ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಯಿಯೂ ಮಾಯಿಯಂತ ಮಳೆಯೂ..

By Staff
|
Google Oneindia Kannada News
ಬೆಳಗ್ಗೆ ಎದ್ದು ತನ್ನ ಪಾಲಿನ ಮನೆ ಕೆಲಸ ಮುಗಿಸಿ ಶಾಲೆಗೆ ಹೋಗುವುದೆಂದರೆ ಅದೊಂದು ಹರಸಾಹಸ. ಜೂನ್‌ ತಿಂಗಳ ಜಡಿ ಮಳೆಯಾಂದಿಗೆ ಆರಂಭವಾಗುವ ಶಾಲೆ. ಬೆಳಗ್ಗೆ ಹಾಲು ತರುವ, ಪೂಜೆಗೆ ಹೂವು ಕೊಯ್ಯುವ ಮತ್ತು ಬಚ್ಚಲಿನಲ್ಲಿರುವ ಸೊಂಟದೆತ್ತರದ ತಾಮ್ರದ ಹಂಡೆಗೆ ನೀರು ತುಂಬುವ ಕೆಲಸ. ಇದೆಲ್ಲಾ ಮುಗಿದ ಬಳಿಕ ಯೂನಿಪಾರಂ ಹಾಕಿಕೊಂಡು, ಗಂಜಿ ಕುಡಿದುಕೊಂಡು, ಬುತ್ತಿಗೊಂದು ಪ್ಲಾಸ್ಟಿಕ್‌ ಸುತ್ತಿಕೊಂಡು ಅದು ಚೆಲ್ಲದಂತೆ ಹೊಸದಾಗಿ ಹೊಲಿಸಿರುವ ಖಾಕಿ ಚೀಲದಲ್ಲಿ ಜಾಗ್ರತೆಯಿಂದ ಇಟ್ಟುಕೊಂಡು ನಾನು ನನ್ನ ತಂಗಿ 1 ಮೈಲಿ ದೂರದ ಶಾಲೆಗೆ ನಡೆಯಬೇಕು. ಇಬ್ಬರಿಗೂ ಎರಡು ವಿಭಾಗಗಳಿರುವ ಒಂದೇ ಬುತ್ತಿ.

ಆವತ್ತು ಆ ಜಡಿ ಮಳೆಯಲ್ಲಿ ಕೊಡೆ ಬಿಡಿಸಿಕೊಂಡು, ಗಾಳಿ ಬಂದ ಕಡೆಗೆ ಕೊಡೆಯನ್ನೂ ವಾಲಿಸುತ್ತಾ ಶಾಲೆಗೆ ಓಡಿದೆವು. ನಮ್ಮ ಮನೆಯಲ್ಲಿ ಕಡ್ಡಿ ಬಟ್ಟೆ ಸರಿ ಇರುವ ಎರಡು ಕೊಡೆ ಇದ್ದವು. ಒಂದು ಅಪ್ಪನಿಗೆ. ಇನ್ನೊಂದು ನಂಗೂ ತಂಗಿಗೂ. ಇನ್ನೊಂದು ಹರಿದ- ಮುರಿದ ಕಡ್ಡಿ ಕಿತ್ತು ಬಂದ ಕೊಡೆ ಅಮ್ಮನಿಗೆ. ಮನೆಯ ಹತ್ತಿರವೇ ಓಡಾಡಲು.

Male matthu Ammaಆಕಾಶ ನೋಡುತ್ತಾ, ಬರಬಹುದಾದ ಮಳೆಯ ತೀವ್ರತೆ, ಬಿರುಗಾಳಿ ಧಾವಿಸಬಹುದಾದ ದಿಕ್ಕು, ಓಡುವ ಮೋಡಗಳ ಮೂಡ್‌ಗಳನ್ನು ಲೆಕ್ಕಾಚಾರ ಹಾಕುತ್ತಾ ಇಷ್ಟು ಹೊತ್ತಿಗೆ ಇಷ್ಟು ದೂರ ತಲುಪಿದರೆ ಬಿರು ಮಳೆಯ ಹೊಡೆತದಿಂದ ಪಾರಾಗಬಹುದು ಎಂದುಕೊಳ್ಳುತ್ತಾ ನಾನೂ ತಂಗಿಯೂ ನಡೆದು ನಡೆದು ಶಾಲೆ ತಲುಪಿದೆವು. ಅಲ್ಪ ಸ್ವಲ್ಪ ಒದ್ದೆಯಾಗಿರುವ ಲಂಗ ಹಿಂಡಿಕೊಂಡ ಮೇಲೆ ಗೊತ್ತಾಯಿತು, ಚೀಲದಲ್ಲಿ ಬುತ್ತಿಯಿಲ್ಲ. ಮರೆತು ಬಂದಿದ್ದೇವೆ. ಪೆಚ್ಚು ಮೋರೆ ಹಾಕುತ್ತಾ ಅಸೆಂಬ್ಲಿ ಸಾಲಿಗೆ ಸೇರಿಕೊಂಡೆವು.

ಫಸ್ಟು ಪಿರೇಡು ಗಣಿತ. ಎರಡನೆಯದ್ದು ಸಮಾಜ. ಸಮಾಜ ಟೀಚರ್‌ ಪಾಠ ಮಾಡುತ್ತಿರುವಾಗ ಪ್ಯೂನ್‌ ಬಂದು ಕರೆದ. ನಾನು ಕ್ಲಾಸಿನಿಂದ ಆಫೀಸು ರೂಮಿನ ಹತ್ತಿರ ಬಂದೆ. ಅಲ್ಲಿ ಅಮ್ಮ ನಿಂತಿದ್ದಳು. ಒದ್ದೆ ಮುದ್ದೆಯಾಗಿ. ಸೀರೆ ನೆರಿಗೆಯನ್ನು ಎತ್ತಿ ಸೊಂಟಕ್ಕೆ ಸಿಕ್ಕಿಸಿದ್ದಳು. ಕೂದಲು- ರವಿಕೆ ಎಲ್ಲ ಒದ್ದೆ. ತುರುಬಿನಿಂದ ನೀರು ಹನಿ ಹನಿಯಾಗಿ ಕುತ್ತಿಗೆ ಮೇಲೆ ಬೀಳುತ್ತಿತ್ತು. ಬಲಕೈಯಲ್ಲಿ ಬುತ್ತಿ . ಎಡ ಕೈಯಲ್ಲಿ ಮಡಿಚಿದ ಅದೇ ಹರಕು ಕೊಡೆ.

ನಾನು ಬುತ್ತಿ ತೆಗೆದುಕೊಂಡೆ. ಶಾಲೆಗೆ ಹೊರಡುವಾಗ ಚೀಲದಲ್ಲಿ ಮೊದಲು ಬುತ್ತಿ ಇಟ್ಟುಕೊಳ್ಳಬೇಕಂತ ಗೊತ್ತಿಲ್ಲವಾ ಅಂತ ಗದರಿದಳು. ಮತ್ತೆ ಬೇಗ ಬೇಗ ವಾಪಾಸು ಹೊರಟಳು. ಅದೇ ಕೊಡೆಯ ಕಡ್ಡಿಯನ್ನು ಸರಿ ಮಾಡುತ್ತಾ, ಬಿಡಿಸುತ್ತಾ.

ನಾನು ದೊಡ್ಡವಳಾದ ಮೇಲೆ ಅಮ್ಮನಿಗೆ ಒಳ್ಳೆಯ ಮರದ ಹಿಡಿಯಿರುವ ನೈಲಾನಿನ ಕೊಡೆ ಕೊಡಿಸಬೇಕು ಅಂತ ನಿರ್ಧರಿಸಿದೆ. ಹಿಂದಿನ ದಿನ ನೀತಿ ಬೋಧೆ ಪಿರಿಯೇಡ್ಡಿನಲ್ಲಿ ಜೀವನದ ಧ್ಯೇಯ ಏನು ಅಂತ ಟೀಚರ್‌ ಪ್ರಶ್ನೆ ಕೇಳಿದ್ರು. ನಾನು ಟೈಲರ್‌ ಅಂತ ಉತ್ತರಿಸಿದ್ದೆ. ಎಲ್ಲರೂ ನಕ್ಕಿದ್ದರು. ಮುಂದಿನ ಕ್ಲಾಸಿನಲ್ಲಿ ಅಮ್ಮನಿಗೆ ಕೊಡೆ ಕೊಡಿಸುವ ನಿರ್ಧಾರವನ್ನು ಟೀಚರಿಗೆ ಹೇಳಬೇಕೆಂದುಕೊಂಡೆ ಕ್ಲಾಸಿಗೆ ಹೋದೆ. ಮಳೆ ಸುರೀತಿತ್ತು. ಬುತ್ತಿ ಬಿಸಿಯಾಗಿತ್ತು.

ಮುಖಪುಟ / ಮೇಘ ಮಲ್ಹಾರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X