‘ಆ ದಿನಗಳು ಮತ್ತೆ ಬಂದಾವೇ?’

‘ಬೆಂಗಳೂರು.......’ ಇದು ಇಂದು ಬಹಳಷ್ಟು ಚರ್ಚೆಗೆ ಒಳಗಾಗುತ್ತಿರುವ ನಗರ. ಅತಿ ವೇಗವಾಗಿ ಬೆಳೆಯುತ್ತಾ ವಿಶ್ವವಿಖ್ಯಾತವಾಗುತ್ತಿರುವ, ಜೊತೆಗೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ನಗರ. ಬೆಂಗಳೂರಿನ ಸಮಸ್ಯೆಗಳು ಕೆಲವಾದರೆ, ಬೆಂಗಳೂರಿಗರ ಸಮಸ್ಯೆಗಳು ಹಲವು. ಈ ಹಲವು ಸಮಸ್ಯೆಗಳಲ್ಲಿ ‘ನಮ್ಮ ಬೆಂಗಳೂರು ಹಾಳಾಗುತ್ತಿದೆ ಯಲ್ಲ!’ ಎಂಬ ನೋವೂ ಒಂದು. ಹೀಗೆ ಕೊರಗುವ ಕೆಲವು ಬೆಂಗಳೂರಿಗರಲ್ಲಿ ನಾನೂ ಒಬ್ಬಳು. ಕೆಲವೇ ದಿನಗಳ ಹಿಂದೆ ಮುಂಬಾಗಿಲ ಬಳಿ ಗುಬ್ಬಚ್ಚಿಯಾಂದನ್ನು ಕಂಡಾಗ ನಾನು ಹಿರಿಹಿರಿ ಹಿಗ್ಗಿದ್ದೆ. (ರವಿ ಬೆಳಗೆರೆಯವರ, ‘ಗುಬ್ಬಚ್ಚಿಯೇ ಇಲ್ಲದ ಬೆಂಗಳೂರಿನಂತಾದರೆ ಬದುಕು?’ ಲೇಖನ ನೆನಪಾಗಿತ್ತು.) ‘ಕಾಲ ಹಿಂದಕ್ಕೆ ಓಡಿತೇ?!’ ಎಂದು ಒಂದು ಕ್ಷಣ ಖುಷಿಯೂ ಆಗಿತ್ತು. ಇದೇ ರೀತಿಯ ಆನಂದ ಕಳೆದ ಮಳೆಗಾಲದಲ್ಲಿ ಬೆಂಗಳೂರಿನ ಕೆರೆಗಳು ತುಂಬಿದಾಗಲೂ ಆಗಿತ್ತು. ನಾನು ಮೂಲತಃ ಬೆಂಗಳೂರಿನವಳೇನೂ ಅಲ್ಲ. ನನ್ನ ಹಿರಿಯರು ಇಲ್ಲಿಗೆ ಬೇರೆ ಊರಿನಿಂದ ಉದ್ಯೋಗಾನ್ವೇಷಣೆಗಾಗಿ ಬಂದವರೇ. ಬೆಂಗಳೂರು ಅವರಿಗೆ ತಂದುಕೊಟ್ಟ ಯಶಸ್ಸು ಮತ್ತು ನಾನು ಇಲ್ಲೇ ಹುಟ್ಟಿ, ಬೆಳೆದ ಕಾರಣಗಳು ಈ ಊರಿನ ಬಗ್ಗೆ ನಾನು ಅಕ್ಕರೆ ಬೆಳೆಸಿಕೊಳ್ಳುವಂತೆ, ಭಾವನಾತ್ಮಕವಾಗಿ ಯೋಚಿಸುವಂತೆ ಮಾಡಿಬಿಟ್ಟಿವೆ.

ಬೆಂಗಳೂರಿನಲ್ಲಿ ಗುಬ್ಬಿಗಳು ಇಲ್ಲದಾಗುತ್ತಿರುವುದು ನಿಜಕ್ಕೂ ದುಃಖಕರ. ಇದೇ ರೀತಿ ಹಿಂದಿದ್ದ ಕೆರೆಗಳೂ ಈಗ ಮಾಯವಾಗುತ್ತಿವೆ. ಉದ್ಯಾನಗಳು ಕಾಣದಾಗುತ್ತಿವೆ. ಕೆಲವೇ ದಿನಗಳ ಹಿಂದೆ ಪತ್ರಿಕೆಯಾಂದರಲ್ಲಿ ಓದುಗರೊಬ್ಬರು, ‘ಗಾರ್ಡನ್‌ ಮತ್ತು ಪಾರ್ಕ್‌’ ಎಂಬ ಹೆಸರುಗಳಿರುವ ಆದರೆ ಯಾವುದೇ ಉದ್ಯಾನಗಳು ಉಳಿದಿಲ್ಲದ ಸ್ಥಳಗಳನ್ನು ಹೆಸರಿಸಿದ್ದರು) ನಾವಾಡುತ್ತಿದ್ದ ಕುಂಟೆಬಿಲ್ಲೆ, ಗೋಲಿಯಾಟ, ಕಂಬದಾಟಗಳ ಸ್ಥಾನಕ್ಕೆ ಈಗ ಮನೆಯಲ್ಲೇ ಕುಳಿತು ಆಡಬಹುದಾದ ‘ವಿಡಿಯೋ ಗೇಮ್‌’ಗಳು ಬಂದಿವೆ. ಇವೆಲ್ಲಾ ಹಳ್ಳಿಯ ಮಕ್ಕಳ ಸ್ವತ್ತೇನೋ ಎಂಬಂತೆ ಮಾತಾಡುವ ಹಲವರನ್ನು ನಾನು ನೋಡಿದ್ದೇನೆ. ಆದರೆ ಇವು ಬೆಂಗಳೂರಿನಲ್ಲೂ ಇತ್ತು...ಬಾಲ್ಯದ ದಿನಗಳಲ್ಲಿ ಗಣಪತಿ ಹಬ್ಬದ ದಿನ ಪಂದ್ಯ ಕಟ್ಟಿ, ಐವತ್ತು, ನೂರು ಗಣಪತಿಗಳನ್ನು ನೋಡಿ ಬರುತ್ತಿದ್ದ ನೆನಪು ಇನ್ನೂ ಹಚ್ಚಹಸುರಾಗಿದೆ...ಆದರೆ ಈಗ ಹಬ್ಬಹರಿದಿನಗಳಂದು ‘ನಮ್ಮ ಮನೆಗೆ ಯಾರಾದರೂ ಬರುವರೇನೋ?’ ಎಂದು ಕಾದು ಕಾದು ಕೊನೆಗೆ ನಾನೇ ನನ್ನೆರಡು ಮಕ್ಕಳೊಂದಿಗೆ ಎಲ್ಲಿಗಾದರೂ ಹೋಗುತ್ತೇನೆ. ಈಗ ದಸರಾ ಹಬ್ಬಕ್ಕೆ ಗೊಂಬೆಗಳಿಡುವವರು, ದೀಪಾವಳಿಗೆ ಪಟಾಕಿ ಹೊಡೆಯುವವರು, ಸಂಕ್ರಾಂತಿಗೆ ಎಳ್ಳು ಬೀರುವವರು ಬಹಳ ಕಡಿಮೆ. ಮನೆಯಲ್ಲಿ ಹಾಡು, ರಂಗೋಲಿಗಳ ಸಂಭ್ರಮವಂತೂ ಇಲ್ಲವೇ ಇಲ್ಲ. ಇವಕ್ಕೆ ಹೆಚ್ಚಿನ ಮಹತ್ವವೂ ಇಲ್ಲ.

ಆಗೆಲ್ಲ ಇಂದಿನಂತೆ ಎಮ್‌ ಟಿ ಆರ್‌ ,ಬಟರ್‌ ಸ್ಪಾಂಜ್‌ ಗಳಿರಲಿಲ್ಲ. ಪೀಡ್ಜಾ, ಕಾಫಿ ಡೇ ಗಳಿರಲಿಲ್ಲ. ನಾವು ‘ಆ.ಯಿ...ಸ್‌(ಐಸ್‌ ಕ್ರೀಮ್‌) ಎನ್ನುತ್ತಾ, ‘ಬ್ರೆ....ಡ್‌...’ ಎನ್ನುತ್ತಾ ಬರುತ್ತಿದ್ದ ಐಸ್‌ಗಾಡಿಗಾಗಿ, ಬೇಕರಿಯವನಿಗಾಗಿ ಮನೆ ಎದುರು ಕಾಯುತ್ತಿದ್ದೆವು. ಆ ಕಾಯುವಿಕೆಯಲ್ಲೂ ಒಂದು ಸಂಭ್ರಮ! ಈಗಿನಂತೆ ಸ್ಕೂಲಿಗೆ ಹೋಗಲು ಆಗೆಲ್ಲ ಆಟೋ, ವ್ಯಾನ್‌ಗಳ ವ್ಯವಸ್ಥೆಯ ಕ್ರಮವಿರಲಿಲ್ಲ. ಕೆಲವೊಮ್ಮೆ ನಾವು ಮೂರ್ನಾಕು ಕಿ.ಮೀ, ಕೆರೆ ದಂಡೆಯ ಮೇಲೆ, ತೋಟಗಳೊಳಗೆ ನಡೆದುಕೊಂಡು ಸ್ಕೂಲಿಗೆ ಹೋದ ಸಂದರ್ಭಗಳೂ ಇವೆ. ಇದೇ ಬಹುಶಃ ನನ್ನಲ್ಲಿ ಕೆರೆಗಳ ಬಗ್ಗೆ ಪ್ರೀತಿ ಹುಟ್ಟಿಸಿದ್ದು. ಆ ದಿನಗಳ ಬಗ್ಗೆ ನನಗೆ ಈಗಲೂ ಹೆಮ್ಮೆ ಎನ್ನಿಸುತ್ತದೆ. ಏಕೆಂದರೆ ಇಂಥ ಅನುಭವ ಎಷ್ಟೋ ಹಳ್ಳಿಯ ಮಕ್ಕಳಿಗೂ ಆಗಿರಲಿಕ್ಕಿಲ್ಲ. ಇದೆಲ್ಲಾ ನಡೆದದ್ದು ಬಹಳ ಹಿಂದೇನೂ ಅಲ್ಲ. ಕೇವಲ 20-25 ವರ್ಷಗಳ ಕೆಳಗೆ ಅಷ್ಟೆ, ಅದೂ ಸಿಲಿಕಾನ್‌ ವ್ಯಾಲಿ ಬೆಂಗಳೂರಿನಲ್ಲೇ!

ಜಾಗತೀಕರಣ ಹಳ್ಳಿಗಳಿಂದ ಯುವಜನತೆಯನ್ನು ನಗರಗಳೆಡೆ ಸೆಳೆಯುತ್ತಿದೆ. ನಗರಗಳಲ್ಲಿ ಜೀವನ ದುರ್ಬರವಾಗುತ್ತಿದೆ. ಬೆಂಗಳೂರಿನ ಮಟ್ಟಿಗೆ ಹೇಳುವುದಾದರೆ, ‘ಇದು ಬಹಳ ದುರದೃಷ್ಟಕರ, ಅನಪೇಕ್ಷಿತ’. ಇಲ್ಲಿಗೆ ವಲಸೆ ಬಂದವರ ಬಾಯಲ್ಲಿ ನಾನು, ‘ಬೆಂಗಳೂರು ಭಾರೀ ಗಲೀಜು, ಇಲ್ಲಿಯವರದ್ದು ಕಂಗ್ಲೀಷ್‌, ಇಲ್ಲಿನ ನೀರು ಸರಿಯಿಲ್ಲ, ಹವೆ ಸರಿಯಿಲ್ಲ, ಪ್ರತಿಯಾಂದಕ್ಕೂ ದುಡ್ಡು ಕೊಡಬೇಕು’ ಎಂಬ ಉದ್ಗಾರಗಳನ್ನು ಬಹಳಷ್ಟು ಕೇಳಿದ್ದೇನೆ.. ಇಷ್ಟಾದರೂ ಬೆಂಗಳೂರಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯೇನೂ ಆಗಿಲ್ಲ. ಸಮೀಕ್ಷೆಯಾಂದರ ಪ್ರಕಾರ ಇಲ್ಲಿ ಕನ್ನಡಿಗರ ಸಂಖ್ಯೆ ಶೇ.37(ಇನ್ನೆಲ್ಲಿ ಕೇಳಬೇಕು ಕನ್ನಡ? ಬರೀ ಕಂಗ್ಲೀಷೇ!) ಇನ್ನುಳಿದ ಶೇ67ರಷ್ಟು ಅನ್ಯಭಾಷೆಯ ಜನರಿದ್ದಾರೆ. ಅವರಿಗೆಲ್ಲಾ ನೀರು-ನೆರಳು ಒದಗಿಸುವಷ್ಟರಲ್ಲಿ ಕಾವೇರಿ ಖಾಲಿಯಾಗುತ್ತಿದೆ, ಭೂಮಿ ಕಾಣದಾಗುತ್ತಿದೆ.

ಉದ್ಯಾನ ನಗರಿ, ಹವಾನಿಯಂತ್ರಿತ ನಗರ ಎಂದೆಲ್ಲ ಪ್ರಸಿದ್ಧವಾಗಿದ್ದ ಬೆಂಗಳೂರು ಈಗ ವಾಯು ಮಾಲಿನ್ಯದಿಂದ ಜರ್ಜರಿತವಾಗುತ್ತಿದೆ. ಪತ್ರಿಕೆಯಾಂದರಲ್ಲಿ ಕೆಲವು ವಾರಗಳ ಹಿಂದೆ ಮಸುಕು ಮಸುಕಾಗಿ ಕಾಣುತ್ತಿದ್ದ ಬೆಂಗಳೂರಿನ ಚಿತ್ರ ಪ್ರಕಟವಾಗಿತ್ತು. ಕೆಳಗೆ ಶೀರ್ಷಿಕೆಯ ಒಂದು ಸಾಲು ಹೀಗಿತ್ತು : ‘ಇದು ಚಳಿಗಾಲದ ಮಂಜಿನ ಫೋಟೊ ಅಲ್ಲ , ವಾಹನಗಳ ಹೊಗೆಯಿಂದ ಆವೃತ್ತವಾದ ಬೆಂಗಳೂರಿನ ಫೋಟೊ’. ಇದೇ ಮಾಲಿನ್ಯ ಕೆಲವು ದಿನಗಳ ಹಿಂದೆ ಅಲಸೂರಿನ ಕೆರೆಯ ಮೀನುಗಳನ್ನು ಬಲಿ ತೆಗೆದುಕೊಂಡಿತು. ಇಲ್ಲಿನ ವಾಹನ ದಟ್ಟಣೆ, ಬಹುಮಹಡಿ ಕಟ್ಟಡಗಳು ಇನ್ನೂ ಹತ್ತಾರು ಸಮಸ್ಯೆಗಳ ಬಗ್ಗೆ ಪ್ರತಿದಿನ ಪತ್ರಿಕೆಗಳಲ್ಲಿ, ಸುದ್ದಿ ಸಮಾಚಾರಗಳಲ್ಲಿ ಕೇಳುತ್ತಲೇ ಇರುತ್ತೇವೆ. ಇಲ್ಲಿ ನಡೆಯುವ ಕ್ರೈಂ ಗಳಂತೂ ದಿನ ನಿತ್ಯದ ಸುದ್ದಿಗಳಾಗಿ, ಜನ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನೇ ಬಿಟ್ಟಿದ್ದಾರೆ.

ಅಂತೂ ಹಳ್ಳಿಗಳಲ್ಲಿ ಜನರಿಲ್ಲ. ನಗರಗಳಲ್ಲಿ ಜಾಗವಿಲ್ಲ. ಈ ಅಸಮತೋಲನಕ್ಕೆ ಪರಿಹಾರ ಕಂಡುಹಿಡಿಯಬೇಕಾದ ಸರ್ಕಾರಗಳು ತಂತಮ್ಮ ಗೊಂದಲಗಳಲ್ಲೇ ಮುಳುಗಿರುತ್ತವೆ. ಈ ಸಮಸ್ಯೆಗಳಿಗೆ ಎಂದಾದರೂ ಪರಿಹಾರ ಸಿಕ್ಕೀತೇ? ಅಥವಾ ಹಿಂದಿರುಗಲಾಗದ ಕಾಲದಂತೆ ಪರಿಹಾರಗಳೆಲ್ಲ ಕನಸಾಗೇ ಉಳಿದೀತೇ?ನನಸಾಗಲಿ ಎಂದು ಹಾರೈಸೋಣ...

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+