ನಾಟಕೋತ್ಸವದ ನೆಪದಲ್ಲಿ ಕಾರಂತರ ನೆನಕೆ
- ಚೇತನ್
ಕಾರಂತ ಪೂರ್ವ ರಂಗಭೂಮಿ
ಕಾರಂತರು ರಂಗಭೂಮಿಗೆ ಬರುವ ಮುಂಚೆ, ನಾಟಕಗಳಲ್ಲಿ ಮಾತುಗಳೇ ಪ್ರಧಾನ. ನಟನೇ ಮುಖ್ಯ, ಸಂಭಾಷಣೆಯೇ ಮುಖ್ಯ, ನಾಟಕೀಯ ಅಂಶಗಳು ಹೆಚ್ಚು ಎನ್ನುತ್ತಿದ್ದ ರಂಗಭೂಮಿ, ಕಾಲ ಬದಲಾದಂತೆಲ್ಲಾ ನಟನಲ್ಲದೆ, ಸಂಭಾಷಣೆಯಲ್ಲದೆ ನಾಟಕದ ಇತರೆ ಆಯಾಮಗಳಾದ ಬೆಳಕು, ರಂಗಸಜ್ಜಿಕೆ, ಮೇಕಪ್‌ಗೆ ಹೊಸ ಸ್ವರೂಪ ಬಂದು, ಹೆಚ್ಚು ಅರ್ಥಪೂರ್ಣವಾಯಿತು. ನಾಟಕೀಯ ಅಂಶಕ್ಕಿಂತ ಕಾವ್ಯಮಯ ಸಂಭಾಷೆಗೆ ಒತ್ತು ಸಿಕ್ಕಿತು. ಹಾಡುಗಳನ್ನು ಬಳಸಲಾಗುತ್ತಿತ್ತು. ನಾಟಕದ ಪ್ರತಿ ಪ್ರಯೋಗದಲ್ಲಿ ಬದಲಾವಣೆಯೇನೋ ಆಗುತ್ತಿತ್ತು. ಆದರೆ ಸಂಗೀತದಲ್ಲಿ ಮಾತ್ರ ಯಾವುದೇ ಬದಲಾವಣೆಯಾಗುತ್ತಿರಲ್ಲಿಲ್ಲ.
ಕಾರಂತರು ರಂಗಭೂಮಿಗೆ ಬಂದ ನಂತರ
ಕಾರಂತರು ಬೆಂಗಳೂರಿಗೆ ಬಂದದ್ದು 1970ರಲ್ಲಿ. ವಿವಿಧ ಭಾಷೆಯ ಸಂಗೀತ ಮತ್ತು ಹೆಚ್ಚಾಗಿ ವೃತ್ತಿ ರಂಗಭೂಮಿ ಸಂಗೀತದ ಪರಿಚಯವಿದ್ದ ಕಾರಂತರು ಸಂಗೀತವನ್ನೇ ಒಂದು ಪಾತ್ರವನ್ನಾಗಿ ರಂಗದ ಮೇಲೆ ತಂದವರು.ಅವರ ಪ್ರಕಾರ ಮಾತನಾಡಿದರೆ ಹಾಡಿದಂತಿರಬೇಕು, ಹಾಡಿದರೆ ಮಾತನಾಡಿದಂತಿರಬೇಕು. ಗಾಯನ ಬಲ್ಲ ನಟರಿಗೇ ಹೆಚ್ಚು ಒತ್ತು ಕೊಟ್ಟರು. ಮಾನವ ಧ್ವನಿಯನ್ನ ಪ್ರೀತಿಸಿದರು. ಅವರ ನಾಟಕ, ಸಿನಿಮಾಗಳಲ್ಲಿ ಇಂತಹ ಬಹಳ ಧ್ವನಿಗಳು ಕೇಳಿಸುತ್ತವೆ. ವೇಷಭೂಷಣದ ಜೊತೆ ಸಂಗೀತವೂ ನಾಟಕದ ಅಂಗ ಎನ್ನುತ್ತಿದ್ದರು.
ಕಾರಂತರ ಸಂಗೀತ
ಕಾರಂತರ ನಾಟಕಗಳಲ್ಲಿ ಸಂದರ್ಭಕ್ಕೆ ತಕ್ಕ ಹಾಡುಗಳು. ಶಬ್ಧದ ಬಗ್ಗೆ ಅವರಿಗೆ ವಿಶೇಷ ಪ್ರೀತಿ. ಕಲ್ಲು, ಕೋಲು ಮುಂತಾದ ವಸ್ತುಗಳೂ ಅವರ ಸಂಗೀತ ಸಂಯೋಜನೆಯಲ್ಲಿ ಪಾತ್ರವಹಿಸುತ್ತಿದ್ದವು. ಹಾ-ಹೋ-ಹೇ ಎಂಬ ಉದ್ಘೋಷಗಳು ನೋಡುಗರಿಗೆ ವಿಶೇಷವಾದ ಅನುಭವ ನೀಡುತ್ತಿತ್ತು. ಈ ಹಾಡಿನ ಮೂಲರಾಗ ಇಂತಹುದೇ ಎಂದು ಅವರ ಹಾಡುಗಳನ್ನು ಗುರುತಿಸಲಾಗುತ್ತಿರಲ್ಲಿಲ್ಲ. ಅವರ ಸಂಗೀತ ಅಷ್ಟೊಂದು ಒರಿಜಿನಲ್ಲು.
ಕಾರಂತರ ನಾಟಕಗಳು
ಅವರ ನಾಟಕಗಳಲ್ಲಿ ಉದ್ದೇಶವೇ ಪಾತ್ರವಾಗಿರುತ್ತಿತ್ತು. ಅವರ ನಾಟಕಗಳು ಲಯದಿಂದ, ಉದ್ದೇಶದಿಂದ, ಹಾಡುಗಳಿಂದ ಜನಪ್ರಿಯವಾಗುತ್ತಿತ್ತು. ರಂಗಕ್ಕಾಗಿ ನಿರ್ದಿಷ್ಟವಾದ ಪರಂಪರೆ ಹಾಕಿಕೊಟ್ಟವರು ಕಾರಂತರು.
ಮಕ್ಕಳ ಸಂಗೀತ ಕ್ಷೇತ್ರದಲ್ಲಿ ..
ಮಕ್ಕಳ ಮುಗ್ಧತೆಯನ್ನು ತಮ್ಮ ಸಂಗೀತಕ್ಕೆ ಬಳಸಿಕೊಳ್ಳುತ್ತಿದ್ದ ಕಾರಂತರು- ಮಕ್ಕಳ ಸಮೂಹ ಗಾಯನವನ್ನು ಮೊದಲಿಗೆ ರಂಗಕ್ಕೆ ಪರಿಚಯಿಸಿದವರು. ಮಕ್ಕಳು ಒಟ್ಟಿಗೆ ಹಾಡಬೇಕಾದಾಗ ಶಿಸ್ತು ಬೇಕಾಗುತ್ತದೆ. ಆಗ ಎಲ್ಲರೂ ಧ್ವನಿಗೂಡಿಸಬೇಕು ಎಂದೆನಿಸಿ ಹಾಡು ಸುಲಭವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.
ಒಟ್ಟಿನಲ್ಲಿ ‘ಕಾರಂತರೆಂದರೆ ಚಲನಶೀಲತೆ. ಚಲನಶೀಲತೆಯೆಂದರೆ ಕಾರಂತರು. ಅವರ ತಲೆಯಲ್ಲಿ ಸದಾ ನಾಟಕದ ಗುಂಗು.
*
ನಾಲ್ಕು ದಿನಗಳ ಕಾಲ ನಡೆದ ಕಾರಂತ ನಾಟಕೋತ್ಸವ ಸೆ. 14ರ ಭಾನುವಾರ ಮುಕ್ತಾಯವಾಯಿತು. ಸಮಾರೋಪ ಸಂದರ್ಭದಲ್ಲಿ ಕತೆಗಾರ್ತಿ ವೈದೇಹಿ ಬರೆದಿರುವ ಕಾರಂತರ ಜೀವನ ಚರಿತ್ರೆ ಇಲ್ಲಿರಲಾರೆ ಅಲ್ಲಿ ಹೋಗಲಾರೆ ಪುಸ್ತಕವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ವೈ. ಕೆ. ಮುದ್ದುಕೃಷ್ಣ ಅನಾವರಣಗೊಳಿಸಿದರು.
ಸೆ. 27 ಮತ್ತು 28ರಂದು ದಿಲ್ಲಿಯಲ್ಲಿ ಇನ್ನೊಂದು ನಾಟಕೋತ್ಸವ ನಡೆಯಲಿದೆ. ಆ ಸಂದರ್ಭದಲ್ಲಿ ಕಾರಂತರ ನಿರ್ದೇಶನದ ಹಿಂದಿ ನಾಟಕಗಳ 34 ರಂಗಗೀತೆಗಳಿರುವ ಎರಡು ಧ್ವನಿ ಸುರುಳಿಗಳು ಬಿಡುಗಡೆಯಾಗಲಿವೆ.












Click it and Unblock the Notifications