ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮಗೆ ರೋಷ ಬರೋದಿಲ್ವೇ? ನೀವು ಕನ್ನಡಿಗರಲ್ಲವೇ?

By Staff
|
Google Oneindia Kannada News
ಕನ್ನಡಾಭಿಮಾನದ ಬಗ್ಗೆ ಎದ್ದಿರುವ ಕೂಗು ನಮ್ಮ ದೇಶದಲ್ಲಿನ ಯಾವ ಭಾಷೆಗೂ ಬಂದಿಲ್ಲವೆನಿಸುತ್ತದೆ. ಐ.ಬಿ.ಎಂ ಕಂಪನಿಯ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಆದ ಅವಮಾನವನ್ನು ಕಂಡಾಗ ಎಂಥ ಕನ್ನಡಿಗನಿಗೂ ರೋಷವುಕ್ಕುವುದರಲ್ಲಿ ತಪ್ಪೇನಿಲ್ಲ.

ಈ ಹಿಂದೆ ನಾನು ಸನ್‌ಟೆಕ್‌ ಡೇ ಬೆಂಗಳೂರು ಸಮ್ಮೇಳನದಲ್ಲಿ ಭಾಗವಹಿಸಿದ್ದೆ. ಅಲ್ಲಿ ಕೊನೆಯಲ್ಲಿ ಬಾಗವಹಿಸಿದ ಎಲ್ಲಾ ಮಂದಿಗೆ ತಮ್ಮ ಸಂಸ್ಕೃತಿಗೆ ಸಂಬಂಧಿಸಿದ ಯಾವುದಾದರೂ ಪ್ರತಿಭೆಯನ್ನು ಪರಿಚಯಿಸಿಕೊಡಲು ಅವಕಾಶ ಕೊಟ್ಟಿದ್ದರು. ಆ ಸಮಯದಲ್ಲಿ ಸಾಕಷ್ಟು ಐ.ಟಿ ಮಂದಿ ತಮ್ಮ ಮಾತೃ ಸಂಸ್ಕೃತಿಯ ವಿಷಯಗಳನ್ನು ಮಾಡಿ ತೋರಿಸಿದರು. ಆಲ್ಲಿ ಕನ್ನಡ ಬಿಟ್ಟು ಎಲ್ಲಾ ಭಾಷೆಯ ಕವನ, ಗೀತೆ, ನಾಟ್ಯ ಸನ್ನಿವೇಶಗಳನ್ನು ನಿರ್ಭಿಡೆಯಿಂದ ಅಭಿನಯಿಸಿ ಚಪ್ಪಾಳೆಯನ್ನು ಗಿಟ್ಟಿಸಿದರು.

Be proud to be a Kannadigaಈ ಮೇಲಿನ ಘಟನೆಯಿಂದ ನನಗೆ ಅನಿಸಿದ್ದೇನೆಂದರೆ, ಅಂಥ ದೊಡ್ಡ ಸಮ್ಮೇಳನದಲ್ಲಿ ಕನ್ನಡಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿಯೂ ಯಾರೊಬ್ಬರು ತಮ್ಮ ತಾಯಿ ನುಡಿಯಲ್ಲಿ ತಮ್ಮ ಪ್ರತಿಭೆಯನ್ನು ಯಾಕೆ ಪ್ರಸ್ತುತ ಪಡಿಸಲಿಲ್ಲ? ಕಾರಣ ಇಷ್ಟೆ, ಕನ್ನಡದ ಬಗ್ಗೆ ನಮ್ಮಲ್ಲೆ ಕೀಳರಿಮೆ, ಈ ರೀತಿಯ ಭಾವನೆಯನ್ನು ಕನ್ನಡೇತರ ಯಾವ ಜನರಲ್ಲೂ ನಾವು ಕಾಣಲಾರೆವು. ಆ ರೀತಿಯ ವಿಚಿತ್ರ ಮನಸ್ಥಿತಿಯನ್ನು ನಮ್ಮಲ್ಲಿ ಮಾತ್ರ ಕಾಣುತ್ತೇವೆ.

ಇಂತಹ ಸನ್ನಿವೇಶಗಳು ಬೆಂಗಳೂರು ಎಂಬ ಐ.ಟಿ ರಾಜಧಾನಿಯಲ್ಲಿ ಸರ್ವೆಸಾಮಾನ್ಯವಾದ ಘಟನೆಗಳು. ಏಕೆಂದರೆ ನಮ್ಮ ಬೆಂಗಳೂರಲ್ಲಿ ಕನ್ನಡ ಮಾತನಾಡುವ ಜನ ಶೇಕಡ ಎಷ್ಟು ಎಂಬುವುದು ಎಲ್ಲರಿಗೂ ತಿಳಿದಿರುವ ವಿಷಯ. ಕನ್ನಡ ನಾಡಿನ, ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರು! ಇಲ್ಲದಿದ್ದರೆ ಈ ರೀತಿ ಕನ್ನಡಕ್ಕೆ ಅವಮಾನವಾಗುವುದನ್ನು ನಾವು ನೋಡುತ್ತಿರಲಿಲ್ಲ.

ನಮ್ಮ ರಾಜ್ಯದಲ್ಲಿ ಕನ್ನಡ ಮಾತನಾಡದೆ ತಮ್ಮ ವ್ಯವಹಾರವನ್ನು ತಂತಮ್ಮ ಭಾಷೆಯಲ್ಲಿಯೇ ನಡೆಸಿಕೊಂಡು ಹೋಗುವಂತೆ, ಪಕ್ಕದ ರಾಜ್ಯದಲ್ಲಿ ನಮ್ಮ ಕನ್ನಡಿಗರಿಗೆ ಕನ್ನಡ ಮಾತಾಡಿಯೇ ಜೀವನ ಸಾಗಿಸಲು ಸಾಧ್ಯವೇ ಇಲ್ಲವೇ ಎಂಬುವುದನ್ನು ಅಲ್ಲಿನ ಕನ್ನಡಿಗರನ್ನು ಕೇಳಬೇಕು. (ಇದಕ್ಕೆ ಉತ್ತರ : ‘ ಸಾಧ್ಯವಿಲ್ಲ’ !!)

ಕನ್ನಡಕ್ಕೆ ಈ ಗತಿ ಐ.ಟಿ ಕಂಪನಿಗಳೊಂದರಲ್ಲೆ ಅಲ್ಲ, ಯಾವುದೇ ಅಂಗಡಿ, ದೊಡ್ಡ ದೊಡ್ಡ ಮಳಿಗೆ, ಸ್ಟೋರ್‌ಗಳಲ್ಲಿ, ಪ್ರಸಿದ್ಧ ಶಾಲಾ ಕಾಲೇಜುಗಳಲ್ಲಿ ಗಮನಿಸಬಹುದು. ಈ ಎಲ್ಲಾ ಜಾಗಗಳಲ್ಲಿ ಕನ್ನಡ ಮಾತನಾಡುವವರೆಂದರೆ ಮೈಲಿಗೆಯವರು.

ಇದನ್ನೆಲ್ಲಾ ನೋಡಿದ ನಮ್ಮ ಕನ್ನಡ ಮಂದಿಗೆ ಒಂದು ವಿಷಯ ಸ್ಪಷ್ಟವಾಗಿರುವುದೇನೆಂದರೆ, ಬೆಂಗಳೂರಲ್ಲಿ ಬದುಕು ನಡೆಸಬೇಕೆಂದರೆ ಮೊದಲು ನೀನು ಇಂಗ್ಲಿಷ್‌ ಕಲಿಯಪ್ಪಾ ಎಂದು ಹೇಳಿ ಕಳಿಸುತ್ತಾರೆ. ಇಲ್ಲದೆ ಇದ್ದರೇ ನೀನು ನಾಲಾಯಕ್‌ ಅನ್ನುತ್ತಾರೆ. ಇದು ಸರಿಯೇ? ಎಷ್ಟೇ ಅಲ್ಪ ಸಂಬಳದ ಕೆಲಸ ಪಡೆಯಬೇಕಾದರೂ ಇಂಗ್ಲಿಷ್‌ ಜ್ಞಾನವನ್ನು ಪರೀಕ್ಷಿಸುತ್ತಾರೆ. ಕನ್ನಡ ಮಾತಾನಾಡುವುದನ್ನಲ್ಲ. ಕಾಲ ಕೆಟ್ಟು ಹೋಯ್ತಲ್ಲಾ!

ಹೀಗಾಗಿ ಗೊತ್ತಿಲ್ಲದೆ ನಮ್ಮ ಕನ್ನಡ ಮಾತನಾಡುವವ ಕನ್ನಡದ ಬಗ್ಗೆ ತಾತ್ಸರ ಬೆಳೆಸಿಕೊಳ್ಳಲು ಪ್ರಾರಂಭಿಸುತ್ತಾನೆ. ನಿತ್ಯ ಕನ್ನಡೇತರ ಜೀವನ ಶೈಲಿ ರೂಢಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಅದೇ ಅವನಿಗೆ ಎಲ್ಲ ರೀತಿಯಲ್ಲೂ ಒಂದು ಘನತೆ, ಹಣ, ಒಳ್ಳೆಯ ಜೀವನವನ್ನು ಕೊಡುತ್ತದೆ. ಹಾಗೆ ಪ್ರಾರಂಭಗೊಂಡ ಕನ್ನಡ ವಿರೋಧಿ ನೀಲುವನ್ನು ತನ್ನ ಮಕ್ಕಳು ಮತ್ತು ತನ್ನ ಸುತ್ತ ವಿಸ್ತರಿಸುತ್ತ ಹೋಗುತ್ತಾ ಜೊತೆಯವರೊಂದಿಗೆ ಕನ್ನಡ ಮಾತನಾಡಲು ಹಿಂಜರಿಕೆ ಮಾಡಿಕೊಂಡು ಮನದಲ್ಲಿಯೇ ಕಸಿವಿಸಿಗೊಳ್ಳುತ್ತಾನೆ. ಕಾರಣ? ಗೊತ್ತಿಲ್ಲ ಅಂದುಕೊಳ್ಳುತ್ತಾನೆ.

ಕನ್ನಡಕ್ಕೆ ಈ ರೀತಿಯ ಅವಮಾನ, ಕನ್ನಡಿಗರಿಗೆ ಆಗುವ ಅವಹೇಳನ ಸಾಮಾನ್ಯ ಸಂಗತಿ. ಇದಕ್ಕೆ ನಾವು ಸುಮ್ಮನೆ ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಿ ಎಂದು ಕೂಗುವ ಬದಲು ಕನ್ನಡದ ಬಗ್ಗೆ ಎಲ್ಲರಿಗೂ ತನ್ನಿಂದ ತಾನೆ ಅಕ್ಕರೆ ಬೆಳೆಯುವಂತೆ ಬೆಳೆಸಲು ಸರ್ಕಾರ ಮತ್ತು ಸಮಾಜದ ವತಿಯಿಂದ ಯೋಜನೆಗಳನ್ನು ಮಾಡಿಕೊಂಡು ಅವುಗಳನ್ನು ನಿತ್ಯ ಜೀವನದಲ್ಲಿ ಜಾರಿಗೆ ತರಲು ಪ್ರಯತ್ನಿಸಬೇಕು.

ಇಂಗ್ಲಿಷ್‌ ಕೇವಲ ಒಂದು ಭಾಷೆಯಾಗಿರಬೇಕು ಅದೇ ಸರ್ವನಾಡಿಯಾಗಿರಬಾರದು. ಎಷ್ಟು ಭಾಷೆಗಳನ್ನು ಕಲಿತರೂ ಅದು ಆ ವ್ಯಕ್ತಿಯ ಸಾಮರ್ಥ್ಯವನ್ನು ಪ್ರತಿಬಿಂಬಿಸಿ ಅವನ ತಿಳಿವಳಿಕೆಯನ್ನು ಹೆಚ್ಚಿಸುತ್ತದೆ. ಕನ್ನಡದಲ್ಲಿ ಅಭ್ಯಾಸಿಸಿದರೂ ಮಾತನಾಡಿದರೂ ಉದ್ಯೋಗಾವಕಾಶಗಳು ಸಿಗುತ್ತವೆ ಎಂಬುದನ್ನು ಸರ್ಕಾರ ಮತ್ತು ನಮ್ಮ ಎಲ್ಲ ಸಂಸ್ಥೆಗಳು ಸಾಧಿಸಿತೋರಿಸಬೇಕು. ಕನ್ನಡದ ನೆಲದ ಸರ್ವ ಸಂಪನ್ಮೂಲಗಳನ್ನು ಸೂರೆ ಮಾಡಿಕೊಂಡಿದ್ದಕ್ಕೆ ಇಷ್ಟಾದರೂ ತೆರಿಗೆ ಕಟ್ಟಿ ಇಲ್ಲಿನ ಸಂಸ್ಕೃತಿಯ ಬೆಳವಣಿಗೆಗೆ ಈ ಅನ್ಯರೆಲ್ಲ ತಮ್ಮ ಋಣವನ್ನು ತೀರಿಸಿಕೊಳ್ಳುವಂತಾಗಬೇಕು.

ಹಾಗಾದರೆ ಮಾತ್ರ ಕನ್ನಡಿಗ ತನ್ನ ಭಾಷೆಯನ್ನು ಎಲ್ಲೆಲ್ಲಿಯೂ, ತನ್ನದೇ ನೆಲವಾದ ಬೆಂಗಳೂರಿನಲ್ಲಿಯೂ ಅಂಜದೆ ಅಳುಕದೆ ಎದೆಯುಬ್ಬಿಸಿ ಮಾತನಾಡುವುದು ಸಾಧ್ಯವಾಗುತ್ತದೆ!

ಜೈ ಕನ್ನಡ ಮಾತೆ! ನನ್ನದೇನಿದ್ದರೂ ಕನ್ನಡ ಮಾತೇ!

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X