• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಬಡವರ ನಗುವಿನ ಶಕ್ತಿ ’

By Staff
|

ಕಣ್ಣತೆಯ ದೂರದಲ್ಲಿ ಇಬ್ಬರು ಮನುಷ್ಯರಿಗೆ ನೊಗ ಹೂಡಿ ಹೊಲ ಉಳುಮೆ ಮಾಡುವುದನ್ನು ನೋಡಲು ಚೆನ್ನಾಗಿಯೇ ಇತ್ತು !

ನೊಗ ಹೊತ್ತವರು ನಿಧಾನವಾದಾಗ ಕೈಯಲ್ಲಿ ಚಾಟಿ ಹಿಡಿದು ಬೀಸುತ್ತಿದ್ದ ವ್ಯಕ್ತಿಯಾಬ್ಬ ದನಗಳಿಗೆ ಹೊಡೆದಂತೆಯೇ ಹೊಡೆಯುತ್ತಿದ್ದ . ಆ ನೊಗ ಹೊತ್ತವರಲ್ಲಿ ಒಬ್ಬ ವ್ಯಕ್ತಿ ಅಪ್ಪನೆಂದು ತಿಳಿದಾಗ ಅರಗಿಸಿಕೊಳ್ಳುವುದು ಕಷ್ಟವಾಯಿತು... ಕಣ್ಣು ತುಂಬ ನೀರು ತುಂಬಿಕೊಂಡಿತು...

ಇಂಥ ಹತ್ತಾರು ಕಷ್ಟಗಳನ್ನು ಬಾಲ್ಯದಲ್ಲಿಯೇ ಅರಗಿಸಿಕೊಂಡ ಬಾಲಕ, ಕೊಳಗೇರಿಗಳಲ್ಲಿ ಬೆಳೆಯುತ್ತ - ಕೊಳಚೆ ನೀರಿಗೆ ಜರಡಿ ಹಿಡಿಯುತ್ತ ಬೆಳೆದದ್ದು ಅಂಬೇಡ್ಕರ್‌, ಲೋಹಿಯಾ ಹಾಗೂ ಕಮ್ಯುನಿಸಂ ವಿಚಾರಧಾರೆಯ ಪ್ರಭಾವಳಿಯಲ್ಲಿ . ಅದೇ ಹುಡುಗ ಮುಂದೊಂದು ದಿನ ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಎಂದು ಪ್ರಶ್ನಿಸಿದಾಗ ರೋಮಾಂಚನಗೊಂಡವರ ಸಂಖ್ಯೆ ದೊಡ್ಡದು. ಸೈಜುಗಲ್ಲು ಹೊತ್ತೋರು ನನ್ನ ಜನಗಳು ಎಂದು ಎದೆಗುದಿಯ ತೋಡಿಕೊಂಡಾಗ ಕನ್ನಡ ಸಾಹಿತ್ಯಲೋಕವೇ ಕಿವಿಕೊಟ್ಟಿತು. ಅವರು ಸಿದ್ದಲಿಂಗಯ್ಯ! ಇಕ್ರಲಾ.. ವದೀರ್ಲಾ ಎಂದು ನೆಲ ಕಚ್ಚಿದವರಿಗೆ ಕೆಚ್ಚು ತುಂಬಿದ ಸಿದ್ದಲಿಂಗಯ್ಯ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿಯ ಹೊಲೇರ ಹಟ್ಟಿಯಲ್ಲಿ ದೇವಯ್ಯ- ವೆಂಕಟಪ್ಪ ದಂಪತಿಗಳಿಗೆ ಹುಟ್ಟಿದ ಸಿದ್ಧಲಿಂಗಯ್ಯ ಬೆಂಗಳೂರಿನ ಸರ್ಕಾರಿ ಕಲಾ ಕಲಾ ಕಾಲೇಜಿನಲ್ಲಿ ಬಿಎ ಪದವಿ ಪಡೆದು ಹೊರಬಿದ್ದದ್ದು ಅಪ್ಪಟ ವಿಚಾರವಾದಿಯಾಗಿ.

ಹೊಲೆ ಮಾದಿಗರ ಹಾಡು, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು ಕವನ ಸಂಕಲನಗಳ ಮೂಲಕ ಸಿದ್ದಲಿಂಗಯ್ಯ ತುಳಿತಕ್ಕೀಡಾದ ದಲಿತರಿಗೆ ದನಿಯಾದವರು. ಬೇಡವೆಂದರೂ ದಲಿತಕವಿ ಎನ್ನುವ ಹಣೆಪಟ್ಟಿಯಲ್ಲೇ ಗುರ್ತಿಸಿಕೊಂಡವರು. ಗ್ರಾಮದೇವತೆಗಳು ಅನ್ನುವ ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್‌ ಪದವಿಯನ್ನೂ ಪಡೆದರು.

ಸಮಾಜದಲ್ಲಿ ಪರಿವರ್ತನೆ ತರುವ ಬಯಕೆ ತೀವ್ರವಾದಾಗ ಗೆಳೆಯರೊಡಗೂಡಿ ವಿಚಾರವಾದಿ ಪರಿಷತ್‌ ಸ್ಥಾಪಿಸಿದರು. 1973 ರಲ್ಲಿ ಅಖಿಲ ಕರ್ನಾಟಕ ವಿಚಾರವಾದಿ ಸಮ್ಮೇಳನವನ್ನೂ ನಡೆಸಿದರು. ಅವು ಸಿದ್ದಲಿಂಗಯ್ಯನವರ ಸಾರ್ವಜನಿಕ ಜೀವನದ ಪ್ರಾರಂಭದ ದಿನಗಳು. ಸಂಘರ್ಷ ಸಮಿತಿ, ಸಮುದಾಯದ ಸದಸ್ಯರೊಂದಿಗೆ ನಾಡಿನಾದ್ಯಂತ ಓಡಾಡಿದರು. ಆನಂತರ ಬೂಸಾ ಪ್ರಕರಣದಲ್ಲಿ ಬಸವಲಿಂಗಯ್ಯನವರೊಂದಿಗೆ ಹೋರಾಡಿದರು. ನಂತರ ಬಸವಲಿಂಗಯ್ಯನವರ ಸಂಪರ್ಕ ಕಡಿದುಕೊಂಡ ಅವರು, ರಾಮಕೃಷ್ಣ ಹೆಗಡೆ ಕಾಲದಲ್ಲಿ ವಿಧಾನ ಪರಿಷತ್ತಿಗೂ ಕಾಲಿಟ್ಟರು.

ದೀರ್ಘಾವಧಿ ಶಾಸಕರಾಗಿ ಸಾಧಿಸಿದ್ದೇನು ಅನ್ನುವ ಪ್ರಶ್ನೆಗೆ ಸಿದ್ದಲಿಂಗಯ್ಯನವರೇ ಉತ್ತರಿಸಬೇಕು. ಮೊನ್ನೆಯಷ್ಟೇ ವಿಧಾನಸೌಧದಿಂದ ಹೊರಬಿದ್ದಿರುವ ಅವರು- ಶಾಸಕರಾಗಿದ್ದಾಗ ಪದ್ಯ ಮರೆತರು, ಇತರ ರಾಜಕಾರಣಿಗಳಂತೆಯೇ ಜನರಿಂದ ದೂರವಾದರು ಎನ್ನುವ ಆಪಾದನೆಗಳನ್ನು ಅಭಿಮಾನಿಗಳಿಂದಲೇ ಎದುರಿಸುತ್ತಿದ್ದಾರೆ. ಉತ್ತರ ಕೊಡಲೀಗ ಅವರಿಗೆ ಬಿಡುವಿದೆ.

ಸದನದಲ್ಲಿ ದಲಿತರ ಪರವಾಗಿ ಸಿದ್ದಲಿಂಗಯ್ಯ ದನಿ ಎತ್ತಿದ್ದಾರೆ ಅನ್ನುವ ಬಗ್ಗೆ ಅಪಸ್ವರಗಳಿಲ್ಲ . ಆದರೆ, ಕಷ್ಟದ ದಿನಗಳಲ್ಲಿ ಅವರೊಂದಿಗಿದ್ದ ಜನರು, ಶಾಸಕರಾಗಿದ್ದ ಕಾಲದಲ್ಲಿ ದೂರ ಸರಿದರು. ಸಂಘರ್ಷ ಸಮಿತಿ, ಸಮುದಾಯದ ಗೆಳೆಯರು ಸಿದ್ದಲಿಂಗಯ್ಯನವರಿಗೆ ಬೆನ್ನು ತೋರಿದರು.

ಇಷ್ಟಾದರೂ, ಸಿದ್ದಲಿಂಗಯ್ಯ ಅವರ ಬಗೆಗೆ ದಲಿತರಲ್ಲಿ ಈಗಲೂ ಅಕ್ಕರೆಯಿದೆ. ಸಾಹಿತ್ಯ ಲೋಕದಲ್ಲಿ ಅವರ ಕವಿತೆಗಳಿಗೊಂದು ಬೆಲೆಯಿದೆ. ಅಭಿಮಾನಿಗಳು ಸಿದ್ದಲಿಂಗಯ್ಯನವರ ಕವಿತೆಗಳನ್ನು ವಿವಿಧ ಕಾರ್ಯಕ್ರಮ- ರ್ಯಾಲಿಗಳಲ್ಲಿ ಗಟ್ಟಿಯಾಗಿ ಹಾಡುತ್ತಾರೆ. ಏಕೆಂದರೆ, ಹೊಲೆ ಮಾದಿಗರ ಹಾಡು ಅಂಥ ಮತ್ತೊಂದು ಪುಸ್ತಕ ಮತ್ತೆ ಬಂದಿಲ್ಲ .

ಇಷ್ಟೆಲ್ಲ ನೆನಪಿಸಿಕೊಳ್ಳಲಿಕ್ಕೆ ಕಾರಣವೆಂದರೆ ...

ಆಗಸ್ಟ್‌ 04ರ ಶನಿವಾರ, ಬೆಂಗಳೂರಿನ ಯವನಿಕಾ ಸಭಾಂಗಣದಲ್ಲಿ ಸಿದ್ದಲಿಂಗಯ್ಯ ಅವರನ್ನು ಅಭಿಮಾನಿಗಳು ಆತ್ಮೀಯವಾಗಿ ಸನ್ಮಾನಿಸಿದರು. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ಕವಿ ಚಂದ್ರಶೇಖರ ಕಂಬಾರ ಸಿದ್ದಲಿಂಗಯ್ಯ ಅವರನ್ನು ಹೊಗಳಿದರು. ವಿಧಾನಸೌಧದಿಂದ ಹೊರಬಿದ್ದ ನಂತರ ದೊಡ್ಡ ರೀತಿಯಲ್ಲಿ ಸಿದ್ದಲಿಂಗಯ್ಯ ಕಾಣಿಸಿಕೊಂಡದ್ದು ಇದೇ ಮೊದಲು. ಇದು ಅವರ ಎರಡನೆಯ ಅವತಾರವೇ..?

ಕಾರ್ಯಕ್ರಮದಲ್ಲಿ ಸಿದ್ಧಲಿಂಗಯ್ಯನವರ ಹಾಡುಗಳು ಉಕ್ಕುತ್ತಿದ್ದವು. ಈ ಗೀತೆಗಳೊಂದಿಗೆ ಅಭಿಮಾನಿಗಳ ಗುಂಪು, ಚಪ್ಪಾಳೆಗಳ ಸದ್ದು, ಹೋರಾಟದ ಕವಿಯ ಸಾಧನೆಗೆ ಶ್ಲಾಘನೆ, ಭಾಷಣ ಎಲ್ಲವೂ ಸೇರಿತ್ತು . ಆಯ್ದ ಭಾಗಗಳನ್ನು ಓದಿ ನೀವೂ ಸಂತೋಷಿಸಿ.

ಜ್ಞಾನಪೀಠ ಸಿಗಲಿ !
ಶೋಷಿತರ ದನಿಯಾದ ಸಿದ್ಧಲಿಂಗಯ್ಯ ಅವರಿಗೆ ಜ್ಞಾನಪೀಠ ಸಿಗಬೇಕು ಎಂದು ಅಪ್ಪಣೆ ಕೊಡಿಸಿದ ಹೆಗಡೆ, ‘ಸಿದ್ಧಲಿಂಗಯ್ಯ ಯಾರಿಗೂ ಕೇಡು ಬಯಸಿದವರಲ್ಲ, ಅವರ ಕೃತಿಗಳಲ್ಲಿ ಸಿಟ್ಟು ರೋಷವಿದ್ದುದು ಅನ್ಯಾಯದ ವಿರುದ್ಧ ಮಾತ್ರ. ನಾನು ಅವರನ್ನು ಶಾಸಕರನ್ನಾಗಿ ಮಾಡಿದ್ದಕ್ಕೆ ಪ್ರತಿಯಾಗಿ ಕೀರ್ತಿ ತಂದುಕೊಟ್ಟರು’ ಎಂದು ಹೆಗಡೆ ಖುಷಿ ಪಟ್ಟರು.

ಆಶ್ಚರ್ಯಕರ ಬೆಳವಣಿಗೆ ..
ನಮ್ಮ ಕೆಳಗಿರುವ ಅಧೋಲೋಕ, ಶೋಷಿತರ ಲೋಕವನ್ನು ಪರಿಚಯಿಸಿದ ಸಿದ್ದಲಿಂಗಯ್ಯ, ಸಾಹಿತ್ಯದ ಚಳವಳಿಗಳು ನಿಂತ ನೀರಾಗಿದ್ದಾಗ ಇಕ್ರಲ್ಲಾ ಒದೀರ್ಲಾ ಕವನದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಹೊಸತನ ತಂದವರು. ಇದೊಂದು ಆಶ್ಚರ್ಯಕರ ಬೆಳವಣಿಗೆ ಎಂದು ಚಂದ್ರಶೇಖರ ಕಂಬಾರ ಆಶ್ಚರ್ಯ ಪಟ್ಟರು.

ಹೂವ ತಂದವರು !
ತಮ್ಮನ್ನು ಶಾಸಕರನ್ನಾಗಿ ನೇಮಿಸಿದವರಿಗೆ ಸಿದ್ದಲಿಂಗಯ್ಯ ಕೀರ್ತಿ ತಂದಿದ್ದಾರೆ. ಅವರು ಸದನಕ್ಕೆ ಶೋಭೆಯಾಗಿದ್ದರು. ಸರ್ಕಾರದ ನಿರ್ಣಯಗಳನ್ನು ಬದಲಿಸುವ ಶಕ್ತಿ ಹೊಂದಿದ್ದರು. ಗೃಹ ಸಚಿವ ಖರ್ಗೆ ಮಾತು ಮುಂದುವರಿಸುತ್ತಿದ್ದರು.. ದಕ್ಷಿಣ ಕನ್ನಡದಲ್ಲಿ ಜಾರಿಯಲ್ಲಿದ್ದ ಅಜಲು ಪದ್ಧತಿ ನಿಷೇಧಿಸಲು ಹೋರಾಡಿ ಸಿದ್ದಲಿಂಗಯ್ಯ ಯಶಸ್ವಿಯಾದುದನ್ನು ಖರ್ಗೆ ಸ್ಮರಿಸಿಕೊಂಡರು.

ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ. ಸಿದ್ಧಪ್ಪ ಮತ್ತು ತುಳು ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ.ಎ. ವಿವೇಕ ರೈ ಅಭಿನಂದನಾ ಭಾಷಣ ಮಾಡಿದರು. ಅಪ್ಪಗೆರೆ ತಿಮ್ಮ ರಾಜು, ಬಾನಂದೂರು ಕೆಂಪಯ್ಯ, ಮೈಸೂರು ಮಹಾದೇವಪ್ಪ ಮುಂತಾದ ಗಾಯಕರು ಸಮಾರಂಭದಲ್ಲಿ ಸಿದ್ಧಲಿಂಗಯ್ಯ ಅವರ ಗೀತೆಗಳನ್ನು ಹಾಡಿದರು. ಇದೇ ಸಂದರ್ಭದಲ್ಲಿ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಲಾಯಿತು.

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more