಂದು ಬಸ್ಸು. ಅದೂ ಪೂರ್ಣವಾಗಿ ತುಂಬಿತ್ತು. ಆದರೂ ಹೇಗೋ ಮಾಡಿ ಒಳ ನುಗ್ಗಿ ಟಿಕೆಟ್‌ ತೆಗೆದುಕೊಂಡದ್ದೂ ಆಯ್ತು. ನಂತರ ತಿಳಿದದ್ದು, ಆಮೆ ವೇಗದಲ್ಲಿ ವಾಹನಗಳು ತೆವಳುತ್ತಿವೆ ಅಂತ.

ಚರ್ಚ್‌ ಗೇಟ್‌ನಿಂದ ಒಂದು ಕಿಲೋ ಮೀಟರ್‌ ದೂರದಲ್ಲಿರುವ ಮರೀನ್‌ ಲೈನ್ಸ್‌ ತಲುಪಲು 2 ಘಂಟೆಗಳು ತೆಗೆದುಕೊಂಡವು. ನಮ್ಮೊಂದಿಗಿದ್ದವರೊಬ್ಬರು ನಮ್ಮ ಬ್ಯಾಂಕಿನಲ್ಲಿ ಸುರಕ್ಷಾ ಅಧಿಕಾರಿ, ಕ್ಯಾಪ್ಟನ್‌ ಸಿರೋಲಾ. ಅವರು ಹೇಳಿದರು, ಸದ್ಯಕ್ಕೆ ನಾವು ಬ್ಯಾಂಕಿಗೆ ಹೋಗೋಣ. ಅಲ್ಲಿಯೇ ಉಳಿಯೋಣ ಅಂತ. ಸರಿ ಹೇಗಿದ್ದರು ಬ್ಯಾಂಕು ಖಾಲಿಯಾಗಿರುತ್ತದೆ, ಸುರಕ್ಷಿತವಾದ ತಾಣ, ಮತ್ತು ಜೊತೆಗೆ ಸುರಕ್ಷಾ ಅಧಿಕಾರಿ ಇರುವುದರಿಂದ ನಮಗೆ ಏನೂ ತೊಂದರೆ ಆಗುವುದಿಲ್ಲ ಅಂತ ಹೊರಟೆವು. ಬ್ಯಾಂಕಿಗೆ ಹೋದಾಗ ತಿಳಿದದ್ದು - ನಮ್ಮ ತರಹ ಎಲ್ಲರೂ ವಾಪಸ್ಸು ಬಂದು ಅಲ್ಲೇ ಸೇರಿದ್ದಾರೆ ಅಂತ. ಮೇಲಧಿಕಾರಿಗಳ ಆದೇಶದಂತೆ ಎಲ್ಲರೂ ಅಲ್ಲೇ ಉಳಿಯಲು ಅನುಕೂಲ ಮಾಡಿದ್ದರು.

ರಾತ್ರಿ ಹತ್ತು ಘಂಟೆ ಹೊತ್ತಿಗೆ ಯಾರೋ ಹೇಳಿದರು - ಗೋರೆಗಾಂವಿನ ಕಡೆಗೆ ಒಂದು ಕಾರು ಹೊರಟಿದೆ, ಯಾರಾದರೂ ಹೋಗುವಂತಿದ್ದರೆ ಹೋಗಬಹುದು ಅಂತ. ಅದಾಗಲೇ ಟೆಲಿಫೋನ್‌ಗಳೆಲ್ಲಾ ಕೆಲಸ ಮಾಡುತ್ತಿರಲಿಲ್ಲ. ಮನೆಯ ಕಡೆ ಯೋಚನೆ, ಕಾಲೇಜಿಗೆಂದು ಹೋಗಿ ಇನ್ನೂ ಮನೆ ಸೇರದಿದ್ದ ಮಗಳ ಯೋಚನೆಗಳಿಂದ ತಕ್ಷಣ ಮನೆಗೆ ಹೋಗುವುದೇ ಸೂಕ್ತ ಎಂದು ನಾನು ಆ ಕಾರಿನಲ್ಲಿ ಮನೆ ಕಡೆಗೆ ಹೊರಟೆ. ಮೊದಲ 8 ಕಿಲೋಮೀಟರ್‌ಗಳು ಆರಾಮಿನ ಪ್ರಯಾಣ. ಪ್ರಭಾದೇವಿಯಲ್ಲಿರುವ ಸಿದ್ಧಿವಿನಾಯಕ ದೇವಸ್ಥಾನದ ಬಳಿ ಬಂದಾಗ ಟ್ರಾಫಿಕ್‌ ಪೂರ್ಣವಾಗಿ ಜಾಂ ಆಗಿತ್ತು. ಅಲ್ಲಿಂದ ವಾಹನಗಳ ತೆವಳುವಿಕೆ. ಮುಂದಿನ 7 ಕಿಲೋಮೀಟರ್‌ ಸವೆಸಿ ಬಾಂದ್ರಾ ತಲುಪಿದೆವು. ಆಗಿನ ವೇಳೆ ಬೆಳಗಿನ 6 ಘಂಟೆ. ರಸ್ತೆಯ ಅಕ್ಕ ಪಕ್ಕದಲ್ಲಿ ಕಂಡದ್ದು ಕಾರು ಮತ್ತಿತರೇ ವಾಹನಗಳ ಮೇಲೆ ಸುಸ್ತಾಗಿ ಒರಗಿರುವ ಮರಗಳು. ಹಾದಿಯಲ್ಲಿ ಎಲ್ಲೆಲ್ಲೂ ಸಮಾಜ ಸೇವಕರುಗಳು ಸರಬರಾಜು ಮಾಡುತ್ತಿದ್ದ ಚಹಾ ಮತ್ತು ಬಿಸ್ಕತ್ತುಗಳು.

15 ಕಿಲೋಮೀಟರ್‌ ಪ್ರಯಾಣಿಸಲು ನಾವು ತೆಗೆದುಕೊಂಡ ಸಮಯ 8 ಘಂಟೆಗಳು. ಅಲ್ಲಿ ವೆಸ್ಟರ್ನ್‌ ಎಕ್ಸ್‌ ಪ್ರೆಸ್‌ ಹೈವೇಯಲ್ಲಿ ಮುಂದಿನ 20 ಕಿಲೋಮೀಟರ್‌ ಗಳವರೆಗೆ ಸಂಪೂರ್ಣವಾಗಿ ವಾಹನಗಳು ತುಂಬಿ ನಿಂತಿದ್ದು ಆ ರಸ್ತೆಯನ್ನು ಮುಚ್ಚಿದ್ದರು. ಅಲ್ಲಿ ಕೆಲವು ವಾಹನಗಳಲ್ಲಿ ಇಂಧನ ಮುಗಿದು ಅಲ್ಲಲ್ಲೇ ಬಿಟ್ಟು ಹೋಗಿದ್ದರು. ಈ ಕಡೆ ಇದ್ದ ಸ್ವಾಮಿ ವಿವೇಕಾನಂದ ರಸ್ತೆ ಮತ್ತು ಲಿಂಕಿಂಗ್‌ ರಸ್ತೆಗಳಲ್ಲಿ 5-6 ಅಡಿ ಎತ್ತರಕ್ಕೆ ನೀರು ನಿಂತಿದ್ದು ರಸ್ತೆಗಳಲ್ಲಿ ವಾಹನಗಳು ಮುಳುಗಿಹೋಗಿ ಸಂಚಾರ ನಿಂತುಹೋಗಿತ್ತು. ನನ್ನೊಡನಿದ್ದವರು ಮತ್ತೆ ವಾಪಸ್ಸು ಬ್ಯಾಂಕಿಗೆ ಹೊರಡುವೆಂದರು. ನನ್ನ ಅನುಭವದ ಪ್ರಕಾರ ಮತ್ತೆ ವಾಪಸ್ಸು ಹೋಗುವುದು ಸೂಕ್ತವಿರಲಿಲ್ಲ. ನನ್ನ ಅನಿಸಿಕೆಯನ್ನು ಪರಿಗಣಿಸಲು ಇನ್ನಿತರರು ತಯಾರಿರಲಿಲ್ಲ. ನಾನೊಬ್ಬನೇ ಇಳಿದು ಹತ್ತಿರದ ಸ್ಟೇಷನ್ನಿಗೆ ಹೊರಟೆ. ಅಲ್ಲಿಯೂ ಗಾಡಿಗಳು ನಿಂತಿದ್ದವು. ಒಳಗೆ ಜನಗಳು ಕುಳಿತು, ನಿಂತು ನಿದ್ದೆ ಮಾಡುತ್ತಿದ್ದರು. ಪ್ಲಾಟ್‌ ಫಾರ್ಮಿನಲ್ಲೂ ಜನ ತುಂಬಿದ್ದರು. ಕೆಲವರು ಸ್ಟೇಷನ್‌ ಮಾಸ್ತರರೊಂದಿಗೆ ವಾಗ್ಯದ್ಧದಲ್ಲಿ ತೊಡಗಿದ್ದರು. ಆಗ ತಿಳಿದುಬಂದದ್ದು ಈ ಗಾಡಿಗಳು ಹಿಂದಿನ ದಿನದ ಮಧ್ಯಾಹ್ನ 2 ಘಂಟೆಯಿಂದ ಅಲ್ಲೇ ನಿಂತಿದ್ದವು. ಹಳಿಗಳಲ್ಲಿ ನೀರು ತುಂಬಿದೆ, ಸಿಗ್ನಲ್‌ ಕೆಲಸ ಮಾಡುತ್ತಿಲ್ಲ. ತುಂಬಾ ಜನಗಳು ಹಳಿಗಳ ಮೇಲೆ ನಡೆದು ಹೊರಟಿದ್ದರು.

ಒಂದೆಡೆ ಎಡಬಿಡದೆ ಸುರಿಯುತ್ತಿರುವ ಮಳೆ. ಸರಿ ಛತ್ರಿ ಹಿಡಿದು ನಾನೂ ಹಳಿಯ ಮೇಲೆ ನಡೆದು ಹೊರಟೆ. ರಸ್ತೆಯಲ್ಲಿ ನಡೆಯಲು ಭಯ. ಎಲ್ಲೆಂದೆರಲ್ಲಿ ನೀರು ತುಂಬಿದ ಹೊಂಡಗಳು, ತೆರೆದಿರುವ ಮ್ಯಾನ್‌ ಹೋಲ್‌ ಗಳು. ಇತರರು ಅಲ್ಲಿ ಇಲ್ಲಿ ಹೊಂಡ ಮತ್ತು ಮ್ಯಾನ್‌ ಹೋಲ್‌ಗಳಲ್ಲಿ ಬಿದ್ದು ನೀರಿನಲ್ಲಿ ಕೊಚ್ಚಿಹೋದವರ ವಿಷಯಗಳನ್ನು ಹೇಳುತ್ತಿದ್ದರು. ಹಳಿಯ ಮೇಲೆ ಹೊರಟಾಗ ತಿಳಿದದ್ದು, ಪ್ರತಿ ಸ್ಟೇಷನ್‌ಗಳಲ್ಲೂ (ಸರಿ ಸುಮಾರು ಒಂದು-ಎರಡು ಕಿಲೋಮೀಟರ್‌ಗೆ ಒಂದು ಸ್ಟೇಷನ್‌ಗಳಿವೆ), ಟ್ರೈನ್‌ಗಳು ನಿಂತಿವೆ, ಅದರಲ್ಲಿ ಜನ ಸಂದಣಿ. ಹಾಗೇ ಅಲ್ಲಿಂದ 14 ಕಿಲೋಮೀಟರ್‌ ದೂರದಲ್ಲಿರುವ ಗೋರೆಗಾಂವ್‌ ತಲುಪಲು 3 ಘಂಟೆಗಳು ತೆಗೆದುಕೊಂಡೆ. ಹಳಿಗಳಲ್ಲಿರುವ ಕಲ್ಲುಗಳನ್ನು ತುಳಿದು ಶೂ ಕಿತ್ತು ಹೋಗುವ ಹಾಗಾಗಿತ್ತು. ಇದೇ ತರಹ ಹೆಂಗಸರು, ಮಕ್ಕಳು ಕೂಡಾ ನಡೆದಿದ್ದರು. ಈ ಮಧ್ಯೆ ಕಂಡ ದೃಶ್ಯ ಅಂದ್ರೆ ಎಳೆ ಕಂದಮ್ಮಗಳನ್ನು ಛತ್ರಿಯ ಕೆಳಗೆ ಹಿಡಿದು ಹೊರಟ ತಾಯಮ್ಮಗಳು. ಕೆಲವು ಚಿಂಟು ಚಿಲ್ಟಾರಿಗಳು ಅಪ್ಪ ಅಮ್ಮನ ಕೈ ಹಿಡಿದು ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದುದು. ಹಿಂದಿನ ರಾತ್ರಿಯಿಂದ ಇವರೆಲ್ಲರಿಗೂ ಆಹಾರವಿಲ್ಲ, ನಿದ್ರೆಯಿಲ್ಲ. ನೋಡಿದಿರಾ ಮಾನವನನ್ನು ಹೇಗೆ ಪರೀಕ್ಷಿಸುತ್ತಿದೆ ನಿಸರ್ಗ.

ನಾಲೆಗಳನ್ನು ದಾಟುವಾಗ ಕಂಡದ್ದು ಎಲ್ಲಿಂದಲೋ ಕೊಚ್ಚಿ ಬಂದ ಲಾರಿ, ಟ್ಯಾಂಕರ್‌, ಸತ್ತು ಕೊಚ್ಚಿ ಬಂದ ಎಮ್ಮೆಗಳು, ಕೊಚ್ಚಿ ಬಂದ ಅಬ್ಬೇಪಾರಿ ಶವಗಳು. ಮನೆಗೆ ಬರಲು ಕಾಲುಗಳು ಬಾತು ಕೊಂಡಿದ್ದವು. ಕಾಲೆತ್ತಲು ನೋವಾಗುವುದು. ಎರಡು ದಿನ ಬ್ಯಾಂಕಿನ ಕಡೆ ಹೋಗಬಾರದೆಂದು ನಿರ್ಧರಿಸಿದೆ. ಅದಾಗಲೇ ಸುದ್ದಿ ಬಂದದ್ದು, ಸರಕಾರದವರೇ ಎರಡು ದಿನಗಳ ರಜೆ ಘೋಷಿಸಿದ್ದಾರೆ ಅಂತ. ಇಷ್ಟೆಲ್ಲಾ ಅನುಭವಿಸುವುದರೊಳಗೆ ಮನುಷ್ಯ ಮಾನಸಿಕ ಸಂತುಲ ಕಳೆದುಕೊಳ್ಳುವುದು ಸರ್ವೇ ಸಾಮಾನ್ಯ. ಆದರೆ ಒಂದು ಒಳ್ಳೆಯ ಸುಧಾರಣೆ ಎಂದರೆ, ಎಲ್ಲೆಲ್ಲೂ ಜನಗಳು ಇನ್ನಿತರರ ದು:ಖ ದುಮ್ಮಾನಗಳನ್ನು ಕೇಳಿ ಅದಕ್ಕೆ ಸಮಯಕ್ಕೆ ತಕ್ಕ ತಮಗೆ ತಿಳಿದಂತಹ ವಿಚಾರಗಳನ್ನು ವಿನಿಮಯಿಸಿಕೊಂಡದ್ದು. ಇದೇ ಅಲ್ಲವೇ ಇನ್ನೂ ಹೆಚ್ಚಿನ ದಿನಗಳು ಬಾಳಲು ಉತ್ತೇಜನಕಾರಿ?

ಮಹಿಳೆಯರು ಕೆಲಸಕ್ಕೆ ಹೋಗುವಾಗ ತಮ್ಮ ಎಳೆ ಕಂದಮ್ಮಗಳನ್ನು ಜೊತೆಗೆ ಕರೆದೊಯ್ದು ಮಕ್ಕಳ ಮನೆಗಳಲ್ಲಿ (ಕ್ರೆಷ್‌) ಬಿಟ್ಟು ಸಂಜೆ ಬರುವಾಗ ತಮ್ಮ ಜೊತೆ ಕರೆತರುವುದು ವಾಡಿಕೆ. ಅಂತಹ ಇಬ್ಬರು ಮಹಿಳೆಯರನ್ನು ನಾನು ನೋಡಿದ್ದು. ಒಂದು ದಿನ-ರಾತ್ರಿ ಹೊಟ್ಟೆಗೆ ಅನ್ನವಿಲ್ಲದೇ ಕಣ್ಣಿಗೆ ನಿದ್ರೆ ಇಲ್ಲದಾಗ್ಯೂ ಆ ಮಗು ತನ್ನಮ್ಮನನ್ನು ನೊಡಿದಾಗಲೆಲ್ಲ ಬೊಚ್ಚು ಬಾಯಿ ತೋರಿಸಿ ನಕ್ಕು ಕೈ ಕಾಲುಗಳ ಬಡಿಯುವುದು. ಅಮ್ಮ ಅದನ್ನು ಮುದ್ದಾಡುವುದು - ಕರುಳು ಕಲಕುವು ದೃಶ್ಯ.

ಈ ಮಧ್ಯೆ ರಸ್ತೆಯಲ್ಲಿ ವಾಹನಗಳು ಇದ್ದಾಗ ಟ್ರಾಫಿಕ್‌ ಪೋಲಿಸರ ನಾಪತ್ತೆ ಸರ್ವೇ ಸಾಮಾನ್ಯ. ರಸ್ತೆಯಲ್ಲಿ ಕೆಟ್ಟು ನಿಂತ ವಾಹನಗಳನ್ನು ಬದಿಗೆ ಸರಿಸಲೂ ಯಾರೂ ಕಂಡು ಬರುತ್ತಿಲ್ಲ. ಹಾಗಾಗಿ ವಾಹನ ಚಾಲಕರು ಅಲ್ಲಲ್ಲೇ ವಾಹನಗಳನ್ನು ಬಿಟ್ಟು ನಡೆದು ಹೊರಟಿದ್ದರು. ಎಲ್ಲಿದೆ ಡಿಸಾಸ್ಟರ್‌ ಮ್ಯಾನೇಜ್‌ಮೆಂಟ್‌?

ಇನ್ನೂ ಸಾರ್ವಜನಿಕರೇ ಅಕ್ಕಪಕ್ಕದಲ್ಲಿದ್ದವರಿಗೆ ತಿನ್ನಲು ತಮ್ಮ ಬಳಿ ಇದ್ದದ್ದನ್ನು ಕೊಟ್ಟಿದ್ದು. ಕೈಲಾದವರು ಕೈಲಾಗದವರಿಗೆ ಸಹಾಯ ಹಸ್ತ ಚಾಚಿದರು.

ಟೆಲಿಫೋನ್‌, ಕೇಬಲ್‌, ಇಂಟರ್‌ನೆಟ್‌ ಎಲ್ಲ ಸಂಪರ್ಕ ಸಾಧನಗಳೂ ಸ್ತಬ್ಧ. ಮೊಬೈಲ್‌ ಮಾತ್ರ ಕೆಲಸ ಮಾಡುತ್ತಿತ್ತು. ಏರ್‌ಟೆಲ್‌ ನವರು ಲೋಕಲ್‌ ಕಾಲ್‌ಗಳನ್ನು ಪುಕ್ಕಟೆ ಮಾಡಿದರು. ತರಕಾರಿ, ಹಾಲು, ವೃತ್ತಪತ್ರಿಕೆ ಮತ್ತಿತರೇ ದಿನಬಳಕೆಯ ಅನಿವಾರ್ಯ ವಸ್ತುಗಳು ಈ ದ್ವೀಪಕ್ಕೆ ಸರಬರಾಜಿಲ್ಲದೇ ಬಹಳ ತೊಂದರೆ.

ಇಷ್ಟಾದರೂ ಈ ಮುಂಬಯಿನ ಜನ ಇದೊಂದು ಕೆಟ್ಟ ಕನಸು ಅಂದುಕೊಂಡು ಮತ್ತೆ ಮಾರನೆ ದಿನದಿಂದ ತಮ್ಮ ದೈನಂದಿನ ಕಾರ್ಯಗಳಿಗೆ ಹೋಗಲು ತಯಾರು. ಇಂತಹ ಅನುಭವ ಇನ್ಯಾವುದಾದ್ರೂ ಊರಲ್ಲಿ ಕಾಣಲು ಯಾ ಕೇಳಲು ಸಿಗುವುದೇ? ಅದಕ್ಕೇ ಅಲ್ವೇ ನಾನು ಹೇಳೋದು ಮುಂಬಯಿಯಲ್ಲಿ ಸಲ್ಲುವವರು ಎಲ್ಲಿಯೂ ಸಲ್ಲುವರು.

ಆಹಾರ ಮತ್ತು ನೀರಿನ ಪೊಟ್ಟಣಗಳನ್ನು ಹೆಲಿಕಾಪ್ಟರ್‌ ಮೂಲಕ ಕೆಳಕ್ಕೆ ಬೀಳಿಸಿದಾಗ ಕೆಲ ಜನಗಳು ಇದು ಸಹಾಯ ಅನ್ನೋದೂ ಮರೆತು ಇನ್ನೂ ಹೆಲಿಕಾಪ್ಟರ್‌ ಅಲ್ಲಿರುವಾಗಲೇ ತಮ್ಮ ಜೀವದ ಕಡೆ ಲಕ್ಷ್ಯ ಕೊಡದೇ ಓಡಿ ಹೋಗಿ ಅವುಗಳನ್ನು ಹೆಕ್ಕಿ ಮಾರಾಟ ಮಾಡಲು ತೊಡಗಿದರು.

ನಿಸರ್ಗವೇ ದೇವರು. ಅದರ ಮುಂದೆ ಮೂರು ದಿನಗಳು ಹಾರಾಡಿ ಕುಣಿದಾಡಿ ಹೇಳ ಹೆಸರಿಲ್ಲದಂತೆ ಮಾಯವಾಗುವ ಮಾನವ ಎಂತಹ ಹುಲುಪ್ರಾಣಿ ಎನ್ನುವ ಸತ್ಯವನ್ನು, ನಿಸರ್ಗದ ಒಂದು ಭಾಗವಾದ ವರುಣ ಅಂದ್ರೆ ಮಳೆ ಒಂದೇ ಏಟಿನಲ್ಲಿ 1 ಕೋಟಿಗೂ ಮಿಗಿಲಾದ ಜನಗಳಿಗೆ ತಿಳಿಸಿದ್ದಾನೆ. ಇನ್ನಾದರೂ ನಿಸರ್ಗಕ್ಕೆ ವಿರುದ್ಧವಾಗಿ ನಡೆಯಲಾರೆವು ಎಂಬ ಸತ್ಯ ಅರಿವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X