• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೊಬೈಲ್‌ ನಿಷೇಧ ಮತ್ತು ತಂತ್ರಜ್ಞಾನದ ಸಮಸ್ಯೆ

By Staff
|
 • ಕೃಷ್ಣ ರಾಜ್‌, ಬೆಂಗಳೂರು
 • Krishnaraj P.M.ಮೊಬೈಲ್‌ ಪೋನುಗಳು ಇಂದಿನ ಜೀವನದ ಒಂದು ಅನಿವಾರ್ಯ ಅಂಗವೇ ಆಗಿಬಿಟ್ಟಿರುವಾಗ ಅದರ ಬಳಕೆಯ ಮೇಲಿನ ನಿರ್ಬಂಧ ಹಾಸ್ಯಾಸ್ಪದವಾಗಿ ಕಾಣುವುದು ಸಹಜ. ಇಂದು ಸಿಟಿ ಬಸ್ಸುಗಳಲ್ಲಿ, ಹೋಟೇಲುಗಳಲ್ಲಿ, ಕಛೇರಿಗಳಲ್ಲಿ, ಎಲ್ಲೆಲ್ಲೂ ಒಂದೇ ಬೋರ್ಡು - ಇಲ್ಲಿ ಮೊಬೈಲ್‌ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ. ಕಾಲೇಜುಗಳಲ್ಲಿ ಮೊಬೈಲ್‌ ನಿಷೇಧದ ಬಗ್ಗೆ ಹಾಹಾಕಾರ ಎದ್ದಿದೆ. ಇತ್ತೀಚೆಗೆ ಮೊಬೈಲ್‌ ಅನ್ನು ಮನೆಯಲ್ಲಿ ಬಿಟ್ಟು ಹೊರಗಡೆ ಉಪಯೋಗಿಸುವುದೇ ಕಷ್ಟವಾಗಿರುವಾಗ ‘ಮೊಬೈಲ್‌’ ಇಟ್ಟುಕೊಳ್ಳುವ ಅಗತ್ಯತೆ ಏನೆಂದು ಎಲ್ಲರೂ ಪ್ರಶ್ನಿಸುವಂತಾಗಿದೆ. ತಂತ್ರಜ್ಞಾನವೊಂದರ ಸಾಧ್ಯತೆ-ಬಾಧ್ಯತೆಗಳೆರಡನ್ನೂ ಸರಿಯಾಗಿ ಅರಿತುಕೊಳ್ಳದಿದ್ದರೆ ಇಂತಹ ಪರಿಸ್ಥಿತಿಗಳು ಪದೇ ಪದೇ ಮರುಕಳಿಸುತ್ತಲೇ ಇರುತ್ತದೆ.

  ಹೊಸ ತಂತ್ರಜ್ಞಾನವೊಂದು ಬಳಕೆಗೆ ಬರುವಾಗ ಅದಕ್ಕೆ ವಿರೋಧ ವ್ಯಕ್ತವಾಗುವುದು ಸಾಮಾನ್ಯ ಸಂಗತಿ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಬಸ್ಸುಗಳು ಬಂದಾಗ ಟಾಂಗಾದವರು ಅದನ್ನು ವಿಪರೀತವಾಗಿ ವಿರೋಧಿಸಿದ್ದರಂತೆ. ಐ.ಬಿ.ಎಂ. ಕಂಪೆನಿ ಭಾರತಕ್ಕೆ ಬರುವುದನ್ನು ಬಲವಾಗಿ ವಿರೋಧಿಸಿದವರಲ್ಲಿ ಜಾರ್ಜ್‌ ಫರ್ನಾಂಡಿಸ್‌ ಕೂಡ ಇದ್ದರು. ಕೆಲವು ವರ್ಷಗಳ ಹಿಂದೆ ಕೂಡ ಟಿವಿಯ ಅಗತ್ಯತೆ ಒಂದು ಪ್ರಮುಖ ಚರ್ಚೆಯ ವಿಷಯವಾಗಿತ್ತು. ಕಂಪ್ಯೂಟರ್‌ನ ಅನಿವಾರ್ಯತೆಯನ್ನು ನಾವು ಕಂಡುಕೊಂಡಿದ್ದರೂ ಕೂಡ ಅದಕ್ಕೆ ವಿರೂಧಿಗಳೇನೂ ಕಡಿಮೆಯಾಗಿಲ್ಲ. ಕೃಷಿಯಲ್ಲಿಯೂ ಕೂಡ ಹೊಸ ತಂತ್ರಜ್ಞಾನದ ಬಳಕೆಗೆ ವಿರೋಧವಿರುವುದನ್ನು ನಾವು ಇಂದಿಗೂ ಕಾಣಬಹುದು.

  ಬಹಳ ಕಾಲದಿಂದ ನೆಚ್ಚಿಕೊಂಡು ಬಂದ ಮೌಲ್ಯಗಳನ್ನು ಬಿಟ್ಟು ಹೊಸದನ್ನು ಅಪ್ಪಿಕೊಳ್ಳುವುದು ಎಂಥವರಿಗೂ ಕಷ್ಟವೇ. ನಡೆದು ಬಂದ ದಾರಿಯನ್ನು ಬದಲಾಯಿಸುವುದು ಸುಲಭದ ಕೆಲಸವಲ್ಲ. ಆದರೆ ತಂತ್ರಜ್ಞಾನ ಯಾವತ್ತೂ ಹೊಸ ದಿಕ್ಕಿನತ್ತ ನಡೆಯುವಂತಹದು. ಹೊಸ ದಾರಿಯ ಅನ್ವೇಷಣೆಯೇ ಅದರ ಗುರಿ. ತಂತ್ರಜ್ಞಾನದ ಮೂಲ ಉದ್ದೇಶ ಮಾನವನ ಏಳಿಗೆ - ಎಂಬ ಮಾತು ಕ್ಲೀಷೆಯಾಗಿ ಕಂಡರೂ ಅದು ಸತ್ಯ. ತಾನು ನಡೆದ ಪ್ರಗತಿಯ ಹೊಸ ದಾರಿಯಲ್ಲಿ ಮನುಕುಲವನ್ನು ಕೊಂಡೈವುದೇ ತಂತ್ರಜ್ಞಾನದ ಘನ ಉದ್ದೇಶ.

  ವಿಜ್ಞಾನ ಮತ್ತು ತಂತ್ರಜ್ಞಾನ ಇವೆರಡರ ಸಮಸ್ಯೆ ಇರುವುದೇ ಇಲ್ಲಿ; ಜನರ ನಂಬಿಕೆಗಳನ್ನು ಬದಲಾಯಿಸುವುದರಲ್ಲಿ. ಆದರೆ ವಿಜ್ಞಾನದ ಸಮಸ್ಯೆಗಳು ತಂತ್ರಜ್ಞಾನದ ಸಮಸ್ಯೆಗಳಿಗಿಂತ ಸರಳ. ಹೊಸ ವಿಜ್ಞಾನ ತತ್ವಗಳು ಸತ್ಯವನ್ನು ಪ್ರತಿಪಾದಿಸುತ್ತವೆ. ಜನ ಅದನ್ನು ನಂಬಲಿ ಅಥವಾ ಬಿಡಲಿ, ಅದರಿಂದ ಆ ಹೊಸ ಸತ್ಯಕ್ಕೇನೂ ನಷ್ಟವಿಲ್ಲ. ಆ ಸತ್ಯವನ್ನು ಜನ ಒಪ್ಪಲು ತಡವಾದರೂ, ಒಂದಲ್ಲಾ ಒಂದು ದಿನ ಒಪ್ಪುತ್ತಾರೆಂಬ ವಿಶ್ವಾಸದಿಂದ ವಿಜ್ಞಾನ ಮುಂದುವರೆಯುತ್ತದೆ. ಭೂಮಿ ದುಂಡಾಗಿದೆ, ಚಪ್ಪಟೆಯಾಗಿಲ್ಲ ಎಂಬುದು ಸತ್ಯ. ಆದರೆ ಅದನ್ನು ಒಪ್ಪಲು ಜನರಿಗೆ ಸಮಯ ಬೇಕಾಯಿತು. ಅನೇಕ ವಿರೋಧಗಳ ನಂತರ ಕೊನೆಯಲ್ಲಿ ವಿಜ್ಞಾನ ವಿಜಯಿಯಾಯಿತು.

  Why should the mobile phone be banned?ಆದರೆ ತಂತ್ರಜ್ಞಾನದ ಸಮಸ್ಯೆಗಳೇ ಬೇರೆ. ತಂತ್ರಜ್ಞಾನ ಯಾವುದೇ ಶಾಶ್ವತ ಸತ್ಯದ ಹುಡುಕಾಟದಲ್ಲಿಲ್ಲ. ಅದರ ಗುರಿ ಮಾನವನ ಅಭಿವೃದ್ಧಿಗೆ ಬೇಕಾದ ಸಲಕರಣೆಗಳ ಉತ್ಪಾದನೆ. ತಂತ್ರಜ್ಞಾನಕ್ಕೆ ವ್ಯಾಪಾರಿಕ ಆಸಕ್ತಿಗಳಿವೆ. ಅದು ವಿಜ್ಞಾನದಂತೆ ಜನರ ಅಭಿಪ್ರಾಯಗಳಿಗೆ ತಥಸ್ಥವಾಗಿರಲು ಸಾಧ್ಯವಿಲ್ಲ. ಮಾರುಕಟ್ಟೆಯ ಆಕಾಂಕ್ಷೆಗಳಿಗೆ ಅನುಗುಣವಾಗಿ ಅದರ ಆಸಕ್ತಿಗಳು ಬದಲಾಗುತ್ತದೆ. ಆದ ಕಾರಣ ತಂತ್ರಜ್ಞಾನ ಜನರ ನಂಬಿಕೆಗಳನ್ನು ವಿಜ್ಞಾನದಂತೆ ಸಮರ್ಥವಾಗಿ ಬದಲಾಯಿಸಲು ಶಕ್ತವಾಗಿರುವುದಿಲ್ಲ. ಬದಲಿಗೆ ಅದು ಜನರ ಆಸಕ್ತಿಗಳಿಗೆ ಅನುಗುಣವಾಗಿ ತನ್ನ ನಂಬಿಕೆಗಳನ್ನು ರೂಪಿಸಿಕೊಳ್ಳುತ್ತದೆ.

  ಹಾಗೆಂದ ಮಾತ್ರಕ್ಕೆ ತಂತ್ರಜ್ಞಾನ ಜನರ ನಂಬಿಕೆಗಳನ್ನು ಬದಲಿಸುವುದಿಲ್ಲ ಅನ್ನುವುದು ಸರಿಯಲ್ಲ. ಯಾವುದೇ ಹೊಸ ತಂತ್ರಜ್ಞಾನ ಜನರ ನಡುವೆ ಉಪಯೋಗಕ್ಕೆ ಬಂದಾಗ ಅವರ ನಂಬಿಕೆ ಮತ್ತು ನಡವಳಿಕೆಗಳ ಮೇಲೆ ಅಗಾಧ ಪರಿಣಾಮವನ್ನು ಬೀರುತ್ತದೆ. ಆದರೆ ಒಂದು ತಂತ್ರಜ್ಞಾನ ಉಪಯೋಗಕ್ಕೆ ಬಂದ ಮೇಲೆ ಅದರ ಬಳಕೆಯ ಸಾಧ್ಯತೆಗಳು ಬೆಳೆಯುತ್ತಾ ಹೋಗುತ್ತದೆ. ತಂತ್ರಜ್ಞಾನವೊಂದು ಅದರ ನಿಶ್ಚಿತ ಕಾರ್ಯಕ್ಷೇತ್ರ ಬಿಟ್ಟು ಬೇರೆ ಕಡೆಗಳಲ್ಲಿ ಉಪಯೋಗಿಸ್ಪಡುವುದೇ ತಂತ್ರಜ್ಞಾನದ ಅತೀ ದೊಡ್ಡ ಸಮಸ್ಯೆ. ಚಾಕುವನ್ನು ತರಕಾರಿ ಹೆಚ್ಚಲು ಉತ್ಪಾದಿಸಿದರೂ ಅದನ್ನು ಕುತ್ತಿಗೆ ಕೊಯ್ಯಲು ಉಪಯೋಗಿಸುವುದನ್ನು ತಡೆಲಾಗದೇ ಇರುವುದೇ ತಂತ್ರಜ್ಞಾನದ ಮೂಲ ಸಮಸ್ಯೆ.

  ‘ಬಂದೂಕು ಎಂದಿಗೂ ಸುಡುವುದಿಲ್ಲ’ - ಇದೊಂದು ಜನಪ್ರಿಯ ಹೇಳಿಕೆ. ‘ ಟಿವಿ ಒಳ್ಳೆಯದೇ ಕೆಟ್ಟದೇ?’, ‘ಬಾಂಬ್‌, ರಾಕೆಟ್‌ಗಳು ಬೇಕೇ ಬೇಡವೇ?’ -ಇಂತಹ ಚರ್ಚೆಗಳ ಸಮಯದಲ್ಲಿ ಈ ಹೇಳಿಕೆಯ ಬಳಕೆಯಾಗುತ್ತದೆ. ಇಲ್ಲಿನ ವಾದ ಹೀಗಿರುತ್ತದೆ - ಯಾವುದೇ ತಂತ್ರಜ್ಞಾನ ಸ್ವಭಾವತಃ ಒಳ್ಳೆಯದು ಅಥವಾ ಕೆಟ್ಟದು ಎಂದೇನೂ ಇರುವುದಿಲ್ಲ. ಜನರು ಅದನ್ನು ಉಪಯೋಗಿಸುವ ರೀತಿಯಲ್ಲಿ ಅದಕ್ಕೊಂದು ಮೌಲ್ಯ ಬರುತ್ತದೆ. ಬಂದೂಕು ತಾನೇ ತಾನಾಗಿ ಯಾರನ್ನೂ ಸುಡುವುದಿಲ್ಲ. ಅದು ಯಾರೋ ಒಬ್ಬನ ಕೈಯಲ್ಲಿ ಸಿಕ್ಕಿ, ಅವನ ಆದೇಶದಂತೆ ಇನ್ಯಾರನ್ನೋ ಸುಡುತ್ತದೆ. ಆದ್ದರಿಂದ ತಂತ್ರಜ್ಞಾನಕ್ಕೆ ಅದರದೇ ಆದ ಮೌಲ್ಯಗಳಿಲ್ಲ. ಅದು ಆಡಿಸುವವನ ಕೈಗೊಂಬೆಯಾಗಿರುತ್ತದೆ. ಉಪಯೋಗಿಸುವ ವ್ಯಕ್ತಿಯ ಮೌಲ್ಯಕ್ಕನುಗುಣವಾಗಿ ತಂತ್ರಜ್ಞಾನ ಒಳ್ಳೆಯದು ಅಥವಾ ಕೆಟ್ಟದ್ದು ಎನಿಸುತ್ತದೆ. ಆದ್ದರಿಂದ ಈ ವಾದದ ಪ್ರಕಾರ ತಂತ್ರಜ್ಞಾನದ ದೂಷಣೆ ತಪ್ಪು.

  ಆದರೆ ಈ ವಾದಕ್ಕೆ ಹಲವು ಮಂದಿ ವಿರೋಧ ವ್ಯಕ್ತಪಡಿಸುತ್ತಾರೆ. ಮೇಲಿನ ವಾದವನ್ನು ಸೂಕ್ಷ್ಮವಾಗಿ ನೋಡಿದರೆ ಅಲ್ಲಿ ತಂತ್ರಜ್ಞಾನದ ದೂಷಣೆಯ ಜೊತೆಗೆ ತಂತ್ರಜ್ಞನ ದೂಷಣೆಯೂ ತಪ್ಪು ಎಂಬ ಭಾವ ಸೇರಿರುವುದು ಕಾಣುತ್ತದೆ. ತಂತ್ರಜ್ಞಾನದ ದುರುಪಯೋಗದಿಂದ ಬರುವ ಅಪವಾದಗಳಿಂದ ಮುಕ್ತನಾಗಲು ಅದರ ತಂತ್ರಜ್ಞ ಈ ವಾದವನ್ನು ಮಂಡಿಸಬಹುದು - ಎಂಬುದೇ ಈ ವಾದದ ವಿರೋಧಕ್ಕೆ ಕಾರಣ. ‘ಚಾಕುವನ್ನು ನಾನು ತರಕಾರಿ ಹೆಚ್ಚಲೆಂದೇ ತಯಾರಿಸಿದ್ದೆ. ಆದರೆ ಅದರಿಂದ ಕುತ್ತಿಗೆ ಕೊಯ್ದರೆ ಅದಕ್ಕೆ ನಾನು ಹೊಣೆಯೇ?’ ಎಂಬಲ್ಲಿಗೆ ತಂತ್ರಜ್ಞನ ಸಾಮಾಜಿಕ ಜವಾಬ್ದಾರಿ ಎಲ್ಲಿಗೆ ಹೋಯ್ತು - ಎಂಬುದೇ ವಿರೋಧಿಗಳ ಪ್ರಶ್ನೆ.

  ಮೊದಲೇ ತಿಳಿಸಿದಂತೆ ಇದೇ ತಂತ್ರಜ್ಞಾನದ ಮೂಲ ಸಮಸ್ಯೆ. ಒಂದು ಕಡೆ ವ್ಯವಹಾರದ ಲೆಕ್ಕಚಾರ, ಮತ್ತೊಂದೆಡೆ ಅಭಿವೃದ್ದಿಯ ಪಥ - ಇವೆರಡರ ನಡುವಿನ ಸೂಕ್ಷ್ಮ ದಾರಿಯಲ್ಲಿ ನಡೆಯುವುದೇ ತಂತ್ರಜ್ಞಾನದ ಮುಂದಿರುವ ಸವಾಲು. ಜನರು ತಂತ್ರಜ್ಞಾನವನ್ನು ಉಪಯೋಗಿಸುವ ರೀತಿಯನ್ನು ಮೊದಲೇ ಊಹಿಸಲು ವಿಫಲವಾಗಿರುವುದೇ ತಂತ್ರಜ್ಞಾನದ ಪ್ರಮುಖ ಸೋಲು. ಇದೇ ಈಗ ನಾವು ಕಾಣುತ್ತಿರುವ ಎಲ್ಲಾ ಸಮಸ್ಯೆಗಳಿಗೂ ಮೂಲ ಕಾರಣ.

  ಹೊಸ ತಂತ್ರಜ್ಞಾನವೊಂದು ಜನ ಬಳಕೆಗೆ ಬಂದ ಮೇಲೆ ಅದರ ಉಪಯೋಗದ ವ್ಯಾಪ್ತಿಯನ್ನು ನಿಯಂತ್ರಿಸುವುದು ಅಸಾಧ್ಯ. ಅಂತಹ ಪ್ರಯತ್ನ ಏನಿದ್ದರೂ ತಂತ್ರಜ್ಞಾನದ ಹುಟ್ಟಿನ ಸಮಯದಲ್ಲಿ ಪ್ರಯೋಗಾಲಯದಲ್ಲಿಯೇ ನಡೆಯಬೇಕು. ಈ ನಿಟ್ಟಿನಲ್ಲಿ ತಂತ್ರಜ್ಞರ ಜವಾಬ್ದಾರಿ ತುಂಬಾ ದೊಡ್ಡದು. ತಂತ್ರಜ್ಞಾನವೊಂದರ ಕಾರ್ಯವ್ಯಾಪ್ತಿಯನ್ನು ಸೀಮಿತಗೊಳಿಸುವುದು ಅವರ ಕೈಯಲ್ಲಿದೆ. ಅವರು ಮಾರುಕಟ್ಟೆಯ ಒತ್ತಡಕ್ಕೆ ಮಣಿದು ತಂತ್ರಜ್ಞಾನವೊಂದರ ಸಾಮಾಜಿಕ ಪ್ರಭಾವವನ್ನು ಸರಿಯಾಗಿ ಮೊದಲೇ ಗುರುತಿಸದೇ ಹೋದಾಗ ಈಗ ನೋಡುತ್ತಿರುವಂತಹ ಮೊಬೈಲ್‌ ಸಮಸ್ಯೆಯಂತಹ ಘಟನೆಗಳು ಪುನರಾವರ್ತನೆಯಾಗುತ್ತಲೇ ಇರುತ್ತದೆ.

  ತಂತ್ರಜ್ಞಾನವೊಂದನ್ನು ಉಪಯೋಗಿಸುವ ನಿಟ್ಟಿನಲ್ಲಿ ಇರುವ ಹಲವಾರು ಸಾಧ್ಯತೆಗಳು ಇಂತಹ ಸಮಸ್ಯೆಗಳಿಗೆ ಒಂದು ಕಾರಣವಾದರೆ ಆ ಸಾಧ್ಯತೆಗಳನ್ನು ನಿಯಂತ್ರಿಸುವಲ್ಲಿ ನಾವು ಸೋತಿರುವುದು ಇನ್ನೊಂದು ಕಾರಣ. ಆದರೆ ಅದಕ್ಕಾಗಿ ತಂತ್ರಜ್ಞಾನವೊಂದರ ಸಂಪೂರ್ಣ ನಿಷೇಧ ಸರಿಯಲ್ಲ. ಮೊಬೈಲ್‌ನ ಉಪಯೋಗ ಹಲವಾರು ತೊಂದರೆಗಳನ್ನು ತಂದಿರುವುದು ನಿಜ. ಹಾಗೆಂದು ಅದರ ಉಪಯೋಗವನ್ನು ಮರೆತು ಅದನ್ನು ನಿಷೇಧಿಸುವುದು ಸರಿಯಲ.್ಲ ಸರಿಯಾದ ಅನುಷ್ಠಾನ ಪ್ರಕ್ರಿಯೆಗಳಿಲ್ಲದೆ ನಿಷೇಧ ಹೇರಿ ಏನೂ ಉಪಯೋಗವಿಲ್ಲ. ನಮ್ಮಲ್ಲಿ ಈಗಲೂ ಎಷ್ಟೊಂದು ವಸ್ತುಗಳ ಉಪಯೋಗದ ಮೇಲೆ ನಿಷೇಧ ಚಾಲ್ತಿಯಲ್ಲಿದೆ. ಎಂದೂ ಸರಿಯಾಗಿ ಕಾರ್ಯ ರೂಪಕ್ಕೆ ಬಾರದ, ಯಾರಿಗೂ ಉಪಯೋಗವಿಲ್ಲದ ಈ ಪಟ್ಟಿಗೆ ಮೊಬೈಲ್‌ ಕೂಡ ಸೇರಿದೆ. ಅಷ್ಟೇ.

  ಮುಖಪುಟ / ಸಾಹಿತ್ಯ-ಸಂಸ್ಕೃತಿ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more