• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇದು ಮುಂಬಯಿ ಡೈರಿ!

By Staff
|

Talaku_Srinivasತ.ವಿ.ಶ್ರೀನಿವಾಸ್‌, ಮುಂಬಯಿ

tvsrinivas41@yahoo.com

ಮುಂಬಯಿ ನಮ್ಮ ದೇಶದ ವಾಣಿಜ್ಯರಾಜಧಾನಿ. ಇದು ಮೊದಲು ಪ್ರತ್ಯೇಕ ಸಂಸ್ಥಾನವಾಗಿತ್ತು. ಆಗ ಗುಜರಾತಿನ ಕೆಲವು ಪ್ರದೇಶಗಳೂ ಇದರೊಡನೆ ಸೇರಿತ್ತು. ಆಗಿನ ಪ್ರಸಿದ್ಧ ಮುಖ್ಯಮಂತ್ರಿಗಳಾಗಿದ್ದವರಲ್ಲಿ ದಿವಂಗತ ಮೊರಾರ್ಜಿ ದೇಸಾಯಿಯವರೊಬ್ಬರು.

ಮುಂಬಯಿ ಮತ್ತು ಕನ್ನಡಿಗರ ನಂಟು ತುಂಬಾ ಹಳೆಯದ್ದು. ಮುಂಬಯಿಗೆ ಮೊದಲು ಎಲ್ಲರೂ ಬಾಂಬೇ ಎಂದೇ ಕರೆಯುತ್ತಿದ್ದರು. ಆದರೆ ಕನ್ನಡದವರು ಮಾತ್ರವೇ ಮುಂಬಯಿ ಎಂದು ಕರೆಯುತ್ತಿದ್ದರು. ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟಿನ ಕೆಲಸ ಪ್ರಾರಂಭಿಸಿದವರು ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು. ಮುಂಬಯಿನ ಜನಸಂಖ್ಯೆ 1.20 ಕೋಟಿ ಮತ್ತು ಅದರಲ್ಲಿ ಕನ್ನಡಿಗರ ಪಾಲು ಶೇಕಡ 10 ಅಂದ್ರೆ 12 ಲಕ್ಷ . ಆದರೂ ಹೊರಗಡೆ ಕನ್ನಡ ಮಾತನಾಡೋದು ಕಡಿಮೆ. ಇದಕ್ಕೆ ಕಾರಣ ಈ ಮುಂದೆ ವಿವರಿಸುವೆ.

Aap Chi Mumbaiಕರ್ನಾಟಕದಲ್ಲಿ ಉಡುಪಿ ಅಂದ್ರೆ ಎಲ್ಲರಿಗೂ ನೆನಪಾಗುವುದು - ಉಡುಪಿಯ ಅಷ್ಟ ಮಠಗಳು, ಶ್ರೀ ಕೃಷ್ಣ ದೇವಸ್ಥಾನ. ಆದರೆ ಮುಂಬಯಿಯಲ್ಲಿ ಉಡುಪಿ ಅಂದ್ರೆ ಜನಗಳಿಗೆ ಮೊದಲು ನೆನಪಾಗುವುದು ಮಸಾಲೆ ದೋಸೆ, ನಂತರ ರಾಮಾನಾಯಕರ ಉಡುಪಿ ಶ್ರೀ ಕೃಷ್ಣ ಭವನವಾದ ಊಟದ ಹೊಟೇಲು. ಇಲ್ಲಿಯ ಹೆಚ್ಚಿನ ಹೊಟೇಲುಗಳಲ್ಲಿ ನೀವು ಕಾಣಬರುವ ದೃಶ್ಯ ಅಂದ್ರೆ -ಹೊಟೇಲಿನ ಮುಂಭಾಗದಲ್ಲಿ ಮೋಸಂಬಿ ಹಣ್ಣುಗಳ ತಳಿರು ತೋರಣ - ಬಲಭಾಗದಲ್ಲಿ ಗಲ್ಲದ ಮೇಲೆ ಕುಳಿತಿರೋ ಯಜಮಾನ - ಕೈಯಲ್ಲಿ ‘ಉದಯವಾಣಿ’ ಅಥವಾ ‘ಕರ್ನಾಟಕ ಮಲ್ಲ’ ವೃತ್ತಪತ್ರಿಕೆ - ಹಿಂದೆ ಯಜಮಾನರ ಊರಿನ ದೇವರ ಫೋಟೋ - ಅದರ ಮುಂದೆ ಸದಾ ಬೆಳಗುತ್ತಿರುವ ದೀಪ ಮತ್ತು ಎರಡು ಊದಿನಕಡ್ಡಿಗಳು. ಹೆಚ್ಚಿನವೆಲ್ಲಾ ಶಾಕಾಹಾರಿ ಉಪಹಾರಗೃಹಗಳು. ಮಾಂಸಾಹಾರಿ ಮತ್ತು ಡ್ಯಾನ್ಸ್‌ ಬಾರ್‌ಗಳಿಗೇನೂ ಕಡಿಮೆ ಇಲ್ಲ - ಅಲ್ಲೂ ಇದೇ ತರಹದ ದೃಶ್ಯ. ಹೆಚ್ಚಿನ ಜನಗಳು ಇಲ್ಲಿಗೆ ಬರೋದು - ಇಡ್ಲಿ, ದೋಸೆ ಅಥವಾ ಉದ್ದಿನ ವಡೆ ತಿನ್ನಲು.

ಇನ್ನೊಂದು ವಿಶೇಷತೆ ಏನಂದ್ರೆ - ನಮ್ಮ ಬೆಂಗಳೂರಿನಲ್ಲಿ ಕೊಡುವ ಹಾಗೆ 1 ಪ್ಲೇಟ್‌ ಇಡ್ಲಿ ಅಂದ್ರೆ - 2 ಇಡ್ಲಿ ಕೊಡೋದಿಲ್ಲ, ಕೊಡೋದು ಒಂದೇ. ಇಡ್ಲಿ ಜೊತೆ ವಡೆ ಇಲ್ಲ. ಕೇಳಿದ್ರೆ ಎರಡನ್ನೂ ಬೇರೆ ಬೇರೆ ತಾಟುಗಳಲ್ಲಿ ನೀಡುತ್ತಾರೆ. ಚೌಚೌ ಬಾತ್‌ ಅಂತೂ ಗೊತ್ತೇ ಇಲ್ಲ. ಅದೇ ಉಪ್ಮ ಅಂದ್ರೆ ಉಪ್ಪಿಟ್ಟು ಮತ್ತು ಶಿರಾ ಅಂದ್ರೆ ಸಜ್ಜಿಗೆ. ಕೇಸರಿಬಾತ್‌ ಮಾಡೋಲ್ಲ. ಆದರೂ ಇಲ್ಲಿಯ ತಿನಿಸುಗಳ ದರ ತುಂಬಾ ಜಾಸ್ತಿ. ಒಂದು ಮಸಾಲೆ ದೋಸೆಗೆ ರೂ. 35 ಅಂದ್ರೆ ನಂಬ್ತೀರಾ?

ಇಲ್ಲಿ ದರ್ಶಿನಿಗಳಂಥ ಹೊಟೆಲ್‌ಗಳಿಲ್ಲ. ಯಾರಾದ್ರೂ ಬಂದು ದರ್ಶಿನಿ ಶುರು ಮಾಡಿದ್ರೆ - ಬಹಳ ಬೇಗ ಶ್ರೀಮಂತರಾಗಬಹುದು. ಹಾಗೆ ಮಾಡೋದು ಕಷ್ಟ ಕೂಡಾ. ಈ ಹೋಟೆಲ್‌ನವರು ರಕ್ಷಣೆಗಾಗಿ ( ಪೊಲೀಸರಿಗೆ ರೌಡಿಗಳಿಗೆ) ನಿಯಮಿತವಾಗಿ ಹಣ ನೀಡಬೇಕು. ಇದನ್ನು ಹಫ್ತಾ ಎನ್ನುತ್ತಾರೆ. ಹಿಂದಿಯಲ್ಲಿ ಹಫ್ತಾ ಅಂದ್ರೆ ವಾರ ಅಂತ. ಹಾಗೇ ಇದನ್ನು ವಾರಕ್ಕೊಮ್ಮೆ ಕೊಡಬೇಕು. ಇದೂ ಒಂದು ದೊಡ್ಡ ದಂಧೆಯೇ. ಇದರಲ್ಲೂ ನಮ್ಮ ಕನ್ನಡಿಗರು ಹೆಸರುವಾಸಿಯಾಗಿದ್ದಾರೆ - ಶೆಟ್ಟಿ ಗ್ಯಾಂಗ್‌ ಅಂದ್ರೆ ಯಾರಿಗೆ ಗೊತ್ತಿಲ್ಲ.

ಇಷ್ಟೆಲ್ಲಾ ಪ್ರಸಿದ್ಧರಾದರೂ ಕನ್ನಡಿಗರು ಕನ್ನಡ ಮಾತನಾಡುವುದು ಬಹು ಕಡಿಮೆ. ತುಳು ಅಥವಾ ಕೊಂಕಣಿ ಮಾತನಾಡುವುದು ಹೆಚ್ಚು. ಆದರೆ ಓದುವುದು ಮಾತ್ರ ಕನ್ನಡ ಭಾಷೆಯನ್ನು. ಇನ್ನು ಕನ್ನಡ ಸಂಘಗಳಿವೆ. ಆದರೆ ಈಗೀಗ ಚಟುವಟಿಕೆ ಕಡಿಮೆ ಆಗ್ತಿದೆ. ಇಲ್ಲಿಯ ಮಾತುಂಗ ಒಂದು ಕಾಲದಲ್ಲಿ ಮಿನಿ ಕನ್ನಡ ನಾಡು ಆಗಿತ್ತು. ಇಲ್ಲಿಯ ಶಂಕರಮಠ ಈಗ ತಮಿಳು ಅಯ್ಯರ್‌ಗಳ ತಾಣವಾಗಿದೆ. ಇಲ್ಲೇ ಇರುವ ಹಿಂದೆ ಸುಪ್ರಸಿದ್ಧವಾದ ಕನ್ನಡ ಕನ್ಸರ್ನ್‌ ಈಗ ಕಾಫಿಪುಡಿ ಮಾರಾಟ ಕೇಂದ್ರವಾಗಿದೆ. ಇಲ್ಲಿಯ ಷಣ್ಮುಖಾನಂದ ಹಾಲ್‌ ಒಂದು ಕಾಲದಲ್ಲಿ ಕನ್ನಡಿಗರ ಮನರಂಜನೆಯ ಕೇಂದ್ರವಾಗಿತ್ತು. ಈಗ ಮಾತುಂಗದಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆ ಆಗಿದೆ. ಕನ್ನಡಿಗರು ಗೋರೆಗಾಂವ್‌ ಕಡೆ ( ಪಶ್ಚಿಮ ರೇಲ್ವೆ ) ಮತ್ತು ಡೊಂಬಿವಿಲಿ ( ಕೇಂದ್ರ ರೇಲ್ವೆ ) ಗಳಲ್ಲಿ ವಾಸಿಸುತ್ತಿದ್ದಾರೆ.

ಉತ್ತರ ಕರ್ನಾಟಕ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮುಂತಾದ ಜಿಲ್ಲೆಗಳ ಜನಗಳು ಪ್ರಾಥಮಿಕ ಓದು ಮುಗಿದೊಡನೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಮುಂಬಯಿಗೆ ಬರುತ್ತಿದ್ದರು. 1970ರವರೆಗೂ ಎಲ್ಲ ಕಡೆಗಳಲ್ಲೂ ಉದ್ಯೋಗಸ್ಥರಲ್ಲಿ ಹೆಚ್ಚಿನವರು ಕನ್ನಡಿಗರು, ತಮಿಳರು ಮತ್ತು ತೆಲುಗಿನವರು. ಇನ್ನೂ ವ್ಯಾಪಾರದಲ್ಲಿ ಪಾರಸಿಗಳು, ಗುಜರಾತಿಗಳು ಮತ್ತು ಮಾರವಾಡಿಗಳು. ಸಣ್ಣ ಪುಟ್ಟ ವ್ಯಾಪಾರಗಳಾದ ಹಾಲು ಮಾರಾಟ, ತರಕಾರಿ ಹಣ್ಣುಗಳು ವ್ಯಾಪಾರ ಇತ್ಯಾದಿಯಲ್ಲಿ ಉತ್ತರ ಭಾರತೀಯರದ್ದೇ ಹೆಚ್ಚಿನ ಪಾಲು.

1970ರಲ್ಲಿ ಇದನ್ನೇ ವಿಷಯವಾಗಿಸಿಕೊಂಡು ಸ್ವಕ್ಷೇತ್ರದಲ್ಲಿರುವ ಮರಾಠಿಗರಿಗೆ ಅನ್ಯಾಯ ಆಗುತ್ತಿದೆ - ಕೆಲಸಗಳಲ್ಲಿ ಆದ್ಯತೆ ಇಲ್ಲ ಎಂದು ಚಳುವಳಿ ಆರಂಭವಾಯಿತು. ಈ ಚಳುವಳಿಯನ್ನು ಹುಟ್ಟು ಹಾಕಿದ್ದು ಶಿವಸೈನಿಕರು. ಬಾಳಾಸಾಹೇಬ ಠಾಕರೆಯವರ ರೂವಾರಿತನದಲ್ಲಿ ಪ್ರಾರಂಭವಾದ ಈ ಚಳುವಳಿ ಒಂದು ದೊಡ್ಡ ರಾಜಕೀಯ ಶಕ್ತಿಯಾಗಿ ಬೆಳೆಯಿತು. ಆ ಶಕ್ತಿ ಕನ್ನಡಿಗರ ಮೇಲೆಸಗಿದ ಕಷ್ಟ ಕೋಟಲೆಗಳು ಅಷ್ಟಿಷ್ಟಲ್ಲ. ಅದು ಸ್ವಾಭಾವಿಕವೇ - ಈಗ ನಮ್ಮೂರುಗಳಲ್ಲಿ ಪರಭಾಷಿಯರು ಬಂದು ನೆಲೆ ಊರಿದರೆ ನಮಗೆ ಆಗೋ ಹಾಗೇ ಅವರಿಗೂ ಆಗಿತ್ತು. ಆದರೂ ಸ್ವಲ್ಪ ಕಾಲದಲ್ಲೇ ಅದೆಲ್ಲಾ ತಣ್ಣಗಾಯಿತು. ತರುವಾಯ ಅನ್ಯೋನ್ಯತೆ ಬಂದಿದೆ. ಆಗ ನಡೆದದ್ದು ನಾನು ಕಂಡಿರಲಿಲ್ಲ ಆದರೆ ಅನುಭವಿಸಿದವರಿಂದ ಕೇಳಿದ್ದು ಹೀಗಿದೆ.

1970ಕ್ಕೆ ಮೊದಲು ಹೆಚ್ಚಿನ ಸರಕಾರಿ ಕ್ಷೇತ್ರಗಳಲ್ಲಿ ಉನ್ನತಾಧಿಕಾರಿಗಳು ಕನ್ನಡಿಗರಾದ್ದು ನೌಕರಿ ಭರ್ತಿ ಮಾಡುವಾಗ ಕನ್ನಡಿಗರಿಗೇ ಆದ್ಯತೆ ಕೊಡುತ್ತಿದ್ದರು. ಹೀಗಾಗಿ ಇಲ್ಲಿಯ ಮರಾಠಿಗರಿಗೆ ಕೆಲಸ ಸಿಕ್ಕೋದು ಕಷ್ಟ ಆಗ್ತಿತ್ತು. ಆಗ ಶಿವಸೇನೆಯು ಪ್ರಾಬಲ್ಯಕ್ಕೆ ಬರುತ್ತಿದ್ದ ಕಾಲ. ಅವರು ಸ್ಥಾನೀಯ ಲೋಕಾಧಿಕಾರ ಸಮಿತಿ ಎಂದು ಎಲ್ಲ ಸಾರ್ವಜನಿಕ ಕ್ಷೇತ್ರಗಳಲ್ಲೂ ಪ್ರಾರಂಭಿಸಿ ಮರಾಠಿಯೇತರರಿಗೆ(ಅದರಲ್ಲೂ ಮುಖ್ಯವಾಗಿ ಕನ್ನಡಿಗರಿಗೆ) ತೊಂದರೆ ಕೊಡಲು ಪ್ರಾರಂಭಿಸಿದರು. ಹೀಗಾದರೂ ಇವರುಗಳು ಮುಂಬಯಿ ಬಿಟ್ಟು ಹೋಗಲಿ ಅನ್ನೋದು ಅವರ ಇಂಗಿತ. ಈ ನಿಟ್ಟಿನಲ್ಲಿ ಮೊದಲನೆಯ ಕೆಲಸವಾಗಿ ಕನ್ನಡಿಗರನ್ನು ಗುರುತಿಸಲು ಶುರು ಮಾಡಿದರು. ಹೇಗೆ ಹುಡುಕೋದು - ಇವರುಗಳು ಮರಾಠಿ ಕಲಿತು ಇಲ್ಲಿಯ ಜನಜೀವನದಲ್ಲಿ ಸೇರಿ ಹೋಗಿದ್ದಾರೆ.

ಲೋಕಲ್‌ ಟ್ರೈನ್‌ ನಲ್ಲಿ ಪ್ರಯಾಣ ಮಾಡುವಾಗ ಕನ್ನಡ ಮಾತನಾಡುವವರನ್ನು ಕಂಡು ಗುರುತು ಹಾಕಿಕೊಳ್ಳುತ್ತಿದ್ದರು. ನಂತರ ಟ್ರೈನ್ಗಳಲ್ಲಿ ಕುಳಿತುಕೊಳ್ಳುವ ಜಾಗಕ್ಕಾಗಿ ಜಗಳ ಮಾಡೋದು, ರಸ್ತೆಯಲ್ಲಿ ಓಡಾಡುವಾಗ ಮಕ್ಕಳಿಗೆ ಹೇಳಿಸಿ ಕಲ್ಲು ಹೊಡೆಸೋದು, ವಿನಾಕಾರಣ ಜಗಳ ಮಾಡೋದು ಮಾಡುತ್ತಿದ್ದರು. ಸುಮಾರು ಜನಗಳು ಬೇಸತ್ತು ಮುಂಬಯಿ ಬಿಟ್ಟು ಹೋದರು. ಹಾಗಾಗಿ ಕನ್ನಡಿಗರು ಮನೆಯಲ್ಲಿ ಮಾತ್ರವೇ ಕನ್ನಡ ಮಾತನಾಡುವ ಹಾಗೆ ಆಯಿತು. ಆಚೆಯಲ್ಲಿ ಮರಾಠಿ ಅಥವಾ ಹಿಂದಿಯಲ್ಲಿ ಸಂವಾದ - ವ್ಯವಹಾರ.

ಕನ್ನಡಿಗರ ಪಾಳ್ಯ ಎನಿಸಿದ್ದ ವಾಸಸ್ಥಳಗಳಿಂದ ದೂರದ ಹೊರವಲಯಕ್ಕೆ ವಲಸೆ ಹೋದರು. ಹಾಗಾಗಿ ಕನ್ನಡ ಬಳಕೆ ಕಡಿಮೆ ಆಯಿತು. ಇತ್ತೀಚಿನ ದಿನಗಳಲ್ಲಿ ( ಕಳೆದ ಹತ್ತು ವರುಷಗಳಿಂದ) ಶಿವಸೇನೆ ರಾಜಕೀಯದಲ್ಲಿ ದುರ್ಬಲವಾಗುತ್ತಿದ್ದು ಕನ್ನಡಿಗರನ್ನು ಓಲೈಸುತ್ತಿದೆ. ಹಾಗಾಗಿ ಈಗ ಮತ್ತೆ ಕನ್ನಡಕ್ಕೆ ಆದ್ಯತೆ ಬರುತ್ತಿದೆ. ಈಗ ಇಲ್ಲಿಯ ರಾಜ್ಯಪಾಲರು ಕನ್ನಡದವರೇ ಆಗಿರುವುದರಿಂದ ವಿಶೇಷ ಮಹತ್ವ ಬಂದಿದೆ.

ಎಸ್‌.ಎಂ. ಕೃಷ್ಣ ಅವರು ಇಲ್ಲಿಯ ಹುತಾತ್ಮ ಚೌಕದಲ್ಲಿ ಗಡಿನಾಡಿನಲ್ಲಿ ಹುತಾತ್ಮರಾದವರ ನೆನಪಿಗೆ ಅಲ್ಲಿಯ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಹೋದಾಗ ಶಿವಸೇನೆಯವರಿಂದ ಸ್ವಲ್ಪ ಗುಲ್ಲು ಶುರುವಾಗಿತ್ತು. ಆದು ತಕ್ಷಣವೇ ತಣ್ಣಗಾಯಿತು. ಈ ಹುತಾತ್ಮ ಚೌಕ್‌ ನಿರ್ಮಾಣವಾಗಿದ್ದೇ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದದ ಸಮಯದಲ್ಲಿ ಹೊಡೆದಾಟದಿಂದ ಮೃತರಾದವರ ಸ್ಮರಣೆಗಾಗಿ.

ಸದ್ಯಕ್ಕೆ ಮುಂಬಯಿ ಕನ್ನಡಿಗರ ಸ್ಥಿತಿಗತಿ ಬಗ್ಗೆ ನನ್ನ ಎರಡು ಮಾತುಗಳನ್ನು ಇಲ್ಲಿಗೆ ನಿಲ್ಲಿಸುತ್ತಿದ್ದೀನಿ. ಇನ್ನೂ ಹೆಚ್ಚಿನದು ಮುಂದಿನ ಲೇಖನದಲ್ಲಿ...ನಮಸ್ಕಾರ...

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more