• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಖಾಸನೀಸರಿಗೆ ‘ಸಂಚಯ’ದ ಋಣ ಸಂದಾಯ

By Staff
|
  • ರಘುನಾಥ ಚ.ಹ.
Raghavendra Khasaneesಪೈಲ್ವಾನನಂಥ ದೇಹದ, ಆರೋಗ್ಯಪೂರ್ಣ ನಗೆಯ ಕಂಗಳ ಹಾಗೂ ಟೊಮೊಟೊ ಗಲ್ಲದ ಗಿರೀಶ್‌ ಕಾರ್ನಾಡ್‌ ಕುರ್ಚಿಯ ತುಂಬಾ ಕೂತಿದ್ದರು. ಅವರ ಪಕ್ಕದ ಕುರ್ಚಿಯಲ್ಲಿ ಗುಬ್ಬಚ್ಚಿಯಂತೆ ಕೂತಿದ್ದರು ಕಥೆಗಾರ ರಾಘವೇಂದ್ರ ಖಾಸನೀಸ. ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಕೆ.ಮರುಳಸಿದ್ಧಪ್ಪ ಕೂಡ ಅಲ್ಲಿದ್ದರು.

ಕಾರ್ನಾಡ್‌ ಹಾಗೂ ಖಾಸನೀಸ ಗೆಳೆಯರು. ಹದಿನಾಲ್ಕು ವರ್ಷಗಳ ದೀರ್ಘ ಕಾಲದ ನಂತರ ಭೇಟಿಯಾಗಿದ್ದರೂ ಇಬ್ಬರಲ್ಲೂ ಮಾತುಗಳಿರಲಿಲ್ಲ . ಖಾಸನೀಸರಿಗೆ ಮಾತನಾಡಲು ಸಾಧ್ಯವಾಗದ ಅಸಹಾಯಕತೆ ; ಕಾರ್ನಾಡರದು ಮಾತುಗಳೆಲ್ಲ ಖಾಲಿಯಾಗಿ ಹೋದ ವಿಷಾದ. ಕಾರ್ನಾಡ್‌ ಹಾಗೂ ಖಾಸನೀಸರ ಬಳಸಿ ಕೂತಿದ್ದ ಹತ್ತನ್ನೆರಡು ಮಂದಿಯೂ ಮಾತು ಕಳಕೊಂಡಿದ್ದರು. ಜನವರಿ 31ರ ಸೋಮವಾರ ಸಂಜೆಯ ಮುಗಿಲು ಮೋಡದ ಮುಸುಕು ಹೊದ್ದುಕೊಂಡಿತ್ತು . ಆ ಮುಸುಕು ಖಾಸನೀಸರ ಮನೆ ಪ್ರವೇಶಿಸಿ ಹೆಚ್ಚೂಕಡಿಮೆ ಒಂದೂವರೆ ದಶಕವಾಗಿದೆ.

ಖಾಸನೀಸರದು ರೆಕ್ಕೆ ಕಡಿದ ಹಕ್ಕಿಯಂಥ ಪರಿಸ್ಥಿತಿ. ನೆನಪುಗಳು ಜಾಗೃತಾವಸ್ಥೆಯಲ್ಲೇ ಇವೆ. ದೇಹ ಅಚೇತನವಾಗಿದೆ. ಬತ್ತಿದ ಬೆಂಡಿನಂಥ ಕೈಕಾಲು ಮಾತು ಕೇಳುವುದೇ ಅಪರೂಪ. ಶಕ್ತಿಯನ್ನೆಲ್ಲ ಕೂಡಿಸಿಕೊಂಡರೂ ಆಡಿದ ಮಾತು ತೊದಲು ತೊದಲು, ಶಬ್ದ ಕ್ಷೀಣ. ಖಾಸನೀಸರಿಗೆ ಕಿವಿಯೂ ಕೈಕೊಟ್ಟಿದೆ. ಗಟ್ಟಿಯಾಗಿ ಮಾತನಾಡಿದರೆ ಒಂದಷ್ಟು ಶಬ್ದಗಳು ಕಿವಿಗೆ ಬೀಳುತ್ತವೆ. ಬೆಂಗಳೂರು ವಿಶ್ವವಿದ್ಯಾಲಯ ಗ್ರಂಥಾಲಯದಲ್ಲಿ ಗ್ರಂಥಪಾಲಕರಾಗಿದ್ದ ಅವಧಿಯಲ್ಲಿ ಖಾಸನೀಸರು ಅದೆಷ್ಟು ಕಥೆಗಳನ್ನು ಓದಿ ಅರಗಿಸಿಕೊಂಡವರೋ? ಕಥೆಗಾರನ ಬದುಕೇ ಒಂದು ದುರಂತ ಕಥೆಯಾದ ವ್ಯಥೆಯಿದು.

ಖಾಸನೀಸರ ಇಂದಿನ ದಯನೀಯ ಸ್ಥಿತಿ ಹಾಗೂ ಅವರ ಮಾನಸಿಕ ತೊಳಲಾಟ ಅರ್ಥವಾಗಬೇಕೆಂದರೆ ಅವರ ‘ತಬ್ಬಲಿಗಳು’ ಕಥೆಯನ್ನು ಓದಬೇಕು. ಪರಸ್ಪರ ವಿಮುಖರಾದ ಕುಟುಂಬದ ಸದಸ್ಯರು, ಕೇವಲ ಸಂಬಂಧಗಳ ನೆಪದಿಂದ ಒಟ್ಟಿಗೆ ಬಾಳುವ ಕಥೆಯಿದು. ಈ ಕುಟುಂಬದ ಸದಸ್ಯರ ಅಸಲಿ ಬಂಡವಾಳ ಮಂತ್ರಾಲಯದ ಪರಿಸರದಲ್ಲಿ ಬಯಲಾಗುತ್ತಾ ಹೋಗಿ, ಕಥೆ ದುರಂತ ಅಂತ್ಯ ಕಾಣುತ್ತದೆ. ‘ತಬ್ಬಲಿಗಳು ನನಗೆ ತುಂಬ ತೃಪ್ತಿ ಕೊಟ್ಟ ಕಥೆ. ಮಾನಸಿಕವಾಗಿ ಬಹಳೇ ಸೋತುಹೋಗಿದ್ದ ಕಾಲದಲ್ಲಿ, ಅತೀ ನಿಕಟವಾದ ಮಾನವೀಯ ಸಂಬಂಧಗಳು ಕೂಡ ಬರೀ ಅನುಕೂಲಸಿಂಧುವಿನ ಹೊಂದಾಣಿಕೆ ಮಾತ್ರ ಎನ್ನುವ ಕ್ರೂರ ಸತ್ಯ ಅರಿವಾದಾಗ, ನಾನು ಬರೆದ ಕಥೆ ಅದು. ಅಲ್ಲಿಯ ಅನಾಥತನ ಪೂರ್ಣ ವೈಯಕ್ತಿಕವಾದದ್ದು.....’. ‘ತಬ್ಬಲಿಗಳು’ ಕಥೆಯ ಬಗ್ಗೆ ಖಾಸನೀಸರು ಹೇಳಿಕೊಂಡಿರುವ ಈ ಮಾತುಗಳ ಹಿನ್ನೆಲೆಯಲ್ಲಿ ಅವರ ಇಂದಿನ ದಯನೀಯ ದೈಹಿಕ ಸ್ಥಿತಿ ಹಾಗೂ ಮಾನಸಿಕ ತೊಳಲಾಟವನ್ನು ಗ್ರಹಿಸಬೇಕು. ಮನೆಯಲ್ಲಿನ ಆರ್ಥಿಕ ತಾಪತ್ರಯಗಳು, ದೈಹಿಕ ಅವಲಂಬನೆ ಖಾಸನೀಸರಂಥ ಸೂಕ್ಷ್ಮ ಮನಸ್ಸಿನ ವ್ಯಕ್ತಿಯನ್ನು ಅದೆಷ್ಟು ಹಣ್ಣು ಮಾಡಿದೆಯಾ? ಖಾಸನೀಸರೇನಾದರೂ ಚೇತರಿಸಿಕೊಂಡು ಈ ಬಗೆಗೊಂದು ಕಥೆ ಬರೆದರೆ ಅದೊಂದು ಮಾಸ್ಟರ್‌ ಪೀಸ್‌ ಆಗುವುದರಲ್ಲಿ ಅನುಮಾನವಿಲ್ಲ . ಆದರೆ ಈ ಸಾಧ್ಯತೆ ಕಡಿಮೆ. ಖಾಸನೀಸರನ್ನು ಕಾಡುತ್ತಿರುವ ಕಂಟಕದ ಹೆಸರು -ಪಾರ್ಕಿನ್‌ಸನ್‌.

*

ಗಿರೀಶ್‌ ಕಾರ್ನಾಡರನ್ನು ಮುಂದು ಮಾಡಿಕೊಂಡು ಬೆಂಗಳೂರಿನ ರಾಜಾಜಿನಗರದ ನವರಂಗ್‌ ಚಿತ್ರಮಂದಿರಕ್ಕೆ ಪರ್ಲಾಂಗು ದೂರದಲ್ಲಿರುವ ರಾಘವೇಂದ್ರ ಖಾಸನೀಸರ ಮನೆಗೆ ತೆರಳಿದ ‘ಸಂಚಯ’ ಬಳಗಕ್ಕೆ ಎರಡು ಉದ್ದೇಶಗಳಿದ್ದವು. ಮೊದಲನೆಯದು ಖಾಸನೀಸರನ್ನು ಗೌರವಿಸುವುದು. ಎರಡನೆಯದು ದಣಿದ ಕಥೆಗಾರನ ಔಷಧಿ ಖರ್ಚಿಗೆ ಪುಟ್ಟದೊಂದು ನಿಧಿ ಅರ್ಪಿಸುವುದು.

ಡಿ.ವಿ.ಪ್ರಹ್ಲಾದ್‌ ಸಂಪಾದಕರಾಗಿರುವ ‘ಸಂಚಯ’, ಕೇವಲ ಸಾಹಿತ್ಯ ಪತ್ರಿಕೆ ಮಾತ್ರವಾಗಿ ಉಳಿಯದೆ, ಸಾಹಿತ್ಯಾಸಕ್ತರ ಸಣ್ಣ ಬಳಗವಾಗಿಯೂ ರೂಪುಗೊಂಡಿದೆ. ಪ್ರತಿವರ್ಷ ಜನವರಿ 31ರಂದು ‘ಕವಿ ದಿನ’ದ ಹೆಸರಿನಲ್ಲಿ ಬೇಂದ್ರೆ ಜನ್ಮದಿನ ಆಚರಿಸುವ ಸಂಚಯ ಬಳಗ, ಆ ಹೊತ್ತು ನಾಡಿನ ಸಾಂಸ್ಕೃತಿಕ ಧಾರೆಗೆ ಮಹತ್ವದ ಕೊಡುಗೆ ಸಲ್ಲಿಸಿದ ಹಿರಿಯರೊಬ್ಬರನ್ನು ಗುರ್ತಿಸಿ ಗೌರವಿಸುತ್ತದೆ. ಈ ಸಾಲಿನಲ್ಲಿ ಕ.ವೆಂ.ರಾಜಗೋಪಾಲ, ನೀಲತ್ತಹಳ್ಳಿ ಕಸ್ತೂರಿ ಹಾಗೂ ಪ್ರೊ. ಎಸ್‌.ಆರ್‌.ಮಳಗಿ ಈಗಾಗಲೇ ಸಂಚಯದಿಂದ ಅಭಿನಂದನೆ ಸ್ವೀಕರಿಸಿದ್ದಾರೆ. ಈಗ ಖಾಸನೀಸರ ಸರದಿ.

ಸ್ವಲ್ಪ ದಿನಗಳ ಹಿಂದಷ್ಟೇ ಖಾಸನೀಸರು ಕುಸಿದುಬಿದ್ದು , ಅವರ ಪೃಷ್ಠದ ಮೂಳೆಯಲ್ಲಿ ಬಿರುಕಾಗಿತ್ತು . ಈ ಬಿರುಕು ಸರಿಪಡಿಸಲು ಖಾಸನೀಸರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಗಾಯದ ಮೇಲೆ ಬರೆ ಬೀಳುವುದೆಂದರೆ ಇದೇ ಅಲ್ಲವೇ?

ಚಿ.ಶ್ರೀನಿವಾಸರಾಜು, ಪ್ರಹ್ಲಾದ್‌ ಹಾಗೂ ಡಾ.ವಿಜಯಾ ನೇತೃತ್ವದ ಮಿತ್ರಮಂಡಳಿ ಖಾಸನೀಸರ ಔಷಧಿ ವೆಚ್ಚಕ್ಕಾಗಿ ಪುಟ್ಟದೊಂದು ನಿಧಿ ಸಂಗ್ರಹಿಸಿ ಅರ್ಪಿಸಿದ ಜನವರಿ 31ರ ಸಂಜೆಯ ಕಾರ್ಯಕ್ರಮದಲ್ಲಿ ಹಾಜರಿದ್ದುದು ಆಯ್ದ ಬೆರಳೆಣಿಕೆಯೆಷ್ಟು ಜನ ಮಾತ್ರ. ಅಲ್ಲಿ ಸಭೆಯ ಔಪಚಾರಿಕತೆಯಿರಲಿಲ್ಲ . ಕಾಯಿಲೆ ಬಿದ್ದ ಹಿರಿಯ ಗೆಳೆಯನ ಕುಶಲ ವಿಚಾರಿಸಲು ಬಂದ ಗೆಳೆಯರ ಗುಂಪಿನ ಸೌಜನ್ಯ ಅಲ್ಲಿತ್ತು . ಖಾಸನೀಸರ ಪತ್ನಿ, ಹೆಣ್ಣುಮಕ್ಕಳು, ಅಳಿಯ ಹಾಗೂ ಗೆಳೆಯ ಅಲ್ಲಿದ್ದರು. ಬಂದಿದ್ದವರಿಗೆ ಚಹಾ ಸರಬರಾಜೂ ನಡೆಯಿತು. ಆನಂತರ ನಡೆದದ್ದು ಖಾಸನೀಸರಿಗೆ ಸನ್ಮಾನ, ನಿಧಿ ಅರ್ಪಣೆ. ಶಾಲು ಹೊದ್ದು , ಹಾರ ಧರಿಸಿ ಕೂತ ಖಾಸನೀಸರ ಮುಖ-ಕಣ್ಣುಗಳಲ್ಲೊಂದು ನಿಟ್ಟುಸಿರು ಹಾದುಹೋಯಿತಾ? ಗೊತ್ತಾಗಲಿಲ್ಲ . ಖಾಸನೀಸರನ್ನು ದಿಟ್ಟಿಸಿ ನೋಡುವ ಧೈರ್ಯವಾದರೂ ಯಾರಿಗಿತ್ತು ? ಕನ್ನಡದ ಸಾಂಸ್ಕೃತಿಕ ಜಗತ್ತಿನ ಪ್ರತಿನಿಧಿಯಾಬ್ಬರನ್ನು ಅನುಚಿತವಾಗಿ ನಡೆಸಿಕೊಂಡ ಪಾಪಪ್ರಜ್ಞೆ ಸಣ್ಣದಲ್ಲ !

‘ಮಾತನಾಡಲಾದರೂ ಏನಿದೆ?’ ಎಂದು ಮಾತು ಶುರು ಮಾಡಿದ ಕಾರ್ನಾಡರು, ಖಾಸನೀಸರ ‘ತಬ್ಬಲಿಗಳು’ ಕಥೆ ತಮ್ಮನ್ನು ಹಾಂಟ್‌ ಮಾಡಿದೆ ಎಂದರು. ‘ನಾನು ಹಾಗೂ ಖಾಸನೀಸರು ಕೂಡಿ ಅದರ ಚಿತ್ರಕಥೆ ಸಿದ್ಧಪಡಿಸಿದ್ದೆವು. ಏನೆಲ್ಲ ತೊಂದರೆಗಳು ಬಂದವು. ಇಂದಲ್ಲಾ ನಾಳೆ ತಬ್ಬಲಿಗಳನ್ನು ಚಿತ್ರ ಮಾಡಿಯೇ ಮಾಡುತ್ತೇನೆ’ ಎಂದು ಕಾರ್ನಾಡ್‌ ಹೇಳಿದರು. ತಬ್ಬಲಿಗಳು ಕಥೆಯ ಇಂಗ್ಲಿಷ್‌ ಅನುವಾದವನ್ನು ಓದಿ ಲಂಡನ್ನಿನ ತಮ್ಮ ಗೆಳೆಯರು ಬೆಚ್ಚಿಬಿದ್ದರು ಎಂದ ಕಾರ್ನಾಡ್‌- ತಬ್ಬಲಿಗಳು ಕಥೆ ಜಗತ್ತಿನ ಅತ್ಯುತ್ತಮ ಕಥೆಗಳಲ್ಲೊಂದು ಎಂದರು.

‘ಆಗಾಗ ಬರುತ್ತಿರುತ್ತೇನೆ. ಮತ್ತೆ ಹದಿನಾಲ್ಕು ವರ್ಷ ಮಾಡುವುದಿಲ್ಲ’ ಎನ್ನುವ ಆಶ್ವಾಸನೆಯಾಂದಿಗೆ ಕಾರ್ನಾಡ್‌ ಖಾಸನೀಸರ ಮನೆಯಿಂದ ಹೊರನಡೆದರು. ಸಂಚಯ ಬಳಗದ ಕಾರ್ಯಕ್ರಮ ಹದಿನೈದಿಪ್ಪತ್ತು ನಿಮಿಷಗಳಲ್ಲಿ ಮುಗಿದೇಹೋಯಿತು. ಬಂದವರನ್ನು ರಸ್ತೆಯವರೆಗೂ ಹೋಗಿ ಬೀಳ್ಕೊಡುವಂತೆ ಖಾಸನೀಸರು ತೊದಲು ಮಾತುಗಳಲ್ಲಿಯೇ ಮಗಳಿಗೆ ಸೂಚಿಸುತ್ತಿದ್ದರು. ಅವರು ಕೂತಿದ್ದ ಕುರ್ಚಿಯ ಪಕ್ಕದ ಟೇಬಲ್ಲಿನ ಮೇಲೆ ಮಾಯ್ಕಾರ ಬೇಂದ್ರೆಯ ನಗುಮುಖದ ರೇಖಾಚಿತ್ರವಿತ್ತು . ಆ ಚಿತ್ರದ ಕುರಿತು ರಾಜುಮೇಷ್ಟ್ರ ಬಳಿ ಖಾಸನೀಸರು ಏನೋ ಗುನುಗುಟ್ಟಿದ್ದರು. ಬೇಂದ್ರೆ ಪಟದ ಬಳಿಯೇ ಖಾಸನೀಸರ ಎರಡು ಕಥೆಪುಸ್ತಕಗಳು. ಅವರು ಬರೆದದ್ದು ಅಷ್ಟೇ. ಬರೆದದ್ದೆಲ್ಲ ಚಿನ್ನ.

*

ಖಾಸನೀಸರ ಭೇಟಿಯ ನಂತರ ಸಂಚಯ ಬಳಗದ ಪಯಣ ಮಲ್ಲೇಶ್ವರಂನ ಗಾಂಧಿ ಸಾಹಿತ್ಯ ಸಂಘದತ್ತ . ಅಲ್ಲಾಗಲೇ ಬೇಂದ್ರೆ ಜನ್ಮದಿನ ಆಚರಣೆ ಕಾರ್ಯಕ್ರಮಕ್ಕೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಸಾಹಿತ್ಯಾಸಕ್ತರ ಸಣ್ಣಗುಂಪು ಸೇರಿತ್ತು . ನಂತರದ್ದು ಔಪಚಾರಿಕ ಕಾರ್ಯಕ್ರಮ.

‘ಸಂಚಯ’ ವಾರ್ಷಿಕ ಸಾಹಿತ್ಯ ಸ್ಪರ್ಧೆಗಳ ಬಹುಮಾನ ವಿತರಣೆ ಕವಿದಿನ ಕಾರ್ಯಕ್ರಮದ ಒಂದಂಗವಾಗಿತ್ತು . ಲಲಿತಾ ಸಿದ್ಧಬಸವಯ್ಯ, ಸುನಂದಾ ಪ್ರಕಾಶ ಕಡಮೆ, ಲಕ್ಕೂರು ಸಿ.ಆನಂದ, ಫಾಲ್ಗುಣಗೌಡ ಅಚವೆ, ಡಿ.ಆರ್‌.ಚಂದ್ರ ಮಾಗಡಿ, ಪಿ.ಭಾರತೀದೇವಿ, ಕೆ.ವಿ.ಬಾಲಸುಬ್ರಹ್ಮಣ್ಯ, ಅಂಜನಾ ಹೆಗಡೆ ಹಾಗೂ ಡಾ.ಎಸ್‌. ಮಾರುತಿ ಬಹುಮಾನಿತರು.

ಬೇಂದ್ರೆ ಗೀತೆಗಳ ಜೋಗುಳದ ಮಾಯೆ, ಧಾರವಾಡ ಪೇಡೆಯ ಸವಿ, ಮರುಳಸಿದ್ಧಪ್ಪ ಹಾಗೂ ಜಿ.ಬಿ.ಹರೀಶರ ಮೆಲುಕು ಹಾಕುವಂಥ ಮಾತುಗಳು- ಇವೆಲ್ಲವುಗಳ ನಡುವೆಯೂ ಮತ್ತೆ ಖಾಸನೀಸರದೇ ನೆನಪು. ಕಾರ್ಯಕ್ರಮದಲ್ಲಿ ಬಿಡುಗಡೆಯಾದ ‘ಸಂಚಯ’ದ ಪುಟಗಳ ತಿರುವಿ ಹಾಕಿದರೆ ಅಲ್ಲೂ ಖಾಸನೀಸರು.

ನಾವೆಲ್ಲ ಒಂದಲ್ಲಾ ಒಂದರ್ಥದಲ್ಲಿ ತಬ್ಬಲಿಗಳೇ ತಾನೇ?

ಇದನ್ನೂ ಓದಿ-

ರಾಘವೇಂದ್ರ ಖಾಸನೀಸರಿಗೊಂದು ಪತ್ರ

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more