ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇತ್ತೀಚಿನ ಆಂಗ್ಲ ಮತ್ತು ಕನ್ನಡ ಬರಹ : ಒಂದು ನೋಟ

By Staff
|
Google Oneindia Kannada News
  • ಸುದರ್ಶನ ಪಾಟೀಲ ಕುಲಕರ್ಣಿ, ಮುಂಬಯಿ.
    [email protected]
ಸೆಪ್ಟೆಂಬರ್‌ ತಿಂಗಳ ‘ ಔಟ್‌ಲುಕ್‌’ನಲ್ಲಿ ಸಲ್ಮಾನ್‌ ರಷ್ದಿಯ ಹೊಸ ಕಾದಂಬರಿಯನ್ನು ವಿಮರ್ಶಿಸುವ ನೆಪದಲ್ಲಿ ಅಮಿತ್‌ ಚೌಧರಿ ಭಾರತೀಯ ಆಂಗ್ಲ ಬರಹ ಇಂದು ಎಲ್ಲಿ ನಿಂತಿದೆ ಎಂಬುದನ್ನು ಬಹಳ ಸೊಗಸಾಗಿ ವ್ಯಾಖ್ಯಾನಿಸಿದ್ದಾರೆ.

ರಷ್ದೀಯಂಥವರ ಬರಹದ ಬಗ್ಗೆ ನನ್ನಂಥವರನ್ನೂ ಸೇರಿದಂತೆ ಆಂಗ್ಲಶಿಕ್ಷಣ, ತಾಂತ್ರಿಕ, ವೈದ್ಯಕೀಯದಂಥ ಬೇಡಿಕೆಯ ವೃತ್ತಿಪರ ಶಿಕ್ಷಣ ಪಡೆದವರಿಗೆಲ್ಲ ಒಂದು ಹಂತದಲ್ಲಿ ಆಕರ್ಷಣೆ ಇರುತ್ತದೆ ಎಂಬುದು ನಾವೆಲ್ಲರೂ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾದ ಮಾತು. ಪಶ್ಚಿಮದತ್ತ ವಲಸೆ, ಎಕ್ಸೋಟಿಕಾ, ವಿಚ್ಛಿದ್ರ ವ್ಯಕ್ತಿತ್ವಗಳು, ಮಹಾನಗರದ ಬದುಕಿನ ಆಕರ್ಷಣೆ, ಈ ಎಲ್ಲಾ ಇಮೇಜ್‌ಗಳು ಆಗ ಆಪ್ಯಾಯಮಾನವಾಗಿ ಕಾಣುತ್ತಿರುತ್ತವೆ.

ರಷ್ದೀಯವರ ಹೊಸ ಪ್ರಕಟಣೆಯನ್ನು ‘ರಿಟರ್ನ್‌ ಆಫ್‌ ದಿ ಕ್ಲೌನ್‌ ಪ್ರಿನ್ಸ್‌’ ಎಂದೇ ಕರೆದಿರುವ ಅಮಿತ್‌ ತಮ್ಮ ಲೇಖನದಲ್ಲಿ ಭಾರತೀಯ ಆಂಗ್ಲ ಬರಹವನ್ನು ಹೀಗೆ ವಿವರಿಸುತ್ತಾರೆ: ಬಹಳಷ್ಟು ಆಂಗ್ಲ ಪ್ರಿಯರಿಗೆ ಕಥನವೆಂದರೆ- ಮೊದಲು(ಪಶ್ಚಿಮದ) ಆಕರ್ಷಣೆ, ಆಮಿಷ, ಮುಗ್ಧತೆಯ ಪೊರೆ ಕಳಚುವಿಕೆ, ವಸಾಹತೀಕರಣದ ಪ್ರತಿಮೆಗಳು. ‘ಮಿಡ್‌ನೈಟ್‌ ಚಿಲ್ಡ್ರನ್‌’ ಅಂಥ ಒಂದು ಬರಹದ ದಿವ್ಯಪ್ರತಿಮೆ ಎನ್ನಬಹುದು. ಒಂದು ಪರ್ಯಾಯ ದೃಷ್ಟಿಕೋನವು ಬಂದೇ ಇಲ್ಲ. ಅದಕ್ಕಾಗಿ ಚರ್ಚೆ ವಾಗ್ವಾದಗಳಿಲ್ಲ. ಚರ್ಚೆಯ ಹೆಸರಿನಲ್ಲಿ ನಡೆಯುವುದು ಆತಂಕಭರಿತ ಗಾಸಿಪ್‌. ಯಾರು ಎಲ್ಲಿ ಸಲ್ಲುತ್ತಾರೆ ಎಂಬ ವಿಧೇಯತೆ ತೋರಿಸಿಕೊಳ್ಳಲು. ಬರಹಗಾರ ಯೂರೋಪ್‌ನಲ್ಲಿರುತ್ತಾನೋ? ಅಮೇರಿಕೆಯಲ್ಲೋ? ‘ಆತ್ಮವಿಶ್ವಾಸ’ ಎನ್ನುವ ಪದವೊಂದು ಈ ಸಾಹಿತ್ಯ ವಲಯಗಳಲ್ಲಿ ಚಲಾವಣೆಯಲ್ಲಿದೆ. ಪಶ್ಚಿಮದ ಸಾಂಗತ್ಯದಿಂದ ಯಶಸ್ಸು, ದೀರ್ಘಾಯುಷ್ಯ, ಶಕ್ತಿ, ಅಧಿಕಾರಗಳನ್ನು ಹೊಸದಾಗಿ ಪಡೆದಿರುವ ಮಧ್ಯಮ-ವರ್ಗದ ಭಾರತೀಯನಿಗೆ, ‘ಹಳೆಯ ಬರಹಗಾರರಲ್ಲಿಲ್ಲದ ಆತ್ಮವಿಶ್ವಾಸವೊಂದು ಹೊಸ ಬರಹಗಾರರಲ್ಲಿದೆ’ ಎಂಬ ಮಾತೊಂದು ಕೇಳುತ್ತಲೇ ಇರುತ್ತದೆ.

A look on recent writing in English and Kannada!ಅಮಿತ್‌ ಪ್ರಶ್ನಿಸುತ್ತಾರೆ: ‘ಆತ್ಮವಿಶ್ವಾಸ ಎನ್ನುವುದು ಅದ್ಯಾವ ರೀತಿಯಿಂದ ಸೃಜನಶೀಲತೆಯನ್ನು ಪ್ರತಿನಿಧಿಸುತ್ತದೆ?’ ಒಂದು ಕಲೆಯ ಪ್ರಯತ್ನದಲ್ಲಿ ಹೊಸ ಪ್ರಯೋಗಾತ್ಮಕತೆ, ಅಪಾರ್ಥ ಮಾಡಿಕೊಳ್ಳಬಹುದಾದ ಅಪಾಯಗಳನ್ನು ಎದುರಿಸುತ್ತಾ ನಿರ್ವಹಿಸುವ ಎದೆಗಾರಿಕೆಯೇ ಅಮಿತ್‌ರ ಗ್ರಹಿಕೆಯಲ್ಲಿರುವ ನಿಜವಾದ ಆತ್ಮವಿಶ್ವಾಸ. ತಮಿಳು ಲೇಖಕ ಅಂಬಾಯಿಯಲ್ಲಿ ಅಮಿತ್‌ ಈ ಗುಣವನ್ನು ಗ್ರಹಿಸುತ್ತಾರೆ. ಪಶ್ಚಿಮದಲ್ಲಿ ಜಾನ್‌ ಕಾಲ್ಟ್ರೇನ್‌ ಮತ್ತು ಮರಿಯಲ್‌ ಸ್ಪಾರ್ಕ್‌ರ ಬರಹಗಳಲ್ಲಿ.

ಭಾರತೀಯ ಆಂಗ್ಲಪ್ರಿಯರಿಗೋ ‘ಆತ್ಮ-ವಿಶ್ವಾಸ’ ಎಂದರೆ ಮಾಧ್ಯಮಗಳಲ್ಲಿ ಪ್ರದರ್ಶನ, ಅಧಿಕಾರದ ಸಾಮೀಪ್ಯ. ಜಾಗತೀಕರಣದ ಸಂದರ್ಭದ ಇಂಡಿಯಾಕ್ಕೆ(‘ಭಾರತ’ಕ್ಕಲ್ಲ) ಒಂದು ಮೆಟಾಫರ್‌. ಒಂದು ಕಾಲಕ್ಕೆ ವಸಾಹತೀಕರಣಗೊಂಡ ದೇಶವೊಂದು ‘ತನ್ನ ದನಿಯನ್ನು ಕಂಡುಕೊಂಡದ್ದರ’ ಪ್ರತೀಕ. ವಸಾಹತೋತ್ತರ ಆತ್ಮಗೌರವಕ್ಕೂ ಆಕ್ರಮಣಶೀಲ ಮಹಾತ್ವಾಕಾಂಕ್ಷೆಗೂ ನಡುವೆ ಒಂದು ತೆಳುವಾದ ಗೆರೆ ಇದೆ. ಅಂದರೆ ತನ್ನ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಲು ನಿರಂತರವಾಗಿ ಯತ್ನಿಸುತ್ತಲೇ ಇರುವ ಭಾರತ ಒಂದು ಕಡೆಯಾದರೆ, ಇತ್ತ ಭದ್ರತಾ ಸಮಿತಿಯ ಸದಸ್ಯನಾಗುವ ಆಕಾಂಕ್ಷೆಯ ಇಂಡಿಯಾ ಇನ್ನೊಂದು ಕಡೆ. ಇವೆರಡರ ನಡುವೆ ಅತ್ಯಂತ ಗೊಂದಲಗೊಂಡಿರುವ ಗೆರೆಯ ಮೇಲೆ ಈ ಭಾರತೀಯಾಂಗ್ಲರ ಬರಹ ನಿಂತಿದೆ. ಭದ್ರತಾ ಸಮಿತಿಯ ಆಕಾಂಕ್ಷೆಯತ್ತಲೇ ಇದು ಹೆಚ್ಚು ವಾಲಿರುವುದು ಎಂದು ಅಮಿತ್‌ ಸೂಚಿಸುತ್ತಾರೆ.

ಆದ್ದರಿಂದ ಆಂಗ್ಲದಲ್ಲಿ ಬರೆಯುವ ಭಾರತೀಯ ಬರಹಗಾರ ಈ ಯಶಸ್ಸು, ಬೆಳವಣಿಗೆಯ ಕಥಾನಕದಲ್ಲಿಯೇ ತನ್ನನ್ನು ತೊಡಗಿಸಿಕೊಳ್ಳಬೇಕು. ಇಂದು ನಾವು ನಡೆಸಿರುವ ನಮ್ಮ ಕುಟುಂಬದ ಮೇಜುವಾನಿಗೆ ಈತ ಯಾವುದೇ ಆತಂಕ ಹುಟ್ಟಿಸಬಾರದು. ಈತ ವಿದೇಶದಲ್ಲಿ ನೆಲೆಸಿರುವ ಸ್ಥಿತಿವಂತ, ನಾವು ಕಷ್ಟದಲ್ಲಿದ್ದಾಗ ಸಹಾಯಕ್ಕೆ ಧಾವಿಸುವ ನಮ್ಮ ಮನೆಯ ಅಳಿಯನಿದ್ದಂತೆ. ಈತ ವಿಫಲನಾದವನಲ್ಲ, ಹಗಲುಗನಸಿನವಲ್ಲ, ಆ ಮೇಲಿನ ವಲಯದಲ್ಲಿ ನಮ್ಮಂತೆ ಹೊಂದಿಕೊಳ್ಳಲಾಗದೇ ಮುಜುಗುರಪಟ್ಟುಕೊಂಡವನಲ್ಲ. ಆಧುನಿಕ ಭಾರತದ ಇತರ ಅನೇಕ ಅನುಭವ, ವಿಚಾರಧಾರೆಗಳಂತೆ ಬೇಜವಾಬ್ದಾರಿ, ವೈಫಲ್ಯಗಳಿಗೆ ಇದು ಅವಕಾಶ ಮಾಡಿಕೊಡುವುದಿಲ್ಲ. ಆ ಬಗೆಯ ಮನಸ್ಸುಗಳು ಬದುಕಿನ ಇತರ ಕಲ್ಪನೆಗಳನ್ನು ಹೇಗೆ ರೂಪಿಸಬಹುದು ಎಂಬುದರ ಇಂಗಿತವಾಗಲಿ, ತಿಳಿಯುವ ಆಸಕ್ತಿಯಾಗಲಿ ಈ ಮನಸ್ಸಿಗೆ ಇಲ್ಲ. ಉನ್ನತ ಆದರ್ಶಗಳು, ಗುರಿಗಳು, ಯೋಜನೆಗಳು, ಅಧಿಕಾರ-ಶಕ್ತಿ ಇವುಗಳ ಬಗ್ಗೆ ಕೆಲವು ಮನಸ್ಸುಗಳು ತೋರುವ ನಿರ್ಲಿಪ್ತತೆಯಿಂದ ಅವಮಾನಿತವಾಗದಿದ್ದರೂ ಇದಕ್ಕೆ ಒಂದು ಬಗೆಯ ಅಚ್ಚರಿ, ದಿಗ್ಭ್ರಮೆ.

ಇತ್ತೀಚಿನ ಕನ್ನಡದ ಬರವಣಿಗೆಯಲ್ಲೂ ಪ್ರಜಾಪ್ರಭುತ್ವದ ಬೇರುಗಳನ್ನು ಬಲಪಡಿಸುವ ಕಾಳಜಿಗಿಂತ ಹೆಚ್ಚಾಗಿ ಭದ್ರತಾ ಮಂಡಳಿಯ ಸದಸ್ಯತ್ವದ ಆಕಾಂಕ್ಷೆ ಕೊಡುವ ‘ಆತ್ಮವಿಶ್ವಾಸ’ ಕಾಣತೊಡಗಿದೆ.

ಉದಾಹರಣೆಗೆಂದು ನಾನು ಆಯ್ದುಕೊಂಡಿರುವುದು; ವಸುಧೇಂದ್ರ ಅವರ ‘ಕೋತಿಗಳು ಸಾರ್‌ ಕೋತಿಗಳು’. ಪಶ್ಚಿಮ ದೇಶದ ಸಾಫ್ಟ್‌ವೇರ್‌ ಪ್ರಪಂಚದಿಂದ ಬಳ್ಳಾರಿಯ ಹಳೆಯ ಪ್ರಪಂಚವನ್ನು ನೋಡುವ ವಸುಧೇಂದ್ರ, ಕಾಲ್‌ ಸೆಂಟರ್‌ ಪ್ರಕ್ರಿಯೆಯನ್ನು ಅದರ ಎಲ್ಲಾ ದುರ್ಗುಣಗಳ ಹೊರತಾಗಿಯೂ ಸ್ವಾಗತಿಸಿರುವುದರಲ್ಲಿ ಆಶ್ಚರ್ಯವಿಲ್ಲ. ಕೆಲವು ಬರಹಗಳು (‘ಕೇಳೆ ಗೆಳತಿ ಕನಸೊಂದ ಕಂಡೆ’ ನನಗೆ ಹೆಚ್ಚು ಆಪ್ತವೆನಿಸಿದ್ದು) ಬೇರುಗಳ ಜೊತೆ ಸ್ಪಂದಿಸುವಂತೆ ಕಂಡುಬಂದರೂ, ಒಟ್ಟೂ ದೃಷ್ಟಿ ಅಮಿತ್‌ ಹೇಳುವ ತೀರಾ ನಿಸ್ಸಂವೇದನೆಯ ದೃಷ್ಟಿಯಲ್ಲದಿದ್ದರೂ, ‘ನಾವು ಭರವಸೆಯಿಡಬಹುದಾದ ವಿದೇಶದಲ್ಲಿ ನೆಲೆಸಿರುವ ನಮ್ಮ ಮನೆಯ ಯಶಸ್ವೀ ಅಳಿಯ’ನದ್ದೇ ಆಗಿದೆ.

ಅಂದರೆ ಆಧುನಿಕತೆ, ಜಾಗತೀಕರಣ ಕೆಳಸ್ತರಗಳಲ್ಲಿ ಸೃಷ್ಟಿಸುವ ಸಂಕಟಗಳನ್ನು ಎದೆಗಾರಿಕೆಯಿಂದ ಎದುರಿಸುವ ಯಾವ ಅನುಭವಗಳೂ ಇಲ್ಲಿ ನಮಗೆ ಕಾಣುವುದಿಲ್ಲ. ಏಕೆಂದರೆ ಅಂಥ ಅನುಭವವು ಸ್ವತಃ ಲೇಖಕರಿಗೆ ತಟ್ಟಿದಂತಿಲ್ಲ. ಹೋಗಲಿ, ಅಮೇರಿಕೆಯಲ್ಲಿ ನೆಲೆಸಿರುವ ಭಾರತೀಯ ಮಾನವೀಯ ಸಂಬಂಧಗಳಲ್ಲಿ (ಅವರು ಎಷ್ಟೇ ಪ್ರತಿಭಾವಂತರೂ, ಜಾಣರೂ, ಮ್ಯಾನೇಜ್‌ಮೆಂಟಿನ ಕಲೆಯಲ್ಲಿ ನಿಪುಣರೂ ಆಗಿದ್ದರೂ) ಸಾಂಸ್ಕೃತಿಕ ಬೇರುಗಳ ಗಾಢತನ ಅನುಭವಿಸಿದ್ದಲ್ಲಿ ಇರಲೇಬೇಕಾದ ತಲ್ಲಣ, ಆತಂಕಗಳು ಈ ಕೃತಿಗಳಲ್ಲಿ ಕಂಡುಬರುವುದಿಲ್ಲ.

ಏರ್‌ ಕಂಡೀಶನ್‌ ಅಫೀಸಿನಿಂದ ಮೊಬೈಲ್‌ ಫೋನಿನ ಮೂಲಕವೋ, ನೋಸ್ಟಾಲ್ಜಿಯಾದಲ್ಲೋ ಅನ್ಯ ದೇಸೀ ಪ್ರಪಂಚವನ್ನು ನೋಡುವ ದೃಷ್ಟಿ ಇಲ್ಲಿದೆ. ಈ ಬಗೆಯ ಬರಹಗಳು ಸಂಪೂರ್ಣ ನಿರುಪಯುಕ್ತ ಎಂಬುದು ನನ್ನ ಮಾತಿನ ಅರ್ಥವಲ್ಲ. ಪ್ರಸ್ತುತ ಸಂದರ್ಭದ ಒಂದು ತುಣುಕನ್ನು, ಒಂದು ಮನಸ್ಸನ್ನು ಇದು ಪ್ರತಿನಿಧಿಸುತ್ತದೆ ಎಂದಷ್ಟೇ ಹೇಳಬಹುದು. ಇಲ್ಲಿರುವ ಅಪಾಯಗಳೆಂದರೆ ಬರೆಯುತ್ತಾ ಬರೆಯುತ್ತಾ ಸೆಲ್ಫ್‌ ರೈಟಿಯಸ್‌ ಆಗಿಬಿಡುವುದು. ‘ಸೆಲ್ಫ್‌ ಡೌಟ್‌’ನ ಬರವಣಿಗೆ ಹೊಂದಿರುವ ಸಾಹಿತ್ಯಕ ಗುಣವನ್ನು ‘ ಸೆಲ್ಫ್‌ ರೈಟಿಯಸ್‌’ ಬರವಣಿಗೆ ಹೊಂದಿರುವುದಿಲ್ಲ. ಅದೊಂದು ಪ್ರಚಾರದ ಪ್ಯಾಂಪ್ಲೆಟ್‌ ಆಗಿಬಿಡುವ ಅಪಾಯ ಹೊಂದಿರುತ್ತದೆ.

ಕಾಲದಲ್ಲಿ ಹಿಂದಕ್ಕೆ ಬರೆದಿರಬಹುದಾದ ವಸುಧೇಂದ್ರ ಅವರ ಎರಡು ಕಥೆಗಳು ಇಲ್ಲಿ ನೆನಪಿಗೆ ಬರ್ತಿವೆ. ‘ಚೇಳು’ ಸಂಪೂರ್ಣ ಸಂಸ್ಕೃತಿಯ ಒಳಗಿನಿಂದಲೇ ಬರೆದಂತಿರುವ ಕಥೆ. ಉತ್ತಮವಾದ ಕಥೆ ಎಂದೇ ಹೇಳಬೇಕು. ಬಹಳ ಹಿಂದೆ ಓದಿದ ಅವರದ್ದೇ ‘ನಮ್ಮ ವಾಜೀನ್ನ ಆಟಕ್ಕೆ ಸೇರಿಸ್ಕೋಳ್ರೋ’ ಕಥೆ ಕೂಡಾ ನೆನಪಿಗೆ ಬರ್ತಿದೆ. ತೊನ್ನು ಹಿಡಿದ ಬಾಲಕನೊಬ್ಬನ ತಾಯಿ ಸಂಪ್ರದಾಯೀ ಬ್ರಾಹ್ಮಣ ಸಮಾಜದಲ್ಲಿ ಸಾಮಾಜಿಕ ಒಪ್ಪಿಗೆಗಾಗಿ ಸೂಕ್ಷ್ಮವಾಗಿ ಪ್ರತಿಭಟಿಸುವ ಕಥೆ. ಈ ಕಥೆಗಳು ನಿಜಕ್ಕೂ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವ ಸಾಧ್ಯತೆ ಪಡೆದಿರುವ ಕಥೆಗಳು.

ಪ್ರಸ್ತುತ ಸಂದರ್ಭದಲ್ಲಿ ಕಾಲ್‌ ಸೆಂಟರಿನ ಮಧ್ಯಮ, ಕೆಳ-ಮಧ್ಯಮ ವರ್ಗದ ಆತಂಕ, ತಲ್ಲಣಗಳನ್ನೂ, ಭದ್ರತಾ ಸಮಿತಿಯ ಆಕಾಂಕ್ಷೆಗೆ ತುಡಿಯುವಾಗ ಘಟಿಸುವ ತಲ್ಲಣಗಳನ್ನೂ ಒಟ್ಟೊಟ್ಟಿಗೆ ಗ್ರಹಿಸುವ ಅವಶ್ಯಕತೆ ಇದೆ. ಆ ಗ್ರಹಿಕೆಯಲ್ಲೇ ನಾವೆಲ್ಲರೂ ಮನುಷ್ಯರು ಎಂದೂ, ನಮ್ಮೆಲ್ಲರ ಬದುಕೂ ಅಷ್ಟೇ ಅಮೂಲ್ಯ ಎಂಬ ಸತ್ಯವು ಹೊರಬರುವ ಸಾಧ್ಯತೆ ಇರುತ್ತದೆ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X