ದತ್ತ ಜಯಂತಿಯ ಆನಂದ... ಅದರ ಅನುಬಂಧ...
ಸಾವಿರದ ಒಂಬೈನೂರ ತೊಂಬತ್ತ ನಾಲ್ಕನೇ ಇಸವಿಯ ದಶಂಬರ ತಿಂಗಳು. ನನ್ನ ಮಗಳು ರಚನಾಳಿಗೆ ಹದಿನೆಂಟು ತುಂಬಿತ್ತು. ಮೊದಲ ಬಾರಿಗೆ ಅವಳು ಕಾಫೀ ರವಾನೆ ಫಾರಂಗೆ ಸಹಿ ಮಾಡುವ ಅರ್ಹತೆ ಪಡೆದಿದ್ದಳು. ನಾವು ಪ್ರತೀ ವರ್ಷ ದಶಂಬರ ತಿಂಗಳ ಇಪ್ಪತ್ತೈದನೇ ತಾರೀಖು ನಾವು ಬೆಳೆಯುವ ರೊಬಸ್ಟಾ ಕಾಫಿಯ ಕೊಯ್ಲು ಪ್ರಾರಂಭ ಮಾಡುತ್ತೇವೆ. ಆ ದಿನ ಕ್ರಿಸ್ತ ಜಯಂತಿ ಕೂಡಾ! ಎಲ್ಲರಿಗೂ ಸಿಹಿ ಹಂಚಿ ಕಾಫೀ ಕೊಯ್ಯಲು ತೊಡಗುತ್ತೇವೆ.
ತೊಂಬತ್ತನಾಲ್ಕರ ಕಾಫೀ ಕೊಯ್ಲಿನ ಮುಹೂರ್ತದಲ್ಲಿ ಭಾಗವಹಿಸುವ ಮುನ್ನ ರಚನಾ ಬಾಬಾ ಬುಡಾನ್ ಗಿರಿಗೆ ಹೋಗಿ ಬರಲೇಬೇಕಾಗಿತ್ತು. ನಮ್ಮ ಸಂಸಾರದಲ್ಲಿನ ಪದ್ಧತಿಯಂತೆ ಪ್ರತಿಯೊಬ್ಬರೂ ಹದಿನೆಂಟು ತುಂಬಿದ ನಂತರ, ಪ್ರಬುದ್ಧ ಪ್ಲಾಂಟರ್ ಅನ್ನಿಸಿಕೊಂಡು ಕಾಫೀ ಕೊಯ್ಯುವ ಮೊದಲು ಬಾಬಾ ಬುಡಾನ್ ಗಿರಿಗೆ ಹೋಗಿ ದತ್ತ ಪೀಠಕ್ಕೆ ವಂದಿಸಿ, ಬಾಬಾ ಬುಡಾನ್ ಗುರುಗಳ ಸಮಾಧಿಗೆ ನಮಸ್ಕರಿಸಿ ಆಶೀರ್ವಾದವನ್ನು ಪಡೆಯುವ ರೂಢಿ ಇದೆ. ಬಾಬಾ ಬುಡಾನ್ ಗುರುಗಳು ಕಾಫಿ ಬೆಳೆಗಾರರ ‘ಗುರು’ ಎಂದು ಪರಿಗಣಿಸಲ್ಪಡುತ್ತಾರೆ.
ಇದಕ್ಕೆ ಕಾರಣ ಏನೆಂದರೆ, ಬಾಬಾ ಬುಡಾನ್ ಅವರು ಸಾವಿರದ ಆರುನೂರ ಎಪ್ಪತ್ತರ ಅಂದಾಜಿನಲ್ಲಿ ಪವಿತ್ರ ಮೆಕ್ಕಾ ಯಾತ್ರೆಗೆ ಹೋದರಂತೆ. ಯಾತ್ರೆಮಾಡಿ ಹಿಂದಿರುಗಿ ಬರುವಾಗ, ಯೆಮೆನ್ ದೇಶದಿಂದ ಏಳು ಕಾಫೀ ಬೀಜಗಳನ್ನು ತಂದು, ಇಂದು ಬಾಬಾ ಬುಡಾನ್ ಗಿರಿ ಎಂದು ಕರೆಯಲ್ಪಡುವ ಬೆಟ್ಟದಲ್ಲಿದ್ದ ತಮ್ಮ ಆಶ್ರಮದಲ್ಲಿ ಅವುಗಳನ್ನು ವೃದ್ಧಿ ಪಡಿಸಿದರಂತೆ. ತಾವು ಬೆಳೆದ ಆ ಕಾಫೀ ಬೀಜಗಳನ್ನು ಜಾತಿ ಮತ ಭೇದ ಎಣಿಸದೇ, ಎಲ್ಲಾ ಮತ ಮತ್ತು ಜಾತಿಗಳ ರೈತರಿಗೆ ಹಂಚಿ, ‘ಈ ಕಾಫೀ ಬೆಳೆಯಿಂದ ನಿಮಗೆ ಸಮೃದ್ಧಿ ಬರಲಿದೆ! ’ ಎಂದು ಹಾರೈಸಿ ಆಶೀರ್ವದಿಸಿದರಂತೆ.
ಅವರ ಹಾರೈಕೆ ಮುಂದಿನ ದಿನಗಳಲ್ಲಿ ಸತ್ಯವಾಯಿತು! (ಈ ವಿಚಾರವನ್ನು ಡಾ. ಜಿ. ಇ. ಡಿ’ ಸೋಜಾ, ಡೈರೆಕ್ಟರ್ ಆಫ್ ರಿಸರ್ಚ್, ಕೇಂದ್ರೀಯ ಕಾಫೀ ಸಂಶೋಧನಾಲಯ, ಬಾಳೆಹೊನ್ನೂರು ಇವರು ತಮ್ಮ ‘ಕಾಫೀ ಪ್ಲಾಂಟರ್ಸ್ ಗೈಡ್ 1974’ ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ)
ನಾವು ಬಾಬಾ ಬುಡಾನ್ ಗಿರಿಗೆ ಹೊರಟ ದಿನ ದತ್ತ ಜಯಂತಿಯ ಪವಿತ್ರ ದಿನ ಆಗಿತ್ತು. ನಾವು ಬೆಳಗ್ಗೆ ಬೇಗನೇ ಹೊರಟು ಬಾಬಾ ಬುಡಾನ್ ಗಿರಿಯ ದತ್ತ ಪೀಠ ತಲುಪಿದೆವು. ಇಬ್ಬನಿ ಕರಗಿಸುತ್ತಾ ಬೆಂಕಿಯ ಚೆಂಡಿನಂತಿದ್ದ ಸೂರ್ಯ ಮೇಲೇಳುತ್ತಿದ್ದ. ಬೆಳಗಿನ ಚಳಿ ಇನ್ನೂ ಕಡಿಮೆ ಆಗಿರಲಿಲ್ಲ. ಒಂದೊಂದಾಗಿ ವಾಹನಗಳು ಬೆಟ್ಟದ ಮೇಲಿನ ಬಯಲು ನಿಲ್ದಾಣಕ್ಕೆ ಬರಲು ತೊಡಗಿದ್ದುವು.
ಜನಜಂಗುಳಿ ಇನ್ನೂ ಜಾಸ್ತಿಯಾಗಿ ಇರಲಿಲ್ಲ, ಹಿಂದೂ ಅರ್ಚಕರೊಬ್ಬರು ಪವಿತ್ರ ಗುಹೆಯಲ್ಲಿರುವ ದತ್ತ ಪೀಠಕ್ಕೆ ಪೂಜೆ ಸಲ್ಲಿಸಿ ನಮಗೆ ಆ ಪವಿತ್ರ ಗುಹೆಯ ಮೃತ್ತಿಕಾ ಪ್ರಸಾದವನ್ನು ಹಣೆಯಲ್ಲಿ ಧರಿಸಲು ಕೊಟ್ಟರು. ನಮಗೆ ಆ ಮೃತ್ತಿಕೆಯನ್ನು ಹಣೆಯಲ್ಲಿ ಧರಿಸುವಾಗ ಮೈ ರೋಮಾಂಚನ ಆಯಿತು.
ಆನಂತರ ಅರ್ಚಕರು ನಮಗೆ ದತ್ತ ಪೀಠದ ಪಕ್ಕದಲ್ಲೇ ಇರುವ ‘ಬಾಬಾ ಬುಡಾನರ ಸಮಾಧಿಗೆ ನಮಿಸಿರಿ ಮತ್ತು ಅಲ್ಲೇ ನಿಂತಿದ್ದ ಹಸಿರು ಪೇಟದ ಮೌಲ್ವಿಯವರು ಕೊಡುವ ತೀರ್ಥವನ್ನು ಸ್ವೀಕರಿಸಿರಿ’ ಎಂದು ಹೇಳಿದರು. ನಾವು ಬಾಬಾ ಬುಡಾನ್ ಅವರ ಸಮಾಧಿಗೆ ನಮಿಸಿ, ಮೌಲ್ವಿಗಳ ಎದುರು ತೀರ್ಥಕ್ಕೆ ಕೈ ಒಡ್ಡಿದೆವು.
ಅವರು ಹೊಳೆಯುವ ಒಂದು ಹೂಜಿಯಲ್ಲಿ ಆಗಲೇ ಸಂಗ್ರಹಿಸಿ ಇಟ್ಟಿದ್ದ ‘ಆ ಪವಿತ್ರ ಗುಹೆಯ ಒಳಗಿನಿಂದ ಹುಟ್ಟಿಬರುತ್ತಿದ್ದ ಒರತೆಯ ಜಲತೀರ್ಥವನ್ನು ’ ನಮ್ಮ ಕೈ ತುಂಬಾ ಹೊಯ್ದರು. ನಾವು ಆ ಪರಿಶುದ್ಧ ತೀರ್ಥವನ್ನು ಮೂರು ಮೂರು ಸಲ ಕೈತುಂಬಾ ಕುಡಿದೆವು. ಆ ಜಲದ ರುಚಿಯನ್ನು ನಾವು ಈ ಜನ್ಮದಲ್ಲಿ ಎಂದಿಗೂ ಮರೆಯಲಾರೆವು.
ಆ ದಿನದ ಉತ್ಸವದಲ್ಲಿ ಮುಸ್ಲಿಮರು ಮತ್ತು ಹಿಂದುಗಳು ಸಮ ಸಮ ಸಂಖ್ಯೆಯಲ್ಲೇ ಇದ್ದರು. ಎಲ್ಲೂ ಭೇದ ಭಾವ ಕಂಡು ಬರಲಿಲ್ಲ. ಹೆಚ್ಚಿನ ಯಾತ್ರಾರ್ಥಿಗಳು ಪವಿತ್ರ ಗುಹೆಯ ಕಡೆಗೆ ಬರುವ ಮುನ್ನ ಸನಿಹದಲ್ಲೇ ಇರುವ ‘ಮಾಣಿಕ್ಯ ಧಾರಾ’ ಎಂಬ ತುಂತುರು ಜಲಪಾತದ ಕೆಳಗೆ ತಾವು ತೊಟ್ಟ ಬಟ್ಟೆಗಳಲ್ಲೇ ನಿಂತು ಮೈ ತೊಯ್ಸಿಕೊಂಡು, ಆ ಬೆಳಗಿನ ಚಳಿಯನ್ನು ಲೆಕ್ಕಿಸದೇ ಮಿಂದು ಬರುತ್ತಿದ್ದರು.
ಬಹುವರ್ಷಗಳ ಹಿಂದೆ ಮೈಸೂರಿನ ಮಹಾರಾಜರು ಕಟ್ಟಿಸಿದ ಜಲಪಾತದ ಸಮೀಪದ ದಿರಿಸು ಬದಲಾಯಿಸುವ ಕೋಣೆಗಳಲ್ಲಿ ಯಾತ್ರಾರ್ಥಿಗಳು ಒದ್ದೆ ಬಟ್ಟೆ ಕಳಚಿ ಬೇರೆ ಬಟ್ಟೆ ತೊಟ್ಟು ಹೊರ ಬರುತ್ತಿದ್ದರು. ತಾವು ಸ್ನಾನ ಮಾಡುವಾಗ ತೊಟ್ಟಿದ್ದ ಬಟ್ಟೆಗಳನ್ನು ಪಕ್ಕದಲ್ಲೇ ಇರುವ ತ್ಯಜಿಸಿದ ಬಟ್ಟೆಗಳ ರಾಶಿಗೆ ಅವರು ಎಸೆಯುತ್ತಿದ್ದರು. ಹೀಗೆ ಸ್ನಾನಮಾಡುವ ಮೊದಲು ತೊಟ್ಟ ಬಟ್ಟೆಗಳನ್ನು ತ್ಯಜಿಸಿದರೆ, ‘ಗ್ರಹಚಾರ ಪರಿಹಾರ ಆಗುವುದು! ’ ಎಂಬ ನಂಬಿಕೆ ಎಲ್ಲಾ ಮತದ ಭಕ್ತರಲ್ಲೂ ಇದೆಯಂತೆ.
ತ್ಯಜಿಸಿದ ಬಟ್ಟೆಗಳನ್ನು ಉತ್ಸವ ಸಮಿತಿಯವರು ಕೊನೆಗೆ ಅಲ್ಲಿಂದ ತೆಗೆಸುತ್ತಾರೆ ಎಂಬ ವದಂತಿ ತಿಳಿಯಿತು. ಹಾಗಾಗಿ,ಅಲ್ಲಿನ ಪರಿಶುದ್ಧ ಪರಸರದ ಮಾಲಿನ್ಯ ಆಗುವಂತೆ ಇರಲಿಲ್ಲ. ನಾವಂತೂ ಮನೆಯಲ್ಲೇ ಸ್ನಾನ ಮಾಡಿ ಹೊರಟು ಬಂದಿದ್ದರಿಂದ, ಮಾಣಿಕ್ಯ ಧಾರಾದಲ್ಲಿ ಸ್ನಾನ ಮಾಡಲು ಹೋಗಿರಲಿಲ್ಲ.
ಶ್ರೀ ದತ್ತಜಯಂತಿಯ ದಿನದಂದು ಶ್ರೀ ದತ್ತಪೀಠದ ಮೃತ್ತಿಕೆ ಧರಿಸಿ, ಗುಹೆಯಲ್ಲಿ ಒಸರುವ ಸ್ಪಟಿಕ ಜಲತೀರ್ಥ ಕುಡಿದ ನಮಗೆ ತುಂಬಾ ಹಾಯೆನಿಸಿತು. ಜಾತಿಮತ ಭೇದವಿಲ್ಲದೇ ಜನರು ಒಟ್ಟು ಸೇರುತ್ತಿದ್ದ ಈ ದತ್ತಜಯಂತಿಯ ಉತ್ಸವದಲ್ಲಿ ಪಾಲ್ಗೊಂಡ ನೆನಪು ನಮ್ಮಲ್ಲಿ ಎಂದೆಂದಿಗೂ ಹಸಿಯಾಗೇ ಇರುತ್ತದೆ.
ಈಗ?‘ಈ ಜಾಗಕ್ಕೂ ಬಂತೆ ಮತ ಭೇದ?’ ಎಂದು ಖೇದವಾಗುತ್ತದೆ.‘ಈ ಉತ್ಸವವು ನಾನು ಮೇಲೆ ಬಣ್ಣಿಸಿದ ರೀತಿಯಲ್ಲೇ ಮುಂದಕ್ಕೂ ನಡೆಯಲಿ!’ ಎಂದು ಹಾರೈಸುತ್ತೇನೆ.
ಪೂರಕ ಮಾಹಿತಿ:











Click it and Unblock the Notifications