ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ಣಾಟಕಕ್ಕೆ ಬೇಕು ಕನ್ನಡ ಶಾಸನ

By Staff
|
Google Oneindia Kannada News
  • ಡಿ.ಎಸ್‌. ನಂಜುಂಡಯ್ಯ, ನಿವೃತ್ತ ಇಂಜಿನಿಯರ್‌, ಬೆಂಗಳೂರು
    [email protected]
Wanted : Kannada Shasana!!ಇತ್ತೀಚೆಗೆ ಬೆಂಗಳೂರು ನಗರ ಜಿಲ್ಲಾ ಪರಿಷತ್‌ ಬರಗೂರು ರಾಮಚಂದ್ರಪ್ಪನವರು ಬರೆದಿರುವ ‘ಕನ್ನಡದ ಕೆಲಸ’ ಎನ್ನುವ ಕೈಪಿಡಿಯನ್ನು ಬಿಡುಗಡೆ ಮಾಡಿರುವುದು ಕನ್ನಡದ ಬೆಳವಣಿಗೆಗೆ ಬೇಕಾದ ಒಂದು ಮುಖ್ಯ ಹೆಜ್ಜೆ.

ಇದೇ ದಿಟ್ಟಿನಲ್ಲಿ ನನ್ನ ಮನಸ್ಸಿನಲ್ಲೂ ಕೂಡ ಕರ್ಣಾಟಕ ಶಾಸನ ಅಥವಾ ಕನ್ನಡ ಶಾಸನವನ್ನು ರಚಿಸಬೇಕು ಎನ್ನುವ ಆಕಾಂಕ್ಷೆ ಬಂದಿತ್ತು. ನನ್ನ ಅನಿಸಿಕೆಯ ಪ್ರಕಾರ ಈಗ ಭಾರತದಲ್ಲಿ ಭಾರತ ಸಂವಿಧಾನದ ಚೌಕಟ್ಟಿನಲ್ಲಿ ಎಲ್ಲಾ ರಾಜ್ಯಗಳೂ ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ಭಾರತದ ಸುಭದ್ರತೆಯನ್ನು ನೋಡಿಕೊಂಡಂತಾಯಿತು. ಆದರೆ ಇದರಿಂದ ರಾಜ್ಯಗಳ ಹಾಗೂ ಆ ರಾಜ್ಯದ ಭಾಷೆಗಳ ಹಿತಾಸಕ್ತಿಗೆ ತೊಂದರೆಯಾಗಿದೆ. ಉದಾಹರಣೆಗೆ ಭಾರತೀಯರು ಭಾರತದಲ್ಲಿ ಎಲ್ಲಿ ಬೇಕಾದರೂ ವಾಸಿಸಬಹುದು ಮತ್ತು ಅವರ ಭಾಷೆಗಳಲ್ಲಿ ವ್ಯವಹಾರ ಮಾಡಬಹುದು ಎಂದಿದೆ.

ಇದರ ಪ್ರಕಾರ ಭಾರತದಲ್ಲಿರುವ ಎಲ್ಲಾ ನೂರು ಕೋಟಿ ಜನರೂ ಬೆಂಗಳೂರಿಗೇ ಅಥವಾ ಕರ್ಣಾಟಕಕ್ಕೆ ವಲಸೆ ಬರಲು ಇಷ್ಟ ಪಡುತ್ತಾರೆ. ಹೀಗೆ ಬೇರೇ ರಾಜ್ಯದ ಜನರೂ ಅಧಿಕ ಸಂಖ್ಯೆಯಲ್ಲಿ ಬೆಂಗಳೂರಿಗೆ ಅಥವಾ ನಮ್ಮ ರಾಜ್ಯದ ಇತರೇ ಭಾಗಗಳಿಗೆ ಬಂದರೆ ಅವರೆಲ್ಲರೂ ಅವರ ಭಾಷೆಯಲ್ಲೇ ವ್ಯವಹಾರ ಮಾಡಲೂ ಮತ್ತು ಓದಲೂ ಸಂವಿಧಾನದ ಪ್ರಕಾರ ಮಾಡಿದರೆ ಸ್ವಲ್ಪ ದಿವಸಗಳ ನಂತರ ಜನಗಣತಿ ನಡೆದಾಗ ಕನ್ನಡದವರ ಸಂಖ್ಯೆ ಕಮ್ಮಿಯಲ್ಲಿದ್ದು ಬೇರೇ ಭಾಷೆಯವರು ಜಾಸ್ತಿ ಸಂಖ್ಯೆಯಲ್ಲಿದ್ದರೆ ಆ ಭಾಗವನ್ನು ಕರ್ನಾಟಕದಿಂದ ಬೇರೆ ರಾಜ್ಯಕ್ಕೆ ವರ್ಗಾಯಿಸುವಂತೆ ಒತ್ತಡ ಹೇರುತ್ತಾರೆ.

ಹಿಂದೆಯೂ ಕೂಡ ನಾವು ಮಾಡಿರುವ ತಪ್ಪಿನಿಂದಾಗಿ ಈಗಾಗಲೇ ಉದಕಮಂಡಲ, ಕಾಸರಗೂಡು, ಹೊಸೂರು, ಸೊಲ್ಲಾಪುರ ಮುಂತಾದ ಭಾಗಗಳನ್ನು ಕಳೆದುಕೊಂಡಿದ್ದೇವೆ. ಇತ್ತೀಚೆಗೆ ಡಾ. ಚಿದಾನಂದ ಮೂರ್ತಿಯವರು ಪ್ರಕಟಿಸಿದ ಹಿಂದಿನ ಕರ್ಣಾಟಕ ರಾಜ್ಯದ ಭೂಪಟವನ್ನು ನೋಡಿದ್ದನ್ನು ಜ್ಞಾಪಿಸಿಕೊಳ್ಳಬಹುದು. ಆಗ ನಮ್ಮ ಕರ್ಣಾಟಕ ಗೋದಾವರಿಯವರೆಗೂ ಇತ್ತು. ಇನ್ನು ಮುಂದೆ ನಮ್ಮ ರಾಜ್ಯದ ಭಾಗಗಳನ್ನು ಮತ್ತೆ ಕಳೆದುಕೊಳ್ಳದಂತೆ ಮತ್ತು ಕನ್ನಡವನ್ನು ಉಳಿಸಿ, ಬೆಳೆಸುವುದಕ್ಕೆ ಭಾರತ ಸಂವಿಧಾನದಲ್ಲಿ ಕೆಲವು ಮಾರ್ಪಾಟನ್ನು ಮಾಡಿ ಎಲ್ಲಾ ಕ್ಷೇತ್ರಗಳಲ್ಲೂ ಶೇಕಡ ಎಂಬತ್ತರಷ್ಟು ಆ ರಾಜ್ಯದವರೇ ಇರಬೇಕು ಮತ್ತು ಬಾಕಿ ಶೇಕಡ ಇಪತ್ತರಲ್ಲಿ ಭಾರತದ ಇತರೇ ರಾಜ್ಯದವರೂ ಇರಬಹುದು ಎಂದು ಮಾಡಿದರೆ ಭಾರತ ಸಂವಿಧಾನವೂ ಉಳಿಯುತ್ತದೆ ಮತ್ತು ಆಯಾ ರಾಜ್ಯ ಮತ್ತು ಅದರ ಭಾಷೆಗಳೂ ಉಳಿಯುತ್ತವೆ ಮತ್ತು ಬೆಳೆಯುತ್ತವೆ. ಇದರಿಂದ ಎಲ್ಲಾ ರಾಜ್ಯಗಳಿಗೂ ಮುಖ್ಯವಾಗಿ ಕರ್ಣಾಟಕಕ್ಕೆ ಅನುಕೂಲವಾಗುತ್ತದೆ. ಆದರೆ ಕೇಂದ್ರ ಸರ್ಕಾರವು ಇದಕ್ಕೆ ಖಂಡಿತ ಗಮನ ಕೊಡುವುದಿಲ್ಲ. ಏಕೆಂದರೆ ಅವರಿಗೆ ಬೇಕಾಗಿರುವುದು ಹಿಂದಿ ಭಾಷೆಯೇ ಹೊರತು ಭಾರತದ ಬಾಕಿ ಭಾಷೆಗಳಲ್ಲ.

ಆದ್ದರಿಂದ ಕರ್ಣಾಟಕದ ಜನಗಳಾದ ನಾವು ನಮ್ಮ ಉಳಿವಿಗೆ ನಾವೇ ದಾರಿ ಕಂಡು ಕೊಳ್ಳಬೇಕು. ಇದಕ್ಕಾಗಿ ಭಾರತ ಸಂವಿಧಾನಕ್ಕೆ ಯಾವ ರೀತಿಯಲ್ಲೂ ಅಗೌರವ ತೋರಿಸದೆ ಮತ್ತು ಉಲ್ಲಂಘನೆ ಮಾಡದ ರೀತಿಯಲ್ಲಿ ನಮ್ಮದೇ ಆದ ಕನ್ನಡ ಶಾಸನವನ್ನು ರಚಿಸಬೇಕು. ಸರ್ಕಾರವೂ ಈ ಶಾಸನದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಮತ್ತು ಕನ್ನಡ ಜನರು ಮತ್ತು ಸಂಘ ಸಂಸ್ಥೆಗಳೂ, ಸರ್ಕಾರ ಈ ಶಾಸನವನ್ನು ಸರಿಯಾಗಿ ಬಳಸುವಂತೆ ನೋಡಿಕೊಳ್ಳಬೇಕು. ಈ ಕನ್ನಡ ಶಾಸನವು ಹೇಗಿರಬೇಕೆಂದರೆ, ಇದು ಸಾಮಾಜಿಕ ಕ್ಷೇತ್ರಕ್ಕೆ ಅನ್ವಯವಾಗಿದ್ದರೆ ಸಾಕು, ಆರ್ಥಿಕ ಹಾಗು ರಕ್ಷಣಾ ಕ್ಷೇತ್ರಗಳು ಇದರಲ್ಲಿ ಬೇಕಾಗುವುದಿಲ್ಲ. ಯಾಕೆಂದರೆ ಅದನ್ನು ಭಾರತ ಸರ್ಕಾರವು ನೋಡಿಕೊಳ್ಳುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ನಾವು ಸೇರಿಸಬೇಕಾದ ಭಾಗಗಳೆಂದರೆ, ರಾಜಕೀಯ, ಶಿಕ್ಷಣ, ಉದ್ಯೋಗ ಮತ್ತು ವಸತಿ.

ರಾಜಕೀಯ ವಿಭಾಗದಲ್ಲಿ ಪ್ರತಿಯೊಂದು ರಾಜಕೀಯ ಪಕ್ಷಗಳು ಉಮೇದುವಾರರನ್ನು ಗುರುತಿಸುವಾಗ ಅವರು ಕನ್ನಡನಾಡಿನಲ್ಲೇ ಹುಟ್ಟಿ ಕನ್ನಡ ಮಾತನಾಡಲು ಮತ್ತು ಬರೆಯಲು ಬರುವವರಾಗಿರಬೇಕು. ಹೀಗಿದ್ದಾಗ ವಿಧಾನ ಸೌಧದಲ್ಲಿ ಕನ್ನಡದ ಬಗ್ಗೆ ಮತ್ತು ಕರ್ಣಾಟಕದ ಬಗ್ಗೆ ಹಾಗೂ ಲೋಕಸಭೆಯಲ್ಲಿ ಕರ್ಣಾಟಕದ ಬಗ್ಗೆ ಪ್ರತಿಪಾದಿಸಲು ಆಸಕ್ತರಾಗಿರುತ್ತಾರೆ. ಯಾವ ಕಾರಣಕ್ಕೂ ಬೇರೆ ಭಾಷೆಯವರನ್ನು ವಿಧಾನ ಸಭೆ ಅಥವ ಲೋಕ ಸಭೆಗೆ ಆರಿಸಲು ಅವಕಾಶ ಮಾಡಿಕೊಡಬಾರದು. ಇದು ಕನ್ನಡ ಶಾಸನದ ಮೊದಲನೆಯ ಕೆಲಸ. ಇದನ್ನು ತಪ್ಪದೇ ಪಾಲಿಸಬೇಕಾದ್ದು ಸರ್ಕಾರದ ಕರ್ತವ್ಯ.

ಶಿಕ್ಷಣ ವಿಭಾಗದಲ್ಲಿ ಈಗಾಗಲೇ ಚರ್ಚೆ ನಡೆಯುತ್ತಿರುವಂತೆ ಮೊದಲನೇ ತರಗತಿಯಿಂದ ಕನ್ನಡ ಮಾಧ್ಯಮ ಎಂಟನೇ ತರಗತಿಯಿಂದ ಕನ್ನಡ ಅಥವ ಆಂಗ್ಲ ಮಾಧ್ಯಮಗಳಲ್ಲಿ ವ್ಯಾಸಂಗ ಮಾಡುವಂತಿರಬೇಕು. ಉದ್ಯೋಗ ಕ್ಷೇತ್ರದಲ್ಲಿ ಪ್ರತಿಯೊಂದು ವಾಣಿಜ್ಯ ಸಂಸ್ಥೆಗಳಲ್ಲೂ ಶೇಕಡ ಎಂಬತ್ತರಷ್ಟು ಕನ್ನಡದವರನ್ನೇ ತೆಗೆದುಕೊಳ್ಳಬೇಕು ಮತ್ತು ಉಳಿದ ಶೇಕಡ ಇಪತ್ತರಲ್ಲಿ ಬೇರೆಯವರು ಇರಬಹುದು. ಹೀಗೆ ಮಾಡುವುದರಿಂದ ಭಾರತ ಸಂವಿಧಾನವೂ ಉಲ್ಲಂಘನೆಯಾಗುವುದಿಲ್ಲ ಮತ್ತು ನಮ್ಮ ಜನಗಳಿಗೂ ನ್ಯಾಯ ದೊರಕಿಸಿದಂತಾಗುತ್ತದೆ. ಇದೇ ರೀತಿ ವಸತಿ ವಿಭಾಗದಲ್ಲಿ ನಿವೇಶನಗಳನ್ನು ಹಂಚುವಾಗ ಅಥವಾ ನೊಂದಣಿ ಮಾಡುವಾಗ ಶೇಕಡ ಎಂಬತ್ತರಷ್ಟನ್ನು ಕನ್ನಡದವರಿಗೇ ಕೊಡಬೇಕು ಎಂಬ ಶಾಸನವಿರಬೇಕು. ಹೀಗೆ ಕನ್ನಡ ಅಥವ ಕರ್ಣಾಟಕಕ್ಕೆ ಯಾವ ಕ್ಷೇತ್ರಗಳಲ್ಲಿ ತೊಂದರೆಯಾಗುತ್ತಿದೆಯೋ ಅವನ್ನೆಲ್ಲಾ ಕನ್ನಡ ಶಾಸನದಲ್ಲಿ ಅಳವಡಿಸಿ ಯಾವ ಮುಲಾಜೂ ಇಲ್ಲದೆ ಸರ್ಕಾರವು ಕಟ್ಟುನಿಟ್ಟಾಗಿ ಪರಿಪಾಲಿಸಬೇಕು.

ಈ ರೀತಿಯಲ್ಲಿ ನಮ್ಮದೇ ಆದ ಒಂದು ಕರ್ಣಾಟಕ ಅಥವ ಕನ್ನಡ ಶಾಸನದ ಆವಶ್ಯಕತೆ ಇದೆ ಎನ್ನಿಸುವುದಿಲ್ಲವೇ? ಹಾಗಿದ್ದರೆ ತಡವೇಕೆ. ಎಲ್ಲಾ ಸಂಘ ಸಂಸ್ಥೆಗಳೂ, ಕರ್ಣಾಟಕ ಜನತೆ ಸೇರಿ ಶುರು ಮಾಡಬಹುದಲ್ಲ?

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X