• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊಟ್ಟರೆ ಮಾತ್ರ ಪಾಣಿಗ್ರ‘ಹಣ’ ಮಾಡಿಕೊಳ್ಳುತ್ತಾರೆ

By Staff
|

ಎಚ್‌. ಡುಂಡಿರಾಜ್‌, ಮಂಗಳೂರು

ಮೇ ತಿಂಗಳು ಕಳೆದು ಮಳೆಗಾಲ ಆರಂಭವಾಗುವ ಲಕ್ಷಣಗಳು ತೋರುತ್ತಿದ್ದರೂ ಮದುವೆ, ಮುಂಜಿಗಳ ಆಮಂತ್ರಣ ಪತ್ರಿಕೆಗಳು ಬರುತ್ತಲೇ ಇವೆ. ಹಿಂದೆಲ್ಲ ಮಳೆಗಾಲ ಶುರುವಾಗುವುದರೊಳಗೆ ಶುಭ ಸಮಾರಂಭಗಳನ್ನು ಮಾಡಿ ಮುಗಿಸುವುದು ಎಲ್ಲರಿಗೂ ಅನಿವಾರ್ಯವಾಗಿತ್ತು. ಏಕೆಂದರೆ ಆಗ ಸಮಾರಂಭಗಳು ಮನೆಯಲ್ಲೇ ನಡೆಯುತ್ತಿದ್ದವು. ಚಪ್ಪರದ ಕೆಳಗೆ ಊಟಕ್ಕೆ ಕುಳಿತಾಗ ಮಳೆ ಬಂದರೆ ಸಾರು ನೀರಾಗುವುದಿಲ್ಲವೇ?ಈಗ ಮದುವೆ, ಮುಂಜಿಗಳೆಲ್ಲ ಕಲ್ಯಾಣ ಮಂಟಪದಲ್ಲೆ ನಡೆಯುತ್ತವೆ. ಹೀಗಾಗಿ ಮಳೆ ಬಂದರೂ ಅಂಥ ತೊಂದರೆಯಾಗುವುದಿಲ್ಲ.

ಮದುವೆ, ಮುಂಜಿಗಳಲ್ಲಿ ಎರಡನೆಯದು ಸ್ವಲ್ಪ ತಡವಾದರೂ ನಡೆಯುತ್ತದೆ. ಮದುವೆ ಹಾಗಲ್ಲ, ಪ್ರಾಯಕ್ಕೆ ಬಂದ ಮಗಳಿಗೆ ಸರಿಯಾದ ಗಂಡು ಹುಡುಕಿ ಮದುವೆ ಮಾಡಿಸುವುದು ಹೆತ್ತವರ ಜವಾಬ್ದಾರಿ. ಇದು ಮುಗಿವ ತನಕ ಅವರಿಗೆ ನೆಮ್ಮದಿ ಇರುವುದಿಲ್ಲ. ಮಗನ ವಿಚಾರದಲ್ಲಿ ಹೆತ್ತವರು ತಲೆಕೆಡಿಸಿಕೊಳ್ಳುವುದು ಅವನ ಉದ್ಯೋಗದ ಬಗ್ಗೆ. ಮದುವೆ ಏನಿದ್ದರೂ ಆತ ತನ್ನ ಕಾಲ ಮೇಲೆ ತಾನು ನಿಲ್ಲುವಂತಾದ ನಂತರ. ಮಗಳಿಗೆ ಮದುವೆ ಮಾಡಿಸುವುದು ಮತ್ತು ಮಗನಿಗೆ ಕೆಲಸ ಕೊಡಿಸುವುದು ಸುಲಭವಲ್ಲ. ಎರಡಕ್ಕೂ ಕೈ ತುಂಬಾ ಹಣ ಬೇಕು. ಯಾರಾದರೂ ತಮ್ಮ ಮಗಳಿಗೆ ಮದುವೆಯಾಯಿತು, ಮಗನಿಗೆ ಒಳ್ಳೆಯ ನೌಕರಿ ಸಿಕ್ಕಿತು ಅಂದರೆ ಜನರ ಪ್ರತಿಕ್ರಿಯೆ ಹೀಗಿರುತ್ತದೆ;

ಮಗಳಿಗೆ ಮದುವೆ ಆಯಿತೆ?

ಎಷ್ಟು ಕೊಟ್ಟಿರಿ ವರದಕ್ಷಿಣೆ?

ಮಗನಿಗೆ ಕೆಲಸ ಸಿಕ್ಕಿತೆ?

ಎಷ್ಟು ಕೊಟ್ಟಿರಿ ಸಚಿ-

ವರ ದಕ್ಷಿಣೆ?

ವರದಕ್ಷಿಣೆ ಮತ್ತು ಲಂಚ ಇವೆರಡೂ ನಮ್ಮ ಸಮಾಜವನ್ನು ಅನೇಕ ವರ್ಷಗಳಿಂದ ಬಾಧಿಸುತ್ತಲೇ ಇವೆ. ಕಾನೂನಿನ ಪ್ರಕಾರ ವರದಕ್ಷಿಣೆ ತೆಗೆದುಕೊಳ್ಳುವುದು, ಲಂಚ ಸ್ವೀಕರಿಸುವುದು ಅಪರಾಧ. ಆದರೂ ಕಾನೂನಿನ ಮೂಲಕ ಈ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಿಲ್ಲ.

ಅಂದು ಹಾಡುತ್ತಿದ್ದ

ಆ ಹುಡುಗಿಯ ಜತೆ

ಪ್ರೇಮಗೀತೆ

ವೋಲೆ ವೋಲೆ ವೋಲೆ

ಇಂದು ಹೇಳುತ್ತಾನೆ

ಕೊಡಿ ವರದಕ್ಷಿಣೆ

ಇಲ್ಲವಾದರೆ ಮದುವೆ

ಒಲ್ಲೇ ಒಲ್ಲೇ ಒಲ್ಲೇ

ವರದಕ್ಷಿಣೆಯನ್ನು ಕೊಡಲು ಆಗದೆ ಮದುವೆಯಾಗದೆ ಉಳಿದ ಹೆಣ್ಣುಗಳ ಸಂಖ್ಯೆ ಸಾಕಷ್ಟಿದೆ. ಮದುವೆಯ ಸಂಭ್ರಮದಲ್ಲಿ ಕೊನೆಗೊಳ್ಳಬೇಕಾಗಿದ್ದ ಅದೆಷ್ಟೋ ಪ್ರೇಮ ಪ್ರಸಂಗಗಳು ವರದಕ್ಷಿಣೆಯಿಂದಾಗಿ ಆತ್ಮಹತ್ಯೆಯಲ್ಲಿ ಅಂತ್ಯಗೊಳ್ಳುತ್ತವೆ.

‘ಮಾಂಗಲ್ಯಂ ತಂತು ನಾನೇನ..’ಎಂಬ ಪುರೋಹಿತರ ಮಂತ್ರ, ಗಟ್ಟಿ ಮೇಳದ ಹಿನ್ನೆಲೆ, ಇನ್ನೇನು ವರನ ಕೊರಳಿಗೆ ವಧು ಮಾಲೆ ಹಾಕಬೇಕು ಅನ್ನುವಾಗ ಗಂಡಿನ ತಂದೆ ‘ನಿಲ್ಸಿ...ಈ ಮದುವೆ ನಡೆಯೋದಿಲ್ಲ’ ಎಂದು ಮದುಮಗನನ್ನು ಏಳಿಸುವ ದೃಶ್ಯವನ್ನು ನಾವೆಲ್ಲ ಅನೇಕ ಸಿನಿಮಾಗಳಲ್ಲಿ, ಟಿವಿ ಧಾರಾವಾಹಿಗಳಲ್ಲಿ ನೋಡಿದ್ದೇವೆ. ಅಲ್ಲಿ ಅಂಥ ದೃಶ್ಯಗಳು ಕೊಂಚ ಉತ್ಪ್ರೇಕ್ಷೆಯಿಂದ ಚಿತ್ರೀಕರಣಗೊಂಡಿರಬಹುದು. ಆದರೆ ನಿಜ ಜೀವನದಲ್ಲೂ ಅಲ್ಲಲ್ಲಿ ಇಂಥ ಘಟನೆಗಳು ಈಗಲೂ ನಡೆಯುತ್ತಿರುತ್ತದೆ. ಇಂಥ ಸಂದರ್ಭದಲ್ಲಿ ಆ ಹುಡುಗಿಯನ್ನು ವರದಕ್ಷಿಣೆಯಿಲ್ಲದೆ ಮದುವೆಯಾಗಲು ಆದರ್ಶ ಯುವಕನೊಬ್ಬ ಮುಂದೆ ಬರುವುದು ತೆರೆಯ ಮೇಲೆ ಮಾತ್ರ ಸಾಧ್ಯ. ವಾಸ್ತವದಲ್ಲಿ ಹುಡುಗಿಯ ತಂದೆ ಸಾಲ ಮಾಡಿಯಾದರೂ ವರದಕ್ಷಿಣೆ ತೆರಲೇಬೇಕಾಗುತ್ತದೆ. ಬಹಳಷ್ಟು ವರಮಹಾಶಯರೂ ಹಣಕೊಟ್ಟರೆ ಮಾತ್ರ ಪಾಣಿಗ್ರ-ಹಣ ಮಾಡಿಕೊಳ್ಳುತ್ತಾರೆ.

ಮದುವೆಯಾಗುವಾಗ ಕೊಟ್ಟ ವರದಕ್ಷಿಣೆ ಕಡಿಮೆಯಾಯಿತೆಂದು ಮನೆಗೆ ಬಂದ ಸೊಸೆಯನ್ನು ದಿನವೂ ಮೂದಲಿಸುವ ಅತ್ತೆ, ಮಾವಂದಿರೂ ಇರುತ್ತಾರೆ. ಮಾನಸಿಕ ಹಿಂಸೆಯ ಜತೆಗೆ ದೈಹಿಕ ಹಿಂಸೆ ಕೊಡುವವರೂ ಇರುತ್ತಾರೆ. ವರದಕ್ಷಿಣೆ ಕಿರುಕುಳ, ವರದಕ್ಷಿಣೆ ಸಾವು ಮುಂತಾದ ಸುದ್ದಿಗಳು ಈಗಲೂ ಪತ್ರಿಕೆಗಳಲ್ಲಿ ಆಗಾಗ ಬರುತ್ತವೆ. ಅ.ರಾ.ಮಿತ್ರರ ಛಂದೋಮಿತ್ರದಲ್ಲಿರುವ ‘ವಧೂದಹನ’ಎಂಬ ಕವನದಲ್ಲಿ ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಡುವಾಗ ತಂದೆ ಹೀಗೆ ಹೇಳುತ್ತಾನೆ;

ವರೋಪಚಾರದ ಸೂಟು ಬೂಟುಗಳು

ಉಂಗುರ ಉಡುಗೊರೆ ಎಲ್ಲ ವಸ್ತುಗಳು

ಒಂದನು ಬಿಡದೆಲೆ ಜೋಡಿಸಿಟ್ಟಿರುವೆ

ಬಸ್ಸಿನ ಲೆಕ್ಕವ ಚುಕ್ತ ಮಾಡಿರುವೆ

ಬೇಕಾದುದು ಇನ್ನೇನಿದೆ ಹೇಳಿರಿ

ಹುಡುಗಿಯ ಸುಡಲು ಕೆರೋಸಿನ್‌ ಸ್ಟೋವೇ

ನೀರಲಿ ಮುಳುಗಿಸೆ ಪ್ಲಾಸ್ಟಿಕ್‌ ಕಡಾಯೇ

ಎರಚಲು ಮುಖಕ್ಕೆ ಆಮ್ಲದ್ರವವೇ

ತ್ರಿಶಂಕು ತೋರಿಸೆ ನೇಣಿನ ಹಗ್ಗವೇ

ಈ ಮಾತುಗಳಲ್ಲಿರುವ ವ್ಯಂಗ್ಯ ಹರಿತವಾಗಿದ್ದು ಅವುಗಳ ಹಿಂದೆ ಬಡ ತಂದೆಯ ನೋವು ಮಡುಗಟ್ಟಿದೆ. ವಿಷಾದದ ಸಂಗತಿ ಎಂದರೆ ವರದಕ್ಷಿಣೆಗಾಗಿ ಹೆಣ್ಣು ಹೆತ್ತವರನ್ನು ಪೀಡಿಸುವ ಅನಾಗರಿಕ ನಡವಳಿಕೆ ವಿದ್ಯಾವಂತರಲ್ಲೂ ಕಂಡು ಬರುತ್ತದೆ. ಹಾಗೆ ನೋಡಿದರೆ ವಿದ್ಯಾವಂತರಲ್ಲೇ ವರದಕ್ಷಿಣೆಯ ಪಿಡುಗು ಒಂದು ತೂಕ ಜಾಸ್ತಿ. ಮದುವೆ ಮಾರ್ಕೆಟ್‌ನಲ್ಲಿ ಹುಡುಗರ ಧಾರಣೆ ಅವರು ಪಡೆದ ಪದವಿ ಮತ್ತು ಹೊಂದಿರುವ ಉದ್ಯೋಗಗಳನ್ನು ಅವಲಂಬಿಸಿರುತ್ತದೆ. ಬಿ.ಇ, ಎಂಬಿಬಿಎಸ್‌, ಐಎಎಸ್‌, ಐಎಫ್‌ಎಸ್‌ ಮುಂತಾದ ಪದವಿಗಳನ್ನು ಪಡೆದವರು ತುಂಬಾ ದುಬಾರಿ.

ವಿದ್ಯಾವಂತರಲ್ಲಿ ಕೆಲವರು ನೇರವಾಗಿ ವರದಕ್ಷಿಣೆ ಕೇಳದಿದ್ದರೂ ತುಂಬಾ ನಾಜೂಕಾಗಿ ತಮ್ಮ ಬೇಡಿಕೆಯನ್ನು ಮುಂದಿಡುತ್ತಾರೆ.

ವರದಕ್ಷಿಣೆ

ಯಾಕೆ ಬೇಕು?

ಸಾಕು ಹುಡುಗಿಯಾಬ್ಬಳೆ

ಇರಲಿ ಕೊರಳ

ತುಂಬಾ ಸರ

ಕೈ ತುಂಬಾ ಬಳೆ!

ನಗದು ತೆಗೆದುಕೊಳ್ಳುವ ಬದಲು ಚಿನ್ನ, ಕಾರು, ಸೈಟ್‌, ಫ್ಲಾಟು ಮುಂತಾದವುಗಳನ್ನು ಕೇಳಿದರೆ ಪರೋಕ್ಷವಾಗಿ ಅದು ವರದಕ್ಷಿಣೆಯೇ ಆಗುತ್ತದೆ.

ಭ್ರಷ್ಟಾಚಾರದ ಸಮಸ್ಯೆ ಎಲ್ಲೆಡೆ ವ್ಯಾಪಿಸಿರುವುದಕ್ಕೆ ಲಂಚ ಪಡೆಯುವವರಷ್ಟೇ ಅಲ್ಲ, ಲಂಚ ಕೊಡುವವರೂ ಕಾರಣರಾಗಿದ್ದಾರೆ. ಅದೇ ರೀತಿ ವರದಕ್ಷಿಣೆ ಸಮಸ್ಯೆ ಹೆಚ್ಚುತ್ತಿರುವುದರಲ್ಲಿ ತಾನಾಗಿ ವರದಕ್ಷಿಣೆ ಕೊಡಲು ತುದಿಗಾಲಲ್ಲಿ ನಿಂತಿರುವ ಹೆಣ್ಣು ಹೆತ್ತವರ ಪಾಲೂ ಇದೆ. ಈಚೆಗೆ ಆಂಗ್ಲ ಪತ್ರಿಕೆಯಾಂದರಲ್ಲಿ ವರದಕ್ಷಿಣೆ ಬಗ್ಗೆ ಬಂದ ಲೇಖನವೊಂದನ್ನು ಓದಿದೆ. ಆ ಲೇಖನದಲ್ಲಿ ಲೇಖಕರು-‘ಇದು ಮುಕ್ತ ಮಾರುಕಟ್ಟೆಯ ಕಾಲ. ಹುಡುಗರು ಮಾರುಕಟ್ಟೆಯಲ್ಲಿ ತಮ್ಮನ್ನೆ ಮಾರಾಟಕ್ಕೆ ಒಡ್ಡಿಕೊಳ್ಳುತ್ತಾರೆ. ಹುಡುಗಿಯ ತಂದೆ ತನ್ನ ಮಗಳಿಗಾಗಿ ಅತ್ಯುತ್ತಮವಾದ ಗಂಡನನ್ನು, ಅತೀ ಹೆಚ್ಚು ಬೆಲೆ ತೆತ್ತು ಖರೀದಿಸಲು ಸಿದ್ಧನಿದ್ದರೆ ಕೊಂಡುಕೊಳ್ಳಲಿ ಬಿಡಿ. ವರದಕ್ಷಿಣೆಗಾಗಿ ಬಲತ್ಕಾರ, ಹಿಂಸೆ ಇಲ್ಲದಿದ್ದರಾಯಿತು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದೇ ಲೇಖನದಲ್ಲಿ ಅವರು- ವರದಕ್ಷಿಣೆಯನ್ನು ನಿಷೇಧಿಸಿ ಪೂರ್ವಾನ್ವಯವಾಗುವಂತೆ ಕಾನೂನು ತಂದರೆ ಮುಂಬಯಿ ನಗರವನ್ನು ಪೋರ್ಚುಗೀಸರಿಗೆ ಹಿಂದಿರುಗಿಸಬೇಕಾಗುತ್ತದೆ. ಏಕೆಂದರೆ ಇಂಗ್ಲೆಂಡ್‌ನ ಯುವರಾಜ ಚಾರ್ಲ್ಸ್‌ ‘ಕ್ಯಾಥರೀನ್‌ಳನ್ನು ವಿವಾಹವಾದಾಗ ಬಾಂಬೆಯನ್ನು ಆತ ವರದಕ್ಷಿಣೆ ರೂಪದಲ್ಲಿ ಪಡೆದುಕೊಂಡಿದ್ದ’ ಅಂದಿದ್ದಾರೆ. ವರದಕ್ಷಿಣೆಯನ್ನು ಯಾರಾದರೂ ತಾವಾಗಿ ನೀಡಿದಾಗ ತೆಗೆದುಕೊಂಡರೆ ತಪ್ಪಿಲ್ಲ ಎಂಬ ಆ ಲೇಖನದ ಧೋರಣೆ ಅತ್ಯಂತ ಅಪಾಯಕಾರಿಯಾಗಿದೆ, ವರದಕ್ಷಿಣೆ ತೆಗೆದುಕೊಳ್ಳುವುದು ಮತ್ತು ಕೊಡುವುದು ಎರಡೂ ತತ್ವ. ಇದನ್ನು ಆರ್ಥಿಕ ದೃಷ್ಟಿಯಲ್ಲಿ ನೋಡದೆ ನೈತಿಕ ನೆಲೆಯಲ್ಲಿ ಚಿಂತಿಸುವ ಅಗತ್ಯವಿದೆ.

ವರದಕ್ಷಿಣೆ, ವರೋಪಚಾರ ಸ್ವೀಕರಿಸುವುದು ಮತ್ತು ಅದ್ದೂರಿಯಾಗಿ ಮದುವೆಯಾಗುವುದು ಈಗ ಅದೆಷ್ಟು ಸಾಮಾನ್ಯವಾಗಿದೆ ಎಂದರೆ, ಯಾರಾದರೂ ಆದರ್ಶಕ್ಕೆ ಬದ್ಧರಾಗಿ ಡೌರಿ ಬೇಡ, ಆಡಂಬರದ ವಿವಾಹ ಬೇಡ ಎಂದರೆ ಹುಡುಗಿಯ ಕಡೆಯವರು ಹುಡುಗನಲ್ಲಿ ಏನೋ ದೋಷವಿರಬೇಕು ಅಂತ ಅನುಮಾನಿಸುವ ಸಾಧ್ಯತೆ ಇದೆ. ವರದಕ್ಷಿಣೆ ಸಮಸ್ಯೆಗೆ ಒಂದು ಪರಿಹಾರವೆಂದರೆ ಅಂತರ್ಜಾತೀಯ ವಿವಾಹಗಳನ್ನು ಪ್ರೊತ್ಸಾಹಿಸುವುದು. ಆದರೆ, ಇದು ಬಾಯಿಯಲ್ಲಿ ಹೇಳಿದಷ್ಟು ಸುಲಭವಿಲ್ಲ.

ಮಾನವರೆಲ್ಲ ಒಂದೆ

ಎಂಬ ತತ್ವವನ್ನು

ಅಂತರ್ಜಾತೀಯ

ವಿವಾಹದ ಮಹತ್ವವನ್ನು

ವೇದಿಕೆಯಲ್ಲಿ ನಾವು

ವಿವರಿಸುತ್ತೇವೆ

ನಿಜ ಜೀವನದಲ್ಲಿ

ನಮ್ಮವರನ್ನೇ ಡಿಛಿ

ವರಿಸುತ್ತೇವೆ!

ಮುಗಿಸುವ ಮುನ್ನ : ಸೊಸೆ ತವರು ಮನೆಯಿಂದ ಆದಷ್ಟು ಹೆಚ್ಚು ಚಿನ್ನ ತರಬೇಕು ಅನ್ನುವ ಅತ್ತೆ ಮದುವೆಯಾದ ನಂತರ ಬದಲಾಗುತ್ತಾಳೆ. ಮಗ ಹೆಂಡತಿಗೆ ಆಭರಣ ತಂದರೆ ಅವನ ತಾಯಿಯ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದು ಈ ಹನಿಗವನದಲ್ಲಿದೆ.

ಸೊಸೆಗೆ

ಅವಲಕ್ಕಿ ಸರ,

ಕುತ್ತುಂಬರಿ ಸರ,

ಮುತ್ತಿನ ಸರ.

ಅತ್ತೆಗೆ

ಮತ್‌-ಸರ!

(ಸ್ನೇಹ ಸೇತು : ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more