ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾವುಕತೆ ನಮ್ಮನ್ನು ಬಂಧಿಸುವ ಬಗೆ...

By Staff
|
Google Oneindia Kannada News

ಕಣ್ಣೀರು ಖಡ್ಗಕಿಂತ ಹರಿತ... !?

ಇದೇನಿದು, ಪರಿಚಿತ ನಾಣ್ಣುಡಿಯನ್ನೇ ಸ್ವಲ್ಪ ಬದಲಾಯಿಸಿದ ಹಾಗಿದೆ ಅಂದಿರಾ? ಕಣ್ಣೀರು ಹೆಣ್ಣಿನ ಆಯುಧ ಅಂದ್ರೆ ಬಹುಶಃ ಸಮಂಜಸವಾದೀತೇನೊ. ಅಥವಾ ಕೊನೆಪಕ್ಷ ಗಂಡಸರಂತೂ, ಹೌದುಹೌದು ಎಂದು ತಟ್ಟನೆ ಅದನ್ನು ಅನುಮೋದಿಸಬಹುದು. ಕಣ್ಣೀರು ಹೆಂಗಸರ ಆಯುಧವಿರಬಹುದು, ಆದರೆ ಮುನಿಸು ತೋರಿಸುವುದರಲ್ಲಿ ಗಂಡಸರೇನು ಕಡಿಮೆಯಲ್ಲ ಬಿಡಿ. ಇರಲಿ, ನಾನು ಬರೆಯಹೊರಟಿರುವುದು ಕಣ್ಣೀರಿನ ಬಗ್ಗೆ ಅಲ್ಲ, ಯಾರು ಹೆಚ್ಚು ಕಣ್ಣೀರು ಸುರಿಸುತ್ತಾರೆ ಎಂಬ ವಾದಕ್ಕೂ ಅಲ್ಲ, ಭಾವುಕತೆ ಬಗ್ಗೆ, ಅಥವಾ ಒಂದು ಅಭಿವ್ಯಕ್ತಿಯಾಗಿ ಅದನ್ನು ನಾವೆಲ್ಲ ಅನುಭವಿಸುವ ಬಗ್ಗೆ.

ಭಾವುಕತೆ ಬಹು ರಸಗಳನ್ನೊಳಗೊಂಡದ್ದು ಎಂದರೆ ತಪ್ಪಾಗಲಾರದು. ಭಾವುಕತೆಯ ಬಗ್ಗೆಯೇ ವ್ಯಾಖ್ಯಾನ ಮಾಡುತ್ತ ಹೋದರೆ ಅದರಲ್ಲಿ ಒಂದನ್ನೊಂದು ಒಳಗೊಂಡಂತೆ ನವರಸಗಳಗಳ ದರ್ಶನವೂ ಆಗಬಹುದೇನೊ. ಆದರೆ ನವರಸಗಳನ್ನು ಒತ್ತಟ್ಟಿಗಿಟ್ಟು, ಭಾವುಕತೆ ಬಗ್ಗೆ ನನ್ನ ಒಂದೆರಡು ಅನಿಸಿಕೆಗಳು, ಅನುಭವಗಳನ್ನು ಮಾತ್ರ ಇಲ್ಲಿ ನಮೂದಿಸಲಿದ್ದೇನೆ. ಇದು ನಿಮ್ಮ ಅನುಭವ-ಅನಿಸಿಕೆಗಳಿಗೆ ತಾಳೆ ಹೊಂದಲೂಬಹುದು!

ಯಾಕೊ ಏನೋ ಚಿಕ್ಕವರಿದ್ದಾಗ ಅಳದಿದ್ದರೂ ಸರಿ, ಹುಡುಗಿಯರನ್ನು ಅಳುಮುಂಜಿ ಎಂದೂ, ಗಂಡು ಮಕ್ಕಳನ್ನು ಅತ್ತಾಗ ‘ಏ ಏನಿದು ಹೆಣ್ಣುಮಕ್ಕಳಂಗೆ ಅಳ್ತೀಯಾ’ ಅಂತ ರೇಗಿಸೋದು ನಮಗೆಲ್ಲ ಗೊತ್ತಿರುವುದೇ. ಕೆಲವೊಮ್ಮೆ ಭಾವುಕರಾಗೋದು ಗಂಡಸರೇ ಜಾಸ್ತಿ, ಕೆಲವರು ಭಾವುಕತೆಯನ್ನು ಮೇಲೆ ತೋರಿಸಿದರೆ ಇನ್ನುಳಿದವರು ಅದುಮಿಟ್ಟುಕೊಳ್ಳುತ್ತಾರೆ ಅಷ್ಟೆ. ಎಲ್ಲರಿಗೆ ಗೊತ್ತಿರೋ ವಿಷಯವೇ ಇದು. Emotional/Sentimental ಸಿನೆಮಾಗಳನ್ನು ನೋಡುವಾಗ ಉದ್ದಕ್ಕೂ ಕಣ್ಣೀರು ಬರುತ್ತಿರುತ್ತದೆ, ಕೆಲವರು ಅಂತಹ ಸನ್ನಿವೇಶಗಳಲ್ಲಿ ನಕ್ಕುಬಿಡುವುದೂ ಉಂಟು. ಹಾಗಾದರೆ ಅವರು ಭಾವುಕರಲ್ಲವೆ ಎಂದು ಪ್ರಮಾಣೀಕರಿಸಿದರೆ, ಅದು ಬೇರೆಯೇ ಆಗಿರುತ್ತದೆ!

ಸಾವಿನ ಮನೆಯಲ್ಲಿ ಕಂಡುಬರುವ ಕಣ್ಣೀರಂತೂ... ಅಬ್ಬಾ ಹೃದ್ರಾವಕ, ಅದು ನಮ್ಮ ಮೈನಡುಗಿಸಿಬಿಡುತ್ತದೆ. ಸಾವು ಎಂದಾಕ್ಷಣ ಮಾತು ಆಧ್ಯಾತ್ಮದ ಕಡೆ ತಿರುಗುವುದು ಸಹಜ, ಒಮ್ಮೆ ಹೀಗೆ ಅಧ್ಯಾತ್ಮ ಅದೂ ಇದೂ ಎಂದು ಪ್ರತಿಪಾದಿಸುತ್ತ ನನ್ನದೇ ಸಾವಿನ ಬಗ್ಗೆ ಮಾತನಾಡಿ (ಅಧಿಕಪ್ರಸಂಗ ಮಾಡಿ) ಹಿರಿಯರ ಸಿಟ್ಟಿಗೆ ಕಾರಣಳಾಗಿದ್ದೆ. ನನ್ನ ಅಭಿಪ್ರಾಯದಂತೆ, ಸಾವಿನ ಕುರಿತು ಚಿಂತೆಗಿಂತ ಜೀವನಪ್ರೀತಿಯ ಆನಂದದಲ್ಲಿ ಮುಳುಗಿರುವುದು ಒಳ್ಳೆಯದು. ಅದಕ್ಕೆ ಸುಲಭಸೂತ್ರವಿದೆ- Live and let others live.

ಮೊದಲನೆಯದನ್ನು ಬಹಳ ಚೆನ್ನಾಗಿಯೇ ಮಾಡ್ತೀವಿ ಆದರೆ ನಂತರದ್ದು ಸ್ವಲ್ಪ ಕಷ್ಟ. ಆದರೂ ಯಾರು ಮಾಡಲೊಲ್ಲರು ಎಂದು ಖಂಡಿಸುವ ಹಾಗಿಲ್ಲ ಕೂಡ, ಬೇಕಾದಷ್ಟು ಜನ ಲೋಕದಲ್ಲಿ ಇದನ್ನೂ ಖುಷಿಯಿಂದ ಪಾಲಿಸುವುದನ್ನು ನಾವೇ ಕಂಡಿಲ್ಲವೇ?

ಅದೇನೋ ಕೆಲವೊಂದು ಕಡೆ ಕಣ್ಣೀರು ಬರಲೇಬೇಕೆಂಬುವುದು ಬ್ರಹ್ಮಲಿಖಿತವಾಗಿದೆಯೋ ಏನೋ. ಬೆಂಗಳೂರಿನಲ್ಲಿ ನೌಕರಿ ಸಿಕ್ಕಾಗಿನಿಂದಲೂ ವಾರಂತ್ಯದ ಮೈಸೂರು-ಬೆಂಗಳೂರು ರೈಲು/ಬಸ್ಸುಗಳ ಖಾಯಂ ಗಿರಾಕಿಗಳ ಪೈಕಿ ನಾನು ಒಬ್ಬಳು. ಇರುವ ಎಲ್ಲ ಭಾನುವಾರವನ್ನು ಲೆಕ್ಕಿಸಿದರೂ, ಎಷ್ಟು ಸಲ ಮೈಸೂರಿಂದ ಬೆಂಗಳೂರಿಗೆ ಹೋಗಿಲ್ಲ? ಆಗಲೂ ಸಹ ಮನೆಯವರಿಗೆಲ್ಲ, ಹೋಗಿ ಬರುವೆ ಎಂದು ಹೇಳಿಯೇ ಹೊರಡುವುದು, ಆದರೆ ಮಡಿಲು ಅಕ್ಕಿ, ದೇವರಿಗೆ ಪ್ರತ್ಯೇಕ ಪೂಜೆ ಇವೆಲ್ಲ ಇರುವುದಿಲ್ಲವಷ್ಟೆ. ಹೆಣ್ಣಾದರು ಕೂಡ ಎಲ್ಲದಕ್ಕೂ ಅಳುವಂಥವರ ಗುಂಪಿಗೆ ಸೇರಿದವಳಲ್ಲ ನಾನು. ಅದರಲ್ಲೂ, ಮದುವೆ ಮಾರನೆಯ ದಿನ ತವರು ಬಳಗದವರೆಲ್ಲ ಕೈಬೀಸಿ ಬೀಳ್ಕೊಡುವಾಗ ಈ ಮನೆಯೊಂದಿಗಿನ ನನ್ನ ಋಣ ಮುಗಿಯಿತೆನೋ ಎನ್ನುವ ಹಾಗೆ ಒಮ್ಮೆಲೆ ಉಮ್ಮಳಿಸಿ ಬರುವ ದುಃಖದ ಜೊತೆಗಿನ ಕಣ್ಣೀರನ್ನು ನೆನಸಿದರೆ ನನಗಿಂದೂ ಸಹಾ ಅಚ್ಚರಿಯೇ!

ನಮ್ಮಲ್ಲಿ ಬಹಳಷ್ಟು ಜನ ಕಥೆ ಓದುವ ಗೀಳಿನವರಿದ್ದೇವಲ್ಲ? ಒಮ್ಮೊಮ್ಮೆ ಓದುತ್ತ, ಓದುತ್ತ ದುಃಖ ಒಳಗಿಂದೊಳಗೆ ಉಕ್ಕಿಉಕ್ಕಿ ಬರುತ್ತದೆ. ಅದೆಲ್ಲ ಯಾಕೆ, ಕೆಲವರಿಗೆ ಭಿಕ್ಷುಕರನ್ನು ಕಂಡರೂ ಪಾಪ ಅನ್ನಿಸುವುದು, ಇನ್ನು ಒಂದಷ್ಟು ಜನರಿಗೆ ಅದು ಬಹಳ ಮಾಮೂಲಿ ವಿಷಯ, ಅದೆಲ್ಲ ಅವರವರ ಹಣೆಬರಹವೆನ್ನುವಷ್ಟು! ಮಾನಸಿಕ ತಜ್ಞರ ಪ್ರಕಾರ, ಭಾವುಕತನಕ್ಕೆ ಅರ್ಪಿಸಿಕೊಳ್ಳುವುದು ನಾವು ನಮ್ಮನ್ನು ಅವರ ಜಾಗದಲ್ಲಿಟ್ಟು ಪರೀಕ್ಷಿಸಿಕೊಂಡಾಗ ಮಾತ್ರ (ಸುಧಾಮೂರ್ತಿ ಅವರು ಬರೆದ ‘ಪರಿಧಿ’ ಎಂಬ ಕಥೆ ನನಗಿಲ್ಲಿ ನೆನಪಾಗುತ್ತದೆ). ಕೆಲವರಿಗೆ ಅದು ಹೆಮ್ಮೆಯ ವಿಷಯವಾದರೆ ಇನ್ನುಳಿದವರಿಗೆ ಅದು ನಾಚಿಕೆಯ ವಿಷಯವೆನಿಸಬಹುದು, ಎರಡನೆಯ ಗುಂಪಿನವರು, ನಾನೆಲ್ಲಿ ಅಳುತ್ತಿದ್ದೇನೆ? ಎಂದು ವಾದಿಸಿಬಿಡುತ್ತಾರೆ.

ಕಣ್ಣೀರು ಬೇಕೆಂದಾಕ್ಷಣ ಬರುವುದೂ ಅಲ್ಲ, ಮತ್ತೊಂದು ಅಚ್ಚರಿಯೆಂದರೆ ಅದು ನಮ್ಮ ಹಿಡಿತಕ್ಕೆ ಸಿಗದಂತಹ ವಸ್ತುವೂ ಕೂಡ. ಕೆಲವೊಂದು ಸಲ ನೆನಪುಗಳನ್ನು ಕದಡುತ್ತಿದ್ದರೆ ತಾನೇ ತಾನಾಗಿ, ಕಂಬನಿ ಹರಿದು ಬಂದುಬಿಡುತ್ತದೆ. ಈಗಲೂ ಮನಸ್ಸಿಗೆ ತುಂಬ ಹತ್ತಿರವಾಗಿದ್ದವರ ಸಾವು ನಮಗೆ ಗೊತ್ತಿಲ್ಲದ ರೀತಿ ಕಣ್ಣಲ್ಲಿ ನೀರು ತರಿಸುತ್ತದೆ. ಬರೀ ಅಷ್ಟೇ ಅಲ್ಲ, ಬಹಳಷ್ಟು ಸಲ ನಮ್ಮ ಎಕಾಗ್ರತೆಗೂ ಅದು ಭಾರೀ ಪ್ರಾಮಾಣದ ಭಂಗ ತರುವುದುಂಟು.

ನನ್ನ ಸ್ನೇಹಿತೆಯ ತಾಯಿಯೊಬ್ಬರು ತಿರುಪತಿ ತಿಮ್ಮಪ್ಪನ ದರ್ಶನವಾದಾಗ ಸಂತಸದಿಂದ ಅಕ್ಷರಶಃ ಆನಂದಬಾಷ್ಪ ಸುರಿಸಿದ್ದರೆಂದು ಕೇಳಿದ್ದೆ. ಆನಂದಬಾಷ್ಪ ಎಂದರೆ ಇನ್ನು ತುಂಟತನದಲ್ಲೇ ಇರುವ ನನಗೆ ಈವರೆಗೂ ಅನುಭವವಾಗಿಲ್ಲ, ಇದನ್ನೆಲ್ಲ ಸವಿಯಲು ತಾಯಿಹೃದಯ ಬೇಕೇನೋ? ಹತ್ತಾರು ವರ್ಷಗಳ ನಂತರ ಸಂಧಿಸುವ ಸ್ನೇಹಿತರಿಗೂ ಭೇಟಿಯ ಅ ಕ್ಷಣದಲ್ಲೊಮ್ಮೆ ಆನಂದಬಾಷ್ಪ ಬರಬಹುದು. ಬಹಳಷ್ಟು ಸಲ ನಾನು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆಗಿನ ಪುಸ್ತಕಗಳು ಓದುವಾಗಲೂ ಸಹ ಮನಸ್ಸಿನಲ್ಲಿ ಎನೋ ಒಂದು ರೀತಿಯ ಭಾವುಕತೆ ತುಂಬಿ ಬರುತ್ತದೆ.

ನಮ್ಮಲ್ಲಿ ಅಳುವವರಷ್ಟೇ ಭಾವುಕರೆನ್ನುವುದಲ್ಲ, ಬಹಳಷ್ಟು ಮಂದಿ, ಕೋಪದ ಮೂಲಕವೂ ಇದನ್ನು ತೋರಿಸುವುದುಂಟು. ಆಗಲೇ ಹೇಳಿದ ಹಾಗೆ ಕೋಪ ಸಹ ಭಾವುಕತೆಯ ಒಂದು ವಿಧ. ತುಂಬಾ ವರ್ಷಗಳ ಹಿಂದಿನ ಮಾತು - ಶಾಲೆಯಲ್ಲಿ ಸಹಪಾಠಿಯೊಬ್ಬ ಯಾರೋ ತನ್ನ ತಲೆಯ ಮೇಲೆ ಹೊಡೆದಾಗ ಸಿಟ್ಟಿಗೆದ್ದು, ಜಗಳವಾಡಿದ್ದು ನನಗಿನ್ನೂ ನೆನಪಿದೆ. ಅದು ಆತನ ತಲೆಗೆ ಆದ ಪೆಟ್ಟಿಗಲ್ಲ, ತಲೆಯ ಮೇಲೆ ಹೊಡೆಯುವುದು ತಬ್ಬಲಿಗಳಿಗೆ ಮಾತ್ರ ಎಂಬ ಆತನ ನಂಬಿಕೆಯಿಂದ. ಅದು ಆತನಿಗೆ ತಂದೆತಾಯಿಗಳೊಂದಿಗಿದ್ದ ಭಾವುಕ ಸಂಬಂದವನ್ನು ಬಿಂಬಿಸುವುದೂ ಹೌದು.

ಮೊನ್ನೆಯಷ್ಟೇ ನನ್ನೊಬ್ಬ ಸ್ನೇಹಿತ There is no fun when you are writing about sadness without having to live through it, and now that you are experiencing all this I am sure it is so tougher to write. But test your mettle now & write about the bouts of depression and loss of concentration ಅಂತ ಹೇಳಿದಾಗ ನನಗೆ ಕೋಪದ ಜೊತೆ ಅಸಹಾಯಕತೆ ಮೂಡಿಸಿತ್ತು.

ಆ ಮಾತಿನ ಜೊತೆಗೆ ನನ್ನ ನೆನಪುಗಳೊಂದಿಗಿನ, ಯೋಚನೆಗಳು ಈ ಲೇಖನದ ಹುಟ್ಟಿಗೆ ಕಾರಣ ಎಂದರೂ ಸರಿಯೆ. ಕೆಲವೊಮ್ಮೆ ನೆನಪು ಸವಿ ಕೆಲವೊಮ್ಮೆ ದೌರ್ಭಾಗ್ಯವೋ ಅನ್ನಿಸಿಬಿಡುತ್ತದೆ. ಕಲ್ಪನೆಗಳಿಗಿಂತ ಸ್ವಂತ ಅನುಭವಗಳು ಒಳ್ಳೆಯ ಬರಹಗಳಾಗುತ್ತವೆ ಎಂದರೆ ಅದು ಅಕ್ಷರಶಃ ಸತ್ಯ.

ಬಹುಶಃ ಈ ಲೇಖನವನ್ನು ಬರಹದಲ್ಲಿ ಟೈಪ್‌ ಮಾಡದೆ, ಲೇಖನಿ ಹಿಡಿದಿದ್ದರೆ, ನನ್ನ ಅಶ್ರುಧಾರೆಯು ಶಾಯಿಯಿಂದ ಬರೆಯಲ್ಪಟ್ಟ ಅಕ್ಷರಗಳನ್ನು ಅಳಿಸಿಬಿಡುತ್ತಿದ್ದವೋ ಏನೊ. ಮೊನ್ನೆಮೊನ್ನೆ ಅಂದರೆ ಒಂದು ವಾರದ ಹಿಂದೆಯಷ್ಟೆ ಒಂದು ಅಪಘಾತದಲ್ಲಿ ಸಾವಿಗೀಡಾದ ಮೈಸೂರಿನ ಸಿ.ಎಫ್‌.ಟಿ.ಆರ್‌.ಐ ಹಿರಿಯ ವಿಜ್ಞಾನಿ ಡಾ।। ಎಂ.ಎನ್‌.ರಮೇಶ್‌ (6 ವರ್ಷಗಳ ಹಿಂದೆ ನನ್ನ ಪ್ರೊಜೆಕ್ಟ್‌ಗೈಡ್‌ ಆಗಿದ್ದರು) ಅವರ ನಿಧನವಾರ್ತೆ ಕೇಳಿ ನನಗೆ ಸಿಡಿಲೆರಗಿದಂತಾಯಿತು.

ಆ ಸುದ್ದಿಯನ್ನು ನೆನೆದರೆ ನನ್ನ ಮನಸ್ಸು ಈಗಲೂ ಭಾರವಾಗುತ್ತದೆ. ಮನಸ್ಸಿನ ಜೊತೆಗೆ ಕೈಗಳೂ ಸಹ ಕೆಲಸ ಮಾಡಲು ಹಿಂಜರಿಯುತ್ತವೆ. ಅತೀವ ಉತ್ಸಾಹಿಯಾಗಿ, ಬುದ್ಧಿವಂತಿಕೆ, ಕಟ್ಟುನಿಟ್ಟು, ಸಮಯನಿಷ್ಠೆ ಇವೆಲ್ಲವನ್ನೂ ತಮ್ಮದಾಗಿಸಿಕೊಂಡಿದ್ದ ಆ ಮಹಾನ್‌ ವ್ಯಕ್ತಿಗೆ ನನ್ನ ಈ ಲೇಖನ ಅರ್ಪಿತ. ಭಾವುಕತೆ ಬಗ್ಗೆ ಬರೆಯುತ್ತಲೇ ಒಂದು ಭಾವಪೂರ್ಣ ಶೃದ್ಧಾಂಜಲಿ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X