• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೊಡ್ಡರಂಗೇಗೌಡ್ರುಗೊಂದು ಪತ್ರ

By Staff
|

An open letter to Doddarangegowda‘ಗೆಂಡೆತಿಮ’್ಮನಿಗೆ ಹಾಡು ಕಲಿಸಿದ, ಗೆಂಡೆತಿಮ್ಮನನ್ನು ಹಾಡಿ ಕುಣಿಸಿದ -ಶ್ರೀಮಾನ್‌, ದೊಡ್ಡರಂಗೇಗೌಡರಿಗೆ ನೆನಪು, ನಮಸ್ಕಾರ, ನಾವೆಲ್ಲಾ ಕ್ಷೇಮ. ನಿಮ್ಮ ಕ್ಷೇಮಕ್ಕೆ, ಗೆಂಡೆತಿಮ್ಮನ ಮೇಲಿರುವ ನಿಮ್ಮ ಮೋಹಕ್ಕೆ ಒಂದಿಷ್ಟು ವಿವರಣೆಯಾಂದಿಗೆ ನೀವು ಪತ್ರ ಬರೆದರೆ ಖುಷಿಯಾಗುತ್ತೆ.

‘ನಾನ್‌ ಸ್ವಲ್ಪ ಬ್ಯುಸಿ’ ಅನ್ನದೇ, ಆಮೇಲೆ ಅಂತ ಕೂಡ ಹೇಳದೆ ಇ-ಮೇಲ್‌ನಲ್ಲೇ ನೀವು ಉತ್ತರ ಹೇಳಿದ್ರೆ ಆ ಖುಷಿ ದುಪ್ಪಟ್ಟಾಗುತ್ತೆ. ಈ ಅಕ್ಷರಗಳ ರಂಗವಲ್ಲಿಯ ಮೋದಕ್ಕೆ ಮರುಳಾಗಿ ಒಂದು ಚೆಂದ್‌-ಚೆಂದದ ಪದ್ಯವನ್ನೇ ನೀವು ಬರೆದುಬಿಟ್ರೆ-‘ಗೆಂಡೆತಿಮ್ಮ’ ನ ಥರಾನೇ ಕುಣಿದಾಡುವ ಹುಕಿ ಬಂದುಬಿಡ್ತದೆ!

ಹೌದಲ್ವ ಗೌಡ್ರೆ, ಮೊನ್ನೆಯಷ್ಟೆ ನಿಮ್ಗೆ ಅರವತ್ತಾಯ್ತು. ಅದನ್ನ ಕೇಳಿದ ಮಂದಿ -ಅರರೆ, ನಿಜವಾ? ಗೌಡ್ರು ಈಗ ಕೂಡ- ‘ಸ್ವೀಟ್‌ ಸಿಕ್ಸ್‌ಟೀನ್‌’ ಅಂತಾರಲ್ಲ -ಅಷ್ಟೊಂದು ಮುದ್ದಾಗಿ ನಗ್ತಾರೆ. ಅಂಥೋರಿಗೆ ಇಷ್ಟು ಬೇಗ ಸಿಕ್ಸ್‌ಟಿ ಇಯರ್ಸಾ? ಅಂತಿದಾರೆ. ಕೆಲವರಂತೂ ಅರವತ್ತು ವರ್ಷ ಆದ್ಮೇಲೂ ದೊಡ್ಡ ರಂಗೇಗೌಡರು ಅಂದ್ರೆ-ಗೆಂಡೆತಿಮ್ಮನನ್ನ ಬಿಟ್ರೆಬೇರೇನೂ ನೆನಪಾಗಲ್ಲ ನೋಡಪ್ಪ ಅಂತಿದಾರೆ! ಹೀಗೆ, ಅವರಿವರ ಪರಿಪರಿಯ ಮಾತುಗಳ ಮಧ್ಯೆ ನಿಮಗೆ ಹ್ಯಾಪಿ ಬರ್ತ್‌ಡೇ ಹೇಳೋದೇ ಮರೆತುಹೋಗಿತ್ತು. ಇವತ್ತು ಬೆಳ್ಳಂ ಬೆಳಗೇ ಎಫ್‌.ಎಂ.ರೇಡಿಯೋದಲ್ಲಿ - ‘ಬೇಲಿ ಮ್ಯಾಗೆ ಬಣ್ಣ ಬಣ್ಣದ ಹೂವು ಅರಳ್ಯಾವೆ/ಆ ಹೂವಿನ ತುಂಬ ಸಣ್ಣ ಚಿಟ್ಟೆ ಕುಂತಾವೆ/ಬಾಗಿ ಬೀಗಿ ಅತ್ತ ಇತ್ತ ಬಾಳೆ ಬಳುಕ್ಯಾವೆ / ಆ ಬಾಳೆ ವನವೆ ನಕ್ಕು ಹಣ್ಣು ತಂದಾವೆ/ಕುಂತರೆ ಸೆಳೆವ-ಸಂತಸ ತರುವ /ಹೊಂಗೆ ಟೊಂಗೆ ತೂಗಿ ತೂಗಿ ಲಾಲಿ ಹಾಡ್ಯಾವೆ/ ತೇರಾ ಏರಿ ಅಂಬರದಾಗೆ....’ ಹಾಡು ಅಲೆಅಲೆಯಾಗಿ ತೇಲಿ ಬಂತಲ್ಲ. ಆ ಕ್ಷಣದಿಂದಲೇ ನಿಮ್ಮ ನೆನಪು ಗಾಢವಾಯಿತು. ಗೆಂಡೆತಿಮ್ಮನ ಡ್ಯಾನ್ಸು ಸಾವಿರದ ಐವತ್ತನೇ ಬಾರಿಗೆ ಇಷ್ಟವಾಯಿತು. ನಿಮಗೆ ಪತ್ರ ಬರೆಯುವ ಒಂದು ಆಸೆ, ಹ್ಯಾಪಿ ಬರ್ತ್‌ಡೇ ಅನ್ನುವ ಇನ್ನೊಂದಾಸೆ ಒಟ್ಟೊಟ್ಟಿಗೇ ಆಯಿತು. ಆ ಮೇಲೆ...

*

ಗೌಡ್ರೆ, ನೀವೇನೋ ಒಂದೇ ಮಾತಲ್ಲಿ -ನಾನು ಹಳ್ಳಿ ಹೈದ. ತುಮಕೂರು ಜಿಲ್ಲೆಯ ಕುರುಬರಹಳ್ಳೀಲಿ ಹುಟ್ಟಿದೆ. ಬೆಂಗಳೂರು ಯೂನಿವರ್ಸಿಟೀಲಿ ಡಿಗ್ರಿ ತಗೊಂಡೆ. ಆಮೇಲೆ ಎಂ.ಎ ಮಾಡ್ದೆ. ಪಿ.ಎಚ್‌.ಡಿನೂ ಮುಗಿಸ್ಥೆ. 1972ರಿಂದ 2004ರವರೆಗೂ ಮಾರ್ಕೆಟ್‌ನಲ್ಲಿರೋ ಎಸ್‌.ಎಲ್‌.ಎನ್‌ ಕಾಲೇಜಲ್ಲಿ ಉಪನ್ಯಾಸಕರಾಗಿ, ಅಧ್ಯಾಪಕನಾಗಿ, ಪ್ರಾಚಾರ್ಯನಾಗಿ ದುಡಿದೆ. ಈ ವೇಳೆಯಲ್ಲೇ ಪದ್ಯ ಬರೆದೆ. ಸಿನಿಮಾಕ್ಕೆ ಸಂಭಾಷಣೆ ಬರೆದೆ. ಹಾಡು ಬರೆದೆ. ಹಾಡು ಬರೀತಾ ಖುಷಿ ಪಟ್ಟೆ. ಹಿರಿಯರ ಹಾರೈಕೆ ನನ್ನನ್ನು ಕಾಪಾಡಿದೆ. ದೊಡ್ಡವರ ಆಶೀರ್ವಾದ ನನ್ನ ಹೆಗಲ ಮೇಲಿದೆ...’ ಅಂತೆಲ್ಲ ಹೇಳಿಕೊಳ್ತೀರಿ. ನಿಮ್ಮನ್ನ ಹತ್ತಿರದಿಂದ ಬಲ್ಲವರು, ಅದೇ ಎಸ್‌.ಎಲ್‌.ಎನ್‌. ಕಾಲೇಜಿನ ವಿದ್ಯಾರ್ಥಿಗಳು ‘ನಿಜ, ನಿಜ, ಅದೆಲ್ಲಾ ನಿಜ’ ಅಂದುಬಿಡ್ತಾರೆ. ಆದ್ರೆ ಗೌಡ್ರೆ-ದೊಡ್ಡರಂಗೇಗೌಡರ ಪರಿಚಯ ಹೇಳ್ತೀರಾ? ಎಂಬ ಸಣ್ಣ ಪ್ರಶ್ನೇನ ಗಾಂಧಿನಗರದ ಜನರಿಗೆ ಕೇಳಿದ್ರೆ ಅವರು ಹೇಳೋದು ಒಂದೇ ಮಾತು-‘ಗೆಂಡೆತಿಮ್ಮ’ನ ಹಾಡು ಬರೆದರವರೇ ಅವ್ರು. ಅವರ ಹಾಡಿಂದಲೇ‘ಗೆಂಡೆತಿಮ್ಮ’ ಹೆಸರಾದ. ‘ಗೆಂಡೆತಿಮ್ಮ’ನಿಂದ ಗೌಡ್ರು ಹೆಸರು ಪಡ್ಕೊಂಡು....,‘ನೆನ್ನೆಸ್ರು ದೊರಂಗೌ’ ಎಂದು ಶಾರ್ಟ್‌ ಅಂಡ್‌ ಸ್ವೀಟ್‌ ಆಗಿ ಹೇಳುವ ಡಿಯರ್‌ ಡಿಯರ್‌ ಗೌಡರೆ, ಇದನ್ನೆಲ್ಲ ನೀವೂ ಒಪ್ತೀರಿ. ಹೌದು ತಾನೆ? ಕೇಳಿ ಗೌಡ್ರೆ, ನೀವು ಎಸ್‌.ಎಲ್‌.ಎನ್‌.ಕಾಲೇಜಿನಿಂದ ಸೀದಾ ಗಾಂಧಿನಗರಕ್ಕೆ ನಡೆದು ಹೋದಿರಲ್ಲ -ಅವತ್ತು ಎಲ್ಲರೂ ಒಟ್ಟಾಗಿ ಹೇಳಿದ್ದರು; ‘ದೊಡ್ಡ ರಂಗೇಗೌಡರು ಹಚ್ಕೊಂಡ್ರು ಪೌಡ್ರು’. ಆ ಮಾತಲ್ಲಿ ತಮಾಷೆಯಿತ್ತು. ಗೇಲಿಯಿತ್ತು. ಅನುಕಂಪವಿತ್ತು. ಅನುಮಾನವಿತ್ತು. ಕೆಲವರಿಗಂತೂ ಅಸಮಾಧಾನವೂ ಇತ್ತು. ಗಾಂಧಿನಗರದ ಎಬಿಸಿಡಿ ಕೂಡ ಗೊತ್ತಿಲ್ಲದ ಈ ಗೌಡಪ್ಪ ಆದ್ಯಾವ ಮಹಾ ಹಾಡು ಬರೆಯಬಲ್ಲ ಎಂಬ ಉಡಾಫೆಯಿತ್ತು.

ಆದ್ರೆ ಗೌಡ್ರೇ, ನೀವು ಗೆಂಡೆತಿಮ್ಮ ಹಾಡು ಬರೆದ್ರಿ ನೋಡಿ -ಆ ಹಾಡಿಗೆ ನಾಡೆಂಬ ನಾಡೇ ಕುಣೀತು. ಅದರ ಹಿಂದೇನೇ ‘ನೀವು ನಿನ್ನ ರೂಪು ಎದೆಯ ಕಲಕಿ ಕಣ್ಣು ಮಿಂದಾಗ, ನಿನ್ನ ನೋಟ ಕೂಡಿದಾಗ ಕಂಡೆ ಅನುರಾಗ,’ ‘ಒಲುಮೆ ಸಿರಿಯಾ ಕಂಡು, ಬಯಕೆ ಸಿಹಿಯ ಉಂಡು, ಪ್ರೀತಿ ಮಾತಾಡಿದೆ, ಬಾಳು ರಂಗಾಗಿದೆ’, ‘ಕಂಡ ಕನಸು ನನಸಾಗಿ, ಇಂದು ಮನಸು ಹಗುರಾಗಿ, ಹಾರಾಡಿದೇ, ತೇಲಾಡಿದೆ, ರಾಗ ತಾಳ ಸೇರಿದಂಗೆ.... ’ಎಂದೆಲ್ಲ ಬರೆದಾಗ ನಿಮ್ಮನ್ನ ಟೀಕಿಸಿದ್ರಲ್ಲ -ಅದೇ ಜನ ನಿಮ್ಮ ಅಭಿಮಾನಿಗಳಾದ್ರು ನೀವು ಅದನ್ನೆಲ್ಲ ಕಂಡೂ ಕಾಣದವರ ಹಾಗೆ -ಆಡಬೇಕೊ ಕರಾಟೆ ಆಡಬೇಕು... ಸಿಂಹನಾದಕೆ, ಊ...ಹಾ...ಸಿಡಿಲ ತಾಳಕೆ ಸಿಡಿಯಬೇಕೊ... ಊ, ಹಾ...ಆಡಬೇಕು....ಅಂತ ಬರೆದಿರಲ್ಲ -ಆಗ ಒಂದಿಡೀ ತಲೆಮಾರು ಹಾಡು ಹೇಳ್ತ ಹೇಳ್ತಾನೇ ಕರಾಟೆ ಕಲಿತವರ ಥರಾ ಮೆರೀತು. ಆ ಮೇಲೆ ನೀವು-‘ನಮ್ಮೂರ ಮಂದಾಗ ಹೂವೆ’ ಹಾಡು ಬರೆದಿರಲ್ಲ ಗೌಡ್ರೆ- ಆ ಹಾಡನ್ನ ನಾವೆಲ್ಲ ಪ್ರೇಮಪತ್ರದಲ್ಲಿ ಬರೆದಿದ್ದೇನು, ಗ್ರೀಟಿಂಗ್‌ ಕಾರ್ಡಿನಲ್ಲಿ ಕೊರೆದಿದ್ದೇನು? ಸಮಾರಂಭಗಳಲ್ಲಿ ಹಾಡಿ ಮೆರೆದಿದ್ದೇನು? ಹಾಡ್ತ ಹಾಡ್ತನೇ ಅತ್ತದ್ದೇನು? ಉಫ್‌, ಅದನ್ನೆಲ್ಲ ಹೇಗೆ ವಿವರಿಸೋದು ಗೌಡ್ರೆ?

ಹೌದು ಗೌಡ್ರೆ, ನಿಮ್ಮನ್ನ ಮೆಚ್ಚಲಿಕ್ಕೆ ಒಂದಲ್ಲ, ಎರಡಲ್ಲ ನೂರೆಂಟು ಕಾರಣಗಳಿವೆ. ‘ಗಾಡ್‌ಫಾದರ್‌ ಬೆಂಬಲ ಇಲ್ಲದೇನೇ -ಚಿತ್ರರಂಗದಲ್ಲಿ ಉಳೀಬಹುದು, ಪ್ರತಿಭೆಯಿಂದಾನೇ ಗಾಂಧಿನಗರದಲ್ಲಿ ಮೆರೀಬಹುದು ಅಂತ; ಮಧುರ ಗೀತೆಗೆ ಭಾಷೆಯ ಹಂಗಿಲ್ಲ ಅಂತ ತೋರಿಸಿಕೊಟ್ಟವರು ನೀವು. ‘ತೇರಾ ಏರಿ ಅಂಬರದಾಗೆ’ ಹಾಡು ಮಹಾರಾಷ್ಟ್ರ ಸರಕಾರದ ಪಠ್ಯದಲ್ಲಿ ಪದ್ಯವಾಯ್ತಲ್ಲ -ಗೀತ ರಚನಕಾರನಾಗಿ ನೀವು ಹೀರೋ ಅನ್ನಲಿಕ್ಕೆ ಅದೊಂದೇ ಉದಾಹರಣೆ ಸಾಕು. ಗೌಡ್ರೆ, ಹೀಗೆಲ್ಲ ನಿಮ್ಮನ್ನ ಹೊಗಳ್ತಾ ಇರುವಾಗಲೇ ಕೇಳಲೇಬೇಕು ಅನ್ನಿಸಿದ ಒಂದಿಷ್ಟು ಪ್ರಶ್ನೆಗಳನ್ನ ಕೇಳಿ ಬಿಡ್ತೀನಿ.

ಕವಿ ಯಾವತ್ತೂ ಹೊಸತನಕ್ಕೆ ಹೊಸಪದಕ್ಕೆ, ಹೊಸ ಬೆರಗಿಗೆ ಕಾತರಿಸ್ತಾನೆ. ಯಾವುದೇ ಪ್ರಕಾರಕ್ಕೂ ಯಾರೂ ಕಟ್ಟು ಬೀಳಬಾರ್ದು ಅನ್ನೋ ಮಾತನ್ನು ನೀವೇ ದಿನಕ್ಕೆ ನಾಲ್ಕು ಬಾರಿ ಹೇಳ್ತೀರಿ. ಹಾಗಿರೋವಾಗ- ಗೆಂಡೆತಿಮ್ಮನ ಹಾಡು ಕ್ಲಿಕ್‌ ಆಯ್ತು ಅಂತ -ಆ ನಂತರವೂ ನೀವು ಅದೇ ಧಾಟಿಯ ಹೋಗೈತಿ. ಬಂದೈತೆ, ನಿಂತೈತ, ಅಂತೆಲ್ಲ ಬರೆದು ಹಾಡು ಸೃಷ್ಟಿಸಿಬಿಟ್ರಲ್ಲ ; ಬರೀ ಪ್ರಾಸದ ಪದ್ಯಗಳಲ್ಲೇ ಕಳೆದು ಹೋದಿರಲ್ಲ ; ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿದ್ದೂ ಚಿತ್ರರಂಗದ ಕುರಿತು ಅಲ್ಲಿ ಚರ್ಚೆ ನಡೆಸೋಕೆ ಟ್ರೆೃ ಮಾಡಲೇ ಇಲ್ವಲ್ಲ, ಇದೆಲ್ಲ ಸರಿಯಾ ಗೌಡ್ರೆ?

*

ಈಗಿನ್ನೂ ಬರ್ತಡೇ ಖುಷೀಲಿದೀರಾ ನೀವು -ಇಂಥ ಪ್ರಶ್ನೆ ಕೇಳಿದ್ರೆ ನಿಮಗೆ ಬೇಜಾರುಗುತ್ತೆ. ಹೋಗ್ಲಿಬಿಡಿ. ಅದನ್ನ ಮರ್ತೇ ಬಿಡಾಣ. ಈ ಪ್ರಶ್ನೆಗಳಿಗಾದ್ರೂ ಉತ್ತರ ಹೇಳಿ; ಒಂದು ಹಾಡು ಹುಟ್ಟಲಿಕ್ಕೆ ಸ್ಫೂರ್ತಿ ಬರ್ಬೇಕು ಅಂತಾರೆ. ‘ನೀವು ಥೇಟು ರೋಮಿಯೋನ ಥರಾ ‘ಏಸು ವರ್ಷ ಆಯ್ತೆ ನಿಂಗೆ ಬಂಗಾರಿ/ನಮ್ಮೂರ ಸಿಂಗಾರಿ’, ‘ಎಂದೂ ಕಾಣದ ಬೆಳಕ ಕಂಡೆ, ಒಂದು ನಲ್ಮೆ ಹೃದಯ ಕಂಡೆ/ನನ್ನಿಂದ ಬಾಳ ಮಧುರ ರಾಗ ಇಂದು ಹಾಡಿದೆ’ ಅಂತೆಲ್ಲ ಬರೆದಿರಲ್ಲ -ಈ ಹಾಡು ಬರೀವಾಗ ನಿಮ್ಮ ಕಣ್ಮುಂದೆ ಯಾವ ಬಿಂಬವಿತ್ತು ? ಈ ಹಾಡು ಕೇಳಿದ್ಮೇಲೆ -ನಿಮ್ಮ ಯಜಮಾನ್ರು-ರಾಜೇಶ್ವರಿ ಗೌಡ್ರು-ಹ್ಯಾಗೆ ರಿಯಾಕ್ಟ್‌ ಮಾಡಿದ್ರು? ತೀರಾ ಸಾಫ್ಟ್‌ ಫೆಲೋ ಅನ್ನಿಸಿಕೊಂಡಿರೋ ನೀವು -ಸಿಡಿಗುಂಡಿನಂಥ ಸಿಟ್ಟಿನ ‘ಹೃದಯ ಸಮುದ್ರ ಕಲಕಿ’ ಹಾಡು ಬರೆದಿಲ್ಲ’ ಈ ಮ್ಯಾಜಿಕ್ಕು ಹೇಗೆ ಸಾಧ್ಯವಾಯ್ತು ಗೌಡ್ರೆ?

ಒಂದೇ ಮಾತಲ್ಲಿ ಹೇಳಿಬಿಡೋದಾದ್ರೆ ಅಪರೂಪದ ಕವಿ, ಗೀತರಚನೆಕಾರರು ನೀವು. ಅಂಥ ನೀವು ಪದಗಳ ಮಧ್ಯೆ ಕಳೆದು ಹೋಗಬಾರ್ದು. ‘ಗೆಂಡೆತಿಮ್ಮ’ ನನ್ನ ಮೀರಿಸುವಂಥ ಹಾಡು ಮತ್ತೆ ಮತ್ತೆ ನಿಮ್ಮಿಂದ ಬರಲಿ. ಆಖುಷಿಗೆ ನಲಿವ, ಕುಣಿವ ಸರದಿ ನಾಡ ಜನರದ್ದಾಗಲಿ.

ತಡವಾಗಿದೆ. ಆದ್ರೂ ದೊಡ್ಡ ಖುಷಿಯಿಂದ ಹೇಳ್ತಿದೀನಿ. ಹ್ಯಾಪಿ ಬರ್ತ್‌ಡೇ ಟು ಯೂ.

-ಎ.ಆರ್‌. ಮಣಿಕಾಂತ್‌

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more