ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಕ್ಕಾಗಿ ಕೈ ಎತ್ತಲು ಇದು ಸಕಾಲ!

By Super
|
Google Oneindia Kannada News

ಮಗು ತನ್ನ ಕಣ್ಣು ಬಿಟ್ಟು ಮೊದಲು ಕಾಣುವುದೇ ತನ್ನ ತಾಯಿಯ ಮುಖವನ್ನು. ಅವಳ ಬಾಯಿಂದ ಬರುವ ಮಾತುಗಳೇ ಮಾತೃಭಾಷೆ. ಮಗು ತನ್ನ ತಾಯಿಯ ತುಟಿಗಳ ಚಲನೆ ನೋಡಿಯೇ ಮಾತುಗಳನ್ನು ಕಲಿಯುತ್ತದೆ. ಹಾಗಾಗಿ ಮಕ್ಕಳಿಗೆ ಭಾಷೆ ಕಲಿಸುವುದು ತಾಯಿಯೇ.

ಇಂದಿನ ಮಕ್ಕಳಿಗೆ ಶಾಲೆಗಳಲ್ಲಿ ಆಂಗ್ಲ ಭಾಷೆಯ ಮೂಲಕ ವಿದ್ಯೆ ನೀಡುವುದು ಮತ್ತು ವಿದ್ಯೆ ಕೊಡಿಸುವುದು ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ನಮ್ಮ ಮಾತೃಭಾಷೆಯಾದ ಕನ್ನಡವನ್ನು ಮರೆಯುವಂತಾಗಿದೆ. ಇದು ತೀರಾ ಶೋಚನೀಯ. ಇದಕ್ಕೆ ಮುಖ್ಯ ಕಾರಣವೆಂದರೆ ಹೆಚ್ಚಿನ ಓದಿಗೆ ಕನ್ನಡ ಭಾಷೆಯ ಮಾಧ್ಯಮದಲ್ಲಿ ಅನುಕೂಲವಿಲ್ಲವೆಂಬ ಅನುಮಾನ. ಇದರಲ್ಲಿ ಸತ್ಯವಿಲ್ಲ.

ಎಷ್ಟೇ ಓದಿದರೂ, ಯಾವುದೇ ಭಾಷೆಯಲ್ಲಿ ಓದಿದರೂ ಅದು ಮೊದಲು ಮನಸ್ಸಿನಲ್ಲಿ ಗ್ರಹಣವಾಗೋದು ಮಾತೃಭಾಷೆಯಲ್ಲೇ. ನಂತರ ಅದು ವ್ಯಕ್ತಪಡಿಸಬೇಕಾದ ಭಾಷೆಗೆ ತರ್ಜುಮೆಗೊಳ್ಳುತ್ತದೆ. ಯಾವುದೇ ಪದಗಳಿಗಾಗಲೀ ಕನ್ನಡದಲ್ಲಿ ಸೂಕ್ತವಾದ ಪರ್ಯಾಯ ಸಿಗುತ್ತದೆ. ಈಗ ನೋಡಿ ಕನ್ನಡದಲ್ಲೇ ಐ.ಎ.ಎಸ್‌ ಮಾಡಿದ ಅಧಿಕಾರಿ ಇದ್ದಾರೆ. ಇವರನ್ನೇ ಮಾದರಿಯಾಗಿ ಇಟ್ಟುಕೊಂಡು ನಾವು ನಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಬೇಕು. ಕನ್ನಡವನ್ನು ನಮ್ಮ ಮಕ್ಕಳಲ್ಲದೇ ಮತ್ತಿನ್ಯಾರು ಕಲಿಯಬೇಕು ಮತ್ತು ಕಲಿಯುತ್ತಾರೆ.

ಇದೇ ಸಮಯದಲ್ಲಿ ನಮ್ಮ ಕೇಂದ್ರ ಸರ್ಕಾರವು ಹಿಂದಿಯನ್ನು ಹೇರಲು ಪ್ರಯತ್ನಿಸುತ್ತಿದೆ. 1963ರಲ್ಲಿ ಭಾರತದ ಸಂವಿಧಾನ ರೀತ್ಯಾ ಹಿಂದಿ ಭಾಷೆಯನ್ನು ರಾಜ ಭಾಷೆ ಎಂದು ಘೋಷಿಸಿದರು. ಅದು 1965ರ ಜನವರಿ 26ನೇ ತಾರೀಖಿನಿಂದ ಜಾರಿಗೆ ಬಂತು. ಎಲ್ಲರಿಗೂ ನೆನಪಿರಬಹುದು. ಆಗ 'ಡೌನ್‌ ವಿತ್‌ ಹಿಂದಿ’ ಅನ್ನುವ ಆಂದೋಲನ ಬಹಳ ಬಿರುಸಾಗಿ ದಕ್ಷಿಣ ಭಾರತದಲ್ಲಿ ನಡೆಯಿತು. ಅದರ ಪ್ರಭಾವವೇ ತಮಿಳರು ಪ್ರಬಲರಾದರು.

ಕನ್ನಡಿಗರು ಸ್ವಲ್ಪ ನಿಧಾನಸ್ಥರು ಮತ್ತು ಸಂದರ್ಭಕ್ಕೆ ತಕ್ಕಂತೆ ಅನುಸರಿಸಿಕೊಂಡು ಹೋಗುತ್ತಾರೆಂದು ಭಾವಿಸಿದ ಕೇಂದ್ರ ಸರ್ಕಾರ ನಮ್ಮ ಮೇಲೆ ಹಿಂದಿಯನ್ನು ಹೇರಿತು. ಅದರ ಫಲ ನಾವು ಈಗ ಅನುಭವಿಸುತ್ತಿದ್ದೇವೆ. ಅದರಲ್ಲೂ ಕೇಂದ್ರ ಸರ್ಕಾರ ಸ್ವಾಮ್ಯದ ಕಛೇರಿ, ಬ್ಯಾಂಕುಗಳು, ಫ್ಯಾಕ್ಟರಿಗಳು, ರೈಲ್ವೆ, ಮತ್ತಿತರ ಕೇಂದ್ರ ಸರ್ಕಾರದ ಹಿಡಿತದಲ್ಲಿರುವ ಸಂಸ್ಥೆಗಳಲ್ಲಿ ಹಿಂದಿಯದೇ ದರ್ಬಾರು.

ನಮ್ಮ ಹಿರಿಯರು ಆಗ ತಮಿಳರಂತೆ ಏನಾದರೂ ಕಾರ್ಯಕ್ರಮ ಕೈಗೊಂಡಿದ್ದರೆ, ಕನ್ನಡ ಭಾಷೆ ಅವನತಿಯತ್ತ ಸಾಗುತ್ತಿರಲಿಲ್ಲ. ಉತ್ತರ ಭಾರತೀಯರು ಹಿಂದಿಯನ್ನಲ್ಲದೇ ಬೇರೆ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಹಿಂದಿಯನ್ನು ಸಂಪರ್ಕ ಭಾಷೆಯನ್ನಾಗಿ ಮಾಡುತ್ತಿದ್ದಾರೋ ಹಾಗೆಯೇ ಕ್ಷೇತ್ರೀಯ ಭಾಷೆಗಳಿಗೂ ಪ್ರಾಮುಖ್ಯತೆಯನ್ನು ಕೊಟ್ಟು ಅವುಗಳನ್ನು ಉಳಿಸಲಿ, ಬೆಳೆಸಲಿ. ಹಿಂದಿಯೇತರ ಎಲ್ಲ ಭಾಷೆಗಳಲ್ಲೂ ಸಾಹಿತ್ಯ ಅಪರಿಮಿತವಾಗಿ ಬೆಳೆದಿದೆ. ಹಳೆಯ ಮತ್ತು ಸಮೃದ್ಧ ಭಾಷೆಯಾಗಿರುವ ಕನ್ನಡ, ಹಲವಾರು ಭಾಷೆಗಳಿಗೆ ಜನ್ಮ ನೀಡಿದೆ.

ನಮಗೆ ದೆಹಲಿಯೇ ರಾಷ್ಟ್ರದ ರಾಜಧಾನಿಯಾಗಿರಲಿ, ಬೆಂಗಳೂರು ಆಗೋದು ಬೇಡ. ಆದರೆ ಬೆಂಗಳೂರು ದೆಹಲಿ ಆಗೋದು ಬೇಡ. ಎಲ್ಲ ರಾಜ್ಯಗಳಂತೆ ಕರ್ನಾಟಕವೂ ಸೇರಿ ಭಾರತವಾಗಲಿ. ಇಡೀ ಭಾರತವೇ ಒಂದು ರಾಜ್ಯವಾಗಲು ಸಾಧ್ಯವಿಲ್ಲ.

ನನ್ನ ಕಳಕಳಿಯ ಮನವಿಯಿಷ್ಟೇ, ಹಿಂದಿಯ ಹೇರಿಕೆ ನಮ್ಮ ಮೇಲೆ ಬೇಡ. ಇಂಗ್ಲಿಷ್‌ ಕೂಡಾ ನಮಗೆ ಬೇಡ. ಹಿಂದಿಯ ಬೆಳವಣಿಗೆಗೆ ಕೊಡುವ ಸೌಲಭ್ಯ ಸವಲತ್ತು ಕನ್ನಡಕ್ಕೂ ಕೊಡಿ. ಕನ್ನಡವೂ ಬೆಳೆಯಲಿ. ದಕ್ಷಿಣ ಭಾರತದ ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯ ವಿರುದ್ಧವಾಗಿ 1968ರಲ್ಲಿ ಹೋರಾಟ ನಡೆದದ್ದರಿಂದ ಅಲ್ಲಿ ಹಿಂದಿಯ ಹೇರಿಕೆ ಮುಂದುವರೆಯಲಿಲ್ಲ.

ಇದೇ ಕಾರಣದಿಂದ ರಾಜ್ಯದ ಹೆಸರನ್ನು ಮದರಾಸಿನಿಂದ ತಮಿಳುನಾಡು ಎಂದು ಬದಲಾಯಿಸಿದರು. ಪಂಜಾಬ ಪ್ರಾಂತ್ಯ ನಿರ್ಮಾಣವಾಗಲು ಈ ವಿಷಯವೂ ಒಂದು ಕಾರಣ. ಪಶ್ಚಿಮ ಬಂಗಾಳದಲ್ಲೂ ಹಿಂದಿ ಹೇರಿಕೆಗೆ ವಿರೋಧವಿದೆ. ನಮ್ಮ ಕನ್ನಡಿಗರಲ್ಲಿ ಹೆಚ್ಚಿನ ಸಹಿಷ್ಣುತೆ ಭಾವ ಇರುವುದರಿಂದ ನಮ್ಮ ಮೇಲೆ ಎಲ್ಲರೂ ಸವಾರಿ ಮಾಡುವ ಹಾಗೆ ಆಗಿದೆ.

ಕನ್ನಡದ ಬಗ್ಗೆ ಜಾಗೃತಿ ಮೂಡುತ್ತಿರುವ ಈ ಸುಸಮಯದಲ್ಲಿ ನಮ್ಮಿಂದ ಚುನಾಯಿತರಾದ ರಾಜಕಾರಣಿಗಳಲ್ಲಿ ಮನವಿ ಮಾಡಿಕೊಳ್ಳೋಣ. ಕನ್ನಡವನ್ನು ಉಳಿಸಿ, ಬೆಳೆಸಿ. ಕನ್ನಡಕ್ಕೆ ಮೊದಲ ಆದ್ಯತೆ ಸಿಗಲಿ.

ವಿದ್ಯಾಭ್ಯಾಸ ಕನ್ನಡದಲ್ಲೇ ಇಲ್ಲದಿರುವುದೊಂದು ಖೇದದ ವಿಷಯ. ಹೇಗೆ ಚೀನಾ, ಕೊರಿಯಾ, ಜಪಾನ್‌, ಜರ್ಮನಿ ಮತ್ತಿತರೇ ಮುಂದುವರೆದ ದೇಶಗಳಲ್ಲಿ ವಿದ್ಯಾಭ್ಯಾಸವು ಅವರದ್ದೇ ಭಾಷೆಯಲ್ಲಿ ಲಭ್ಯವಿದೆಯೋ ಹಾಗೇ ಎಲ್ಲ ವಿಷಯಗಳ ವಿದ್ಯೆಯೂ ಕನ್ನಡದಲ್ಲೇ ಲಭ್ಯವಾಗುವಂತೆ ಮಾಡಬೇಕು.

ನಮ್ಮಲ್ಲಿರುವ ಬುದ್ಧಿಜೀವಿಗಳು ಅವರವರ ಕ್ಷೇತ್ರಗಳಲ್ಲಿ ಇಂಗ್ಲಿಷ್‌ ಅಥವಾ ಬೇರೆ ಯಾವುದೇ ಭಾಷೆಯಲ್ಲಿರುವ ಪದಗಳನ್ನು ಕನ್ನಡೀಕರಿಸಿ ಪಾರಿಭಾಷಿಕ ನಿರ್ಮಿಸಲು ಮುಂದಾಗಲಿ. ಇದರಿಂದಾಗಿ ಮುಂದಿನ ಪೀಳಿಗೆಯ ವಿದ್ಯಾಭ್ಯಾಸದಲ್ಲಿ ಎಲ್ಲ ವಿಷಯಗಳೂ ಕನ್ನಡದಲ್ಲೇ ಲಭ್ಯವಾಗಲಿ. ಆಗ ಎಲ್ಲ ಮಕ್ಕಳೂ ಕನ್ನಡವನ್ನು ಕಡ್ಡಾಯವಾಗಿ ಕಲಿಯಬಹುದು. ಈ ನಿಟ್ಟಿನಲ್ಲಿ ರಾಷ್ಟ್ರಕ್ಕೆ ಕನ್ನಡಿಗರು ಮಾದರಿಯಾಗಲು ಪ್ರಯತ್ನಿಸೋಣ, ಎಂಬುದು ನನ್ನ ಚಿಂತನೆ.

ಇನ್ನೂ ನೋಡಿ ಕನ್ನಡದ ಸೊಗಡಿಗೆ ಮಾರು ಹೋಗಿ ಬಹಳ ಹಿಂದೆ ಕ್ರೈಸ್ತ ಧರ್ಮ ಪ್ರಚಾರಕ್ಕಾಗಿ ಬಂದ ರೆವರೆಂಡ್‌ ಫಾದರ್‌ ಕಿಟ್ಟೆಲ್‌ ಅವರು ಕನ್ನಡ ಕಲಿತು ಕನ್ನಡದಲ್ಲೇ ಪಾರಿಭಾಷಿಕ ರಚಿಸಿದರು. ಇವರು ಮೂಲತ: ಜರ್ಮನಿಯವರು.

ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆ ಕರ್ನಾಟಕಕ್ಕೆ ಸಂದಿದೆ. ಹಾಗೆ ನೋಡಿದರೆ ಜ್ಞಾನಪೀಠಿಗಳಲ್ಲಿ ಬಹಳಷ್ಟು ಕವಿಗಳ ಮನೆ ಮಾತು ಕನ್ನಡವಲ್ಲವೇ ಅಲ್ಲ. ಇನ್ನೂ ಕನ್ನಡದ ಮೊದಲ ಪ್ರೊಫೆಸರ್‌ ಆಗಿದ್ದ ತಳುಕಿನ ವೆಂಕಣ್ಣಯ್ಯನವರ ಮನೆ ಮಾತು ತೆಲುಗು. ಅವರು ಅವರ ಶಿಷ್ಯಂದಿರುಗಳಿಗೆ ಮನೆಯಲ್ಲಿ ಊಟ ಹಾಕಿ ಪಾಠ ಹೇಳಿಕೊಟ್ಟಂಥವರು. ಇಂತಹ ಮಹನೀಯರ ಸಾಲಿಗೇ ಸೇರುವ ಡಿ.ವಿ.ಗುಂಡಪ್ಪ, ದ.ರಾ.ಬೇಂದ್ರೆ, ಕನ್ನಡ ಕುಲ ಪುರೋಹಿತ ಎಂದೇ ಪ್ರಸಿದ್ಧರಾಗಿದ್ದ ಆಲೂರು ವೆಂಕಟರಾಯರು, ಇತ್ಯಾದಿ ಮಹಾಪುರುಷರ ಬಗ್ಗೆಯೂ ನಾವು ತಿಳಿದು ನಮ್ಮ ಮಕ್ಕಳಿಗೆ ಮತ್ತು ಇಂದಿನ ತರುಣ ಜನಾಂಗಕ್ಕೆ ತಿಳಿಸಿಕೊಡಬೇಕಾಗಿದೆ.

ಇಂತಹ ಹತ್ತು ಹಲವಾರು ವಿಷಯಗಳಿಂದ ಅವರುಗಳು ಕನ್ನಡ ಭಾಷೆಯ ಹಿರಿಮೆ ತಿಳಿಯಬೇಕಾಗಿದೆ. ಇವರೆಲ್ಲ ಪ್ರಾತ:ಸ್ಮರಣೀಯರು. ಇಂದಿನ ಮಹಾಪುರುಷರುಗಳ ಸಾಲಿನಲ್ಲಿರುವ ನಡೆದಾಡುವ ದೇವರೆಂದೇ ಪ್ರಸಿದ್ಧವಾದ ಶಿವಕುಮಾರ ಸ್ವಾಮಿಜಿಗಳನ್ನೂ ಹೆಸರಿಸಬಹುದು. ಇವರುಗಳಿಂದಲೇ ಕನ್ನಡದ ಭಾಷೆಯ ಶ್ರೀಗಂಧ ವಿಶ್ವದಲ್ಲೆಲ್ಲಾ ಪಸರಿಸಿರುವುದು.

ಈಗೀಗ ಪರಭಾಷೀಯರ ದಾಳಿ ನಮ್ಮ ಕನ್ನಡನಾಡಿನಲ್ಲಿ ಬಹಳವಾಗಿದೆ. ಈಗಿನ ಕನ್ನಡ ನಾಡು ಇನ್ನೊಂದು ಹಾಳು ಹಂಪೆಯಾಗಲು ಅವಕಾಶ ಕೊಡೋದು ಬೇಡ. ಈ ದಿಸೆಯಲ್ಲಿ ಮೊದಲು ನಾವು ನಮ್ಮ ಬಗ್ಗೆ ತಿಳಿದುಕೊಳ್ಳೋಣ. ತಿಳಿದು ಕಲಿಯೋಣ. ಕಲಿತು ಕಲಿಸೋಣ. ಕಲಿಸಿ ಬೆಳೆಯೋಣ. ಬೆಳೆದು ನಾಡನ್ನೂ ಬೆಳೆಸಿ, ಸದೃಢಗೊಳಿಸೋಣ. ಇದು ನಮ್ಮ ಮೊದಲನೆಯ ಆದ್ಯತೆಯಾಗಲಿ.

ಹಾಗೆಂದು ಯಾವ ಭಾಷೆಗಳೂ ನಮಗೆ ವೈರಿಗಳಲ್ಲ. ಎಲ್ಲ ಭಾಷೆಗಳೂ ತಾಯಂದಿರ ಹಾಗೆ. ಯಾವ ತಾಯಿಯೂ ಕೆಟ್ಟವಳಲ್ಲ. ಅವಳು ಮಾಡುವುದೆಲ್ಲ ತನ್ನ ಮಕ್ಕಳ ಹಿತಕ್ಕಾಗಿಯೇ. ಇತರ ಭಾಷೆಗಳನ್ನೂ ನಾವು ಕಲಿಯಬೇಕು. ಆದರೆ ನಮ್ಮ ಭಾಷೆಯನ್ನು ಮರೆಯುವಂತಾಗಬಾರದು.

ಈಗೀಗ ಇಡೀ ಜಗತ್ತೇ ಚಿಕ್ಕದಾಗುತ್ತಿದೆ. ಯಾರು ಎಲ್ಲಿ ಬೇಕಾದರೂ ಜೀವನ ಮಾಡಬೇಕಾದ ಪರಿಸ್ಥಿತಿ ಬರಬಹುದು. ಎಲ್ಲಿ ಉಳಿಯಬೇಕೋ ಅಲ್ಲಿಯ ಭಾಷೆ, ಜನಜೀವನಕ್ಕೆ ಹೊಂದಿಕೊಳ್ಳಬೇಕು. ಹೀಗೇ ಕನ್ನಡನಾಡಿಗೆ ಬರುವ ಪರಭಾಷಿಯರೂ ಕನ್ನಡವನ್ನು ಕಲಿಯಬೇಕು. ಇದಕ್ಕಾಗಿ ನಾವೆಲ್ಲರೂ ಕನ್ನಡ ಕಲಿಸೋಣ, ಎಲ್ಲರ ಪ್ರೀತಿ ಗಳಿಸೋಣ. ಕನ್ನಡದ ಸೊಗಡನ್ನು ಜಗತ್ತಿಗೇ ಸಾರೋಣ.

English summary
Talaku Srinivas of Mumbai discuss about how to save Kannada Language and Responsibilities of Kannadigas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X