ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋರಾಟಗಾರನಿಲ್ಲದ ರೈತಸಂಘ : ಪ್ರೊ. ಎಂಡಿಎನ್‌ ನೆನಪು

By Staff
|
Google Oneindia Kannada News
  • ವಿ. ವೀರಭದ್ರಪ್ಪ ಬಿಸ್ಲಳ್ಳಿ
Memories of Prof. M.D. Nanjundaswamyಕೈಯಲ್ಲೊಂದು ಉರಿಯುವ ಸಿಗರೇಟು, ಹೆಗಲ ಮೇಲೊಂದು ಹಸಿರು ಶಾಲು, ಕುರುಚಲು ಗಡ್ಡ, ನೀಳ ಕಾಯದ ಆವ್ಯಕ್ತಿ ಸರಕಾರಿ ಕಚೇರಿ ಪ್ರವೇಶಿಸಿತು ಎಂದರೆ ಅಲ್ಲಿ ಸಂಚಲನವುಂಟಾಗುತ್ತಿತ್ತು. ವಿಧಾನಸೌಧ ಪ್ರವೇಶಿಸಿದರೆ ಸ್ವತಃ ಮುಖ್ಯಮಂತ್ರಿಯೇ ಕಂಪಿಸಿಬಿಡುತ್ತಿದ್ದರು. ಆ ಹೋರಾಟಗಾರನ ಹೆಸರು ಪ್ರೊ.ಎಂ.ಡಿ.ನಂಜುಂಡಸ್ವಾಮಿ.

ಎರಡು ದಶಕಕ್ಕೂ ಹೆಚ್ಚು ಕಾಲ ಈ ನಾಡಿನ ರೈತ ಸಮುದಾಯದ ಧ್ವನಿಯಾಗಿದ್ದ ಅವರು ಹಾಕಿಕೊಟ್ಟ ಹೋರಾಟದ ಮಾರ್ಗದಲ್ಲಿ ಈಗ ಯಾಕೋ ಕಸ ಹರಡುತ್ತಿದೆ ಎನ್ನುವ ತಳಮಳ ಎಲ್ಲರದ್ದು. 80ರ ದಶಕದ ಆರಂಭದಲ್ಲಿ ಮಾರ್ಗದರ್ಶಕರಿಲ್ಲದೆ ತಳಮಳಿಸುತ್ತಿದ್ದ ರೈತ ಸಂಘವನ್ನು ನಂಜುಂಡಸ್ವಾಮಿ ಒಟ್ಟುಗೂಡಿಸಿ, ಅದಕ್ಕೆ ರಾಜ್ಯರೈತ ಸಂಘವೆಂದು ನಾಮಕರಣ ಮಾಡಿ ಬೆಳೆಸಿದರು.

ಜಾಗತೀಕರಣ ದೇಶಕ್ಕೆ ಕಾಲಿಡುವ ಮೊದಲೇ ಅದರ ದುಷ್ಪರಿಣಾಮಗಳ ಬಗ್ಗೆ ರೈತ ಸಮುದಾಯವನ್ನು ಎಚ್ಚರಿಸಿದ್ದರು. ಆಧುನಿಕ ಕೃಷಿ, ಕುಲಾಂತರಿ ಬೀಜಗಳು, ವಿದೇಶಿ ಕೀಟನಾಶಕಗಳು ಕಾಲಿಟ್ಟರೆ ನಾವು ಬೆಳೆದ ಬೆಳೆಗೆ ವಿದೇಶದವರೇ ಬೆಲೆ ನಿಗದಿ ಮಾಡಬೇಕಾಗುತ್ತದೆ. ಆದ್ದರಿಂದ ರೈತರು ಸಾಂಪ್ರದಾಯಿಕ ಕೃಷಿಗೆ ಮರಳಬೇಕು ಎಂದು ಅವರಲ್ಲಿ ಜಾಗೃತಿ ಮೂಡಿಸಿ ಎರಡು ದಶಕಕ್ಕೂ ಹೆಚ್ಚು ಕಾಲ ರೈತ ಸಮುದಾಯದ ಬೌದ್ಧಿಕ ನಾಯಕತ್ವ ವಹಿಸಿದ್ದರು.

ಹಸಿರು ಶಾಲಿನ ಹರಿಕಾರ ಎಂದೇ ಖ್ಯಾತರಾಗಿದ್ದ ಅವರನ್ನು ಹಿಟ್ಲರ್‌, ಅಹಂಕಾರಿ, ಸಿಡುಕ ಎಂದು ದ್ವೇಷಿಸಿದರಿದ್ದರು. ದ್ವೇಷಿಸುತ್ತಲೇ ಪ್ರೀತಿಸುವವರಿದ್ದರು. ಆದರೆ ಅವರಿಗಿದ್ದ ರೈತಪರ ಕಾಳಜಿಯನ್ನು ಪ್ರಶ್ನಿಸುವ ತಾಕತ್ತು ಯಾರಿಗೂ ಇರಲಿಲ್ಲ. ಕಾರಣ ಅವರ ಅಂತರಂಗದಲ್ಲಿ ಪ್ರಜ್ವಲಿಸುತ್ತಿದ್ದ ರೈತಪರ ಪ್ರೀತಿ.

ವ್ಯಕ್ತಿಯಾಬ್ಬ ರೈತ ವಿರೋಧಿ ಎಂದು ಗೊತ್ತಾದರೆ ಅವರು ಅಯಾಚಿತವಾಗಿ ಬಳಸುತ್ತಿದ್ದ ಪದ ‘ಅವಿವೇಕಿ’. ಅದು ಮಂತ್ರಿಯೇ ಇರಬಹುದು, ಮುಖ್ಯಮಂತ್ರಿಯೇ ಇರಬಹುದು! 2001ರಲ್ಲಿ ಸರಕಾರ ನೀರಾ ಮಾರಾಟಕ್ಕೆ ಅನುಮತಿ ನೀಡಿರಲಿಲ್ಲ. ಆಗ ಪತ್ರಿಕಾಗೋಷ್ಠಿಯಾಂದರಲ್ಲಿ ಮಾತನಾಡಿದ ಪ್ರೊಫೆಸರ್‌, 224 ಅವಿವೇಕಿಗಳು ನಮ್ಮನ್ನಾಳುತ್ತಿವೆ ಎಂದು ಇಡೀ ವಿಧಾನಸೌಧದಲ್ಲಿದ್ದವರನ್ನು ಸಾರಾಸಗಟಾಗಿ ಲೇವಡಿ ಮಾಡಿದ್ದರು. ಒಂದು ದಿನ ವಿಧಾನ ಸಭೆಯಲ್ಲಿ ಡಂಕಲ್‌ ಪ್ರಸ್ತಾವದ ಬಗ್ಗೆ ಪ್ರೊಫೆಸರ್‌ ದಾಖಲೆಗಳ ಸಮೇತ ವಿವರ ನೀಡುತ್ತಿದ್ದರು. ಇಡೀ ಸಭೆ ಏಕಚಿತ್ತದಿಂದ ಆಲಿಸುತ್ತಿತ್ತು. ನಡುವೆ ಧ್ವನಿ ಎತ್ತಿದ ಅಂದಿನ ಕೃಷಿ ಸಚಿವ, ನಮಗೂ‘ಡೆಂಕನ್‌’ ಗೊತ್ತು ಎಂದುಬಿಟ್ಟರು. ಕೆಂಡಾಮಂಡಲವಾದ ಎಂಡಿಎನ್‌- ಅವಿವೇಕಿ, ಡೆಂಕನ್ನೂ ಅಲ್ಲ, ಲಿಂಕನ್ನೂ ಅಲ್ಲ. ಅದು ಡಂಕಲ್‌. ಸರಿಯಾಗಿ ಅಧ್ಯಯನ ಮಾಡಿ ಮಾತನಾಡು, ಎಂದು ಗದರಿದ್ದರು.

ತುಮಕೂರು ಜಿಲ್ಲೆಯ ಹಳ್ಳಿಯಾಂದರಲ್ಲಿ ವಿದ್ಯುತ್‌ ಸಮಸ್ಯೆ ಬಗ್ಗೆ ಚರ್ಚಿಸಲು ಹೋದ ಪ್ರೊಫೆಸರ್‌ ಮೇಲೆ ಇಂಜಿನಿಯರ್‌ ಒಬ್ಬ ಎಗರಾಡಿದ್ದ. ಆತನ ಕೆನ್ನೆಗೆ ಎರಡು ಬಾರಿಸಿದರು. ಅದನ್ನೇ ದೊಡ್ಡದು ಮಾಡಿದ ಆತ ರಾಜ್ಯ ಸಂಘದ ಬೆಂಬಲ ಪಡೆದು ರೈತ ಸಂಘದ ವಿರುದ್ಧ ರಾಜ್ಯಾದ್ಯಂತ ಚಳವಳಿ ಮಾಡುವುದಾಗಿ ಘೋಷಿಸಿದ್ದರು. ಅದೇ ಸಂಜೆ ಪತ್ರಿಕಾಗೋಷ್ಠಿ ಕರೆದ ಎಂಡಿಎನ್‌ ಅಧಿಕಾರಿಗಳ ವಿರುದ್ಧ ಕಪಾಳಮೋಕ್ಷ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸುವುದಾಗಿ ಘೋಷಿಸಿದರು. ಇದಕ್ಕೆ ಹೆದರಿದ ಅಧಿಕಾರಿಗಳು ತಣ್ಣಗಾದರು.

ಸವಾಲು ಎಸೆದರೆ ಅದಕ್ಕೆ ಪ್ರತಿ ಸವಾಲೊಡ್ಡುವುದು, ರೈತರ ವಿರುದ್ಧ ಸೊಲ್ಲು ಎತ್ತಿದರೆ ಅದನ್ನು ಅಡಗಿಸುವುದು ಹೇಗೆಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು.

ಸರಕಾರವೇನಾದರೂ ರೈತ ವಿರೋಧಿ ನಿಲುವು ತಾಳಿದರೆ, ಸರಕಾರದ ವಿರುದ್ಧ ಬಾರ್‌ಕೋಲು ಚಳವಳಿ, ಸಗಣಿ ಚಳವಳಿ, ಮೆಟ್ಟಿನ ಚಳವಳಿ ಆರಂಭಿಸುವುದಾಗಿ ಹೇಳಿ ನಡುಕ ಹುಟ್ಟಿಸುತ್ತಿದ್ದರು. ಚಳವಳಿಗೆ ಅವರು ಬಳಸುತ್ತಿದ್ದ ಭಾಷೆ ಅನ್ನದಾತನ ಬೆವರಿನಿಂದ ಬರುತ್ತಿತ್ತು. ಅದರಲ್ಲಿ ಕಲ್ಮಶವಿರುತ್ತಿರಲಿಲ್ಲ. ಬದಲಾಗಿ ಭ್ರಷ್ಟ ವ್ಯವಸ್ಥೆಯ ವಿರುದ್ಧ ಆಕ್ರೋಶ ಮಡುಗಟ್ಟಿರುತ್ತಿತ್ತು.

ಹೀಗೆ ರೈತ ಹೋರಾಟಕ್ಕೊಂದು ಹೊಸ ಭಾಷ್ಯ ಬರೆದ ನಂಜುಂಡಸ್ವಾಮಿ ರೈತರ ರಾಜ್ಯನಿರ್ಮಾಣದ ಬಹಳ ದೊಡ್ಡ ಕನಸು ಕಂಡಿದ್ದರು. ಅದು ನನಸಾಗುವ ಮೊದಲೇ, ಫೆ.3, 2004ರಂದು ಚಿರನಿದ್ರೆಗೆ ಜಾರಿದರು. ಅವರು ಹಾಕಿಕೊಟ್ಟ ಹೋರಾಟ ಮಾರ್ಗದಲ್ಲಿ ಸಾಗಿದರೆ ರೈತ ಚಳವಳಿ ಮತ್ತಷ್ಟು ಬಲಿಷ್ಠವಾದೀತು.

(ಸ್ನೇಹಸೇತು: ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X