ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಯುಗಾಂತ’ ನಾಟಕ : ಒಂದು ವಿಶಿಷ್ಟ ಪ್ರಯೋಗ

By Staff
|
Google Oneindia Kannada News
  • ರಾಜಶೇಖರ ಕದಂಬ, ಮೈಸೂರು
ಮೈಸೂರಿನ ‘ ಸುರುಚಿ ರಂಗಮನೆ’ಯು ಸದಾ ಒಂದಿಲ್ಲೊಂದು ರಂಗಚಟುವಟಿಕೆಯನ್ನು ಹಮ್ಮಿಕೊಳ್ಳುತ್ತಾ, ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಸೃಷ್ಟಿಮಾಡಿಕೊಂಡಿದೆ. ತನ್ನ 112ನೆಯ ಕಾರ್ಯಕ್ರಮವಾಗಿ ಡಾ।। ಮ. ಸು. ಕೃಷ್ಣಮೂರ್ತಿಯವರ ‘ಯುಗಾಂತ’ ನಾಟಕವನ್ನು ದಿನಾಂಕ ಆಗಸ್ಟ್‌ 20 ಮತ್ತು 21, 2005ರಂದು ‘ ಸುರುಚಿ ರಂಗಮನೆ’ಯ ಸಭಾಂಗಣದಲ್ಲಿ ಪ್ರದರ್ಶಿಸಿತು. ರಾಮಣ್ಣ ಎಸ್‌ ಉಬ್ಬೂರು ಅವರು ಈ ನಾಟಕವನ್ನು ನಿರ್ದೇಶಿಸಿದ್ದರು.

ವೈಶಂಪಾಯನ ಕೊಳದಲ್ಲಿ ಅವಿತು ಕುಳಿತ ಸುಯೋಧನನನ್ನು ಪ್ರಚೋದಿಸಿ, ಯುದ್ಧಕ್ಕೆ ಆಹ್ವಾನ ನೀಡಿ ಭೀಮಸೇನನಿಂದ ಆತನ ತೊಡೆಯನ್ನು ಮುರಿಯುವಂತೆ ಮಾಡಿ, ಅವನ ಅವಸಾನಕ್ಕೆ ಶ್ರೀಕೃಷ್ಣ ನಾಂದಿ ಹಾಡುತ್ತಾನೆ. ಈ ವಿಷಯ ತಿಳಿದ ಧೃತರಾಷ್ಟ್ರ ಮತ್ತು ಗಾಂಧಾರಿಯರು ಒಂದು ಕಡೆ ಪಾಂಡವರನ್ನು ಶಪಿಸಿದರೆ, ಇನ್ನೊಂದೆಡೆ ತಮ್ಮನ್ನು ತಾವೇ ಹೀಯಾಳಿಸಿಕೊಳ್ಳುತ್ತಾರೆ. ಪುತ್ರ ವ್ಯಾಮೋಹದಲ್ಲಿ ತಾವು ತಪ್ಪನ್ನು ಎಸಗಿದನ್ನು ಸಮರ್ಥಿಸಿಕೊಳ್ಳುತ್ತಾರೆ. ನಾಟಕಕಾರರು ಈ ಕಥಾಭಾಗವನ್ನು ರಂಗಕ್ಕಳವಡಿಸುವಾಗ ತಮ್ಮ ಹರಿತವಾದ ಸಂಭಾಷಣೆಗಳಿಂದ ಗಟ್ಟಿತನ ಕೊಡುವಲ್ಲಿ ಯಶಸ್ವಿಯಾದರೂ ದೃಶ್ಯಗಳನ್ನು ಕಟ್ಟುವಲ್ಲಿ ವಿಫಲರಾಗಿದ್ದಾರೆ. ಆದರೂ ನಿರ್ದೇಶಕ ರಾಮಣ್ಣ ತಮ್ಮ ಚತುರತೆಯಿಂದ ನಾಟಕಕ್ಕೆ ಹೊಸ ಆಯಾಮ ನೀಡಿ, ಸಂಸ್ಕರಿಸಿ ಕೆಲವು ದೃಶ್ಯಗಳು ಪ್ರೇಕ್ಷರನ್ನು ಮೆಚ್ಚುಗೆಗೆ ಪಾತ್ರವಾಗುವಂತೆ ನೋಡಿಕೊಂಡಿದ್ದಾರೆ. ಪ್ರಥಮಾರ್ಧದಲ್ಲಿ ನಾಟಕ ಗಟ್ಟಿತನ ಉಳಿಸಿಕೊಂಡರೆ ಉತ್ತರಾರ್ಧದಲ್ಲಿ ನೀರಸವಾಗಿ ಸಾಗುತ್ತದೆ. ಇದರಲ್ಲಿ ಕೆಲವು ನಟರ ಅಭಿನಯ ವೈಫಲ್ಯವು ಕಾರಣವಾಗುತ್ತದೆ.

ತಮ್ಮ ಪಾಲಿಗೆ ಬಂದ ಪಾತ್ರಗಳಲ್ಲಿ ದುರ್ಯೋಧನನಾಗಿ ರಾಮಣ್ಣ ಎಸ್‌. ಉಬ್ಬೂರು, ಭೀಮನಾಗಿ ಪ್ರೊ। ಸಿ. ವಿ. ಶ್ರೀಧರಮೂರ್ತಿ, ಗಾಂಧಾರಿಯಾಗಿ ಎಸ್‌. ಕೆ. ಶಾಮಲಾ ಅವರುಗಳು ಸಮರ್ಥವಾಗಿ ಅಭಿನಯಿಸಿ ನಾಟಕದ ಯಶಸ್ಸಿನ ಪಾಲುದಾರರಾದರು. ಡಾ। ಎಚ್‌. ಕೆ. ರಾಮನಾಥ್‌(ಧೃತರಾಷ್ಟ್ರ), ಆರ್‌. ಎಸ್‌. ಗಿರಿ (ಶ್ಯೇನರಾಜ್‌), ಡಿ. ತಿಪ್ಪಣ್ಣ (ಶಾಕಿನಿ), ಸುಬ್ಬನರಸಿಂಹ (ಡಾಕಿನಿ), ಭದ್ರಪ್ಪ ಶಿ ಹೆನ್ಲಿ (ಕೃಷ್ಣ), ರವೀಂದ್ರಗೋರೆ (ಅರ್ಜುನ)- ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಧರ್ಮರಾಯನ ಪಾತ್ರದಲ್ಲಿ ರಂಗಮಿತ್ರ ಏಕತಾನತೆಯನ್ನು ಕಳೆದುಕೊಂಡಂತೆ ಕಾಣುತ್ತಿತ್ತು. ಉಳಿದ ಪಾತ್ರಗಳಲ್ಲಿ ಪಿ. ನಾಗಭೂಷಣ್‌(ಸಂಜಯ), ಎಂ. ಎನ್‌. ಶಶಿಧರ್‌ (ಭೀಷ್ಮ), ಎನ್‌. ನಾಗರಾಜ್‌ (ನಕುಲ), ಡಾ।। ಕೆ. ಸಂಜಯ್‌ ಪೈ (ಸಹದೇವ) ಅವರುಗಳು ಅಭಿನಯಿಸಿದ್ದರು.

ಸಂಗೀತವನ್ನು ಸಂಯೋಜಿಸಿದ್ದ ವೈ. ಎಂ. ಪುಟ್ಟಣ್ಣಯ್ಯ ಅವರು ಗಮನ ಸೆಳೆದರು. ಹಾಡುಗಳು ಕಂಪನಿ ನಾಟಕ ಶೈಲಿಯಲ್ಲಿದ್ದು ಕೇಳಲು ಮುದವಾಗಿತ್ತು. ಜೊತೆಗೆ ನುಡಿ ಎಸ್‌. ಮಹದೇವ(ಹಿಮ್ಮೇಳದ ಹಾಡುಗಾರಿಕೆ) ಮತ್ತು ಪಾಪಣ್ಣ(ತಬಲಾ) ಅವರ ಸಾಥಿಯು ಸಹಕರಿಸಿತ್ತು. ಸುಶೀಲೇಂದ್ರರಾವ್‌ ಅವರ ರಂಗವಿನ್ಯಾಸ, ಕೆ. ಜೆ. ನಾರಾಯಣಶೆಟ್ಟರ ಬೆಳಕು ವಿನ್ಯಾಸ, ಆಟೋ ವಿಶ್ವನಾಥ್‌ ಅವರ ರಂಗಸಜ್ಜಿಕೆ (ಸಹಾಯ: ಎನ್‌. ಧನಂಜಯ, ಎಸ್‌. ನಾಗರತ್ನ), ರತ್ನ ವಿಶ್ವನಾಥ್‌, ಸುಮನಾ ಡೊಂಗ್ರೆ ಅವರ ವಸ್ತ್ರವಿನ್ಯಾಸ- ನಾಟಕಕ್ಕೆ ಪೂರಕವಾಗಿತ್ತು. ಪ್ರಸಾಧನ (ಮೈಸೂರು ಆರ್‌. ಜಯರಾಂ, ಬಿ. ಎಂ. ರಾಮಚಂದ್ರ) ಅಚ್ಚುಕಟ್ಟಾಗಿತ್ತು. ಶ್ರೀಮತಿ ವಿಜಯಾ ಸಿಂಧುವಳ್ಳಿ, ಅವರ ಮಾರ್ಗದರ್ಶನ ಮತ್ತು ಶಿಕಾರಿಪುರ ಹರಿಹರೇಶ್ವರರವರ ಸಹಕಾರದೊಂದಿಗೆ ‘ಯುಗಾಂತ’ ನಾಟಕ ರಂಗಪ್ರದರ್ಶನವು ಕೆಲವು ನ್ಯೂನತೆಗಳೊಡನೆಯೂ ಒಂದು ವಿಶಿಷ್ಟ ಪ್ರಯೋಗವಾಗಿ ಮೂಡಿ ಬಂದಿತು.

ಪ್ರಾರಂಭದಲ್ಲಿ ಡಾ। ಎಚ್‌.ಕೆ. ರಾಮನಾಥ್‌ ಅವರು ಸಭಿಕರನ್ನು ಸ್ವಾಗತಿಸಿ, ‘ಸುರುಚಿ ರಂಗಮನೆ’ಯ ಚಟುವಟಿಕೆಗಳನ್ನು ವಿವರಿಸಿದರು. ಕೊನೆಯಲ್ಲಿ ಪ್ರೊ। ಸಿ. ವಿ. ಶ್ರೀಧರಮೂರ್ತಿಯವರು ಪಾತ್ರಪರಿಚಯ ಮಾಡಿಕೊಟ್ಟರು. ಶನಿವಾರದ ಪ್ರದರ್ಶನದಲ್ಲಿ ನಾಟಕಾಂತ್ಯದಲ್ಲಿ ನಿರ್ದೇಶಕ ರಾಮಣ್ಣ, ನಾಟಕಕಾರ ಡಾ। ಕೃಷ್ಣಮೂರ್ತಿ ಮತ್ತು ಶ್ರೀಮತಿ ವಿಜಯಾ ಸಿಂಧುವಳ್ಳಿ- ಅವರುಗಳನ್ನು ಸನ್ಮಾನಿಸಲಾಯಿತು. ಭಾಗವಹಿಸಿದ ಕಲಾವಿದರಿಗೆ ಮತ್ತು ತಾಂತ್ರಿಕವರ್ಗದವರಿಗೆ ಉಡುಗೊರೆಗಳನ್ನಿತ್ತು ಸನ್ಮಾನಿಸುವುದರ ಜೊತೆಗೆ, ಎರಡು ದಿನವೂ ನಾಟಕಪ್ರದರ್ಶನದ ಕೊನೆಯಲ್ಲಿ, ಹರಿಹರೇಶ್ವರ ಅವರು ನಾಟಕ ನೋಡಲು ಬಂದಿದ್ದ, ತುಂಬಿದ್ದ ರಂಗಮಂದಿರದ, ಪ್ರತಿಯಾಬ್ಬ ಪ್ರೇಕ್ಷಕರಿಗೂ ಒಂದೊಂದು ಕನ್ನಡ ಪುಸ್ತಕವನ್ನು ಕೊಟ್ಟು ನಂತರ ಎಲ್ಲರನ್ನೂ ಬೀಳ್ಕೊಟ್ಟರು.


ಪೂರಕ ಓದಿಗೆ-
ಸಾಹಿತ್ಯ ಕೃಷಿಕ ಡಾ।। ಮ. ಸು. ಕೃಷ್ಣಮೂರ್ತಿ
ಮೈಸೂರಿನ ಸುರುಚಿ ರಂಗಮನೆಯಲ್ಲಿ ‘ಯುಗಾಂತ’ !


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X