• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಸ್ತೆ ಬದಿಯವರ ಹಾಡು-ಪಾಡು!!!

By Staff
|
 • Gowri Srinivas.ಗೌರಿ ಶ್ರೀನಿವಾಸ್‌, ಮುಂಬಯಿ
 • ಊರು ಎಂದ ಮೇಲೆ ಹೊಲಗೇರಿ ಇರಲೇಬೇಕು ಎನ್ನುವುದು ನಾಣ್ನುಡಿ(ನಾಡು ನುಡಿ). ಅಂದಹಾಗೇ ಹೊಲಗೇರಿ ಎನ್ನುವುದಕ್ಕೆ ವಿಪರೀತದ ಅರ್ಥ ಸೃಷ್ಟಿಸುವ ಅವಶ್ಯಕತೆ ಇಲ್ಲ. ಹೊಲಸು ಇರುವ ಕೇರಿ ಅಂದ್ರೆ ಗಲೀಜು ಇರುವ ಸ್ಥಳ ಅಥವಾ ಪ್ರದೇಶ.

  ಈ ಮುಂಚೆ ಹೊಲಗೇರಿ ಅನ್ನುವುದು ಒಂದು ಊರಿನ ಸಣ್ಣ ಪ್ರದೇಶ ಮಾತ್ರವಾಗಿತ್ತು. ಅಲ್ಲಿ ಮನೆ ಮಠ ಇಲ್ಲದ ಕಡು ಬಡವರು, ಎರಡು ಹೊತ್ತಿನ ಊಟಕ್ಕೂ ಗತಿ ಇಲ್ಲದವರು ಇರುತ್ತಿದ್ದರು. ಬಟ್ಟೆ ಒಗೆಯುವುದು, ಸ್ನಾನ ಮಾಡುವುದು, ಮಲಮೂತ್ರ ಇತ್ಯಾದಿ ಎಲ್ಲವುಗಳನ್ನೂ ಅಲ್ಲಿಯೇ ಮಾಡಿಕೊಂಡು ಅಲ್ಲಿಯೇ ವಾಸಮಾಡುತ್ತಿದ್ದರು. ಇದರಿಂದಾಗಿ ಆ ಪ್ರದೇಶದಲ್ಲಿ ಗಲೀಜು ಇರುತ್ತಿತ್ತು. ಆದರೆ ಈಗ ಆ ಸ್ಥಳ ಒಂದು ಪ್ರದೇಶಕ್ಕೆ ಸೀಮಿತವಾಗಿರದೇ ಇಡೀ ಊರಿಗೆ ಊರೇ ಹೊಲಗೇರಿ ಕೊಳೆಗೇರಿ ಆಗ್ತಿದೆ. ಎಲ್ಲೆಲ್ಲಿಯೂ ಬೀದಿ ಬದಿ ವಾಸಿಗಳ ಸಂಖ್ಯೆ ಹೆಚ್ಚುತ್ತಿದೆ.

  ಎಷ್ಟೇ ಕ್ಷಾಮ, ಪ್ರಳಯ ಮತ್ತಿತರೇ ನೈಸರ್ಗಿಕ ಪ್ರಕೋಪಗಳು ಆಗುತ್ತಿದ್ದರೂ ಇವರುಗಳ ಸಾವು ಜಾಸ್ತಿ ಆಗುತ್ತಿದ್ದರೂ ಮತ್ತೆ ಮತ್ತೆ ಇವರ ಸಂಖ್ಯೆ ಹೆಚ್ಚಾಗುತ್ತಿದೆ. ಇವರು ಜೀವನಕ್ಕೆ ಎಷ್ಟೇ ಕಷ್ಟಪಟ್ಟರೂ ಜೀವನ ನಡೆಸುವುದು ದುಸ್ತರವಾಗುತ್ತಿದೆ. ಹಾಗೇ ಆಚೀಚೆಯ ಆಕರ್ಷಣೆಯೂ ಇವರುಗಳನ್ನು ಸೆಳೆಯುತ್ತಿದೆ. ಇದರಿಂದಾಗಿ ಕಳ್ಳತನಗಳು, ದರೋಡೆಗಳು, ಕೊಲೆ ಸುಲಿಗೆ, ಅತ್ಯಾಚಾರ, ಇತ್ಯಾದಿ ಸಮಾಜ ಕಂಟಕಗಳು ಜಾಸ್ತಿಯಾಗುತ್ತಿವೆ. ಇದಕ್ಕೆ ಕಾರಣವೇನಿರಬಹುದು?

  ಇದಕ್ಕೆ ಮುಖ್ಯವಾದ ಕಾರಣ ಜನಸಂಖ್ಯಾ ಸ್ಫೋಟ. ಇದರೊಡನೆ ಸೇರಿದ ಕಾರಣಗಳೆಂದರೆ ಅವಿದ್ಯಾವಂತಿಕೆ, ಬಡತನ, ನಿರುದ್ಯೋಗ, ಆಸ್ತಿ ವಿತರಣೆಯ ಅಸಮತೋಲನ, ಹಳ್ಳಿಗಳಿಂದ ನಗರಗಳಿಗೆ ವಲಸೆ, ಮುಂತಾದ ಇನ್ನೂ ಹತ್ತು ಹಲವಾರು ಸಾಮಾಜಿಕ ಸಮಸ್ಯೆಗಳು. ಇದೆಲ್ಲ ಒಂದಕ್ಕೊಂದು ಸಂಬಂಧಿಸಿದವು. ಒಂದನ್ನು ಸರಿಪಡಿಸಿದರೆ ಮಿಕ್ಕೆಲ್ಲವೂ ಸರಿ ಹೋಗುವುದು. ಒಂದು ಸರಿಪಡಿಸದಿದ್ದರೂ ಮಿಕ್ಕೆಲ್ಲ ಉಲ್ಬಣಗೊಳ್ಳುವುವು. ಈ ಸಮಸ್ಯೆ ವಿಷವರ್ತುಲವಿದ್ದಂತೆ.

  ಸರ್ಕಾರವು ಮೊದಲಿಗೆ ಎಲ್ಲರಿಗೂ ಕಡ್ಡಾಯ ಶಿಕ್ಷಣ ಕೊಟ್ಟರೆ ಮಿಕ್ಕೆಲ್ಲ ಸಮಸ್ಯೆಗಳೂ ಕಡಿಮೆಯಾಗುವುದು. ಅದಕ್ಕೆ ಬೇಕಾದ ಮೂಲ ಸವಲತ್ತುಗಳನ್ನು ನೀಡಬೇಕು. ಉಚಿತ ಶಾಲೆಗಳು, ಅವರ ಕಾಲ ಮೇಲೆ ಸರಿಯಾಗಿ ನಿಲ್ಲುವವರೆಗೂ ಸಂಸಾರ ಹೊರೆಯಲು ಧನ ಸಹಾಯ, ಕೆಲಸ ಮಾಡಲು ಅವಕಾಶ ಮತ್ತಿತರೇ ಸವಲತ್ತುಗಳನ್ನು ಒದಗಿಸಬೇಕು. ಅದರಲ್ಲೂ ಶಿಕ್ಷಣವನ್ನು ಹೆಚ್ಚಿನದಾಗಿ ಮಹಿಳೆಯರಿಗೆ ನೀಡಿದರೆ ಮಹಿಳೆಯರು ಶಿಕ್ಷಣದ ಮಹತ್ವವನ್ನರಿತು ಮುಂದಿನ ಪೀಳಿಗೆಯ ಮಕ್ಕಳನ್ನೂ ಶಿಕ್ಷಿತರನ್ನಾಗಿ ಮಾಡುವರು. ಶಿಕ್ಷಿತರಾದವರಿಗೆ ಉದ್ಯೋಗ ದೊರೆಯಲು ಕಷ್ಟವಾಗುವುದಿಲ್ಲ. ಆದರೆ ಓದಿಗೆ ತಕ್ಕನಾದ ಕೆಲಸಕ್ಕಾಗಿ ಕಾಯುವ ಬದಲು ಸಿಕ್ಕದ್ದರಲ್ಲೇ ತೃಪ್ತಿಪಟ್ಟುಕೊಳ್ಳುವಂತೆ ತಿಳಿಹೇಳಬೇಕು. ಹಳ್ಳಿಗಳ ಅಭಿವೃದ್ಧಿಯ ಕಡೆ ಗಮನ ಹರಿಸಿ ಸ್ವಯಂ ಉದ್ಯೋಗ, ಸಣ್ಣ ಕೈಗಾರಿಕೆಗಳ ಪ್ರಾರಂಭದ ಕಡೆಗೆ ಗಮನವೀಯಬೇಕು. ಸದ್ಯಕ್ಕೆ ಇದೆಲ್ಲವೂ ದಾಖಲೆಗಳಲ್ಲಿ ಇವೆ. ಆದರೆ ನಿಜಕ್ಕೂ ಇದು ತಲುಪಬೇಕಾದ ಜನಗಳಿಗೆ ತಲುಪುತ್ತಿಲ್ಲ. ಅಲ್ಲೂ ಅವ್ಯವಹಾರ ರಾರಾಜಿಸುತ್ತಿದೆ.

  ಇವರುಗಳ ಒಳಿತಿಗಾಗಿ ಇನ್ನೂ ಒಂದು ಮೂಲ ಭೂತ ಸಮಸ್ಯೆಯ ನಿವಾರಣೆಯ ಅಗತ್ಯವಿದೆ. ಅದೇನೆಂದರೆ ಸಣ್ಣ ಸಂಸಾರದ ಅಗತ್ಯತೆ ಅಥವಾ ಹೆಚ್ಚಿನ ಮಕ್ಕಳನ್ನು ಮಾಡಿಕೊಳ್ಳದಿರುವುದು. ಸಣ್ಣ ಸಂಸಾರದ ಅನುಕೂಲತತೆಯ ಬಗ್ಗೆ ಇವರಿಗೆ ಹೆಚ್ಚಿನದಾಗಿ ತಿಳಿದಿರುವುದಿಲ್ಲ. ದುಡಿಯಲು ಹೆಚ್ಚಿನ ಜನ ಇರಲಿ ಎನ್ನುವ ಕಾರಣದಿಂದ ಮತ್ತು ಸುಲಭದ ಮನರಂಜನೆಗಾಗಿ ಹೆಚ್ಚಿನ ಮಕ್ಕಳನ್ನು ಮಾಡಿಕೊಳ್ಳುವರು. ಈ ಮಕ್ಕಳು ದುಡಿಯುವ ವಯಸ್ಸ್ಸಿಗೆ ಬರಲು ಎಷ್ಟು ಸಮಯ ಆಗುವುದು, ಅಲ್ಲಿಯವರೆವಿಗೆ ಅವರು ತಮ್ಮ ಹೊರೆಯಾಗುವರು, ಬಡತನ ಇನ್ನೂ ಹೆಚ್ಚುವುದು ಎಂಬುದರ ಕಡೆ ಯೋಚಿಸುವುದೇ ಇಲ್ಲ. ಇದನ್ನು ಅವರುಗಳಿಗೆ ಮನದಟ್ಟು ಮಾಡಿಕೊಡಬೇಕು. ಚಿಕ್ಕ ಸಂಸಾರವಾದರೆ ಅವರನ್ನು ಸಾಕಲು ಹೇಗೆ ಒಳಿತಾಗುವುದು, ಮುಂದೆ ಅವರು ಹೆಚ್ಚಿನದಾಗಿ ದುಡಿಯಲು ಸಶಕ್ತರಾಗುವರು ಎಂಬುದನ್ನೂ ತಿಳಿ ಹೇಳಬೇಕು. ಇದಕ್ಕಾಗಿ ಸರ್ಕಾರದವರು ಚಲನಚಿತ್ರಗಳ ಮೂಲಕ ಅವರುಗಳಿಗೆ ತಿಳಿಸಿ ಮನದಟ್ಟು ಮಾಡಿಕೊಡಬೇಕು. ಕುಟುಂಬ ಯೋಜನೆಯ ಮಹತ್ವದ ಬಗ್ಗೆ ಸುಮಾರು ಕಾಲದಿಂದ ಸರ್ಕಾರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಆದರೂ ಬಯಸಿದ ಫಲ ಇನ್ನೂ ಸಿಗದಿರುವುದರಿಂದ ಇದರ ಬಗ್ಗೆ ಸರ್ಕಾರೇತರ ಸಂಸ್ಥೆಗಳೂ ಕೆಲಸ ಮಾಡುವುದರ ಅವಶ್ಯಕತೆ ಇದೆ. ಸರ್ಕಾರವೂ ತನ್ನ ಕಾರ್ಯವೈಖರಿಯನ್ನು ಸ್ವಲ್ಪ ಬದಲಾಯಿಸಿಕೊಂಡು, ಆವಶ್ಯವಿದ್ದರೆ ಬಲವಂತವೂ ಮಾಡಬೇಕಾಗುತ್ತದೆ. ಇದರಿಂದ ಸಮಾಜಕ್ಕೆ ಹೆಚ್ಚಿನ ಒಳಿತಾಗುವುದು.

  ಇವರುಗಳು ನಮ್ಮ ರಾಜಕಾರಣಿಗಳಿಗೆ ಬಹಳ ಬೇಕಾದವರು. ಇವರ ಉದ್ಧಾರವಾದರೆ ರಾಜಕಾರಣಿಗಳಿಗೆ ಕೈ ಮುರಿದಂತೆ. ಇರಲು ನೆಲೆ ಇಲ್ಲದಿದ್ದರೂ ಮತದಾನದ ಪಟ್ಟಿಯಲ್ಲಿ ಮಾತ್ರ ಇವರುಗಳ ಹೆಸರು ಇದ್ದೇ ಇರತ್ತೆ. ಚುನಾವಣೆ ಬಂದರೆ ಇವರುಗಳಿಗೆ ಹಬ್ಬದ ಸಂಭ್ರಮ. ಆಗ ಇವರಿಂದ ಸಿಗುವ ಸುಲಭದ ಮತಕ್ಕಾಗಿ ರಾಜಕಾರಣಿಗಳು ಹಣ ಕೊಡುವರು. ಆ ತೃಣ ಮಾತ್ರದ ಆಸೆಗೆ ಇವರು ಬಲಿಯಾಗುವರು. ಇವರೇನಾದರೂ ವಿದ್ಯಾವಂತರಾಗಿ, ಸುಶಿಕ್ಷಿತರಾಗಿ ಉತ್ತಮ ಜೀವನ ನಡೆಸುವ ಪರಿ ತಿಳಿದು ಆ ಸ್ಥಾನದಿಂದ ಮೇಲೆ ಬಂದರೆ, ರಾಜಕಾರಣಿಗಳ ದುರ್ನಡತೆಗಳು ಗೊತ್ತಾಗುವುದು ಹಾಗೂ ಮುಂದೆ ಅವರುಗಳಿಗೆ ಮತ ನೀಡಲಾರರು. ಬಹುಶ: ಅದಕ್ಕೇ ಇವರು ಮೇಲೆ ಬರದಂತೆ ಹುನ್ನಾರ ನಡೆಸಿರಬಹುದೇ? ಇಷ್ಟೇ ಅಲ್ಲ ಮಧ್ಯವರ್ತಿಗಳು, ಏಜೆಂಟರು ಎಂಬ ಹೆಸರಿನಿಂದ ಬರುವ ಮೋಸಗಾರರು ಇವರುಗಳ ಹೆಸರಿನಲ್ಲಿ ಬಡಜನಗಳಿಗೆ ಸರ್ಕಾರ ನೀಡುವ ಸಾಲದ ಯೋಜನೆಗಳಿಗೆ ಇವರಿಂದ ಅರ್ಜಿ ಹಾಕಿಸಿ, ಅವರ ಹೆಬ್ಬೆಟ್ಟನ್ನು ಗುರುತಿಸಿ ನಂತರ ಇವರ ಜೇಬಿಗೆ ಹತ್ತೋ ಇಪ್ಪತ್ತೋ ತಳ್ಳಿ ಇವರನ್ನು ದೂರವಿರಿಸುವರು. ಇವರಿಗೆ ಕುಡಿತಕ್ಕೆ ಹಣ ಸಿಕ್ಕರೆ ಸಾಕಷ್ಟೆ. ಎಷ್ಟು ಹಣ ಆ ದಲ್ಲಾಳಿಯ ಕೈ ಸೇರಿತು ಎಂಬುದೂ ಗೊತ್ತಾಗುವುದಿಲ್ಲ. ಹಾಗೇನಾದರು ಗೊತ್ತಾಗಿ ಕೇಳಿದರೆ ಇವರನ್ನು ಪ್ರತ್ಯೇಕಿಸಿ ಬಾಯಿ ಮುಚ್ಚಿಸುವರು. ಅವರ ಕೊಲೆಯಾದರೂ ಹೆಚ್ಚೇನಿಲ್ಲ.

  ಎಲ್ಲ ಮುಂದುವರಿಯುತ್ತಿರುವ ದೇಶಗಳಲ್ಲೂ ಇದೇ ಪರಿಸ್ಥಿತಿ. ಇತ್ತೀಚಿನ ಮಾನವ ಸಮೃದ್ಧಿ ಸೂಚ್ಯಂಕದ ಪ್ರಕಾರ ಭಾರತದ ಸ್ಥಿತಿ ಮೊದಲಿಗಿಂತ ಹೆಚ್ಚಿನದಾಗೇನೂ ಉತ್ತಮವಾಗಿಲ್ಲ. ದೇಶದ ಅಭಿವೃದ್ಧಿ ಸೂಚ್ಯಂಕಗಳಾದ ಹಣದುಬ್ಬರದ ಇಳಿತ, ಶೇರು ಮಾರುಕಟ್ಟೆಯ ಸೂಚ್ಯಂಕದ ಏರಿಕೆ, ದೇಶದ ವಿದೇಶೀ ವಿನಿಮಯದ ಹೆಚ್ಚುವರಿ ಮತ್ತಿತರೇ ಅಂಶಗಳು ಉತ್ತಮವಾಗುತ್ತಿದ್ದರೂ ಬಡಜನರ ಹೆಚ್ಚುತ್ತಿರುವ ಸಂಖ್ಯೆಯಿಂದಾಗಿ ಇವೆಲ್ಲವುಗಳೂ ಮಸುಕಾಗುತ್ತಿವೆ. ಸಂಯುಕ್ತ ದೇಶಗಳ ಮಾನವ ಅಭಿವೃದ್ಧಿ ಸೂಚ್ಯಂಕದ ಪ್ರಕಾರ 177 ದೇಶಗಳ ಮಾಹಿತಿಯಲ್ಲಿ ನಮ್ಮ ದೇಶ 127ನೇ ಸ್ಥಾನದಲ್ಲಿದೆ. ತೃಪ್ತಿಪಟ್ಟುಕೊಳ್ಳುವ ವಿಷಯವೆಂದರೆ ನಮ್ಮ ಪಕ್ಕದ ದೇಶವಾದ ಪಾಕಿಸ್ತಾನ 142ನೇ ಸ್ಥಾನದಲ್ಲಿದೆ. ಮೇಲೆ ನೋಡಿ ಇನ್ನೂ ಹೆಚ್ಚಿನದಾಗಿ ಉದ್ಧಾರವಾಗಲು ಪ್ರಯತ್ನಿಸುವ ಬದಲು ಕೆಳಗಿರುವವರನ್ನು ನೋಡಿ ಸಂತೋಷಪಡುವುದು ಬೇಡ. ಸ್ವಲ್ಪವಾದರೂ ಆ ಕಡೆಗೆ ಗಮನ ಕೊಟ್ಟು ಸುಧಾರಿಸಲು ಪ್ರಯತ್ನ ಪಡೋಣ. ಇಲ್ಲದಿದ್ದಲ್ಲಿ ನಮ್ಮ ದೇಶ ಇನ್ನೂ ಕೆಳಗೆ ಹೋಗೋದ್ರಲ್ಲಿ ಸಂಶಯವೇ ಇಲ್ಲ.

  ಹೆಚ್ಚಿನ ಗಂಡಸರು ದುಶ್ಚಟಗಳಿಗೆ ಬಲಿಯಾಗಿರುವರು. ಅವರ ಸಮಯ ಮತ್ತು ಹಣವನ್ನು ಕುಡಿತ, ಜೂಜು, ಇತರೇ ಮೋಜುಗಳಿಗೇ ಸುರಿಯುವರು. ಮತ್ತೆ ಸುಲಭವಾಗಿ ಹಣ ಗಳಿಸಲು ಕಳ್ಳತನ, ದರೋಡೆ, ಸುಲಿಗೆ, ಸೂಳೆಗಾರಿಕೆ, ಭಿಕ್ಷೆ ಬೇಡುವುದು ಇತ್ಯಾದಿಗಳಿಗೆ ಮೊರೆ. ಇದರಿಂದ ಅವರುಗಳು ಸಮಾಜಕ್ಕೆ ಕಂಟಕಪ್ರಾಯ ಆಗುವರು.

  ಎಲ್ಲರೂ ಹೀಗಲ್ಲ. ಹೆಚ್ಚಿನದಾಗಿ ಗಂಡಸರು ಇದಕ್ಕೆ ಬಲಿ. ಹೆಂಗಸರು ಇದ್ದದ್ದರಲ್ಲಿ ಸ್ವಲ್ಪ ವಾಸಿ. ಆದ್ದರಿಂದ, ಸಮಾಜದ ಒಳಿತಿಗಾಗಿ ಹೆಣ್ಣುಮಕ್ಕಳಿಗೆ ಕಡ್ಡಾಯವಾದ ಪುಕ್ಕಟೆ ಶಿಕ್ಷಣದ ಅವಶ್ಯಕತೆ ಇದೆ. ಇದರಿಂದ ಅವರು ತಮ್ಮ ಮಕ್ಕಳಿಗೂ ಬದುಕುವ ದಾರಿ ತೋರುವರು. ಮಕ್ಕಳು ಹಾಳಾಗುವ ಸಾಧ್ಯತೆ ಕಡಿಮೆಯಾಗಿ ಉತ್ತಮ ಬಾಳನ್ನು ರೂಪಿಸಿಕೊಳ್ಳುವರು. ಸಮಾಜಕ್ಕೆ ಆಗುವ ತೊಂದರೆಗಳೆಲ್ಲಾ ನಿವಾರಣೆಯಾಗುವುವು ಮತ್ತು ಇವರ ಬವಣೆಗಳೆಲ್ಲಾ ಮಾಯವಾಗುವುವು.

  ಇವರಿಂದ ಕಲಿಯಬೇಕಾದ ಒಂದು ಪಾಠ. ರೋಗ ನಿರೋಧಕ ಶಕ್ತಿ. ಭಿಕ್ಷೆ ಬೇಡಿ ಬಂದ ಅನ್ನವನ್ನು ರಾತ್ರಿಯ ಹೊತ್ತು ನೀರಲ್ಲಿ ಹಾಕಿ ಬೆಳಗ್ಗೆ ಅದರ ನೀರನ್ನು ಮಕ್ಕಳಿಗೆ ಕುಡಿಸುವರು. ಆ ಮಕ್ಕಳಿಗೆ ಸರಿಯಾದ ಅನ್ನಾಹಾರಗಳು ಇಲ್ಲ. ಉಡಲು ತೊಡಲು ಬಟ್ಟೆಗಳಿಲ್ಲ. ಆದರೂ ಆರೋಗ್ಯವಂತರು. ನಿಶ್ಚಿಂತೆಯ ನಿದ್ರೆ. ನಾಳೆಯ ಯೋಚನೆ ಇಲ್ಲ. ಇಂದು ಇಲ್ಲದಿದ್ದರೆ ಏಕಾದಶಿ ಇದ್ದರೆ ದ್ವಾದಶಿ.

  ಮುಂಬೈನಲ್ಲಿರುವ ಧಾರಾವಿ ಇಡೀ ಏಷಿಯಾದಲ್ಲೇ ಬಹು ದೊಡ್ಡ ಕೊಳೆಗೇರಿ. ಎಲ್ಲ ರೀತಿಯ ಸಮಾಜಘಾತುಕ ಕಾರ್ಯಗಳಿಗೆ ಇದು ತವರೂರೆಂದರೆ ತಪ್ಪಾಗಲಾರದು. ಇದೀಗ ರಾಜ್ಯ ಸರ್ಕಾರದವರು ಕೊಳೆಗೇರಿಯನ್ನು ತೆಗೆಯಲು ಪ್ರಾರಂಭಿಸಿದ್ದಾರೆ. ಅಲ್ಲಿನ ನಿವಾಸಿಗಳಿಗೆ ಮುಂಬೈನ ಹೊರವಲಯದಲ್ಲಿ ಬಹುಮಹಡಿಯ ಕಟ್ಟಡಲ್ಲಿ ಫ್ಲಾಟ್‌ಗಳ ಕೋಣೆಗಳನ್ನು ಕೊಡುತ್ತಿದ್ದಾರೆ. ಅದರಲ್ಲೂ ಕೆಲವರು ಆ ಫ್ಲಾಟ್‌ಗಳನ್ನು ಮಾರಿಕೊಂಡು ಮತ್ತೆ ಕೊಳೆಗೇರಿಗೆ ಬರುತ್ತಿದ್ದಾರೆ. ಈ ಬಗ್ಗೆ ಇತ್ತೀಚೆಗೆ ಪೊಲೀಸರು ಕಾರ್ಯಾಚರಣೆಯನ್ನು ಕೂಡಾ ನಡೆಸಿದ್ದರು. ಬಹುಶ: ಇವರುಗಳಿಗೆ ವಿದ್ಯೆಯನ್ನು ಕೊಟ್ಟು ತಿಳುವಳಿಕೆ ಮೂಡುವಂತೆ ಮಾಡಿದರೆ ಸರಿಹೋಗಬಹುದೇನೋ?

  ರಸ್ತೆ ಬದಿಯವರ ಬದುಕು, ರಸ್ತೆ ಬದಿಯಲ್ಲಿಯೇ ಸವೆಯಬೇಕೇ?

  ಈ ಲೇಖನಕ್ಕೆ ಪೂರಕವಾಗಿ ಬೀದಿ ಬದಿಯವರ ಪರವಾಗಿ ಬರೆದ ನನ್ನದೊಂದು ಕವಿತೆ ಹೀಗಿದೆ :

  ನಾವಿಲ್ಲಿ ಬೀದಿಗೆ ಬಿದ್ದ ಬಡಪಾಯಿಗಳು

  ನಮಗಿಲ್ಲ ನಿನ್ನೆ ನಾಳೆಯ ಚಿಂತೆಗಳು

  ನಿತ್ಯ ಹುಡುಕುತಿಹೆವು ಇಂದೆಲ್ಲಿ ಸಿಗುವುದು ಕೂಳು

  ಸರಿ ಸಾಟಿಯಾಗಿ ನಡೆದಿಹವು ನಾಯಿ ಕಾಗೆಗಳು

  ಓದು ಬರಹ ತಿಳಿಯದ ನಿರಕ್ಷರಕುಕ್ಷಿಗಳು

  ಕಾಸಿಗಾಗಿ ಎಲ್ಲೆಂದೆರಲ್ಲಿ ಒತ್ತುವೆವು ಹೆಬ್ಬೆಟ್ಟಿನ ಗುರುತುಗಳು

  ಶಾಲೆಗೆ ಹೋಗುವ ಪೋರರೂ ಮಾಡುವರು ಕುಚೋದ್ಯಗಳು

  ನಿಮಗಿದೆ ನಮ್ಮನೂ ನೋಡಿ ಕಲಿಯಬೇಕಾದ ಪಾಠಗಳು

  ನಮ್ಮ ಬಳಿ ಸುಳಿಯುವುದಿಲ್ಲ ದೊಡ್ಡ ದೊಡ್ಡ ರೋಗಗಳು

  ದಿನಂಪ್ರತಿ ಸೇವಿಸುವೆವು ಸಾರಾಯಿ ರೂಪದ ಔಷಧಗಳು

  ವರುಷಕೊಂದು ಹುಟ್ಟುವವು ಮಕ್ಕಳುಗಳು

  ನಾಳೆ ಕೂಲಿಗೆ ಬರುವ ನಮ್ಮ ಆಸ್ತಿಗಳು

  ನಿಶ್ಚಿಂತೆಯಿಂದ ಎಲ್ಲೆಂದೆರಲ್ಲಿ ಬರುವದು ನಿದ್ರೆ

  ನಮ್ಮ ಸುಖವ ನೋಡಿ ಕರುಬುವರು ಮಹಲಿನವರು

  ಕಳ್ಳ ಕದಿಯಬಹುದೆಂಬ ಹೆದರಿಕೆ ನಮಗಿಲ್ಲ

  ನಮ್ಮ ನೋಡಿ ಕನಿಕರಿಸುವವರೇ ಬಹಳಿಹರಲ್ಲ

  ನಮ್ಮ ಹತ್ತಿರವೂ ಇದೆ ವೋಟಿನ ಐಡೆಂಟಿಟಿ ಕಾರ್ಡು

  ಚುನಾವಣೆಗಳೇ ನಮಗೆ ಹಬ್ಬ ಹರಿದಿನಗಳು

  ನಾವಿಲ್ಲದಿದ್ದರೆ ಯಾವ ನಾಯಕರೂ ಇಲ್ಲ

  ನಾವಿಲ್ಲದೇ ಇಡೀ ಜಗತ್ತಿನಲಿ ಜೀವಾಳವೇ ಇಲ್ಲ

  ಮುಖಪುಟ / ಸಾಹಿತ್ಯ-ಸಂಸ್ಕೃತಿ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more