• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಡುಪಿ ‘ಗೋಪುರ’ : ಒಂದು ಜಿಜ್ಞಾಸೆ

By Staff
|

ಡಾ. ಎಂ. ಚಿದಾನಂದಮೂರ್ತಿ

KanakaDasaruಉಡುಪಿಗೆ ನಾನು 1953-2003 ಈ ಅವಧಿಯಲ್ಲಿ ಆರೆಂಟು ಬಾರಿ ಹೋಗಿದ್ದರೂ ಅಲ್ಲಿನ ಕೃಷ್ಣ ದೇವಾಲಯದ ಕನಕನ ಕಿಂಡಿಯನ್ನು ನೋಡಿಕೊಂಡು ಬಂದೆನೇ ಹೊರತು ಆ ‘ಕನಕನ ಕಿಂಡಿ’ಯ ಮುಂಭಾಗದ ಗೋಪುರವನ್ನು ಎಲ್ಲ ಜಾಗಗಳಂತೆ ನೋಡಿದ್ದು ಬಿಟ್ಟರೆ ಅದನ್ನು ಕನಕ ಗೋಪುರ ಎಂದು ಅಲ್ಲಿ ಯಾರೂ ತೋರಿಸಲೂ ಇಲ್ಲ, ಹೇಳಲೂ ಇಲ್ಲವಾದ್ದರಿಂದ ಆ ಗೋಪುರ ನನ್ನ ಮನಸ್ಸಿನಲ್ಲಿ ಉಳಿದಿಲ್ಲ- ‘ಕನಕನ ಕಿಂಡಿ’ಯ ಚಿತ್ರ ಮಾತ್ರ ಅಚ್ಚಳಿಯದೆ ನಿಂತಿದೆ. 1979ರಲ್ಲಿ ಅಚ್ಚಾಗಿರುವ ಮೈಸೂರು ವಿಶ್ವವಿದ್ಯಾಲಯದ ಕರ್ನಾಟಕ-ಕನ್ನಡ ವಿಷಯವಿಶ್ವಕೋಶದಲ್ಲಿ ಕನಕನ ಕಿಂಡಿಯ ಉಲ್ಲೇಖವಿದೆಯೇ ಹೊರತು ಕನಕ ಗೋಪುರದ ಉಲ್ಲೇಖವಿಲ್ಲ. ಅಷ್ಟೇಅಲ್ಲ , ಈಗ ಕೆಡವಲಾಗಿರುವ ಹಳೆಯ ಗೋಪುರದ ಚಿತ್ರ ಅಲ್ಲಿದ್ದು (ಪು .88),ಅದರ ಮೇಲೆ ‘ಶ್ರೀ ಕೃಷ್ಣ ದೇವರ ಮಠ , ಉಡುಪಿ’ ಎಂದು ಮಸಿಯಲ್ಲಿ ಬರೆದಿದೆ. 1948ರಲ್ಲಿ ಅಚ್ಚಾಗಿರುವ ಪುಸ್ತಕದಲ್ಲಿ ಅದನ್ನು ‘ಶ್ರೀ ಕೃಷ್ಣ ಮಠದ ಗೋಪುರ’ ಎಂದಿದೆ. ಆ ಗೋಪುರವನ್ನು ನಿರ್ಮಾಣ ಮಾಡಲು ತೊಡಗಿದಾಗ, ಆ ಗೋಪುರವು ಕನಕನ ಹೆಸರಿನದೆಂದೂ ಅದನ್ನು ಕೆಡವಿದ್ದರಿಂದ ಕನಕದಾಸರಿಗೆ ಅಪಚಾರ ಎಸಗಲಾಗಿದೆಯೆಂದೂ ಸಮಾಜದ ಒಂದು ವರ್ಗದಿಂದ ತೀವ್ರ ಪ್ರತಿಭಟನೆಗಳು ನಡೆದಿವೆ. ಶ್ರೀ ಪೇಜಾವರ ಮಠಾಧೀಶರೂ ಸೇರಿದಂತೆ ಹಲವರು ಅಂತಹ ಅಪಚಾರವೇನೂ ಆಗಿಲ್ಲವೆಂದು ಹೇಳಿಕೆ ನೀಡಿದರು. ಆ ಎಲ್ಲ ಗೊಂದಲಗಳ ನಿವಾರಣೆಗಾಗಿ ಬೆಂಗಳೂರಿನ ಸಾಂಸ್ಕೃತಿಕ ಸಂಸ್ಥೆ ‘ಸಾಮರಸ್ಯ ವೇದಿಕೆ’ಯು ನ್ಯಾ. ಎಂ.ರಾಮಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಎಂ. ವೆಂಕಟಸ್ವಾಮಿ, ಎಂ. ಚಿದಾನಂದಮೂರ್ತಿ, ಜೆ.ಚಂದ್ರಶೇಖರಯ್ಯ, ಡಾ.ಕೆ .ದ್ವಾರಕೀಶ್‌ನಾಥ್‌, ಡಾ. ಮೋಹನ್‌ ಕೋಟ್ಯಾನ್‌, ವೆಂಕಟರಾಮ್‌ ಇವರನ್ನು ಸದಸ್ಯರಾಗುಳ್ಳ ಒಂದು ಸತ್ಯಶೋಧನ ಸಮಿತಿಯನ್ನು ರಚಿಸಿತು. (ಅವರಲ್ಲಿ ಇಬ್ಬರು ಉಡುಪಿಗೆ ಬರಲಾಗದಿದ್ದರೂ ಸಮಿತಿಯ ವರದಿಗೆ ಅವರ ಬೆಂಬಲವಿದೆ). ಆ ಸಮಿತಿಯು ಉಡುಪಿಗೆ ಹೋಗಿ ಅಲ್ಲಿ ಸ್ಥಳ ಪರಿಶೀಲನೆ ನಡೆಸಿ, ಮೂವರು ಮಠಾಧೀಶರನ್ನೂ, ಎಂಬತ್ತಕ್ಕೆ ಮೇಲ್ಪಟ್ಟು ಸಾರ್ವಜನಿಕರನ್ನೂ, ಅಂತೆಯೇ ಬೆಂಗಳೂರಿನಲ್ಲಿ ಕಾಗಿನೆಲೆ ಪೀಠದ ಶ್ರೀ ಬೀರೇಂದ್ರ ತಾರಕಾನಂದ ಸ್ವಾಮಿಗಳನ್ನು ಸಂದರ್ಶಿಸಿದೆ. ಸಾರ್ವಜನಿಕರಿಗೆ ಸಮಿತಿ ಮುಂದೆ ಸಾಕ್ಷ್ಯನೀಡಲು ನಿರ್ದಿಷ್ಟ ಜಾಗ, ಸ್ಥಳ, ಕಾಲವನ್ನೂ ಪತ್ರಿಕೆಗಳ ಮೂಲಕ ತಿಳಿಸಲಾಗಿತ್ತು. ಆ ಸಮಿತಿಯು ಈಚೆಗೆ ಸುದ್ದಿಗೋಷ್ಠಿ ನಡೆಯಿಸಿ ತಾನು ಸಿದ್ಧಪಡಿಸಿದ ಶ್ರಮಪೂರ್ಣ ವಸ್ತುನಿಷ್ಠ ವರದಿಯನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿದರೂ ಕೆಲವು ರಾಜಕೀಯ- ಸಾಮಾಜಿಕ ಮುಖಂಡರು ತಮ್ಮ ಹಿಂದಿನ ನಿಲುವಿಗೇ ಬದ್ಧರಾಗಿರುವುದು ಈಗಾಗಲೇ ಪ್ರಸಿದ್ಧವಾಗಿದೆ. ಮುಖ್ಯ ಆಧಾರವಾಗಿ ಸಮಿತಿಯ ವರದಿಯನ್ನಿಟ್ಟುಕೊಂಡು ಈ ಲೇಖನದಲ್ಲಿ ಸಾರ್ವಜನಿಕರಿಗೆ ನಿಜ ಚಿತ್ರವನ್ನು ನೀಡುತ್ತಿದ್ದೇನೆ.

ಕಾರ್ಯವ್ಯಾಪ್ತಿ : ಸಮಿತಿಯ ಮೂರು ವಿಷಯಗಳ ಕಡೆ ಗಮನವನ್ನು ಕೇಂದ್ರೀಕರಿಸಿ ಮಾಹಿತಿ (ಮೌಖಿಕ ಹಾಗೂ ದಾಖಲಿತ) ಸಂಗ್ರಹಿಸಿತು.

  • ಆ ಹಳೆಯ ಗೋಪುರಕ್ಕೆ ಈ ಹಿಂದೆ ‘ಕನಕ ಗೋಪುರ’ ಎಂಬ ಹೆಸರಿತ್ತೇ ?
  • ಆ ಗೋಪುರ ಎಷ್ಟು ಪ್ರಾಚೀನ ?
  • ಅಷ್ಟ ಮಠಗಳಿಂದ ಗೋಪುರ ಕೆಡವಿರುವುದೂ ಸೇರಿದಂತೆ ಕನಕರಿಗೆ ಅಪಮಾನ ಆಗಿದೆಯೇ ?
‘ಕನಕ ಗೋಪುರ ’ : ಈಚಿನ ಹೆಸರು- ಉಡುಪಿಯಲ್ಲೇ ಅಥವಾ ಆ ಪರಿಸರದಲ್ಲೇ ಹುಟ್ಟಿ ಬೆಳೆದ ಎಲ್ಲರ ಪ್ರಕಾರ, ಈಗ ಕೆಡವಿರುವ ಗೋಪುರಕ್ಕೆ ‘ಕನಕ ಗೋಪುರ’ ಎಂಬ ಹೆಸರೇ ಇರಲಿಲ್ಲ. ಅದನ್ನು ಜನರು ‘ಗೋಪುರ’ ಎಂದು ‘ಕಟ್ಟಂಜರ’ ಎಂದು ಕರೆಯುತ್ತಿದ್ದರು. ‘ಕಟ್ಟಂಜರ’ ಎಂಬ ತುಳುಪದಕ್ಕೆ ಚಾಪೆಯ ಗುಡಿಸಲು ಎಂದರ್ಥ. ಹಿಂದೆ ಕನಕನ ಕಿಂಡಿಯ ಮುಂಭಾಗಕ್ಕೆ ಕೃಷ್ಣ ದರ್ಶನಕ್ಕಾಗಿ ಬಂದು, ಪರ್ಯಾಯ ಪೀಠವನ್ನೇರುವ ಸ್ವಾಮಿಗಳು ಮೊದಲ ದಿನ ಕಾಯುತ್ತಿರುವಾಗ ಅವರಿಗಾಗಿ ಮೇಲಿನ ಗೋಪುರವಿದ್ದ ಜಾಗದಲ್ಲಿ ಬಯಲಲ್ಲಿ ನೆರಳಿಗಾಗಿ ತಾತ್ಕಾಲಿಕ ಚಾಪೆಯ ಗುಡಿಸಲು ಕಟ್ಟುತ್ತಿದ್ದರು. ಅದೇ ‘ಕಟ್ಟಂಜರಿ’. ಮುಂದೆ, 1910-1912ರಲ್ಲಿ ಕನಕನ ಕಿಂಡಿಯ ಮೂಲಕ ಕೃಷ್ಣ ದರ್ಶನವನ್ನು ಮಾಡುವ ಜನರ ನೆರಳಿಗಾಗಿ ಆ ಜಾಗದಲ್ಲಿ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಪೂರ್ಣ ತೀರ್ಥರು (ಜನನ ಕ್ರಿ.ಶ. 1874 ) ತಮ್ಮ ಎರಡನೆಯ ಪರ್ಯಾಯದಲ್ಲಿ ಕನಕನ ಕಿಟಕಿಯ ಇದಿರು ಗೋಪುರವನ್ನು ಕಟ್ಟಿಸಿದರು. ಆ ವಿಷಯ 1948 ರಲ್ಲಿ ಅಚ್ಚಾಗಿರುವ ಕೃತಿಯಲ್ಲಿ ನಮೂದಾಗಿದೆ. ಈಗ ಕೆಡವಲಾಗಿರುವ ಗೋಪುರಕ್ಕೂ ಕನಕದಾಸರಿಗೂ ಯಾವುದೇ ಸಂಬಂಧವಿಲ್ಲ. ಅಂತಹ ಸಂಬಂಧವಿದ್ದಿದ್ದರೆ ಕನಕನ ಕಿಂಡಿಯಂತೆ ಆ ಗೋಪುರವೂ ಜನರ ಮನಸ್ಸಿನಲ್ಲಿ ಬೇರೂರುತ್ತಿದ್ದಿತು. 1910-12ಕ್ಕಿಂತ ಹಿಂದಿನ ಯಾವ ದಾಖಲೆಯಲ್ಲೂ ಆ ಗೋಪುರದ ಹೆಸರಿಲ್ಲ ; ಇದು ಅನುಮಾನಕ್ಕೆ ಆಸ್ಪದವಿಲ್ಲದ ಸಂಗತಿ. ಕೆಲವೆಡೆ ಅದನ್ನು ‘ಶ್ರೀ ಕೃಷ್ಣ ಮಠದ ಗೋಪುರ ’ ಎಂದಿದೆ ಅಷ್ಟೇ .

ಅಪಚಾರ ಇಲ್ಲ ಎಂದರೆ, ಆ ಗೋಪುರದ ನಾಶದಿಂದ ಕನಕದಾಸರಿಗೆ ಯಾವುದೇ ಅಪಚಾರ ಆಗಿಲ್ಲ. ಕನಕನ ಕಿಂಡಿಯ ಮುಂದೆ ಅದು ಇತ್ತು ಎಂಬುದರಿಂದಲೇ ಅದು ಕನಕದಾಸರಿಗೆ ಸಂಬಂಧಪಟ್ಟುದಾಗಿರಲಿಲ್ಲ. ‘ಕನಕನ ಗೋಪುರ’ ಹೆಸರು ಇದ್ದಿದ್ದರೆ ಆ ಹೆಸರು ಬರಲು ಕಾರಣವೇನು ಎಂಬುದರ ಬಗ್ಗೆ ಯಾವುದಾದರೂ ದಂತಕತೆ ಇರುತ್ತಿತ್ತು. ಈಗ ಕೆಡವಿರುವ ಗೋಪುರ ಕ್ರಿ.ಶ. 1910-12 ರಲ್ಲಿ ಕಟ್ಟಿದ್ದು ಎಂಬುದರಲ್ಲಿ ಸಂದೇಹಕ್ಕೆ ಆಸ್ಪದವೇ ಇಲ್ಲ.

ಕನಕನ ಮಂಟಪ : ಕನಕನ ಕಿಂಡಿ ಮತ್ತು ಗೋಪುರಗಳ ಎದುರು, ಪಶ್ಚಿಮಕ್ಕೆ ಬೀದಿಯಲ್ಲಿ ಒಂದು ಹಳೆಯ ಹೆಂಚಿನ ಮನೆಯಾಂದಿತ್ತು. ಆ ಮನೆಯ ಹಳೆಯ ಚಿತ್ರಗಳಲ್ಲಿ ಅದು ‘ಕನಕನ ಮಂಟಪ ’ ಎಂದೇ ಹೆಸರಾಗಿತ್ತು . ಆ ಮನೆಯಲ್ಲಿ ಕನಕರು ಪೂರ್ವಾಭಿಮುಖವಾಗಿ ಕುಳಿತು ಕೃಷ್ಣಸ್ತೋತ್ರವನ್ನು ಮಾಡುತ್ತಿದ್ದರೆಂದು ಕತೆಗಳಿವೆ. ಅಲ್ಲಿ ಹಿಂದೆ ಸಂಸ್ಕೃತ ಪಾಠಗಳೂ ನಡೆಯುತ್ತಿದ್ದವು. ಆ ಮನೆಯಿದ್ದ ಜಾಗವನ್ನು ಶ್ರೀ ಮಧ್ವರಾಜರು ಉಡುಪಿಯ ಶಾಸಕರಾಗಿದ್ದಾಗ ಸರಕಾರ ತನ್ನ ವಶಕ್ಕೆ ತೆಗೆದುಕೊಂಡು ಅದನ್ನು ತೆಗೆದು ಅದರ ಜಾಗದಲ್ಲಿ ಒಂದು ಸುಂದರ ಮಂಟಪವನ್ನು ನಿರ್ಮಿಸಿ ಅದರಲ್ಲಿ ಕನಕದಾಸರ ಪುತ್ಥಳಿ ಸ್ಥಾಪಿಸಿತು. ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪನವರೇ ಅದನ್ನು 1965 ರಲ್ಲಿ ಅನಾವರಣಗೊಳಿಸಿದರು. ಆ ವರ್ಷ ಸರಕಾರ ಪ್ರಕಟಿಸಿರುವ ಕನಕದಾಸರ ಕೀರ್ತನೆಗಳು ಪುಸ್ತಕದಲ್ಲಿ ‘ಕನಕನ ಮಂಟಪ ’ ದ ಹಳೆಯ ಚಿತ್ರವಿದೆ. ಆ ಮಂಟಪ ಒಂದು ಹೆಂಚಿನ ಮನೆ ಆಗಿತ್ತು. ಉಡುಪಿಗೆ ಹೋದವರು ಕನಕನ ಕಿಂಡಿಯ ಜೊತೆ ಆ ಮಂಟಪವನ್ನೂ ದರ್ಶನ ಮಾಡುತ್ತಾರೆ. ಹಳೆಯ ‘ಕನಕನ ಮಂಟಪ’ ವನ್ನು ಕೆಡವಿದಾಗ ಯಾವುದೇ ಪ್ರತಿಭಟನೆಗಳೂ ನಡೆದಿಲ್ಲ. ನಡೆಯಬೇಕಾದ್ದೂ ಇರಲಿಲ್ಲ. ಬಸವನ ಬಾಗೇವಾಡಿಯಲ್ಲಿ ಸರಕಾರವು ಬಸವಣ್ಣನವರ ಮನೆಯನ್ನು ತನ್ನ ವಶಪಡಿಸಿಕೊಂಡು ಅದನ್ನು ಬೀಳಿಸಿದೆ. ಅಲ್ಲಿ ಮುಂದೆ ಅವರ ಸ್ಮಾರಕಭವನ ಬರಲಿದೆ.

ಬೀಳಿಸಿದ್ದು ಸರಿಯೇ ? : ಮೇಲೆ ಹೇಳಿದ ಗೋಪುರವನ್ನು ತೆಗೆಯಲು ಕಾರಣ, ನಮಗೆ ದೊರಕಿದ ವಿವರಣೆಯಂತೆ, ಅದರ ಮೇಲ್ಭಾಗ ಗಾರೆಯಿಂದ ನಿರ್ಮಾಣವಾಗಿದ್ದುದರಿಂದ ಗಾರೆಯೆಲ್ಲ ಉದುರುತ್ತಿತ್ತು ; ಕೆಲವು ಬೊಂಬೆಗಳು ಒಡೆದಿದ್ದವು; ಆ ಗಾರೆ ಬೊಂಬೆಗಳಿಗೆ ಮೇಲೆ ಹತ್ತಿ ಬಣ್ಣ ಬಳಿಯಲು ಜನ ಹೆದರುತ್ತಿದ್ದರು ; ಮಳೆಗಾಲದಲ್ಲಿ ಹುಲ್ಲು ಗಿಡ ಬೆಳೆದು ಒಳಗೆ ಸೋರುತ್ತಿತ್ತು. ಆ ಹಳೆ ಗೋಪುರ ನೂರು ವರ್ಷಗಳಿಗಿಂತ ಈಚಿನದಾಗಿದ್ದು (ಕ್ರಿ.ಶ. 1910-12) ಅದಕ್ಕೆ ಯಾವುದೇ ಐತಿಹಾಸಿಕ ಮೌಲ್ಯವೂ ಇಲ್ಲವಾದ್ದರಿಂದ ಕರ್ನಾಟಕ ಪ್ರಾಚ್ಯವಸ್ತು ಇಲಾಖೆಯ ಕಾನೂನಿನ ವ್ಯಾಪ್ತಿಗೆ ಬರುವುದಿಲ್ಲ. ಕಾನೂನು ಹೀಗಿದೆ- ‘ಪ್ರಾಚೀನ ಸ್ಮಾರಕ’ ಎಂದರೆ ಐತಿಹಾಸಿಕ, ಪುರಾತತ್ವ ಅಥವಾ ಕಲಾತ್ಮಕ ಆಸ್ಥೆಯುಳ್ಳಂಥ ಮತ್ತು ಒಂದು ನೂರು ವರ್ಷಗಳಿಗಿಂತಲೂ ಕಡಿಮೆಯಿಲ್ಲದೆ ಅಸ್ತಿತ್ವದಲ್ಲಿ ರುವ ಯಾವುದೇ ರಚನೆ ಅಥವಾ ನಿರ್ಮಿತಿ ಅಥವಾ ಸ್ಮಾರಕ....’

ಅಂತಹ ಗೋಪುರವನ್ನು ಕೆಡವಿ ಹೊಸ ಗೋಪುರವನ್ನು ನಿರ್ಮಿಸಲು ಅದಮಾರು ಮಠವು ಉಡುಪಿ ನಗರ ಸಭೆಯಿಂದ ಅನುಮತಿ ಪತ್ರ ಪಡೆದಿದೆ (ಅದರ ಪ್ರತಿ ನನ್ನಲ್ಲಿದೆ). ಈಗ ಕಟ್ಟುತ್ತಿರುವ ಹೊಸ ಗೋಪುರದ ನೀಲಿನಕ್ಷೆಯನ್ನು ಅದರ ಪಕ್ಕದಲ್ಲೇ ಪ್ರದರ್ಶಿಸಿದ್ದು ಅದಕ್ಕೆ ‘ಕನಕ ಗೋಪುರ’ ಎಂಬ ಹೆಸರನ್ನಾಗಲೇ ನೀಡಲಾಗಿದೆ. ಆ ಎಪ್ಪತ್ತು ಅಡಿ ಎತ್ತರದ ‘ಕನಕ ಗೋಪುರ’ವು ಉಡುಪಿಯ ಹೊರಗೆ ಎಲ್ಲಿ ನಿಂತರೂ ಕಾಣಿಸುವಂತಹ ಬೃಹತ್‌ ಕಟ್ಟಡವಾಗಿದೆ. ಶ್ರೀ ಕೃಷ್ಣ ದೇವಾಲಯಕ್ಕೆ ಒಂದು ಬಗೆಯ ತೋರ್ಬೆರಳು ಆ ‘ಕನಕ ಗೋಪುರ ’. ಕನಕ ಗೋಪುರ ಎಂಬ ಹೆಸರನ್ನು ಈಗ ಕೆಡವಲಾಗಿರುವ ಗೋಪುರಕ್ಕೆ ವಿವಾದ ಸೃಷ್ಟಿಸಿರುವ ಈಚಿನವರು ನೀಡಿದ್ದು ಎಂಬುದು ತೀರ ಸ್ಪಷ್ಟ. ‘ಕನಕನ ಕಿಂಡಿ’ ಯ ಮುಂದೆ ಇದ್ದ ಹಳೆಯ ಜೀರ್ಣಗೊಂಡ ಗೋಪುರವು ಈಗ ‘ಕನಕ ಗೋಪುರ’ ಎಂದು ಹೊಸ ಹೆಸರು ಪಡೆದು ರಾರಾಜಿಸಲಿದೆ.

ಅಷ್ಠ ಮಠಗಳಿಂದ ಗೌರವ : ಗೋಪುರವನ್ನು ಕೆಡವಿದ್ದರಿಂದ ಕನಕ ದಾಸರಿಗೆ ಏನೂ ಅಪಚಾರವಾಗಿಲ್ಲವೆಂಬುದು ಸ್ಪಷ್ಟಾತಿಸ್ಪಷ್ಟ . ಅದನ್ನು ಹೊರತುಪಡಿಸಿ, ಅಷ್ಟಮಠಗಳಿಂದ ಕನಕದಾಸರಿಗೆ ಇನ್ನೇನಾದರೂ ಅಪಚಾರ ಆಗಿದೆಯೇ ಎಂಬುದಕ್ಕೆ ಕೆಳಗಿನ ಮಾಹಿತಿ ನೋಡಿ .

  1. ಕನಕದಾಸರ ಭಕ್ತಿಗೆ ಒಲಿದ ಶ್ರೀಕೃಷ್ಣನು ಪಶ್ಚಿಮಕ್ಕೆ ತಿರುಗಿ ಪಶ್ಚಿಮದ ಗೋಡೆಯಲ್ಲಿ ‘ಬಿರುಕ’ ನ್ನು ಮಾಡಿಸಿದ ಸಂಗತಿಯಿರುವ ತಾಡೋಲೆ ಉಡುಪಿಯಲ್ಲಿದೆ. (ಅದರ ಪ್ರತಿ ನನ್ನಲ್ಲಿದೆ)
  2. ಕೃಷ್ಣನ ಎದುರು ಎರಡು ಕಿಂಡಿಗಳಿವೆ : ಗರ್ಭಗುಡಿಯಲ್ಲಿ ‘ನವಗ್ರಹ ಕಿಂಡಿ’, ಅದರ ಎದುರಿನ ಗೋಡೆಯಲ್ಲಿ ‘ಕನಕನ ಕಿಂಡಿ’ - ಆ ಕಿಂಡಿಗಳ ಮೂಲಕ ಭಕ್ತರು ಇಪ್ಪತ್ತ ನಾಲ್ಕು ಗಂಟೆಗಳೂ ಕೃಷ್ಣನ ದರ್ಶನ ಮಾಡಬಹುದು. ಈಚೆಗೆ ಕೆಲವರು ‘ಕನಕನ ಕಿಂಡಿ’ ಯನ್ನು ಬೇಕೆಂದೇ ‘ನವಗ್ರಹ ಕಿಂಡಿಯೆಂಬ’ ಹೊಸ ಹೆಸರಿಗೆ ಬದಲಾಯಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಇಂತಹ ಅಪ್ಪಟ ಸುಳ್ಳುಗಳಿಂದ ಜನರನ್ನು ದಾರಿ ತಪ್ಪಿಸಬಾರದೆಂದು ನನ್ನ ಸವಿನಯ ಪ್ರಾರ್ಥನೆ. ಅವೆರಡೂ ಬೇರೆ ಹಾಗೂ ಅವೆರಡೂ ಸುರಕ್ಷಿತ.
  3. ಹಳೆಯ ಗೋಪುರದ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಗೋಪುರದ ಎದುರು ಇರುವ ಕನಕನ ಮಂಟಪದಲ್ಲಿ ಮಾತ್ರವಲ್ಲ , ಕೃಷ್ಣ ದೇವಾಲಯದ ಒಳಗೆ ನಿರ್ಮಿಸಿರುವ ಭವ್ಯ ಸಭಾಂಗಣಕ್ಕೆ ಕನಕದಾಸರ ಹೆಸರಿಟ್ಟು ಅಲ್ಲಿ ಹಿಂದೆಯೇ ಕನಕನ ವರ್ಣಚಿತ್ರ ಮತ್ತು ಪುತ್ಥಳಿ ಇಡಲಾಗಿದೆ. ಅಲ್ಲಿ ಪ್ರವಚನ, ಉಪನ್ಯಾಸಗಳು ನಡೆಯುತ್ತವೆ. ಉಡುಪಿಯ ಶ್ರೀಕೃಷ್ಣ ದೇವಾಲಯದಲ್ಲಿ ಎಲ್ಲ ದಾಸರ ಕೀರ್ತನೆಗಳ ಜೊತೆ ಕನಕದಾಸರ ಕೀರ್ತನೆಗಳನ್ನೂ ಹಾಡಿಸುತ್ತಾರೆ; ಹಾಗೆ ಹಾಡಿರುವ ಇಬ್ಬರು ನಮಗೆ ಸಾಕ್ಷ್ಯ ನೀಡಿದವರಲ್ಲಿ ಕೆಲವರು.
  4. ಇದು ಬಹುಮುಖ್ಯ ವಿಷಯ : ಪರ್ಯಾಯ ಪೀಠವನ್ನೇರುವ ಸ್ವಾಮಿಗಳು ಇತರರ ಜೊತೆ ಮೆರವಣಿಗೆಯಲ್ಲಿ ಬಂದು ‘ಕನಕನ ಕಿಂಡಿ’ ಮೂಲಕ ಮೊದಲು ಕೃಷ್ಣನ ದರ್ಶನವನ್ನು ಮಾಡಿ ಆಮೇಲೆ ದೇವಾಲಯ ಪ್ರವೇಶಿಸುತ್ತಾರೆ. ಉಳಿದ ದಿನಗಳಲ್ಲಿಯೂ ಎಲ್ಲ ಸ್ವಾಮಿಗಳೂ ಕನಕನ ಕಿಂಡಿಯ ಮೂಲಕ ಮೊದಲು ಕೃಷ್ಣನ ದರ್ಶನವನ್ನು ಮಾಡಿಯೇ ದೇವಾಲಯ ಪ್ರವೇಶ ಮಾಡುವುದು: ಅಷ್ಟ ಮಠಾಧೀಶರೂ ಸೇರಿದಂತೆ ಎಲ್ಲ ಭಕ್ತರಿಗೂ ಶ್ರೀಕೃಷ್ಣನ ಮೊದಲ ದರ್ಶನವಾಗುವುದು ಕನಕನ ಕಿಂಡಿಯ ಮೂಲಕ ; ಕನಕನ ಮೂಲಕ : ಕನಕದಾಸರ ಸ್ಮರಣೆಯ ಮೂಲಕ. ಕನಕದಾಸರು ಹಾಗೂ ಅವರ ಬದುಕು ಶ್ರೀಕೃಷ್ಣ ದರ್ಶನ ಭಗವದ್ದರ್ಶನ ಮಾಡುವವರಿಗೆ ಗವಾಕ್ಷ -ದಿವ್ಯದ್ವಾರ: ಎಂತಹ ಅದ್ಭುತ ಸಂಕೇತ !
  5. ಅಷ್ಟೇ ಮುಖ್ಯವಾದುದು : ಇಂದಿಗೂ ಶ್ರೀಕೃಷ್ಣನಿಗೆ ದಿನಂಪ್ರತಿ ನಡೆಯುವ ‘ಗಂಜಿ ನೈವೇದ್ಯ’ .ಒಳಗೆ ಕೃಷ್ಣನಿಗೆ ಅರ್ಪಿಸಲು ಅಕ್ಕಿ ಬೇಯಿಸಿ ಅದರ ಗಂಜಿ ಸುರಿಯುತ್ತಿರುವ ಸಂಗತಿಯನ್ನು ಕನಕದಾಸರು ತಮ್ಮ ಒಳಗಣ್ಣಿಂದ ಕಂಡು ಆ ಗಂಜಿಯನ್ನು ಶ್ರೀಕೃಷ್ಣನ ಪಾದದ ಬಳಿ ಕಂಡು ಆ ಗಂಡಿ ಕೃಷ್ಣನಿಗರ್ಪಿತ ಎಂದು ಹೇಳಿದರೆಂದೂ, ಅವರ ಗುರು ಶ್ರೀ ವಾದಿರಾಜರು ಅದನ್ನು ಕನಕದಾಸರಿಂದ ಖಚಿತಪಡಿಸಿಕೊಂಡು ಅಂದಿನಿಂದ ‘ಗಂಜಿ ನೈವೇದ್ಯ’ ಪ್ರಾರಂಭಿಸಿದರೆಂದು ಒಂದು ಕತೆ. ಕನಕನ ಹೆಸರಿನ ಗಂಜಿ ನೈವೇದ್ಯಇಂದಿಗೂ ಪ್ರಚಲಿತವಿರುವ ಒಂದು ಸೇವೆ. ಎಂದರೆ, ಉಡುಪಿಯ ಮಠಗಳಿಂದ ಈಗಲೂ ಎಲ್ಲ ಬಗೆಯ ಗೌರವ ್ಫಕನಕದಾಸರಿಗೆ ಸಲ್ಲುತ್ತಿದೆ.
‘ಅಷ್ಟ ಮಠಗಳಿಂದ ಕನಕದಾಸರಿಗೆ ಯಾವುದೇ ರೀತಿಯ ಅಪಚಾರವಾಗಿದ್ದರೂ ಮೊದಲು ನಾವು ಸಿಡಿದೇಳುತ್ತಿದ್ದವ ’ ಎಂದು ನಮ್ಮ ಮುಂದೆ ಹಾಜರಾದ ಹಲವು ಕೆಳವರ್ಗದ ಜನರು ನಮಗೆ ಸ್ಪಷ್ಟವಾಗಿ ಹೇಳಿದರು. ‘ಕನಕರಿಗೆ ಅಪಚಾರವಾಗಿದೆಯೇ?’ ಎಂಬ ಪ್ರಶ್ನೆಗೆ ಉಡುಪಿಯ ಜನರಿಂದ ಬಂದ ಉತ್ತರ- ‘ಇಲ್ಲ’.

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಚಿತ್ರಮಂದಿರದ ಗೋಪುರದಲ್ಲಿ ಮೇಲೆ ಮಧ್ಯೆ ಕುಳಿತಿರುವ ರಾಘವೇಂದ್ರ ಸ್ವಾಮಿಗಳ ಮೂರ್ತಿ ಇದ್ದರೆ ಅತ್ತ ಇತ್ತ ಭಕ್ತಿಪರವಶರಾಗಿ ಹಾಡುತ್ತಿರುವ ಪುರಂದರ, ಕನಕರ ಮೂರ್ತಿಗಳಿರುವುದನ್ನು ಯಾರು ಬೇಕಾದರೂ ನೋಡಬಹುದು.

ಮೇಲಿನ ಸಂಗತಿಗಳಿಗೆ ವಿರುದ್ಧವಾದ ಸ್ಪಷ್ಟ ಾಕ್ಷ್ಯಾಧಾರಗಳು ದೊರೆತು ‘ಗೋಪುರವನ್ನು ಕೆಡವಿದ್ದರಿಂದ ಕನಕರಿಗೆ ಯಾವುದೇ ಅಪಚಾರವೂ ಆಗಿಲ್ಲ.’ ಎಂಬ ಸಮಿತಿಯ ತೀರ್ಮಾನದ ವಿರುದ್ಧವಾದ ತೀರ್ಮಾನಕ್ಕೆ ಬರಲು ಅವು ಸಹಾಯಕವಾಗಿದ್ದರೆ ಅವುಗಳನ್ನು ನೀಡಿ ತಮ್ಮ ನಿಲುವನ್ನು ಪ್ರತಿಪಾದಿಸಲು ಅವಕಾಶವಿದೆ; ಮತ್ತು ಮುಕ್ತ, ಶಾಂತ ಚಿತ್ತದ, ನಾಗರಿಕ ಭಾಷೆಯ ಚರ್ಚೆಯನ್ನು ನಾವು ಸ್ವಾಗತಿಸುತ್ತೇವೆ. ಸಮಿತಿಯು ತನ್ನ ವರದಿಯ ಕೊನೆಯಲ್ಲಿ ವ್ಯಕ್ತಪಡಿಸುವ ಆಶಯ ಇದು- ‘ ಈ ನಮ್ಮ ವಸ್ತುನಿಷ್ಠ ವರದಿಯು ಸಾರ್ವಜನಿಕರಲ್ಲಿ ಸಹಜವಾಗಿ ಉಂಟಾಗಿರುವ ಗೊಂದಲಗಳನ್ನೂ ಜಾತಿಜಾತಿಗಳ ಮಧ್ಯೆಮೂಡಬಹುದಾದ ಅನಗತ್ಯ ಸಂದೇಹ ಬಿರುಕುಗಳನ್ನೂ ನಿವಾರಿಸುತ್ತದೆಯೆಂದು ವಿನಯಪೂರ್ವಕವಾಗಿ ಆಶಿಸುತ್ತೇವೆ. ನಮ್ಮ ರಾಷ್ಟ್ರದಲ್ಲಿ ಈಗ ಎಲ್ಲ ಕ್ಷೇತ್ರಗಳಲ್ಲಿ ಬೇಕಾಗಿರುವುದು ‘ಸಾಮರಸ್ಯ’ ಎಂಬುದನ್ನು ಒತ್ತಿ ಹೇಳಬಯುಸುತ್ತೇವೆ ’’ .

(ಸ್ನೇಹಸೇತು: ವಿಜಯ ಕರ್ನಾಟಕ)

ಪೂರಕ ಓದಿಗೆ-

ಎಲ್ಲರೂ ಕೃಷ್ಣನ ಹಿಂದೆ ಬಿದ್ದರೆ ಬೀರಜ್ಜನ ಗತಿ ಏನು?

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more