ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಡೆದಾಡುವ ದೇವರಿಗೆ...

By Staff
|
Google Oneindia Kannada News

Sathya Saibabaನಡೆದಾಡುವ ದೇವರೆ, ಉಭಯ ಕುಶಲೋಪರಿ ಸಾಂಪ್ರತ. ನಾವು ಕ್ಷೇಮ. ನಿನ್ನ ಕ್ಷೇಮ ಸಮಾಚಾರ ಖಡಕ್ಕಾಗಿ ತಿಳಿಯಲಿಲ್ಲ. ಆದರೂ ಎಲ್ಲವನ್ನೂ ಬಲ್ಲವರಂತೆ ಹೇಳುತ್ತಿದ್ದಾರೆ: ‘ಪಾಪ ಕಣ್ರೀ, ಸಾಯಿಬಾಬಾಗೆ ವಿಪ್ರೀತ ಹುಶಾರಿಲ್ವಂತೆ. ನಡೆದಾಡೋಕೂ ಆಗಲ್ವಂತೆ. ಎರಡೇ ಎರಡು ಮಾತಾಡಿದ್ರೆ ಸಾಕು-ಬಾಬಾಗೆ ಸುಸ್ತಾಗಿ ಬಿಡ್ತದಂತೆ. ದೇವರೇ ಆಗಿರುವ ಸಾಯಿಬಾಬಾ ಕೂಡ ಡಾಕ್ಟರ್‌ ಹತ್ರ ಹೋಗ್ತಾರಂತೆ. ಮಾತ್ರೆ ತಗೋತಾರಂತೆ. ವ್ಹೀಲ್‌ಛೇರ್‌ನಲ್ಲಿ ಕೂತ್ಕೊಂಡು ಅಡ್ಡಾಡ್ತಾರಂತೆ. ಸುಮ್‌ಸುಮ್ನೇ ಬೆದರ್ತಾರಂತೆ. ಕ್ಷಣಕ್ಕೊಮ್ಮೆ ಬೆವರ್ತಾರಂತೆ. ಗಡಗಡಗಡ ನಡುಗ್ತಾರಂತೆ. ಯಾವುದೋ ಅವ್ಯಕ್ತಯ ಅವರನ್ನು ಕಂಗಾಲು ಮಾಡಿದೆಯಂತೆ. ಇದೆಲ್ಲದರ ಪರಿಣಾಮ-ಬಾಬಾ ಪೂರ್ತಾ ಇಳಿದು ಹೋಗಿದಾರಂತೆ ಕಣ್ರೀ, ಪಾಪ.. ಪಾಪ..’

ಮಾತಾಡುವ ದೇವರೆ, ನಿನ್ನ ಆರೋಗ್ಯ ಕುರಿತು ಇಂಥವೇ ಗುಪ್ತ್‌ ಗುಪ್ತ್‌ ಸುದ್ದಿಗಳು ತೇಲಿ ಬರುತ್ತಲೇ ಇವೆ. ರೋಗದ ಭಯ, ಸಾವಿನ ಭಯ, ಕಳ್ಳರ ಭಯ, ಕೇಡಿಗರ ಭಯ, ಆಸೆಯ ಭಯ, ಮೋಸದ ಭಯ, ನಡೆದಾಡುವ ದೇವರನ್ನೂ ಬಿಡಲಿಲ್ಲ ಎಂಬ ಸಂಗತಿಯೇ ಈ ಕಾಗದದ ದೋಣಿಗೆ ಹುಟ್ಟು ಹಾಕುವಂತೆ ಮಾಡಿದೆ. ನಿನ್ನ ಕ್ಷೇಮ ಸಮಾಚಾರವನ್ನ ನಾಲ್ಕು ಸಾಲಿನ ಇ-ಮೇಲ್‌ನಲ್ಲಿ ಹೇಳಿ ಬಿಡಬೇಡ. ಟೈಮಿಲ್ಲ ಎಂಬ ನೆಪ-ಬೇಡ, ಬೇಡ. ನಾಳೆಯ ಕಡೆಗೆ ಕೈ ತೋರಿಸದೆ, ನಂಗೆ ಏನೂ ಆಗಿಲ್ಲ ಎಂದು ತೇಲಿಸಿ ಮಾತಾಡದೆ, ಪುರುಸೊತ್ತು ಮಾಡಿಕೊಂಡು ಕಾಗದ ಬರಿ. ಯಾಕೆ ಹೀಗೆ ಕೇಳ್ತಾ ಇದೀವಿ ಅಂದ್ರೆ-

ಬಾಬಾಜೀ, ನೀನೇ ಹೇಳಿಕೊಂಡ ಹಾಗೆ ನೀನು ದೇವರು! ನಿಂಗೆ ಓದೋಕೆ ಗೊತ್ತು. ಬರೆಯೋಕೆ ಗೊತ್ತು. ಭಾಷಣ ಗೊತ್ತು. ಭಜನೆ ಗೊತ್ತು. ‘ಧೀಂ ರಂಗ’ ಅನ್ನೋ ಹಾಗೆ ದರ್ಶನ ಕೊಡೋದೂ ಗೊತ್ತು ! ಅಂದ್ಹಾಗೆ ಬಾಬಣ್ಣಾ, ನಾವೆಲ್ಲ ತಿಳಿದಂತೆ ಕಾಗದದಲ್ಲಿ -ಒಕ್ಕಣೆ, ಕೈ ಬರಹ, ಚಿತ್ತು ಎಲ್ಲ ಕೂಡಿ ಆತ್ಮೀಯತೆ ಮತ್ತೂ ಇರುತ್ತೆ. ಒಂದು ಕಾಗದ ಎದುರಿಗಿಟ್ಕೊಂಡು ಅದನ್ನು ಬರೆದವರ ಇತಿಹಾಸ ಹೇಳೋದು ನಮ್ಗೆ ಗೊತ್ತು ! ಒಂದು ಕಾಗದ ಬರಿ, ನಿನ್ನ ಭವಿಷ್ಯ ಹೇಳೋಕೆ ನಮಗೊಂದು ಛಾನ್ಸು ಕೊಡು, ಪ್ಲೀಸ್‌...

***

ಹೌದು ದೇವ್ರೇ, ಬಾಬಾ ಅಂದಾಕ್ಷಣ ನಮಗೆ ಪುಟ್ಟಪರ್ತಿ ನೆನಪಾಗುತ್ತೆ. ಪುಟ್ಟಪರ್ತಿ ಬಗ್ಗೆ ಬರೀತಾ ಹೋದ್ರೆ ಪುಟ ಭರ್ತಿಯಾಗುತ್ತೆ. ನಿನ್ನನ್ನ, ನಿನ್ನ ಪವಾಡಗಳ ಸಮೇತ ಧಿಕ್ಕರಿಸುವ ಸಾವಿರಾರು ಮಂದಿ ‘ ಅಯ್ಯೋ ಬಿಡ್ರಿ, ಸಾಯಿಬಾಬಾದು ಬರೀ ಟ್ರಿಕ್ಸು. ನಮ್ಮ ಉದಯ್‌ ಜಾದೂಗಾರ್‌, ಪಿ. ಸಿ. ಸರ್ಕಾರ್‌ ಮ್ಯಾಜಿಕ್ಕಿನ ಮುಂದೆ ಅವ್ನು ಲೆಕ್ಕಕ್ಕೇ ಬರಲ್ಲ ’ ಅಂದು ಬಿಡ್ತಾರೆ. ಮುಂದುವರಿದು -ನಮ್ಮ ಡಾ.ಎಚ್ಚೆನ್‌ ಬೂದಿಯ ಬದಲು ಕುಂಬಳಕಾಯಿ, ಇಲ್ಲಾಂದ್ರೆ ಕ್ರಿಕೆಟ್‌ ಚೆಂಡು ಸೃಷ್ಟಿ ಮಾಡ್ರೀ’ ಎಂದು ಛಾಲೆಂಜ್‌ ಹಾಕಿದ್ದು, ನೀವು ಸವಾಲು ಸ್ವೀಕರಿಸದೆ ಸೋತದ್ದನ್ನು ಪ್ರತ್ಯಕ್ಷ ಕಂಡವರಂತೆ ವರ್ಣಿಸುತ್ತಾರೆ. ಅದೇ ವೇಳೆಗೆ ವೈಚಾರಿಕತೆಯ ಬೂದಿಯನ್ನೇ ಮೈ ತುಂಬಾ ಮೆತ್ತಿಕೊಂಡ ಪಡ್ಡೆ ಹೈಕಳು ಬಂದುಬಿಟ್ಟರೆ ಅವರೆಲ್ಲ ಒಕ್ಕೊರೆಲಿಂದ ಹಾಡುತ್ತಾರೆ; ‘ ಸಾಯಿಬಾಬಾ, ಸಾಯಿಬಾಬಾ, ನಿನ್ನ ಬ್ಯಾಳೆಕಾಳು ಗೊತ್ತಾಯ್ತು ಸಾಯಿಬಾಬಾ..’

ಬಾಬಾ ಡಿಯರ್‌, ನಾವು ನಂಬಿರುವ ದೇವರುಗಳದ್ದೆಲ್ಲ ಚಿತ್ರ-ವಿಚಿತ್ರ ಕಥೆ. ಅವುಗಳಿಗೆಲ್ಲ ಡಬ್ಬಲ್‌, ತ್ರಿಬ್ಬಲ್‌ ಹೆಸರು. ಎಂಟೋ ಅವತಾರ! ನೀನೂ ಅಂಥವನೇ ತಾನೆ?ಈ ಹಿಂದೆ ನಾರದ(?!), ನಾರಾಯಣ ಮುನಿ, ಗೋಪಾಲಕೃಷ್ಣ ಎಂದೆಲ್ಲ ಅವತಾರ ಎತ್ತಿದ್ಯಂತೆ. ಕಲಿಯುಗದಲ್ಲಿ ಸತ್ಯನಾರಾಯಣ ರಾಜು ಎಂಬ ಹುಡುಗನಾಗಿ, ದನ ಮೇಯಿಸುತ್ತಾ ಇದ್ದವ ಏಕಾಏಕಿ ಸಾಯಿಬಾಬಾ ಆಗಿಬಿಟ್ಟರೆ! ಬಾಬಣ್ಣಾ, ಬರೀ ಎಂಟನೇ ತರಗತಿ ಓದಿದ ನೀನು ಇದ್ದಕ್ಕಿದ್ದ ಹಾಗೆ ದೇವರ ಲೆವೆಲ್ಲಿಗೆ ಬೆಳೆದು ನಿಂತದ್ದು, ತೆಲುಗು, ಕನ್ನಡ,ಇಂಗ್ಲಿಷ್‌,ಹಿಂದಿ ಎಲ್ಲ ಕಲಿತದ್ದು, ಬಂದವರಿಗೆಲ್ಲ ಬೂದಿ ಹಚ್ಚಿದ್ದು(ವಿಐಪಿ/ವಿವಿಐಪಿಗೆ ಮಾತ್ರ ನೀನೇ ಜಿಂಕೆಯಂತೆ ಓಡಿಹೋಗಿ ತಪ್ಪಿಸಿಕೊಂಡದ್ದು, ಎಲ್ಲರ ರೋಗ ವಾಸಿ ಮಾಡುವ ನೀನೇ ಈಗ ರೋಗಿಯಾಗಿರೋದು. ಇದೆಲ್ಲ ನಮಗೆ ತಮಾಷೆಯ, ಬೆರಗಿನ ವಿಚಾರವೇ.

ಪವಾಡಗಳ ದೇವರೆ, ಈವರೆಗಿನ ಮಾತುಗಳಿಂದ ನಿಂಗೆ ಬೇಜಾರಾಯ್ತೇನೋ, ಕ್ಷಮಿಸು. ನಾವು ಹುಲುಮಾನವರು. ದೇವರಿಗೆ ಕೈ ಮುಗಿಯುವುದು, ಅದೇ ದೇವರನ್ನು ಜಗಳಕ್ಕೆ ಕರೆಯುವುದು ನಮ್ಮ ಪ್ರೀತಿಯ ಹಾಬಿ. ಇಷ್ಟೆಲ್ಲ ಟೀಕೆಗಳ ಮಧ್ಯೆಯೂ ನಿನ್ನನ್ನ ಭಕ್ತಿ ಭಾವದಿಂದ ಹೊಗಳುವ ಆಸೆಯಾಗುತ್ತದೆ.

ಮ್ಯಾಜಿಕ್‌ ಭಗವಂತಾ, ಹಾಗೆ ನೋಡಿದರೆ ಪುರಾಣದ ಭಗೀರಥ ನಿಮ್ಮಂದೆ ಏನೇನೂ ಅಲ್ಲ ಅನಿಸುತ್ತೆ. ಯಾಕೆ ಅಂದ್ರೆ ಭಗೀರಥನ ಮುಂದೆ ದೇವತೆಗಳು/ಋಷಿಗಳಿದ್ದರು. ಅದೇ ಕಾರಣಕ್ಕೆ ಗಂಗೆ ಹರಿದುಬಂದಳು. ಅದೇ ಕಾರಣಕ್ಕೆ ಗಂಗೆ ಹರಿದುಬಂದಳು. ಆದರೆ ಸೃಷ್ಟಿಸಿದ ಭಗವಂತ ಕೂಡ ಮರೆತುಬಿಟ್ಟಿದ್ದ ಸಂಡೂರಿನ ರಣಬಿಸಿಲಿಗೆ ನೀನು ಗಂಗೆಯನ್ನು ಕರೆತಂದ ಸಾಹಸವಿದೆಯಲ್ಲ -ಅದು ನಿನ್ನಿಂದ ಮಾತ್ರ ಸಾಧ್ಯ. ಅಮೆರಿಕದ ಉಪರಾಷ್ಟ್ರಪತಿ, ಪ್ರಧಾನಮಂತ್ರಿ..ಇಂತಹ ಮಂದಿ ಪುಟ್ಟಪರ್ತಿಯ ಅಂಗಳದಲ್ಲಿ ಉದ್ದಂಡ ಬಿದ್ದ ದೃಶ್ಯವಿದೆಯಲ್ಲ ಅಂಥ ಮ್ಯಾಜಿಕ್ಕು ನಿನ್ನಿಂದ ಮಾತ್ರ ಸಾಧ್ಯ. ಇದನ್ನೆಲ್ಲ ನೆನಪು ಮಾಡಿಕೊಂಡಾಗ ಪ್ರೀತಿಯಿಂದಲೇ ಹೇಳಬೇಕು ಅನಿಸುತ್ತೆ ದೊರೇ, ನೀನು ಸಾಯಿಬಾಬಾ ಅಲ್ಲ ಸೈ ಸೈ ಬಾಬಾ...

ಹೌದು, ನಾವು ಹಾಗೇನೇ, ದೇವರನ್ನ ಪೂಜಿಸ್ತೀವಿ. ವಿಪರೀತ ನಂಬ್ತೀವಿ. ಅವ ಪವಾಡ ಮಾಡ್ತಾನೆ; ರೋಗ ವಾಸಿ ಮಾಡ್ತಾನೆ; ವರ ಕೂಡ್ತಾನೆ; ಪರೀಕ್ಷೆ ಮಾಡ್ತಾನೆ; ಸಾವಿರ- ಲಕ್ಷಾಂತರ ವರ್ಷ ಸಾಯದೇ ಇರ್ತಾನೆ ಅಂತೆಲ್ಲ ನಂಬ್ತೀವಿ. ನಮ್ಮ ಪುರಾಣದ ದೇವರುಗಳು ಮಾಡಲಾರದ ಸಾಧನೆಯನ್ನು ಸಾಯಿಬಾಬಾ ಮಾಡಿದ್ದಾರೆ ಎಂದೆಲ್ಲ ಹಾಡಿ ಹೊಗಳ್ತಾ ಇದ್ದೀವಿ. ಹೀಗಿರುವಾಗಲೇ ದೇವ್ರೇ-ನೀನು ಕಾಯಿಲೆ ಬಿದ್ದಿದ್ದೀಯ ನಡೆದಾಡೋಕೆ, ಮಾತಾಡೋಕೆ, ಕಷ್ಟ ಪಡ್ತಿದೀಯ! ಮ್ಯಾಜಿಕ್‌ ಮಾಡೋದು ನಿಲ್ಸೇ ಬಿಟ್ಟಿದೀಯ! ಹೊಸ ಅವತಾರದ ಬಗ್ಗೆ ಹೇಳ್ತಾ ಇದೀಯ!

ಬಾಬಾ ಮಹಾರಾಜ್‌- ‘ನಂಗೆ ಎಲ್ಲಾ ಗೊತ್ತಿದೆ. ನಾನು ದೇವರು’ ಅಂತ ನೀನೇ ಹೇಳ್ತಾ ಇದ್ದೇ! ಅಂಥ ನಿನಗೆ ಸುನಾಮಿ ದುರಂತ ಯಾಕೆ ಗೊತ್ತಾಗಲಿಲ್ಲ ?ಭಾರತೀಯರ ನಂಬಿಕೆ ಪ್ರಕಾರ ದೇವರು ಚಿರಂಜೀವಿ. ಅವನಿಗೆ ಸಾವಿಲ್ಲ ಎಂಬ ಸರಳ ಸತ್ಯ ನಡೆದಾಡುವ ದೇವರಾಗಿದ್ದ ನಿನಗೆ ಯಾಕೆ ಅರ್ಥವಾಗಲಿಲ್ಲ ? ಇದೆಲ್ಲ ಅತ್ಲಾಗಿರಲಿ. ನೀನು 2021ಕ್ಕೆ ಅವತಾರ ಮುಗಿಸ್ತೀನಿ ಅಂದೆಯಂತೆ. ಬ್ಯಾಡ, ಇಷ್ಟು ಬೇಗ ನಮ್ಮಿಂದ ದೂರಾಗುವ ಮಾತಾಡಬೇಡ. 21 ಬದಲಿಗೆ 2071ಕ್ಕೆ ಅವತಾರ ಮುಗಿಸು ನಿನ್ನ ಕಾಯಿಲೆ ವಾಸಿಯಾಗಲಿ. ನಿನ್ನ ನೆಪದಲ್ಲಿ, ನಿನ್ನ ಹೆಸರಲ್ಲಿ ಪುಟ್ಟಪರ್ತಿಗೆ ಒದಗಿದ ಭಾಗ್ಯ ದೇಶದ ಇನ್ನಷ್ಟು ಭಾಗಗಳಿಗೆ ಒದಗಿಬರಲಿ. ಏಕಕಾಲಕ್ಕೆ ನಿಮಗೆ ಮತ್ತು ನಮಗೆ ಒಳ್ಳೆಯದಾಗಲಿ.

-ಎ.ಆರ್‌.ಮಣಿಕಾಂತ್‌

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X