‘ಹೆರಿಗೆಯ ನೋವನೆ ಹಾಡುವಿರೇತಕೆ ಪಕ್ಕದಲೇನಿದೆ ನೋಡಿ’
*ರಘುನಾಥ ಚ.ಹ.
‘ರೈಲ್ವೆ ನಿಲ್ದಾಣದಲ್ಲಿ ’ ಅಂತಿರಬೇಕು ಪದ್ಯದ ಹೆಸರು. ಕವಿತೆಯ ಸಾಲುಗಳು ನೆನಪಿಲ್ಲ ; ಭಾವ ಮರೆಯಲು ಸಾಧ್ಯವೇ ಇಲ್ಲ .
ಅದು ರೈಲ್ವೆ ನಿಲ್ದಾಣ. ರೈಲು ಹೊರಡಲು ಸಿದ್ಧವಾಗಿದೆ. ಜನ ಜಂಗುಳಿ. ಗಂಡನ ಮನೆಗೆ ಹೊರಟ ಹೆಣ್ಣು ಮಗಳು ರೈಲಿನಲ್ಲಿ ಕುಳಿತಿದ್ದಾಳೆ. ಮೀನಾ ಎಂಬುದು ಆ ಹೆಣ್ಣುಮಗಳ ಹೆಸರು. ರೈಲು ಡಬ್ಬಿಯ ಹೊರಗೆ ಕಿಟಕಿಯ ಪಕ್ಕದಲ್ಲಿ ತಾಯಿ ನಿಂತಿದ್ದಾಳೆ. ಹೆರಿಗೆಗೆಂದು ತವರಿಗೆ ಬಂದಿದ್ದ ಹೆಣ್ಣುಮಗಳು, ಮಡಿಲಲ್ಲಿ ಮಗು, ತೊಟ್ಟಿಲೂ ಇರಬಹುದೇನೊ. ಅಮ್ಮನಿಂದ ತವರಿನಿಂದ ದೂರಾಗುತ್ತಿರುವ ನೋವು ಹೆಣ್ಣುಮಗಳದು. ತಾಯಿಗೆ ಮಗಳನ್ನು ಅಗಲುವ ವೇದನೆ. ಈ ನೋವು ಅನಿವಾರ್ಯವೆಂಬುದು ಇಬ್ಬರಿಗೂ ಗೊತ್ತು . ಆದರೂ ಒಬ್ಬರಿಗೆ ಗೊತ್ತಿಲ್ಲದಂತೆ ಒಬ್ಬರು ಅಳುತ್ತಾರೆ.
ಆ ಹೆಣ್ಣುಮಗಳಿಗೆ ಗಂಡನ ಮನೆಯಲ್ಲಿ ಏನೆಲ್ಲ ಕಷ್ಟವಿದೆಯಾ ? ಅದೇನನ್ನೂ ಕವಿ ಹೇಳುವುದಿಲ್ಲ .
ರೈಲು ಇನ್ನೇನು ಹೊರಡಬೇಕು. ರೈಲಿನ ಸಿಳ್ಳೆ ಕೂಗುತ್ತದೆ. ಅಜ್ಜಿಗೆ ಮೊಮ್ಮಗುವಿನ ಕಾಳಜಿ. ‘ ಬಿಸಿ ನೀರಿದೆಯಾ ಮೀನಾ, ಮಗುವಿನ ಹಾಲಿಗೆ’ ಎಂದು ಕೇಳುತ್ತಾಳೆ. ಆ ಮಗಳು ಹೇಳುತ್ತಾಳೆ: ‘ಸಾಕಷ್ಟಿದೆಯಮ್ಮಾ ಕಣ್ಣಲ್ಲೂ ಜೊತೆಗೆ’.
ರೈಲಿನೊಂದಿಗೇ ಅಜ್ಜಿಯೂ ಓಡುತ್ತಾಳೆ. ‘ ಕಿಟಕಿ ಮುಚ್ಚಿಕೊ, ಕಿಡಿ ಬಿದ್ದೀತು ಮಗುವಿಗೆ’ ಎಂದು ಮಗಳಿಗೆ ಹೇಳುತ್ತಾಳೆ.
ಮುಂದಿನದು ನಿಮ್ಮ ಕಲ್ಪನೆಯ ನಿಲುಕಿಗೆ ಬಿಟ್ಟದ್ದು .
ಯಾವ ತಾಯಿ ಮಗಳ ಜೀವನದಲ್ಲೂ ನಡೆಯಬಹುದಾದ ಈ ಮಾಮೂಲಿ ಘಟನೆ ಕವಿಯ ಕಣ್ಣಿನಲ್ಲಿ ಅನನ್ಯವಾಗಿ ಜೀವಗೊಳ್ಳುತ್ತದೆ. ಆ ಹೆಣ್ಣುಮಗಳು ಹಾಗೂ ತಾಯಿಯ ವೇದನೆ ಓದುಗನದೂ ಆಗುತ್ತದೆ. ನೀವು ಮದುವೆಯಾದ ಹೆಣ್ಣುಮಗಳ ಅಪ್ಪನೋ/ಅಮ್ಮನೋ ಆಗಿದ್ದಲ್ಲಿ ಆ ಮಗಳ ನೆನೆದು ಕಳವಳ್ಳಗೊಳ್ಳುತ್ತೀರಿ. ಇಂಥ ಶಕ್ತಿಶಾಲಿ ಕವಿತೆಯನ್ನು ಬರೆದವರು ಮಲ್ಲಿಗೆಯ ನವಿರಿನ ಕವಿ ಕೆ.ಎಸ್.ನರಸಿಂಹಸ್ವಾಮಿ.
ನರಸಿಂಹಸ್ವಾಮಿ ಅವರ ‘ತುಂಗಭದ್ರೆ’ ಎನ್ನುವ ಕವಿತೆ ಓದಿದ್ದೀರಾ ? ‘ತುಂಗಭದ್ರೆ ಹೊಳೆಯಲ್ಲ ವರುಷದ ಮಗಳು’ ಎಂದು ಕವಿತೆ ನೇರಾನೇರ ಎದುರಾಗುತ್ತದೆ. ಯುವ ದಂಪತಿಗಳ ಪ್ರೇಮದ ಫಲವಾಗಿ ಜನಿಸಿದ ಮಗಳು ತುಂಗಭದ್ರೆ. ಆ ವರುಷದ ಮಗಳ ಆಟ ವಿನೋದ ಪ್ರತಿಯಾಂದೂ ದಂಪತಿಗಳ ಬೆರಗು ಸಡಗರಕ್ಕೆ ಕಾರಣವಾಗುತ್ತದೆ. ತುಂಗಭದ್ರೆ ಅಮ್ಮನ ಮಡಿಲೇರಿ ಕಾಡುತ್ತಾಳೆ. ಅಮ್ಮ ಬಯ್ದರೆ ಅಪ್ಪನ ತೊಡೆಯೇರುತ್ತಾಳೆ.
ಕವಿಗೆ ಅನ್ನಿಸುತ್ತದೆ- ನಾನೊಂದು ದಡ. ಅವಳೊಂದು ದಡ. ಎರಡೂ ದಡಗಳಿಗೆ ಹುಣ್ಣಿಮೆಯ ಚಂದ್ರನ ಒಯ್ಯುವ ನಾವೆ ವರುಷದ ಮಗಳು ತುಂಗಭದ್ರೆ. ಈ ದಡಕ್ಕೆ ಬೇಜಾರಾದರೆ ಆ ದಡ, ಈ ದಡ ಬೇಜಾರಾದರೆ ಆ ದಡಕ್ಕೆ ಮಗಳು ಓಡಾಡುತ್ತಾಳೆ. ಆದರೆ ದಡಗಳ ಪಾಡು ? ಕವಿಯ ಆತಂಕವೇ ನಮ್ಮದೂ ಆಗಿರುವಾಗ ಏನು ಹೇಳುವುದು ?
*
ಮೊನ್ನೆ ಯಾರೋ ಒಬ್ಬರು ಹಿರಿಯ ಸಾಹಿತಿ ಹೇಳುತ್ತಿದ್ದರು : ‘ನಾನು ಓದಿದ ಶ್ರೇಷ್ಠ ಕವಿ ಕೆ.ಎಸ್.ನರಸಿಂಹಸ್ವಾಮಿ. ಅವರು ಬರೆದಂಥ ಪದ್ಯಗಳನ್ನು ಇನ್ನ್ಯಾರೂ ಬರೆಯಲಾರರು’ .
ಅಡಿಗ, ಲಂಕೇಶರಾದಿಯಾಗಿ ಕೆಎಸ್‌ನ ಅವರ ಕವಿತೆಗಳನ್ನು ಕೀಟಲೆ ಮಾಡಿದವರೂ ಇದ್ದಾರೆ.
ಕೆಎಸ್‌ನ ಕನ್ನಡದ ಶ್ರೇಷ್ಠ ಕವಿ ಎಂದೊ, ಅಥವಾ ಕೆಎಸ್‌ನ ಕವಿತೆಗಳು ಕವಿತೆಗಳೇ ಅಲ್ಲವೆಂದೊ ನಾವ್ಯಾರೂ ಪಟ್ಟು ಹಿಡಿಯುವುದು ಬೇಕಾಗಿಲ್ಲ . ಹಾಗೆ ಯಾರೊಬ್ಬರಿಗಾದರೂ ಶ್ರೇಷ್ಠತೆಯ ಕಿರೀಟ ತೊಡಿಸುವುದು/ಪೂಜಿಸುವುದು ಎಂದರೆ ಅವರನ್ನು ದೂರ ಮಾಡಿಕೊಳ್ಳುತ್ತಿದ್ದೇವೆಂದೇ ಅರ್ಥ. ಕಟ್ಟು ಗಾಜು ಹಾಕಿ ಯಾರನ್ನೂ ನೇತು ಹಾಕುವುದು ಬೇಡ ! ಅದೇರೀತಿ ಜನತೆಗೆ ತಲುಪಿದ ಸಾಹಿತ್ಯವನ್ನು ಏಕಾಏಕಿ ತಿರಸ್ಕರಿಸುವುದೆಂದರೆ ನಮಗೆ ಪೂರ್ವಾಗ್ರಹದ ತೊನ್ನು ಹತ್ತಿದೆಯೆಂದೇ ಅರ್ಥ.
ಕೆಎಸ್‌ನ ಜನತೆಯ ಕವಿ. ಸಮುದಾಯದ ಕವಿ. ‘ಮೈಸೂರು ಮಲ್ಲಿಗೆ’ಯ ಗೀತೆಗಳು ಜನರ ಮುಟ್ಟಿರುವಷ್ಟು ಇನ್ನಾವ ಕವಿಯ ಗೀತೆಗಳು ಜನರ ನಾಲಿಗೆಗಳಲ್ಲಿವೆ ಹೇಳಿ.
ಸಂದರ್ಶನವೊಂದರಲ್ಲಿ ನರಸಿಂಹಸ್ವಾಮಿ ಅವರು ಹೇಳಿದ್ದುದು ನೆನಪಾಗುತ್ತಿದೆ :ಧಾರವಾಡದ ಬಸ್ ನಿಲ್ದಾಣದಲ್ಲಿ ಒಬ್ಬ ಕುರುಡ ಕೆಎಸ್‌ನ ಅವರ ‘ಅಂತಿಂಥ ಹೆಣ್ಣು ನೀನಲ್ಲ..’ ಗೀತೆಯನ್ನು ಹಾಡಿ ಭಿಕ್ಷೆ ಎತ್ತಿ ಸಂಸಾರ ಮಾಡುತ್ತಿದ್ದನಂತೆ. ಬೇರೆಯ ಹಾಡು ಹಾಡಿದರೆ ಅವನಿಗೆ ಸಂಪಾದನೆ ಆಗುತ್ತಿರಲಿಲ್ಲವಂತೆ. ನರಸಿಂಹಸ್ವಾಮಿ ಹಾಡು ಹಾಡಿದಾಗ ಮಾತ್ರ ಜನ ಕಾಸು ಹಾಕುತ್ತಿದ್ದರಂತೆ.
*
ಯುಗಧರ್ಮ, ವಿಶ್ವಧರ್ಮ ಮುಂತಾಗಿ ಕುವೆಂಪು ಕವಿತೆ ಬರೆಯುತ್ತಿದ್ದಾಗ- ಆಧ್ಯಾತ್ಮ ಪಾರಮಾರ್ಥಗಳನ್ನು ಜನಪದದ ಹಿನ್ನೆಲೆಯಲ್ಲಿ ಬೇಂದ್ರೆ ಶೋಧಿಸುತ್ತಿದ್ದಾಗ- ಈ ನೆಲದ ಸಾಮಾನ್ಯರಿಗಾಗಿ ಕವಿತೆ ಬರೆದ ಏಕೈಕ ಕವಿ ಕೆ.ಎಸ್.ನರಸಿಂಹಸ್ವಾಮಿ. ಬಡವನ ಕನಸಿಗೂ ಇಂದುಮುಖಿ ಚಂದ್ರಮುಖಿಯರನ್ನು ಕರೆತಂದ ಅಗ್ಗಳಿಕೆ ಅವರದೇನೆ. ‘ಶಿವಮಂದಿರಸಮ ವನಸುಂದರ ಸುಮ, ಬಾ ಫಾಲ್ಗುಣ ರವಿ ದರ್ಶನಕೆ’ ಎನ್ನುವ ಕುವೆಂಪು ಕವಿತೆಯಾ, ‘ಆವು ಈವಿನ’ ಎನ್ನುವ ಬೇಂದ್ರೆ ಗೀತೆಯಾ ಅಥವಾ ‘ಬೇರು ಸತ್ತೀ ಮರವನೆತ್ತಿ ನಿಲ್ಲಿಸು ಮಗು’ ಎನ್ನುವ ಅಡಿಗರ ಕವಿತೆಗಳೆಲ್ಲ ರುಚಿಸುವುದು ಪುಸ್ತಕದಲ್ಲಿ ಮಾತ್ರ ; ನಾಲಗೆಗೇನಿದ್ದರೂ ಕೆಎಸ್‌ನ ಅವರ ‘ಒಂದಿರುಳು ಕನಸಿನಲಿ ನನ್ನವಳ’ ಗೀತೆಯೇ ಆಗಬೇಕು. ಕುವೆಂಪು-ಬೇಂದ್ರೆ-ಅಡಿಗರು ಬುದ್ಧಿಗೆ ಹತ್ತಿರವಾದರೆ, ಕೆಎಸ್‌ನ ಭಾವಕ್ಕೆ ಹತ್ತಿರವಾದವರು.
*
ಎಂಬತ್ತೆಂಟರ ಇಳಿ ವಯಸ್ಸಿನಲ್ಲೂ ನರಸಿಂಹಸ್ವಾಮಿ ಬರೆಯುತ್ತಿದ್ದಾರೆ. ನಾಲಗೆ ತೊದಲುತ್ತದೆ. ಕೈ ನಡುಗುತ್ತದೆ. ಇಂಥ ವಯಸ್ಸಿನಲ್ಲೂ ನರಸಿಂಹಸ್ವಾಮಿ -
ಹೆರಿಗೆಯ ನೋವನೆ ಹಾಡುವಿರೇತಕೆ
ಪಕ್ಕದಲೇನಿದೆ ನೋಡಿ ;
ಒಲವಿನ ಬಳ್ಳಿಯ ಚೆಲುವಿನ ಮೊಗ್ಗಿಗೆ
ಒಪ್ಪುವಂಥದನೆ ಹಾಡಿ.
ಎಂದು ಬರೆಯುತ್ತಾರೆ. ನರಸಿಂಹಸ್ವಾಮಿಯವರ ಹದಿನಾಲ್ಕನೇ ಕವನ ಸಂಕಲನ ‘ಎದೆ ತುಂಬ ನಕ್ಷತ್ರ’ ಮೊನ್ನೆಯಷ್ಟೇ ಬಿಡುಗಡೆಯಾಗಿದೆ. ಅವರ ಹೊಸ ಕೃತಿ ‘ಮೌನದಲ್ಲಿ ಮಾತ ಹುಡುಕುತ್ತ’ ಜ.26 ರ ಭಾನುವಾರ ಮೈಸೂರಿನಲ್ಲಿ ಬಿಡುಗಡೆಯಾಗಲಿದೆ.
ಅಂದಹಾಗೆ, ಜನವರಿ 26- ಕೆ.ಎಸ್.ನರಸಿಂಹಸ್ವಾಮಿ ಅವರ ಜನ್ಮದಿನ. ಎಂಬತ್ತೆಂಟರ ಹೊಸಿತಿಲು ದಾಟಿದ ಕೆಎಸ್‌ನ ಎಂಬತ್ತೊಂಬಕ್ಕೆ ಕಾಲಿಡುತ್ತಾರೆ.
ಮುಖಪುಟ / ಸಾಹಿತ್ಯ ಸೊಗಡು
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications