ಕಟ್ರಿನಾಗೆ ಹೋದ ಅಮೆರಿಕದ ಮಾನ
- ವಿಶ್ವೇಶ್ವರ ಭಟ್
ಅಮೆರಿಕದ ಇತಿಹಾಸದಲ್ಲಿಯೇ ಈ ಚಂಡಮಾರುತ ಭೀಕರ ನೈಸರ್ಗಿಕ ದುರಂತಗಳಲ್ಲೊಂದು. ಈ ಪ್ರಕೋಪಕ್ಕೆ ನ್ಯೂ ಆರ್ಲಿಯನ್ಸ್ ಬಹುತೇಕ 80ರಷ್ಟು ಮುಳುಗಿದೆ. ಕಳೆದ ಒಂದು ವಾರದಿಂದ ಅಮೆರಿಕದಿಂದ ಬರುತ್ತಿರುವ ವರದಿಗಳು ಹಾಗೂ ಟಿವಿ ಸುದ್ದಿಯನ್ನು ನೋಡಿದರೆ ಕಟ್ರಿನಾ ಅದೆಷ್ಟು ಖತರ್‌ನಾಕ್ ಆಗಿದೆಯೆಂದೂ, ಅದಕ್ಕಿಂತ ಹೆಚ್ಚಾಗಿ ಅಲ್ಲಿನ ಜನ ಅದೆಷ್ಟು ಖದೀಮರಾಗಿದ್ದಾರೆ ಎಂಬುದನ್ನು ತೋರಿಸಿದೆ.
ಮನೆ, ಮಠಗಳನ್ನು ಕಳೆದುಕೊಂಡು ನಿರ್ಗತಿಕರಾದ ಜನ ಪ್ರಾಣ ಉಳಿಸಿಕೊಳ್ಳಲು ಶ್ರಮಿಸುತ್ತಿದ್ದರೆ, ಮುಳುಗಿದ ಕಾರಿನಲ್ಲಿ ಸಿಲುಕಿದ ಹೆಂಡತಿ, ಮಕ್ಕಳನ್ನು ಬಚಾವ್ ಮಾಡಲು ಮನೆಯ ಯಜಮಾನ ಹೋರಾಟ ಮಾಡುತ್ತಿದ್ದರೆ, ಬೀಸುವ ಚಂಡಮಾರುತದ ಹೊಡೆತಕ್ಕೆ ಮನೆಯ ಚಾವಣಿ ಹಾರಿ ಹೋಗಿ ಬದುಕು ನಿರ್ಗತಿಕವಾಗಿದ್ದರೆ, ಎರಡು-ಮೂರು ಅಂತಸ್ತಿನ ಮನೆ ನೀರಿನಲ್ಲಿ ಮುಳುಗಿ ಹೋಗಿ ಮನೆಮಂದಿಯೆಲ್ಲ ಊಟ-ನಿದ್ದೆಯಿಲ್ಲದೇ ಸುರಿವ ಮಳೆಯಲ್ಲಿ ಮನೆ ಮಹಡಿಯೇರಿ ಸಾವು- ಬದುಕಿನ ಹೋರಾಟ ಮಾಡುತ್ತಿದ್ದರೆ ಅಲ್ಲಿನ ಜನ ಅಮಾಯಕ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗುತ್ತಿದ್ದರು. ಅವರಿಂದ ಹಣ, ಆಭರಣಗಳನ್ನು ದೋಚುತ್ತಿದ್ದರು. ಪ್ರಾಣ ಉಳಿಸಿ ಕೊಳ್ಳಲು ಜನ, ಮನೆ ಅಂಗಡಿಗಳನ್ನು ಬಿಟ್ಟು ಓಡುತ್ತಿದ್ದರೆ, ಇದೇ ಸದವಕಾಶವೆಂದು ಕೆಲವರು ಲೂಟಿ ಮಾಡುತ್ತಿದ್ದರು. ಮನೆಯಾಳಗೆ ಹೊಕ್ಕು ಕೈಗೆ ಸಿಕ್ಕದ್ದನ್ನೆಲ್ಲ ದೋಚಿ ಕಾರಿನಲ್ಲಿ ತುಂಬಿಕೊಂಡು ಪಲಾಯನ ಗೈಯ್ಯುತ್ತಿದ್ದ ದೃಶ್ಯ ಅಸಹ್ಯ ಹುಟ್ಟಿಸುತ್ತಿತ್ತು.
ಮಾನವೀಯ ಅನುಕಂಪ, ಸಹಾನುಭೂತಿ ಕಳೆದುಕೊಂಡ ಸಮಾಜ ಮಾತ್ರ ಇಂಥ ಕ್ಷಣಗಳಲ್ಲಿ ಇಷ್ಟೊಂದು ಹೃದಯಹೀನವಾಗಿ, ಪೈಶಾಚಿಕವಾಗಿ, ನಾಚಿಕೆಗೇಡಿನಿಂದ ವರ್ತಿಸಲು ಸಾಧ್ಯ.
ಭಾರತ ಕೂಡ ಅವೆಷ್ಟೋ ನೈಸರ್ಗಿಕ ಪ್ರಕೋಪಗಳನ್ನು ಕಂಡಿದೆ. ನಮಗೆ ಚಂಡಮಾರುತ, ಪ್ರವಾಹ, ಭೂಕಂಪ, ಬರ, ಸಾಂಕ್ರಾಮಿಕ ರೋಗಗಳೆಲ್ಲ ಹೊಸತೇನಲ್ಲ. ಉತ್ತರಾಂಚಲ ಹಾಗೂ ಗುಜರಾತ್ ಭೂಕಂಪ, ಸುನಾಮಿ ದುರಂತ ಹಾಗೂ ಇತ್ತೀಚಿನ ನೆರೆ ಹಾವಳಿ ಉಂಟು ಮಾಡಿದ ಪರಿಣಾಮ ಅಷ್ಟಿಷ್ಟಲ್ಲ. ನಮ್ಮಲ್ಲೂ ಅತ್ಯಾಚಾರಿಗಳಿದ್ದಾರೆ. ಕೊಲೆಗಡುಕರಿದ್ದಾರೆ. ದರೋಡೆಕೋರರು, ಲೂಟಿಕೋರರಿದ್ದಾರೆ. ನೈಸರ್ಗಿಕ ದುರಂತಗಳಾದಾಗ ಕಾನೂನು- ಸುವ್ಯವಸ್ಥೆ ಅಡಸಲು- ಬಡಸಲಾಗುತ್ತದೆ ನಿಜ. ಆದರೆ ಯಾರೂ ಸಂತ್ರಸ್ತರು, ದುಃಖತಪ್ತರನ್ನು ಲೂಟಿ ಮಾಡುವುದಿಲ್ಲ. ಅವರ ಮೇಲೆ ಅತ್ಯಾಚಾರವೆಸಗುವುದಿಲ್ಲ. ಅಂಥ ಒಂದು ಪ್ರಕರಣ ಸಹ ವರದಿಯಾಗಿದ್ದಿಲ್ಲ.
ನ್ಯೂ ಆರ್ಲಿಯನ್ಸ್‌ದಲ್ಲಿ ಚಂಡಮಾರುತದ ಹೊಡೆತಕ್ಕೆ ಕಟ್ಟಿದ ಮನೆ ನೀರಲ್ಲಿ ಮುಳುಗಿ ಕುಸಿಯುತ್ತಿದ್ದರೆ ಮುಗ್ಧ ಕಂದಮ್ಮಗಳನ್ನು ಎತ್ತಿಕೊಂಡು ಆಸರೆಗಾಗಿ ಎದುರು ನೋಡುತ್ತಾ ದಿಕ್ಕಾಪಾಲಾಗಿ ಮಹಿಳೆಯರು ಓಡುತ್ತಿದ್ದರೆ ಪುಂಡ ಪೋಕರಿಗಳನ್ನು ಅವರ ಮೇಲೆ ಗುಂಡಿನ ಮಳೆಗರೆಯುತ್ತಿದ್ದರು. ಜನರನ್ನು ಅಡ್ಡಗಟ್ಟಿ, ಹಿಂಸಿಸಿ ಹಣವನ್ನು ದೋಚಿಕೊಳ್ಳುತ್ತಿದ್ದರು.
ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ ಕೋಸ್ಟ್‌ಗಾರ್ಡ್ ಹೆಲಿಕಾಪ್ಟರ್‌ಗಳಿಗೆ ಕೆಲವರು ಗುಂಡು ಹಾರಿಸಿದ್ದರಿಂದ ಅಲ್ಲಿನ ಕೆಲವು ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಆರಂಭವಾಗಲು ಎರಡು ದಿನಗಳು ತಡವಾದವು. ಈ ಅವಧಿಯಲ್ಲಿ ಲೂಟಿಕೋರರು ಮನೆಯಾಳಗೆ ಹೊಕ್ಕು ಲೂಟಿ ಮಾಡಿ ಪರಾರಿಯಾಗುತ್ತಿದ್ದರು.
ಸೂರತ್‌ನಗರ ಪ್ಲೇಗ್‌ನಿಂದ ತತ್ತರಿಸಿದಾಗ ಸಾವಿರಾರು ಜನ ಮನೆ, ಆಸ್ತಿ ಪಾಸ್ತಿ ಬಿಟ್ಟು ಗುಳೆ ಹೊರಟರು. ಆದರೆ ವಾಪಸ್ ಬರುವಾಗ ಒಂದೇ ಒಂದು ಮನೆ ಹೈಗೈ ಆಗಿರಲಿಲ್ಲ. ಪ್ಲೇಗು ಹೊಕ್ಕ ನಗರಕ್ಕೆ ಕಳ್ಳಕಾಕರು ನುಗ್ಗಲಿಲ್ಲ. ಅವರೇ ನಗರವನ್ನು ಕಾದಿದ್ದರು! ಗಡ್ಡಕ್ಕೆ ಬೆಂಕಿ ಬಿದ್ದಾಗ ಯಾರೂ ಬೀಡಿ ಹೊತ್ತಿಸಿಕೊಳ್ಳಲಿಲ್ಲ.
ಸುನಾಮಿ ತೆರೆಗಳು ನಮ್ಮ ಕರಾವಳಿ ಪ್ರದೇಶಗಳನ್ನು ಎತ್ತಿಬಿಸಾಕಿದಾಗ ಲಕ್ಷಾಂತರ ಮಂದಿ ನಿರ್ಗತಿಕರಾದರು. ದೇಶದ ಮೂಲೆ ಮೂಲೆಗಳಿಂದ ಆಹಾರ, ನೀರು, ದುಡ್ಡು, ಬಟ್ಟೆ, ಎಣ್ಣೆ, ದಿನಸಿ, ಹಾಲು, ಔಷಧಿ ಹರಿದು ಬಂದವು. ಇವೆಲ್ಲವನ್ನೂ ಕೊಟ್ಟವರು, ಕೂಡಿಸಿದವರು ಶ್ರೀಮಂತರಲ್ಲ. ಸಾಮಾನ್ಯರು. ಇವರೇ ಸುನಾಮಿ ಸಂತ್ರಸ್ತರಿಗಾಗಿ ಮನೆಗಳನ್ನು ಕಟ್ಟಿಸಲು ಮುಂದಾದರು.
ಕಟ್ರಿನಾ ಚಂಡಮಾರುತದಂತೆ ಮೊನ್ನೆ ಮೊನ್ನೆ ಮುಂಬೈ ಮಹಾನಗರಿಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಸಾವಿರಾರು ಮಂದಿ ಸತ್ತರು. ಹತ್ತುಪಟ್ಟು ಜನ ಹಾನಿಗೊಳಗಾದರು. ಮೂರು ದಿನ ಇಡೀ ನಗರ ನೀರಿನಿಂದ ಆವೃತವಾಗಿ ಜನಜೀವನ ಅಸ್ತವ್ಯಸ್ತವಾಯಿತು. ಆದರೆ ನಾಲ್ಕನೆ ದಿನ ಇಡೀ ನಗರ ಮೈಕೊಡವಿ ಎದ್ದು ನಿಂತಿತ್ತು. ಈ ದುರಂತದಲ್ಲಿ ಒಬ್ಬರಿಗೊಬ್ಬರು ನೆರವಾದ ರೀತಿ ಮಾನವೀಯ ಕಾಳಜಿ ಹಾಗೂ ತುಡಿತಕ್ಕೆ ಬರೆದ ಭಾಷ್ಯದಂತಿತ್ತು.
ಚಂಡಮಾರುತದ ಆಘಾತಕ್ಕೆ ನ್ಯೂ ಆರ್ಲಿಯನ್ಸ್ ಅಕ್ಷರಶಃ ತರಗೆಲೆಗಳಂತೆ ತತ್ತರಿಸುತ್ತಿದ್ದರೆ ಅಮೆರಿಕದ ಸಮಾಜದಲ್ಲಿ ಗುಮ್ಮನಂತಿರುವ ವರ್ಗ ಸಂಘರ್ಷ ರಾಕ್ಷಸರೂಪ ತಾಳಿತ್ತು.
ಕಟ್ರಿನಾದಲ್ಲಿ ತೊಂದರೆಗೊಳಗಾದರು, ಮನೆ-ಮಠ ಕಳಕೊಂಡವರು, ಸತ್ತವರು, ಹಾನಿಗೊಳಗಾದವರು ಹೆಚ್ಚಾಗಿ ಕರಿಯರು. ಅಂದರೆ ಆಫ್ರಿಕಾ ಮೂಲದ ಅಮೆರಿಕನ್ನರು. ಇವರೆಲ್ಲ ಅಂದು ತಮ್ಮ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದರೆ, ಬಿಳಿಯರು ಅಂದರೆ ಅಮೆರಿಕ್‌ರು ಅವರ ಮೇಲೆ ಅತ್ಯಾಚಾರ, ಅನಾಚಾರಕ್ಕಿಳಿದಿದ್ದು ವರ್ಣಾಧರಿತ ವರ್ಗ ಸಂಘರ್ಷದ ಕರಾಳ ಮುಖದ ನಗ್ನ ನರ್ತನ! ಅಮೆರಿಕನ್‌ರಿಗೆ ಹೊರ ದೇಶಗಳಿಂದ ಬಂದು ನೆಲಸಿದವರ ಬಗ್ಗೆ ಎಂಥ ಆಕ್ರೋಶವಿದೆಯೆಂಬುದಕ್ಕೆ ಕಟ್ರಿನಾ ಒಂದು ನಿದರ್ಶನ. ಕಾರಣ ಲೂಟಿಗೆ ಹಾಗೂ ಅತ್ಯಾಚಾರಕ್ಕೆ ಒಳಗಾದವರು ಅವರೇ, ಈಗಾಗಲೇ ಬಿಳಿಯ-ಕರಿಯ, ಬಡವ-ಶ್ರೀಮಂತ, ಹೊರಗಿನವರು -ಮೂಲ ನಿವಾಸಿಗಳೆಂದು ಒಡೆದು ಹೋಗಿರುವ ಅಮೆರಿಕದ ಸಮಾಜ ಈಗ ಮತ್ತಷ್ಟು ಶಿಥಿಲವಾಗುವಂತಾಗಿದೆ.
ಚಂಡಮಾರುತ ಸಂಭವಿಸಿದಾಗ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್‌ಗೆ ಇದರ ಭೀಕರತೆಯ ಕಲ್ಪನೆಯೇ ಇರಲಿಲ್ಲವಂತೆ. ಉಪಾಧ್ಯಕ್ಷ ಡಿಕ್ ಚೇನಿ ರಜೆ ನಿಮಿತ್ತ ವಿಹಾರದಲ್ಲಿದ್ದರು. ವಿದೇಶಾಂಗ ಸಚಿವೆ ಸಾವಿರ ಡಾಲರ್ ಬೆಲೆಯ ಚಪ್ಪಲಿ ಖರೀದಿಸುವುದರಲ್ಲಿ ತಲ್ಲೀನರಾಗಿದ್ದರು.
ನ್ಯೂ ಆರ್ಲಿಯನ್ಸ್ ನಗರ ತಲುಪಲು ಸೈನಿಕರಿಗೆ 48ಗಂಟೆಗಳು ಬೇಕಾದವು. ಅಮೆರಿಕದ ಸುಮಾರು ಹತ್ತು ಸಾವಿರ ಸೈನಿಕರು ಇರಾಕ್‌ನಲ್ಲಿ ಯುದ್ಧನಿರತರಾಗಿರುವುದರಿಂದ ತಕ್ಷಣ ಸೈನಿಕರು ಕಳಿಸಲು ಸಾಧ್ಯವಾಗಲಿಲ್ಲ. ಸುಮಾರು 60ಸಾವಿರ ಸಂತ್ರಸ್ತರಿಗೆ ಆಶ್ರಯ ತಾಣ ಸಿಗದಿದ್ದರಿಂದ ಕೊನೆಗೆ ಅವರನ್ನು 24ತಾಸಿನಲ್ಲಿ ಅಲ್ಲಿದ್ದ ತಾಣ ಸಿಗದಿದ್ದರಿಂದ ಕೊನೆಗೆ ಅವರನ್ನು ಒಳಾಂಗಣ ಕ್ರೀಡಾಂಗಣದಲ್ಲಿರಿಸಲಾಯಿತು. ಆದರೆ ಮೊದಲ 24ತಾಸಿನಲ್ಲಿ ವೈದ್ಯಕೀಯ ಸೌಲಭ್ಯ ಸಿಗದಿದ್ದರಿಂದ ಕೆಲವರು ಅಸು ನೀಗಿದರು. ತಕ್ಷಣ ಕಳಿಸಲು ವೈದ್ಯರು ಸಿಗಲಿಲ್ಲ. ವೆನೆಜುವೆಲಾ ಹಾಗೂ ಕ್ಯೂಬಾದಂಥ ಚಳ್ಳೆಪಿಳ್ಳೆ ದೇಶಗಳಿಂದ ಸಾವಿರಾರು ವೈದ್ಯರನ್ನು ಕರೆಯಿಸಿಕೊಳ್ಳಬೇಕಾಯಿತೆಂದರೆ ಅಮೆರಿಕದಲ್ಲಿ ಎಂಥ ಪರಿಸ್ಥಿತಿ ಇದೆಯೆಂಬುದನ್ನು ಅರ್ಥೈಸಿಕೊಳ್ಳಬಹುದು.
ಸುಮಾರು ಎರಡು ಲಕ್ಷ ಜನರಿಗೆ ತಮ್ಮ ಮನೆಗಳಿಗೆ ಮರಳಲು ಇನ್ನೂ ಎರಡು ತಿಂಗಳು ಬೇಕಾಗಬಹುದು. ಸಾವಿರಾರು ಜನ ಸತ್ತಿರಬಹುದೆಂದು ಶಂಕಿಸಲಾಗಿರುವ ಈ ದುರಂತದಲ್ಲಿ 25ಕೋಟಿ ಡಾಲರ್ ಹಾನಿಯಾಗಿದೆ. ಅದೇ ಒಂದೂವರೆ ಕೋಟಿ ಜನರಿರುವ ಮುಂಬೈ ಕೇವಲ 3ದಿನಗಳಲ್ಲಿ ಚೇತರಿಸಿಕೊಂಡಿತು. ಏನೂ ಆಗಿಯೇ ಇಲ್ಲವೆಂಬಂತೆ ಸುಧಾರಿಸಿಕೊಂಡಿತು. ಎರಡು ವರ್ಷಗಳ ಹಿಂದೆ ಅಮೆರಿಕದ ಕೆಲವು ನಗರಗಳಲ್ಲಿ ಏಳೆಂಟು ತಾಸು ವಿದ್ಯುತ್ ಕೈಕೊಟ್ಟು ಭಾರಿ ಅನಾಹುತವಾದಾಗ, ಅಲ್ಲಿನ ಭಾರತೀಯ ಹೋಟೆಲ್‌ಗಳ ಮಾಲೀಕರು ದಾರಿಹೋಕರನ್ನು ಕರೆದು ಪುಕ್ಕಟೆ ಊಟ ನೀಡಿದ್ದು ಅಮೆರಿಕನ್‌ರಿಗೆ ಅಚ್ಚರಿಯಾಗಿ ಕಂಡಿತ್ತು. ಅಮೆರಿಕದಲ್ಲಿ ಯಾವುದೂ ಪುಕ್ಕಟೆ ಸಿಗುವುದಿಲ್ಲ. ಸಲಹೆ, ಉಪದೇಶ ಕೂಡ. ಇವುಗಳಿಗೂ ‘ಕನ್ಸಲ್ಟೆನ್ಸಿ ಫೀಸು’ಎಂದು ದುಡ್ಡು ಎತ್ತುತ್ತಾರೆ. ಆದರೆ ಮಾನವೀಯತೆ ಮೆರೆಯಬೇಕಾದ ಕಡೆಗಳಲ್ಲಿ ಹಣ ಸುಮ್ಮನಾಗಬೇಕಾಗುತ್ತದೆಂಬ ಸರಳ ಸತ್ಯ ಅವರಿಗೆ ಅರ್ಥವಾಗುವುದಿಲ್ಲ.
ಕಟ್ರಿನಾ ದುರಂತ ಅಮೆರಿಕದ ಶ್ರೀಮಂತಿಕೆಯ ಜತೆ ಸಣ್ಣತನವನ್ನು, ಬಲಿಷ್ಠ ದೇಶವೆಂಬ ಅಗ್ಗಳಿಕೆಯ ಜತೆ ಬಲಹೀನತೆಯನ್ನು ಹಾಗೂ ಮುಂದುವರಿದ ರಾಷ್ಟ್ರವೆಂಬ ಬಿಗುಮಾನದ ಜತೆ ಎಲ್ಲೂ ಕಾಣದ ಸಂಕುಚಿತತೆ, ಸ್ವಾರ್ಥ, ಪೈಶಾಚಿಕತೆ, ವರ್ಗ ಸಂಘರ್ಷ, ಹೃದಯಹೀನತೆ ಹಾಗೂ ಅಮಾನವೀಯ ಮುಖವನ್ನು ಬಹಿರಂಗಗೊಳಿಸಿದೆ. ಇದು ನಾಚಿಕೆಗೇಡು.
(ಸ್ನೇಹಸೇತು : ವಿಜಯ ಕರ್ನಾಟಕ)











Click it and Unblock the Notifications